ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಟ್ಯೂಬ್ ನಲ್ಲಿ ನೋಡಿದಷ್ಟು ಸುಲಭವಲ್ಲ ಹೈನುಗಾರಿಕೆ!

By Sushma Chatra
|
Google Oneindia Kannada News

ಕೆಲಸವಿಲ್ಲದೆ ಇದ್ದಾಗ ಯುಟ್ಯೂಬ್ ಜಾಲಾಡುತ್ತಿರುವುದು, ಅಂತರ್ಜಾಲದಲ್ಲಿ ಏನನ್ನೋ ತಡಕಾಡುವುದು, ವಾಟ್ಸ್ ಆಪ್ ಸೇರಿದಂತೆ ವಿವಿಧ ಗ್ರೂಪ್ ಗಳಲ್ಲಿ ಬರುವ ವಿಡಿಯೋ ನೋಡುವುದು ಈಗಿನ ಹೆಚ್ಚಿನ ಯುವಜನರ ಹವ್ಯಾಸವೇ ಆಗಿಬಿಟ್ಟಿದೆ. ಮನೆಯ ಹಿರಿಯರ ಬೈಗುಳದ ಭಾಷೆಯಲ್ಲಿ ಹೇಳ್ಬೇಕು ಅಂದ್ರೆ ಕೈಯಲ್ಲೊಂದು ಮೊಬೈಲ್ ಯಾವಾಗ್ಲೂ ಟಕುಟಕು ಅಂತಾನೆ ಇರ್ಬೇಕು ಈ ಮೂದೇವಿಗಳಿಗೆ! ಹೌದಲ್ವಾ ನಾವದೆಷ್ಟು ವಿಡಿಯೋಗಳನ್ನು ಮೊಬೈಲ್ ನಲ್ಲಿ ನೋಡುತ್ತೇವೆ. ಕೆಲವು ವಿಡಿಯೋಗಳು ಅದೆಷ್ಟು ಉತ್ಸಾಹ, ಪ್ರೋತ್ಸಾಹ ನೀಡುತ್ತದೆ ಎಂದರೆ ನಾವೂ ಇದನ್ನು ಮಾಡಬಹುದು ಅನ್ನಿಸುತ್ತದೆ.

Recommended Video

ಚೀನಾಗೆ ಮತ್ತೊಂದು ಶಾಕ್ ಕೊಟ್ಟ ಅಮೇರಿಕಾ | Oneindia Kannada

ಮೊನ್ನೆಯೂ ಹೀಗೆ ಹೈನುಗಾರಿಕೆಯ ಬಗ್ಗೆ ಇರುವ ಕೆಲವು ವಿಡಿಯೋಗಳನ್ನು ನೋಡುತ್ತಿದ್ದೆ. ಒಳ್ಳೊಳ್ಳೆ ಗಿರ್ ತಳಿಯ ಹಸುಗಳು, ಅವುಗಳಿಗೆ ಮೊಳಕೆ ಬರಿಸಿದ ಕಾಳುಗಳನ್ನು ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಸಿ ನೀಡುವುದು, ಹಾಲು ಕರೆಯುವುದಕ್ಕೆ ಮಷೀನ್, ಆ‌ ಕೊಟ್ಟಿಗೆಯ ವೈಭವ ಅದ್ಭುತವಾಗಿತ್ತು. ಇನ್ನೊಂದು ವಿಡಿಯೋದಲ್ಲಿ ಕೊಟ್ಟಿಗೆ ಅಂದ್ರೆ ಒಂದು ಎಕರೆ ಜಾಗವಂತೆ. ಅದಕ್ಕೆ ಸುತ್ತಲೂ ಕಾಂಪೌಂಡ್, ಮಧ್ಯದಲ್ಲೊಂದು ಗೇಟ್. ಒಳಗಡೆ ದನಕರುಗಳನ್ನು ಬಿಟ್ಟುಬಿಡ್ತಾರಂತೆ.

ಹಳ್ಳಿ ಜೀವನ ಅಂದುಕೊಂಡಷ್ಟು ಸುಲಭ ಅಲ್ಲ, ಬಹಳ ಕಷ್ಟ!ಹಳ್ಳಿ ಜೀವನ ಅಂದುಕೊಂಡಷ್ಟು ಸುಲಭ ಅಲ್ಲ, ಬಹಳ ಕಷ್ಟ!

ನೋಡುವಾಗ ಸಖತ್ ಅನ್ನಿಸುತ್ತೆ. ವಾವ್ ಸೂಪರ್, ನಾವು ಹೈನುಗಾರಿಕೆ ಮಾಡಿ ಬಿಡಬೇಕು ಅನ್ನಿಸಿಬಿಡುತ್ತದೆ. ಯಾಕೆಂದರೆ ವಿಡಿಯೋ ಇದ್ದದ್ದು ಕೇವಲ ಮೂರೋ ನಾಲ್ಕೊ ನಿಮಿಷದ್ದು. ಇದನ್ನು ನೋಡಿದವರಿಗೆ ಸಾಫ್ಟ್ ವೇರ್ ಕಂಪೆನಿ ಕೆಲಸ ಬಿಟ್ಟು ಎರಡು ಹಸು ಕಟ್ಕೊಬೇಕು ಅನ್ನಿಸೋದ್ರಲ್ಲಿ ಅನುಮಾನವೇ ಇಲ್ಲ. ಗ್ರೌಂಡ್ ರಿಯಾಲಿಟಿ ಗೊತ್ತಿಲ್ಲದೆ ಇರುವವರು ಖಂಡಿತ ಹಸು ಕಟ್ಕೊಂಡು ಜೀವನ ಮಾಡೋದನ್ನು ಬಹಳ ಸುಲಭ ಅಂದುಕೊಳ್ಳಬೇಕು, ಅಷ್ಟು ಅದ್ಭುತವಾಗಿರುತ್ತದೆ ಆ ವಿಡಿಯೋಗಳು. ಆದರೆ ವಿಡಿಯೋದಲ್ಲಿ ನೋಡಿದಷ್ಟು ಸುಲಭವಾಗಿಲ್ಲ ಹೈನುಗಾರಿಕೆ!

 ಒಂದು ಹಸುವನ್ನು ಸಾಕುವುದೇ ಕಷ್ಟ...

ಒಂದು ಹಸುವನ್ನು ಸಾಕುವುದೇ ಕಷ್ಟ...

ಒಂದು ಹಸುವನ್ನು ಸಾಕುವುದೇ ಬರೋಬ್ಬರಿ ಕಷ್ಟ ಅನ್ನೋ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ. ಹಿಂದೆಲ್ಲಾ ಮಲೆನಾಡಿನಲ್ಲಿ ದನಕರುಗಳನ್ನು ಬೆಳಿಗ್ಗೆ ಎದ್ದು ಹಗ್ಗ ಕಳಚಿ ಬಿಟ್ಟುಬಿಟ್ಟರೆ ಗುಡ್ಡಬೆಟ್ಟ, ಗದ್ದೆಹೊಲಗಳಲ್ಲಿ ಮೆಂದು ಸಂಜೆ ತಮ್ಮತಮ್ಮ ಮನೆಗೆ ವಾಪಸ್ ಬಂದು ಬಿಡ್ತಾ ಇದ್ದವು. ಹಾಗೆ ಮೇಯಿಸುವುದಕ್ಕೆ ಊರಿನಲ್ಲೇ ಒಬ್ಬ ವ್ಯಕ್ತಿ ನೇಮಕವಾಗಿರುತ್ತಿದ್ದ. ವ್ಯಕ್ತಿ ಇಲ್ಲದೆ ಇದ್ರೂ ಕತ್ತಲಾಗುತ್ತಿದ್ದಂತೆ ಅವುಗಳೇ ತಮ್ಮ ಕೊಟ್ಟಿಗೆ ಸೇರುವಷ್ಟು ಬುದ್ಧಿವಂತಿಕೆ ಆ ದನಕರುಗಳಿಗೂ ಇರುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಒಬ್ಬರ ಮನೆ ದನ ಇನ್ನೊಬ್ಬರ ಹೊಲಕ್ಕೆ ಅಚಾನಕ್ ಕಾಲಿಟ್ಟರೂ ಪೊಲೀಸ್ ಕಂಪ್ಲೈಂಟ್ ದಾಖಲಾದ್ರೂ ಆಶ್ಚರ್ಯವಿಲ್ಲ. ಕಾಲಿಡಲು ಅವಕಾಶವೂ ಇರುವುದಿಲ್ಲ. ಯಾಕೆಂದರೆ ತಂತಿಬೇಲಿ, ಐಬಿಎಕ್ಸ್ ಗಳು ಗಡಿ ನಿರ್ಮಾಣ ಮಾಡಿರುತ್ತದೆ. ಹೀಗಿರೋ ಪರಿಸ್ಥಿತಿಯಲ್ಲಿ ದನಕರುಗಳನ್ನು ಮೇಯಲು ಬಿಡುವ ವ್ಯವಸ್ಥೆ ನಶಿಸಿ ಕಟ್ಟಿ ಸಾಕುವ ಪದ್ಧತಿ ಜಾರಿಗೆ ಬಂದಿದೆ.

ದಿನವಿಡೀ ಮೆಂದು ಹೊಟ್ಟೆ ತುಂಬಿಸಿಕೊಂಡು ಬರುತ್ತಿದ್ದ ದನಕರುಗಳಿಗೆ ಇದೀಗ ಒಂದೋ ಎರಡೋ ಹುಲ್ಲುಹೊರೆ ತಂದು ಹಾಕುವುದು ಸಂಪ್ರದಾಯವಾಗಿದೆ. ಹುಲ್ಲು ಸವರಿಕೊಂಡು ಹೊರೆ ಹೊತ್ತುಕೊಂಡು ಅದನ್ನು ಸಮಯಕ್ಕೆ ಸರಿಯಾಗಿ ನೀಡುತ್ತಿರಬೇಕು. ಹಾಕಿದ ಹುಲ್ಲಲ್ಲಿ ಒಂದು ಕಡ್ಡಿಯೂ ಬಿಡದಂತೆ ಯಾವ ಹಸುವೂ ತಿನ್ನುವುದಿಲ್ಲ. ಯುಟ್ಯೂಬ್ ನಲ್ಲಿ ಹುಲ್ಲು ನೀಡುವುದಷ್ಟನ್ನೇ ತೋರಿಸಲಾಗುತ್ತದೆ. ಆದರೆ ಸ್ವಲ್ಪ ತಿಂದು ಸ್ವಲ್ಪ ಹುಲ್ಲನ್ನು ಹಾಗೆಯೇ ಬಿಟ್ಟು ಅದರ ಮೇಲೆಯೆ ಸಗಣಿ ಹಾಕಿದ್ದನ್ನೆಲ್ಲಾ ಚೊಕ್ಕಗೊಳಿಸುವ ಕೆಲಸ ಯುಟ್ಯೂಬ್ ನಲ್ಲಿ ಇರುವುದೇ ಇಲ್ಲ. ಇದು ಹೇಗೆಂದರೆ, ಯುಟ್ಯೂಬ್ ನಲ್ಲಿರುವ ಅಡುಗೆ ವಿಡಿಯೋದಲ್ಲಿ ಬೇಯಿಸಿಕೊಂಡ ಆಲೂಗಡ್ಡೆಯ ಪೇಸ್ಟ್ ಒಂದು ಬೌಲ್ ಅಂದ್ಹಂಗೆಯೇ ಸರಿ! ಆಲೂಗಡ್ಡೆ ತಂದು, ತೊಳೆದು, ಬೇಯಿಸಿ, ಸಿಪ್ಪೆ ತೆಗೆದು, ಪೇಸ್ಟ್ ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದು ಅಡುಗೆ ಬಲ್ಲವರಿಗೆ ಮಾತ್ರವೇ ತಿಳಿದಿರುತ್ತದೆಯಲ್ಲವೇ? ಇದೂ ಹಾಗೆಯೇ.

 ಮೇವಿಗೆ ಲಕ್ಷಗಟ್ಟಲೆ ಹಣ ವ್ಯಯಿಸಬೇಕು

ಮೇವಿಗೆ ಲಕ್ಷಗಟ್ಟಲೆ ಹಣ ವ್ಯಯಿಸಬೇಕು

ಮನೆಯಲ್ಲೆ ಹಸಿರು ಹುಲ್ಲಿನ ವ್ಯವಸ್ಥೆ ಇದ್ದರೆ ಪರವಾಗಿಲ್ಲ. ಪ್ರತಿದಿನ ಶ್ರಮವಹಿಸಿ ಅದನ್ನು ಕತ್ತರಿಸಿ ತಂದು ಹೇಗೋ ಸಾಕಾಣಿಕೆ ಮಾಡಬಹುದು ಎಂದಿಟ್ಟುಕೊಳ್ಳೋಣ. ಒಂದು ವೇಳೆ ಇಲ್ಲದೆ ಇದ್ದರೆ ಬೇರೆ ಕಡೆಯಿಂದ ಖರೀದಿಯ ವ್ಯವಸ್ಥೆ ಆಗಬೇಕಾಗುತ್ತದೆ. ಕರಾವಳಿ, ಮಲೆನಾಡುಗಳಲ್ಲಿ ಒಣಗಿದ ಭತ್ತದ ಗಿಡಗಳನ್ನು ಖರೀದಿಸಲಾಗುತ್ತದೆ. ಬಯಲು ಸೀಮೆಗಳಲ್ಲಿ ಜೋಳದ ಹುಲ್ಲು ಇತ್ಯಾದಿಗಳನ್ನು ಸಂಗ್ರಹಿಸಿ ನೀಡುವುದುಂಟು. ಪೇಟೆಗಳಲ್ಲಿ ಕೋಸುಗಡ್ಡೆಯ ಎಲೆಗಳನ್ನು ಹಾಕಿ ಸಾಕುತ್ತಾರೆ. ಇದಕ್ಕೆ ಲಕ್ಷಗಟ್ಟಲೆ ಹಣವನ್ನೇ ವ್ಯಯಿಸಬೇಕಾಗುತ್ತದೆ.

ಜೂನ್ 1- ವಿಶ್ವ ಹಾಲು ದಿನ: ಕ್ಷೀರೋದ್ಯಮಿ ಶಿಲ್ಪಾ ಯಶೋಗಾಥೆ

ಅದ್ಯಾವುದೋ ವಿಡಿಯೋದಲ್ಲಿ ಕೊಟ್ಟಿಗೆ ವ್ಯವಸ್ಥೆಯೇ ಇರಲಿಲ್ಲ. ಅರ್ಧ ಎಕರೆ ಗದ್ದೆಯಲ್ಲಿ ದನಕರುಗಳನ್ನು ಬಿಟ್ಟಿರುತ್ತಾರೆ ಅಂತ ಒಳ್ಳೊಳ್ಳೆ ತಳಿಯ ದನಗಳನ್ನು ಝೂಮ್ ಹಾಕಿ ತೋರಿಸಿದ್ದರು. ಅರೆರೆ! ಎಷ್ಟು ಅದ್ಭುತ ಐಡಿಯಾ, ಎಷ್ಟು ಸುಲಭ ಎಂದು ವಿಡಿಯೋ ನೋಡಿ ಯಾರಾದರೂ ಹೇಳಿದರೆ ಅವರಂತಹ ಪೆಂಗರು ಮತ್ತಿನ್ಯಾರೂ ಇರಲಿಕ್ಕಿಲ್ಲ! ಇಲ್ಲಿನ ಪರಿಸರದಲ್ಲಿ ಇದು ಸಾಧ್ಯದ ಮಾತೇ ಹೇಳಿ? ಮಳೆಗಾಲದಲ್ಲಿ ದನಗಳನ್ನು ಹಾಗೆ ಬಿಡಲಿಕ್ಕೆ ಸಾಧ್ಯವಾಗುತ್ತದೆಯೇ? ಒಂದು ವೇಳೆ ಹಾಗೆ ಅರ್ಧ ಎಕರೆಯಲ್ಲಿ ಕೊಟ್ಟಿಗೆ ವ್ಯವಸ್ಥೆಯೇ ಇಲ್ಲದೆ ದನಕರುಗಳನ್ನು ಬಿಡುವುದೇ ಆದರೆ ಅವುಗಳಿಗೆ ಮೇವು ನೀಡುವುದು ಸುಲಭದ ಕೆಲಸವೇ?

 ಮೊಳಕೆ ಕಾಳು ಬೆಳೆಸಲು ಕಡಿಮೆ ಖರ್ಚಾಗುತ್ತದಾ?

ಮೊಳಕೆ ಕಾಳು ಬೆಳೆಸಲು ಕಡಿಮೆ ಖರ್ಚಾಗುತ್ತದಾ?

ಆ ವಿಡಿಯೋದಲ್ಲಿ ಸಗಣಿಯೇ ಕಾಣುತ್ತಿರಲಿಲ್ಲ. ಹಾಗಾದ್ರೆ ದನಗಳು ಸಗಣಿ ಹಾಕಿರಲಿಲ್ಲವೆ? ದನಗಳು ಸಗಣಿ ಹಾಕಿ ಅದರ ಮೇಲೆ ಮಲಗಿದಾಗ ಅವುಗಳ ಮೈಯನ್ನು ಪ್ರತಿದಿನ ತೊಳೆಯಬೇಕಾಗುತ್ತದೆ. ಅದಕ್ಕೆ ನೀರಿನ ವ್ಯವಸ್ಥೆ ಬೇಕಾಗುತ್ತದೆ. ಇದೆಲ್ಲಾ ಹೇಗೆ ಮಾಡಿರುತ್ತಾರೆ? ರಾತ್ರಿ ಬೆಳಗಾಗುವುದರ ಒಳಗೆ ಒಂದು ದನ ಒಂದು ಬುಟ್ಟಿಯಾಗುವಷ್ಟು ಸಗಣಿ ಹಾಕಿರುತ್ತದೆ. ಅದನ್ನ ಸ್ವಚ್ಛಗೊಳಿಸುವುದು ಬೇಡವೇ? ಇಂತಹದ್ದೇ ಕುತೂಹಲದ ಪ್ರಶ್ನೆಯನ್ನು ಶ್ಯಾಮಯ್ಯ ಭಟ್ರನ್ನ ಕೇಳಿದಾಗ ಅವರು "ಪೇಟೆ ಬೀದಿಲಿ ನಾಯಿ ಹೇಲ್ ಮಾಡ್ಬಾರ್ದು ಅಂತ ವಾಕಿಂಗ್ ಗೆ ಕರ್ಕೊಂಡು ಹೋಗುವಾಗ ಅಂಡಿಗೆ ಪ್ಲಾಸ್ಟಿಕ್ ಕಟ್ಕೊಂಡು ಕರ್ಕೊಂಡ್ ಹೊಗ್ತಾರಂತಲ್ಲ ಹಾಗೆ ಗಂಟಿ ಅಂಡಿಗೂ ಪ್ಲಾಸ್ಟಿಕ್ ಹಾಕಿರ್ತೇನೋ!" ಅಂತ ಅವರದ್ದೇ ಗ್ರಾಮ್ಯ ಭಾಷೆ ಕುಂದಾಪುರ ಕನ್ನಡದಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದಿದೆ. ಆದರೆ ಅದನ್ನು ಕಟ್ಟೋಕಾದ್ರೂ ಜನ ಮತ್ತು ಸಮಯ ಎರಡೂ ಬೇಕಲ್ಲವೇ?

ಕೆಲವು ವೀಡಿಯೋದಲ್ಲಿ ಮೊಳಕೆ ಕಾಳುಗಳನ್ನು ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಸಿ ನೀಡ್ತಾರಂತೆ. ಅಬ್ಬಬ್ಬಾ ಇದಕ್ಕೆ ಸಾಮಾನ್ಯ ವೆಚ್ಚವಾಗುತ್ತದೆಯೇ? ಲಕ್ಷಗಟ್ಟಲೆ ಬೇಕು. ಕಾಳುಗಳನ್ನು ಖರೀದಿ ಮಾಡಬೇಕು, ನೀರು ಹಾಯಿಸಿ ಅದನ್ನು ಜೋಪಾನ ಮಾಡಬೇಕು, ಇದರ ಮೈಂಟೇನ್ ಮಾಡೋದಕ್ಕೆ ನಾಲ್ಕು ಜನ ಆಳುಗಳಿದ್ದರೆ ಹಸುವಿನ ಕಾಳಜಿಗೆ ಎಂಟು ಮಂದಿ ಬೇಕಾದೀತು. ಅವರಿಗೆಲ್ಲಾ ಸಂಬಳ ನೀಡೋದು ಬೇಡವೇ? ದನದ ಹಾಲೊಂದನ್ನು ಮಾರಾಟ ಮಾಡಿ ಇದರ ಲಾಭ ಗಳಿಸುವುದಕ್ಕೆ ಸಾಧ್ಯವಾಗುವುದುಂಟೇ ಹೇಳಿ? ಇದರ ಬದಲು ಹುಲ್ಲು ತರಿಸುವುದೇ ಮೇಲು ಅನ್ನಿಸುತ್ತದೆ.

 ಗಂಡು ಕರುಗಳನ್ನು ಯಾರೂ ಕೇಳುವುದಿಲ್ಲ

ಗಂಡು ಕರುಗಳನ್ನು ಯಾರೂ ಕೇಳುವುದಿಲ್ಲ

ಭವಿಷ್ಯದ ಮಂದಿಗೆ ದನಗಳು ನೈಸರ್ಗಿಕ ಲೈಂಗಿಕ ಕ್ರಿಯೆಯಿಂದ ಕರು ಹಾಕುತ್ತವೆ ಅನ್ನುವುದು ತಿಳಿದಿರುತ್ತದೆಯೇ ಅನ್ನುವಷ್ಟು ಅನುಮಾನ ಇತ್ತೀಚಿನ ದಿನಗಳಲ್ಲಿ ಶುರುವಾಗುತ್ತಿದೆ. ಹಸುಗಳು ಹೀಟಿಗೆ ಬಂದರೆ, ಅಂದರೆ ತಾಯಿಯಾಗಲು ಸನ್ನದ್ಧವಾಗುವಾಗ ಪ್ರತಿಯೊಬ್ಬರೂ ವೆಟರ್ನರಿ ಡಾಕ್ಟರಿಗೊಂದು ಫೋನಾಯಿಸುತ್ತಾರೆ. ಇಂಜೆಕ್ಷನ್ ಮೂಲಕವೇ ಹಸುಗಳನ್ನು ಗಬ್ಬವಾಗುವಂತೆ (ಬಸುರಿ) ಮಾಡಲಾಗುತ್ತದೆ. ಆ ಇಂಜೆಕ್ಷನ್ನಿಗೂ ದುಡ್ಡು ಕೊಡಬೇಕು. ಒಂದೇ ಬಾರಿಗೆ ಕೊಟ್ಟಿರೋ ಇಂಜೆಕ್ಷನ್ ಮೂಲಕ ದನ ಗಬ್ಬವಾಗಿಬಿಡುತ್ತದೆ ಅಂದುಕೊಂಡಿದ್ದೀರಾ? ಎಷ್ಟೋ ಸಲ ಅಸಾಧ್ಯ. ಹಾಗಾಗಿ ಪದೇ ಪದೇ ಇಂಜೆಕ್ಷನ್. ಪ್ರತಿ ಬಾರಿಯೂ ಇಂಜೆಕ್ಷನ್.

ಹಸು ಹೆಣ್ಣು ಕರುವನ್ನೇ ಹಾಕಬೇಕು ಅನ್ನೋ ನಿರೀಕ್ಷೆ. ಯಾಕೆಂದರೆ ಹೆಣ್ಣು ಕರುವಿನಿಂದ ಮಾತ್ರವೇ ಲಾಭ. ಹೆಣ್ಣು ಕರುವಾದರೆ ಹಾಲನ್ನು ಡೈರಿಗೆ ಕೊಟ್ಟು ಹೇಗ್ಹೋ ಸ್ವಲ್ಪ ಕಾಸಾಗುತ್ತದೆ. ಗಂಡು ಕರುವಾದರೆ ಕಾಸು ಕೈಯಿಂದ ಹೋಗುತ್ತದೆ. ಗಂಡು ಕರುಗಳನ್ನು ಯಾರೂ ಕೇಳುವುದಿಲ್ಲ.

ಅಲ್ಪ ಭೂಮಿಯಲ್ಲಿ ಅಧಿಕ ಲಾಭ ತೆಗೆದು ಹುಬ್ಬೇರುವಂತೆ ಮಾಡಿದ ಸಿರಗುಪ್ಪ ರೈತ

ಮೊದಲೆಲ್ಲಾ ಗದ್ದೆ ಹೂಟಿಗೆ ಬಳಸುತ್ತಿದ್ದರು. ಈಗೆಲ್ಲಾ ಟ್ರ್ಯಾಕ್ಟರ್ ಯುಗ, ಎತ್ತಿನ ಗಾಡಿ ಕೇಳಲೇಬೇಡಿ! ಒಂದು ವೇಳೆ ಹಾಗೆಲ್ಲಾ ಕೆಲಸಕ್ಕೆ ಬಳಸಿದರೂ ಪ್ರಾಣಿ ದಯಾ ಸಂಘದವರ ತಕರಾರು ಬಂದರೆ ಪ್ರಾಣಿಹಿಂಸೆ ಅಂತ ಸ್ಟೇಷನ್ ಅಲಿಯಬೇಕಾದೀತು!!! ಹಾಗಾಗಿ ಇವುಗಳ ಸಹವಾಸವೇ ಬೇಡ, ಸಾಕೋ ವೆಚ್ಚ, ಲಾಭವಿಲ್ಲದ ಶ್ರಮ ಯಾಕೆ ಬೇಕು ಎಂದು ಪರಿಗಣಿಸಿ ಹೆಚ್ಚಿನವರು ಅದನ್ನು ತಮ್ಮ ಕೊಟ್ಟಿಗೆಯಿಂದ ಸಾಗಿಸುವುದಕ್ಕೆ ನೋಡುತ್ತಾರೆ.

 ಹಾಲು ಕರೆಯುವುದೇನು ಸುಲಭದ ಕೆಲಸವೇ?

ಹಾಲು ಕರೆಯುವುದೇನು ಸುಲಭದ ಕೆಲಸವೇ?

ಇತ್ತೀಚೆಗೆ ಕೆಲವು ದೇವಸ್ಥಾನಗಳಲ್ಲಿ ಹಣ ಪಾವತಿಸಿಕೊಂಡು ಗಂಡು ಕರುಗಳನ್ನು ಪಡೆಯುತ್ತಿದ್ದಾರೆ. ಸಾಗಾಟದ ವೆಚ್ಚ, ಡೆಪಾಸಿಟ್ ಮೊತ್ತ ಎಲ್ಲವೂ ಸೇರಿ ಗಂಡು ಕರುವಾದರೆ ಅಂದಾಜು 5000 ಕೈಯಿಂದ ಭರಿಸುವುದಾದರೂ ಸರಿ ತಮ್ಮ ಮನೆಯ ಕೊಟ್ಟಿಗೆಯಲ್ಲಿ ಗಂಡು ಕರುಗಳು ಬೇಡ, ಸಾಕುವುದಕ್ಕೆ ಆಗುವುದಿಲ್ಲ ಅನ್ನೋ ದುಸ್ಥಿತಿ ಇದೆ. ಆ ಕರುಗಳು ಮುಂದೇನಾದವು ಕೇಳಬೇಡಿ! ತಮ್ಮ ಮನೆಯ ಕೊಟ್ಟಿಗೆಯಿಂದ ನಷ್ಟದಿಂದಾಗಿ ಸಾಗಿಸಲ್ಪಟ್ಟವು ಅನ್ನುವುದಷ್ಟೇ ಗೊತ್ತಿರುತ್ತದೆ.

ಹಾಲು ಕರೆಯುವುದೇನು ಸುಲಭದ ಕೆಲಸವೇ? ಕುಕ್ಕರುಗಾಲಲ್ಲಿ ಕೂತು ಹಾಲು ಕರೆಯುವವರಿಗೆ ಗೊತ್ತು ಅದರ ಕಷ್ಟವೆಷ್ಟೆಂದು. ಯುಟ್ಯೂಬ್ ನಲ್ಲಿ ತೋರಿಸುವ ಮಷೀನ್ ವ್ಯವಸ್ಥೆಗೆ ಹಣ ವ್ಯಯಿಸಬೇಕು. ಮಷೀನ್ ಇದ್ದ ಕೂಡಲೇ ಅದನ್ನು ಕೆಚ್ಚಲಿಗೆ ಕನೆಕ್ಟ್ ಮಾಡುವುದು ಬೇಡವೇ? ಇದಕ್ಕೆ ಕರೆಂಟ್ ವ್ಯವಸ್ಥೆ ಬೇಕು. ಒಂದು ವೇಳೆ ಕರೆಂಟ್ ಕೈಕೊಟ್ಟರೆ ಏನು ಮಾಡಬೇಕು? ಇನ್ನು ದನವನ್ನು ಸರಿಯಾದ ಜಾಗದಲ್ಲಿ ಕಟ್ಟಿಟ್ಟುಕೊಳ್ಳುವುದು ಬೇಡವೇ? ಹಾಲು ತುಂಬಿದ ಪಾತ್ರೆಯನ್ನು ಸಾಗಾಟದ ಪಾತ್ರೆಗೆ ಹಾಕಿ ಡೈರಿಗೆ ತೆಗೆದುಕೊಂಡು ಹೋಗಿ ಕೊಡುವುದು ಬೇಡವೇ? ಇದೆಲ್ಲಾ ಕೆಲಸವಲ್ಲವೇ? ಈ ಕೆಲಸಗಳನ್ನೆಲ್ಲಾ ವಿಡಿಯೋದಲ್ಲಿ ತೋರಿಸುವುದೇ ಇಲ್ಲವಲ್ಲ!

 ಡೈರಿಯ ತಕರಾರೂ ಕಡಿಮೆಯಲ್ಲ...

ಡೈರಿಯ ತಕರಾರೂ ಕಡಿಮೆಯಲ್ಲ...

ಇನ್ನು ಡೈರಿಯ ತಕರಾರುಗಳು ಒಂದೆರೆಡೇ? ನಿಮ್ಮ ಹಾಲಿನಲ್ಲಿ ಫ್ಯಾಟ್ ಕಡಿಮೆ ಉಂಟು, ನಿಮ್ಮ ಹಾಲಿನಲ್ಲಿ ಕ್ಯಾಲೊರಿ ಕಡಿಮೆ ಉಂಟು. ದನಕ್ಕೆ ಕ್ಯಾಲ್ಸಿಯಂ ಮಾತ್ರೆ ಕೊಡಿ, ಕರುವಿಗೆ ಹೊಟ್ಟೆ ಹುಳುವಿನ ಮಾತ್ರೆ ಕೊಡಿ. ಕಡಲೆ ಹಿಂಡಿ ಕೊಡಿ ಅನ್ನೋರೊಬ್ಬರು, ಹತ್ತಿಕಾಳು ಹಿಂಡಿ ಕೊಡಿ ಅನ್ನೋರು ಇನ್ನೊಬ್ಬರು. ಹೀಗೆ ಹಸುಗಳಿಗೆ ಮೇವಿನ ಜೊತೆಗೆ ನೀಡಬೇಕಿರುವ ವಸ್ತುಗಳ ಖರೀದಿಗೆ ವೆಚ್ಚವಾಗುವ ಮೊತ್ತ ಹೇಳತೀರದು. ಇವುಗಳನ್ನು ವಿಡಿಯೋದಲ್ಲಿ ತೋರಿಸುವುದೇ ಇಲ್ಲವಲ್ಲ!

ದನ ಕರುಗಳನ್ನು ಕಟ್ಟಿದಾಗ ಕೊಟ್ಟಿಗೆಯಲ್ಲಿ ಅವುಗಳ ಮೂತ್ರ ಮತ್ತು ಸಗಣಿಯಿಂದಾಗಿ ಪಾಚಿಯಂತಾಗಿ ಕಾಲು ಜಾರುತ್ತದೆ. ಈ ಸಮಸ್ಯೆಗೆ ಪರಿಹಾರವಿದ್ಯಾ ಎಂದು ಯುಟ್ಯೂಬ್ ಪರೀಕ್ಷಿಸಿದರೆ ಸೂಪರ್ ಆಗಿರೋ ರಬ್ಬರ್ ಮ್ಯಾಟ್ ವ್ಯವಸ್ಥೆಯ ವಿಡಿಯೋ ಲಭ್ಯವಾಗುತ್ತದೆ. ಆದರೆ ಅದರ ವೆಚ್ಚ, ಮೈಂಟೇನ್ ಮಾಡುವ ಪರಿ, ಬಾಳಿಕೆಯ ವಿವರ, ಸರಿಯಾಗಿ ಶುಚಿತ್ವ ಕಾಪಾಡದೆ ಇದ್ದರೆ ದನಗಳ ಆರೋಗ್ಯದ ಮೇಲಾಗುವ ಪರಿಣಾಮಗಳು ಇತ್ಯಾದಿಗಳು ವಿಡಿಯೋದಲ್ಲಿರುವಷ್ಟು ಸುಲಭವಾಗಿರುವುದಿಲ್ಲ.

 ಸಮುದ್ರಕ್ಕೆ ಇಳಿದರೆ ಮಾತ್ರ ಅದರ ಆಳ ಅಗಲ ಗೊತ್ತಾಗುವುದು

ಸಮುದ್ರಕ್ಕೆ ಇಳಿದರೆ ಮಾತ್ರ ಅದರ ಆಳ ಅಗಲ ಗೊತ್ತಾಗುವುದು

ಒಟ್ಟಿನಲ್ಲಿ ಯಾವುದೇ ವಿಡಿಯೋ ಹೈನುಗಾರಿಕೆಯ ನೈಜ ಚಿತ್ರಣವನ್ನು ನೀಡುವುದೇ ಇಲ್ಲ. ಸಮುದ್ರಕ್ಕೆ ಇಳಿದರೆ ಮಾತ್ರ ಅದರ ಆಳ ಅಗಲ ಗೊತ್ತಾಗುತ್ತದೆ. ಇಲ್ಲದಿದ್ರೆ ಸಮುದ್ರ ಶಾಂತವಾಗಿರುವಂತೆ ಕಾಣುತ್ತದೆ. ದೂರದಲ್ಲಿ ಸಾಗುತ್ತಿರುವ ದೋಣಿ ಫೋಟೊ ಕ್ಲಿಕ್ಕಿಸುವವನಿಗೆ ಅದ್ಭುತವೆನ್ನಿಸಬಹುದು. ಫೋಟೊ ನೋಡಿದವನಿಗೆ ಇನ್ನಷ್ಟು ಸುಂದರವೆನ್ನಿಸಬಹುದು. ಆದರೆ ದೋಣಿಗೆ ಹುಟ್ಟು ಹಾಕುವ ಕಷ್ಟ ಮೀನುಗಾರನಿಗೆ ಮಾತ್ರವೇ ಗೊತ್ತಿರುವಂತೆ ಹೈನುಗಾರಿಕೆಯ ಕಷ್ಟ ವಿಡಿಯೋ ಮಾಡಿದವನಿಗೂ ಗೊತ್ತಿಲ್ಲ, ನೋಡಿದವನಿಗೂ ಗೊತ್ತಿರಲಿಕ್ಕಿಲ್ಲ.

ಇದು ವೀಕ್ ಆಫ್, ವೀಕೆಂಡ್, ಹಾಲಿಡೇ ಇಲ್ಲದ 24/7 ಬದ್ಧತೆಯನ್ನು ಬೇಡುವ ಉದ್ಯೋಗ ಅನ್ನೋದು ಮಾತ್ರ ಸತ್ಯ.

English summary
Animal husbandry is not easy as shown in youtube video. It involves lot of risks, efforts and committment...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X