ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾತಾಳಕ್ಕೆ ಕುಸಿದ ಈರುಳ್ಳಿ ದರ: ರೈತರ ಕಣ್ಣಲ್ಲಿ ನೀರು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 15: ಕೊರೊನಾ ಒಂದು ಮತ್ತು ಎರಡನೇ ಅಲೆಯ ಲಾಕ್‌ಡೌನ್ ನಡುವೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇದರ ಜೊತೆಗೆ ಮೂರನೇ ಅಲೆ ಆತಂಕದ ನಡುವೆಯೂ ಸಾಲ ಸೂಲ ಮಾಡಿ ಬೆಳೆದ ಈರುಳ್ಳಿ ಬೆಳೆಗೆ ಇದೀಗ ಉತ್ತಮ ಬೆಲೆ ದೊರೆಯದೇ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಲಾಭವಂತೂ ಬರುವುದಿಲ್ಲ, ಬೆಳೆಗೆ ಹಾಕಿದ ಬಂಡವಾಳವಾದರೂ ಬರುತ್ತದೆಂಬ ಆಸೆಯಿಂದ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಭಾಗದ ರೈತರು ಬೆಂಗಳೂರು ಮಾರುಕಟ್ಟೆಗೆ ಈರುಳ್ಳಿ ಕೊಂಡೊಯ್ದರೆ ಲಾರಿ ಬಾಡಿಗೆ ಕೊಡಲಾಗದಷ್ಟು ಬೆಲೆ ಸಿಗುತ್ತದೆ. ಹಿಂದೊಮ್ಮೆ ಈರುಳ್ಳಿ ಬೆಲೆ ಗಗನಕ್ಕೆ ತಲುಪಿತ್ತು. ಆದರೆ ಇದೀಗ ಪಾತಾಳಕ್ಕೆ ಕುಸಿದಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಒಂದು ಕೆಜಿ ಈರುಳ್ಳಿ ಬೆಲೆ 1 ರೂಪಾಯಿಯಿಂದ 50 ಪೈಸೆವರೆಗೆ ಮಾತ್ರ ಬೆಲೆ ಸಿಗುತ್ತದೆ.

ಬೀಜ, ಗೊಬ್ಬರ, ಔಷಧಿ, ಕಳೆ, ಚೀಲ ಹೀಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಈರುಳ್ಳಿ ಬೆಳೆಯಾಲಾಗಿದೆ. ಅದರಲ್ಲೂ ಕೊಳೆ ರೋಗ ಕಾಣಿಸಿಕೊಳ್ಳುವುರ ಮಧ್ಯೆಯೂ ಒಂದಿಷ್ಟು ಇಳುವರಿ ಬಂದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ನೂರಾರು ಕಿಲೋಮೀಟರ್ ದೂರವಿರುವ ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಗುವ ದರ ನೋಡಿ ರೈತರು ದಂಗಾಗಿದ್ದಾರೆ. ಕೊಂಡೊಯ್ದ ಮಾಲಿಗೆ, ಲಾರಿ ಬಾಡಿಗೆ ಕೂಡ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.

 ಸರ್ಕಾರದ ವಿರುದ್ಧ ರೈತರ ಆಕ್ರೋಶ

ಸರ್ಕಾರದ ವಿರುದ್ಧ ರೈತರ ಆಕ್ರೋಶ

ಕಳೆದ ವರ್ಷ ಸಹ ಉತ್ತಮ ಬೆಲೆ ದೊರೆಯಲಿಲ್ಲ. ಇದರ ಜೊತೆಗೆ ಈ ಬಾರಿ ಟೊಮೆಟೊ ಬೆಲೆಯು ಸಹ ಕುಸಿತ ಕಂಡಿದೆ. ಲಕ್ಷಾಂತರ ರೂ. ಸಾಲ ಮಾಡಿ ಬೆಳೆದಿರುವ ಈರುಳ್ಳಿ, ಟೊಮೆಟೊ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಇದ್ದರೆ ಹೇಗೆ ಎಂದು ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಎರಡು ಮಾರುಕಟ್ಟೆ ಇದ್ದು, ಒಂದು ಕಡೆಯಿಂದಲೂ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಯಶವಂತಪುರ ಹಾಗೂ ದಾಸನಪುರ ಎರಡು ಮಾರುಕಟ್ಟೆಗಳಲ್ಲಿ ಇದೇ ಸಮಸ್ಯೆ ಇದೆ ಎಂದು ರೈತರು ಕಣ್ಣೀರಿಟ್ಟಿದ್ದಾರೆ.
ಕೈಗಡ ಸಾಲ ತೆಗೆದುಕೊಂಡು ಬಂದು ಉಳುಮೆ ಮಾಡಿ, ಬೀಜ ಖರೀದಿಸಿ, ಗೊಬ್ಬರ ಹಾಕಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಲೇಬೇಕು. ಆಗ ಮಾತ್ರ ರೈತರು ಬೆಳೆದ ಬೆಳೆಗಳಿಗೆ ಒಂದಿಷ್ಟು ದರ ಸಿಗಬಹುದು ಎನ್ನಬಹುಬುದಾಗಿದೆ.

 ರಸ್ತೆ, ಚರಂಡಿಗೆ ಸುರಿದ ರೈತ

ರಸ್ತೆ, ಚರಂಡಿಗೆ ಸುರಿದ ರೈತ

ಈರುಳ್ಳಿ ಬೆಲೆ ಕುಸಿತದಿಂದಾಗಿ ಈರುಳ್ಳಿ ಬೆಳೆ ರೈತರ ಕಣ್ಣಲ್ಲಿ ನೀರು ತರಿಸಿದ್ದು, ಇದರಿಂದ ಬೇಸತ್ತ ರೈತ ಶ್ರೀನಿವಾಸ್ ತನ್ನ ಬೆಳೆಯನ್ನು ಚರಂಡಿ, ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕ್ಯಾತಗೊಂಡನಹಳ್ಳಿ ಗ್ರಾಮದ ರೈತ ಶ್ರೀನಿವಾಸ್ ತನ್ನ 6 ಎಕರೆ ಪ್ರದೇಶದಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿ 882 ಚೀಲ ಈರುಳ್ಳಿ ಬೆಳೆದಿದ್ದಾನೆ. ಇದನ್ನು ಬೆಂಗಳೂರಿನ ಮಾರುಕಟ್ಟೆಗೆ ಕೊಂಡೊಯ್ಯಲಾಗಿದೆ. ಆದರೆ ಅಲ್ಲಿ ಪ್ರತಿ ಕ್ವಿಂಟಾಲ್‌ಗೆ 230 ರೂಪಾಯಿ ಬೆಲೆ ನಿಗದಿಯಾಗಿದ್ದು, ಕೇವಲ 34 ಸಾವಿರ ಹಣ ಮಾತ್ರ ಸಿಕ್ಕಿದೆ.
ಇದರಿಂದ ಬೇಸತ್ತಿರುವ ರೈತ ಬೆಂಗಳೂರಿಗೆ ಸಾಗಿಸಲು 40 ಸಾವಿರ ಖರ್ಚು ಮಾಡಿದ್ದು ಲಾರಿ ಬಾಡಿಗೆಯೂ ಸಿಕ್ಕಿಲ್ಲ. ಇದರಿಂದ ಈರುಳ್ಳಿ ಬೆಳೆ ಬೆಳೆದು 3.4 ಲಕ್ಷ ನಷ್ಟವಾಗಿದೆ. ಈ ಬಾರಿ ಉತ್ತಮ ಬೆಳೆಯನ್ನು ಬೆಳೆದಿದ್ದರೂ, ಕೊಳೆ ರೋಗದಿಂದ ಹಾಗೂ ಬೆಲೆ ಕುಸಿತದಿಂದಾಗಿ ತಾನು ಬೆಳೆದ ಈರುಳ್ಳಿ ಬೆಳೆಯನ್ನು ಟ್ರ್ಯಾಕ್ಟರ್ನಲ್ಲಿ ತಂದು ಚರಂಡಿ ಹಾಗೂ ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

 ಟ್ರ್ಯಾಕ್ಟರ್ ಮೂಲಕ ಈರುಳ್ಳಿ ನಾಶ

ಟ್ರ್ಯಾಕ್ಟರ್ ಮೂಲಕ ಈರುಳ್ಳಿ ನಾಶ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದಿಂಡಾವರ ಪಂಚಾಯತಿ ವೀರವ್ವನಾಗತಿಹಳ್ಳಿ (ಹೊಸಹಳ್ಳಿ) ಗ್ರಾಮದ ರೈತ ಹರೀಶ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಸಂಪೂರ್ಣ ಕೊಳೆ ರೋಗದಿಂದ ನೆಲ ಕಚ್ಚಿದೆ. ಇನ್ನೊಂದು ಕಡೆ ಈರುಳ್ಳಿಗೆ ನಿರ್ದಿಷ್ಟವಾದ ಬೆಲೆ ಸಿಗುತ್ತಿಲ್ಲ. ಈಗಿರುವಾಗ ಹೊಲದಲ್ಲಿರುವ ಈರುಳ್ಳಿ ಕಿತ್ತರೆ, ಕೀಳುವ ಕೂಲಿ ಖರ್ಚು ಸಹ ಬರುವುದಿಲ್ಲ ಎಂದು ರೈತ ಹರೀಶ್ ಜಮೀನಿನಲ್ಲಿರುವ ಈರುಳ್ಳಿ ಕೀಳದ ಹಾಗೆಯೇ ಟ್ರ್ಯಾಕ್ಟರ್ ಹೊಡೆಸಿದ್ದಾನೆ. ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದಿರುವ ರೈತರ ಪಾಡು ಕೂಡಾ ಇದೇ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ.

 ಈರುಳ್ಳಿಗೆ ಕೊಳೆ ರೋಗ

ಈರುಳ್ಳಿಗೆ ಕೊಳೆ ರೋಗ

ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗ ಭಾಗದ ಬಹುತೇಕ ಕಡೆ ಇದೇ ರೀತಿ ಈರುಳ್ಳಿ ಕೊಳೆ ರೋಗದಿಂದ ಬಹುತೇಕ ರೈತರು ಹಾಕಿದ ಬಂಡವಾಳ ವಾಪಸ್ ಬರದೇ ಇರುವುದು ರೈತರಿಗೆ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟವಾಗಿದೆ. ರೈತರು ಸಾಲದ ಸುಳಿಯಲ್ಲಿ ತತ್ತರಿಸಿ ಹೋಗಿದ್ದಾರೆಂದರೆ ತಪ್ಪಾಗಲಾರದು. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಈರುಳ್ಳಿ ಬೆಳೆದ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡುತ್ತಾರಾ ಕಾದು ನೋಡಬೇಕಿದೆ.

English summary
Chitradurga district farmers continue to suffer losses from Onion cultivation. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X