• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಡವರ ಬಾದಾಮಿ ಬೆಳೆದ ರೈತರಿಗೀಗ ಬೆಲೆ ಕುಸಿತದ ಸಂಕಷ್ಟ

|

ಚಾಮರಾಜನಗರ, ಅಕ್ಟೋಬರ್ 12: ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಕಾರಣದಿಂದ ಈ ಬಾರಿ ಯಾವುದೇ ಉತ್ಸವ, ಹಬ್ಬಗಳು ನಡೆಯುತ್ತಿಲ್ಲ. ಈ ಕಾರಣದಿಂದಾಗಿ ಕಡಲೆಕಾಯಿ (ಶೇಂಗಾ) ಬೆಳೆದವರು ಹೆಚ್ಚಿನ ಬೇಡಿಕೆಯಿಲ್ಲದೆ ಪರದಾಡುವಂತಾಗಿದೆ.

ಬಡವರ ಬಾದಾಮಿ ಎಂದೇ ಕರೆಯುವ ಕಡಲೆಕಾಯಿಯನ್ನು ಸಂಕಷ್ಟದ ನಡುವೆಯೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಹುತೇಕ ರೈತರು ಬೆಳೆದಿದ್ದರು. ಆದರೆ ಈಗ ಕಡಲೆಕಾಯಿಗೆ ಬೆಲೆ ಕುಸಿತವಾಗಿರುವುದು ಅತಿವೃಷ್ಟಿ ಮತ್ತು ಅನಾವೃಷ್ಟಿ ನಡುವೆಯೂ ಕಷ್ಟಪಟ್ಟು ಬೆಳೆ ಬೆಳೆದ ರೈತರ ಪಾಲಿಗೆ ಸಂಕಷ್ಟದ ಮೇಲೆ ಸಂಕಟ ತಂದೊಡ್ಡಿದಂತಾಗಿದೆ. ಮುಂದೆ ಓದಿ...

 ಕಡಿಮೆ ಬೆಲೆಯಿಂದ ರೈತರು ಕಂಗಾಲು

ಕಡಿಮೆ ಬೆಲೆಯಿಂದ ರೈತರು ಕಂಗಾಲು

ಬೇಸಿಗೆಯಲ್ಲಿ ಕಲ್ಲಂಗಡಿ, ಈರುಳ್ಳಿ ಸೇರಿದಂತೆ ಹಲವು ರೀತಿಯ ಬೆಳೆಗಳನ್ನು ಬೆಳೆದಿದ್ದ ರೈತರು ಲಾಕ್ ಡೌನ್ ನಿಂದಾಗಿ ಬೆಳೆಯನ್ನು ಕೊಂಡುಕೊಳ್ಳುವವರಿಲ್ಲದೆ ನಷ್ಟ ಅನುಭವಿಸಿದ್ದರು. ಆದರೂ ಸಾಲಸೋಲ ಮಾಡಿ ಕಡಲೆಕಾಯಿಯನ್ನು ಬೆಳೆದಿದ್ದರು. ಆದರೆ ಈ ಬಾರಿ ಕಡಲೆಕಾಯಿಗೆ ಕೊರೋನಾ ನೆಪ ಮಾಡಿಕೊಂಡು ಕೊಳ್ಳಲು ವ್ಯಾಪಾರಸ್ಥರು ಮುಂದಾಗದಿರುವುದು ಮತ್ತು ಕಡಿಮೆ ಬೆಲೆಗೆ ಖರೀದಿಗೆ ಮುಂದಾಗುತ್ತಿರುವುದು ರೈತರನ್ನು ಕಂಗಾಲು ಮಾಡುತ್ತಿದೆ.

ಗದಗ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 159 ಕೋಟಿ ರೂ. ನಷ್ಟ

 ಆಂಧ್ರದ ಕಡಲೆಕಾಯಿಂದ ಬೆಲೆ ಕುಸಿತ

ಆಂಧ್ರದ ಕಡಲೆಕಾಯಿಂದ ಬೆಲೆ ಕುಸಿತ

ಹಾಗೆನೋಡಿದರೆ ಕಡಲೆಕಾಯಿಯನ್ನು ಎಲ್ಲೆಡೆ ಬೆಳೆಯುತ್ತಿರುವುದರಿಂದ ಮತ್ತು ಈಗ ಕಡಲೆಕಾಯಿಯ ಕಾಲವಾಗಿರುವುದರಿಂದ ಬೆಲೆಯಲ್ಲಿ ವ್ಯತ್ಯಾಸವಾಗುವುದು ಸಹಜ. ಆದರೆ ಈ ಬಾರಿ ಜಿಲ್ಲೆಯ ರೈತರಿಗೆ ಅಡ್ಡಗಾಲಾಗಿರುವುದು ಆಂಧ್ರದಿಂದ ಬರುತ್ತಿರುವ ಕಡಲೆಕಾಯಿಯಾಗಿದೆ. ಈಗಾಗಲೇ ಆಂಧ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಕಡಲೆಕಾಯಿ ರಾಜ್ಯದೊಳಗೆ ಬರುತ್ತಿರುವುದರಿಂದ ಸ್ಥಳೀಯವಾಗಿ ರೈತರು ಬೆಳೆದ ಕಡಲೆಕಾಯಿಗೆ ಹೆಚ್ಚಿನ ಬೆಲೆ ಸಿಗದಂತಾಗಿದೆ.

 ತಲೆಮೇಲೆ ಕೈಹೊತ್ತು ಕೂತ ರೈತರು

ತಲೆಮೇಲೆ ಕೈಹೊತ್ತು ಕೂತ ರೈತರು

ಕಳೆದ ವರ್ಷ ಕ್ವಿಂಟಾಲ್ ಕಡಲೆಕಾಯಿ 3,800 ರಿಂದ 4,100 ರೂ.ವರೆಗೆ ಮಾರಾಟವಾಗಿತ್ತು. ಆದರೆ ಈ ವರ್ಷ 800 ರಿಂದ 2,000 ರೂ.ಗೆ ಮಾರಾಟವಾಗುತ್ತಿರುವುದು ರೈತರಿಗೆ ಸಂಕಷ್ಟ ತಂದಿದೆ. ಕಡಲೆಕಾಯಿ ಬೆಳೆದು ಒಂದಷ್ಟು ಹಣ ದೊರೆತರೆ ಅದರಿಂದ ಬದುಕು ಕಟ್ಟಿಕೊಳ್ಳಬಹುದೆಂದು ನಂಬಿದ್ದ ರೈತರು ಈಗ ಕಡಲೆಕಾಯಿ ಬೆಳೆಯಲು ಖರ್ಚು ಮಾಡಿದ ಗೊಬ್ಬರ, ಕೂಲಿ ಇನ್ನಿತರ ಖರ್ಚಿಗೆ ಸಾಕಾಗದಂತಾಗಿದೆ. ಇದರಿಂದ ಅವರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಕಡಲೆಕಾಯಿಯ ಬೆಲೆ ಕುಸಿತಕ್ಕೆ ಈ ಬಾರಿ ಗುಂಡ್ಲುಪೇಟೆ ತಾಲೂಕಿನಲ್ಲಿ 4,000 ಹೆಕ್ಟೇರ್ ಭೂಮಿಯಲ್ಲಿ ಕಡಲೆಕಾಯಿಯನ್ನು ಬೆಳೆಯಲಾಗಿದ್ದು, ಉತ್ತಮ ಇಳುವರಿ ಬಂದಿದೆ. ಹೀಗಾಗಿಯೇ ಬೆಲೆ ಕುಸಿತವಾಗಿದೆ ಎಂದು ಹೇಳಲಾಗುತ್ತಿದೆ.

"ಬಹುರಾಷ್ಟ್ರೀಯ ಕಂಪನಿಗಳಿಂದ ಇಲ್ಲಿನ ಕೋಳಿ ಉದ್ಯಮಕ್ಕೆ ಪೆಟ್ಟು"

 ಮಾಡಿದ ಖರ್ಚು ಬರುತ್ತಿಲ್ಲ...

ಮಾಡಿದ ಖರ್ಚು ಬರುತ್ತಿಲ್ಲ...

ಈ ಕುರಿತಂತೆ ಅಳಲು ತೋಡಿಕೊಳ್ಳುವ ಕೆಲವು ರೈತರು, ಕೊರೋನಾ ಸಂಕಷ್ಟದ ನಡುವೆ ಕಡಲೆಕಾಯಿಯನ್ನು ಬೆಳೆದಿದ್ದೆವು. ಇದರ ಕೃಷಿಗಾಗಿ ಸಾಲ ಮಾಡಿದ್ದು ಫಸಲು ಬಂದರೆ ಒಂದಷ್ಟು ಆರ್ಥಿಕವಾಗಿ ಸುಧಾರಿಸಿಕೊಳ್ಳಬಹುದು ಎಂಬ ನಂಬಿಕೆಯಲ್ಲಿದ್ದವು. ಆದರೆ ಬೆಳೆದ ಬೆಳೆಗೆ ಉತ್ತಮ ದರ ದೊರೆಯದಿರುವುದು ಬೇಸರ ತಂದಿದೆ ಎಂದು ಹೇಳುತ್ತಿದ್ದಾರೆ. ಇನ್ನಾದರೂ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮಾಡಬೇಕಾಗಿದೆ.

English summary
There are no festivals this time as coronavirus cases continue to increase day by day. Because of this, ground nut growers in chamarajanagar are struggling without much demand
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X