ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಾದ್ಯಂತ ಆಕ್ರೋಶ: ಯೂಟರ್ನ್ ತೆಗೆದುಕೊಂಡ ಕೃಷಿ ಸಚಿವ ಬಿ.ಸಿ.ಪಾಟೀಲ್!

By Lekhaka
|
Google Oneindia Kannada News

ಬೆಂಗಳೂರು, ಡಿಸೆಂಬರ್ 03: ರೈತರ ಕುರಿತು ಕೊಟ್ಟಿದ್ದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆಯೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಯೂಟರ್ನ್ ತೆಗೆದುಕೊಂಡಿದ್ದಾರೆ. ರೈತರ ಕುರಿತು ನಾನು ಹಾಗೆ ಮಾತನಾಡಿಯೇ ಇಲ್ಲ ಎಂದು ಇದೀಗ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಕೃಷಿ ಸಚಿವರ ಹೇಳಿಕೆಯನ್ನು ರೈತ ಸಂಘಟನೆಗಳು ಸೇರಿದಂತೆ ವಿರೋಧ ಪಕ್ಷಗಳು ತೀವ್ರವಾಗಿ ಆಕ್ಷೇಪಿಸಿವೆ.

"ಸೋತು ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು"

ನಾನು ಹಾಗೆ ಹೇಳಿಯೇ ಇಲ್ಲ. ಕೋಲಾರದ ರೈತರು ಕಷ್ಟಪಟ್ಟು ಬೇಸಾಯ ಮಾಡುವುದನ್ನು ಮಾತ್ರ ನಾನು ಹೇಳಿದ್ದೇನೆ. ರೈತರು ಕಷ್ಟನಷ್ಟಗಳನ್ನು ಈಜಿ ಜಯಿಸಬೇಕು. ಕಷ್ಟಗಳು ಇವತ್ತು ಇದ್ದಂತೆ ನಾಳೆ ಇರುವುದಿಲ್ಲ. ಕತ್ತಲಾದ ಮೇಲೆ ಬೆಳಕು ಬಂದೇ ಬರುತ್ತದೆ. ಕೋಲಾರ ಜಿಲ್ಲೆಯ ರೈತರು ಸಮಗ್ರ ಕೃಷಿ‌ ನೀತಿಯನ್ನು ಅಳವಡಿಸಿಕೊಂಡು ಮಾದರಿಯಾಗಿದ್ದಾರೆ. ಕೋಲಾರ ರೈತರು ಮಾದರಿ ರೈತರು ಎಂದು ಮಾತ್ರ ಹೇಳಿದ್ದೇನೆಂದು ಇದೀಗ ತಿಪ್ಪೆ ಸಾರಿಸಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೈತರು ಮರ್ಯಾದೆಯಿಂದ ಜೀವನ ಮಾಡುತ್ತಾರೆಂದು ಕೃಷಿ ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.

"ನಿಮ್ಮಂತೆ ಗೋಸುಂಬೆ ಅಲ್ಲ"

ಮಾಜಿ ಸಿಎಂ ಕುಮಾರಸ್ವಾಮಿ ಅವರು, ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ರೈತ ರಾಜಕಾರಣಿಗಳಂತೆ ಅಧಿಕಾರಕ್ಕಾಗಿ ಬಣ್ಣ ಬದಲಿಸುವ ಗೋಸುಂಬೆ ವ್ಯಕ್ತಿತ್ವದವನಲ್ಲ. ನೆಲವನ್ನೇ ನಂಬಿ ಬದುಕುವ ಕಡು ಕಷ್ಟ ಜೀವಿ. ಇಂತಹ ರೈತ ಸಮುದಾಯಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ರಟ್ಟೆಗೆ ಬಲ ತುಂಬುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕೇ ಹೊರತು, ಹೇಡಿ ಎಂಬ ಪಟ್ಟ ಕಟ್ಟಿ ಹೊಣೆಗೇಡಿತನ ಪ್ರದರ್ಶಿಸಬಾರದು ಎಂದು ಎಚ್‌ಡಿಕೆ ಎಚ್ಚರಿಸಿದ್ದಾರೆ.

"ರೈತ ಹುಟ್ಟು ಸ್ವಾಭಿಮಾನಿ"

ರೈತ ಹುಟ್ಟು ಸ್ವಾಭಿಮಾನಿ ಹಾಗೂ ಮರ್ಯಾದಸ್ತ. ಸಾಲ ಕೊಟ್ಟವರು ಬಂದು ಕಿಬ್ಬದಿಯ ಕೀಲು ಮುರಿದಂತೆ ಪೀಡಿಸುವಾಗ ಮರ್ಯಾದೆಗೆ ಅಂಜಿ ದಿಕ್ಕು ತೋಚದಂತಾಗಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದಂತೆ ರೈತರು ಹೇಡಿಯಲ್ಲ. ಹೆಂಡತಿ, ಮಕ್ಕಳು, ನೆಂಟರು, ಊರಿನವರ ಮುಂದೆ ಮರ್ಯಾದೆ ಹೋಯಿತಲ್ಲ ಎಂದು ಸಾವಿಗೆ ಶರಣಾಗುತ್ತಾನೆ. ಹೇಡಿತನದ ಪಟ್ಟ ಕಟ್ಟಿಕೊಳ್ಳಲು ಅಲ್ಲ. ಕೃಷಿ ಸಚಿವರ ಹೇಳಿಕೆ ರೈತ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಕುಮಾರಸ್ವಾಮಿ ಅವರು ಬಿಸಿ ಪಾಟೀಲ್ ಮೇಲೆ ಹರಿಹಾಯ್ದಿದ್ದಾರೆ.

"ಹೇಡಿಗಳು ಯಾರು?"

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರನ್ನು ಕಾಂಗ್ರೆಸ್ ಕೂಡ ತರಾಟೆಗೆ ತೆಗೆದುಕೊಂಡಿದೆ. ಹೇಡಿಗಳು ಯಾರು? ಎಂದು ಬಿ.ಸಿ. ಪಾಟೀಲ್ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ. ರಾತ್ರೋ ರಾತ್ರಿ ಮುಂಬೈಗೆ ಹಾರಿದವರೊ? ಕೊರೊನಾ ಸಂಕಷ್ಟದ ಸಮಯದಲ್ಲಿ ರೈತರು ಬೆಳೆದಿದ್ದ ಬೆಳೆಗೆ ಮಾರುಕಟ್ಟೆ ಕಲ್ಪಿಸದ ಸರ್ಕಾರವೊ? ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ಜಿಎಸ್ ‌ಟಿ ಪಾಲು ಕೇಳದವರೊ? ನೆರೆ ಬಂದಾಗ ಸಂತ್ರಸ್ತರ ನೆರವಿಗೆ ನಿಲ್ಲದ ಬಿಜೆಪಿ ನಾಯಕರೊ? ಪರಿಹಾರ ಕೇಳಿದ್ದಕ್ಕೆ ರೈತರ ಮೇಲೆ ಪ್ರಕರಣ ದಾಖಲಿಸಿದವರೊ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

"ತಕ್ಷಣ ರಾಜೀನಾಮೆ ಕೊಡಿ"

ಕೃಷಿ ಸಚಿವರಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರೇ ರೈತರನ್ನು ಹೇಡಿ ಎಂದು ಕರೆಯುವ ನೈತಿಕತೆ ನಿಮಗೇನಿದೆ? ರೈತರ ಜೀವನ ಹಸನಾಗಿಸುವ ಒಂದೇ ಒಂದು ಯೋಜನೆಯನ್ನೂ ರೂಪಿಸದೆ ಇಂತಹ ಹೇಳಿಕೆ ನೀಡಿದ್ದಲ್ಲದೆ, ಅದನ್ನು ಸಮರ್ಥಿಸಿ ಅಹಂಕಾರವನ್ನು ತೋರುತ್ತಿದ್ದೀರಿ. ಕೃಷಿ ಸಚಿವ ಸ್ಥಾನಕ್ಕೆ ನೀವು ಅನರ್ಹರು. ಕೂಡಲೇ ರಾಜೀನಾಮೆ ಕೊಡಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

 ರೈತರ ಬಗ್ಗೆ ಕೃಷಿ ಸಚಿವರ ಹೇಳಿಕೆ ಏನು?

ರೈತರ ಬಗ್ಗೆ ಕೃಷಿ ಸಚಿವರ ಹೇಳಿಕೆ ಏನು?

ಗುರುವಾರ ಮಡಿಕೇರಿಯ ಪೊನ್ನಂಪೇಟೆ ಸಮೀಪದ ಕೃಷಿ ಕಾಲೇಜಿನಲ್ಲಿ "ಬಿದಿರು ಸಂಸ್ಕರಣೆ ಹಾಗೂ ಬಿದಿರು ಮೌಲ್ಯವರ್ಧನಾ ಘಟಕ"ವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, "ಸಾಲದ ಹೊರೆ, ಬೆಳೆ ನಷ್ಟ ಇಂಥ ಕಾರಣಗಳಿಗಾಗಿ ತನ್ನನ್ನು ನಂಬಿದ ಕುಟುಂಬವನ್ನೆಲ್ಲಾ ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು" ಎಂದು ಹೇಳಿದ್ದರು. ಕೃಷಿಯಿಂದ ಒಳ್ಳೆಯ ಬದುಕು ಕಟ್ಟಿಕೊಂಡವರು, ಯಶಸ್ಸು ಪಡೆದ ಹಲವು ಜನರು ನಮ್ಮ ಕಣ್ಣ ಮುಂದೆ ಇದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು ಎಂದಿದ್ದರು.

English summary
Agriculture Minister B.C. Patil has defended his statement on farmers. As opposition arises on his statement, he claim that he never spoke on that angle. He gave controversial statement on farmers saying "farmers who committ suicide are cowards" in madikeri,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X