ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆ ಧಾರಣೆಯಲ್ಲಿ ದಾಖಲೆ ಪ್ರಮಾಣದ ಏರಿಕೆ; ತೋಟ ವಿಸ್ತರಣೆಯತ್ತ ಬೆಳೆಗಾರರ ಚಿತ್ತ

By ಆರ್.ಸಿ. ಭಟ್
|
Google Oneindia Kannada News

ಮಂಗಳೂರು, ಅಕ್ಟೋಬರ್ 14: ಕಳೆದೊಂದು ವರ್ಷದಿಂದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಸಹಜವಾಗಿಯೇ ಅಡಿಕೆ ಬೆಳೆಗಾರರು ಸಂತುಷ್ಟರಾಗಿದ್ದಾರೆ.

ಈ ನಡುವೆ ಅಡಿಕೆ ಧಾರಣೆ ಏರಿಕೆಯಿಂದ ಉತ್ತೇಜನಗೊಂಡಿರುವ ಬೆಳೆಗಾರರು, ಭಾರೀ ಪ್ರಮಾಣದಲ್ಲಿ ಅಡಿಕೆ ತೋಟ ವಿಸ್ತರಣೆಯತ್ತ ಗಮನ ಕೇಂದ್ರೀಕರಿಸುತ್ತಿದ್ದಾರೆ. ಇದು ಭವಿಷ್ಯದಲ್ಲಿ ಅಡಿಕೆಗೆ ಬೇಡಿಕೆ ಕುಸಿದು ಧಾರಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಬಹುದು. ವಾಸ್ತವವಾಗಿ ಭಾರತದಲ್ಲಿ ವಾರ್ಷಿಕ ಸುಮಾರು 10 ಲಕ್ಷ ಟನ್‌ ಅಡಿಕೆ ಬೇಡಿಕೆ ಇದೆ. ಸುಮಾರು ಏಳೆಂಟು ಲಕ್ಷ ಟನ್‌ ಅಡಕೆ ಬೆಳೆ ಭಾರತದಲ್ಲಿ ಬೆಳೆಯಲಾಗುತ್ತಿದೆ.

 ಅಡಿಕೆಗೆ ಬಂಪರ್ ಬೆಲೆ, ಇನ್ನಷ್ಟು ಏರಿಕೆಯ ನಿರೀಕ್ಷೆ: ಧಾರಣೆ ಹೆಚ್ಚಳಕ್ಕೆ ಕಾರಣವೇನು? ಮುಂದೇನಾಗುತ್ತೆ? ಅಡಿಕೆಗೆ ಬಂಪರ್ ಬೆಲೆ, ಇನ್ನಷ್ಟು ಏರಿಕೆಯ ನಿರೀಕ್ಷೆ: ಧಾರಣೆ ಹೆಚ್ಚಳಕ್ಕೆ ಕಾರಣವೇನು? ಮುಂದೇನಾಗುತ್ತೆ?

ಸುಮಾರು 3 ಲಕ್ಷ ಟನ್‌ ಅಡಿಕೆ ವಿದೇಶದಿಂದ ಆಮದು ಹಾಗೂ ಕಳ್ಳ ಸಾಗಾಟ ಮೂಲಕ ನೆರೆ ದೇಶದಿಂದ ಭಾರತಕ್ಕೆ ಬರುತ್ತಿದೆ. ಸದ್ಯ ವಿದೇಶಿ ಅಡಿಕೆ ಕಳ್ಳ ಸಾಗಾಟ ಬಂದ್‌ ಆಗಿರುವ ಪರಿಣಾಮ ದೇಶದ ಅಡಿಕೆ ಮಾರುಕಟ್ಟೆಯಲ್ಲಿ ದೊಡ್ಡ ಬೇಡಿಕೆ ಸೃಷ್ಟಿಯಾಗಿದೆ. ಕಳೆದೊಂದು ವರ್ಷದಿಂದ ದೇಶದ ಅಡಿಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತಿದೆ.

Arecanut Prices Increase; Growers Mood Towards Plantation Expansion

ಸದ್ಯದ ಪರಿಸ್ಥಿತಿಯಲ್ಲಿ ಕೃಷಿಕರಿಗೆ ಅಡಿಕೆ ಬೆಳೆ ಲಾಭದಾಯಕ ಅನ್ನುವಷ್ಟರ ಮಟ್ಟಿಗೆ ಧಾರಣೆ ಇದೆ. ಇದರಿಂದಾಗಿ ಸದ್ಯ ಅಡಿಕೆ ಬೆಳೆಯುವ ಕೃಷಿಕರು ಅಡಕೆ ತೋಟ ವಿಸ್ತರಣೆಯತ್ತ ಗಮನ ಕೇಂದ್ರೀಕರಿಸಿದ್ದಾರೆ. ಖಾಲಿ ಜಾಗಗಳಲ್ಲಿ ಅಡಿಕೆ ಗಿಡ ಹಾಕುತ್ತಿದ್ದಾರೆ. ಅಡಿಕೆ ಬೆಳೆ ಇಲ್ಲದೇ ಇರುವ ಹಲವರು ಅಡಿಕೆ ಬೆಳೆ ಬಗ್ಗೆ ಒಲವು ಹೊಂದಿ ಖಾಲಿ ಜಾಗ ಖರೀದಿಸಿ ಅಡಿಕೆ ಕೃಷಿಗೆ ಮುಂದಾಗುತ್ತಿದ್ದಾರೆ.

ಏಳೆಂಟು ವರ್ಷಗಳಲ್ಲಿ ಹೊಸ ತೋಟಗಳಲ್ಲಿ ಅಡಿಕೆ ಫಸಲು ಪೂರ್ಣ ಪ್ರಮಾಣದಲ್ಲಿ ಬರಲು ಆರಂಭವಾಗಲಿದೆ. ಆ ಬಳಿಕ ದೇಶೀಯ ಅಡಕೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಅಡಿಕೆ ಪೂರೈಕೆಯಾಗಲಿದೆ. ಇದರ ಜತೆಯಲ್ಲಿ ಈ ಹಿಂದಿನಂತೆ ಕಳಪೆ ಅಡಿಕೆ ವಿದೇಶದಿಂದ ಭಾರತಕ್ಕೆ ಆಮದಾದರೆ ದೇಶದಲ್ಲಿ ಅಡಿಕೆ ಬೆಳೆ ಬೇಡಿಕೆಗಿಂತ ಹೆಚ್ಚು ಸಂಗ್ರಹವಾಗಲಿದೆ. ಈ ಬೆಳವಣಿಗೆ ಭವಿಷ್ಯದಲ್ಲಿ ಅಡಿಕೆಗೆ ಬೇಡಿಕೆ ಕುಸಿದು ಮಾರುಕಟ್ಟೆಯಲ್ಲಿ ಧಾರಣೆ ಭಾರೀ ಪ್ರಮಾಣದಲ್ಲಿ ಕುಸಿತವಾಗುವ ಅಪಾಯ ಸೃಷ್ಟಿಸಲಿದೆ.

Arecanut Prices Increase; Growers Mood Towards Plantation Expansion

ನೆರೆ ರಾಜ್ಯಗಳಲ್ಲೂ ಅಡಿಕೆ ತೋಟ ವಿಸ್ತರಣೆ
ದೇಶದ ಬಹುಪಾಲು ಅಡಿಕೆ ಬೆಳೆ ಕರ್ನಾಟಕದ ಮಲೆನಾಡು, ಕರಾವಳಿ, ದಾವಣಗೆರೆ ಮುಂತಾದೆಡೆಗಳಲ್ಲಿ ಬೆಳೆಯಲಾಗುತ್ತಿದೆ. ಅಡಿಕೆಗೆ ಬಂದ ಧಾರಣೆಯಿಂದ ಉತ್ತೇಜನಗೊಂಡಿರುವ ನೆರೆಯ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕೃಷಿಕರು ಸಹ ದೊಡ್ಡ ಮಟ್ಟಿದಲ್ಲಿ ಅಡಿಕೆ ಬೆಳೆ ಬೆಳೆಯಲು ಸಿದ್ಧತೆ ನಡೆಸುತ್ತಿದ್ದಾರೆ.

ಕರಾವಳಿ, ಮಲೆನಾಡಿನ ಅಡಿಕೆ ಗಿಡಗಳ ನರ್ಸರಿಗಳಿಂದ ಭಾರೀ ಪ್ರಮಾಣದ ಅಡಕೆ ಸಸಿಗಳು ಅತ್ತ ಸಾಗಾಟವಾಗಿವೆ ಎಂಬ ಮಾಹಿತಿ ಇದೆ. ಇದು ಕೂಡ ಭವಿಷ್ಯದಲ್ಲಿ ದೇಶೀ ಅಡಿಕೆ ಮಾರುಕಟ್ಟೆಯನ್ನು ತಲ್ಲಣಗೊಳಿಸಲಿದೆ. ಧಾರಣೆ ಏರಿಕೆಯ ಲಾಭ ಪಡೆಯುವ ನಿಟ್ಟಿನಲ್ಲಿ ಅನೇಕ ಕೃಷಿಕರು ಊರ ತಳಿ ಬಿಟ್ಟು ಬೇಗನೆ ಫಸಲು ಕೊಡುವ ತಳಿಗಳ ತೋಟ ಮಾಡಲು ಹೆಚ್ಚು ಉತ್ಸುಕರಾಗಿದ್ದಾರೆ.

ಮೋಹಿತ್‌ನಗರ, ಇಂಟರ್‌ಸಿ ಮುಂತಾದ ತಳಿಗಳು ನರ್ಸರಿಗಳಲ್ಲಿ ಹೆಚ್ಚು ಹೆಚ್ಚು ಸೇಲ್ ಆಗುತ್ತಿವೆ. ನೆರೆ ರಾಜ್ಯದ ಅನೇಕರು ಇದೇ ಮಾದರಿಯ ಸಸಿಗಳನ್ನು ದೊಡ್ಡ ಮಟ್ಟಿನಲ್ಲಿ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಭವಿಷ್ಯದಲ್ಲಿ ಅಡಿಕೆ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎನ್ನುತ್ತಾರೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮುಖಂಡ ಮಹೇಶ್‌ ಪುಚ್ಚಪ್ಪಾಡಿ.

"ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕಿನ ಆಯ್ದ ಕೆಲವು ಭಾಗಗಳಲ್ಲಿನ ತೋಟಗಳಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಹೆಚ್ಚಾಗಿದ್ದು, ಅದರ ನಿಯಂತ್ರಣಕ್ಕೆ ಸರ್ಕಾರ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ" ಎಂದು ಗೃಹ ಸಚಿವ ಮತ್ತು ರಾಜ್ಯ ಅಡಿಕೆ ಟಾಸ್ಕ್​ಫೋರ್ಸ್ ಸಮಿತಿ ಅಧ್ಯಕ್ಷ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.

English summary
Arecanut prices have been on the rise in the market over the past year, and of course Arecanut growers are happy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X