ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆಗೆ ಬಂಪರ್ ಬೆಲೆ, ಇನ್ನಷ್ಟು ಏರಿಕೆಯ ನಿರೀಕ್ಷೆ: ಧಾರಣೆ ಹೆಚ್ಚಳಕ್ಕೆ ಕಾರಣವೇನು? ಮುಂದೇನಾಗುತ್ತೆ?

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 25: ಒಂದು ವರ್ಷದಿಂದ ಸ್ಥಿರತೆ ಕಾಯ್ದುಕೊಂಡಿದ್ದ ಅಡಿಕೆಗೆ ಈಗ ಬಂಪರ್ ಬೆಲೆ ಬಂದಿದೆ. ಪ್ರತಿ ಕ್ವಿಂಟಾಲ್ ಅಡಿಕೆ ಬೆಲೆ 50 ಸಾವಿರದ ಕಡೆಗೆ ಮುನ್ನುಗುತ್ತಿದೆ. ಇದರಿಂದ ಅಡಿಕೆ ಬೆಳೆಗಾರರು ಖುಷಿಯಾಗಿದ್ದಾರೆ.

38 ರಿಂದ 43 ಸಾವಿರ ರೂ.ವರೆಗೆ ಇದ್ದ ಅಡಿಕೆ ಬೆಲೆ ಈಗ 50 ಸಾವಿರ ರೂ. ಕಡೆಗೆ ಮುನ್ನುಗುತ್ತಿದೆ. ಮಂಗಳವಾರ 1 ಕ್ವಿಂಟಾಲ್ ರಾಶಿ ಅಡಿಕೆ ಬೆಲೆ 47,700 ರೂ.ಗೆ ತಲುಪಿದೆ. ಬಿಲ್ ಇಲ್ಲದೆ ವ್ಯವಹಾರ ಮಾಡುತ್ತಿರುವವರು 49 ಸಾವಿರ ರೂ.ವರೆಗೆ ಖರೀದಿ ಮಾಡಿದ್ದಾರೆ. ಮಲೆನಾಡಿನ ಪ್ರಮುಖ ಬೆಳೆಯಾಗಿರುವ ಅಡಿಕೆ ಈಗ ಬಯಲು ಸೀಮೆಯಲ್ಲೂ ಪ್ರಸಿದ್ಧಿ ಪಡೆದಿದೆ. ಕಡಿಮೆ ಖರ್ಚು ಹೆಚ್ಚು ಲಾಭದ ದೃಷ್ಟಿಯ ಕಾರಣದಿಂದ ಈಗ ಎಲ್ಲಿ ನೋಡಿದರೂ ಅಡಿಕೆ ತೋಟಗಳೇ ಕಾಣಸಿಗುತ್ತಿವೆ. ಪ್ರತಿ ವರ್ಷ ಸಾವಿರಾರು ಹೆಕ್ಟೇರ್ ಭತ್ತದ ಗದ್ದೆಗಳು ಅಡಕೆ ತೋಟಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಅಡಕೆ ಬೆಳೆ ಹೆಚ್ಚಾದರೂ ಬೆಲೆ ಮಾತ್ರ ಕುಗ್ಗಿಲ್ಲ. ಇದಕ್ಕೆ ಅನೇಕ ಅಂಶಗಳು ಅನುಕೂಲಕರವಾಗಿವೆ.

 ಕಾರಣ 1: ಈಶಾನ್ಯ ಗಡಿಗಳು ಬಂದ್

ಕಾರಣ 1: ಈಶಾನ್ಯ ಗಡಿಗಳು ಬಂದ್

ಈಶಾನ್ಯ ಗಡಿರಾಜ್ಯಗಳಲ್ಲಿ ಸಂಘರ್ಷ ಏರ್ಪಟ್ಟಿರುವುದರಿಂದ ಕೇಂದ್ರ ಸರ್ಕಾರ ಗಡಿಗಳನ್ನು ಬ್ಲಾಕ್ ಮಾಡಿದೆ. ಹಾಗಾಗಿ ಇಂಡೋನೇಷಿಯಾ, ಮಲೇಷಿಯಾ ದೇಶಗಳಿಂದ ಬರುತ್ತಿದ್ದ ಕಳಪೆ ಅಡಿಕೆ ನಿಂತಿದೆ. ಇಂತಹ ಅಡಿಕೆ ಮೇಲೆ ಕೆಲ ಗುಟ್ಕಾ ಕಂಪನಿಗಳು ಅವಲಂಬಿತವಾಗಿವೆ. ಈಗ ಗಡಿಗಳು ಬ್ಲಾಕ್ ಆಗಿರುವುದರಿಂದ ರೈತರಿಂದಲೇ ನೇರ ಖರೀದಿ ಮಾಡುತ್ತಿವೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ.

 ಕಾರಣ 2- ಹೊಸ ಅಡಿಕೆ ಬಂದಿಲ್ಲ

ಕಾರಣ 2- ಹೊಸ ಅಡಿಕೆ ಬಂದಿಲ್ಲ

ಇಷ್ಟೊತ್ತಿಗಾಗಲೇ ಹೊಸ ಅಡಿಕೆ ಮಾರುಕಟ್ಟೆ ಪ್ರವೇಶ ಮಾಡಬೇಕಿತ್ತು. ಮಳೆ ಕಾರಣದಿಂದ ಕೊಯ್ಲು, ಸಂಸ್ಕರಣೆ ಸೇರಿದಂತೆ ಎಲ್ಲಾ ಕೆಲಸಗಳು ನಿಧಾನವಾಗಿದ್ದು, ಹೆಚ್ಚು ಅಡಿಕೆ ಆವಕ ಆಗಿಲ್ಲ. ಮೂರು ವರ್ಷದಿಂದ ನಿರಂತರ ಮಳೆಯಾಗುತ್ತಿರುವುದರಿಂದ ಕೊಳೆ ರೋಗ ಬಾಧಿಸುತ್ತಿದೆ. ಇದು ಸಹ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

 ಕಾರಣ 3- ಅಕ್ರಮ, ಸಕ್ರಮದ ಮಧ್ಯೆ ಸ್ಪರ್ಧೆ

ಕಾರಣ 3- ಅಕ್ರಮ, ಸಕ್ರಮದ ಮಧ್ಯೆ ಸ್ಪರ್ಧೆ

ಇತ್ತೀಚೆಗೆ ರೈತರು ಅಡಿಕೆ ದಾಸ್ತಾನು ಮಾಡುವ ಸೌಲಭ್ಯ ಹೊಂದಿದ್ದು, ತಮಗೆ ಅನುಕೂಲಕರ ಸಮಯಕ್ಕೆ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ. ದಿಢೀರ್ ಬೆಲೆ ಏರಿಕೆ ಲಾಭ ಪಡೆಯುವ ಉದ್ದೇಶದಿಂದ ಅಕ್ರಮ- ಸಕ್ರಮ ವ್ಯವಹಾರಸ್ಥರಲ್ಲಿ ಪೈಪೋಟಿ ಏರ್ಪಟ್ಟಿರುವುದರಿಂದ ಬೆಲೆ ಏರಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ ಎಂಬುದು ಪಕ್ಕಾ ವ್ಯವಹಾರಸ್ಥರ ಅಭಿಪ್ರಾಯ.

 ಬೆಲೆ ಏರಿಕೆ ಹಾದಿ

ಬೆಲೆ ಏರಿಕೆ ಹಾದಿ

ಫೆಬ್ರವರಿ 2020ರಲ್ಲಿ 39 ಸಾವಿರ ಆಸುಪಾಸಿನಲ್ಲಿದ್ದ ಅಡಿಕೆ ಕೆಲವೇ ತಿಂಗಳಲ್ಲಿ 42ರಿಂದ 43 ಸಾವಿರ ರೂ.ಗೆ ಸ್ಥಿರಗೊಂಡಿತು. 2021ರ ಆಗಸ್ಟ್‌ವರೆಗೂ 38 ರಿಂದ 43 ಸಾವಿರವರೆಗೆ ಬೆಲೆ ಕಾಯ್ದುಕೊಂಡಿದೆ. ಆ.10ರ ರಾಶಿಯ ಗರಿಷ್ಟ ಬೆಲೆ 44,099, ಆ.16ರಂದು 44,299 ರೂ., ಆ.19ರಂದು 44,099 ರೂ., ಆ.23ರಂದು 46,599 ರೂ., ಆ.24ರಂದು 47,500 ರೂ.ಗೆ ವಹಿವಾಟು ನಡೆದಿದೆ. ರೈತರಿಂದ ನೇರ ಖರೀದಿಸುವ ವ್ಯವಹಾರಸ್ಥರು 49 ಸಾವಿರಕ್ಕೆ ಖರೀದಿ ಮಾಡಿ ದಾಖಲೆ ಬರೆದಿದ್ದಾರೆ.

Recommended Video

ಮಂಗ ಮಾಸ್ಕ್ ಧರಿಸಿ ಓಡಾಡುವ ವಿಡಿಯೋ ಫುಲ್ ವೈರಲ್ | oneindia kannada
 ವ್ಯಾಪಾರಿಗಳಲ್ಲಿ ಹೆಚ್ಚುತ್ತಿದೆ ಆತಂಕ

ವ್ಯಾಪಾರಿಗಳಲ್ಲಿ ಹೆಚ್ಚುತ್ತಿದೆ ಆತಂಕ

ಬೆಲೆ ಏರಿಕೆಯು ಒಂದೆಡೆ ಖುಷಿಯ ವಿಚಾರವಾಗಿದ್ದರೆ ವ್ಯಾಪಾರಸ್ಥರಲ್ಲಿ ಆತಂಕ ಹುಟ್ಟಿಸುತ್ತಿದೆ. 43 ಸಾವಿರಕ್ಕೆ ಖರೀದಿ ಮಾಡಿದ ಅಡಕೆ 48 ಸಾವಿರಕ್ಕೆ ಬಿಕರಿಯಾದರೆ ಲಾಭವಾಗುತ್ತದೆ. ಅದೇ 49 ಸಾವಿರಕ್ಕೆ ಖರೀದಿ ಮಾಡಿದ ಅಡಿಕೆ 43 ಸಾವಿರಕ್ಕೆ ಬಿಕರಿಯಾದರೆ ದೊಡ್ಡ ನಷ್ಟವಾಗಲಿದೆ. ಮಾರುಕಟ್ಟೆ ಬೆಲೆ ಸ್ಥಿರತೆ ಕಾಪಾಡಿಕೊಳ್ಳದಿದ್ದರೆ ಎಲ್ಲರಿಗೂ ದೊಡ್ಡ ನಷ್ಟವಾಗಲಿದೆ. 2014ರಲ್ಲಿ 18 ಸಾವಿರ ಇದ್ದ ಅಡಕೆ ಬೆಲೆ 90 ಸಾವಿರವರೆಗೂ ಏರಿಕೆಯಾಗಿತ್ತು. ಒಂದೇ ಸಾರಿ ಮಾರುಕಟ್ಟೆ ಬಿದ್ದು ಅನೇಕ ವ್ಯಾಪಾರಿಗಳು ಬೀದಿಪಾಲಾದರು. ಹಾಗಾಗಿ ಅಡಕೆ ಧಾರಣೆ ಏರಿಕೆ ಒಂದೆಡೆ ಸಂತಸ ಮೂಡಿಸಿದ್ದರೆ, ಮತ್ತೊಂದೆಡೆ ಮುಂದಿನ ವಹಿವಾಟು ಕುರಿತು ಆತಂಕವನ್ನು ಮೂಡಿಸಿದೆ.

English summary
Arecanut price is increasing day by day and now Cross Rs 50000/Quintal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X