ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳ್ಳಿ ಸಮಾಧಿ ಮೇಲೆ ತಲೆಯೆತ್ತಿರುವ ನಗರ

By * ವಿಶ್ವೇಶ್ವರ ಭಟ್
|
Google Oneindia Kannada News

Village people are migrating to cities
ಹಳ್ಳಿ ಸಮಾಧಿ ಮೇಲೆ...
(ಮುಂದುವರಿದಿದೆ)

ಕಾರಣವೇನು ಗೊತ್ತಾ? ಬಹುತೇಕ ಹಳ್ಳಿಗಳಲ್ಲಿ ಯುವಕರು, ಮಧ್ಯವಯಸ್ಸಿನವರೇ ಇಲ್ಲ. ಬರೀ ಮುದುಕರೇ ಎಲ್ಲ. ಅಂದರೆ ಎಲ್ಲ ಹಳ್ಳಿಗಳೂ ಒಂದು ರೀತಿಯಲ್ಲಿ ತೆರೆದ ವೃದ್ಧಾಶ್ರಮಗಳಿದ್ದಂತೆ. ಇರುವ ಎರಡೋ, ಮೂರೋ, ನಾಲ್ಕೋ ಮಕ್ಕಳು, ಅವರ ಹೆಂಡಂದಿರು, ಮೊಮ್ಮಕ್ಕಳೆಲ್ಲ ಎಂದೋ ದೊಡ್ಡ ನಗರ ಸೇರಿದ್ದಾರೆ. ಅವರೆಲ್ಲ ಒಂದೋ ಬೆಂಗಳೂರಿನಲ್ಲಿದ್ದಾರೆ, ಇಲ್ಲದಿದ್ದರೆ ಅಮೆರಿಕದಲ್ಲಿದ್ದಾರೆ. ವರ್ಷಕ್ಕೆ ಒಂದು ಸಲ ಮಾತ್ರ ಬರುತ್ತಾರೆ, ತಂದೆ-ತಾಯಿ ಬದುಕಿರುವುದರಿಂದ ನೋಡಬೇಕಲ್ಲ ಎಂಬ ಕಾರಣಕ್ಕೆ. ಅದನ್ನು ಬಿಟ್ಟರೆ ಅವರಿಗೆ ತಾವು ಎಂದೋ ಹುಟ್ಟಿದ ಊರಿನ ಜತೆಗೆ ಯಾವುದೇ ಸಂಬಂಧ ಇಲ್ಲ. ಇವರಲ್ಲಿ ಸ್ವಲ್ಪ ಬುದ್ಧಿವಂತರು ಇರುವ ತೋಟ-ಮನೆಯನ್ನೆಲ್ಲ ಮಾರಾಟ ಮಾಡಿ ನಗರಕ್ಕೆ ಬಂದು ಮಗನ ಜತೆಯಲ್ಲಿಯೇ ವಾಸವಾಗಿದ್ದಾರೆ. ಮಗನಂತೂ ಊರಿಗೆ ಬರುವುದಿಲ್ಲ. ಜಮೀನಿನಲ್ಲಿ ಗೇಯುವವರಾರು? ಹಳ್ಳಿಗಳಲ್ಲಿ ಹುಟ್ಟಿದ ಯಾವ ಯುವಕರೂ ಅಲ್ಲಿ ಉಳಿಯುತ್ತಿಲ್ಲ. ಅವರ ಜೀವನ ಅರಳಿಸುವ ಯಾವ ಆಕರ್ಷಣೆಗಳೂ ಅಲ್ಲಿಲ್ಲ. ಹಳ್ಳಿಗಳಲ್ಲಿ ಇರುವುದೆಂದರೆ ದೊಡ್ಡ ಶಾಪ. ಎಲ್ಲೂ ನೌಕರಿ ಸಿಗದವರು, ಗಿಟ್ಟಿಸಿಕೊಳ್ಳದವರು ಮಾತ್ರ ಇಂದು ಹಳ್ಳಿಗಳಲ್ಲಿ ಇರುತ್ತಿದ್ದಾರೆ.

ಇದಕ್ಕಿಂತ ದೊಡ್ಡ ಸಂಗತಿಯೇನೆಂದರೆ ಹಳ್ಳಿಗಳಲ್ಲಿ ಇರುವವರಿಗೆ ಹೆಣ್ಣೇ ಸಿಗುತ್ತಿಲ್ಲ. ಹಳ್ಳಿಗಳಲ್ಲಿ ಜಮೀನು ಮಾಡಿಕೊಂಡಿದ್ದವರನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿಲ್ಲ. ಹಳ್ಳಿಯ ಹುಡುಗಿಯರಿಗೂ ನಗರದವರೇ ಬೇಕು. ಗಂಡನಾಗುವವನು ಅಮೆರಿಕದಲ್ಲಿಯೇ ಇರಬೇಕು. ಹಳ್ಳಿಗಳಲ್ಲಿರುವ ಎಷ್ಟೋ ಯುವಕರು ಮೂವತ್ತು ದಾಟಿದ್ದಾರೆ, ಮದುವೆಯಿಲ್ಲದೇ. ಇನ್ನು ಕೆಲವರು ಈ ಜನ್ಮದಲ್ಲಿ ಮದುವೆಯಾಗುವ ಕನಸನ್ನು ಬಿಟ್ಟಿದ್ದಾರೆ. ಅವರಿಗೆ ಚೆನ್ನಾಗಿ ಗೊತ್ತಿದೆ, ಅವರಿಗೆ ಬೇರೆಲ್ಲೂ ಕೆಲಸ ಸಿಗದಿರುವುದರಿಂದ ಹಳ್ಳಿಯೇ ಗತಿ ಎಂಬುದು. ಅವನೆಷ್ಟೇ ಶ್ರೀಮಂತನಾಗಿರಲಿ, ಅಪ್ಪನಿಗೆ ಒಬ್ಬನೇ ಮಗನಾಗಿರಲಿ, ಹಳ್ಳಿಯಲ್ಲಿದ್ದಾನೆ ಅಂದ್ರೆ ಮುಗೀತು ವರಪರೀಕ್ಷೆ'ಯಲ್ಲಿ ಫೇಲ್!

ಈ ಕಾರಣಕ್ಕೇ ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಒತ್ತಾಯ ಪೂರ್ವಕವಾಗಿ, ಅನಿವಾರ್ಯವಾಗಿ, ಒಲ್ಲದ ಮನಸ್ಸಿನಿಂದ ಬೇರೆ ಜಾತಿಗೆ ಸೇರಿದ ಹುಡುಗಿಯರನ್ನು ಮದುವೆಯಾಗಬೇಕಾದ ಹಾಗೂ ಮದುವೆಯಾಗಿರುವುದರಿಂದ ಆಗಬಹುದಾದ ವಿಚಿತ್ರ ಸಾಮಾಜಿಕ ಮುಜುಗರವನ್ನು ಎದುರಿಸುವಂತಹ ಪ್ರಸಂಗಗಳಿಗೆ ತುತ್ತಾಗಿರುವುದು ಅಷ್ಟೇ ಸತ್ಯ. ಬೇರೆ ಜಾತಿ ಮದುವೆ ನಿಷಿದ್ಧ ಎಂಬಂತಿದ್ದ ನಂಬಿಕೆ ನೆಲೆಗಟ್ಟು ಎಷ್ಟೋ ಕಡೆ ಕುಸಿದು ಅದು ಒಪ್ಪಿತವಾಗುತ್ತಿರುವುದು ಸಹ ಕಟುಸತ್ಯ. ಹಳ್ಳಿಯಲ್ಲಿ ಉಳಿದು ನಾವು ನಮ್ಮ ಜೀವನ ಹಾಳು ಮಾಡಿಕೊಂಡೆವು, ನನ್ನ ಅಣ್ಣನೋ, ತಮ್ಮನೋ ಮಾಡಿದಂತೆ ಆಗಲೇ ನಗರಕ್ಕೆ ಹೋಗಿದ್ದಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ' ಎಂಬ ಕೊರಗಿನ ಹಳವಂಡ ಎಲ್ಲರಲ್ಲೂ ಅತೃಪ್ತಿಯ ಹುಳಿಯನ್ನು ತೇಲಿಸುತ್ತಿದೆ.

ಕಳೆದ ಎರಡು ದಶಕಗಳಲ್ಲಿ ಹಳ್ಳಿಗಳ ಚಹರೆಯೇ ಬದಲಾಗಿಬಿಟ್ಟಿದೆ. ಹಳ್ಳಿಗಳಲ್ಲಿ ಯಾವ ಉತ್ಸಾಹವಾಗಲಿ, ಉಲ್ಲಸಿತ ಚಟುವಟಿಕೆಗಳಾಗಲಿ ಕಂಡುಬರುತ್ತಿಲ್ಲ. ಹಬ್ಬ, ಹರಿದಿನ, ಉತ್ಸವ, ಆಚರಣೆಗಳೂ ಮೊದಲಿನಂತಿಲ್ಲ. ಇವುಗಳಿಗೆಲ್ಲ ಕಾರಣ ಹಳ್ಳಿಗಳ ಮೂಲ ಸೆಲೆಯಾಗಿರುವ ಕೃಷಿಗೆ ಕುಟಾರಾಘಾತ ಬಿದ್ದಿರುವುದು. ಕೃಷಿ ಬಹುಪಾಲು ಮಂದಿಗೆ ಜೀವನೋಪಾಯ ಮಾತ್ರ ಆಗಿರಲಿಲ್ಲ. ಅದೊಂದು ಜನಜೀವನವಾಗಿತ್ತು. ಅದೊಂದು ಜೀವನ ವಿಧಾನವಾಗಿತ್ತು. ಅದು ಜೀವನ ಮಾರ್ಗವೊಂದೇ ಅಲ್ಲ, ಜೀವನ ಮಾರ್ಗದರ್ಶನವೂ ಆಗಿತ್ತು. ಜೀವನದರ್ಶನವೂ ಆಗಿತ್ತು. ಅದೇ ಅವರ ಪಾಲಿನ ಸಂಸ್ಕೃತಿ. ಆದರೆ ಈಗ ಕೃಷಿಯೇ ಅವರ ಬದುಕಿನ ಉರುಳಾಗಿ ಪರಿಣಮಿಸಿದೆ. ಅಪ್ಪನೆಟ್ಟ ಅಡಕೆ, ತೆಂಗಿನ ಮರಗಳಿಗೇ ನೇಣು ಹಾಕಿಕೊಳ್ಳುವಂಥ ಸ್ಥಿತಿ ಬಂದಿದೆ. ಹಳ್ಳಿಗಳಲ್ಲಿ ಕೆಲಸಕ್ಕೆ ಕೂಲಿಗಳು ಇಲ್ಲವೇ ಇಲ್ಲ. ತಲತಲಾಂತರಗಳಿಂದ ಒಬ್ಬರ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಕೂಲಿಗಳೆಲ್ಲ ಪಟ್ಟಣದ ಕಡೆ ಹೊರಟಿದ್ದಾರೆ. ಅವರ ಮಕ್ಕಳೆಲ್ಲ ನಗರದಲ್ಲಿ ನೌ(ಚಾ)ಕರಿ ಮಾಡುತ್ತಿದ್ದಾರೆ. ತೋಟ, ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಅವರಿಗೆ ಮನಸ್ಸಿಲ್ಲ. ಇದರ ಪರಿಣಾಮದಿಂದ ಕೂಲಿಗಳನ್ನೇ ನೆಚ್ಚಿಕೊಂಡಿದ್ದ ಕೃಷಿಗೆ ಕಂಟಕ ಒದಗಿದೆ. ಅಡಕೆ, ತೆಂಗು ಬೆಳೆದವರ ಗೋಳನ್ನಂತೂ ಕೇಳಲಾಗದು. ಕೇಳಿದಷ್ಟು ಹಣ ಕೊಟ್ಟರೂ ಕೂಲಿಗಳು ಸಿಗದೇ ತೋಟ, ಹೊಲಗದ್ದೆಗಳ ಆರೈಕೆ ನೆಗೆದುಬಿದ್ದಿದೆ.

ಇದರಿಂದ ಕಂಗಾಲಾದ ರೈತರು ಉಸಾಬರಿಯೇ ಬೇಡವೆಂದು ಹುಟ್ಟಿದ ದರಕ್ಕೆ ತೋಟಗಳನ್ನು ಮಾರಾಟ ಮಾಡಿ ನಗರಗಳತ್ತ ಹೊರಟಿದ್ದಾರೆ. ಯಾವ ದೃಷ್ಟಿಯಿಂದ ನೋಡಿದರೂ ಕೃಷಿ ಲಾಭದಾಯಕವಾಗಿಲ್ಲ. ಇನ್ನು ಮಳೆ ಬಂದರೆ ಬಂತು, ಬರದಿದ್ದರೆ ಇಲ್ಲ. ಇಂದು ಬರಬೇಕಾದ್ದು ಎಂದು ಬೇಕಾದರೂ ಬಂದೀತು. ಸ್ವಲ್ಪ ಬರಬೇಕಾದದ್ದು ಜಾಡಿಸಿ ಸುರಿಸಿ ಹೋದರೂ ಹೋದೀತು. ಈಗ ಮಳೆ ಬರದಿದ್ದರೆ ಸಾಕಪ್ಪ ಎಂದು ಅಂದುಕೊಳ್ಳುತ್ತಿರುವಾಗಲೇ ಮೋಡ ಬರಿದು ಮಾಡಿ ಹೋದರೆ ವರ್ಷವಿಡಿ ಬೆಳೆದ ಬೆಳೆ ಮಳೆಯಲ್ಲಿ ಲೀನ!

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಪ್ರತಿ ಬೆಳೆಗೂ ನೂರಾರು ರೋಗಗಳು. ವರ್ಷವರ್ಷವೂ ಹೊಸ ರೋಗ. ಈ ಎಲ್ಲ ಗೋಟಾವಳಿಗಳ ನಡುವೆ ಅಷ್ಟೋ ಇಷ್ಟೋ ಪೀಕು(ಬೆಳೆ) ಕೈಗೆ ಬಂದರೆ ಅದಕ್ಕೆ ಮಾರುಕಟ್ಟೆಯಲ್ಲಿ ರೇಟಿಲ್ಲ. ಒಳ್ಳೆಯ ರೇಟು ಬರುವ ತನಕ ಕಾಯುವ ಹಾಗಿಲ್ಲ. ಆಗಲೇ ಮೈತುಂಬಾ ಸಾಲ ಮೆತ್ತಿಕೊಂಡಿರುತ್ತದೆ. ಬಂದಷ್ಟು ರೇಟಿಗೆ ಬೆಳೆಯನ್ನು ಮಾರಾಟ ಮಾಡಿ ಕೈ ತೊಳೆದುಕೊಂಡರೆ ಸಾಕೋ ಸಾಕಾಗಿರುತ್ತದೆ. ಆದರೆ ಸಾಲ ಮಾತ್ರ ಬೆಳೆಯುತ್ತಲೇ ಹೋಗುತ್ತದೆ. ಇದು ಒಂದು ವರ್ಷದ ಕತೆಯಾದರೆ ಸಹಿಸಿಕೊಳ್ಳಬಹುದಿತ್ತು. ಆದರೆ ವರ್ಷವರ್ಷವೂ, ಅನುದಿನವೂ ಇದೇ ಗತಿಯಾದರೆ ಏನಾಗಬೇಡ? ಹಾಗಂತ ಮಾರುಕಟ್ಟೆಯಲ್ಲಿ ಎಲ್ಲ ಪದಾರ್ಥಗಳ ಬೆಲೆಯೂ ಮೂರು, ನಾಲ್ಕು ಪಟ್ಟು ಜಾಸ್ತಿಯಾಗಿದೆ. ಆದರೆ ರೈತ ಬೆಳೆದ ಬೆಳೆಗಳಿಗೆ ಮಾತ್ರ ಬೆಲೆ ಇಲ್ಲ. ಬೆಳೆ ಬಂದಾಗ ರೇಟಿಲ್ಲ. ರೇಟು ಬಂದಾಗ ಬೆಳೆಯೇ ಇಲ್ಲ. ಬೆಳೆ ಮತ್ಕು ರೇಟು ವಿಚ್ಛೇದನ ತೆಗೆದುಕೊಂಡವರಂತೆ ಒಟ್ಟಿಗೆ ಬರುವುದೇ ಇಲ್ಲ. ಒಂದು ರೀತಿಯ ಜೀವನಮಟ್ಟಕ್ಕೆ ಹೊಂದಿಕೊಂಡವರಿಗೆ ಇದಕ್ಕಿಂತ ಕೆಳಗೆ ಬರುವಂತಾದಾಗ ಕರುಳು ಕೈಗೆ ಬಂದಂತಾಗುತ್ತದೆ. ಇಷ್ಟು ದಿನ ಕಾರಿನಲ್ಲಿ ಓಡಾಡುತ್ತಿದ್ದ ರೈತನಿಗೆ ಸೈಕಲ್ಲಿನಲ್ಲೋ, ಬೈಕಿನಲ್ಲೋ ಹೋಗಲಾಗುವುದಿಲ್ಲ. ಆದರೆ ಕಾರಿನಲ್ಲೇ ಹೋಗಲು ಆಗುವುದಿಲ್ಲ.

ಹೀಗಾಗಿ ರೈತ ಹೆದರಿಬಿಟ್ಟಿದ್ದಾನೆ. ಮರ್ಯಾದೆಯಿಂದ ಮೂರು ಹೊತ್ತು ಮೂರು ತುತ್ತು ತಿಂದುಂಡು ಹಾಯಾಗಿ ಇರಲಾಗದಂಥ ಸ್ಥಿತಿ ಬಂದು ಬಿಡಬಹುದಾ ಎಂಬ ಆತಂಕದಲ್ಲಿದ್ದಾನೆ. ಅವನ ಕಣ್ಣೀರನ್ನು ಒರೆಸಲು ಯಾರೂ ಮುಂದೆ ಬರುತ್ತಿಲ್ಲ. ಸಮಾಧಾನದ ಮೊಸಳೆ ಕಣ್ಣೀರನ್ನೂ ಯಾರೂ ಸುರಿಸುತ್ತಿಲ್ಲ. ಕೃಷಿಕರ ಜೀವನದಲ್ಲಿ ಭರವಸೆಯ ಹೊಸ ಪೈರು ಚಿಗುರೊಡೆಯಬಹುದೆಂಬ ಚಿಟಿಕೆ ವಿಶ್ವಾಸವೂ ಕಾಣಿಸುತ್ತಿಲ್ಲ.

ಹೀಗಾದರೆ ಹಳ್ಳಿಗಳಿಂದಲೇ ಕೂಡಿರುವ ನಮ್ಮ ದೇಶದ ಗತಿಯೇನು ಎಂಬ ಪ್ರಶ್ನೆ ಮೂಡುತ್ತದೆ. ಇದು ಕೇವಲ ನಮ್ಮ ರಾಜ್ಯದ್ದೊಂದೇ ಅಲ್ಲ , ಇಡೀ ದೇಶದಲ್ಲಿ ಹೆಚ್ಚು ಕಮ್ಮಿ ಇದೇ ಸ್ಥಿತಿಯಿದೆ. ಪಂಜಾಬಿನಲ್ಲಂತೂ ಹೊಲಗಳಲ್ಲಿ ಕೆಲಸಕ್ಕೆ ಜನ ಸಿಗದೇ, ರೈತರು ತಮ್ಮ ಜಮೀನುಗಳನ್ನು ಖರೀದಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಮನಮೋಹನ ಸಿಂಗ್ ಸರಕಾರ ಮಹಾರಾಷ್ಟ್ರ ರೈತರಿಗೆ ಘೋಷಿಸಿದ ವಿದರ್ಭಪ್ಯಾಕೇಜ್ ಕೇವಲ ತಾತ್ಕಾಲಿಕ ಪರಿಹಾರವಾಯಿತೇ ಹೊರತು ಅವರ ಮೂಲ ಸಮಸ್ಯೆ ಜೀವಂತವಾಗಿಯೇ ಉಳಿದಿದೆ.

ಇವೆಲ್ಲವುಗಳ ಪರಿಣಾಮವಾಗಿ ಕೃಷಿ ಭೂಮಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಕೃಷಿ ಕ್ಷೇತ್ರದಲ್ಲಿದ್ದವರು ಬೇರೆ ಉದ್ಯೋಗಗಳನ್ನು ಅರಸಿಕೊಂಡು ಹೋಗುತ್ತಿದ್ದಾರೆ. ಕೃಷಿ ಮಾಡಲು ಯಾರೂ ಬರುತ್ತಿಲ್ಲ. ಅಂದರೆ ಕೃಷಿ ಭೂಮಿಯೂ ಕಡಿಮೆಯಾಗುತ್ತಿದೆ ಹಾಗೂ ಕೃಷಿಕರೂ ಕಡಿಮೆಯಾಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ದೇಶ ಸದ್ಯದಲ್ಲಿ ಆಹಾರ ಕೊರತೆ ಸ್ಫೋಟ ಎದುರಿಸಬೇಕಾಗುತ್ತದೆ. ಆ ದಿನ ದೂರವಿಲ್ಲವೆನಿಸುತ್ತದೆ. ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಬಗೆಹರಿಸುವ ಸಮಸ್ಯೆ ಇದಲ್ಲ. ಸಿಂಗಾಪುರ, ಮಲೇಷಿಯಾ, ಜಪಾನ್‌ದಂಥ ಪುಟ್ಟ ದೇಶಗಳು ಆಹಾರ ಆಮದು ಮಾಡಿಕೊಂಡು ಬಚಾವ್ ಆಗಬಹುದು. ಕೃಷಿಯಲ್ಲಿ ಅಗಾಧ ಸಾಧನೆಗೈದ ಜಪಾನ್‌ನಲ್ಲಿ ಈಗ ವೃದ್ಧರು ಮಾತ್ರ ಜಮೀನಿನಲ್ಲಿ ಉಳಿದುಕೊಂಡಿದ್ದರೂ, ಹಳ್ಳಿಗಳೆಲ್ಲ ನಗರಗಳಿಗಾಗಿ ಎಂದೋ ಬರಿದಾಗಿದ್ದರೂ, ಅಲ್ಲಿ ಪರಿಸ್ಥಿತಿ ಬುಡಮೇಲಾಗುವ ಹಂತ ತಲುಪಲಿಕ್ಕಿಲ್ಲ. ಅಲ್ಲಿ ಉಣ್ಣುವ ಹೊಟ್ಟೆಗಳು ಕಡಿಮೆ. ಆದರೆ ನಮ್ಮ ದೇಶದಲ್ಲಿ ಹಾಗಲ್ಲ. ಆಮದು ಮಾಡಿ ತಂದ ಆಹಾರಗಳಿಂದ ಇಲ್ಲಿನ ಹೊಟ್ಟೆಗಳನ್ನು ತುಂಬಿಸಲು ಸಾಧ್ಯವಿಲ್ಲ. ಕಟ್ಟಿಕೊಟ್ಟ ಬುತ್ತಿ ಬಿಚ್ಚಿದ ನಂತರ ಖಾಲಿ ಖಾಲಿ. ನಗರಗಳಿಗಾಗಿ ಪ್ರತಿ ಹಳ್ಳಿಯೂ ನಿತ್ಯ ಸಾಯುತ್ತಿದೆ.

ಬೆಂಗಳೂರಿನಂಥ ನಗರದಲ್ಲಿ ಒಂದು ಬಡಾವಣೆ ತಲೆಯೆತ್ತಿದರೆ ರಾಜ್ಯದ ಯಾವುದೋ ಮೂಲೆಯಲ್ಲಿನ ಹತ್ತಾರು ಹಳ್ಳಿಗಳು ಅರೆಜೀವವಾಗಿರುತ್ತವೆ. ಬೆಂಗಳೂರಿನ ಜನಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆಯೆಂದರೆ ಹಳ್ಳಿಗಳು ಖಾಲಿಯಾಗುತ್ತಿವೆ ಎಂದೇ ಅರ್ಥ. ಪಣತ್ತೂರಿನ ಕನಕಾಂಬರ ಬೆಂಗಳೂರಿನಲ್ಲಿ ಕಣ್ಮರೆಯಾದಂತೆ, ಎಷ್ಟೋ ಹೂವುಗಳು, ತರಕಾರಿಗಳು, ಬೆಳೆಗಳು, ಕಸುಬುಗಳು ನೋಡನೋಡುತ್ತಿದ್ದಂತೆ ನಮ್ಮ ನಡುವಿನಿಂದ ನಾಪತ್ತೆಯಾಗುವ ದಿನಗಳು ದೂರವಿಲ್ಲ. ಯಾಕೆಂದರೆ ಬೆಂಗಳೂರು ಬೆಳೆಯಲು ಹಳ್ಳಿಗಳೇ ಆಹುತಿಯಾಗಬೇಕು. ಹಳ್ಳಿಗಳ ಸಮಾಧಿ ಮೇಲಿಂದಲೇ ನಗರಗಳು ತಲೆಯೆತ್ತುತ್ತವೆ! ಏನು ಮಾಡೋಣ ಹೇಳಿ? ಗೊತ್ತಾಗುತ್ತಿಲ್ಲ.

ಹಳ್ಳಿ ಸಮಾಧಿ ಮೇಲೆ...(ಮೊದಲ ಭಾಗ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X