ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಕನ್ನಡಿಗರು ಬೆಳಗಾವಿಯಲ್ಲಿ ಏನು ಹೇಳಿದರು?

By * ಪ್ರಸಾದ ನಾಯಿಕ
|
Google Oneindia Kannada News

ಬೆಳಗಾವಿ, ಮಾ. 15: ಮೂರು ದಿನಗಳ ಕಾಲ ಕನ್ನಡ ವಿಶ್ವದ ಗಂಧ ಮತ್ತು ಗಾಳಿಯನ್ನು ಸೃಷ್ಟಿಸಿದ್ದ ಬೆಳಗಾವಿಯಲ್ಲಿ ಹೊರನಾಡ ಕನ್ನಡಿಗರ ಕಲರವವೂ ಕೇಳಿಬಂತು. ಕುಮಾರ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಕನ್ನಡದ ವಿಶ್ವರೂಪ ಪ್ರದರ್ಶನ. ಕನ್ನಡದ ಕಳ್ಳುಬಳ್ಳಿ ಯಾವ ರೀತಿ ವಿಶ್ವದಾದ್ಯಂತ ಹಬ್ಬಿದೆ, ಅದು ಮತ್ತಷ್ಟು ದಷ್ಟಪುಷ್ಟವಾಗಿ ಬೆಳೆಯುವ ಬಗೆ ಎಂತು, ಹೊರನಾಡ ಕನ್ನಡಿಗರ ಆಶೆ ನಿರಾಶೆಗಳೇನು ಎಂಬುದರ ಕುರಿತು ಕನ್ನಡ ನಾಡಿನ ಹೊರಗೆ ಮತ್ತು ಭಾರತದಾಚೆ ಬದುಕನ್ನು ರೂಪಿಸಿಕೊಳ್ಳುತ್ತಿರುವ ಕನ್ನಡಿಗರಿಂದ ಅಭಿಪ್ರಾಯಗಳು ಮೂಡಿಬಂದವು.

ಹೊರನಾಡ ಕನ್ನಡಿಗರು ಮತ್ತು ಹೊರನಾಡ ಕನ್ನಡ ಕುರಿತ ಈ ಸಂವಾದದಲ್ಲಿ ಅಮೆರಿಕ, ಸಿಂಗಪುರ, ಮಸ್ಕತ್, ದುಬೈ, ಲಂಡನ್, ಮುಂಬೈ, ದೆಹಲಿ, ಕೊಲ್ಕತಾ, ಚೆನ್ನೈ ಕನ್ನಡಿಗರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಲಂಡನ್ ನ ಲ್ಯಾಂಬೆತ್ ಮೇಯರ್ ಕನ್ನಡಿಗ ನೀರಜ್ ಪಾಟೀಲ್ ಅವರು ಈ ಸಂವಾದವನ್ನು ಉದ್ಘಾಟಿಸಿದರು. ಅಮೆರಿಕ ಕನ್ನಡ ಕೂಟಗಳ ಆಗರ ಅಕ್ಕ ಸಂಸ್ಧೆಯ ಮಾಜಿ ಅಧ್ಯಕ್ಷ ಅಮರನಾಥ ಗೌಡ ಅಧ್ಯಕ್ಷತೆ ವಹಿಸಿದ್ದರು.

ಗ್ಯಾಲರಿ:
ಬೆಳಗಾವಿಯಲ್ಲಿ ತಾರೆಗಳ ಹಂಗಾಮ

ಕನ್ನಡ ಮತ್ತು ಕನ್ನಡಿಗರ ಉದ್ಧಾರವಾಗಬೇಕಾದರೆ ಕನ್ನಡಿಗರ ಹೋರಾಟದಿಂದ ಮಾತ್ರ ಸಾಧ್ಯವಿಲ್ಲ. ಇದಕ್ಕೆ ನಾವೇ ಆಯ್ದು ಕಳಿಸಿರುವ ಜನಪ್ರತಿನಿಧಿಗಳ ನಿರಂತರ ಸಹಕಾರ ಮತ್ತು ಪ್ರಯತ್ನದಿಂದ ಮಾತ್ರ ಕನ್ನಡ ಉಳಿಯುವುದು ಮಾತ್ರವಲ್ಲ ಬೆಳೆಯುವುದು ಸಾಧ್ಯ. ಕನ್ನಡದ ಬಗ್ಗೆ ನಿಷ್ಕ್ರಿಯರಾಗಿರುವ ಎಂಪಿಗಳನ್ನು ಬಡಿದೆಬ್ಬಿಸಿ ಅವರಿಗೆ ಕನ್ನಡ ವಿಶ್ವವ್ಯಾಪಿಯಾಗಲು ಯಾವ ರೀತಿ ಕಾರ್ಯನಿರತರಾಗಬೇಕು ಎಂಬ ಬಗ್ಗೆ ಸೂಕ್ತ ತರಬೇತಿ ನೀಡಬೇಕು ಎಂಬ ಸಲಹೆ ಹೊರನಾಡ ಕನ್ನಡಿಗರಿಂದ ಬಂದಿತು. ಹೊರನಾಡಿಗರ ಪರವಾಗಿ ಕನ್ನಡ ಕಹಳೆಯನ್ನು ಊದಿದವರು ದೆಹಲಿ ಕನ್ನಡಿಗ ಡಾ. ಪುರುಷೋತ್ತಮ ಬಿಳಿಮಲೆ.

ಮನಸು ಹೃದಯದ ತುಂಬ ಕನ್ನಡವನ್ನೇ ತುಂಬಿಕೊಂಡಿರುವ ಅನ್ಯ ರಾಷ್ಟ್ರಗಳಲ್ಲಿ ವಾಸಿಗಳಾಗಿರುವ ಕನ್ನಡಿಗರನ್ನು ಹೊರನಾಡ ಕನ್ನಡಿಗರೆಂದು ಕರೆಯುವ ಬದಲು ವಿಶ್ವ ಕನ್ನಡಿಗರೆಂದು ಕರೆಯಬೇಕೆಂಬ ಮಾತು ಕೂಡ ಕೇಳಿಬಂದಿತು. ಲ್ಯಾಂಬೆತ್ ಮೇಯರ್ ನೀರಜ್ ಪಾಟೀಲ್, ನಾನು ಈ ಸಂವಾದವನ್ನು ಹೊರನಾಡ ಕನ್ನಡಿಗನಾಗಿ ಉದ್ಘಾಟಿಸಿಲ್ಲ, ಉತ್ತರ ಕರ್ನಾಟಕದ ಮಣ್ಣಿನ ಮಗನಾಗಿ ಉದ್ಘಾಟಿಸಿದ್ದೇನೆ ಎಂದು ಉತ್ತರ ಕರ್ನಾಟಕದ ಕನ್ನಡ ಧಾಟಿಯಲ್ಲೇ ಹೇಳಿದಾಗ ಕಿಕ್ಕಿರಿದಿದ್ದ ಸಭಾಂಗಣ ಕಿತ್ತುಹೋಗುವಂತೆ ಚಪ್ಪಾಳೆಗಳ ಸುರಿಮಳೆ ಮತ್ತು ಕೇಕೆ.

ವೇದಿಕೆಯಲ್ಲಿರುವವರನ್ನೆಲ್ಲ ಹೊರನಾಡು ಕನ್ನಡಿಗರೆಂದು ಸಂಬೋಧಿಸಿ ಪರಿಚಯ ಮಾಡಿದ ನಂತರ ಹೊರನಾಡ ಕನ್ನಡಿಗರ ಬಗ್ಗೆ ಮಾತನಾಡಿದ ದಟ್ಸ್ ಕನ್ನಡದ ಸಂಪಾದಕ ಎಸ್ ಕೆ ಶಾಮಸುಂದರ ಅವರು, ವೇದಿಕೆಯ ಮೇಲಿರುವವರೆಲ್ಲ ಹೊರನಾಡ ಕನ್ನಡಿಗರು, ಆದರೆ ನಾನು ಮಾತ್ರ ಈ ಕ್ಷಣದಲ್ಲಿ ಬೆಳಗಾವಿ ಕನ್ನಡಿಗನಾಗಿ ಮಾತಿಗೆ ನಿಂತಿದ್ದೇನೆ ಎಂದು ಹೇಳಿದಾಗ ಮತ್ತೊಂದು ಸುತ್ತಿನ ಚಪ್ಪಾಳೆಯ ಸದ್ದು ಇಡಿ ಸಭಾಂಗಣದಲ್ಲಿ ಪ್ರತಿಧ್ವನಿಸಲು ಪ್ರಾರಂಭಿಸಿತ್ತು.

ಮಾತಾಡುವವರು ಮತ್ತು ಹೇಳಬೇಕಾದ ಮಾತುಗಳು ಸಾಕಷ್ಟಿದ್ದರಿಂದ ವಿಶ್ವಕನ್ನಡಿಗರಿಗೆ ನೀಡಿದ ಮಾತಿನ ಅವಧಿಯನ್ನೂ ಕಡಿತಗೊಳಿಸಬೇಕಾಯಿತು. ಆರಂಭದಲ್ಲಿ ನೀಡಿದ್ದ 20 ನಿಮಿಷ 2 ನಿಮಿಷಕ್ಕೆ ಇಳಿದು ಕೆಲವರ ಅಸಮಾಧಾನಕ್ಕೂ ಈಡಾಯಿತು. 'ಮಾತಾಡ್ರಿ, ಮಾತಾಡ್ರಿ ಅವರ ಮಾತೇನ್ ಕೇಳ್ತೀರಿ' ಎಂಬ ಆಕ್ರೋಶ ಕೆಲ ಸಭಿಕರು ವ್ಯಕ್ತಪಡಿಸಿದ್ದು ಕನ್ನಡದ ಮಾತಿನ ಮೋಡಿ ಎಂತಹುದೆಂದು ಅರಿವಾಗುತ್ತದೆ. ಆದರೂ, ವಿಶ್ವಕನ್ನಡಿಗರು ಕನ್ನಡ ಕುರಿತಂತೆ ಪ್ರೀತಿ, ಪ್ರೇಮ, ಸಂತಸ, ಅಭಿಮಾನ, ಹತಾಶೆ, ಸ್ಪಂದಿಸದವರ ವಿರುದ್ಧ ಆಕ್ರೋಶ, ಮಾಡಿರುವ ಸೇವೆಯ ಕುರಿತು ಕೆಲ ಸ್ವಹೊಗಳಿಕೆ ಮಾತುಗಳು ಕೇಳಿಬಂದವು.

ಕೆಲವರು ಹೊರದೇಶದಲ್ಲಿದ್ದೂ ಕನ್ನಡಕ್ಕಾಗಿ ಸಾಕಷ್ಟು ದುಡಿದಿದ್ದೇವೆ, ತ್ಯಾಗ ಮಾಡಿದ್ದೇವೆ, ದಾನ ಧರ್ಮಗಳನ್ನು ಮಾಡಿದ್ದೇವೆ ಎಂದು ಮಾತು ಮುಗಿಸಿದರೆ, ಒಬ್ಬರು ಅನೇಕ ಸಚಿವರು, ಅಧಿಕಾರಿಗಳು ನಮ್ಮಿಂದ ಆತಿಥ್ಯವನ್ನು ಅನೇಕ ಬಾರಿ ಸ್ವೀಕರಿಸಿದ್ದರೂ ತಮ್ಮ ಅಗತ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಲವತ್ತುಕೊಂಡರು. ಮುಂಬೈ ಕನ್ನಡಿಗ ಮಂಜುನಾಥಯ್ಯನವರ ಕನ್ನಡ ಪ್ರೇಮದ ಭಾವೋತ್ಕಟತೆ ಮಿತಿಮೀರಿ ಕಣ್ಣೀರು ಕಟ್ಟೆಯೊಡೆಯುವ ಹಂತಕ್ಕೂ ಬಂದು ತಲುಪಿತ್ತು.

ಗೋಷ್ಠಿಯಿಂದಾಯ್ದ ಒಂದೊಂದೇ ಸಾಲುಗಳು :

* ಕಾಯಕವೇ ಕೈಲಾಸ ಎಂಬ ಬಸವಣ್ಣನ ತತ್ತ್ವ ಕನ್ನಡಿಗರ ಧ್ಯೇಯವಾಗಬೇಕು. (ನೀರಜ್ ಪಾಟೀಲ್)
* ಅನಿವಾಸಿ ಕನ್ನಡಿಗರು ತಮ್ಮ ಸಂಕಟಗಳನ್ನು ಹೇಳಿಕೊಳ್ಳುವುದಿಲ್ಲ; ಕನ್ನಡದಲ್ಲಿ ಹಾಡುವುದನ್ನೂ ಮರೆಯುವುದಿಲ್ಲ (ಶಾಮ್)
* ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಪಾಠವನ್ನು ನಮಗೆ ಅಮೆರಿಕಾ ಕಲಿಸಿದೆ.(ಅಮರ್ ನಾಥ್ ಗೌಡ)
* ಅಮೆರಿಕದಲ್ಲಿ ಮಕ್ಕಳಿಗೆ ಕನ್ನಡ ಕಲಿಸುವುದು ಸಾಧ್ಯ. (ಡಾ. ಕೇಶವ್ ಬಾಬು)
* ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೇ ಕಳಿಸಬೇಕು. ಪ್ರತಿದಿನ ಕನ್ನಡತನವನ್ನು ಮಕ್ಕಳಲ್ಲಿ ತುಂಬಬೇಕು. (ಮಂಜುನಾಥಯ್ಯ)
* ಅವರಿವರ ಬಗ್ಗೆ ಬೊಟ್ಟು ಮಾಡದೆ, ನಾನು ಏನು ಮಾಡಿದ್ದೇನೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. (ಅತ್ತಾವರ್ ರಾಮದಾಸ್)
* ನವದೆಹಲಿಯಲ್ಲಿ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸಬೇಕು. (ಡಾ. ಪುರುಷೋತ್ತಮ ಬಿಳಿಮಲೆ)
* ಕನ್ನಡಕ್ಕಾಗಿ ಕೆಲಸ ಮಾಡುವ ಸಂಸದರನ್ನು ದೆಹಲಿಗೆ ಕಳಿಸಿಕೊಡುವ ಜವಾಬ್ದಾರಿ ಕನ್ನಡಿಗರ ಮೇಲಿದೆ. (ಡಾ. ಪುರುಷೋತ್ತಮ ಬಿಳಿಮಲೆ)
* ಶ್ರೀಮಂತವಾಗಿರುವ ಕನ್ನಡದಲ್ಲಿ ಪ್ರಕಟವಾದ ಎಲ್ಲ ಸಾಹಿತ್ಯ ಜಗತ್ತಿನ ಎಲ್ಲಾ ಭಾಷೆಗಳಿಗೆ ಅನುವಾದಿತವಾಗಬೇಕು.(ಕುಮಾರಪ್ಪ, ಕೋಲ್ಕತ್ತ)
* ಕಡಲಾಚೆ ಕನ್ನಡದ ಪ್ರತಿಭಾವಂತ ಕಲಾವಿದರಿಗೂ ವೇದಿಕೆ ಕಲ್ಪಿಸಿಕೊಡಿ ಸ್ವಾಮಿ. (ಅನಿಲ್ ಭಾಸ್ಕಿ, ಮಸ್ಕಟ್)
* ಕಡಲಾಚೆ ಕನ್ನಡ ಡಿಂಡಿಮ ಬಾರಿಸುವ ಕನ್ನಡಿಗರೇ ಧನ್ಯ. (ವಿಜಯಕುಮಾರ್, ಇಥಿಯೋಪಿಯ)
* ಬೆಳಗಾವಿ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ. (ಅರವಿಂದ ಪಾಟೀಲ್, ಕತಾರ್)
* 28 ವರ್ಷದ ಹಿಂದೆ ಮೊಟ್ಟಮೊದಲ ವಿಶ್ವಕನ್ನಡ ಸಮ್ಮೇಳನ ಮಾಡಿದವರು ನಾವು. (ಸುರೇಣು ಜಯರಾಮ್ , ಕನ್ನಡ ಬಳಗ ಯುಕೆ.)
* ಭಾರತಕ್ಕೆ ಮರಳುವ ಅನಿವಾಸಿ ಕನ್ನಡಿಗರ ತೊಂದರೆ ಕೇಳುವವರೇ ಇಲ್ಲ. (ಪುರುಷೋತ್ತಮ್ ಚಿಕ್ಕತ್ತೂರ್, ನ್ಯೂಯಾರ್ಕ್)
* ಉದ್ಘಾಟನೆ ಯಾರು ಮಾಡಬೇಕೆಂಬ ವಿವಾದ ಕೆಲಸಕ್ಕೆ ಬಾರದ್ದು. (ಶ್ರೀವತ್ಸ ಜೋಶಿ, ವಾಷಿಂಗ್ಟನ್ ಡಿಸಿ)
* ಕುವೆಂಪು ಅವರಿಗೆ ಕನ್ನಡದಲ್ಲಿ ಬರೆಯುವಂತೆ ಪ್ರೇರೇಪಿಸಿದ್ದು ಒಬ್ಬ ಆಂಗ್ಲ ವಿದ್ವಾಂಸ. (ತಮಿಳ್ ಸೆಲ್ವಿ, ಚೆನ್ನೈ)

English summary
A seminar on Horanadu Kannadigaru and development of Kannada outside Karnataka for Non-resident Indians (Kannadigas) was organized in Vishwa Kannada Sammelana 2011, Belgaum. Lambeth Mayor Kannadiga Neeraj Patil inaugurated the seminar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X