ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಸಮ್ಮೇಳನ ಬಳ್ಳಾರಿಯಲ್ಲಿ ಏಕೆ ನಡೆಯಬಾರದು?

By * ರೋಹಿಣಿ, ಬಳ್ಳಾರಿ
|
Google Oneindia Kannada News

Bellary wants to conduct VKS
ವಿಶ್ವಕನ್ನಡಿಗರ ಸ್ವಾಭಿಮಾನದ, ಪ್ರತಿಷ್ಠೆಯ ವಿಶ್ವ ಕನ್ನಡ ಸಮ್ಮೇಳನ ಮುಂದಿನಬಾರಿ ಬಳ್ಳಾರಿಯಲ್ಲಿ ನಡೆಯಲಿ. ವಿಶ್ವದ ನಾನಾ ಮೂಲೆಗಳಲ್ಲಿ ನೆಲೆಯೂರಿರುವ ವಿಶ್ವ ಕನ್ನಡಿಗರ ಹೃದಯದ ಮಾತು. ಬಳ್ಳಾರಿ ಅಥವಾ ಬಳ್ಳಾರಿ ಜಿಲ್ಲೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದಿದ್ದೇ ಆದಲ್ಲಿ ಗಡಿಯಲ್ಲಿಯ 'ತೆಲುಗನ್ನಡ" ವಾತಾವರಣನ್ನು ಮತ್ತಷ್ಟು ಕನ್ನಡೀಕರಿಸುವುದು ಸುಲಭ ಸಾಧ್ಯ ಎನ್ನುವುದು ಬಹುತೇಕರ ವಾದ. ಅಭಿಪ್ರಾಯ.

ಬಳ್ಳಾರಿ ಜಿಲ್ಲೆ ಐತಿಹಾಸಿಕವಾಗಿ ಪರಭಾಷಿಕರ ಪ್ರಾಭಲ್ಯದಲ್ಲೇ ಇತ್ತು. ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿ ತೆಲುಗು ಇಲ್ಲಿಯ ಆಡಳಿತ ಭಾಷೆ ಆಗಿತ್ತು. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ತೆಲುಗು - ಕನ್ನಡ ಜನಭಾಷೆಯಾಗಿತ್ತು. ಇಂಗ್ಲೀಷ್ ಆಡಳಿತ ಭಾಷೆಯಾಗಿತ್ತು. ಈ ಕಾರಣಗಳಿಗಾಗಿಯೇ ಗಡಿಭಾಗದ ಬಳ್ಳಾರಿ ನಗರದಲ್ಲಿ ತೆಲುಗರ ಪ್ರಭಾವ ಸಹಜವಾಗಿಯೇ ಹೆಚ್ಚಾಗಿದೆ.

ಕನ್ನಡಿಗರ ಬಲಿದಾನ: ಬಳ್ಳಾರಿ ತಾಲೂಕಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರರು. ತೆಲುಗು ಇಲ್ಲಿಯ ವ್ಯವಹಾರಿಕ ಭಾಷೆ. ಆಡುಮಾತು. ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿಸುವ ವಿಚಾರದಲ್ಲಿ ನಡೆದ ಚುನಾವಣೆಯಲ್ಲಿ ಕನ್ನಡಿಗ ಪೈಲ್ವಾನ್ ಪಿಂಜಾರ್ ರಂಜಾನ್‌ಸಾಬ್ ವಿರೋಧಿಗಳ ಸಂಚಿಗೆ ಬಲಿಯಾಗಿ ಅಗ್ನಿ ಆಕಸ್ಮಿಕದಲ್ಲಿ ಮೃತಪಟ್ಟ.

ಈ ಘಟನೆ ಕನ್ನಡಿಗರ ಕೆಚ್ಚನ್ನು, ಸ್ವಾಭಿಮಾನವನ್ನು, ಪ್ರತಿಷ್ಠೆಯನ್ನು ಕೆರಳಿಸಿತು. ಪ್ರತಿಯೊಬ್ಬ ಕನ್ನಡಿಗ ಸ್ವಯಂ ಪ್ರೇರಿತನಾಗಿ 'ಬಳ್ಳಾರಿಯನ್ನು ಕರ್ನಾಟಕಕ್ಕೇ ಸೇರಿಸಬೇಕು" ಎಂದು ಮತ ಚಲಾಯಿಸಿದ. ಕನ್ನಡಿಗರ ಪ್ರತಿಷ್ಠೆಯ ಸಂಕೇತವಾಗಿ ಹರಗಿನಡೋಣಿ ಸಣ್ಣಬಸವನಗೌಡ ಶಾಸಕರಾದರು. ಬಳ್ಳಾರಿ ಕರ್ನಾಟಕಕ್ಕೆ ಸೇರಿತು. ಇದೆಲ್ಲಾ ಭಾಷಾವಾರು ಪ್ರಾಂತವಿಭಜನೆ ಪೂರ್ವದ ಇತಿಹಾಸ.

ಈ ಇತಿಹಾಸ ನಿರ್ಮಾಣ ಆದ ನಂತರ ಇಲ್ಲಿಯ ಕನ್ನಡಿಗರು ಸ್ವಾಭಿಮಾನದ ಕೆಚ್ಚನ್ನು ಪ್ರದರ್ಶನ ಮಾಡಿದ್ದು ತೀರ ವಿರಳ. ಬಳ್ಳಾರಿ ನಗರದಲ್ಲಿ ತೆಲುಗರದ್ದೇ ಮೇಲುಗೈ. ರಾಜಕೀಯ - ರಾಜಕೀಯೇತರ ಹುದ್ದೆಗಳಲ್ಲಿ ತೆಲುಗರದ್ದೇ ಪ್ರಾಬಲ್ಯ. ರಾಜಕೀಯ ಅಧಿಕಾರ, ನಿರ್ಣಾಯಕ ಹುದ್ದೆಗಳನ್ನು ಪಡೆಯುವಲ್ಲಿ ಕನ್ನಡಿಗರು ನಿರ್ಲಕ್ಷಿತರು ಎಂದರೂ ತಪ್ಪಿಲ್ಲ. ಕಾರಣ ಬಳ್ಳಾರಿಯಲ್ಲಿ ಕನ್ನಡ ಅಷ್ಟಾಗಿ ಕನ್ನಡೀಕರಣಗೊಂಡಿಲ್ಲ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಬಳ್ಳಾರಿಯಲ್ಲಿ 1926 ರಲ್ಲಿ ಫ.ಗು. ಹಳಕಟ್ಟಿ ಅವರ ಅಧ್ಯಕ್ಷತೆಯಲ್ಲಿ, 1938 ರಲ್ಲಿ ರಂ.ರಾ. ದಿವಾಕರ ಅವರ ಅಧ್ಯಕ್ಷತೆಯಲ್ಲಿ ಮತ್ತು 1958ರಲ್ಲಿ ವಿ.ಕೃ. ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಮಾತ್ರ ನಡೆದಿವೆ. ಕಳೆದ 6 ಸಮ್ಮೇಳನಗಳ ಸಭೆಗಳಲ್ಲೂ 'ಮುಂದಿನ ಸಮ್ಮೇಳನ ಬಳ್ಳಾರಿಗೆ ಬೇಕೇಬೇಕು" ಎನ್ನುವ ಒತ್ತಾಯ ಕೇಳಿಬರುತ್ತಿದೆ.

ಆದರೆ, ಜನಪ್ರತಿನಿಧಿಗಳ ಅಸಹಾಕಾರ, ಇಲ್ಲಿರುವ ತೆಲುಗನ್ನಡಿಗರ ಪ್ರಭಾವ, ಪರಭಾಷಿಕರಲ್ಲಿ ಕೇಂದ್ರೀಕೃತವಾಗಿರುವ ಶ್ರೀಮಂತಿಕೆಗಳ ಕಾರಣ ಬಳ್ಳಾರಿಯಲ್ಲಿ ನಾಲ್ಕನೇ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡುತ್ತಿಲ್ಲ. ಅಭಿವೃದ್ಧಿಯ ದಾಪುಗಾಲಿಡುತ್ತಿರುವ ಗದಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಬಳ್ಳಾರಿಯಲ್ಲಿ ಸಾಧ್ಯವಿಲ್ಲ ಏಕೆ?

ಕನ್ನಡ ವಿವಿ ತವರು: ವಿಶ್ವ ಕನ್ನಡಿಗರ ಸಂಕೇತವಾಗಿರುವ ಕನ್ನಡ ವಿಶ್ವವಿದ್ಯಾಲಯ ಹಂಪೆಯಲ್ಲಿ ಇದ್ದರೂ ಕೂಡ ಬಳ್ಳಾರಿಯಲ್ಲಿ ಕನ್ನಡವನ್ನು ಅಧಿಕಾರದ ಗದ್ದುಗೆಯಲ್ಲಿ ಅಲಂಕರಿಸುವ ಕ್ರಿಯಾಶೀಲ ಪ್ರಯತ್ನ, ದೂರದೃಷ್ಟಿಯ ಯೋಜನೆಗಳು ಜಾರಿ ಆಗುತ್ತಿಲ್ಲ. ಇಲ್ಲಿಯ ಕನ್ನಡಿಗರು ಕೂಡ ಅಧಿಕಾರ ಪಡೆಯುವಲ್ಲಿ ಚಿಂತಿಸುತ್ತಿಲ್ಲ. ಕೆಲವರು ನಡೆಸುವ ಪ್ರಯತ್ನಕ್ಕೆ ಕೂಡ ಯಶಸ್ಸು ಸಿಗುತ್ತಿಲ್ಲ.

ಇಲ್ಲಿಯ ಕನ್ನಡಿಗರು ಸಹಜವಾಗಿಯೇ ತೆಲುಗನ್ನಡ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಇಲ್ಲಿ ಭಾಷಾ ಸೌಹಾರ್ದತೆ ಇದೆ. ದ್ವಿಭಾಷಿ ಸಂಸ್ಕೃತಿ - ಸಂಸ್ಕಾರಗಳು ಇವೆ. ಆದರೆ, ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಕೈಗಾರೀಕರಣ, ವಲಸಿಗರ ಪ್ರಾಬಲ್ಯ, ಪರಭಾಷಾ ವ್ಯಾಮೋಹ, ಇನ್ನಿತರೆಗಳ ಮಧ್ಯೆ ಕನ್ನಡಿಗರ ಕಣ್ಮರೆ ಆಗುವ ಆತಂಕ ಕನ್ನಡಿಗರನ್ನು ತೀವ್ರವಾಗಿ ಕಾಡುತ್ತಿದೆ.

ನಿರುದ್ಯೋಗ ಸಮಸ್ಯೆ ಇನ್ನೂ ಜೀವಂತ: ಜಿಲ್ಲೆಯಲ್ಲಿ ಪ್ರಾರಂಭವಾಗುತ್ತಿರುವ ಭಾರೀ ಕೈಗಾರಿಕೆಗಳು ಕಚ್ಚಾವಸ್ತು, ಭೂಮಿ, ಪರಿಸರ, ನೀರು ಎಲ್ಲವನ್ನೂ ಕರ್ನಾಟಕ, ಕನ್ನಡಿಗರಿಂದ ನೇರವಾಗಿ ಪಡೆದರೂ ಕೂಡ ಕನ್ನಡಿಗರಿಗೆ ಉನ್ನತ ಹುದ್ದೆಗಳನ್ನು ನೀಡಲು ಹಿಂದೇಟು ಹಾಕುತ್ತಿವೆ. ಬಳ್ಳಾರಿ ಜಿಲ್ಲೆ ಸೇರಿ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಜೀವಂತವಾಗಿಯೇ ಇದೆ.

ಈ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಲು 'ಬಳ್ಳಾರಿಯೇ ಮಾದರಿ" ಆಗಬೇಕು. ಕನ್ನಡಿಗರ ಹೊಟ್ಟೆಯನ್ನು ತುಂಬಿಸಲು ಸರ್ಕಾರ ತಾತ್ವಿಕ ಚಿಂತನೆ ನಡೆಸಿ, ಬೌದ್ಧಿಕವಾಗಿ ಎಲ್ಲರಲ್ಲೂ ಕನ್ನಡ ಆವರಿಸಿ ಸ್ವಾಭಿಮಾನಿಗಳಾಗಿ ದೈನಂದಿನ ಬದುಕನನ್ನು ನಡೆಸಲು ಅವಕಾಶ ಸೃಷ್ಠಿಸಿಕೊಳ್ಳುವ ನಿಟ್ಟಿನಲ್ಲಿ ಆಶಾಕಿರಣವಾಗಿ ಪ್ರಯತ್ನ ನಡೆಯಬೇಕು.

ಗಡಿ ಬಳ್ಳಾರಿಯಲ್ಲಿ ಅಳಿದುಹೋಗುತ್ತಿರುವ ಕನ್ನಡ ಸಂಸ್ಕೃತಿ, ಸಂಸ್ಕಾರ - ಸೊಗಡನ್ನು ವಿಶ್ವಮಟ್ಟದಲ್ಲಿ ಮತ್ತಷ್ಟು ಪ್ರಭಾವಿಯಾಗಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗರು ಈಗಾಗಲೇ ಸಾಕಷ್ಟು ಎಚ್ಚೆತ್ತಿದ್ದಾರೆ. ಕನ್ನಡಪರ ಸಂಘಟನೆಗಳು, ಕನ್ನಡಿಗರು ಕನ್ನಡಧ್ವಜವನ್ನು ಕೈಯಲ್ಲಿ ಹಿಡಿದು ಕನ್ನಡಾಂಬೆಯನ್ನು ನಿತ್ಯವೂ ಪೂಜಿಸುತ್ತಿದ್ದಾರೆ.

ಬಳ್ಳಾರಿ ಜಿಲ್ಲೆ ಪ್ರಸ್ತುತ ಕರ್ನಾಟಕದ ಕಣ್ಣು. ಅಭಿವೃದ್ಧಿಶೀಲ ಮುಂಚೂಣಿಯಲ್ಲಿಯ ಜಿಲ್ಲೆ. ಇಡೀ ವಿಶ್ವ ಕೈಗಾರಿಕೆಗಳ ತೀವ್ರ ಗಮನ ಸೆಳೆದಿರುವ ಈ ಜಿಲ್ಲೆಯಲ್ಲಿ ಕನ್ನಡಿಗ ಉಳಿಯಬೇಕು. ಕನ್ನಡ ಬೆಳೆಯಬೇಕು. ಕನ್ನಡಕ್ಕಾಗಿ ಹೋರಾಟ ಮಾಡುವವರ ಪ್ರೋತ್ಸಾಹವನ್ನು ಮತ್ತಷ್ಟು ಉತ್ತೇಜಿಸಬೇಕು.

ಈ ಎಲ್ಲಾ ಕಾರಣಗಳು ಅಲ್ಲದೇ, ಇನ್ನೂ ಅನೇಕ ಕಾರಣಗಳಿಗಾಗಿ ಬಳ್ಳಾರಿಯಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಯಲಿ. ಇಲ್ಲಿ ಅಳಿವಿನ ಅಂಚಿನಲ್ಲಿ ಇರುವ ಭಾಷೆ - ಭಾಷಿಕರನ್ನು ಉಳಿಸಿ - ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕಿದೆ.

English summary
Bellary Public wish to conduct Vishwa Kannada Sammelana third edition in the border city. It has been a long time since a grand kannada convention organized. Here is a article which show cases Bellary kannada history from Sri Krishna Devaraya period to present day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X