ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾವ್ರ ನೆನಪಲ್ಲಿ ಭಾವುಕವಾದ ಬೆಳಗಾವಿ

By * ಡಾ.ಕೆ.ಎನ್.ದೊಡ್ಡಮನಿ, ಬೆಳಗಾವಿ
|
Google Oneindia Kannada News

ಈ ಜನುಮದಲ್ಲಿ ಬೆಳಗಾವಿ ಕನ್ನಡಿಗರು ಮರೆಯದಂಥ ಮೆರವಣಿಗೆ. ಮೆರವಣಿಗೆ ಸಾಗಿಬಂದ ದಾರಿಯುದ್ದಕ್ಕೂ ಕನ್ನಡದ ನಗಾರಿ ಬಾರಿಸುತ್ತಿದ್ದರೆ ಹಳೆ ತಲೆಮಾರಿನವರಿಗೆ ಮತ್ತು ಕನ್ನಡ ಚಿತ್ರವನ್ನು ಅಪಾರವಾಗಿ ಹಚ್ಚಿಕೊಂಡವರಿಗೆ ವರನಟ ಡಾ. ರಾಜಕುಮಾರ್ ಅವರ ನೆನಪು ಕಾಡಿದ್ದು ಸುಳ್ಳಲ್ಲ.

ದಶಕಗಳ ಹಿಂದೆ ಕನ್ನಡಕ್ಕಾಗಿ ಗೋಕಾಕ್ ಚಳವಳಿಯಲ್ಲಿ ಅಪಾರ ಜನರನ್ನು ಸೆಳೆದಿದ್ದ ರಾಜ್ ಈ ಮೆರವಣಿಗೆಯಲ್ಲೂ ಇದ್ದಿದ್ದರೆ ಮೆರವಣಿಗೆಯ ಕಳೆ ಹೇಗಿರುತ್ತಿತ್ತು ಎಂದು ಹಲವರು ಭಾವುಕರಾದರು. ರಾಜಕುಮಾರ್ ಎಂಬ ಹೆಸರಿನಲ್ಲಿನ ಮೋಡಿಯೇ ಅಂತಹುದು. ಹೆಸರು ಕೇಳುತ್ತಿದ್ದಂತೆ ಮೈಮನಗಳಲ್ಲಿ ಕನ್ನಡ ಆವರಿಸಿಕೊಂಡು ಬಿಡುತ್ತದೆ. ನಮಗೇ ಅರಿವಿಲ್ಲದಂತೆ ಅವರ ನಟನೆಯ ಚಿತ್ರಗಳು ಕಣ್ಮುಂದೆ ಹಾದು, ಹಾಡುಗಳು ಕಿವಿಗಳಲ್ಲಿ ಗುಂಗುಡಲು ಪ್ರಾರಂಭಿಸುತ್ತವೆ.

Belgaum dances to Raj tunes
ಈ ಪರಿಯ ಜನರನ್ನು ಬೆಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನ ಕೂಡ ಸೆಳೆದಿರಲಿಲ್ಲ ಎಂದು ಹೇಳಿದರೆ ಉತ್ಪ್ರೇಕ್ಷೆಯಾಗಲಾರದು. ಸುನಾಮಿಯಂತೆ ಹರಿದುಬಂದ ಜನಸಾಗರದಲ್ಲಿ ಕನ್ನಡ ಪ್ರೀತಿ ಉಕ್ಕಿ ಹರಿಯುತ್ತಿತ್ತು. ಆ ಜನಸಾಗರಕ್ಕೆ ನಿರಾಶೆ ಉಂಟು ಮಾಡದಂತೆ ಧ್ವನಿವರ್ಧಕದಿಂದ ಹರಿದುಬಂದ ಒಂದು ಹಾಡು ವಿದ್ಯುತ್ ಸಂಚಾರವನ್ನುಂಟು ಮಾಡಿತು.

ಆಕಸ್ಮಿಕ ಚಿತ್ರದಲ್ಲಿ ಹಂಸಲೇಖ ಬರೆದು ಹುಬ್ಬಳ್ಳಿಯಲ್ಲಿ ಚಿತ್ರಿಸಿದ 'ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು...' ಹಾಡು ತೇಲಿತೇಲಿ ಬರುತ್ತಿದ್ದಂತೆ ಹಿರಿಕಿರಿಯರೆನ್ನದೆ ಕಾಲುಗಳು ತಮ್ಮ ಚಲನವನ್ನು ಬದಲಿಸಿದವು. ಎತ್ತಿನ ಗಾಡಿ ಮೇಲೆ ಕನ್ನಡ ಧ್ವಜವನ್ನು ಹಾರಿಸುತ್ತ ಇದೇ ಹಾಡನ್ನು ರಾಜ್ ಅವರೇ ಜೀವಂತ ಬಂದು ಹಾಡುತ್ತಿದ್ದಾರೇನೋ ಎಂಬಂತೆ ಭಾಸವಾಗಿ ಆ ಸ್ಥಬ್ಧಚಿತ್ರದ ಸುತ್ತ ನೆರೆದ ಜನ ಕುಣಿಯಲು ಪ್ರಾರಂಭಿಸಿದರು. ಮಹಡಿಗಳ ಮೇಲೆ ನಿಂತ ಬಾಂಧವರು ಕೇಕೆ ಹಾಕಿ ಹರ್ಷ ವ್ಯಕ್ತಪಡಿಸಿದರು.

ಇಂದು ಬೆಳಗಾವಿಯಲ್ಲಿ ಕನ್ನಡಿಗರನ್ನು ಬಡಿದೆಬ್ಬಿಸುವ ಭವ್ಯ ಮೆರವಣಿಗೆ ಸಾಗುತ್ತಿದ್ದಂತೆ ನೆರೆದ ಜನಸ್ತೋಮದಲ್ಲಿ ಅಣ್ಣಾವು ನೆನೆಪಾಗಿ ಹರೆದರು. ರಾಜಕುಮಾರರ ಅಭಿಮಾನಿಗಳಲ್ಲಿ ಕೆಲವರು ಇಂದು ಅವರು ಬದುಕಿದ್ದರೆ ಈ ಅಪೂರ್ವ ಸಮ್ಮೇಳನವನ್ನು ಬಹುಶಃ ಉದ್ಘಾಟಿಸುತ್ತಿದ್ದರು ಎಂದು ಅಂದುಕೊಳ್ಳುತ್ತಿದ್ದಂತೆ ನೆರೆದ ಗೆಳೆಯರು ಹೌದು ಎಂದು ಒಪ್ಪಿಗೆ ಸೂಚಿಸಿದರು. ಕನ್ನಡಿಗರ ಹೃಯದ ಸಾಮ್ರಾಜ್ಯದಲ್ಲಿ ಯಾವತ್ತೂ ಮನೆ ಮಾಡಿಕೊಂಡಿರುವ ರಾಜಕುಮಾರ್ ಅವರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿರಬಹುದು, ಆದರೆ ಮನದಲ್ಲಿ ಅವರಿದ್ದಾರೆ ಎಂಬ ಭಾವ ಯಾವತ್ತೂ ಜೀವಂತವಾಗಿರುತ್ತದೆ.

English summary
Belgaum Kannadigas dance to Rajkumar tunes at Belgaum Kannada Convention. Vishwa Kannada Sammelana 2011 will be remembered for ever for the fantastic procession and the crowd love for Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X