ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯಿಂದ ದಟ್ಸ್ ಕನ್ನಡ ನೇರ ಪ್ರಸಾರ

By * ಶಾಮ್
|
Google Oneindia Kannada News

Vishwa Kannada Sammelana : Oneindia Kannada live
ಬೆಳಗಾವಿ, ಮಾ. 10 : ಮೈಸೂರಿನಲ್ಲಿ ಮೊಟ್ಟಮೊದಲ ವಿಶ್ವ ಕನ್ನಡ ಸಮ್ಮೇಳನ ನಡೆದು ಇದೀಗ 25 ವರ್ಷಗಳು ಸಂದುಹೋಗಿವೆ. ವಿಶ್ವ ಕನ್ನಡ ಸಮ್ಮೇಳನ ಪರಿಕಲ್ಪನೆಗೆ ಬೆಳ್ಳಿಹಬ್ಬ. ಆಗಿನ್ನೂ ಅಂತರ್ಜಾಲ ಕಣ್ಣು ತೆರೆದಿರಲಿಲ್ಲ. ಇತ್ತೀಚಿನ ದಶಕಗಳಲ್ಲಿ ಇಂಟರ್ನೆಟ್ ಮಾಧ್ಯಮದಲ್ಲಿ ಕನ್ನಡ ಪ್ರಭಾವಶಾಲಿಯಾಗಿ ಬೆಳೆದು ನಮ್ಮ ಸಮಸ್ತ ಬದುಕಿನ ಶೈಲಿಯನ್ನು ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ಆವರಿಸಿಕೊಂಡಿದೆ.

ನಾಳೆಯಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಮಸ್ತ ಕನ್ನಡಿಗರು ಸಿದ್ಧರಾಗಿದ್ದಾರೆ. ಸುಮಾರು 50 ಕೋಟಿ ರು. ವೆಚ್ಚದಲ್ಲಿ ವ್ಯವಸ್ಥೆಯಾಗಿರುವ ಸಮ್ಮೇಳನಕ್ಕೆ ಲಕ್ಷಾಂತರ ಕನ್ನಡಿಗರು ಆಗಮಿಸುತ್ತಿದ್ದಾರೆ. ವಿಶ್ವ ಸಮ್ಮೇಳನದ ಸಾಗರಕ್ಕೆ ಸಾವಿರಾರು ನದಿಗಳು. ಈ ಸಂಭ್ರಮವನ್ನು ಅಂತರ್ಜಾಲದಲ್ಲಿ ಬಿಂಬಿಸುವ ಉತ್ಸಾಹ, ಶ್ರದ್ಧೆ ಮತ್ತು ಕರ್ತವ್ಯ ನಿಮ್ಮ ನಲ್ಮೆಯ ದಟ್ಸ್ ಕನ್ನಡ.ಕಾಂ ವೆಬ್ ತಾಣದ್ದು.

ಸಮ್ಮೇಳನದ ವಿಶಿಷ್ಟ ವರದಿಗಳನ್ನು ನಿಮಗೆ ತಲುಪುವುದಕ್ಕೋಸ್ಕರ ನಮ್ಮ ಅಂತರ್ಜಾಲ ತಾಣ ಬೆಳಗಾವಿ ನಗರದಲ್ಲಿ ಕಚೇರಿಯನ್ನು ತೆರೆದಿದೆ. ತಾಣದ ಸಂಪಾದಕ, ಸುದ್ದಿ ಸಂಪಾದಕ, ವರದಿಗಾರರು ಮತ್ತು ಛಾಯಾಚಿತ್ರಕಾರರು ಸಮ್ಮೇಳನದ ಸಂಭ್ರಮವನ್ನು ಸೆರೆಹಿಡಿಯಲು ಊರು ತುಂಬಾ ಸುತ್ತುತ್ತಿದ್ದಾರೆ. ಬೆಳಗಾವಿಯ ನಮ್ಮ ಕಚೇರಿಯ ವಿಳಾಸ : ಹೊಟೇಲ್ ರಕ್ಷಿತ್ ಇಂಟರ್ನ್ಯಾಷನಲ್, ಎಎಂ ಶೇಕ್ ಮೆಡಿಕಲ್ ಕಾಲೇಜ್ ಸಮೀಪ, ನೆಹರು ನಗರ, ಬೆಳಗಾವಿ - 590010.

ಬೆಳಗಾವಿ ನಗರಕ್ಕೆ ಬಂದಿಳಿಯುತ್ತಿರುವ ಸಾವಿರಾರು ಕನ್ನಡಿಗರನ್ನು ಸ್ವಾಗತಿಸುವುದಕ್ಕೆ ನಗರಾಡಳಿತ ಸರ್ವಸಿದ್ಧತೆ ಮಾಡಿಕೊಳ್ಳುತ್ತಿದೆ. ತಮ್ಮ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ನಮೂದಿಸಿಲ್ಲ ಎಂದು ಕುಪಿತಗೊಂಡ ಬೆಳಗಾವಿ ಮಹಾಪೌರ ನಿಂಗಣ್ಣ ನಿರ್ವಾಣಿ ತಮ್ಮ ಹುದ್ದೆಗೆ ರಾಜೀನಾಮೆ ಬಿಸಾಕಿದ್ದಾರೆ. ಅವರ ರಾಜೀನಾಮೆಯನ್ನು ಹಿಂಪಡೆಯುವಂತೆ ಮನವೊಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಪ್ರಯತ್ನ ನಡೆಸಿದರು ಕೂಡ ಫಲಕಾರಿಯಾಗಿಲ್ಲ.

ಈ ಮಧ್ಯೆ, ಮೇಯರ್ ಅವರ ರಾಜೀನಾಮೆಗೂ ತಮಗೂ ಏನೂ ಸಂಬಂಧವಿಲ್ಲವೆಂಬಂತೆ ಮಹಾನಗರ ಪಾಲಿಕೆಯ ಸಿಬ್ಬಂದಿ ನಗರವನ್ನು ಶೃಂಗಾರ ಮಾಡುವಲ್ಲಿ ನಿರತರಾಗಿದ್ದಾರೆ. ಬೆಳಗಾವಿ ನಗರದ ಎಲ್ಲ ಬಡಾವಣೆಗಳಲ್ಲಿ ಮತ್ತು ರಸ್ತೆಯುದ್ದಕ್ಕೂ ವಿಶ್ವ ಕನ್ನಡ ಸಮ್ಮೇಳನ 2011 ಸಂಭ್ರಮವನ್ನು ಬಿತ್ತರಿಸುವ ಕಣ್ಮನ ಸೆಳೆಯುವ ಫಲಕಗಳು ರಾರಾಜಿಸುತ್ತಿವೆ.

ಭಿತ್ತಿಪತ್ರಗಳಲ್ಲಿ ವರಕವಿ ದರಾ ಬೇಂದ್ರೆ, ಗಾನಗಂಗೆ ಗಂಗೂಬಾಯಿ ಹಾನಗಲ್, ನಟಸಾರ್ವಭೌಮ ಡಾ.ರಾಜಕುಮಾರ್, ಸಾಹಸಸಿಂಹ ಡಾ. ವಿಷ್ಣವವರ್ಧನ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವ ಉಮೇಶ್ ಕತ್ತಿ ರಾರಾಜಿಸುತ್ತಿದ್ದಾರೆ. ಇದರ ಜೊತೆ ಕನ್ನಡ ನಾಡಿನ ಪರಂಪರೆ, ಇತಿಹಾಸ ಮತ್ತು ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಭಿತ್ತಿಪತ್ರಗಳು ಹೆಜ್ಜೆಗೊಂದರಂತೆ ಕಣ್ಣಿಗೆ ಬೀಳುತ್ತಿವೆ.

ಮೆರವಣಿಗೆ : ವಿಶ್ವ ಕನ್ನಡ ಸಮ್ಮೇಳನದ ಆಕರ್ಷಣೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಕನ್ನಡಿಗರ ಶಕ್ತಿ ಪ್ರದರ್ಶನದ ಬೃಹತ್ ಮೆರವಣಿಗೆ. ಮೇಲುನೋಟಕ್ಕೆ ಇದೊಂದು ಸಾಂಸ್ಕೃತಿಕ ಸೌರಭ ಎಂದು ಕಂಡುಬಂದರೂ ಗಡಿನಾಡ ಪ್ರದೇಶದಲ್ಲಿ ಕನ್ನಡಿಗರ ಒಗ್ಗಟ್ಟು ಮತ್ತು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ಸಂಕಲ್ಪವನ್ನು ಪ್ರದರ್ಶನಕ್ಕೆ ಇಡುವ ಮೆರವಣಿಗೆಯಾಗಿರುತ್ತದೆ. ಈ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಮತ್ತು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಪ್ರತಿನಿಧಿಗಳು ಮರೆಯಬಾರದು.

ಶುಕ್ರವಾರ, ಮಾ. 11ರ ಬೆಳಿಗ್ಗೆ 9 ಗಂಟೆಗೆ ಮೆರವಣಿಗೆ ಆರಂಭ. 1924ರಲ್ಲಿ ಇಲ್ಲಿ ನಡೆದಿದ್ದ ಐತಿಹಾಸಿಕ ಕಾಂಗ್ರೆಸ್ ಸಮ್ಮೇಳನದ ತಾಣ ವ್ಯಾಕ್ಸಿನ್ ಡೀಪೊ ಬಳಿಯಿರುವ ವೀರಸೌಧದಲ್ಲಿ ಶಿವಮೊಗ್ಗದಿಂದ ಆಗಮಿಸಿರುವ ಆನೆ ಬಲರಾಮನಿಗೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಸುಮಾರು 6 ಕಿ.ಮೀ. ದೂರ ಕ್ರಮಿಸುವ ಮೆರವಣಿಗೆ ಅಪರಾಹ್ನ 3 ಗಂಟೆಯ ಸಮಯಕ್ಕೆ ಸಮ್ಮೇಳನದ ಪ್ರಮುಖ ವೇದಿಕೆ, ಜಿಲ್ಲಾ ಕ್ರೀಡಾಂಗಣದಲ್ಲಿ ವ್ಯವಸ್ಥೆಯಾಗಿರುವ ರಾಣಿ ಕಿತ್ತೂರು ಚೆನ್ನಮ್ಮನ ವೇದಿಕೆಗೆ ತಲುಪಲಿದೆ. ಮಾರ್ಗ : ವೀರಸೌಧದಿಂದ ಸಾಗಿ ರೈಲ್ವೆ ನಿಲ್ದಾಣವನ್ನು ಹಾಯ್ದು, ಬೋಗಾರ್ವೇಸ್ ದಾಟಿ ನಂತರ ಕಾಲೇಜು ರಸ್ತೆಯ ಮುಖಾಂತರ ವೇದಿಕೆ ತಲುಪಲಿದೆ. [ಬೆಳಗಾವಿ ಸಮ್ಮೇಳನದ ಸುದ್ದಿಬಿಂಬ]

English summary
Summary : Belgaum Vishwa Kannada Sammelana live coverage on oneindia kannada website. Our team of reporters and photographers will bring the conference news as it happens from Karnataka - Maharashtra border city Belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X