ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿಯತ್ತ ವಿಶ್ವ ಕನ್ನಡ ಜನಸಾಗರ

By * ಶಾಮ್
|
Google Oneindia Kannada News

Manu Baligar
ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಮ್ಮೇಳನದ ತಾಣ ತಲಪುವುದಕ್ಕೆ ದಶದಿಕ್ಕುಗಳಿಂದ ಕನ್ನಡಿಗರು ಬೆಳಗಾವಿ ಮುಖವಾಗಿ ಪ್ರಯಾಣ ಆರಂಭಿಸಿದ್ದಾರೆ. ವ್ಯವಸ್ಥಾಪಕರು ಅಂದಾಜು ಮಾಡಿರುವ ಪ್ರಕಾರ ಸಮ್ಮೇಳನದಲ್ಲಿ ದಿನಂಪ್ರತಿ ಒಂದು ಲಕ್ಷ ಕನ್ನಡಿಗರ ಲೆಕ್ಕದಂತೆ ಮೂರು ದಿನಗಳಲ್ಲಿ ಒಟ್ಟು ಮೂರರಿಂದ ನಾಲಕ್ಕು ಲಕ್ಷ ಜನ ಜಮಾಯಿಸುವ ನಿರೀಕ್ಷೆಯಿದೆ.

ಇವರಲ್ಲಿ ಸ್ಥಳೀಯರ ಪಾಲು ಹೆಚ್ಚು. ಬೆಳಗಾವಿಯಲ್ಲದೆ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸುವ 'ಕನ್ನಡ ತೇರು'ಗಳ ಜತೆಗೆ ಹೊರನಾಡ ಕನ್ನಡಿಗರು, ಗಡಿನಾಡ ಕನ್ನಡಿಗರು, ಅನಿವಾಸಿ ಕನ್ನಡಿಗರು ಮತ್ತು ಬೆಂಗಳೂರು ಕನ್ನಡಿಗರೂ ಹೆಚ್ಚು ಸಂಖ್ಯೆಯಲ್ಲಿ ಇರುತ್ತಾರೆ. ಮುಂಬೈಯಿಂದಲೇ ಸಾವಿರ, ನವದೆಹಲಿಯಿಂದಲೇ ಐದುನೂರು, ಕಡಲಾಚೆಯ ದೇಶಗಳ ಸುಮಾರು 250 ಕನ್ನಡಿಗರು ಬಂದಿಳಿಯಲಿದ್ದಾರೆ.

ಸಮ್ಮೇಳನಕ್ಕೆ ಬೆಳಗಾವಿ ರೈಲು ಹತ್ತುವ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ದಟ್ಸ್ ಕನ್ನಡದೊಂದಿಗೆ ಮಾತನಾಡಿ, ಸಮ್ಮೇಳನ ಕುರಿತ ಹಲವು ಮಾಹಿತಿಗಳನ್ನು ಹಂಚಿಕೊಂಡರು. ಮಾತುಕತೆಯ ಮುಖ್ಯಾಂಶಗಳು ಇಂತಿವೆ.

* ರಾಜ್ಯೋತ್ಸವ ಪ್ರಶಸ್ತಿ ಬೇಡಿ ಪ್ರತಿವರ್ಷ 3000 ಮಂದಿ ನಮ್ಮ ಇಲಾಖೆಗೆ ಅರ್ಜಿಹಾಕಿಕೊಳ್ಳುತ್ತಾರೆ. ಆದರೆ ಈ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವುದಕ್ಕೆ ನಮಗೂ ಅವಕಾಶ ಕೊಡಿ ಎಂಬ 5,500 ಬೇಡಿಕೆಗಳು ಬಂದಿವೆ. ಬಹುತೇಕ ಎಲ್ಲ ಕಲಾವಿದರನ್ನು ಸಮ್ಮೇಳನ ಅಪ್ಪಿಕೊಳ್ಳುತ್ತದೆ.

* ಎನ್ಆರ್ ನಾರಾಯಣ ಮೂರ್ತಿ, ಬಿಎಸ್ ಯಡಿಯೂರಪ್ಪ, ಯುಆರ್ ಅನಂತ ಮೂರ್ತಿ, ಜಿಎಸ್ ಶಿವರುದ್ರಪ್ಪ, ದೇ. ಜವರೇಗೌಡ, ಪಾಟೀಲ ಪುಟ್ಟಪ್ಪ ಅವರಂಥ ಘಟಾನುಘಟಿ ಕನ್ನಡಿಗರಲ್ಲದೆ ಗಣ್ಯರು ಮತ್ತು ಅತಿಗಣ್ಯರ ಬೃಹತ್ ಸೈನ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಲಿದೆ. 14 ವೇದಿಕೆಗಳಲ್ಲಿ ಸಮಾನಾಂತರವಾಗಿ ಹತ್ತಾರು ಬಗೆಯ ಗೋಷ್ಠಿಗಳು ಜರುಗಿದರೆ ಜಿಲ್ಲೆಯ ಕ್ರೀಡಾ ಮೈದಾನದಲ್ಲಿ ಹಾಕಿರುವ ಕಿತ್ತೂರು ರಾಣಿ ಚೆನ್ನಮ್ಮ ವೇದಿಕೆಯು ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮಗಳಿಗೆ ಭೂಮಿಕೆ ಆಗುತ್ತದೆ. ಜತೆಗೆ ಜವಾಹರಲಾಲ್ ಮೆಡಿಕಲ್ ಕಾಲೇಜು ಕ್ರೀಡಾಂಗಣದಲ್ಲೂ ಕಾರ್ಯಕ್ರಮಗಳು ಸಾಲು ಸಾಲಾಗಿ ನಡೆಯುತ್ತವೆ.

* ಏಳು ಕಡೆಗಳಲ್ಲಿ ಭೋಜನಕ್ಕೆ ವ್ಯವಸ್ಥೆ ಇರುತ್ತದೆ. ಪ್ರತಿನಿಧಿಗಳು ತಮಗೆ ಅನುಕೂಲವಾದ, ಹತ್ತಿರವಾದ ಭೋಜನ ಶಾಲೆಯನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು. ಗಣ್ಯರಾಗಲೀ, ಶ್ರೀಸಾಮಾನ್ಯರಾಗಲೀ ಎಲ್ಲರಿಗೂ ಒಂದೇ ಪಾತ್ರೆಯಲ್ಲಿ ಮಾಡಿದ ಅಡುಗೆ ಬಡಿಸಲಾಗುತ್ತದೆ. ಬೆಳಗಾವಿ ನಗರ ಮತ್ತು ಸುತ್ತ ಮುತ್ತ ಪ್ರದೇಶಗಳಲ್ಲಿ ಲಭ್ಯವಿರುವ ಎಲ್ಲ ವಸತಿ ಅವಕಾಶಗಳನ್ನು ಸಮ್ಮೇಳನಕ್ಕಾಗಿ ದುಡಿಸಿಕೊಳ್ಳಲಾಗುತ್ತಿದೆ.

* ಐಶ್ವರ್ಯ ರೈ ಸಮೀಪ ದರ್ಶನದ ಪುಳಕದ ಜತೆಗೆ ಯಥಾಪ್ರಕಾರ ಪುಸ್ತಕ ಮಳಿಗೆಗಳು ವಿಶೇಷ ಆಕರ್ಷಣೆ ಆಗುವುದು ಖರೆ. ಇದರಲ್ಲಿ ರಾಜ್ಯ ಸರಕಾರದ ಮಳಿಗೆಗಳೂ ಇರುತ್ತವೆ. ಇಲಾಖೆ ಹೊರತಂದಿರುವ ಒಂದು ನೂರು ಮೇರು ಕೃತಿಗಳ ಬಿಡುಗಡೆ, ಮಾರಾಟ ಮಾಡಲಾಗುತ್ತದೆ. ಸಾಂದರ್ಭಿಕ ಕೃತಿ 'ಪುನಾರವಲೋಕನ'ದ ಜತೆಗೆ ಬೆಳಗಾವಿ ಜಿಲ್ಲೆಯ ಮಹತ್ವ ಬಿಂಬಿಸುವ ಎರಡು ಕೃತಿಗಳು ನಿಮಗಾಗಿ ಕಾದಿವೆ. ವಿದ್ಯಾರ್ಥಿಗಳು ತಮ್ಮ ಗುರುತಿನ ಚೀಟಿ ತೋರಿಸಿದರೆ ಪುಸ್ತಕ ಖರೀದಿಯಲ್ಲಿ ಶೇ.30ರಷ್ಟು ರಿಯಾಯಿತಿಯನ್ನು ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಪ್ರಕಟಿಸಿದ್ದಾರೆ.

* ರಾಣಿ ಚೆನ್ನಮ್ಮ ಮತ್ತು ತಾಯಿ ಭುವನೇಶ್ವರಿಯ ಎರಡಾಳೆತ್ತರದ ಹೂವಿನ ಪ್ರತಿಕೃತಿಗಳನ್ನು ತೋಟಗಾರಿಕೆ ಇಲಾಖೆ ಪ್ರಸ್ತುತ ಪಡಿಸುತ್ತದೆ. ಸರ್ಕೀಟ್ ಹೌಸ್ ಪಕ್ಕದಲ್ಲಿ ನೀವಿದನ್ನು ಕಾಣಬಹುದು. ಕ್ಯಾಮರಾ ತಂದಿರಿ. ಅಂದಹಾಗೆ, ಪ್ರತಿನಿಧಿಗಳನ್ನು ಸ್ವಾಗತಿಸುವ ಮತ್ತು ಅವರಿಗೆ ಮಾರ್ಗದರ್ಶನ ಮಾಡುವ ಸ್ವಾಗತ ಕಚೇರಿಗಳನ್ನು ತೆರೆಯಲಾಗಿದೆ. ಇಂಥ 50 ಕೌಂಟರುಗಳು ಇರುತ್ತವೆ. ವಿಚಾರಣೆಗೆ ಫೋನ್ ನಂಬರ್ ಗುರುತುಹಾಕಿಕೊಳ್ಳಿ, ರಘು 98454 02056.

* ಇಪ್ಪತ್ತೈದು ವರ್ಷಗಳ ನಂತರ ನಡೆಯುತ್ತಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನ ಗಾತ್ರದಲ್ಲಿ ಮತ್ತು ಪಾತ್ರದಲ್ಲಿ ಬೃಹತ್ತನ್ನೂ ಮತ್ತು ಮಹತ್ತನ್ನೂ ಆಕರ್ಷಿಸಿಕೊಂಡಿದೆ. ಇಂಥ ಸಮ್ಮೇಳನ ಹಿಂದೆ ನಡೆದಿಲ್ಲ, ಮುಂದೆ ಗೊತ್ತಿಲ್ಲ ಎನ್ನುತ್ತಾರೆ ಮನು ಬಳಿಗಾರ್. ಕನ್ನಡ ಸಂಸ್ಕೃತಿ ಇಲಾಖೆಯಿಂದ 30 ಕೋಟಿ, ಲೋಕೋಪಯೋಗಿ ಇಲಾಖೆಯಿಂದ 10 ಕೋಟಿ, ನಗರಾಭಿವೃದ್ಧಿ ಇಲಾಖೆ ವತಿಯಿಂದ 7 ಕೋಟಿ, ಹೀಗೆ ನಾನಾ ಇಲಾಖೆಗಳು ಕಲೆತು ಒಟ್ಟು 50 ಕೋಟಿ ರೂಪಾಯಿ ವೆಚ್ಚದಲ್ಲಿ ಸಮ್ಮೇಳನ ಗರಿಕೆದರಲಿದೆ. ನೀವೂ ಬೆಳಗಾವಿಗೆ ಹೋಗಿ ಬನ್ನಿ. ಮುದ್ದಾಂ ಭಾಗವಹಿಸಲಾಗದಿದ್ದರೆ ಬೆಳಗಾವಿಯಿಂದ ದಟ್ಸ್ ಕನ್ನಡ ನಿಮಗೆ ತಲುಪಿಸುವ ನೇರ ವರದಿಗಳನ್ನು ನೋಡುತ್ತಿರಿ.

English summary
2nd Vishwa Kannada Sammelana Belgaum : The border city beckons Kannada people from all over the world. Interview with Manu Baligar, Director Department of Kannada and Culture Government of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X