ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಜಿಲ್ಲೆ ಬಗ್ಗೆ ನಿಮಗೆಷ್ಟು ಗೊತ್ತು?

By * ಮಹೇಶ ಗಜಬರ, ಬೆಳಗಾವಿ
|
Google Oneindia Kannada News

Facts and information about Belgaum
ಎರಡನೇ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿರುವ ಶುಭ ಸಂದರ್ಭದಲ್ಲಿ ಹೆಮ್ಮೆಯ ಕನ್ನಡಿಗರಿಗೆಲ್ಲ ಹಾರ್ದಿಕ ಅಭಿನಂದನೆಗಳು. ಅನೇಕ ಅಡೆ-ತಡೆಗಳನ್ನು ಎದುರಿಸಿ ಅಂತು-ಇಂತು ಪ್ರಸವ ವೇದನೆಗಳೊಂದಿಗೆ ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಚಾಲನೆ ದೊರೆಯುತ್ತಿದೆ. ಕನ್ನಡದ ವಿಶ್ವ ಸಮ್ಮೇಳನ ನಡೆಸುವ, ಆತಿಥ್ಯವಹಿಸುವ ಸುಯೋಗ ಹೆಮ್ಮೆಯ ಕುಂದಾನಗರಿ ಬೆಳಗಾವಿಗೆ ಒಲಿದು ಬಂದಿದೆ.

ಬಹುತೇಕ ಕರ್ನಾಟಕ ಜನರ ಪಾಲಿಗೆ ಬರೀ ಬೆಲಗಾಮ್ ಅಥವಾ ಬೆಳಗಾಂ ಆಗಿರುವ(ಚಲನಚಿತ್ರ ಜಾಹೀರಾತುಗಳು ಒಂದು ಸಣ್ಣ ಉದಾಹರಣೆ) ಈ ಊರಿನ ನೈಜ ಹೆಸರು ಬೆಳಗಾವಿ (ನಾನು ಬೆಳಗಾಂವ ಎನ್ನುತ್ತೇನೆ. ಬಹುತೇಕ ಮರಾಠಿ ಜನ ಕೂಡ ಬೆಳಗಾಂವ ಎನ್ನುತ್ತಾರೆ) ಎಂದು ಗೊತ್ತೇ ಇಲ್ಲ. ಈ ಸಮ್ಮೇಳನದಲ್ಲಿ ನೆಪದಲ್ಲಿ ದಟ್ಸ್ ಕನ್ನಡದ ಶಾಮ್ ಸರ್ ನನಗೆ ಜಿಲ್ಲೆಯ ಸಮಗ್ರ ಪರಿಚಯವನ್ನು ಎಲ್ಲರಿಗೂ ಮಾಡಿಕೊಡಿ ಎಂದಾಗ ಬಹಳ ಸಂತೋಷದಿಂದಲೇ ಈ ಕಿರು ಕಾರ್ಯಕ್ಕೆ ಒಪ್ಪಿಕೊಂಡೆ.

ಬಳ್ಳಾರಿ ಅಂದ ತಕ್ಷಣ ಬಹುತೇಕರಿಗೆ ಬರೀ ಗಣಿ ಧೂಳು ಸೃತಿಪಟಲದಲ್ಲಿ ಮೂಡಿದ ಹಾಗೆ, ಬೆಳಗಾವಿ ಹೆಸರು ಕೇಳಿದಾಗ ಬರೀ ಗಡಿ ಗದ್ದಲ ಮನದಾಳದಲ್ಲಿ ಮೂಡಿ ಬರುತ್ತೆ. ಛೇ ಬೆಳಗಾಂನಲ್ಲಿ ಬರೀ ಮರಾಠಿನೇ ಮಾತಾಡ್ತಾರೇ ಅಂತೇ ಕಣ್ರೀ, ಕನ್ನಡ ಸತ್ತು ಹೋಗ್ತಾ ಇದೆ ಅಂತ್ರಿ ಅನ್ನೋ ಗೊಣಗಾಟವನ್ನು ನೀವು ಬಹಳ ಕಡೆ ಕೇಳಿ ಇರುತ್ತಿರಿ. ಇದೆಲ್ಲಾ ನಿಜಾನಾ? ಉತ್ತರ ಕರ್ನಾಟಕ ಅಂದ್ರೆ ಬರೀ ಬಯಲು ಸೀಮೆ, ಬಿಸಿಲು, ಹೆಚ್ಚಿನ ಮಟ್ಟಿಗೆ ಕೃಷಿ ನಿರುಪಯುಕ್ತ ಜಮೀನು, ಬರದ ಛಾಯೆ ಅಂದು ಕೊಂಡಿರುವವರಿಗೆ ಉತ್ತರ ಕರ್ನಾಟಕ ಭಾಗವೆಂದೆನಿಸಿಕೊಂಡಿರುವ ಬೆಳಗಾವಿನೂ ಹೀಗೆನಾ? ಬೆಳಗಾವಿಯ ಎಲ್ಲಾ ಮರಾಠಿ ಜನಾ ಭಾರೀ ಹುಂಬರಾ? ಇದಕ್ಕೆಲ್ಲ ಉತ್ತರ ಕೊಡುವ ಒಂದು ಸಣ್ಣ ಪ್ರಯತ್ನ ಬೆಳಗಾವಿ ಜಿಲ್ಲೆ ನಿಮಗೆಷ್ಟು ಗೊತ್ತು? ಎಂಬ ಲೇಖನದಲ್ಲಿ ಮಾಡಿದ್ದೇನೆ.

ಬೆಳಗಾವಿ ಕರ್ನಾಟಕದ ನಾಲ್ಕನೇ ದೊಡ್ಡ ನಗರ ಮತ್ತು ಮಹಾನಗರ ಪಾಲಿಕೆ. ಜನಸಂಖ್ಯೆಯಲ್ಲಿ ಎರಡನೇ ಅತೀ ದೊಡ್ಡ ಜಿಲ್ಲೆ ಮತ್ತು ವಿಸ್ತೀರ್ಣದಲ್ಲಿ ಅತೀ ದೊಡ್ಡ ಜಿಲ್ಲೆ. ಜಿಲ್ಲೆಯ ಒಂದು ಮೂಲೆಯವರಿಗೆ ಇನ್ನೊಂದು ಮೂಲೆಯ ಬಗ್ಗೆ ಗೊತ್ತಿರುವುದಿಲ್ಲ. ಯಾಕಂದ್ರೆ ಅವುಗಳ ನಡುವಿನ ಅಂತರ ಸರಿ ಸುಮಾರು 160 ಕಿ.ಮೀ. ಬೆಂಗಳೂರಿನಿಂದ NH4ರ ಹಾದಿಯಲ್ಲಿ ಹೊರಟರೆ ನೀವು ಇಷ್ಟೇ ಅಂತರದಲ್ಲಿ ನಾಲ್ಕು ಜಿಲ್ಲೆಗಳನ್ನು ಕ್ರಮಿಸುತ್ತಿರಿ ಮತ್ತು ಅದೆಷ್ಟೊ ವೈವಿಧ್ಯತೆಯನ್ನು ಕಾಣುತ್ತೀರಿ. ಹಾಗೆನೇ ಈ ಒಂದೇ ಜಿಲ್ಲೆಯಲ್ಲಿ ಭಾರೀ ವೈವಿಧ್ಯತೆಯನ್ನು ಕಾಣಬಹುದು. ಸಾಮಾನ್ಯವಾಗಿ ಯಾವುದೇ ಪ್ರದೇಶ ಅಥವಾ ಜಿಲ್ಲೆಯ ಬಗ್ಗೆ ವಿವರಣೆ ನೀಡುವಾಗ ಅದನ್ನು ಭೌಗೋಳಿಕ, ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕ ಮತ್ತು ಕೃಷಿ, ಉದ್ಯಮ ಎಂಬ ವಿಭಾಗಗಳಲ್ಲಿ ಆಯಾ ವಿವರಣೆ ಕೊಡಲಾಗುತ್ತದೆ. ಹಾಗೇ ನಾನು ಕೂಡ ಇಲ್ಲಿ ಅದನ್ನೆ ಮಾಡಿದ್ದೆನೆ.

ಭೌಗೋಳಿಕ ಮಾಹಿತಿ

ಉತ್ತರ ಕರ್ನಾಟಕ ಅಂದಾಕ್ಷಣ ಬಹುತೇಕರಿಗೆ ಬರೀ ಬಯಲು ಸೀಮೆ, ಬಿಸಿಲು ಎಂಬ ಭ್ರಮೆ ಇದೆ. ಆದರೆ ಉ.ಕ.ದ ಭಾಗವಾದರೂ ಬೆಳಗಾವಿ ಸಂಪೂರ್ಣವಾಗಿ ಬಯಲು ಸೀಮೆ ಅಲ್ಲ. ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳು ಸಮೃದ್ಧ ಕಾಡು ಮತ್ತು ಸಹ್ಯಾದ್ರಿ ಬೆಟ್ಟ ಸಾಲುಗಳನ್ನು ಹೊಂದಿದ್ದು ಮಲೆನಾಡಿನ ಅವಿಭಾಜ್ಯ ಅಂಗಗಳೇ ಆಗಿವೆ. ಸ್ವತಃ ಬೆಳಗಾವಿ ನಗರವೇ ಸಹ್ಯಾದ್ರಿ ಮಡಿಲಲ್ಲಿ ಹಾಯಾಗಿ ಪವಡಿಸಿದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಹದಿನೈದು-ಇಪ್ಪತ್ತು ಲಕ್ಷ ಜನಸಂಖ್ಯೆಗೆ ಒಂದು ಜಿಲ್ಲೆ ಇದ್ದರೆ ಈ ಒಂದೇ ಜಿಲ್ಲೆಯ ಜನಸಂಖ್ಯೆ ಭರ್ತಿ ಸರಿ ಸುಮಾರು ಐವತ್ತೈದು ಲಕ್ಷ. ಇದು ಬೆಳಗಾವಿ, ಚಿಕ್ಕೋಡಿ, ಹುಕ್ಕೇರಿ, ರಾಯಬಾಗ, ಅಥಣಿ, ಖಾನಾಪುರ, ಗೋಕಾಕ, ಬೈಲಹೊಂಗಲ, ಸವದತ್ತಿ, ರಾಯಬಾಗ ಎಂಬ ಹತ್ತು ತಾಲ್ಲೂಕುಗಳನ್ನು ಒಳಗೊಂಡಿದೆ. ಇದರಲ್ಲಿ ಖಾನಾಪುರ ತಾಲ್ಲುಕು ಸಂಪೂರ್ಣವಾಗಿ ಕಾಡಿನ, ಬೆಟ್ಟ ಗುಡ್ಡಗಳ ನಾಡು. ಬೆಳಗಾವಿ ತಾಲ್ಲೂಕು ಕೂಡ ಬಹುತೇಕ ಕಾಡಿನ ಪ್ರದೇಶ ಮತ್ತು ಸ್ವಲ್ಪ ಮಟ್ಟಿಗೆ ಅರೆ-ಮಲೆನಾಡು ಭಾಗವನ್ನು ಒಳಗೊಂಡಿದೆ. ಚಿಕ್ಕೋಡಿ, ಹುಕ್ಕೇರಿ, ಗೋಕಾಕ, ಬೈಲಹೊಂಗಲ ತಾಲ್ಲೂಕುಗಳು ಅರೆ ಮಲೆನಾಡು ಪ್ರದೇಶ ಹೊಂದಿದ್ದು ಸಹ್ಯಾದ್ರಿ ಸೆರಗಿನಲ್ಲೆ ಹಸಿರು ಹೊದ್ದಿಕೊಂಡಿವೆ.

ಸವದತ್ತಿ, ರಾಮದುರ್ಗ, ರಾಯಬಾಗ, ಅಥಣಿ ಅಂತಹ ಭಾರೀ ಬಯಲು ಸೀಮೆ ಪ್ರದೇಶಗಳೇನು ಅಲ್ಲ. ಅಲ್ಲಿಯೂ ಕೂಡ ಹಸಿರು ಮತ್ತು ಸ್ವಲ್ಪ ಮಟ್ಟಿಗೆ ಸಣ್ಣ ಗುಡ್ಡಗಳು ಇವೆ. ಖಾನಾಪುರದಲ್ಲಿ ಅನೇಕ ಚಾರಣ ಯೋಗ್ಯ ಸ್ಥಳಗಳಿವೆ. ಲೊಂಡಾದ ಬಳಿ ಇರುವ ದೂಧಸಾಗರ ಫಾಲ್ಸ್ ಅಂತೂ ನಯನ ಮನೋಹರ (ಇದು ಉ.ಕ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದಾದರೂ ಬೆಳಗಾವಿಗೆ ಹತ್ತಿರ). ಬೆಳಗಾವಿ ಹತ್ತಿರದಲ್ಲೇ ಅಂಬೋಲಿ, ತಿಲಾರಿ ಅಂತಹ ಅನೇಕ ಪ್ರವಾಸ ಯೋಗ್ಯ ಸ್ಥಳಗಳಿವೆ. ಆದ್ರು ಅವು ಮಹಾರಾಷ್ಟ್ರ ರಾಜ್ಯದ ವ್ಯಾಪ್ತಿಗೆ ಬರುತ್ತವೆ. ಇನ್ನು ಜಿಲ್ಲೆಯಲ್ಲಿ ಗೋಕಾಕ ಜಲಪಾತ, ಸೊಗಲ ಜಲಪಾತ, ಗೊಡಚನಮಲ್ಕಿ ಧಬಧಬಿ ಕಣ್ಮನ ಸೆಳೆಯುತ್ತವೆ. ಗೋಕಾಕ ಜಲಪಾತದ ಮೇಲೆ ಇರುವ ತೂಗು ಸೇತುವೆಯಂತೂ ಮೈನವಿರೇಣಿಸುವ ಅನುಭವ ನೀಡುತ್ತದೆ. ಇದೇ ಗೋಕಾಕ ತಾಲ್ಲೂಕಿನಲ್ಲಿ ರಂಗನತಿಟ್ಟು ಪಕ್ಷಿಧಾಮದ ತರಹವೇ ದೂಪಧಾಳ ಪಕ್ಷಿಧಾಮ ಅನೇಕ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.

ಜಿಲ್ಲೆಯಲ್ಲಿ ಯಾವುದೇ ಭಾರೀ ನೀರಾವರಿ ಯೋಜನೆಗಳು ಇರದಿದ್ದರೂ ಕೃಷ್ಣ, ಘಟಪ್ರಭ, ಮಲಪ್ರಭ, ವೇದಗಂಗ, ದೂಧಗಂಗ, ಮಾರ್ಕಂಡೆಯ, ಹಿರಣ್ಯಕೇಷಿ ನದಿಗಳು ಹರಿದು ನೀರಿನ ಕೊರತೆಯನ್ನು ಬಹುತೇಕ ಮಟ್ಟಿಗೆ ನೀಗಿಸುತ್ತವೆ. ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳು ಉತ್ತಮ ಮಳೆಯನ್ನು ಕಾಣುತ್ತವೆ. ಬಯಲು ಸೀಮೆಯಲ್ಲೂ ಕೂಡ ಅಗತ್ಯಕ್ಕೆ ತಕ್ಕ ಮಳೆ ಆಗುವುದರಿಂದ ಬರದ ಸಮಸ್ಯೆ ಇಲ್ಲ. ಬೆಳಗಾವಿಯಲ್ಲಿ ಅಂತೂ ಮಳೆಗಾಲದಲ್ಲಿ ಛತ್ರಿ ಇಲ್ಲದೆ ನಾಲ್ಕು ತಿಂಗಳು ಕಳೆಯಲು ಸಾಧ್ಯವೇ ಇಲ್ಲ. ಇನ್ನು ಬಿಸಿಲಿನ ಬಗ್ಗೆ ಹೇಳುವುದಾದರೆ ಇಲ್ಲಿ ಉಷ್ಣಾಂಶ ಮಲೆನಾಡು ಮತ್ತು ಅರೆ ಮಲೆನಾಡು ಭಾಗದಲ್ಲಿ 30-35 ಡಿ.ಸೆ ಮತ್ತು ಬಯಲು ಸೀಮೆಯಲ್ಲಿ 32-38 ಡಿ.ಸೆ ಇರುತ್ತದೆ. ಇನ್ನು ಉಳಿದದ್ದು ಚಳಿಗಾಲ? ಅಬ್ಬಾ ನೆನಪಿಸಿಕೊಂಡರೆ ಮೈ ಜುಂ ಅನ್ನುತ್ತದೆ. ಬೆಳಿಗ್ಗೆ ಎಂಟು ಘಂಟೆಯವರಗೆ ಮಂಜು ಮುಸುಕಿ ಮನೆಯಲ್ಲಿ ಬೆಚ್ಚಗೆ ಬಿದ್ದುಕೊಳ್ಳಿ ಅನ್ನೊ ಹಾಗೆ ಇರ್ತ್ತದೆ.

ಘಟಪ್ರಭೆಗೆ ಹುಕ್ಕೆರಿ ತಾಲ್ಲೂಕಿನ ಹಿಡ್ಕಲ್ ಬಳಿ ಕಟ್ಟಿರುವ ಜಲಾಶಯ ಮತ್ತು ಮಲಪ್ರಭೆಗೆ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿ ಕಟ್ಟಿರುವ ಜಲಾಶಯ ಜಿಲ್ಲೆಯ ಪ್ರಮುಖ ಜಲಾಶಯಗಳು. ಎರಡು ಗುಡ್ಡಗಳ ನಡುವೆ ನವಿಲುತೀರ್ಥ ಜಲಾಶಯ ಕಟ್ಟಲಾಗಿದ್ದು ಸವದತ್ತಿ ರೇಣುಕಾ ಯಲ್ಲಮ್ಮ ತಾಯಿಗೆ ಕಳಶಪ್ರಾಯವಾಗಿದೆ. ಬೆಳಗಾವಿಯ ಮಿಲಿಟರಿ ಪ್ರದೇಶ ಹಚ್ಚ ಹಸುರಿನಿಂದ ಕೂಡಿದೆ. ಬೆಂಗಳೂರಿನ ಹಾಗೇ ಬೆಳಗಾವಿ ಉದ್ಯಾನ ನಗರಿ ಅಲ್ಲದಿದ್ದರೂ ಅಂಥಹದೇ ತಂಪಾದ ವಾತಾವರಣವನ್ನು ಹೊಂದಿದೆ. ತನಗೆ ಎರಡನೇ ರಾಜಧಾನಿಯಾಗುವ ಅರ್ಹತೆಯನ್ನು ಸಾರಿ ಹೇಳುತ್ತದೆ.

(ಮುಂದಿನ ಭಾಗದಲ್ಲಿ ಸಾಂಸ್ಕೃತಿಕವಾಗಿ ಬೆಳಗಾವಿ ಎಷ್ಟು ಸಮೃದ್ಧವಾಗಿದೆ ಮತ್ತು ರಾಜಕೀಯವಾಗಿ ಎಷ್ಟು ಶಕ್ತಿಶಾಲಿಯಾಗಿದೆ ಎಂಬ ಬಗ್ಗೆ ಮಾಹಿತಿ ದೊರೆಯಲಿದೆ. ನಿರೀಕ್ಷಿಸಿ.)

English summary
All about Belgaum. Facts and overall information about Belgaum district by Mahesh Gajabar. One part of Belgaum has western ghat. Thick forest, good trekking spots, number of water falls has made Belgaum one of the favourite spots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X