• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಲೆಗಡುಕ ಇಂಗ್ಲಿಷ್ ಭಾಷೆಯಿಂದ ಎಚ್ಚರ!

By Prasad
|

ಕನ್ನಡ ಭಾಷೆ ಈಗ ನಿಜವಾಗಿ ಕಷ್ಟಕ್ಕೆ ಸಿಕ್ಕಿದೆ. ಅದರ ಮೇಲೆ ಇಂಗ್ಲಿಷಿನಂಥ ಕೊಲೆಗಡುಕ ಭಾಷೆಯ ಕಣ್ಣು ಬಿದ್ದಿದೆ. ಜಾಗತೀಕರಣದ ಪರಿಣಾಮವಾಗಿ ಕನ್ನಡವನ್ನು ಮಾತನಾಡುವ ಎಲ್ಲ ಪ್ರದೇಶಗಳಲ್ಲಿಯೂ ಇಂಗ್ಲಿಷ್ ನುಗ್ಗುತ್ತ ಇದೆ. ನಮ್ಮ ಶಿಕ್ಷಣ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಪರದೇಶಗಳ ಬೋಧನ ಪದ್ಧತಿಗಳನ್ನು ಆಮದು ಮಾಡುತ್ತಾ ಸ್ವಂತಿಕೆಯನ್ನು ಶಿಕ್ಷಕರು ಕಳೆದುಕೊಳ್ಳುತ್ತಿದ್ದಾರೆ. ಶಿಕ್ಷಣದಲ್ಲಿ ಕನ್ನಡವನ್ನು ಉಳಿಸಿಕೊಳ್ಳಲಾರದೆ ಹೋದರೆ ಅಪಾಯ ತಪ್ಪಿದ್ದಲ್ಲ. ಇದನ್ನು ಎಷ್ಟು ಒತ್ತಿ ಹೇಳಿದರೂ ಸಾಲದಾಗಿದೆ. ಈ ಆಕ್ರಮಣಶೀಲದಿಂದ ನಗರಪ್ರದೇಶಗಳಲ್ಲಿ ಕನ್ನಡದ ಪ್ರಯೋಗ ಕಡಿಮೆಯಾಗುತ್ತಾ ಇದೆ. ಈ ಸ್ಥಿತಿಯನ್ನು ಒಂದು ಜನಾಂದೋಳನದ ಮೂಲಕ ಬದಲಾವಣೆ ಮಾಡಬೇಕು. ಕನ್ನಡವು ಎರಡನೆಯ ಸ್ಥಾನಕ್ಕೆ ತಳ್ಳಲ್ಪಡುವ ಅಪಾಯವಿದೆ. ಇಂಗ್ಲಿಷ್ ಭಾಷೆಯೇ ಪ್ರಧಾನವಾಗಿ ಬೆಳೆಯುತ್ತಿರುವ ಎಲ್ಲ ದೇಶಗಳಲ್ಲಿಯೂ ಈ ಹೆದರಿಕೆ ಇದೆ. ಕೆನಡಾ ದೇಶದಲ್ಲಿ ಫ್ರೆಂಚ್ ಪ್ರಥಮ ಭಾಷೆಯಾದರೂ ಇಂಗ್ಲಿಷ್ ಭಾಷೆಯಿಂದ ಅದಕ್ಕೆ ಹೆದರಿಕೆ ಇದೆ. ಇದನ್ನು ಆ ದೇಶದಲ್ಲಿ ಪ್ರಮುಖ ಸಮಸ್ಯೆ ಎಂದು ಪರಿಗಣಿಸಿದ್ದಾರೆ. ಕನ್ನಡ ಸಾಯುವುದಿಲ್ಲ ಎಂಬುದು ನಿಜ. ಆದರೆ ಕರ್ನಾಟಕದಲ್ಲಿ ಅದು ತನ್ನ ಪ್ರಥಮ ಸ್ಥಾನವನ್ನು ಎಂದೂ ಕಳೆದುಕೊಳ್ಳಬಾರದು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಅದನ್ನು ಸ್ಥಿರವಾಗಿ ಉಳಿಸಬೇಕು. ಕನ್ನಡ ನಾಡಿನ ಎಲ್ಲರೂ ಈ ಸ್ಥಿತಿಯನ್ನು ತೀವ್ರವಾಗಿ ಗಮನಿಸಬೇಕು. ಪತ್ರಿಕಾಕರ್ತರು ಸಮೂಹಮಾಧ್ಯಮಗಳು ಮುಖ್ಯವಾಗಿ ಸಿನಿಮಾಲೋಕ ಇದನ್ನು ತಮ್ಮ ಕರ್ತವ್ಯಗಳಲ್ಲಿ ಒಂದಾಗಿ ಪರಿಗಣಿಸಬೇಕು. ಕನ್ನಡದ ಎಲ್ಲ ಸಂಘ ಸಂಸ್ಥೆಗಳೂ ಒಟ್ಟಾಗಿ ಕಾರ್ಯವನ್ನು ನಿರ್ವಹಿಸಬೇಕು. ನನ್ನ ಮಾತನ್ನು ಎಚ್ಚರಿಕೆಯ ಗಂಟೆ ಎಂದು ಭಾವಿಸಬೇಕಾಗಿ ವಿನಂತಿ.

ಕನ್ನಡ ಸಿನಿಮಾ ಪ್ರಪಂಚವನ್ನು ನೆನೆದಾಗ ಈ ಲೋಕಕ್ಕೇ ಅಪಾಯ ಸಂಭವಿಸುತ್ತ ಇರುವುದು ನನ್ನ ಗಮನಕ್ಕೆ ಬಂದಿದೆ. ಇಷ್ಟು ದಿನಗಳೂ 'ಡಬ್ಬಿಂಗ್" ಎಂಬ ಅವ್ಯವಹಾರದಿಂದ ದೂರವಾಗಿದ್ದು ಸುಖವಾಗಿದ್ದ ಪ್ರಪಂಚಕ್ಕೆ ಈಗ 'ಡಬ್ಬಿಂಗ್" ಮತ್ತೆ ನುಗ್ಗುವ ಪ್ರಯತ್ನ ಮಾಡುತ್ತಿದೆಯಂತೆ. 'ಡಬ್ಬಿಂಗ್" ನಿಜವಾಗಿ ಕಲೇಯೇ ಅಲ್ಲ! ಅದು ಮತ್ತೆ ಕನ್ನಡ ಸಿನಿಮಾ-ದೂರದರ್ಶನಗಳಿಗೆ ತಲೆ ಹಾಕದಂತೆ ಕನ್ನಡಿಗರೆಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸುತ್ತೇನೆ.

ನಮ್ಮ ಸಮಾಜದಲ್ಲಿರುವ ಶೋಷಿತರ ಬಗ್ಗೆ ಒಂದು ಸಂಗತಿಯನ್ನು ಎಲ್ಲರ ಗಮನಕ್ಕೆ ತರಲು ಉದಾಹರಣೆಯನ್ನು ನೀಡುತ್ತೇನೆ. ೧೯೭೨ರಲ್ಲಿ ನಮ್ಮ ರಾಜ್ಯದ ಮಂತ್ರಿಮಂಡಲದಲ್ಲಿ ಜನಪ್ರಿಯ ಮಂತ್ರಿಯಾಗಿದ್ದ ಬಸವಲಿಂಗಪ್ಪನವರು ಕೈಗೊಂಡ ಒಂದು ತೀರ್ಮಾನ ಎಲ್ಲ ಪ್ರಜೆಗಳ ಮನಸ್ಸಿಗೆ ಸಂತೋಷವನ್ನು ಉಂಟುಮಾಡಿತು. ಶೋಷಿತವರ್ಗದ ಒಂದು ಪಂಗಡದವರು ಮಾನವ ಮಲವನ್ನು ತಲೆಯ ಮೇಲೆ ಹೊತ್ತು ಸಾಗಿಸುತ್ತಿದ್ದರು. ಈ ಅಭ್ಯಾಸವು ಕೂಡಲೇ ನಿಲ್ಲಬೇಕೆಂದು ಆದೇಶ ಜಾರಿಗೆ ಬಂತು. ಮಾನವ ಹಕ್ಕುಗಳನ್ನು ಚಾಲ್ತಿಗೆ ತಂದ ತೀರ್ಮಾನವಾಗಿತ್ತು ಅದು. ಈ ಆದೇಶವು ಬಂದು ಸುಮಾರು ನಲವತ್ತು ವರ್ಷಗಳಾಗಿವೆ.

ಈಚೆಗೆ ಕರ್ನಾಟಕ ಪ್ರದೇಶದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಶ್ರೀ ಎಸ್.ಆರ್. ನಾಯಕ್ ಅವರು, 2010 ರ ಜುಲೈ ತಿಂಗಳಲ್ಲಿ ಬರೆದ ಲೇಖನದಲ್ಲಿ, ಸವಣೂರಿನಲ್ಲಿ ಅತಿ ಶೋಷಿತವರ್ಗದವರು ತಮ್ಮ ತಲೆಯ ಮೇಲೆ ಮಾನವ ಮಲವನ್ನು ಕದಡಿದ ನೀರಿನಿಂದ ಅಭಿಷೇಕ ಮಾಡಿಕೊಂಡು ಬಂಡಾಯವನ್ನು ನಡೆಸಿದ ಬಗ್ಗೆ ಬರೆದಿದ್ದರು. ಈ ವಿಚಾರದ ಬಗ್ಗೆ ೨೦೦೮ರಲ್ಲಿಯೇ ಸರಕಾರಕ್ಕೆ ಈ ಭಂಗಿ ಪದ್ಧತಿಯನ್ನು ನಿಲ್ಲಿಸಲು ಏರ್ಪಾಡು ಮಾಡಬೇಕೆಂದು ತಿಳಿಸಿ ಪತ್ರವನ್ನು ಬರೆದಿದ್ದನ್ನು ಉಲ್ಲೇಖಿಸಿದ್ದಾರೆ. ಆದರೆ ಏನೂ ಆಗಲಿಲ್ಲವೆಂದು ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ. ಹೀಗಿದ್ದೂ ಇಂಥ ಅತಿ ಅಮಾನವೀಯವಾದ ಈ ಪದ್ಧತಿಯನ್ನು ನಿಲ್ಲಿಸುವ ಒಂದು ಕಾರ್ಯವನ್ನು ಯಾವ ಪಕ್ಷ ಮಾಡಿದ್ದರೂ ಅದರ ಕೀರ್ತಿ ಆಕಾಶಕ್ಕೇರುತ್ತಿತ್ತು. ಎಂಥ ಅವಕಾಶವನ್ನು ನಮ್ಮ ಶಾಸಕರು ಕಳೆದುಕೊಂಡರಲ್ಲ ಎಂದು ವ್ಯಥೆಯಾಗುತ್ತದೆ. ನಮ್ಮ ಕೇಂದ್ರ ಸರಕಾರವು ವಿಶ್ವಸಂಸ್ಥೆಯ ಸಾರ್ವಜನಿಕ ಸಭೆಗೆ ವರದಿಯನ್ನು ಕಳಿಸುವಾಗ ನಮ್ಮ ದೇಶದಲ್ಲಿ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಗೌರವಿಸಲಾಗಿದೆ ಎಂದೇ ಕಳಿಸುತ್ತದೆ. ಎಂಥ ವಿಪರ‍್ಯಾಸ. ನಾವೆಲ್ಲ ಸಾಮಾನ್ಯರಲ್ಲಿ ಸಾಮಾನ್ಯರಾದ ಜನತೆ. ಶಾಸಕರಿಗೆ ಏನು ಹೇಳಬಹುದು?

ಈಗ ಕರ್ನಾಟಕವು ಭಾರತದಲ್ಲಿಯೇ ಅತ್ಯಂತ ಭ್ರಷ್ಟವಾದ ರಾಜ್ಯ ಎಂಬ ಹೆಸರನ್ನು ಸಂಪಾದಿಸಿಬಿಟ್ಟಿದೆ. ಭಾರತದ ಸಂವಿಧಾನವು ಒಂದು ಉತ್ಕೃಷ್ಟ ರಾಜ್ಯಧರ್ಮಶಾಸ್ತ್ರದಂತೆ ಇದೆ ಎಂದು ಹೆಸರು ಪಡೆದಿದೆ. ಹೀಗಿದ್ದೂ ಅದನ್ನು ತಿರಸ್ಕರಿಸಿ ರಾಜಕೀಯ ಪಕ್ಷಗಳು ಅಧಿಕಾರ ದಾಹದಿಂದ ಕಚ್ಚಾಡುತ್ತಿವೆ. ಬಯ್ಗಳು ಅಸಮರ್ಥರ ಆಯುಧ. ಅದು ದುರ್ಬಲರು ಉಪಯೋಗಿಸುವ ಚುಚ್ಚುಗತ್ತಿ. ಅದನ್ನು ಉಪಯೋಗಿಸಬಾರದು. ಹಲವು ಶಾಸಕರ ಮಾತಿನಲ್ಲಿ, ನಡೆಯಲ್ಲಿ, ವ್ಯವಹಾರದಲ್ಲಿ, ಯಾವುದರಲ್ಲಿಯೂ ಗಾಂಭೀರ್ಯವಾಗಲಿ, ಸುಸಂಸ್ಕೃತಿಯಾಗಲಿ ಕಾಣಬರುತ್ತಿಲ್ಲ. ಪ್ರಜಾವರ್ಗದ ನೆಮ್ಮದಿ ಕೆಟ್ಟಿದೆ. ಗೊಂದಲದಿಂದ ಸಮಾಧಾನ ನಾಶವಾಗಿದೆ. ಪ್ರಜೆಗಳಲ್ಲಿ ನಾವೇಕೆ ಇಂಥ ಅಸಮರ್ಥರನ್ನು ಶಾಸಕರನ್ನಾಗಿ ಮಾಡಿದೆವು ಎಂದು ತಮ್ಮನ್ನೂ ಎಲ್ಲ ಪಕ್ಷಗಳನ್ನೂ ನಿಂದಿಸುತ್ತಾ ಇದ್ದಾರೆ. ಪ್ರಜೆಗಳನ್ನು ಕಾಪಾಡುವವರೇ ಕಾದಾಡಿದರೆ ಎಂಥ ವಿಪರ‍್ಯಾಸ.

ಈ ಕಾದಾಟ ಪಕ್ಷದ್ವೇಷ ಅಥವಾ ಅಧಿಕಾರ ದಾಹ ಎಂಬ ಒಂದು ದುರಂತ ನಾಟಕವಾಗಿಬಿಟ್ಟಿದೆ. ದಿನಕ್ಕೊಂದು ದೃಶ್ಯ, ವಾರಕ್ಕೊಂದು ಅಂಕ ಎಂಬಂತೆ ಇದು ಮುಂದುವರಿದಿದೆ. ನಮಗೆ ಇದು ದುರಂತ. ಇತರ ಪ್ರಾಂತಗಳವರಿಗೆ ಪ್ರಹಸನ. ಹೀಗೆ ಇಮ್ಮುಖವಾದ ಈ ನಾಟಕವು ಇನ್ನೂ ಕ್ಲೆ ಮಾಕ್ಸ್ ಎಂಬ ಶಿಖರ ತಲುಪಿಲ್ಲ. ಇಷ್ಟರಲ್ಲೇ ತಲುಪಬಹುದು. ಇನ್ನು ಡಿನೂಮೆಂಟ್ ಎಂಬ ಪರಿಣಾಮ ಏನಾಗುತ್ತದೋ ಯಾರು ಬಲ್ಲರು. ಕಾದು ನೋಡೋಣ. ನಾವೇನು ತಾನೇ ಮಾಡಬಹುದು?

ಕನ್ನಡ ತಾಯಿ ಭುವನೇಶ್ವರಿ ನಮ್ಮ ನಾಯಕಮಣಿಗಳಾದ ಈ ರಾಜಕೀಯ ವ್ಯಕ್ತಿಗಳಿಗೆ ಸನ್ಮತಿಯನ್ನು ನೀಡಲಿ ಎಂದು ಪ್ರಾರ್ಥಿಸಬೇಕಾಗಿದೆ. ರಾಜಕೀಯ ಪಕ್ಷಗಳಿಗೆ ಅಧಿಕಾರದ ಹುಚ್ಚು ದಾಹವನ್ನು ಬಿಟ್ಟು ನಾಡಿನ ಸೌಖ್ಯಕ್ಕೆ ದುಡಿಯುವ ಬುದ್ಧಿಯು ಬರಲಿ ಎಂದು ಹಾರೈಸೋಣ. ಪ್ರಜೆಗಳಾದ ನಾವು ಇಂಥ ವರ್ಗದಿಂದ ಬೇರೆಯಾಗಿ

ತಲೆತುಂಬ ಕಲಿಯೋಣ

ತಲೆ ಎತ್ತಿ ನುಡಿಯೋಣ

ತಲೆಬಾಗಿ ಬಾಳೋಣ

ಸಿರಿಗನ್ನಂಡಗೆಲ್ಗೆ

- ಜಿ. ವೆಂಕಟಸುಬ್ಬಯ್ಯ, ಬೆಂಗಳೂರು

04-102-2011

« ಸಮ್ಮೇಳನಾಧ್ಯಕ್ಷ ಜಿವಿ ಭಾಷಣದ ಪೂರ್ಣಪಾಠ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Keynote address by Prof G Venkatasubbaiah, president 77th All India Kannada Sahitya Sammelana, Bengaluru. Here is the full text of G Venkatasubbaiah's speach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more