• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನಲ್ಲಿ ಕನ್ನಡವನ್ನು ಉಳಿಸುವುದು ಹೇಗೆ?

By * ಪ್ರೊ. ಜಿ ವೆಂಕಟಸುಬ್ಬಯ್ಯ
|

ಬೆಂಗಳೂರಿನ ಪ್ರಶ್ನೆಯೇ ಬೇರೆ. ಬೆಂಗಳೂರಿನಲ್ಲಿ ಕನ್ನಡವನ್ನು ಉಳಿಸುವುದು ಸಾಧ್ಯವೇ? ಬೆಂಗಳೂರಿನಲ್ಲಿರುವ ಕನ್ನಡಿಗರ ಜನಸಂಖ್ಯೆ ಈಗ ಶೇಕಡ ೩೦ಕ್ಕೆ ಇಳಿದಿದೆ. ಇನ್ನೂ ಕಡಮೆಯಾಗುತ್ತಾ ಇದೆ. ತೆಲುಗು, ತಮಿಳು, ಹಿಂದಿ, ಉರ್ದು, ಮರಾಠಿ, ಗುಜರಾತಿ, ಬಂಗಾಳಿ, ಸಿಂಧಿ ಭಾಷೆಗಳು ಸ್ಪರ್ಧೆಯನ್ನು ಹೂಡುತ್ತಿವೆ. ಈ ಎಲ್ಲ ಭಾಷೆಗಳ ನಡುವೆ ಇಂಗ್ಲಿಷಿಗೆ, ಹಿಂದಿಗೆ ಅಧಿಕವಾದ ಸ್ಥಾನ ಸಿಕ್ಕಿದೆ. ಹೀಗಿರುವಾಗ ಈ ಬೃಹನ್ನಗರದಲ್ಲಿ ಕನ್ನಡವನ್ನು ಉಳಿಸಲು ಕೆಲವು ಪ್ರಯತ್ನಗಳನ್ನು ಮಾಡುತ್ತಾ ಇದ್ದಾರೆ. ಉನ್ನತ ಕೈಗಾರಿಕೆಯ ಉದ್ಯಮಗಳಲ್ಲಿರುವ ಕನ್ನಡಿಗರಿಂದ ಕನ್ನಡಿಗರಲ್ಲದವರಿಗೆ ಕನ್ನಡವನ್ನು ಕಲಿಸುವ ಪ್ರಯತ್ನಗಳಾಗುತ್ತಿವೆ. ಇಂಥ ಪ್ರಯತ್ನಗಳಿಂದ ಆಗುವ ಪ್ರತಿಫಲ ಕಡಿಮೆ. ಇದಕ್ಕಿಂತ ಹೆಚ್ಚು ತೀವ್ರವಾದ ಸಾರ್ವಜನಿಕ ಪ್ರಯತ್ನಗಳಾಗಬೇಕು. ಕರ್ನಾಟಕದಲ್ಲಿರುವ ಐಟಿ, ಬಿಟಿ ಮೊದಲಾದ ಉದ್ಯಮಗಳು ಸಾವಿರಾರು ಜನರಿಗೆ ಉದ್ಯೋಗಗಳನ್ನು ನೀಡಿವೆ. ಇವರಲ್ಲಿ ಕನ್ನಡದ ಜನ ಕಡಿಮೆ ಹೊರಗಿನವರು ಅಧಿಕ. ಹೀಗೆ ಹೊರಗಿನಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಉದ್ಯೋಗಿಗಳು ಕನ್ನಡವನ್ನು ಉತ್ಸಾಹದಿಂದ ಕಲಿಯುವಂತೆ ಮಾಡುವ ಕಾರ್ಯವನ್ನು ಎಲ್ಲ ಉದ್ಯಮಪತಿಗಳು ಮಾಡಲೇಬೇಕೆಂದು ನಾನು ಒತ್ತಾಯ ಮಾಡುತ್ತೇನೆ. ಹೀಗೆ ಕನ್ನಡ ಕಲಿತರೆ ಅವರು ನಮ್ಮ ಕನ್ನಡಿಗರೇ ಆಗುತ್ತಾರೆ. ಇದರಿಂದ ಸೌಹಾರ್ದ ಉಂಟಾಗುತ್ತದೆ.

ಎಲ್ಲ ಕನ್ನಡಿಗರೂ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯೂ ಕರ್ನಾಟಕ ಸರಕಾರವೂ ಈ ಬಗ್ಗೆ ತುಂಬ ಎಚ್ಚರವಹಿಸಬೇಕು. ತಮಿಳು ನಾಡಿನಲ್ಲಿ ಸರಕಾರವು ಮಾಡಿರುವ ಕೆಲವು ಪ್ರಯತ್ನಗಳೂ ಸಫಲವಾಗಿವೆ. ನಾವೂ ಆ ಮಾರ್ಗವನ್ನೇ ಉಪಯೋಗಿಸಬೇಕು.

ಇದು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಷಯ. ಎಷ್ಟೇ ಭಾಷೆಗಳ ಜನ ಬೆಂಗಳೂರಿಗೆ ಬಂದು ಸೇರಿದರೂ ಆ ಭಾಷೆಯ ಜನರ ಮಕ್ಕಳಿಗೆ ವಿದ್ಯಾಭ್ಯಾಸ ಬೇಕು ತಾನೆ. ಅವರವರು ಸ್ವಂತ ಭಾಷೆಯ ಶಾಲೆಗಳನ್ನು ಮಾಡಿಕೊಂಡಿದ್ದಾರೆ. ಈ ಎಲ್ಲ ಶಾಲೆಗಳಲ್ಲಿ ಎಲ್ಲ ಮಕ್ಕಳು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಭಾಷೆಯಾಗಿ ಕಲಿಯಲೇಬೇಕೆಂಬ ಬಿಗಿಯಾದ ಕಾನೂನನ್ನು ಸರಕಾರ ಕೂಡಲೇ ಜಾರಿಗೆ ತರಬೇಕು. ಇದು ಸಾಧ್ಯವಾದರೆ ಹತ್ತೇ ವರ್ಷಗಳಲ್ಲಿ ಎಲ್ಲ ಪರಕೀಯರ ಮಕ್ಕಳೂ ಕನ್ನಡಿಗರಾಗಿಬಿಡುತ್ತಾರೆ. ಇಂಥ ಪದ್ಧತಿಗೆ ಭಾರತದ ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿಗೆ ಒಪ್ಪಿಗೆ ನೀಡಿದೆ. ಇಷ್ಟೆಲ್ಲ ಅವಕಾಶವಿದ್ದರೂ ನಾವು ಈ ದಿಕ್ಕಿನಲ್ಲಿ ಪ್ರಯತ್ನವನ್ನು ಮಾಡುತ್ತಿಲ್ಲ. ಬೆಂಗಳೂರಿನಲ್ಲಿ ಕನ್ನಡ ಉಳಿಯಬೇಕಾದರೆ ಮೊದಲು ಮಾಡಬೇಕಾದ ಕಾರ್ಯ ಇದು. ಇದನ್ನು ಬಿಟ್ಟರೆ ಬೇರೆ ಮಾರ್ಗವೇ ಇಲ್ಲ-ಸಾಮಾಜಿಕವಾಗಿ.

ನಮ್ಮ ಸರಕಾರವೇ 'ಅಲ್ಪಸಂಖ್ಯಾತರು" ಎಂಬ ಹೆಸರಿನ ಅಡಿಯಲ್ಲಿ ಅಂಥ ಅನೇಕ ಶಾಲೆಗಳಿಗೆ ಅವಕಾಶವನ್ನು ಕಲ್ಪಿಸಿದೆ. ಈ ಅವಕಾಶವನ್ನು ಪಡೆದವರು ವೀರಭದ್ರನಂತೆ ವರ್ತಿಸುತ್ತಿದ್ದಾರೆ. ಈ ಎಲ್ಲ ಶಾಲೆಗಳವರೂ ತಮ್ಮ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಿ, ಬಹುಸಂಖ್ಯಾತ ಕನ್ನಡಿಗರೊಡನೆ ಹಾಲು ಜೇನಿನಂತೆ ಬೆರೆತು ಬಾಳುವುದನ್ನೂ ಕಲಿಸಬೇಕು. ಅದು ಸಾಧ್ಯವಾಗದೆ ಹೋದರೆ ಸರಕಾರದ ಕಾನೂನಿನ ಅಂಕುಶವನ್ನು ಪ್ರಯೋಗಿಸಬೇಕಾದ ಪರಿಸ್ಥಿತಿ ಬರಲೇಬೇಕಾಗುತ್ತದೆ. ಅದರಿಂದ ಅಲ್ಪಸಂಖ್ಯಾತರಿಗೆ ಪ್ರಯೋಜನವೇ ಹೊರತು ಅಪಕಾರವೇನೂ ಇಲ್ಲ.

ಸ್ವಂತ ಭಾಷೆಯನ್ನು ರಕ್ಷಿಸಿ ಬೆಳೆಸುವ ರೀತಿಯಲ್ಲಿ ಚೀನಾದೇಶವು ಮಾಡುತ್ತಿರುವ ಪ್ರಯತ್ನವು ಎಲ್ಲ ಭಾಷೆಗಳವರಿಗೂ ಮಾದರಿಯಾಗಿದೆ. ಅಮೆರಿಕದಲ್ಲಿರುವ ಚೀನಾ ದೇಶೀಯರ ಮಕ್ಕಳಿಗೆ ಚೀನಾ ದೇಶದ ಆಡಳಿತ ಭಾಷೆಯಾಗಿರುವ ಮಂಡಾರಿನ್ ಭಾಷೆಯನ್ನು ಕಲಿಸುವ ಏರ್ಪಾಟನ್ನು ನಾವು ಪರಿಶೀಲಿಸಬೇಕು. ಅಮೆರಿಕದ ಚೀನಿ ಭಾಷೆಯ ಶಾಲೆಗಳಲ್ಲಿ ಕಿಂಡರ್‌ಗಾರ್ಟನ್ ಮತ್ತು ಪ್ರಥಮ ತರಗತಿಗಳಲ್ಲಿ ಪಾಠದ ಮಾಧ್ಯಮವು ಚೀನಿ ಭಾಷೆಯಲ್ಲಿಯೇ ನಡೆಯುತ್ತದೆ. ಎರಡನೆಯ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಕಲಿಸುತ್ತಾರೆ. ಆರನೆಯ ತರಗತಿಯವರೆಗೆ ಅರ್ಧ ಚೀನಿ, ಅರ್ಧ ಇಂಗ್ಲಿಷ್ ಭಾಷೆಯಲ್ಲಿ ಪಾಠಗಳಾಗುತ್ತವೆ. ಅಲ್ಲಿಯೂ ಚೀನಿ ಆವರಣದಲ್ಲಿಯೇ ಪಾಠಗಳಾಗುತ್ತವೆ. ಇಲ್ಲಿಗೆ ಬರುವ ಅಧ್ಯಾಪಕರೆಲ್ಲ ಟೈವಾನ್ ಅಥವಾ ಚೀನಾ ದೇಶದಿಂದಲೇ ಬರುತ್ತಾರೆ. ಪ್ರಾರಂಭದಲ್ಲಿ ಈ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡುವುದರಲ್ಲಿ ಹಿಂದೆ ಬಿದ್ದರೂ ಬರಬರುತ್ತಾ ಎರಡು ಭಾಷೆಗಳಲ್ಲೂ ಸ್ಪಷ್ಟವಾಗಿ ಪರಿಣಾಮದಾಯಕವಾಗಿ ಮಾತನಾಡುತ್ತಾರೆ-ಅಲ್ಲದೆ, ಅವರ ಸೃಷ್ಟಿಶೀಲ ವ್ಯಕ್ತಿತ್ವ ಹೆಚ್ಚು ಪ್ರಭಾವಶಾಲಿಯಾಗಿ ಬೆಳಗುತ್ತದೆ. ಇಂಥ ಶಾಲೆಗೆ ಪ್ರಾರಂಭದಲ್ಲಿ ಏಷ್ಯಾ ಖಂಡದವರು ಹೆಚ್ಚಾಗಿ ಸೇರುತ್ತಿದ್ದರು. ಈಗ ಅಮೆರಿಕನರು, ಬಿಳಿ ಮತ್ತು ಕರಿಯ ಜನ ಮತ್ತು ಸ್ಪೇನಿನವರು ಬಂದು ಸೇರುತ್ತಿದ್ದಾರೆ. ಹೀಗೆ ಚೀನಾ ಶಾಲೆಗಳು ಜನಪ್ರಿಯವಾಗಿವೆ. ಅಮೆರಿಕದ ಸರಕಾರವು ಇಂಥ ಶಾಲೆಗಳಿಗೆ ಒಳ್ಳೆಯ ಅನುದಾನವನ್ನು ನೀಡುತ್ತಾ ಇದೆ. ಕನ್ನಡ ಜನರಿಗೂ ಇಂಗ್ಲಿಷ್ ಕಲಿಸುವ ಬಗ್ಗೆ ಇದು ಮಾದರಿಯಾಗಿದೆ. ಕನ್ನಡವು ಎಲ್ಲ ಶಾಲೆಗಳಲ್ಲಿ ಹತ್ತನೆಯ ತರಗತಿಯವರೆಗೆ ಕಡ್ಡಾಯವಾಗುವುದಾದರೆ ಇಂಗ್ಲಿಷನ್ನು ಎರಡು ಮೂರನೆಯ ತರಗತಿಯಿಂದಲೇ ಕಲಿಸುವುದು ತಪ್ಪಾಗುವುದಿಲ್ಲ.

ಕನ್ನಡನಾಡಿನ ಸರಕಾರದ ಶಿಕ್ಷಣ ಇಲಾಖೆಯ ಬಗ್ಗೆ ನನ್ನದು ತೀವ್ರ ಆಕ್ಷೇಪಣೆ ಇದೆ. ಅದರಲ್ಲಿರುವ ಕೆಲವು ಅಧಿಕಾರಿಗಳು ಕನ್ನಡದ ಬಗ್ಗೆ ನಿರ್ಲಕ್ಷ್ಯದಿಂದ ಇದ್ದಾರೆ. ಒಂದೆರಡು ಉದಾಹರಣೆಗಳನ್ನು ನೀಡುತ್ತೇನೆ; ಗಮನಿಸಬೇಕು. ಕಳೆದ ಡಿಸೆಂಬರ್ ೧೮ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ಒಂದು ಭಾರಿ ವರ್ತಮಾನ ಪ್ರಕಟವಾಗಿತ್ತು. ನಗರದ ಒಂದು ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ಮೂಗಿನ ಕೆಳಗೇ ಕನ್ನಡದ ಮಕ್ಕಳಿಗೆ ಆಂಧ್ರದ ಪಠ್ಯಪುಸ್ತಕಗಳನ್ನು ಬೋಧಿಸಲಾಗುತ್ತಿತ್ತು. ನಮ್ಮ ನಾಡು ಯಾವುದು? ಪ್ರಶ್ನೆ. ಉತ್ತರ: ಆಂಧ್ರಪ್ರದೇಶ. ನಮ್ಮ ರಾಜಧಾನಿ ಯಾವುದು? ಪ್ರಶ್ನೆ. ಉತ್ತರ: ಹೈದರಾಬಾದ್. ಆ ಮಕ್ಕಳ ಪೋಷಕರು ಮುಖ್ಯಾಧ್ಯಾಪಕರನ್ನು ಕಂಡು ಪ್ರಶ್ನಿಸಿದರೆ ಅವರು 'ನಾವು ಬೋಧಿಸುವುದೇ ಹೀಗೆ. ನಿಮಗೆ ಬೇಡದಿದ್ದರೆ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ" ಎಂದು ಹೇಳಿ ಗದರಿಸಿದರಂತೆ. ಆಂಧ್ರದ ಪಠ್ಯಗಳನ್ನು ಕೊಳ್ಳಲು ಪ್ರತಿಯೊಬ್ಬ ಮಗುವಿನಿಂದ 1800 ರೂಪಾಯಿಗಳನ್ನು ವಸೂಲಿ ಮಾಡಿದ್ದರಂತೆ. ಅವೆಲ್ಲ ಅಹಮದಾಬಾದಿನಲ್ಲಿ ಪ್ರಕಟಿಸಿದ ಪುಸ್ತಕಗಳು. ಈ ವರ್ತಮಾನ ಬಂದಮೇಲೆ ಶಿಕ್ಷಣ ಇಲಾಖೆ ಏನು ಮಾಡಿತೆಂಬುದರ ಬಗ್ಗೆ ಸಾರ್ವಜನಿಕರಿಗೆ ವಿವರಗಳನ್ನು ಕೂಡಲೇ ತಿಳಿಸಬೇಕು. ಶಿಕ್ಷಣ ಇಲಾಖೆಯಲ್ಲಿ ವಿಷಯ ಪರೀಕ್ಷಕರುಗಳೆಂಬ ಅಧಿಕಾರಿಗಳು ಇರುತ್ತಾರೆ. ಅವರೇನು ಮಾಡಿದರು? ಇನ್ನು ಎಷ್ಟು ಇಂಥ ಶಾಲೆಗಳಿವೆಯೋ ಬೆಂಗಳೂರು ನಗರದಲ್ಲಿ? ಇದನ್ನು ಔದಾಸೀನ್ಯದಿಂದ ಕಾಣುವ ಇಲಾಖೆಗೆ ನಾಡಿನ ಭಾಷೆಯ ಮೇಲೆ ಪ್ರೀತಿ ಇದೆ ಎನ್ನಬಹುದೆ? ಅಂಥ ಅಧಿಕಾರಿಗಳ ಮೇಲೆ ಸರಕಾರ ಏಕೆ ಕ್ರಮ ಜರುಗಿಸಿಲ್ಲ? ಆ ಶಾಲೆಯ ಆಡಳಿತ ವರ್ಗ ಇದುವರೆಗೆ ಕನ್ನಡಿಗರ ಕ್ಷಮೆ ಯಾಕೆ ಯಾಚಿಸಿಲ್ಲ?

ನಮ್ಮ ಶಿಕ್ಷಣ ಇಲಾಖೆಯ ಗಮನಕ್ಕೆ ಮತ್ತೊಂದು ವಿಷಯವನ್ನು ತರಬೇಕಾಗಿದೆ. ನಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳಲ್ಲಿ ಕನ್ನಡದ ಬೋಧನೆಗೆ ಅರ್ಹರಾದ ಶಿಕ್ಷಕರು ದೊರಕುತ್ತಿಲ್ಲ. ಹಿಂದೆ ಕನ್ನಡ ಅಥವಾ ಸಂಸ್ಕೃತ ಭಾಷೆಗಳಲ್ಲಿ ಒಂದು ಭಾಷೆಯನ್ನು ಬೋಧಿಸುವುದಕ್ಕೆ ತರಬೇತಿ ಶಾಲೆಗಳಲ್ಲಿ ವಿಶಿಷ್ಟವಾದ ತರಬೇತಿ ಪಡೆದ ಶಿಕ್ಷಕರಿರುತ್ತಿದ್ದರು. ಅವರಿಂದ ಕನ್ನಡ ಅಥವಾ ಸಂಸ್ಕೃತವನ್ನು ಕಲಿತರೆ ಅಂಥ ವಿದ್ಯಾರ್ಥಿಗಳು, ಕಾಗುಣಿತದಲ್ಲಿ ಒಂದೂ ತಪ್ಪು ಮಾಡುತ್ತಿರಲಿಲ್ಲ. ವಾಚನವನ್ನು ಚೆನ್ನಾಗಿ ಕಲಿಯುತ್ತಿದ್ದರು. ಕಾವ್ಯಾಸ್ವಾದನೆಯ ಸುಖವನ್ನೂ ಅನುಭವಿಸುತ್ತಿದ್ದರು. ಈಗಲಾದರೂ ನಮ್ಮಲ್ಲಿರುವ ಕನ್ನಡ ಶಿಕ್ಷಕರಲ್ಲಿ ಅರ್ಹರಾದವರನ್ನು ಆರಿಸಿ ಕನ್ನಡ ಬೋಧನೆಯಲ್ಲಿ ಸರಿಯಾದ ಮಾರ್ಗವನ್ನು ಕಲಿಸುವ ಶಿಬಿರಗಳನ್ನು ನಡೆಸಿ ಪ್ರತಿವರ್ಷವೂ ಕೊನೆಯಪಕ್ಷ ೧೦೦೦ ಶಿಕ್ಷಕರನ್ನು ಸಿದ್ಧಗೊಳಿಸಬೇಕು. ಇದು ನಡೆಯದೆ ಇದ್ದರೆ ಕನ್ನಡದ ಬಗ್ಗೆ ಬಾಲಕರಲ್ಲಿ ಪ್ರೀತಿ ಉಂಟಾಗುವುದಿಲ್ಲ. ಪ್ರೀತಿಯನ್ನು ಉಂಟುಮಾಡುವ ಶಿಕ್ಷಕರ ಸಂಖ್ಯೆ ಬೆಳೆಯಬೇಕು. ಕನ್ನಡವನ್ನು ಐಚ್ಛಿಕವಾಗಿ, ಆಳವಾಗಿ ಅಭ್ಯಾಸ ಮಾಡಿದವರೇ ಕನ್ನಡ ಶಿಕ್ಷಕರಾಗಬೇಕು. ನಮ್ಮ ನಾಡಿನ ಶಿಕ್ಷಣ ಇಲಾಖೆಗೆ ಈ ಬಗ್ಗೆ ಎಚ್ಚರಿಕೆಯನ್ನು ನಾಡಿನ ಶಾಸಕರು ನೀಡಬೇಕು.

ಎರಡನೆಯದಾಗಿ ಮತ್ತೊಂದು ಕೆಲಸ ಆಗಬೇಕು. ಕನ್ನಡ ನಾಡಿನ ಸರಕಾರದ ಎಲ್ಲ ಕಚೇರಿಗಳಲ್ಲಿಯೂ ಅಧಿಕಾರಿಗಳಿಗೆ ಬರುವ ಅರ್ಜಿಗಳು ಯಾವಾಗಲೂ ಕನ್ನಡದಲ್ಲಿಯೇ ಇರಬೇಕು. ಕನ್ನಡದಲ್ಲಿರದ ಯಾವ ಅರ್ಜಿಯನ್ನೂ ಸ್ವೀಕರಿಸಬಾರದು. ಹಾಗೆ ಸ್ವೀಕರಿಸಿದ ಅರ್ಜಿಗಳಿಗೆ ಸಂಬಂಧಿಸಿದ ಟೀಕೆ ಟಿಪ್ಪಣಿಗಳು ಯಾವಾಗಲೂ ಕನ್ನಡದಲ್ಲಿಯೇ ಇರಬೇಕು. ಹೀಗೆ ಮಾಡದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು. ಕನ್ನಡದ ಅಭಿವೃದ್ಧಿ ಪ್ರಾಧಿಕಾರವು ಅನೇಕ ಆದೇಶಗಳನ್ನು ಕಳಿಸಿದ್ದರೂ ಅಧಿಕಾರಿಗಳು ಅದನ್ನು ನಿರ್ಲಕ್ಷಿಸಿದ್ದಾರೆ. ಇದಕ್ಕೆ ಶಿಕ್ಷೆ ಇಲ್ಲದಿದ್ದರೆ ಏನು ಪ್ರಯೋಜನ? ನಮ್ಮ ಸರಕಾರ ಈ ದಿಕ್ಕಿನಲ್ಲಿ ತೀವ್ರ ಎಚ್ಚರಿಕೆಯನ್ನು ವಹಿಸಬೇಕು.

ಕನ್ನಡ ಭಾಷೆಯನ್ನು ವೃದ್ಧಿಪಡಿಸುವ ದಿಕ್ಕಿನಲ್ಲಿ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಕನ್ನಡ-ಕನ್ನಡ ಏಕಭಾಷಾ ನಿಘಂಟು ಒಂದು ಘನವಾದ ಕಾರ್ಯ. 1944ರಲ್ಲಿ ಪ್ರಾರಂಭವಾಗಿ 1994ರ ತನಕ ಆ ಕೆಲಸ ನೆರವೇರಿತು. ಅಂದರೆ ಸುಮಾರು ಐವತ್ತು ವರ್ಷಗಳು ನಿಘಂಟು ಕಚೇರಿಯಲ್ಲಿ ಆದ ಕೆಲಸ ಬಹುವ್ಯಾಪಕವಾದುದು. ಆ ಕಚೇರಿಯಲ್ಲಿ ಅನೇಕ ವಿಷಯ ಸಂಗ್ರಹಗಳಿವೆ. ಅದನ್ನು ಉಪಯೋಗಿಸುವ ಮುಂದಿನ ಕಾರ್ಯವನ್ನು ಮಾಡದೆ ಕಚೇರಿಗೆ ಬೀಗಮುದ್ರೆಯನ್ನು ಹಾಕಿ, ಶಾಶ್ವತವಾಗಿ ನೆರವೇರಬೇಕಾಗಿದ್ದ ಅತ್ಯಗತ್ಯವಾದ ಕಾರ್ಯವನ್ನು ನಿಲ್ಲಿಸಿಬಿಡುವ ಸಾಮರ್ಥ್ಯದ ಕನ್ನಡದ ಭಕ್ತರನ್ನೂ, ಪಡೆಯಿತು ನಮ್ಮ ಪರಿಷತ್ತು. ಹಿಂದೆ ಮುದ್ರಣವಾಗಿದ್ದ ನಿಘಂಟು ಸಂಪುಟಗಳು ಮಾರಾಟವಾಗಿ ಕೇಳುವವರಿಗೆ ಅನುಪಲಬ್ಧವಾಗಿತ್ತು. ಈಗಿನ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದರು ಸರಕಾರದಿಂದ ಅನುದಾನವನ್ನು ಪಡೆದು ಆ ನಿಘಂಟಿನ ೧೦೦೦೦ ಪುಟಗಳುಳ್ಳ ಎಂಟು ಸಂಪುಟಗಳ ೧೬ ಸಾವಿರ ಪ್ರತಿಗಳನ್ನು ಪುನರ್ಮುದ್ರಣ ಮಾಡಿದ್ದಾರೆ. ಈಗ ಆ ಪ್ರತಿಗಳು ದೊರಕುತ್ತಿವೆ. ಪುನರ್ಮುದ್ರಣವಾಗುವ ವೇಳೆಗೆ ಆಗಲೇಬೇಕಾಗಿದ್ದ ತಿದ್ದುಪಾಟುಗಳನ್ನು ಸೇರಿಸಿದ್ದರೆ ಉತ್ತಮ ಕಾರ್ಯವಾಗುತ್ತಿತ್ತು. ಈಗಲೂ ಆ ಕೆಲಸವನ್ನು ಮಾಡಬೇಕಾದರೆ ಆ ಕಚೇರಿಯನ್ನು ತೆರೆದು ನಿಘಂಟು ಕಾರ್ಯವನ್ನು ಮುಂದುವರಿಸಬೇಕು. ಆ ಕೆಲಸಕ್ಕೆ ಹೊಸ ಯೋಜನೆಯಾಗಬೇಕು, ಸರಕಾರದ ಒಪ್ಪಿಗೆ ಬೇಕು. ಕೆಲಸವನ್ನು ನಿಲ್ಲಿಸುವುದು ಸುಲಭ, ಮಡಕೆಯನ್ನು ಒಡೆದಂತೆ. ಪ್ರಾರಂಭಿಸುವುದು ಕಷ್ಟ, ಕುಂಬಾರನ ಕೆಲಸದಂತೆ. ಆದರೂ ಈ ಕಾರ್ಯವನ್ನು ಮಾಡಲೇಬೇಕಾಗಿದೆ.

ಎಲ್ಲ ಭಾಷೆಗಳಲ್ಲಿಯೂ ಕಾಲಕಳೆದಂತೆ ಹಳೆಯ ಶಬ್ದಗಳು ಕೆಲವು ಮಾಯವಾಗುತ್ತವೆ. ಹೊಸ ಶಬ್ದಗಳು ಸೇರಿಬಿಡುತ್ತವೆ. ಶಬ್ದಗಳ ಅರ್ಥವೂ ಬೇರೆಯಾಗಿಬಿಡುತ್ತವೆ. ಕೆಲವು ಅರ್ಥವಿಸ್ತಾರವನ್ನು ಪಡೆಯುತ್ತವೆ. ಕೆಲವಕ್ಕೆ ಅರ್ಥ ಸಂಕುಚಿತವಾಗುತ್ತವೆ. ಇದನ್ನು ನಿಘಂಟುಕಾರ ಕಣ್ಣಿನಲ್ಲಿ ಕಣ್ಣಿಟ್ಟು ದಾಖಲಿಸುತ್ತ ಹೋಗಬೇಕು. ಅಲ್ಲದೆ ಕನ್ನಡದಲ್ಲಿಯೂ ಭಾರತದ ಇತರ ಭಾಷೆಗಳಲ್ಲಿಯೂ ಆದಾನ ಪ್ರದಾನಕಾರ್ಯಗಳು ಈಗ ನೆರವೇರುತ್ತಿವೆ. ಈ ಕೆಲಸ ಮುಂದುವರಿಯಬೇಕಾದರೆ ದ್ವಿಭಾಷಾ ನಿಘಂಟುಗಳು, ತ್ರಿಭಾಷಾ ನಿಘುಂಟುಗಳು ನಿರ್ಮಾಣವಾಗಬೇಕು. ಇದಕ್ಕೆ ಇತರ ಭಾಷಾ ಸಾಹಿತ್ಯ ಸಂಸ್ಥೆಗಳೊಡನೆ ಸಂಬಂಧವನ್ನು ಬೆಳೆಸಬೇಕು. ಇದು ಕನ್ನಡ ನಿಘಂಟು ಕಚೇರಿಗೆ ಸುಲಭವಾದ ಕಾರ್ಯ. ಇತರ ಭಾಷೆಗಳಲ್ಲಿ ಇಂಥ ಸೌಲಭ್ಯವಿಲ್ಲ. ನಮ್ಮ ಕಚೇರಿಯಲ್ಲಿ ಸಮರ್ಥರಾದ ಕೆಲವರು ಉಪಸಂಪಾದಕರಿದ್ದರು. ಈಗ ಅವರನ್ನೆಲ್ಲ ನಿವೃತ್ತರನ್ನಾಗಿಸಲಾಗಿದೆ. ಮತ್ತೆ ಹೊಸ ಕಾರ್ಯಕರ್ತರ ಪಡೆಯನ್ನು ತಯಾರು ಮಾಡಬೇಕು. ಏನೇ ಆದರೂ ನಿಘಂಟು ಕಚೇರಿಯನ್ನು ಮತ್ತೆ ಪ್ರಾರಂಭಿಸಬೇಕು. ಈ ಕೆಲಸವನ್ನು ಸಾಹಿತ್ಯ ಪರಿಷತ್ತು ಕೂಡಲೇ ಮಾಡಬೇಕು. ಎಂದೂ ಈ ಕಚೇರಿಯನ್ನು ಮುಚ್ಚಬಾರದು.

ಭಾರತದ ಇತರ ಸಾಹಿತ್ಯಗಳಲ್ಲಿರುವ ಮಹಾಕೃತಿಗಳನ್ನು ಕನ್ನಡಕ್ಕೆ ತರುವ ಮತ್ತು ಕನ್ನಡದ ಮಹಾಕೃತಿಗಳನ್ನು ಇತರೆ ಭಾಷೆಗೆ ಪ್ರದಾನ ಮಾಡುವ ಕಾರ್ಯವು ಮುಂದುವರಿಯಬೇಕಾದರೆ ಎಲ್ಲ ಭಾಷಾ ಪ್ರದೇಶಗಳಲ್ಲಿಯೂ ಕೊನೆಯಪಕ್ಷ ಎರಡು ಭಾಷೆಗಳಲ್ಲಾದರೂ ನಿಷ್ಣಾತರಾದ ವಿದ್ವಾಂಸರು ಇರಬೇಕು. ಅವರು ಅನುವಾದ ಚತುರರಾಗಿರಬೇಕು. ಈ ದೃಷ್ಟಿಯಿಂದ ಹಿಂದೆ ಕನ್ನಡದ ಸಾಹಿತ್ಯ ಅಕಾಡೆಮಿಯು ಇಬ್ಬರು ಯುವ ವಿದ್ವಾಂಸರನ್ನು ಆಯ್ಕೆ ಮಾಡಿ ಬೇರೆ ಭಾಷೆಯ ವಿಶ್ವವಿದ್ಯಾನಿಲಯಗಳಿಗೆ ಕಳಿಸಿ ಅಲ್ಲಿಯ ಭಾಷೆಯನ್ನು ಕಲಿತು ಅದರಲ್ಲಿ ಪ್ರವೀಣರಾಗಿ ಹಿಂದಕ್ಕೆ ಕರೆತರುವ ಒಂದು ಏರ್ಪಾಟನ್ನು ಮಾಡಿತ್ತು. ಒಬ್ಬರನ್ನು ಪಶ್ಚಿಮ ಬಂಗಾಳಕ್ಕೂ ಮತ್ತೊಬ್ಬರನ್ನು ಇನ್ನೊಂದೆಡೆಗೂ ಕಳಿಸಿದ್ದ ನೆನಪು. ಅವರಲ್ಲೊಬ್ಬರು ಹಿಂದಿರುಗಿ ಒಳ್ಳೆಯ ಗ್ರಂಥವನ್ನು ಬರೆದುಕೊಟ್ಟರು. ಈಗಲೂ ಪರಿಷತ್ತು ಇಂಥ ಕಾರ್ಯವನ್ನು ಪ್ರತಿವರ್ಷವೂ ಮಾಡಿದರೆ ಒಂದು ದಶಕದಲ್ಲಿ ನಮ್ಮಲ್ಲಿಯೇ ಹತ್ತು ಭಾಷೆಗಳ ಪ್ರವೀಣರು ತಯಾರಾಗುತ್ತಾರೆ. ಈಗ ಪರಿಷತ್ತು ಸರಕಾರದ ಸಹಾಯದ ದೆಸೆಯಿಂದ ಆರ್ಥಿಕವಾಗಿ ಗಟ್ಟಿಯಾಗಿ ಬೆಳೆದಿದೆ. ಆದ್ದರಿಂದ ಗಟ್ಟಿಯಾದ ಕಾರ್ಯವನ್ನು ಮಾಡಬೇಕು.

ಮುಂದಿನ ಭಾಗ : ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕಾದ ಕರ್ತವ್ಯ »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Keynote address by Prof G Venkatasubbaiah, president 77th All India Kannada Sahitya Sammelana, Bengaluru. Here is the full text of G Venkatasubbaiah's speach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more