ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಯುತ್ತಿದೆ ಎಂದು ಯಾರೂ ಹೇಳಬಾರದು

By * ಪ್ರೊ. ಜಿ ವೆಂಕಟಸುಬ್ಬಯ್ಯ
|
Google Oneindia Kannada News

Prof G Venkatasubbaiah
ಬೆಂಗಳೂರಿಗೆ ಬಂದ ಗ್ರಾಮೀಣ ಪ್ರದೇಶದ ಜನರಿಗೆ ಇವರ ಮಾತನ್ನು ಕೇಳಿ ದಿಗ್ಭ್ರಮೆಯಾಗುತ್ತದೆ. ಬೆಂಗಳೂರಿನಲ್ಲಿ ಕನ್ನಡ ಸಾಯುತ್ತಿದೆ ಎಂದು ಹೇಳುತ್ತಾರೆ. ಹಾಗೆ ಹೇಳುವವರಿಗೆ ಗ್ರಾಮೀಣ ಪ್ರದೇಶದಲ್ಲಿ ಅದು ಬದುಕಿ ಉಳಿಯುತ್ತದೆ ಎಂಬ ನಂಬಿಕೆಯಿದೆ. ಕನ್ನಡದ ರಾಜಧಾನಿಯಲ್ಲಿ ಕನ್ನಡ ಸತ್ತರೆ ಗ್ರಾಮೀಣ ಪ್ರದೇಶದಲ್ಲಿ ಉಳಿಯುತ್ತದೆಯೇ?

ಇಂಥ ವಿಪರ್ಯಾಸವನ್ನು ಗಮನಿಸುತ್ತಿರುವ ನನಗೆ ಕೆಲವು ವಿವರಗಳನ್ನು ಇಂಥ ಸಭೆಯ ಮುಂದೆ ಹೇಳಲೇಬೇಕೆಂಬ ಅಪೇಕ್ಷೆಯುಂಟಾಗಿದೆ.

ಈಗಿನ ನಾವು ಬದುಕಿರುವ ಈ ಕಾಲದಲ್ಲಿ ಕನ್ನಡ ಭಾಷೆಯು ತನ್ನ ಮತ್ತೊಂದು ಹೊಸತನವನ್ನು ಪಡೆಯುತ್ತಾ ಇದೆ. ಹಿಂದೆ ಕನ್ನಡದ ಆಡುಮಾತಿಗೆ ಸಂಸ್ಕೃತ ಶಬ್ದಗಳು ಹೇಗೆ ಸೇರಿಕೊಂಡಿತೋ ಹಾಗೆ ಈಗ ಇಂಗ್ಲಿಷಿನಿಂದ ಸಾವಿರಾರು ಶಬ್ದಗಳು ನಾಗರಿಕ ಜೀವನದಲ್ಲಿ ಸೇರಿಕೊಳ್ಳುತ್ತಾ ಇದೆ. ಇದನ್ನು ತಪ್ಪಿಸುವುದಕ್ಕೆ ಆಗುವುದಿಲ್ಲ. ಹೀಗೆ ನಗರದ ಸಂಕೀರ್ಣ ಜನಸಮುದಾಯದಲ್ಲಿ ಇಂಗ್ಲಿಷಿನ ಮತ್ತಿತರ ಭಾಷೆಗಳ-ಅಧಿಕವಾಗಿ ಹಿಂದಿ ಮತ್ತು ಉರ್ದು ಭಾಷೆಗಳ-ಶಬ್ದಗಳು ಒಗ್ಗಟ್ಟಿನಿಂದ ನುಗ್ಗುತ್ತಿವೆ. ಕಾಲಾನುಕ್ರಮದಲ್ಲಿ ಈ ಶಬ್ದಗಳಲ್ಲಿ ಅನೇಕ ಶಬ್ದಗಳು ಕನ್ನಡಕ್ಕೆ ಎರವಲುಗಳಾಗಿ ಬಂದು ಸೇರಿಕೊಂಡುಬಿಡುತ್ತವೆ. ಆ ಎಲ್ಲಾ ಕನ್ನಡ ಶಬ್ದಗಳು ಹಾಗೆ ಬಳಕೆಗೆ ಬರಬೇಕಾದರೆ ಒಂದಿಪ್ಪತ್ತು ಮೂವತ್ತು ವರ್ಷಗಳು ಬೇಕಾಗುತ್ತವೆ. ಈಗಾಗಲೇ ಹಿಂದಿನ ಅನೇಕ ವರ್ಷಗಳಲ್ಲಿ ನಮ್ಮವೇ ಆದ ಎಷ್ಟೊಂದು ಇಂಗ್ಲಿಷ್ ಶಬ್ದಗಳಿವೆ ನೋಡಿ. ಕಾರು, ಬುಕ್ಕು, ಪೆನ್ನು, ಇಂಕು, ಪೇಪರ್ರು. ಆದರೆ ಈಗ ನುಗ್ಗಲು ಆತುರಪಡುತ್ತಿರುವ ಶಬ್ದಗಳು ಇಂಥ ಶಬ್ದಗಳಲ್ಲ; ಕನ್ನಡದಲ್ಲಿ ಸೊಗಸಾದ ಶಬ್ದಗಳಿರುವಾಗ ಅವುಗಳನ್ನೇ ತಳ್ಳಿ ಕನ್ನಡಕ್ಕೆ ಬರಲು ಪ್ರಯತ್ನಪಡುತ್ತಿರುವ ಶಬ್ದಗಳು. ಉದಾಹರಣೆ: ಚಿಲ್ಲೀಸ್, ರಾಡಿಶ್, ಬೀನ್ಸ್, ಕುಕುಂಬರ್ರು, ಕ್ಯಾಪ್ಸಿಕಮ್ಮು, ನೈಫು, ಆಯಿಲ್ಲು, ಬಟ್ಟರ್ರು, ಪೌಡರ್ರು, ಗ್ರೈಂಡು ಇತ್ಯಾದಿ. ಎಲ್ಲಾ ಅಡಿಗೆ ಮನೆಗೇ ನುಗ್ಗಿಬಿಟ್ಟಿವೆ. ಇದಕ್ಕೆ ಕಾರಣ ದೂರದರ್ಶನದಲ್ಲಿ 'ಹೊಸರುಚಿ"ಯ ಪ್ರದರ್ಶನ ಮಾಡುವ ಕನ್ನಡ ಮಹಿಳಾಮಣಿಗಳು ಸಂಭಾಷಣೆಯ ಪರಿಣಾಮ. ಎಫ್.ಎಂ. ರೇಡಿಯೋ, ದೂರದರ್ಶನದ ಅನೇಕ ವಾಹಿನಿಗಳ ಪ್ರಭಾವ. ವರ್ತಮಾನ ಪತ್ರಿಕೆಗಳಲ್ಲಿಯೂ ದೂರದರ್ಶನದಲ್ಲಿಯೂ ಆಕಾಶವಾಣಿಯಲ್ಲಿಯೂ ಪ್ರಚಾರವಾಗುವ ಇಂಥ ಪ್ರಯೋಗಗಳನ್ನು ನಿಲ್ಲಿಸಿ ನಮ್ಮಲ್ಲಿ ಪ್ರಚಾರದಲ್ಲಿರುವ ಕನ್ನಡ ಶಬ್ದಗಳನ್ನು ಉಪಯೋಗಿಸುವಂತೆ ಆಯಾ ಕೇಂದ್ರಗಳ ಅಧಿಕಾರಿಗಳು ನಿರ್ದೇಶಿಸಬೇಕು. ಯಾವ ಶಬ್ದ ಬೇಕಾದರೂ ನಿಧಾನವಾಗಿ ತಾನೇ ತಾನಾಗಿ ಬರಲಿ. ಆದರೆ ನಾವೇ ಅವುಗಳನ್ನು ಅನವಶ್ಯಕವಾಗಿ ಆಮದು ಮಾಡಿಕೊಳ್ಳಬಾರದು. ಹಾಗೆ ಮಾಡಿದರೆ ನಮ್ಮ ಸ್ವಂತ ಶಬ್ದಸಂಪತ್ತು ಮಾಯವಾಗಿಬಿಡುತ್ತದೆ. ನಾವು ಅವುಗಳಿಲ್ಲದೆ ಕನ್ನಡ ಶಬ್ದದರಿದ್ರರಾಗಿಬಿಡುತ್ತೇವೆ. ಸಮಾಜದ ಹಿರಿಯರು, ವಿದ್ಯಾವಂತ ಮಹಿಳೆಯರು, ಸಾಮಾಜಿಕ ಸಂಸ್ಥೆಗಳ ಕಾರ್ಯಕರ್ತರು, ವಾರ್ತಾಪತ್ರಿಕೆಗಳ ಪತ್ರಕರ್ತರು, ಕನ್ನಡ ಚಳವಳಿಯ ನಾಯಕರು ಇವರೆಲ್ಲರಿಗೂ ಈ ಬಗ್ಗೆ ತಿಳಿವಳಿಕೆಯನ್ನು ನೀಡುವ ಒಂದು ಕನ್ನಡ ಆಂದೋಳನ ನಡೆಯಬೇಕು. ಕನ್ನಡ ಸಾಹಿತ್ಯ ಪರಿಷತ್ತು ಅದರ ಜಿಲ್ಲಾ ಮತ್ತು ತಾಲ್ಲೂಕು ಅಂಗಸಂಸ್ಥೆಗಳು, ಮಹಿಳೆಯರ ಕ್ಲಬ್ಬುಗಳು, ಬೆಳಗ್ಗೆ ವಾಯುವಿಹಾರಕ್ಕೆಂದು ಹೋಗುವ ಹಿರಿಯರ ತಂಡ ಇವರೆಲ್ಲ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಕನ್ನಡಕ್ಕೆ ಬರುವ ಶಬ್ದಗಳು ಯಾವ ಭಾಷೆಯಿಂದ ಬೇಕಾದರೂ ಬರಲಿ. ನಿಧಾನವಾಗಿ ಬರಲಿ. ನಾವೇ ಬಲವಂತವಾಗಿ ತುರುಕುವುದು ಬೇಡ. ಅಷ್ಟೆ!

ಅನೇಕ ದೂರದರ್ಶನ ವಾಹಿನಿಗಳಲ್ಲಿ- ('ಅನ್ನದಾತ", 'ಕೃಷಿದರ್ಶನ" ಮುಂತಾದ ಕಾರ್ಯಕ್ರಮಗಳಲ್ಲಿ) ಗ್ರಾಮೀಣ ರೈತರೇ ಮಾತನಾಡುವಾಗ ಎಂಥ ಒಳ್ಳೆಯ ಕನ್ನಡ ಭಾಷೆ ಪ್ರಯೋಗವಾಗುತ್ತದೆ, ನೋಡಿ. ಕನ್ನಡದ ಪ್ರಾದೇಶಿಕ ಸೊಗಡಿನಿಂದ ತುಂಬಿರುವ ಅವರ ಕನ್ನಡ ತುಂಬ ಸ್ವಾರಸ್ಯಕರ. ಅವರ ಮಾತಿನಲ್ಲಿ ಕಾಣುವ ಕನ್ನಡತನವನ್ನು ನಾವು ಮಾದರಿಯಾಗಿ ಉದಾಹರಿಸಬಹುದು.

ಕನ್ನಡವು ಸಾಯುತ್ತದೆ ಎಂಬ ಮಾತನ್ನು ಯಾರೂ ಆಡಬಾರದು. ಭಾಷಾಶಾಸ್ತ್ರಿಗಳು ತಯಾರು ಮಾಡಿರುವ ಅಂಕಿ ಅಂಶಗಳಲ್ಲಿ ಪ್ರಪಂಚದ ಪ್ರಾಚೀನ ಪ್ರಸಿದ್ಧ ಸಮೃದ್ಧ ಭಾಷೆಗಳ ಪಟ್ಟಿಯೊಂದು ಇದೆ. ಅಂಥ ಆರು ಸಾವಿರ ಭಾಷೆಗಳ ಪಟ್ಟಿಯಲ್ಲಿ ಕನ್ನಡವು ಮೊದಲ ಮೂವತ್ತು ಭಾಷೆಗಳಲ್ಲಿ ಒಂದಾಗಿದೆ. ಅದು ಸಾಯುವ ಭಾಷೆಯಲ್ಲ. ಚಂದ್ರ ಸೂರ್ಯರಿರುವ ತನಕ ಬಾಳುವ ಬೆಳೆಯುವ ಭಾಷೆ. ಕಾಲಮಾನದಲ್ಲಿ ಇದೂ ಬದಲಾವಣೆಯನ್ನು ಹೊಂದುತ್ತದೆ. ನಾವು ಈ ಬದಲಾವಣೆಯ ಕಾಲದಲ್ಲಿ ಬಾಳುತ್ತಿದ್ದೇವೆ. ನಮ್ಮ ಹೊಸ ಶಬ್ದಸಂಪತ್ತಿನ ಪ್ರಭಾವದಿಂದ ಈಗಿರುವ ಕನ್ನಡ ಶಬ್ದಸಂಪತ್ತನ್ನು ಕಳೆದುಕೊಳ್ಳಬಾರದು ಎಂಬುದನ್ನು ನಾವು ತಿಳಿದಿರಬೇಕು.

ಸಾಯುವ ಭಾಷೆ ಎಂಬ ಮಾತು ಬಂದಾಗ ಒಂದು ವಿಶಿಷ್ಟವಾದ ವಿವರವನ್ನು ನಾನು ಈ ಸಭೆಯ ಗಮನಕ್ಕೆ ತರಬೇಕು. ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅಪೂರ್ವವಾದ ಭಾರತದ ಮತ್ತು ಇತರ ದೇಶಗಳ ಮೌಖಿಕ ಭಾಷೆಗಳ ಬಗ್ಗೆ ಒಂದು ಪ್ರಮುಖ ಯೋಜನೆಯನ್ನು ಕೈಗೊಂಡಿದ್ದಾರೆ. ಈಗ ಪ್ರಪಂಚದಲ್ಲಿ ಪ್ರಚಾರದಲ್ಲಿರುವ ಭಾಷೆಗಳ ಸಂಖ್ಯೆ ಸುಮಾರು 6500. ಇವುಗಳಲ್ಲಿ ೩೫೨೪ ಭಾಷೆಗಳು ಈ ಶತಮಾನದ ಕೊನೆಯ ವೇಳೆಗೆ ಸಂಪೂರ್ಣವಾಗಿ ಮಾಯವಾಗಿಬಿಡುತ್ತವೆಂದು ನಿರೀಕ್ಷೆ. ಅವುಗಳಲ್ಲಿ 150 ಭಾಷೆಗಳು ಆಗಲೇ ಸಾಯುವ ಸ್ಥಿತಿಯಲ್ಲಿವೆ. ಹೀಗಿರುವ ಎಲ್ಲ ಭಾಷೆಗಳ ಬಗ್ಗೆ database ಅನ್ನು (ಅಂದರೆ ಕಂಪ್ಯೂಟರಿನಲ್ಲಿ ದೊರಕುವ ಅಂಕಿ ಅಂಶಗಳು) ಸಂಗ್ರಹಿಸಿ ಪ್ರಪಂಚದ ಎಲ್ಲರಿಗೂ ದೊರಕುವಂತೆ ಮಾಡುತ್ತಿದ್ದಾರೆ. ಇದಕ್ಕೆ ಹೆಸರು Worlds Oral Literature Project (www.oralliterarure.org).ಈ ಭಾಷಾಶಾಸ್ತ್ರಿಗಳಿಗೆ ಎಲ್ಲ ಭಾಷೆಗಳ ಬಗ್ಗೆ-ಅವು ಪ್ರತಿನಿಧಿಸುವ ಸಂಸ್ಕೃತಿಯ ಬಗ್ಗೆ ಇರುವ ಕಾಳಜಿಗೆ ನಾವು ಕೃತಜ್ಞರಾಗಿರಬೇಕು.

ಮುಂದಿನ ಭಾಗ : ಬೆಂಗಳೂರಿನಲ್ಲಿ ಕನ್ನಡವನ್ನು ಉಳಿಸುವುದು ಹೇಗೆ? »

English summary
Keynote address by Prof G Venkatasubbaiah, president 77th All India Kannada Sahitya Sammelana, Bengaluru. Here is the full text of G Venkatasubbaiah's speach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X