ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯ ಕೃಷಿ ನಡೆದದ್ದು ಹೀಗೆ...

By * ಪ್ರೊ. ಜಿ ವೆಂಕಟಸುಬ್ಬಯ್ಯ
|
Google Oneindia Kannada News

Prof G Venkatasubbaiah
ಮೈಸೂರಿನಲ್ಲಿ 1916ರಲ್ಲಿ ವಿಶ್ವವಿದ್ಯಾನಿಲಯವು ಸ್ಥಾಪಿತವಾದ ಮೇಲೆ ಆ ಊರಿನ ಮಹಾರಾಜ ಕಾಲೇಜು ಕನ್ನಡ ಸಾಹಿತ್ಯದ ಚಟುವಟಿಕೆಗಳ ಕೇಂದ್ರವಾಯಿತು. ಮೈಸೂರಿನಲ್ಲಿ ಪ್ರಾಚ್ಯವಸ್ತು ಭಂಡಾರವು ಕಾರ್ಯವನ್ನು ಪ್ರಾರಂಭಿಸಿತು. ಆ ಭಂಡಾರದಲ್ಲಿ ಪ್ರಾಚೀನವಾದ ಸಂಸ್ಕೃತ, ಕನ್ನಡ ಗ್ರಂಥಗಳು ಸಂಗ್ರಹವಾದವು. ಅನೇಕ ಹಸ್ತಪ್ರತಿಗಳು ಶೇಖರಗೊಂಡವು. ಹೊಸದಾಗಿ ಅನೇಕ ಗ್ರಂಥಗಳು ಸಂಪಾದಕರಿಂದ ಪರಿಷ್ಕರಿಸಲ್ಪಟ್ಟು ಮುದ್ರಣಕ್ಕೆ ಸಿದ್ಧವಾದವು. ಕಾಲೇಜಿನಲ್ಲಿ ಕನ್ನಡದ ಆಳವಾದ ವ್ಯಾಸಂಗ ನಡೆಯಿತು. ಹೊಸಗನ್ನಡದಲ್ಲಿ ಪ್ರಾಚೀನ ಗ್ರಂಥ ವಿಮರ್ಶೆಗಳು ರಚಿತವಾದವು. ಮೊತ್ತಮೊದಲಿಗೆ ಕುಮಾರವ್ಯಾಸ ಪ್ರಶಸ್ತಿ ರಚಿತವಾಯಿತು. ನಾಡಿನಲ್ಲೆಲ್ಲ ಹೊಸ ಹೊಸ ಕರ್ನಾಟಕ ಸಂಘಗಳು ಸ್ಥಾಪಿತವಾಗಿ ಸಾಹಿತ್ಯ ಪ್ರಚಾರಕಾರ್ಯ ನೆರವೇರಿತು. ಜನತೆಯಲ್ಲಿ ಕನ್ನಡದ ಬಗ್ಗೆ ಜಾಗೃತಿಯುಂಟಾಯಿತು.

ಸೃಷ್ಟಿಶೀಲ ಸಾಹಿತ್ಯವು ಪ್ರಕಟವಾದಂತೆಲ್ಲ ಹೊಸ ಲೇಖಕರ ಧ್ಯೇಯೋದ್ದೇಶಗಳು ಪ್ರಕಟವಾದವು. ಹಿಂದೆ ಆಧ್ಯಾತ್ಮಿಕದಲ್ಲಿ ಪ್ರಮುಖವಾದ ಆಸಕ್ತಿ ಇದ್ದದ್ದು ಈಗ ಬದಲಾಗಿ ಇಹದಲ್ಲಿರುವ ಮಾನವನ ಬಾಳಿನ ವಿಶ್ಲೇಷಣೆಯು ಹೆಚ್ಚು ಪ್ರಾಧಾನ್ಯವನ್ನು ಪಡೆಯಿತು. ಮಾನವನು ದೇವನೂ ಅಲ್ಲ ರಾಕ್ಷಸನೂ ಅಲ್ಲ-ಆದರೆ ಅವನು ಒಳಿತು ಕೆಡುಕುಗಳ ಮಿಶ್ರಣವಾದ ಸೃಷ್ಟಿ. ಅವನಿಗೆ ದೇಶಪ್ರೇಮವಿದೆ, ಭಾಷಾ ಪ್ರೇಮವಿದೆ, ದೈವದಲ್ಲಿ ನಂಬಿಕೆ ಇದೆ, ಸಹಜೀವಿಗಳಲ್ಲಿ ಸ್ನೇಹವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಶ್ರದ್ಧೆ ಇದೆ-ಭಕ್ತಿ ಭಾವನೆಯೂ ಇದೆ. ಕೆಡುಕನ್ನು ತಿರಸ್ಕರಿಸಿ ಒಳಿತನ್ನು ಬಳಸುವ, ಮಾನವನ ಸ್ವಭಾವವಾದ ನೀತಿಯುತವಾದ ಪ್ರಾಮಾಣಿಕವಾದ ಬದುಕಿನ ಆಸಕ್ತಿ ಹೆಚ್ಚಾಯಿತು, ಅವನಿಗೆ. ಭಾರತ ದೇಶದ ಅತ್ಯಂತ ಹಿರಿಯ ಚೇತನಗಳಾದ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಅರಬಿಂದೊ, ರವೀಂದ್ರನಾಥ, ರಾಜಾರಾಮಮೋಹನರಾಯ್ ಮುಂತಾದವರ ತಾತ್ವಿಕ ಚಿಂತನೆಗಳು ಈ ಹೊಸ ಯುವಜನಾಂಗಕ್ಕೆ ಮಾರ್ಗದರ್ಶಕವಾದವು. ಬಾಳು ನ್ಯಾಯನಿಷ್ಠೆಯಿಂದ ಕೂಡಿರಬೇಕು, ಪ್ರಾಮಾಣಿಕತೆ ಪ್ರದರ್ಶಿತವಾಗಬೇಕು, ಪಾರದರ್ಶಕವಾಗಿರಬೇಕು ಮುಂತಾದ ಉದಾತ್ತ ಭಾವನೆಗಳು ಜನತೆಗೆ ಬೇಕಾದವು. ಒಟ್ಟಿನಲ್ಲಿ ನವಭಾರತ ನಿರ್ಮಾಣವಾಗಬೇಕೆಂಬುದೇ ಮುಖ್ಯದೃಷ್ಟಿ.

ಈ ಹೊಸ ನಂಬಿಕೆಗಳಿಂದ ಸಾಹಿತ್ಯದ ಎಲ್ಲ ಪ್ರಕಾರಗಳೂ ಜೀವಂತವಾದವು. ಕಾವ್ಯ, ನಾಟಕ, ಕತೆ, ಕಾದಂಬರಿ, ಜೀವನಚಿತ್ರ, ಪ್ರಬಂಧ, ವಿಮರ್ಶೆ-ಇವೆಲ್ಲ ಬಹುಸಂಖ್ಯೆಯಲ್ಲಿ ಮುದ್ರಣಗೊಂಡವು. ದೇಶೋದ್ಧಾರದ ಜೊತೆಗೆ ಆತ್ಮೋದ್ಧಾರವೂ ಸೇರಿಕೊಂಡಿತು. ಶೋಷಿತರನ್ನು ಎತ್ತಿ ನಿಲ್ಲಿಸುವ ಪ್ರಯತ್ನ ಹೆಚ್ಚಾಯಿತು. ಸ್ವಾತಂತ್ರ್ಯಪ್ರಿಯತೆ ಎಷ್ಟು ಗಾಢವಾಯಿತೆಂದರೆ ಕವಿಗಳು ಹಾಡಿದರು ಹೀಗೆ:-

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ!

ಹೀಗೆ ಗಟ್ಟಿಯಾಗಿ ಘೋಷಿಸುವುದು ಸಾಧ್ಯವಾಯಿತು.

ನವ ಸಾಹಿತಿಗಳೂ ತಮ್ಮ ಕೃತಿಗಳಿಂದ ಗಳಿಸಿದ ಹಿರಿಮೆ ಪ್ರಖರವಾಗಿತ್ತು. ಪರ್ವತೋಪಮವಾದ ಪ್ರತಿಭೆಯ ಮೂವರು ಮಹಾಕವಿಗಳು ನಾಡಿನಲ್ಲಿ ಬೆಳಗಿದರು. ಮಹಾಕಾವ್ಯಗಳ ಕಾಲ ಮುಗಿದುಹೋಯಿತು ಎಂಬಂತಿದ್ದ ಸಮಯದಲ್ಲಿ ಒಂದು ಅದ್ಭುತ ಮಹಾಕಾವ್ಯ ಸೃಷ್ಟಿಯಾಯಿತು. ಸಂಕೀರ್ಣವಾದ ಮಾನವ ಜೀವಿತದ ಸಾವಿರ ಮುಖಗಳನ್ನು ಅತ್ಯಂತ ಭಾವತೀವ್ರತೆಯಿಂದ ಜಾನಪದ ಸತ್ವದಿಂದ ಚಿತ್ರಿಸಿ ಹಾಡಿದ ಕವಿಯೊಬ್ಬರು ಮಹಾಕವಿಗೆ ಸಮಾನರಾದರು. ಹರಿಸರ್ವೋತ್ತಮತ್ವದ ಆಧ್ಯಾತ್ಮಿಕ ದೃಷ್ಟಿಯ ಮತ್ತೊಬ್ಬ ಕವಿ ಮತ್ತೊಂದು ಕಿರು ಮಹಾಕಾವ್ಯವನ್ನೇ ರಚಿಸಿದರು. ಈ ಮೂವರಿಗೆ ಕಿಂಚಿನ್ನೂನವೆಂಬಂತೆ ಅನೇಕ ಕವಿಗಳು ಆಸಕ್ತರಾದ ಓದುಗರಿಗೆ ಹೃದಯ ತುಂಬುವ ಕವಿತೆಗಳನ್ನು ರಚಿಸಿದರು. ನವ್ಯ ಕಾವ್ಯವೆಂಬ ಹೊಸ ರಚನೆಗಳನ್ನು ರಚಿಸಿ ಮತ್ತೆ ಇಬ್ಬರು ಕವಿವರ್ಯರು ಇಂಗ್ಲೆಂಡ್ ಅಮೆರಿಕಗಳ ಹೊಸಕಾವ್ಯವನ್ನು ಅನುಸರಿಸಿ ಕನ್ನಡ ಕಾವ್ಯ ರಚನೆಗೆ ಹೊಸ ಭಾಷೆಯನ್ನು ಹೊಂದಿಸಿದರು. ಕ್ರಮೇಣ ನವ್ಯತೆ ಮಾಯವಾಗಿ ಕೆಲವು ಬದಲಾವಣೆಗಳೊಡನೆ ನವೋದಯದ ಪ್ರಭಾವ ಮತ್ತೂ ಪ್ರಖರವಾಗುತ್ತಾ ಇದೆ. ಇಂದು ರಸಿಕರ ಮನಸ್ಸನ್ನು ಮುದಗೊಳಿಸುವ ಕಾವ್ಯರಾಶಿ ರಚಿತವಾಗುತ್ತಲೆ ಇದೆ. ಸ್ತ್ರೀಯರು ಕೂಡ ಕೆಲವು ಉತ್ತಮ ಕವನಸಂಕಲನಗಳನ್ನು ತಂದಿದ್ದಾರೆ.

ಕಾವ್ಯ ಕ್ಷೇತ್ರದಷ್ಟೇ ಪ್ರಭಾವವುಳ್ಳ ಕತೆ-ಕಾದಂಬರಿಗಳ ವಿಭಾಗವೂ ಅತ್ಯಂತ ಜೀವಂತವಾದ ಪುಸ್ತಕಗಳಿಂದ ಅಲಂಕೃತವಾಗಿದೆ. ಕನ್ನಡದ ಆಸ್ತಿಯಾದ ಸಣ್ಣ ಕತೆಗಾರರಿಂದ ಸಾವಿರ ಪುಟಗಳ ಕಾದಂಬರಿಕಾರರವರೆಗೆ ಪ್ರಭಾವಿತರಾದ ಹತ್ತಾರು ಜನ ಕಥಾಸಾಹಿತ್ಯ ನಿರ್ಮಾಪಕರು ಈಗಲೂ ಇದ್ದಾರೆ. ಪ್ರಗತಿಶೀಲವೆಂಬ ಹೆಸರಿನ ಚಳವಳಿಯಿಂದ ಪ್ರಭಾವಿತರಾದ ಕೆಲವರು ನೂರಾರು ಕಾದಂಬರಿಗಳನ್ನು ರಚಿಸಿದ್ದಾರೆ. ಆ ದಾರಿಯಲ್ಲಿಯೇ ನಂಬಿಕೆ ಇದ್ದರೂ ಚಾರಿತ್ರಿಕ ಕಾದಂಬರಿಗಳನ್ನು ರಚಿಸಿದ ಹಿರಿಯರು, ದಲಿತರ ಉದ್ಧಾರಕ್ಕೆಂದೋ ಜನತೆಯ ಬಾಳಿನ ಸೊಗಸಿಗೆಂದೋ ರಚಿಸಿದ ಅನೇಕ ಕಾದಂಬರಿಗಳು ಪ್ರಕಟವಾಗಿವೆ. ಹತ್ತು ಜನ ಕಾದಂಬರಿಕಾರರು ವಿಶ್ವಕಾವ್ಯದ ರಚನೆಯ ಮಟ್ಟಕ್ಕೆ ಬರುವ ಕಾದಂಬರಿಗಳನ್ನು ರಚಿಸಿದ್ದಾರೆ. ಇವರೆಲ್ಲರ ಕಾದಂಬರಿಗಳು ಭಾರತದ ಇತರ ಭಾಷೆಗಳಿಗೆ ಅನುವಾದಗೊಂಡಿವೆ. ಪ್ರಗತಿಶೀಲ ಆಂದೋಳನವು ಬಹು ದಟ್ಟವಾದ ಪರಿಣಾಮವನ್ನು ಬೀರಿತು.

ನಾಟಕ ಪ್ರಕಾರವೂ ಅಷ್ಟೇ! ಮೈಸೂರರಸರ ಚರಿತ್ರೆಗೆ ಸಂಬಂಧಪಟ್ಟ ನಾಟಕಗಳು, ಸಮಾಜದ ಸಂಸಾರದ ಸಿಹಿಕಹಿ ಪ್ರಸಂಗಗಳು, ವ್ಯಂಗ್ಯಚಿತ್ರಣದ ಕನ್ನಡ-ಇಂಗ್ಲಿಷ್ ಮಿಶ್ರಭಾಷೆಯ ಹಾಸ್ಯನಾಟಕಗಳು, ಸ್ವಾತಂತ್ರ್ಯ ಹೋರಾಟದ ಸಮಯದ ವಿವಿಧ ಚಿತ್ರಗಳುಳ್ಳ ಹೃದಯವಿದ್ರಾವಕ ನಾಟಕಗಳು, ಶಾಲಾಕಾಲೇಜುಗಳ ವಾರ್ಷಿಕ ಸಮಾರಂಭಗಳಿಗೆ ಅನುಕೂಲವಾಗಿರುವ ಏಕಾಂಕಗಳು ಇತ್ಯಾದಿ ಅನೇಕ ನಾಟಕಗಳಿವೆ. ಹೆಗ್ಗೋಡಿನ ನಾಟಕ ಪ್ರದರ್ಶನ ಮತ್ತು ಅಭಿನಯ ಶಿಕ್ಷಣವು ಬೇರೊಂದು ರೀತಿಯ ಚಟುವಟಿಕೆಯಲ್ಲಿ ತೊಡಗಿದೆ. ಹೊಸ ನಾಟಕಗಳ ಪ್ರದರ್ಶನಕ್ಕೆಂದು ಬೆಂಗಳೂರಿನಲ್ಲಿಯ ರಂಗಶಂಕರವೆಂಬ ಪ್ರಾಯೋಗಿಕ ನಾಟಕಮಂದಿರವೇ ಸಿದ್ಧವಾಗಿದೆ.

ಈ ಎಲ್ಲ ಸಾಹಿತ್ಯ ರಚನೆಯನ್ನು ಬೇರೊಂದು ಮಗ್ಗುಲಿನಿಂದಲೂ ಪರಿಶೀಲಿಸಬಹುದಾಗಿದೆ. ಅದು ಒಂದು ರಸಯಾತ್ರೆಯೇ!

ನವೋದಯದ ಪರಿಣಾಮವಾಗಿ ಇಂಗ್ಲೆಂಡನ್ನೂ ಇಂಗ್ಲಿಷ್ ಭಾಷೆಯನ್ನೂ ಸಾಹಿತ್ಯವನ್ನೂ ಪ್ರೀತಿಯಿಂದ ಕಂಡು ಭಾರತೀಯ ಭಾಷಾ ಸಾಹಿತ್ಯಗಳನ್ನು ಒಂದು ಅವಗಣನೆಯ ದೃಷ್ಟಿಯಿಂದ ಕಾಣುವ ವ್ಯವಸ್ಥೆಯುಂಟಾಯಿತು. ಒಬ್ಬ ಕವಿ ಹಾಡಿದನು ಹೀಗೆ

ಬೀಸುತಿದೆ ಪಶ್ಚಿಮದ ರಸಪೂರ್ಣ ಹೊಸಗಾಳಿ
ಭಾರತದ ಬಣಗು ಬಾಳ್ಮರವನಲುಗಾಡಿ

ಈ ಬಗೆಯ ಭಾವನೆ ಕೆಲವರಲ್ಲಿ ಬೇರೂರಿತು. ಇಂಥ ಮಾತಿನಿಂದ ಇಂಗ್ಲೆಂಡನ್ನು ತುಂಬ ಎತ್ತರದಲ್ಲಿ ನಿಲ್ಲಿಸಿದಂತೆ ಕಾಣುತ್ತದೆ. ಇದಕ್ಕೆ ಕಾರಣವಿಲ್ಲದಿಲ್ಲ. ಭಾರತದಲ್ಲಿ ಚೆನ್ನಾಗಿ ಬೇರೂರಿದ್ದ ವಿವಿಧ ಧರ್ಮಗಳ, ಜಾತಿಕೋಮುಗಳ, ಹೆಣ್ಣನ್ನು ಅವಗಣಿಸುತ್ತಿದ್ದ ಭಾವನೆಗಳ ಪರಿಣಾಮವಾಗಿ ವರ್ಗಗಳೇರ್ಪಟ್ಟು ಶೋಷಿತವರ್ಗಗಳು ಹುಟ್ಟಿಕೊಂಡಿದ್ದವು. ಇಂಗ್ಲೆಂಡಿನ ಸರ್ವಾಧಿಕಾರದ ಆಡಳಿತದಲ್ಲಿ ಶೋಷಿತವರ್ಗಗಳೆಲ್ಲ ಎದ್ದು ನಿಂತು ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನಗಳನ್ನು ಕಾಣಬಹುದು ಎಂಬ ಆಸೆಯನ್ನು ಹೊಂದಿದ್ದು ಆಶ್ಚರ್ಯವಲ್ಲ. ಅದನ್ನು ಕೆಲವರು ಕವಿಗಳು ಮೆಚ್ಚಿಕೊಂಡರು. ಅಂಥ ಅವಕಾಶವನ್ನು ಹೊಗಳಿ ಕವನಗಳನ್ನು ರಚಿಸಿರಬಹುದು.

ಸ್ವಾತಂತ್ರ್ಯದ ಹೋರಾಟದಲ್ಲಿ ಡಾ. ಅಂಬೇಡ್ಕರ್ ಅವರೂ ಅವರ ಅನುಯಾಯಿಗಳೂ ಸ್ವಾತಂತ್ರ್ಯದ ಗಳಿಕೆಗಿಂತ ಸಮಾಜದಲ್ಲಿ ಶೋಷಿತವರ್ಗಗಳಿಗೆ ಸಮಾನತೆಯನ್ನು ತರುವುದು ಅತ್ಯಗತ್ಯವಲ್ಲವೆ ಎಂಬ ಪ್ರಶ್ನೆಯನ್ನು ಎತ್ತಿಹಿಡಿದರು. ನವೋದಯದ ಕಾದಂಬರಿಗಳಲ್ಲಿಯೂ ಕತೆಗಳಲ್ಲಿಯೂ ಈ ಹೋರಾಟದ ಚಿತ್ರಗಳಿವೆ. ಇದೇನೂ ವಿರೋಧವಿಲ್ಲದ ಹೋರಾಟವಲ್ಲ. ಇಂಥ ಹೋರಾಟಕ್ಕೆ ಅಡ್ಡಿಯಾದ ಪ್ರಯತ್ನಗಳೂ ಮೂಡಿದವು. ಅಂಬೇಡ್ಕರ್ ಅವರ ವಾದವನ್ನು ವಿರೋಧಿಸಿ ಭಾರತದ ವೈಭವದ ಸಂಸ್ಕೃತಿಯ ಚರಿತ್ರೆಯನ್ನು ಎತ್ತಿ ಹಿಡಿದರು ಕೆಲವರು ಸಂಪ್ರದಾಯವಾದಿಗಳಾದ ವಿದ್ವಾಂಸರು. ಮಹಮ್ಮದೀಯರ ರಾಜ್ಯದ ಆಡಳಿತವನ್ನೂ ಮೆಚ್ಚಿ ಗ್ರಂಥ ರಚನೆ ಮಾಡಿದವರಿದ್ದಾರೆ. ಟಿಪ್ಪುವನ್ನು ಮೆಚ್ಚಿಕೊಂಡ ಕಥೆಗಳಿವೆ.

ಸ್ವಾತಂತ್ರ್ಯಾನಂತರದ ಕಥೆಯೇ ಬೇರೆ. ಹಿಂದೆ ಯಾರುಯಾರು ಶೋಷಿತರಾಗಿದ್ದರೋ ಅವರೆಲ್ಲ ತಲೆ ಎತ್ತಿ ನಿಲ್ಲುವ ಅವಕಾಶವುಂಟಾಯಿತು. ದಲಿತ, ಬಂಡಾಯ, ಮಹಿಳಾ ಉದ್ಧಾರ, ಮತಾಂತರ ವಿರೋಧ ಇತ್ಯಾದಿ ವಸ್ತುಗಳುಳ್ಳ ಅನೇಕ ಕಾದಂಬರಿಗಳೂ ಕತೆಗಳೂ ಇವೆ. ಕೆಲವರು ಲೇಖಕರು ಉಪಸಂಸ್ಕೃತಿಗಳ ಹೆಸರಿನಲ್ಲಿ ಕೆಳವರ್ಗದವರ ಸಾಮಾಜಿಕ ವ್ಯವಹಾರಗಳನ್ನು ಅಭ್ಯಾಸ ಮಾಡಿ ಅವುಗಳ ಹಿರಿಮೆಯನ್ನು ಚಿತ್ರಿಸಿದ್ದೂ ಉಂಟು.

ದಲಿತ ಸಾಹಿತ್ಯದ ಬಗ್ಗೆ ತುಂಬ ಚರ್ಚೆಯಾಯಿತು. ದಲಿತರೇ ಸ್ವಂತವಾಗಿ ಅವರ ಬಗ್ಗೆ ಬರೆದರೆ ಅದು ನಿಜವಾದ ದಲಿತ ಸಾಹಿತ್ಯ. ಬೇರೆಯವರು ಅಂಥ ಸಾಹಿತ್ಯವನ್ನು ಬರೆದರೆ ಅದು ದಲಿತಪರ ಸಾಹಿತ್ಯ ಎಂಬ ಭೇದವನ್ನು ಮಾಡಿದರು. ಇದನ್ನೂ ಕೆಲವರು ಒಪ್ಪಿದರು. ಈ ಬಗೆಯ ಎರಡು ವಿಭಾಗಗಳಲ್ಲಿಯೂ ಉತ್ತಮ ಕೃತಿಗಳು ರಚಿತವಾಗಿವೆ. ವಸಾಹತುಶಾಹಿ, ಪುರೋಹಿತಶಾಹಿ ಮುಂತಾದ ಶಬ್ದಗಳು ಆಯಾವರ್ಗದವರು ರಚಿಸಿದ ಸಾಹಿತ್ಯಕ್ಕೆ ಅನ್ವಯಿಸುತ್ತದೆ. ಇಂಥ ಸಾಹಿತ್ಯವೂ ಅಪಾರವಾಗಿದೆ.

ಹೀಗೆ ಅಧಿಕಾಧಿಕವಾಗಿ ಸಾಹಿತ್ಯ ರಚನೆ ಹೆಚ್ಚಿದ ಮೇಲೆ ಅದನ್ನು ಓದುವವರೂ ಹೆಚ್ಚಿದರು. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಪ್ರೀತಿ ಹೆಚ್ಚಾಗಿ ಪಠ್ಯಗಳ ಜೊತೆಗೆ ಪಠ್ಯೇತರ ಗ್ರಂಥಗಳನ್ನು ವಾಚನ ಮಾಡುವುದು ಹೆಚ್ಚಾಯಿತು. ಯುವಕರಲ್ಲಿ ಹೋರಾಟದ ಬುದ್ಧಿ ಬೆಳೆಯಿತು. ವಾರ್ತಾ ಪತ್ರಿಕೆಗಳು ಹೆಚ್ಚಾದವು. ಗ್ರಂಥ ಪ್ರಕಟನೆ ಅಧಿಕವಾಯಿತು. ೧೯೪೭ರ ತನಕ ಮುದ್ರಣಗೊಂಡ ಎಲ್ಲ ಹೊಸ ಪುಸ್ತಕಗಳನ್ನು ಓದುವುದು ಸಾಧ್ಯವಾಗಿತ್ತು. ಅದಾದ ಬಳಿಕ ಗ್ರಂಥ ಪ್ರಕಟನೆ ಎಷ್ಟು ಹೆಚ್ಚಾಗಿದೆ ಎಂದರೆ ಮುದ್ರಣಗೊಂಡ ಎಲ್ಲ ಗ್ರಂಥಗಳನ್ನು ನೋಡುವುದು ಕೂಡ ಕಷ್ಟವಾಗಿದೆ. ಈಗ ವಾರ್ಷಿಕವಾಗಿ ಸುಮಾರು ಮೂರು ಸಾವಿರ ಪುಸ್ತಕಗಳು ಅಚ್ಚಾಗುತ್ತಿವೆಯಂತೆ. ಹೀಗಾಗಿ ಈ ಕಾಲದ ಸಾಹಿತ್ಯರಾಶಿ ಕನ್ನಡಕ್ಕೆ ಹೊಸತನವನ್ನು ನೀಡಿದೆ. ಅದು ವೈಭವಪೂರ್ಣವಾಗಿ ಬೆಳೆಯುತ್ತಿದೆ.

ಈ ಕಾಲದಲ್ಲಿ ಬೆಳೆದ ವಿಮರ್ಶೆಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿರುವ ಪುಸ್ತಕ ವಿಮರ್ಶೆಯ ಮಾರ್ಗವೇ ಪ್ರಧಾನ ಮಾರ್ಗವಾಗಿದೆ. ರಾಜಕೀಯ ತತ್ವಗಳನ್ನು, ಮಾನವಿಕ ಶಾಸ್ತ್ರಗಳನ್ನು, ಮನಶ್ಶಾಸ್ತ್ರವನ್ನು ತಳಹದಿಯಾಗಿ ಇಟ್ಟುಕೊಂಡು ವಿಮರ್ಶೆ ಮಾಡಿ ಕೃತಿಗಳ ಆಲೋಚನೆಗಳಿಗೆ ಬೆಲೆ ಕಟ್ಟುತ್ತಾರೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಸಾಹಿತ್ಯವನ್ನು ರಚಿಸಿರುವ ಮಹಿಳಾ ವರ್ಗ ತುಂಬ ದೊಡ್ಡದಾಗಿದೆ. ಸುಮಾರು ೭೫ ಜನ ಉತ್ತಮ ಲೇಖಕಿಯರಿದ್ದಾರೆ. ಅವರೆಲ್ಲರ ಬಗ್ಗೆ ಒಂದು ಪರಿಚಯಗ್ರಂಥವೇ ಇದೆ. ಇವರಲ್ಲಿ ಕೆಲವರು ಹಿರಿಯ ಕವಿಗಳೂ ಕತೆಗಾರರೂ ಕಾದಂಬರಿಕಾರರೂ ವಿಮರ್ಶಕರೂ ಇದ್ದಾರೆ.

ವಿಶ್ವವಿದ್ಯಾನಿಲಯಗಳಲ್ಲಿ ತೌಲನಿಕ ವ್ಯಾಸಂಗಕ್ಕೆ ಹೆಚ್ಚು ಗಮನವನ್ನು ಕೊಡಲಾಗುತ್ತಿದೆ. ಜಾನಪದ ಸಾಹಿತ್ಯ ಅಥವಾ ಮೌಖಿಕ ಸಾಹಿತ್ಯದ ಸಂಗ್ರಹ ಪ್ರಕಟಣೆ, ವ್ಯಾಸಂಗ, ವಿಮರ್ಶೆ ಇವೂ ಅಧಿಕವಾಗಿವೆ. ಅಪಾರ ವಿಷಯ ಸಂಗ್ರಹವಾಗಿದೆ. ಜಾನಪದ ಸಾಹಿತ್ಯದ ಬಗ್ಗೆ ಗಂಭೀರವಾದ ಅನೇಕ ಸಂಶೋಧನೆಗಳಾಗಿವೆ. ಇವೂ ನವೋದಯದ ಪರಿಣಾಮವೇ!

ಕನ್ನಡದ ಪುಸ್ತಕ ಪ್ರಕಟನೆ ಅಪಾರ ಅಭಿವೃದ್ದಿಯಾಗಿದೆ. ಪುಸ್ತಕ ಪ್ರಕಟನೆಯ ಕಲೆ ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಬೃಹತ್ತಾದ ಪ್ರಕಟನೆಯೂ ಬೃಹತ್ತಾದ ಪುಸ್ತಕ ವ್ಯಾಪಾರವೂ ನಡೆಯುತ್ತಿವೆ. ಪುಸ್ತಕ ಪ್ರಕಾಶನ ಈಗ ಲಾಭದಾಯಕ ವೃತ್ತಿಯಾಗಿದೆ.

ಒಟ್ಟಿನಲ್ಲಿ ಈ ನೂರು ವರ್ಷಗಳಲ್ಲಿ ಆದ ಕನ್ನಡ ಸಾಹಿತ್ಯದ ಕೃಷಿ ಹಿಂದೆ ಯಾವ ಶತಮಾನದಲ್ಲಿಯೂ ಆಗಿರಲಿಲ್ಲ. ಕ್ರಿ.ಶ. ಹತ್ತನೆಯ ಶತಮಾನವು ಹೇಗೆ ಹಳಗನ್ನಡದ ಸುವರ್ಣಯುಗವಾಯಿತೋ ಹಾಗೆಯೇ ಈ ಇಪ್ಪತ್ತನೆಯ ಶತಮಾನವೂ ಕೂಡ ಹೊಸಗನ್ನಡದ ಸುವರ್ಣಯುಗವಾಗಿ ಪರಿಣಮಿಸಿದೆ. ಮುಂದೆ ಕನ್ನಡದ ಸಾಹಿತ್ಯ ಚರಿತ್ರೆಯನ್ನು ಬರೆಯುವಾಗ ವಿದ್ವಾಂಸರು ಈ ವಿವರವನ್ನು ಖಂಡಿತವಾಗಿ ದಾಖಲಿಸುತ್ತಾರೆ. ಈ ಶತಮಾನದ ಕನ್ನಡದ ಬೆಳಸನ್ನು ಕಂಡು ಇತರ ಭಾಷಾಪ್ರಾಂತದವರು ಕರ್ನಾಟಕವನ್ನು ಕುರಿತು ಕುರುಬುವಷ್ಟು ಸಾಹಿತ್ಯ ವರ್ಣರಂಜಿತವಾಗಿದೆ.

ನಾನು ಮಾತನಾಡುತ್ತಿರುವ ಈ ದಶಮಾನದಲ್ಲಿ ಕೂಡ ಕನ್ನಡದಲ್ಲಿ ಬರುತ್ತಿರುವ ಲೇಖನದ ಭಾಷೆಯಲ್ಲಿ ಬೇರೊಂದು ಬಗೆಯ ನವೀನತೆ ಕಾಣಬರುತ್ತಿದೆ. ವಾರ್ತಾ ಪತ್ರಿಕೆಗಳಲ್ಲಿ ಈಗ ಬರುವ ಯುವ ಲೇಖಕರು ಬಳಸುವ ಭಾಷೆಯಲ್ಲಿ ಹತ್ತು ವರ್ಷಗಳ ಹಿಂದಿನ ಭಾಷೆಗಿಂತ ಪೂರ್ಣವಾಗಿ ಬದಲಾದ ರೀತಿ ಎದ್ದು ಕಾಣುತ್ತಿದೆ. ಅದರಲ್ಲಿ ನಿಜವಾಗಿಯೂ ಒಂದು ಹೊಸ ಆಕರ್ಷಕ ಶೈಲಿ ರೂಪುಗೊಳ್ಳುತ್ತಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ವಿಶೇಷವಾಗಿ ಕಲಿಯದಿದ್ದರೂ ಕನ್ನಡದಲ್ಲಿ ಲೇಖನಗಳನ್ನು ರಚಿಸುವವರನ್ನೂ ಕವನ ಕಟ್ಟಿಕೊಡುವವರನ್ನೂ ನಾನು ಕಂಡಿದ್ದೇನೆ. ಅವರು ವೈದ್ಯರು, ತಂತ್ರಜ್ಞಾನಿಗಳು, ವಿಜ್ಞಾನಿಗಳು.... ಹೀಗೆ. ಅವರಿಗೆ ಉತ್ಸಾಹವಿದೆ, ದಟ್ಟವಾದ ಅರಿವಿಲ್ಲ. ಅಂಥವರ ಬರಹದಲ್ಲಿ ಸಾಮರ್ಥ್ಯ ಹೆಚ್ಚಬೇಕಾದರೆ ಹಳಗನ್ನಡದ ಹಿನ್ನೆಲೆ ಸ್ವಲ್ಪ ಇರಬೇಕು. ಇಂಥವರು ಸ್ವಲ್ಪ ಶ್ರಮಪಟ್ಟರೆ ಅವರೇ ಸ್ವಂತವಾಗಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮಾರ್ಗವಿದೆ. ಅದು ಕುಮಾರವ್ಯಾಸನನ್ನೂ ವಚನಸಾಹಿತ್ಯವನ್ನೂ ಪ್ರತಿನಿತ್ಯ ಸ್ವಲ್ಪ ಸ್ವಲ್ಪ ಓದುವುದು, ಇಷ್ಟೆ! ಹೀಗೆ ಅವರೆಲ್ಲ ಬೆಳೆಯಲಿ ಎಂದು ಹಾರೈಸುತ್ತೇನೆ.

ಕೆಲವರು ಮಹಿಳೆಯರ ಬರಹಗಳಲ್ಲಿ, ಇದು ಪುರುಷರು ಬಳಸಲಾಗದ ಶೈಲಿ- ಎಂಬಷ್ಟು ವ್ಯತ್ಯಾಸವನ್ನು ನಾನು ಪರಿಗಣಿಸಿದ್ದೇನೆ. ನನ್ನ ಕೆಲವು ಮುನ್ನುಡಿಗಳಲ್ಲಿ ಈ ಮಾತನ್ನು ಹೇಳಿದ್ದೇನೆ ಕೂಡ. ಪ್ರಸಿದ್ಧರಾದ ಕೆಲವರು ಮಹಿಳೆಯರು ಅವರದೇ ಆದ ಶಬ್ದ ಸಮುದಾಯಗಳನ್ನು ರೂಪಿಸಿಕೊಂಡಿದ್ದಾರೆ. ಇದರಲ್ಲಿಯೂ ಒಂದು ಹೊಸತನವಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಈ ಶತಮಾನದ ಕೃಷಿಯಿಂದ ಕನ್ನಡದ ನೆಲ ಎಷ್ಟು ಫಲವತ್ತಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯಬರುತ್ತಿದೆ. ಮುಂದೆ ಬರುವ ಸಾಹಿತ್ಯಕ್ಕೆ ಬೇಕಾದ ಎಲ್ಲ ಹಿನ್ನೆಲೆಯನ್ನೂ ಈ ಶತಮಾನ ಸೃಷ್ಟಿಸಿದೆ. ನಾವಿನ್ನು ಹೊಸದಕ್ಕೆ ದಾರಿ ಮಾಡೋಣ. ಬರುವುದನ್ನು ಪ್ರೀತಿಯಿಂದ ನಿರೀಕ್ಷಿಸೋಣ, ಎಂಬ ಆಲೋಚನೆ ನನಗೆ ಹೊಳೆದಿದೆ.

ನಾನು ಕನ್ನಡ ಭಾಷೆಯ ವ್ಯಾಸಂಗದಲ್ಲಿ ನಿರತನಾಗಿರುವವನು. ಕನ್ನಡವನ್ನು ಆಳವಾಗಿ ಅರ್ಥಮಾಡಿಕೊಳ್ಳಬೇಕೆಂಬ ಆಸಕ್ತಿಯುಳ್ಳ ವಿದ್ಯಾರ್ಥಿ. ಕನ್ನಡವನ್ನು ಪ್ರೀತಿಸುವ ಜನಸಮುದಾಯದಲ್ಲಿ ನಾನೂ ಒಬ್ಬ. ಆದುದರಿಂದ ಆ ಭಾಷೆಯಲ್ಲಿ ಈಗ ಏನಾಗುತ್ತಿದೆ ಎಂಬುದರ ಕಡೆಗೆ ಈ ಬೃಹತ್ಸಭೆಯ ದೃಷ್ಟಿಯನ್ನು ಸೆಳೆಯಲು ಬಯಸುತ್ತೇನೆ. ಈಗಾಗಲೇ ಹೇಳಿರುವಂತೆ ಕನ್ನಡದ ಶಬ್ದಸಂಪತ್ತು ವೃದ್ಧಿ ಹೊಂದಿದೆ ಎಂಬುದು ನಿಜ. ಆದರೆ ಬೆಂಗಳೂರು ಮತ್ತು ಇತರ ಬೃಹನ್ನಗರಗಳಲ್ಲಿ ಮಧ್ಯಮ ವರ್ಗದ ಜನರು ಕನ್ನಡ ಭಾಷೆಯನ್ನು ಈಗ ಉಪಯೋಗಿಸುತ್ತಿರುವ ರೀತಿಯಲ್ಲಿ ಕನ್ನಡಕ್ಕೆ ಒಂದು ಅಪಾಯ ಕಾದಿದೆ. ನಾಗರಿಕರ ಆಡುಮಾತಿನಲ್ಲಿ ಇಂಗ್ಲಿಷ್ ಶಬ್ದಗಳ ಮಿಶ್ರಣದ ಪ್ರಮಾಣದಲ್ಲಿ ಏರುಪೇರಾಗಿದೆ. ಇದನ್ನು ಲೆಕ್ಕ ಮಾಡಿದರೆ ಶೇಕಡ ೬೦ರಷ್ಟು ಇಂಗ್ಲಿಷ್ ಶಬ್ದಗಳು ಕಾಣಬರುತ್ತಿವೆ. ಅವರು ಒಂದೇ ಒಂದು ವಾಕ್ಯವನ್ನೂ ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡುವುದಿಲ್ಲ. ಹಾಗೆ ಮಾತನಾಡಲು ಅವರಿಗೆ ಕನ್ನಡದ ಸಾಮರ್ಥ್ಯವಿದ್ದರೂ ಆ ಸಾಮರ್ಥ್ಯವನ್ನು ಉಪಯೋಗಿಸುತ್ತಿಲ್ಲ. ಇದೇ ನಿಜವಾದ ಅಪಾಯ. ಅವರು ತಾವು ಆಡುತ್ತಿರುವ ಮಾತಿನ ರೀತಿಯಲ್ಲಿರುವ ಅಪಾಯವನ್ನೂ ತಿಳಿಯದೆ ಇದ್ದಾರೆ. ಸಂಪೂರ್ಣವಾಗಿ ಸಂವಾದವನ್ನೆಲ್ಲ ಇಂಗ್ಲಿಷಿನಲ್ಲಿಯೇ ಮಾಡುವ ಸಮರ್ಥರ ರೀತಿಯೇ ಬೇರೆ. ಅವರು ಇಂಗ್ಲಿಷ್ ಭಾಷೆಯಲ್ಲಿ ಪರಿಣತರು. ಅವರಲ್ಲಿ ಕೆಲವರು ಕನ್ನಡದಲ್ಲಿಯೂ ಅಷ್ಟೇ ಪರಿಣತರು. ಅಂಥವರು ಸಂಪೂರ್ಣವಾಗಿ ಕನ್ನಡವನ್ನೇ ಉಪಯೋಗಿಸುತ್ತಾರೆ. ಇಂಥ ಹಿರಿಯರನ್ನು ಕುರಿತು ನಾನು ಮಾತನಾಡುತ್ತಿಲ್ಲ. ನನ್ನ ದೃಷ್ಟಿ ಸಾಮಾನ್ಯ ವಿದ್ಯಾರ್ಥಿಗಳು, ಅವರಿಗೆ ಶಾಲಾ ಕಾಲೇಜುಗಳಲ್ಲಿ ಬೋಧಿಸುತ್ತಿರುವ ಅವರವರ ವಿದ್ಯಾಕ್ಷೇತ್ರಗಳಲ್ಲಿ ಸಮರ್ಥರಾದ ಉಪಾಧ್ಯಾಯವರ್ಗ- ಇವರ ಸಂವಾದವನ್ನು ಪರಿಶೀಲಿಸುವಾಗ ಮತ್ತು ಬೀದಿಯಲ್ಲಿ ಓಡಾಡುವ ಇತರ ಸಮಾಜದ ಮಧ್ಯಮ ವರ್ಗದ ಜನರು- ಇವರ ಭಾಷೆಯನ್ನು ಕುರಿತದ್ದು.

ಮುಂದಿನ ಭಾಗ : ಕನ್ನಡ ಸಾಯುತ್ತಿದೆ ಎಂದು ಯಾರೂ ಹೇಳಬಾರದು »

English summary
Keynote address by Prof G Venkatasubbaiah, president 77th All India Kannada Sahitya Sammelana, Bengaluru. Here is the full text of G Venkatasubbaiah's speach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X