ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮ್ಮೇಳನಾಧ್ಯಕ್ಷ ಜಿವಿ ಭಾಷಣದ ಪೂರ್ಣಪಾಠ

By * ಪ್ರೊ. ಜಿ ವೆಂಕಟಸುಬ್ಬಯ್ಯ
|
Google Oneindia Kannada News

Prof G Venkatasubbaiah
ಸರ್ವಜ್ಞಂ ತದಹಂ ವಂದೇ ಪರಂಜ್ಯೋತಿಸ್ತಮೋಪಹಂ
ಪ್ರವೃತ್ತಾಯನ್ಮುಖಾದ್ದೇವೀ ಸರ್ವಭಾಷಾ ಸರಸ್ವತೀ

-ನಾಗವರ್ಮ

ಯಾರ ಮುಖಂದಿದೆಳ್ದು ನಿಂದಳೊ
ಭಾಷೆಯೆಲ್ಲಕು ದೇವಿ ಸರಸತಿ
ಅಂಥ ದೇವಗೆ ಎಲ್ಲ ಬಲ್ಲಗೆ
ತಮವ ದೂಡುವ ಹೊಳೆವ ಬೆಳಕಿಗೆ
ಇದಿಗೊ ನನ್ನಯ ವಂದನೆ

ಎಲ್ಲ ಸಾರಸ್ವತ ಚೇತನಗಳಿಗೂ ನನ್ನ ನಮಸ್ಕಾರ,

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಲೇಖಕರಿಗೆ ನೀಡುವ ಅತ್ಯಂತ ಪ್ರಮುಖವಾದ ಗೌರವ-ಇಂಥ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಪದವಿ. ನನಗೆ ಈ ಗೌರವವನ್ನು ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೂ ಇತರ ಕಾರ್ಯಕಾರಿ ಸಮಿತಿ ಸದಸ್ಯರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸಿ ನನ್ನ ಕೆಲವು ಅರಿವಿನ ಮಾತುಗಳನ್ನು ಹೇಳುತ್ತೇನೆ. ಶಾಂತವಾಗಿ ಕೇಳಬೇಕೆಂದು ನನ್ನ ಬಿನ್ನಹ.

ಕನ್ನಡದ ಕಥೆ ಬಲು ದೊಡ್ಡದು

ಕನ್ನಡನಾಡಿನ ಚರಿತ್ರೆಯಲ್ಲಿ ಕ್ರಿ.ಶ. ಹದಿನೆಂಟನೆಯ ಶತಮಾನದ ಕೊನೆಯ ಭಾಗಕ್ಕೂ ಹತ್ತೊಂಬತ್ತನೆಯ ಶತಮಾನದ ಮೊದಲ ಭಾಗಕ್ಕೂ ಉಂಟಾದ ಸಂಧಿಕಾಲವು ಕನ್ನಡ ಭಾಷಾ ಸಾಹಿತ್ಯಗಳ ದೃಷ್ಟಿಯಿಂದ ಒಂದು ವಿಶಿಷ್ಟ ಪರಿಸರದಲ್ಲಿ ಮುಳುಗಿದ್ದ ಕಾಲ. ರಾಜಕೀಯವಾಗಿ ಕನ್ನಡ ಪ್ರದೇಶಗಳು ವಿವಿಧ ಆಡಳಿತಗಳಿಗೆ ಸಿಕ್ಕಿಕೊಂಡು ಯಾರಿಗೂ ಯಾವ ರಾಜಾಶ್ರಯವೂ ದೊರಕದಿದ್ದ ಕಾಲ. ಇಂಥ ಸಮಯದಲ್ಲಿ ಪಾಶ್ಚಾತ್ಯ ದೇಶಗಳಿಂದ ಕ್ರಿಸ್ತಮತ ಪ್ರಚಾರಕರು ಭಾರತ ದೇಶಕ್ಕೆ ಬಂದು ಭಾರತೀಯರಲ್ಲಿದ್ದ ಶೋಷಿತವರ್ಗದ ಬಡಜನರನ್ನು ಕ್ರಿಸ್ತಮತಕ್ಕೆ ಮತಾಂತರಗೊಳಿಸುವ ಪ್ರಯತ್ನವನ್ನು ಪ್ರಾರಂಭ ಮಾಡಿದ್ದರು. ಜರ್ಮನಿಯಿಂದ ಬಂದ ಬಾಸೆಲ್ ಮಿಷನ್ನಿನ ಮತ ಪ್ರಚಾರಕರು ಭಾರತದ ಪಶ್ಚಿಮ ಕರಾವಳಿಯಲ್ಲಿ ಮಂಗಳೂರನ್ನು ತಮ್ಮ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಕರಾವಳಿಯ ಉದ್ದಕ್ಕೂ ತಮ್ಮ ಉದ್ದೇಶವನ್ನು ಸಾರ್ಥಕಗೊಳಿಸುತ್ತಿದ್ದರು. ಈ ಮತಪ್ರಚಾರಕರೆಲ್ಲ ತುಂಬ ಸಮರ್ಥರಾದ ಬುದ್ಧಿವಂತರು. ವಿಶ್ವವಿದ್ಯಾನಿಲಯಗಳಲ್ಲಿ ತಿಳಿವಳಿಕೆಯನ್ನು ಸಂಪಾದಿಸಿದ್ದವರು. ಮತಪ್ರಚಾರದಲ್ಲಿ ಸಿದ್ಧಹಸ್ತರು. ಅವರು ತಮ್ಮ ಮತಪ್ರಚಾರ ಕಾರ್ಯವು ಕರ್ನಾಟಕದಲ್ಲಿ ಸಫಲವಾಗಬೇಕಾದರೆ ದೇಶಭಾಷೆಯಾದ ಕನ್ನಡದ ಸಹಾಯವು ಅಗತ್ಯವೆಂಬುದನ್ನು ಮನಗಂಡು ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿತರು. ಅದರಲ್ಲಿ ವಿದ್ವಾಂಸರಾಗಿ ಕಾವ್ಯ, ವ್ಯಾಕರಣ, ನಿಘಂಟು ಇತ್ಯಾದಿ ವಿಷಯಗಳಲ್ಲಿ ನಿಷ್ಣಾತರಾಗಿ ತಮ್ಮ ಪ್ರಚಾರ ವರ್ಗದವರಿಗೆ ತಿಳಿವಳಿಕೆಯನ್ನು ನೀಡಲು ಉತ್ತಮ ಸಾಹಿತ್ಯವನ್ನು ರಚಿಸಿದರು. ಅವರು ಮಾಡಿದ ಕಾರ್ಯವೆಲ್ಲ ಸಮರ್ಥರು ಮಾಡುವ ಕಾರ್ಯವಾಗಿತ್ತು. ಅವರ ಉದ್ದೇಶ ಮತಪ್ರಚಾರವಾದರೂ ಅದು ಕನ್ನಡದ ಹಳೆಯ ಗ್ರಂಥಗಳ ಪರಿಷ್ಕರಣಗಳಿಗೆ ಕಾರಣವಾಯಿತು. ಡಾ. ಫರ್ಡಿನಾಂಡ್ ಕಿಟ್ಟಲನು 1894ರಲ್ಲಿ ಮುದ್ರಿಸಿದ ಕನ್ನಡ-ಇಂಗ್ಲಿಷ್ ನಿಘಂಟು ಇಂಥ ಕಾರ್ಯದ ತಲೆಮಣಿಯಾಯಿತು.

ಇದೇ ವೇಳೆಗೆ ಭಾರತದ ಎಲ್ಲೆಡೆಗಳಲ್ಲಿಯೂ ಬ್ರಿಟಿಷರ ಆಡಳಿತದ ಪರಿಣಾಮವಾಗಿ ಇಂಗ್ಲಿಷ್ ಭಾಷಾ ಸಾಹಿತ್ಯಗಳನ್ನು ಬೋಧಿಸುವ ಶಾಲೆಗಳು ಸ್ಥಾಪಿತವಾದವು. ಅವುಗಳಲ್ಲಿ ವ್ಯಾಸಂಗ ಮಾಡಿದ ಭಾರತೀಯ ಯುವಕರಲ್ಲಿ ಆಂಗ್ಲ ಸಾಹಿತ್ಯದ ವಿಷಯದಲ್ಲಿ ಅಪಾರ ವಿಶ್ವಾಸವು ಬೆಳೆಯಿತು. ಅಂಥ ಸಾಹಿತ್ಯವು ಕನ್ನಡದಲ್ಲಿ ಇರಲಿಲ್ಲವಾದುದರಿಂದ ಕೆಲವರು ಇಂಗ್ಲಿಷ್ ಸಾಹಿತ್ಯದ ಅತ್ಯುತ್ತಮ ಕವನಗಳನ್ನೂ ಗದ್ಯಕೃತಿಗಳನ್ನೂ ನಾಟಕಗಳನ್ನೂ ಕನ್ನಡಕ್ಕೆ ಅನುವಾದ ಮಾಡಿದರು. ಬಿಡಿಬಿಡಿಯಾಗಿ ಇಂಥ ಪ್ರಯತ್ನಗಳು ನಡೆದರೂ ಕನ್ನಡದ ಬೆಳವಣಿಗೆಗೆ ಸ್ಥಿರವಾದ ಯಾವ ಪ್ರಯತ್ನಗಳೂ ನಡೆದಿರಲಿಲ್ಲ. ಇಂಥ ಅತಂತ್ರ ಸನ್ನಿವೇಶದಲ್ಲಿ ಬೊಂಬಾಯಿ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿಯನ್ನು ಪಡೆದ ಉತ್ಸಾಹಿ ತರುಣರಾದ ರಾ.ಹ. ದೇಶಪಾಂಡೆ ಅವರು ಕೆಲವರು ಸ್ನೇಹಿತರೊಡಗೂಡಿ ಧಾರವಾಡದಲ್ಲಿ ೧೮೯೦ರಲ್ಲಿ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು. ಕನ್ನಡದ ಬೆಳವಣಿಗೆಗೆ ಇದೊಂದು ಪ್ರಮುಖವಾದ ಘಟನೆಯಾಯಿತು. ಈ ಸಂಘದಿಂದ ಕನ್ನಡದ ಅಭಿವೃದ್ಧಿಯ ಕೆಲಸಗಳು ಕೆಲವು ನೆರವೇರಿದವು. ಇದರ ಮುಂದಿನ ಪ್ರಮುಖವಾದ ಘಟನೆಯೂ ಅದೇ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನೆರವೇರಿತು. ಮೈಸೂರಿನಲ್ಲಿದ್ದ ಬಿ.ಎಂ. ಶ್ರೀಕಂಠಯ್ಯನವರು ಆ ಸಂಘದಲ್ಲಿ ೧೯೧೧ರಲ್ಲಿ 'ಕನ್ನಡ ಮಾತು ತಲೆ ಎತ್ತುವಬಗೆ" ಎಂಬ ವಿಷಯವನ್ನು ಕುರಿತು ವಿಚಾರಪೂರ್ಣವಾದ ಒಂದು ಉಪನ್ಯಾಸವನ್ನು ಮಂಡಿಸಿದರು. ಈ ಉಪನ್ಯಾಸದ ಪ್ರಭಾವವು ಕನ್ನಡ ಜನರ ಮನಸ್ಸಿನಲ್ಲಿ ಗಾಢವಾದ ಪರಿಣಾಮವನ್ನು ಉಂಟುಮಾಡಿತು. ಜನತೆಯ ಮನಸ್ಸಿನಲ್ಲಿ ಈ ಉಪನ್ಯಾಸದ ಪರಿಣಾಮವಾಗಿ, ಕನ್ನಡದ ಅಭಿವೃದ್ಧಿಗೆ ಒಮ್ಮತದ ಕಾರ್ಯಗಳು ನಡೆಯಬೇಕೆಂಬ ಭಾವನೆ ಬೇರೂರಿಬಿಟ್ಟಿತು. ಇದೇ ಕನ್ನಡದ ನವೋದಯದ ಪ್ರಾರಂಭದ ಕೆಲಸ.

ಇದೇ 1911ರಲ್ಲಿ ಮಂಜೇಶ್ವರದ ಗೋವಿಂದ ಪೈಗಳು ಒಂದು ಕ್ರಾಂತಿಕಾರಕ ಕಾರ್ಯವನ್ನು ಮಾಡಿದರು. ಕನ್ನಡದ ಪದ್ಯಗಳ ಪ್ರತಿಸಾಲಿನ ಮೊದಲಭಾಗದಲ್ಲಿ ಎರಡನೆಯ ವರ್ಣವು ಒಂದೇ ಆಗಿರಬೇಕೆಂಬ ಸಂಪ್ರದಾಯವು ಕೃತ್ರಿಮವಾದುದೆಂದು ತೀರ್ಮಾನಿಸಿ ಆ ಸಂಪ್ರದಾಯವನ್ನು ಮುರಿದು, ಪ್ರಾಸವನ್ನು ಬಿಟ್ಟು 'ಹೊಲೆಯನು ಯಾರು?" ಎಂಬ ಕವನವನ್ನು ರಚಿಸಿ 'ಸ್ವದೇಶಾಭಿಮಾನಿ" ಎಂಬ ಪತ್ರಿಕೆಯಲ್ಲಿ ಪ್ರಕಟಿಸಿಬಿಟ್ಟರು. ಇದೇ ಸಮಯದಲ್ಲಿ ಬಿ.ಎಂ. ಶ್ರೀಯವರ ಶಿಷ್ಯರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ತಮ್ಮ 'ಸಣ್ಣಕತೆಗಳು" ಎಂಬ ಪುಸ್ತಕವನ್ನು ಪ್ರಕಟಪಡಿಸಿದರು. ಈ ಕಾರ್ಯಗಳಿಂದ ಕೋಪಗೊಂಡ ಸಂಪ್ರದಾಯವಾದಿಗಳು ಪೈ ಅವರನ್ನು ಸಾಹಿತ್ಯ ಲೋಕದಲ್ಲಿ 'ಹುಲಿ" ಎಂದೂ ಮಾಸ್ತಿಯವರ ಸಣ್ಣಕತೆಗಳನ್ನು 'ಸಣ್ಣ ಕತ್ತೆ"ಗಳೆಂದೂ ಟೀಕಿಸಿದರು. ಪೈ ಅವರು ಈ ಟೀಕಾಕಾರರಿಗೆ ಇತ್ತ ಉತ್ತರ ಹೀಗಿತ್ತು: 'ಇಂದು ಒಬ್ಬನೇ ನಡೆದ ಮೇಕೆದಾರಿ ಮುಂದೆ ತೇರೆಳೆಯುವ ಹೆದ್ದಾರಿ." ಮಾಸ್ತಿಯವರ ಪ್ರತಿಕ್ರಿಯೆ ಹೀಗಿತ್ತು: 'ನಿಜ. ನನ್ನ ಸಣ್ಣ ಕತ್ತೆಗಳು ನಿಮ್ಮ ಮನಸ್ಸಿನ ಮೈಲಿಗೆಯನ್ನು ಅಗಸನ ಬಳಿಗೆ ಒಯ್ಯುತ್ತವೆ." ಶ್ರೀಯವರ ಬಗ್ಗೆ ಅವರ ಕವನಸಂಕಲನ ಪ್ರಕಟವಾದಾಗಲೂ ಇಂಥವೇ ವ್ಯಂಗ್ಯವಾದ ಮಾತುಗಳು ಬಂದವು. ಆದರೆ ಅವರು ವ್ಯಸನದಿಂದ ಆ ಬಗೆಯ ಮಾತುಗಳನ್ನು ನುಂಗಿಕೊಂಡರು. ಹೊಸಗನ್ನಡದ ನವೋದಯವು ಪ್ರಾರಂಭವಾಗಿಬಿಟ್ಟಿತ್ತು.

ಶ್ರೀಯವರ 'ಇಂಗ್ಲಿಷ್ ಗೀತಗಳು" ಪುಸ್ತಕವು ಪ್ರಕಟವಾಗಿ ಈ ಆಂದೋಳನವು ಬೃಹತ್ಪ್ರಮಾಣದಲ್ಲಿ ಮುಂದುವರೆಯಿತು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಶ್ರೀಯವರ ಶಿಷ್ಯರು 'ಕಿರಿಯ ಕಾಣಿಕೆ", 'ತಳಿರು" ಎಂಬ ಹೊಸಕನ್ನಡ ಕವನ ಸಂಕಲನಗಳನ್ನು ಪ್ರಕಟಿಸಿ ಈ ಚಳವಳಿಯನ್ನು ಮುಂದುವರಿಸಿದರು. ಬಳಿಕ ಶ್ರೀಯವರು ಕೈಗೊಂಡ ಭಾಷಣಗಳ ಪ್ರಚಾರಕಾರ್ಯ ಗಾಢವಾಯಿತು. ನವೋದಯ ಬೆಳೆಯಿತು. ಈ ಉದಯದ ದೊಡ್ಡ ಕವಿ ಕುವೆಂಪು 'ನವೀನ" ಎಂಬ ಕವನವನ್ನು ಪ್ರಕಟಿಸಿ ನವೋದಯದ ಪ್ರಭಾವವನ್ನು ಕಾವ್ಯದಲ್ಲಿ ಮೂಡಿಸಿದರು. ಆ ಕವನವು ಹೀಗಿದೆ:

ನಾಡಿನ ಪುಣ್ಯದ ಪೂರ್ವದಿಗಂತದಿ
ನವ ಅರುಣೋದಯ ಹೊಮ್ಮುತಿದೆ!
ಚಿರನೂತನ ಚೇತನದುತ್ಸಾಹದಿ
ನವೀನ ಜೀವನ ಚಿಮ್ಮತಿದೆ!
ಅಭಿನವ ಮಧುಕೋಕಿಲ ಕಲಕಂಠದಿ
ಸ್ವರ ಸುರಚಾಪಗಳುಣ್ಮುತಿವೆ!
ಶ್ಯಾಮಲ ಕಾನನ ಸುಮ ಸಮ್ಮೇಲದಿ
ಇಂಚರ ಸಾಸಿರ ಪೊಣ್ಮುತಿವೆ!
ಕಿವಿ ಕಣ್ಣಾಗುತಿದೆ!
ಕಣ್ ಕಿವಿಯಾಗುತಿದೆ!

ಈ ಸಾಲುಗಳು ಯುವಕವಿಗಳ ಬಾಯಲ್ಲಿ ಶಾಶ್ವತವಾಗಿ ನಿಂತುಬಿಟ್ಟವು. ಈ ಕಾರ್ಯಗಳೆಲ್ಲವೂ 1911ರ ಉಪನ್ಯಾಸದ ಪರಿಣಾಮವಾಗಿ ಕನ್ನಡ ಜನತೆ ಕಂಡ ಕನಸಿನ ಪ್ರಭಾವ. ಈ ಕನಸುಗಳು ಮೂಡಿದ್ದು ಇಂದಿಗೆ, ಈ ಬೆಂಗಳೂರಿನ ಸಾಹಿತ್ಯ ಸಮ್ಮೇಳನವು ನಡೆಯುತ್ತಿರುವ ೨೦೧೧ರ ಸಮಯಕ್ಕೆ ಸರಿಯಾಗಿ ನೂರು ವರ್ಷಗಳ ಹಿಂದೆ. ಆದ್ದರಿಂದ ಇಂದು ನೆರವೇರುತ್ತಿರುವ ಸಮ್ಮೇಳನವು ನವೋದಯದ ಶತಮಾನದ ಉತ್ಸವ ಸಮಾರಂಭವೆಂದು ನಾನು ತಿಳಿದಿದ್ದೇನೆ. ಇಂದು ಇದರಲ್ಲಿ ಭಾಗವಹಿಸಿ ತಮ್ಮೆದುರು ಮಾತನಾಡಲು ನನಗೆ ಸಂತೋಷವಾಗುತ್ತಿದೆ.

ಈ ನೂರು ವರ್ಷಗಳಲ್ಲಿ ಈ ಆಂದೋಲನದಿಂದ ನಮಗೆ ಆದ ಲಾಭವೇನು ಎಂದು ಲೆಕ್ಕ ಹಾಕುವುದು ತಪ್ಪಲ್ಲ. ಅದು ಲಾಭದಾಯಕವಾದ ಸಿಂಹಾವಲೋಕನವಾಗುತ್ತದೆ.

ಶ್ರೀಯವರ ಉದ್ದೇಶದಲ್ಲಿ ಮೂರು ಮುಖ್ಯವಾದ ವಿಷಯಗಳಿದ್ದವು.

1 ಇಲ್ಲಿಯವರೆಗೆ ಸಂಸ್ಕೃತದ ಪೋಷಣೆಯಲ್ಲಿ ಬೆಳೆದ ಕನ್ನಡವು ಇನ್ನು ಮುಂದೆ ಇಂಗ್ಲಿಷ್ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಬೇಕು.

2 ಹೊಸಗನ್ನಡಕ್ಕೆ ನೂತನ ಗದ್ಯದ ಶೈಲಿಯನ್ನು ತಂದುಕೊಡಬೇಕು.

3 ಒಟ್ಟಿನಲ್ಲಿ ಉದಾರವಾದ ಜೀವನಧರ್ಮದ ಸಾರವನ್ನು ಪ್ರಚಾರ ಮಾಡಬೇಕು.

ಇಂಗ್ಲಿಷ್ ಸಾಹಿತ್ಯಕ್ಕೆ ಗ್ರೀಕ್, ಜರ್ಮನ್, ಫ್ರೆಂಚ್ ಮತ್ತು ಲ್ಯಾಟಿನ್ ಭಾಷಾ ಸಾಹಿತ್ಯಗಳ ಸತ್ವಗಳು ಇಳಿದು ಬಂದಿದ್ದವು. ಆ ಎಲ್ಲ ಪ್ರಭಾವಗಳೂ ಕನ್ನಡದ ಬೆಳವಣಿಗೆಯಲ್ಲಿ ಸಹಾಯವಾಗುತ್ತವೆ ಎಂಬುದು ಶ್ರೀಯವರ ಆಸೆಯಾಗಿತ್ತು. ಕನ್ನಡದಲ್ಲಿ ಇಂದಿನವರೆಗೆ ಆಗಿರುವ ಬೆಳವಣಿಗೆಯಿಂದ ಆ ಆಸೆಯು ಈಡೇರಿದೆ ಎಂಬುದು ಸಾಬೀತಾಗುತ್ತದೆ. ನವೋದಯದ ಪರಿಣಾಮವಾಗಿ ಕನ್ನಡದ ಸಾಹಿತ್ಯದಲ್ಲಿ ಏನೇನು ಬದಲಾವಣೆಯಾಗಿವೆ ಎಂಬುದನ್ನು ಮೇಲುಸ್ತರದಲ್ಲಿ ಪರಿಶೀಲಿಸಿದರೂ ನಿಜವಾಗಿ ಆಶ್ಚರ್ಯವಾಗುತ್ತದೆ.

ಮುಂದಿನ ಭಾಗ : ಕನ್ನಡ ಸಾಹಿತ್ಯ ಕೃಷಿ ನಡೆದದ್ದು ಹೀಗೆ... »

English summary
Keynote address by Prof G Venkatasubbaiah, president 77th All India Kannada Sahitya Sammelana, Bengaluru. Here is the full text of G Venkatasubbaiah's speach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X