ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರು ನಿದ್ದೆ ಮಾಡಿದರೆ ಅಪಾಯ : ಜಿ ವೆಂಕಟಸುಬ್ಬಯ್ಯ

By * ಪ್ರಸಾದ ನಾಯಿಕ
|
Google Oneindia Kannada News

Prof G Venkatasubbiah at Press club of Bangalore
ಬೆಂಗಳೂರು, ಫೆ. 01 : ಕನ್ನಡ ನಾಶವಾಗುತ್ತಿದೆ, ಕನ್ನಡತನ ಮಾಯವಾಗುತ್ತಿದೆ ಅನ್ನುವ ಬದಲು ಕನ್ನಡ ಇದೆ ಇದೆ ಅಂತಲೇ ಕನ್ನಡಿಗರು ಮಾತಾಡಬೇಕು. ಕನ್ನಡದ ಬಗ್ಗೆ ಕನ್ನಡಿಗರು ಯಾವಾಗಲೂ ಎಚ್ಚರವಾಗಿರಬೇಕು. ಕನ್ನಡಿಗರು ನಿದ್ದೆ ಮಾಡಿದರೆ ಅಪಾಯ ಎಂದು ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಕನ್ನಡಿಗರನ್ನು ಎಚ್ಚರಿಸಿದ್ದಾರೆ.

41 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಜಿ. ವೆಂಕಟಸುಬ್ಬಯ್ಯ ಅವರು ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ 'ಇಗೋ ಕನ್ನಡ' ಖ್ಯಾತಿಯ ಜಿವಿ ಅವರು ಕನ್ನಡಿಗರನ್ನು ಎಚ್ಚರಿಸಿದ ಪರಿಯಿದು.

ಉತ್ಸಾಹದ ಬುಗ್ಗೆಯಂತಿರುವ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು 98ರ ವಯೋಮಾನದವರಾಗಿದ್ದರೂ ಕನ್ನಡಗರಲ್ಲಿರಬೇಕಾದ ಕನ್ನಡ ಪ್ರಜ್ಞೆ, ಜಾಗೃತಿ, ಕನ್ನಡದ ಅಳಿವಿನ ಉಳಿವಿನ ಬಗ್ಗೆ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಕನ್ನಡದ ಅಳಿವಿಗಿಂತ ಕನ್ನಡ ಉಳಿವಿನ ಬಗ್ಗೆ ಕನ್ನಡಿಗರು ಕಾರ್ಯಪ್ರವೃತ್ತರಾಗಬೇಕು ಮತ್ತು ಯಾವತ್ತೂ ಆಶಾಭಾವನೆ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.

ಇಂಗ್ಲಿಷ್ ಕೊಲೆಗಡುಕ ಭಾಷೆ : ನಿಘಂಟುತಜ್ಞರಾಗಿ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯನ್ನು ಆಳವಾಗಿ ಅಭ್ಯಸಿಸಿರುವ ಜಿವಿಯವರು ಇಂಗ್ಲಿಷ್ ನ ಅತಿಯಾದ ಬಳಕೆಯಿಂದಾಗಿ ಕನ್ನಡ ಅಳಿಯಬಾರದು. ಜಾಗತಿಕವಾಗಿ ಇಂಗ್ಲಿಷ್, ಸ್ಪಾನಿಷ್ ಮತ್ತು ಪೋರ್ಚುಗಿಸ್ ಕೊಲೆಗಡುಕ ಭಾಷೆ ಎಂದು ಬಣ್ಣಿಸಿದ ಅವರು, ಆ ಭಾಷೆಯ ಆಕ್ರಮಣ ಅತಿಯಾದರೆ ಅದರ ಅಡಿಯಲ್ಲಿರುವ ಭಾಷೆಯ ನಾಶ ಖಚಿತ ಎಂದು ಎಚ್ಚರಿಸಿದರು.

ಆದರೆ, ಕನ್ನಡದ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ ಅವರು, ಎರಡು ಸಾವಿರ ವರುಷಗಳ ಚರಿತ್ರೆಯಿರುವ ಕನ್ನಡ ಇನ್ನೂ ಸಮೃದ್ಧವಾಗಿದೆ. ಶಬ್ಧ ಸಂಪತ್ತು ನಾಶವಾಗದಂತೆ ಕಾಪಾಡುವ ಜವಾಬ್ದಾರಿ ನಮ್ಮದು. ಇಂಗ್ಲಿಷ್ ಜೊತೆಯೇ ಕನ್ನಡವೂ ಬೆಳೆಯಬೇಕು, ಆದರೆ ಇಂಗ್ಲಿಷ್ ಮುಂದುವರಿಯಲು ಬಿಡಬಾರದು. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಕಷ್ಟು ಬದಲಾವಣೆ ಕಂಡಿದೆ. ವರದಿಗಾರಿಕೆಯಲ್ಲಿಯೂ ಈ ಬದಲಾವಣೆ ಕಾಣುತ್ತಿದ್ದೇವೆ. ಆಡಳಿತಾತ್ಮಕವಾಗಿಯೂ ಕನ್ನಡದ ಬಳಕೆ ಹೆಚ್ಚಾಗಬೇಕು ಎಂದು ಅವರು ಹೇಳಿದರು.

ಮಹಿಳೆಯರಿಂದ ಕನ್ನಡದ ಉಳಿವು : ಅಡುಗೆಮನೆಯಲ್ಲಿ ಕೂಡ ಕನ್ನಡ ಯಾವ ರೀತಿ ಬದಲಾವಣೆ ಕಂಡಿದೆ ಎಂಬ ಬಗ್ಗೆ ಮಾತನಾಡುತ್ತ, ನಾವು ಬಳಸುವ ಪ್ರತಿಯೊಂದು ಮಾತೂ ಇಂಗ್ಲಿಷ್ ಮಯವಾಗಿದೆ ಎಂದು ಹೇಳಿದರು. ಅಡುಗೆ ಮಾಡುವಾಗ, ಕ್ಯಾಪ್ಸಿಕಂ, ಬೌಲು, ಪ್ಯಾನ್, ಫ್ರೈ, ಮಿಕ್ಸ್, ಟೇಸ್ಟಿ ಎಂಬಿತ್ಯಾದಿ ಆಂಗ್ಲ ಪದಗಳನ್ನೇ ಬಳಸುತ್ತೇವೆ ಎಂದು ತಮಾಷೆಯ ಉದಾಹರಣೆ ನೀಡಿದರು. ಕನ್ನಡ ಮಹಿಳಾಮಣಿಗಳಿಂದಲೇ ಉಳಿಯಬೇಕು. ಅವರನ್ನು ಗಂಡ ಮತ್ತು ಮಕ್ಕಳು ಅನುಸರಿಸುತ್ತಾರೆ ಎಂದು ಕನ್ನಡತಿಯರಿಗೆ ಕನ್ನಡವನ್ನೇ ಬಳಸಬೇಕೆಂದು ಕಿವಿಮಾತು ಹೇಳಿದರು.

ಕನ್ನಡ ಬದುಕಬೇಕಾದರೆ ವಿಧಾನಸೌಧದಲ್ಲಿ ಕನ್ನಡ ರಾಜ್ಯಭಾರ ನಡೆಯಬೇಕು. ನಗರ, ಗ್ರಾಮಗಳ ಕಚೇರಿಯಲ್ಲಿ ಕನ್ನಡತನವಿರಬೇಕು. ಅರ್ಜಿ, ಟಿಪ್ಪಣಿಗಳಲ್ಲಿಯೂ ಕನ್ನಡ ವಿರಾಜಮಾನವಾಗಿಬೇಕು. ಭಾಷೆಗಾಗಿ ಮಾತ್ರವಲ್ಲ ಇಡೀ ಕನ್ನಡನಾಡಿಗಾಗಿ ಜನಾಂದೋಲನಾಗಬೇಕು. ಸಾಹಿತ್ಯ ಸಮ್ಮೇಳನದಿಂದ ಇಡೀ ದೇಶದಲ್ಲಿ ಕನ್ನಡ ಗಮನ ಸೆಳೆಯುತ್ತಿದೆ. ಸಾಹಿತ್ಯದಲ್ಲಿಯೂ ಅಪಾರ ಕೆಲಸ ನಡೆಯುತ್ತಿದೆ. ಆದರೆ, ಬಾಷೆ ತೊಂದರೆ ಎದುರಿಸಿದಾಗ ಸಮರ್ಥವಾಗಿ ಎದುರಿಸಲು ಆಸಕ್ತಿ ವಹಿಸಬೇಕು. ಇದಕ್ಕಾಗಿ ನಗರಗಳಲ್ಲಿ ಮಾತ್ರವಲ್ಲ ಗ್ರಾಮಗಳಲ್ಲಿಯೂ ಜನಾಂದೋಲನವಾಗಬೇಕು ಎಂದು ವೆಂಕಟಸುಬ್ಬಯ್ಯ ನುಡಿದರು.

ಜನಾಂದೋಲನ : ಕನ್ನಡ ಪ್ರಜ್ಞೆ, ಕನ್ನಡದ ಉಳಿವಿಗಾಗಿ ಆಂದೋಲನದ ಅವಶ್ಯಕತೆ ಬಗ್ಗೆ ವಿಸ್ತೃತವಾಗಿ ಮಾತನಾಡಿದ ವೆಂಕಟಸುಬ್ಬಯ್ಯ ಅವರು ಸಮ್ಮೇಳನದಲ್ಲಿ ತಾವು ಮಾಡಲಿರುವ ಭಾಷಣದ ಬಗ್ಗೆ ಗುಟ್ಟು ಮಾತ್ರ ಬಿಟ್ಟುಕೊಡಲಿಲ್ಲ. ಇದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ, ಎರಡು ದಿನ ಕಾದು ನೋಡಿ ಎಂದಷ್ಟೆ ಮುಗುಳ್ನಗುತ್ತ ಹೇಳಿದರು.

ಕನ್ನಡ ನುಡಿಹಬ್ಬದ ಉಸ್ತುವಾರಿ ವಹಿಸಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಮತ್ತು ಮೆರವಣಿಗೆಯ ನೇತೃತ್ವ ವಹಿಸಿರುವ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣ ಗೌಡ ಅವರು ಉಪಸ್ಥಿತರಿದ್ದು ಸಂವಾದದಲ್ಲಿ ಪಾಲ್ಗೊಂಡರು. ಕನ್ನಡ ನುಡಿಹಬ್ಬಕ್ಕೆ ಅನ್ಯ ಭಾಷಿಕರನ್ನು ಆಕರ್ಷಿಸಲು ಪರಿಷತ್ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ, ನಕಾರಾತ್ಮಕವಾಗಿ ಉತ್ತರಿಸಿದ ನಲ್ಲೂರು ಪ್ರಸಾದ್ ಅವರು ಸಲಹೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದಾಗಿ ಹೇಳಿದರು.

ಬೆಂಗಳೂರಿನ ಎಲ್ಲೆಡೆ ಆಂಗ್ಲ ಹೋರ್ಡಿಂಗ್ ಗಳಿಗೆ ಕಪ್ಪು ಬಣ್ಣ ಬಳಿಯುತ್ತಿರುವುದನ್ನು ಬಲವಾಗಿ ಸಮರ್ಥಿಸಿಕೊಂಡ ನಾರಾಯಣ ಗೌಡ ಅವರು ಮೂರು ತಿಂಗಳಿಂದ ಸರಕಾರವನ್ನು ಈಕುರಿತಾಗಿ ಕೇಳಿದ್ದರೂ ಕ್ರಮ ಕೈಗೊಳ್ಳದಿದ್ದರಿಂದ ಇಂಥ ಕೆಲಸಕ್ಕೆ ವೇದಿಕೆ ಮುಂದಾಗಬೇಕಾಯಿತು ಎಂದರು. ಪತ್ರಿಕೆಗಳಲ್ಲಿನ ಜಾಹೀರಾತು ಮತ್ತು ಹೋರ್ಡಿಂಗ್ ಗಳಲ್ಲಿ ಮಾಯವಾಗುತ್ತಿರುವ ಕನ್ನಡದ ಬಗ್ಗೆ ಕಳವಳ ವ್ಯಕ್ತಪಡಿಸಿದ ವೆಂಕಟಸುಬ್ಬಯ್ಯ ಅವರು ಇಂಥ ಜಾಹೀರಾತುಗಳನ್ನು ನಿರಾಕರಿಸುವ ಗಟ್ಟಿತನವನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.

English summary
Prof G Venkatasubbaih, president 77th Kannada sahitya sammelana, participates in the meet the press jointly organized by Bangalore press club and Bangalore reports' guild at Bangalore press club. He says, survival of Kannada is in the hands of Kannadigas only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X