ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯ ಸಮ್ಮೇಳನ ಉದ್ದೇಶವಾದರೂ ಏನು?

By * ಜೋಗಿ
|
Google Oneindia Kannada News

Writer Jogi on Kannada Sahitya Sammelana
"ಕನ್ನಡ ಸಾಹಿತ್ಯ ಸಮ್ಮೇಳನ 2010 ಅನ್ನು ಸರಳವಾಗಿ ಮಾಡುತ್ತೇವೆ. ಬೆಂಗಳೂರಿನಲ್ಲೇ ಮಾಡುತ್ತೇವೆ." ಹಾಗಂತ ಸಾಹಿತ್ಯ ಪರಿಷತ್ತು ಘೋಷಿಸುವ ಮೂಲಕ ಮುಂದೆ ಬರಬಹುದಾದ ಅಪಾಯಗಳಿಂದ ಪಾರಾಗುವ ಉಪಾಯವನ್ನು ಕಂಡುಕೊಂಡಿದೆ. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ನಿರ್ಧಾರವನ್ನು ಹೇಗೆ ನೋಡಿದರೂ ಮೆಚ್ಚಿಕೊಳ್ಳುವುದು ಕಷ್ಟ. ಬೆಂಗಳೂರಿನ ನೂರೆಂಟು ರಗಳೆಗಳ ನಡುವೆ ಸಮ್ಮೇಳನ ತನ್ನ ಅರ್ಥಪೂರ್ಣತೆಯನ್ನು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ರಾಜಧಾನಿಯಲ್ಲಿ ಇಂಥ ಉತ್ಸವಗಳು ದಿನಕ್ಕೊಂದು ನಡೆಯುತ್ತಲೇ ಇರುತ್ತವೆ. ಆ ಹತ್ತರಲ್ಲಿ ಹನ್ನೊಂದಾಗಿಬಿಡುವ ಸಂಭವನೀಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ.

ಸಾಹಿತ್ಯ ಸಮ್ಮೇಳನ ಬೇಕಾ ಬೇಡವಾ? :ಸಾಹಿತ್ಯ ಸಮ್ಮೇಳನ ಅಂದಾಕ್ಷಣ ಮತ್ತೆ ಅದೇ ತಕರಾರು ಶುರುವಾಗುತ್ತದೆ. ಅದು ಸಮ್ಮೇಳನ ಅಲ್ಲ ಜಾತ್ರೆ ಎಂದು ಅನೇಕರು ಆಕ್ಷೇಪಿಸುತ್ತಾರೆ. ಅಲ್ಲಿ ಸಾಹಿತ್ಯದ ಚರ್ಚೆ ನಡೆಯುವುದಿಲ್ಲ ಎನ್ನುತ್ತಾರೆ. ಅದನ್ನೊಂದು ಜಾತ್ರೆ ಎಂದು ತಳ್ಳಿಹಾಕಲು ನೋಡುತ್ತಾರೆ. ಎಪ್ಪತ್ತೇಳನೇ ಸಾಹಿತ್ಯ ಸಮ್ಮೇಳನದ ಮೊದಲಿಗೂ ಅದೇ ಹಳೆಯ ಪ್ರಶ್ನೆ.

ಸಾಹಿತ್ಯ ಪರಿಷತ್ತು ಎಂಬ ಸಂಸ್ಥೆ ತನ್ನ ಮೂಲ ಆಶಯಗಳನ್ನು ಕಳೆದುಕೊಂಡು ಈಗ ಅವಸಾನದ ಅಂಚಿನಲ್ಲಿದೆ. ಅದು ಜಾಗೃತವಾಗುವುದು ಎರಡೇ ಸಂದರ್ಭಗಳಲ್ಲಿ: ಚುನಾವಣೆ ಮತ್ತು ಸಾಹಿತ್ಯ ಸಮ್ಮೇಳನ. ಈ ಎರಡೂ ಸಂದರ್ಭಗಳನ್ನು ಹೊರತುಪಡಿಸಿ ಅದು ಸುದ್ದಿ ಮಾಡಿದ್ದು ಒಂದೇ ಸಲ; ಪುನರೂರು ಪಂಚೆ ಪ್ರಕರಣದಲ್ಲಿ. ಉಳಿದಂತೆ ಇಡೀ ವರ್ಷ ಅಲ್ಪಸಂಖ್ಯಾತ ಕನ್ನಡಿಗನಂತೆ ತೆಪ್ಪಗಿದ್ದುಬಿಡುತ್ತದೆ.

ಹೊಸ ಲೇಖಕರನ್ನು ಗುರುತಿಸುವ ಕೆಲಸವನ್ನೂ ಅದು ಮಾಡುತ್ತಿಲ್ಲ ಎಂದು ಸುಲಭವಾಗಿ ಹೇಳಿಬಿಡಬಹುದಾದರೂ, ಅಲ್ಲಿ ನಮ್ಮ ಹೊಸ ಬರಹಗಾರರ ಜವಾಬ್ದಾರಿಯೂ ಇದೆ. ಅವರಿಗೆ ಸಾಹಿತ್ಯ ಪರಿಷತ್ತು ಬೇಕಾಗಿಲ್ಲ. ತಮಗೆ ಸ್ಪೂರ್ತಿ ನೀಡಬಹುದಾದ ಸಂಸ್ಥೆ ಎಂದು ಅದನ್ನು ಇತ್ತೀಚಿನ ಬರಹಗಾರರು ಪರಿಗಣಿಸಿಲ್ಲ. ಅವರ ಗಮನ ಸೆಳೆಯುವಂಥ ಕೆಲಸವನ್ನು ಪರಿಷತ್ತು ಕೂಡ ಮಾಡುತ್ತಿಲ್ಲ.

ಪರಿಷತ್ತು ಏನೇನು ಮಾಡಬಹುದು: ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ತಾಲೂಕು ಕೇಂದ್ರಗಳಲ್ಲೂ ಪರಿಷತ್ತಿನ ಅಂಗಸಂಸ್ಥೆಗಳಿವೆ. ಈ ಎಲ್ಲಾ ಸಂಸ್ಥೆಗಳು ಅನುದಾನಕ್ಕಾಗಿ ಸರ್ಕಾರದ ಮುಂದೆ ಕೈಯೊಡ್ಡುತ್ತವೆಯೇ ಹೊರತು, ತಾವಾಗಿಯೇ ಆರ್ಥಿಕವಾಗಿ ಬಲಗೊಳ್ಳುವ ಒಂದೂ ಕೆಲಸವನ್ನೂ ಮಾಡುತ್ತಿಲ್ಲ. ತಮ್ಮ ತಮ್ಮ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಒಂದೊಳ್ಳೆಯ ಪುಸ್ತಕದಂಗಡಿ ತೆರೆಯಬಹುದು. ಅಲ್ಲಿ ಕನ್ನಡ ಮತ್ತು ಇಂಗ್ಲಿಷಿನ ಪುಸ್ತಕಗಳನ್ನು ಮಾರಬಹುದು. ಅದನ್ನು ನಿಜಕ್ಕೂ ಲಾಭದಾಯಕವಾದ ವ್ಯವಹಾರವನ್ನಾಗಿ ಮಾಡಿಕೊಳ್ಳಬಹುದು. ಆಯಾ ಪ್ರದೇಶದ ಲೇಖಕರ ಕೃತಿಗಳನ್ನು ಪ್ರಕಟಿಸುವ, ಬಿಡುಗಡೆ ಮಾಡುವ ಕಾರ್ಯವನ್ನು ಅದು ವಹಿಸಿಕೊಳ್ಳಬಹುದು. ಹೀಗೆ ಹತ್ತಾರು ಸಾಧ್ಯತೆಗಳನ್ನು ತನ್ನೊಳಗಿಟ್ಟುಕೊಂಡೂ ಅದು ನಿಷ್ಕ್ರಿಯವಾಗಿ ಕೂತುಬಿಟ್ಟಿದೆ.

ವಿದೇಶಿ ಸ್ವಾಮ್ಯದ ಸಂಸ್ಥೆಗಳಿಗೂ ನಮಗೂ ಇರುವ ಮುಖ್ಯ ವ್ಯತ್ಯಾಸ ಅದು. ನಾವು ಎಲ್ಲವನ್ನೂ ಭಾವನಾತ್ಮಕವಾಗಿ ನೋಡುತ್ತೇವೆ. ವ್ಯವಹಾರದ ದೃಷ್ಟಿ ನಮ್ಮಲ್ಲಿ ಕಡಿಮೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಬೇಕು ಅನ್ನುವ ಹುಮ್ಮಸ್ಸು ಇರುವ ವ್ಯಕ್ತಿಗೆ ಆಡಳಿತ ಗೊತ್ತಿರುವುದಿಲ್ಲ. ಸಾಹಿತ್ಯದ ಅವಶ್ಯಕತೆಗಳ ಕುರಿತ ಜ್ಞಾನವೂ ಇರುವುದಿಲ್ಲ. ಸರ್ಕಾರದಿಂದ ಅನುದಾನ ಬಯಸುವುದರಿಂದ ಅದು ಸರ್ಕಾರದ ವಿರುದ್ಧ ಗಟ್ಟಿದನಿಯಲ್ಲಿ ಮಾತಾಡುವ ಸ್ವಾತಂತ್ರ್ಯವನ್ನೂ ಕಳಕೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಂಗಡಿಯಲ್ಲಿ ಇಂಗ್ಲಿಷ್ ಪುಸ್ತಕಗಳನ್ನೂ ಮಾರಬಹುದಲ್ಲ ಎಂದರೆ ಅದು ಕನ್ನಡ ವಿರೋಧಿ ಕೆಲಸ ಎಂಬಂತೆ ಕ್ರೂರವಾಗಿ ದಿಟ್ಟಿಸುತ್ತಾರೆ.

ಇವತ್ತು ನೂರಾರು ವ್ಯಾಪಾರಿ ಸಂಸ್ಥೆಗಳು ಕರ್ನಾಟಕವನ್ನು ಪ್ರವೇಶಿಸಿವೆ. ಯಾವುದಾದರೂ ಒಂದು ಸಂಸ್ಥೆಯ ಜೊತೆ ಮಾತುಕತೆ ನಡೆಸಿದರೂ ಅದು ಇಡೀ ಸಮ್ಮೇಳನವನ್ನು ಪ್ರಾಯೋಜಿಸಲು ಮುಂದೆ ಬರಬಹುದು. ಇವತ್ತು ಸಮಾರಂಭವನ್ನು ಆಯೋಜಿಸುವ ಸಂಸ್ಥೆಗಳಿಗೂ ಕೊರತೆಯೇನಿಲ್ಲ. ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳು ನೂರಾರಿವೆ. ಅವುಗಳ ಪೈಕಿ ಒಂದನ್ನು ಆರಿಸಿಕೊಂಡು ಅದಕ್ಕೆ ಇಡೀ ಸಮ್ಮೇಳನವನ್ನು ಪ್ರಾಯೋಜಿಸುವ ಕೆಲಸವನ್ನು ವಹಿಸಿದರೆ, ಪರಿಷತ್ತು ಅನೇಕ ಮುಜುಗರಗಳಿಂದ ಪಾರಾಗಬಹುದು.

ಇಷ್ಟು ಹೇಳುತ್ತಿದ್ದಂತೆ ಪವಿತ್ರವಾದ ಕನ್ನಡ ಭುವನೇಶ್ವರಿಯ ಸೇವೆಗೆ ವಿದೇಶಿ ಸಂಸ್ಥೆಗಳು ಬೇಕೇ ಎಂದು ಬೊಬ್ಬೆ ಶುರುವಾಗುತ್ತದೆ. ಹಿಂದೆ ಮದ್ಯದ ಕಂಪೆನಿಯೊಂದು ನಾಟಕಗಳನ್ನು ಪ್ರಾಯೋಜಿಸಲು ಮುಂದಾದಾಗ ಬುದ್ಧಿಜೀವಿಗಳು ಗಲಾಟೆ ಶುರುಮಾಡಿದ್ದರು. ಇವತ್ತಿಗೂ ಅಂಥ ಮನಸ್ಥಿತಿ ನಮ್ಮಿಂದ ಪೂರ್ತಿ ಮರೆಯಾಗಿಲ್ಲ.

ಸುಮ್ಮನೆ ಯೋಚಿಸಿ: ಸಾಹಿತ್ಯ ಪರಿಷತ್ತಿನ ಬಳಿ ಕನ್ನಡದಲ್ಲಿ ಬರೆಯುತ್ತಿರುವ ಲೇಖಕರ ಡಾಟಾಬೇಸ್ ಇಲ್ಲ. ಎಲ್ಲರನ್ನೂ ಹೇಗೆ ಸಂಪರ್ಕಿಸಬೇಕು ಅನ್ನುವುದು ಅವರಿಗೆ ಗೊತ್ತಿಲ್ಲ. ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂಬ ಕನಿಷ್ಟ ಅರಿವೂ ಅಲ್ಲಿರುವ ಮಂದಿಗೆ ಇದ್ದಂತಿಲ್ಲ. ತನಗೆ ಬಂದ ಅನುದಾನದಲ್ಲಿ ರನ್ನ, ಪಂಪರ ವೆಬ್‌ಸೈಟು ಮಾಡುತ್ತೇವೆ, ಎಲ್ಲರ ಕೃತಿಗಳೂ ಆನ್‌ಲೈನ್ ಸಿಗುವಂತೆ ಮಾಡುತ್ತೇವೆ ಎಂದು ಮನಸ್ಸಿಗೆ ತೋಚಿದ್ದನ್ನು ಹೇಳುತ್ತಿರುತ್ತವೆ ಅವು.

ಅಲ್ಲೇ ಮೂರು ಸಂಸ್ಥೆಗಳ ನಡುವೆ ಅನುಸಂಧಾನ ಇಲ್ಲ. ಒಂದು ಕಡೆ ಪುಸ್ತಕ ಪ್ರಾಧಿಕಾರ ತನಗೆ ತೋಚಿದ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಇನ್ನೊಂದೆಡೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡವನ್ನು ಉಳಿಸುವುದಕ್ಕೆ ತನ್ನದೇ ರೀತಿಯಲ್ಲಿ ಶ್ರಮಿ"ಸುತ್ತಿದೆ. ಸಾಹಿತ್ಯ ಅಕಾಡೆಮಿ ಮತ್ತೊಂದು ದಿಕ್ಕಿನಲ್ಲಿ ಅದೇ ಕೆಲಸ ಮಾಡುತ್ತಿದೆ. ಈ ಮಧ್ಯೆ ಪರಿಷತ್ತು ತನ್ನ ಅಳಿಲು ಸೇವೆ ಎಂಬಂತೆ ಸಾಹಿತ್ಯ ಸಮ್ಮೇಳನ ನಡೆಸುತ್ತಾ ದಿಕ್ಕೆಟ್ಟು ಕೂತಿದೆ.

ಸಾಹಿತ್ಯ ಪರಿಷತ್ತಿನಿಂದ ಯಾರಿಗೆ ಏನು ಪ್ರಯೋಜನವಾಗಿದೆ. ಅಲ್ಲೊಂದು ಒಳ್ಳೆಯ ಗ್ರಂಥಾಲಯವಾದರೂ ಇದೆಯಾ? ಪುಸ್ತಕ ಪ್ರಾಧಿಕಾರ ಯಾವ ಪುಸ್ತಕಗಳನ್ನು ಪ್ರಕಟಿಸಿದೆ, ತಾನು ಯಾವುದನ್ನು ಪ್ರಕಟಿಸಬೇಕು ಎಂಬ ವಿವೇಚನೆಯನ್ನು ಎರಡೂ ಸಂಸ್ಥೆಗಳೂ ಬಳಸುತ್ತಿಲ್ಲ. ಜಿ ಎಸ್ ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಗೌರವಿಸಿದ ಸಂದರ್ಭದಲ್ಲಿ ಅವರ ಪುಸ್ತಕಗಳ ಪ್ರಕಟಣೆಗೆ ಐವತ್ತು ಲಕ್ಷ ರುಪಾಯಿ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಅದಿನ್ನೂ ಬಿಡುಗಡೆಯಾದಂತಿಲ್ಲ.

*********

ಇಷ್ಟೆಲ್ಲ ಗೊತ್ತಿದ್ದರೂ ಹುಡುಗರು ಉತ್ಸಾಹದಿಂದಿದ್ದಾರೆ. ಸಮ್ಮೇಳನಕ್ಕೆ ಬರುತ್ತಾರೆ. ಪುಸ್ತಕ ಕೊಳ್ಳುತ್ತಾರೆ, ಭಾಷಣ ಕೇಳುತ್ತಾರೆ. ಪತ್ರಿಕೆಗಳಲ್ಲಿ ಊಟಕ್ಕೋಸ್ಕರ ನಡೆದ ಯುದ್ಧ, ಕಿಟ್ ಸಿಗದವರ ಪರದಾಟಗಳಷ್ಟೇ ಸುದ್ದಿಯಾಗುತ್ತದೆ. ಸಮ್ಮೇಳನದಲ್ಲಿ ಚರ್ಚೆಯಾದದ್ದೇನು, ಆಮೇಲೇನು ನಡೆಯಿತು ಎಂಬುದು ಗೊತ್ತಾಗುವುದೇ ಇಲ್ಲ. ಸಮ್ಮೇಳನದ ಅಷ್ಟೂ ದಿನ ನಡೆದ ಗೋಷ್ಠಿಗಳಲ್ಲಿ ಮಾಡಿದ ಭಾಷಣ, ನಡೆದ ಚರ್ಚೆಯನ್ನು ಪುಸ್ತಕರೂಪದಲ್ಲಿ ತರುವ ಸಣ್ಣ ಕೆಲಸವನ್ನೂ ಪರಿಷತ್ತು ಮಾಡುವುದಿಲ್ಲ. ಮೂಡಬಿದರೆಯ ಮೋಹನ ಆಳ್ವಾ ನಡೆಸುವ ನುಡಿಸಿರಿ"ಯಲ್ಲಿ ಅಂಥದ್ದೊಂದು ಸಂಪ್ರದಾಯವಿದೆ.

ಸಮ್ಮೇಳನ ಬೇಕೋ ಬೇಡವೋ ಎಂದು ಚರ್ಚಿಸುವ ಕಾಲ ಆಗಿಹೋಗಿದೆ. ಬದಲಾದ ಕಾಲಕ್ಕೆ ತಕ್ಕಂತೆ ಹೇಗೆ ಸಮ್ಮೇಳನವನ್ನು ಸೊಗಯಿಸಬಹುದು ಎಂಬುದನ್ನಷ್ಟೇ ನೋಡಬೇಕು. ಶಿಸ್ತುಬದ್ಧತೆ, ಸಮಯಪಾಲನೆ, ಸ್ವಚ್ಛತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಆತ್ಮೀಯತೆಯನ್ನು ಸಮ್ಮೇಳನ ಮೈಗೂಡಿಸಿಕೊಳ್ಳುವುದಕ್ಕೆ ಸಮಸ್ಯೆಯೇನು ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ.

ಅಧ್ಯಕ್ಷ ಪ್ರೊ.ಜಿವಿ ಭಾಷಣಕ್ಕಾಗಿ ಕಾತರ:ಇವೆಲ್ಲದರ ನಡುವೆಯೂ ಒಂದು ಸಂತೋಷದ ಸುದ್ದಿಯಿದೆ. ಈ ಸಲದ ಸಮ್ಮೇಳನಾಧ್ಯಕ್ಷರು ಕನ್ನಡವನ್ನು ಶ್ರೀಮಂತಗೊಳಿಸಿದ ಗಂಜಾಂ ವೆಂಕಟಸುಬ್ಬಯ್ಯ. ನಮ್ಮಲ್ಲಿ ಸದ್ದಿಲ್ಲದೆ ಕನ್ನಡದ ಕೆಲಸವನ್ನು ಮಾಡುವವರು ಅನೇಕರಿದ್ದಾರೆ. ಒಂದು ಭಾಷೆಯಲ್ಲಿ ಸದ್ಯಕ್ಕೆ ಸೃಷ್ಟಿಯಾಗುವ ಸಾಹಿತ್ಯದಷ್ಟೇ, ಸಂಶೋಧನೆ ಕೂಡ ಮುಖ್ಯ. ಸಮಕಾಲೀನ ಸಾಹಿತ್ಯ ಓದುಗರನ್ನು ಹಿಡಿದಿಟ್ಟರೆ ಶಾಸ್ತ್ರೀಯ ಅಧ್ಯಯನ ಆ ಭಾಷೆಯನ್ನು ಶ್ರೀಮಂತಗೊಳಿಸುತ್ತಾ ಹೋಗುತ್ತದೆ.

ಪದಮೂಲವನ್ನು ಹುಡುಕಿಕೊಂಡು ಹೋದವರಲ್ಲಿ ಪಾವೆಂ ಆಚಾರ್ಯ ಅಗ್ರಗಣ್ಯರು. ಅವರು ಒಂದೊಂದು ಪದವನ್ನು ಹುಡುಕಿಕೊಂಡು ಹೋಗಿ ಅದರ ಮೂಲವನ್ನು ನಮ್ಮ ಮುಂದಿಟ್ಟು, ಪದಗಳ ಅರ್ಥವನ್ನು ತಿಳಿಯುವುದು ಕೂಡ ಪತ್ತೇದಾರಿ ಕಾದಂಬರಿ ಓದಿದಷ್ಟೇ ರೋಚಕ ಸಂಗತಿ ಎನ್ನುವುದನ್ನು ತೋರಿಸಿಕೊಟ್ಟವರು. ಅಂಥದ್ದೇ ಕೆಲಸವನ್ನು ವೆಂಕಟಸುಬ್ಬಯ್ಯ ಮಾಡಿದ್ದಾರೆ. ಅವರ ಓದಿನ ವಿಸ್ತಾರ, ಅಗಾಧ ನೆನಪಿನ ಶಕ್ತಿ ಮತ್ತು ಆ ಕ್ಷಣಕ್ಕೆ ಓದಿದ್ದನ್ನು ನೆನಪಿಸಿಕೊಳ್ಳುವ ಪ್ರತಿಭೆ ನಮ್ಮನ್ನು ವಿನಯವಂತರನ್ನಾಗಿ ಮಾಡುತ್ತದೆ. ಒಂದು ಪದದ ಅರ್ಥ ಕೇಳಿದರೆ ಅದು ಯಾವ ಹಳೆಗನ್ನಡ ಕಾವ್ಯದ ಯಾವ ಸಾಲಲ್ಲಿದೆ ಎಂದು ಹೇಳಬಲ್ಲವರು ಅವರು.

ಜನಪ್ರಿಯ ಲೇಖಕರ ನಡುವೆ ಇಂಥವರು ಮರೆಯಲ್ಲೇ ಉಳಿದುಬಿಡುತ್ತಾರೆ. ಅವರನ್ನು ಗುರುತಿಸಿ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಮಾಡಿದ್ದು ಪರಿಷತ್ತಿನ ಈ ಸಲದ ಸಾಧನೆ. ಅವರ ಅಧ್ಯಕ್ಷ ಭಾಷಣಕ್ಕಾಗಿ ನಾನಂತೂ ಕುತೂಹಲದಿಂದ ಕಾಯುತ್ತಿದ್ದೇನೆ.

ವೆಂಕಟಸುಬ್ಬಯ್ಯನವರಿಗೆ ತೊಂಬತ್ತೆಂಟು. ಆದರೆ ಅವರು ತೊಂಬತ್ತೆಂಟರಂತೆ ಕಾಣಿಸುವುದಿಲ್ಲ. ಅವರ ತಾಯಿಯವರು ನೂರ ಏಳು ವರ್ಷ ಬದುಕಿದ್ದರು. ಕನ್ನಡದಲ್ಲಿ ಇವತ್ತು ಬರುತ್ತಿರುವ ಕೃತಿಗಳನ್ನೂ ವೆಂಕಟಸುಬ್ಬಯ್ಯ ತನ್ಮಯತೆಯಿಂದ ಓದುತ್ತಾರೆ. ಯಾವುದೋ ಪದದ ಹಿಂದೆ ಬೀಳುತ್ತಾರೆ. ಅದರ ಅರ್ಥ, ಪ್ರಯೋಗ, ಸಂದರ್ಭ, ಸ್ವಾರಸ್ಯವನ್ನು ಹುಡುಕುತ್ತಾರೆ. ಅವರ ಇಗೋ ಕನ್ನಡ" ಸಂಪುಟಗಳು ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ.

ನನಗೂ ಸಾಹಿತ್ಯ ಸಮ್ಮೇಳನಕ್ಕೂ ಸಂಬಂಧವೇ ಇಲ್ಲವೇನೋ ಎಂದು ಎಷ್ಟೋ ಸಲ ಅನ್ನಿಸುತ್ತದೆ. ಸಹಲೇಖಕರು ಬರುತ್ತಾರೆ ಎಂದು ಹೋದರೆ ಅಲ್ಲಿ ನಿರಾಸೆ ಕಾದಿರುತ್ತದೆ. ಲೇಖಕರನ್ನು ಕರೆಸುವ ಸತ್ಸಂಪ್ರದಾಯ ಪರಿಷತ್ತಿಗಿಲ್ಲ. ಗೋಷ್ಠಿಯಲ್ಲಿ ಮಾತನಾಡಬೇಕಾದವರು ತಮ್ಮ ಗೋಷ್ಠಿಗಷ್ಟೇ ಬಂದು ಹೋಗುತ್ತಾರೆ. ಹೀಗಾಗಿ ಲೇಖಕ ಸಮುದಾಯದ ನಡುವೆ ಅಲ್ಲಿ ಸಂವಹನ ಸಾಧ್ಯವಾಗುವುದಿಲ್ಲ. ಉಡುಪಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಾದ ಸಂಚಯ"ದ ಪ್ರಹ್ಲಾದ್ ಪುಸ್ತಕದಂಗಡಿಯ ಮುಂದೆ ಕವಿಗೋಷ್ಠಿ ಏರ್ಪಡಿಸಿದ್ದರು. ಹಾಗೊಂದು ಉತ್ಸಾಹ ಮೂಡಿಸುವುದಕ್ಕೆ ಯತ್ನಿಸಿದ್ದರು. ಅದು ಯಶಸ್ವಿಯೂ ಆಗಿತ್ತು.

ಅಂಥ ಉತ್ಸಾಹ ಈ ಸಮ್ಮೇಳನವನ್ನು ಆವರಿಸೀತೇ? ಬೆಂಗಳೂರಿನಲ್ಲಿ ನಲವತ್ತು ವರ್ಷಗಳ ನಂತರ ನಡೆಯುತ್ತಿರುವ ಸಮ್ಮೇಳನ ಹೊಸ ಚಳವಳಿಯೊಂದನ್ನು ಹುಟ್ಟುಹಾಕೀತೇ? ಆಶೆಯೆಂಬ ತಳ ಒಡೆದ ದೋಣಿಯಲಿ ದೂರ ತೀರಯಾನ. ಎಣ್ಣೆ ತೀರದ ಹಣತೆಯ ಮುಂದೆ ಬತ್ತಿ ಹೊಸೆತ. ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು, ಕರಗೀತು ಮುಗಿಲ ಬಳಗ.."

ಒಂದೊಂದು ಕವನವೂ ಭರವಸೆಯ ವ್ಯವಸಾಯ ಎಂದರು ರಾಮಚಂದ್ರ ಶರ್ಮ. ಒಂದೊಂದು ಸಾಹಿತ್ಯ ಸಮ್ಮೇಳನದ ಮೊದಲಿನ ಅವಧಿಯಲ್ಲೂ ಭರವಸೆಯ ವ್ಯವಸಾಯ. ಮುಗಿದ ಮೇಲೆ ಮತ್ತದೇ ನಾವು, ಮತ್ತದೇ ನೀವು. ಮತ್ತದೇ ಜಗತ್ತು. ಕನ್ನಡಕ್ಕಾಗಿ ಹೋರಾಟ.

ಕನ್ನಡವ ಕಾಪಾಡು ನನ್ನ ಆನಂದಾ…."

English summary
Kannada Sahithya Sammelana 2010 to be held in Bengaluru. But, Sahithya Sammelana’s are losing its importance and purpose nowadays says Writer Jogi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X