• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈಭವೋಪೇತ ಕಾಟಾಚಾರ ಸಂಪನ್ನ ಸಮ್ಮೇಳನ

By * ಎಚ್. ಆನಂದರಾಮ ಶಾಸ್ತ್ರೀ
|

"ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ"ವೆಂಬ ವಾರ್ಷಿಕ ಜಾತ್ರೆಯ ಬಗ್ಗೆ ಕೊಂಚ ಗಮನ ಹರಿಸೋಣ. ಅಂಥ ಜಾತ್ರೆ ನಿಷ್ಪ್ರಯೋಜಕವೆಂದು ಯಾರೇನೇ ಟೀಕಿಸಲಿ, "ಕನ್ನಡ ಸಾಹಿತ್ಯ ಸಮ್ಮೇಳನ"ವೆಂಬುದು ಇರಬೇಕು. ಸಾಹಿತ್ಯೋದ್ಧಾರಕ್ಕಲ್ಲದಿದ್ದರೂ ಸಾಹಿತ್ಯಸೇವೆಗೆ, ಸಾಹಿತ್ಯಪ್ರಸಾರಕ್ಕೆ, ಸಾಹಿತ್ಯಾಸಕ್ತಿಯ ಉದ್ದೀಪನಕ್ಕೆ, ಸಾಹಿತ್ಯ ಸಮಾಲೋಚನೆಗೆ, ಸಾಹಿತಿ, ಓದುಗರ ಮಧ್ಯೆ ಸೇತುವಾಗಲಿಕ್ಕೆ ಮತ್ತು ಅಷ್ಟೇ ಮುಖ್ಯವಾಗಿ ಇಂದು ನಾಡಿನ ಒಳಗೂ ಹೊರಗೂ ಕನ್ನಡದಕನ್ನಡಿಗನ ಗುರುತಿನ ರಕ್ಷಣೆಗಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯವಶ್ಯ.

ಸಮ್ಮೇಳನ ನಡೆಯುವ ಸಂದರ್ಭದಲ್ಲಿ, ಪ್ರತಿ ವರ್ಷವೂ, ಅದು ಹೇಗಿರಬೇಕೆಂಬ ಜಿಜ್ಞಾಸೆ, ಚರ್ಚೆ ಕೂಡ ನಡೆಯುತ್ತಿರುವುದು ಸಾಹಿತ್ಯ, ಸಂಸ್ಕೃತಿ ಮತ್ತು ನಾಡು, ನುಡಿಗಳ ಹಿತದೃಷ್ಟಿಯಿಂದ ಸ್ವಾಗತಾರ್ಹ. ಅಂಥ ಜಿಜ್ಞಾಸೆ-ಚರ್ಚೆಗಳ ಫಲವಾಗಿ ಸಮ್ಮೇಳನವು ತನ್ನ ಸ್ವರೂಪದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿರುವುದೂ ಪ್ರಶಂಸಾರ್ಹ.

ಯಾವುದೇ ಸಾಹಿತ್ಯ ಸಮ್ಮೇಳನವು ಸಾಧಿಸಬೇಕಾದ ಮುಖ್ಯ ಗುರಿಯೆಂದರೆ, ಸಾಹಿತ್ಯದ ಒಲವುಳ್ಳವರಲ್ಲಿ ಆ ಒಲವು ಉದ್ದೀಪನಗೊಳ್ಳುವಂಥ ಮತ್ತು ಅವರ ತಜ್ಜನ್ಯ ಪಿಪಾಸೆಯು ತಣಿಯುವಂಥ ಅವಕಾಶವನ್ನು ಸೃಷ್ಟಿಸುವುದು ಹಾಗೂ ಇತರ ಶ್ರೀಸಾಮಾನ್ಯರಲ್ಲಿ ಸಾಹಿತ್ಯದ ಬಗ್ಗೆ ಒಲವು ಹುಟ್ಟಿಸುವುದು. ಸಮ್ಮೇಳನದಲ್ಲಿ ಈಚಿನ ವರ್ಷಗಳಲ್ಲಿ ಸಾಹಿತ್ಯದ ಜೊತೆಗೆ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳೂ ಸೇರಿಕೊಂಡಿವೆ. ಇವು ಬೇಡವೆನ್ನುವ ಸ್ಥಿತಿಯನ್ನು ದಾಟಿ ನಾವು ತುಂಬ ಮುಂದೆ ಹೋಗಿಬಿಟ್ಟಿದ್ದೇವೆ, ಇರಲಿ. ಈ ಎಲ್ಲ ವಿಷಯಗಳನ್ನೂ ಒಳಗೊಂಡಂತೆ ಸಮ್ಮೇಳನವು ಜನಮಾನಸಕ್ಕೆ ಸ್ಪಷ್ಟ ಮಾರ್ಗಗಳನ್ನು ತೋರಿದರೆ ಆಗ ಸಮ್ಮೇಳನ ಸಾರ್ಥಕ.

ಹೀಗಾಗಬೇಕಾದರೆ ಸಮ್ಮೇಳನಕ್ಕೆ ಒಂದು ವರ್ಗೀಕರಣ ಮತ್ತು ಒಂದು ಮಿತಿ ಅವಶ್ಯ. ಬೀದರ್‌ನಲ್ಲಿ ನಡೆದ 72 ನೆಯ ಸಾಹಿತ್ಯ ಸಮ್ಮೇಳನವು ತನ್ನೆಲ್ಲ ಕಾರ್ಯಕ್ರಮಗಳನ್ನೂ ಒಂದೇ ವೇದಿಕೆಯಮೇಲೆ ಪ್ರಸ್ತುತಪಡಿಸಿದ್ದರಿಂದಾಗಿ ನಿರೀಕ್ಷಿತ ಫಲ ನೀಡಲಿಲ್ಲ. ಸಾಹಿತ್ಯಾಸಕ್ತರು ಹಾಗೂ ಇತರ ಉತ್ಸವಪ್ರೇಮಿಗಳು ಒಟ್ಟಿಗೇ ಒಂದೇ ಕಾರ್ಯಕ್ರಮವನ್ನು ಅನುಭವಿಸಬೇಕಾಗಿ ಬಂದದ್ದರಿಂದ ಮತ್ತು ಒಂದೇ ವೇದಿಕೆಯಿಂದಾಗಿ ಸಮಯದ ಕೊರತೆಯುಂಟಾದ್ದರಿಂದ ಹಾಗೂ ತತ್ಫಲವಾಗಿ ಬೆಳಗಿನ ಜಾವದವರೆಗೂ ಕಾರ್ಯಕ್ರಮಗಳು ಮುಂದುವರಿದದ್ದರಿಂದ ಸಮ್ಮೇಳನವು "ವೈಭವಪೂರ್ಣ ಕಾಟಾಚಾರ"ವಾಗಿ ಸಂಪನ್ನವಾಯಿತು!

ಇದರಿಂದ ಪಾಠ ಕಲಿತೋ ಎಂಬಂತೆ ಶಿವಮೊಗ್ಗೆಯ (73ನೆಯ) ಸಮ್ಮೇಳನದಲ್ಲಿ ಮುಖ್ಯ ವೇದಿಕೆಯಲ್ಲದೆ ಮತ್ತೆರಡು ಸಮಾನಾಂತರ ವೇದಿಕೆಗಳಲ್ಲೂ ಕಾರ್ಯಕ್ರಮ ನಡೆಸಲಾಯಿತು. ಇದು ಉತ್ತಮ ಪರಿಣಾಮ ಬೀರಿತು. ಈ ಮಾದರಿಯನ್ನು ಉಡುಪಿಯ (74ನೆಯ) ಸಮ್ಮೇಳನದಲ್ಲಿ ಮತ್ತು ಚಿತ್ರದುರ್ಗದ (75ನೆಯ) ಸಮ್ಮೇಳನದಲ್ಲಿ ಮುಂದುವರಿಸಿಕೊಂಡು ಹೋಗಲಾಯಿತಾದರೂ ಸಮಾನಾಂತರ ವೇದಿಕೆಯ ಸಂಖ್ಯೆ ಒಂದಕ್ಕೆ ಇಳಿಯಿತು.

ಬಹುಜನರಿಗೆ ಪ್ರಿಯವಾಗುವ ಕವಿಗೋಷ್ಠಿ, ಗೀತ ಸಂಗೀತದಂಥ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶಾಲ ಸಭಾಂಗಣ ಹೊಂದಿದ ಮುಖ್ಯ ವೇದಿಕೆಯಲ್ಲಿ ನಡೆದು, ಗಂಭೀರ ಸಾಹಿತ್ಯ ಸಭೆಗಳು, ಸಾಧ್ಯವಾದಷ್ಟೂ, ಆಸಕ್ತರಿಗಷ್ಟೇ ಸ್ಥಳವಿರುವ ಸಮಾನಾಂತರ ವೇದಿಕೆಯಲ್ಲಿ ನಡೆಯುವುದು ಹಿತಕರ.

ಸಮ್ಮೇಳನದ ವಿವಿಧ ಗೋಷ್ಠಿಗಳ ಅಳತೆ, ಆಯಾಮಗಳಲ್ಲೂ ಸುಧಾರಣೆ ಆಗಬೇಕಾಗಿದೆ. ಒಬ್ಬ ಸಾಹಿತಿ ಅಥವಾ ಸಂಶೋಧಕ ಒಂದು ವಿಷಯದ ಬಗ್ಗೆ ವಿಷದವಾಗಿ ಕನಿಷ್ಠ ಒಂದು ಗಂಟೆ ಮಾತಾಡಬೇಕಾದ ಸ್ಥಾನದಲ್ಲಿ ನಾಲ್ವರು, ಬೇರೆಬೇರೆ ವಿಷಯಗಳ ಬಗ್ಗೆ, ತಲಾ ಹದಿನೈದು ನಿಮಿಷ ಮಾತಾಡಿ ಮುಗಿಸಿಬಿಟ್ಟರೆ ಹೇಗಿರುತ್ತದೆ? ಆಸಕ್ತ ಕೇಳುಗನಿಗಾಗಲೀ, ಗಂಭೀರ ಚಿಂತಕನಿಗಾಗಲೀ, ಕೊನೆಗೆ, ವಿಷಯ ಮಂಡಿಸಿದ ಸಾಹಿತಿ/ಸಂಶೋಧಕನಿಗಾಗಲೀ ಇದರಿಂದ ಏನಾದರೂ ಪ್ರಯೋಜನವುಂಟೇ? ತೃಪ್ತಿಯಾದರೂ ಉಂಟೇ? ಪ್ರತಿ ಸಮ್ಮೇಳನದಲ್ಲೂ ಈ ಬಗ್ಗೆ ಕೇಳುಗರಿಂದಲೂ ಮತ್ತು ವೇದಿಕೆಯಿಂದಲೂ ಅತೃಪ್ತಿ ಹೊಮ್ಮುವುದನ್ನು ನಾವು ಕಂಡಿದ್ದೇವಷ್ಟೆ.

ಬೀದರ್ ಮತ್ತು ಶಿವಮೊಗ್ಗೆಯ ಸಮ್ಮೇಳನಗಳಲ್ಲಿ ಮೂರು ದಿನಗಳಲ್ಲಿ ತಲಾ ನಾಲ್ಕು ನೂರು ಮಂದಿ ವೇದಿಕೆಯಲ್ಲಿ ಮಾತಾಡಿದ್ದಾರೆಂದರೆ, ವಿಷಯ ಮಂಡನಕಾರರಿಗೆ ಇನ್ನದೆಷ್ಟು ವಿಷದವಾಗಿ ವಿಷಯಗಳನ್ನು ತಿಳಿಸಲು ಸಾಧ್ಯವಾಗಿದೆ ಮತ್ತು ಕೇಳುಗರಿಗೆ ಅದೆಷ್ಟು ಗೋಜಲಾಗಿರಬೇಡ! ಉಡುಪಿಯಲ್ಲಿಯೂ ಅಜಮಾಸು ನಾಲ್ಕು ನೂರು ಮಂದಿ ಆಹ್ವಾನಿತರು ಮತ್ತು ಚಿತ್ರದುರ್ಗದಲ್ಲಿ ಸುಮಾರು ಮುನ್ನೂರೈವತ್ತು ಮಂದಿ ಆಹ್ವಾನಿತರು ವೇದಿಕೆಯಲ್ಲಿ ರಾರಾಜಿಸಿದರು!

ಹೆಚ್ಚೆಚ್ಚು ಜನರಿಗೆ ವೇದಿಕೆಯಮೇಲೆ ಮಾತಾಡಲು ಅವಕಾಶ ನೀಡುವುದೇ ಸಮ್ಮೇಳನದ ಉದ್ದೇಶವಾಗಬಾರದು. ಇದರಿಂದಾಗಿ ಜೊಳ್ಳುಗಳೇ ಕೇಳುಗನ ಕಾಲಹರಣಮಾಡುವುದನ್ನೂ ನಾವು ನೋಡಿದ್ದೇವೆ. ಯಾವ ಕಾರಣಕ್ಕೂ ಜೊಳ್ಳುಗಳಿಗೆ ಸಾಹಿತ್ಯ ಸಮ್ಮೇಳನಗಳ ವೇದಿಕೆ ಕೊಡುವುದು ತರವಲ್ಲ. ಪ್ರಾಜ್ಞರು ಮಾತ್ರ ವೇದಿಕೆಯಿಂದ ಮಾತಾಡಬೇಕು. ಹೆಚ್ಚೆಚ್ಚು ವಿಷಯಗಳನ್ನು ತುರುಕುವುದೂ ಸಮ್ಮೇಳನದ ಆಶಯಕ್ಕೆ ಧಕ್ಕೆ.

ಭಾಷಣಕಾರರು ಮತ್ತು ವಿಷಯಗಳು ಜಾಸ್ತಿಯಾದಲ್ಲಿ, ಸಮಯಾಭಾವ ಮತ್ತು ಒತ್ತಡಗಳಿಂದಾಗಿ ಯಾವೊಂದು ವಿಷಯದ ಬಗ್ಗೆಯೂ ದೃಢವಾದ ಅಭಿಪ್ರಾಯವಾಗಲೀ ತಿಳಿವಳಿಕೆಯಾಗಲೀ ಮೂಡುವುದಿಲ್ಲ. ಕೇವಲ ಮೂರು ದಿನಗಳಲ್ಲಿ ನಾಡಿನೆಲ್ಲ ವಿಷಯವಿಶೇಷಗಳನ್ನೂ ಚರ್ಚಿಸುವುದು ಅಸಾಧ್ಯ. ಆದ್ದರಿಂದ, ಅತ್ಯಂತ ಮುಖ್ಯವಾದ ಮತ್ತು ಪ್ರಸ್ತುತವಾದ ಕೆಲವೇ ವಿಷಯಗಳನ್ನಾಯ್ದುಕೊಂಡು ವಿವರವಾಗಿ ಚರ್ಚಿಸುವುದು ಉತ್ತಮ.

"ಚರ್ಚಿಸುವುದು" ಎಂದು ನಾನು ನಿರ್ದಿಷ್ಟ ಪದ ಬಳಸುತ್ತಿರುವುದಕ್ಕೆ ಕಾರಣವಿದೆ. ಸಮ್ಮೇಳನದ ಗೋಷ್ಠಿಗಳೆಲ್ಲ ಏಕಮುಖವಾಗಿ ನಡೆಯುತ್ತಿವೆ. ವೇದಿಕೆಯ ಮೇಲಿನವ ಹೇಳಿದ್ದನ್ನು ಕೇಳುವುದಷ್ಟೇ ಸಭಾಸದರ ಕೆಲಸವಾಗಿದೆಯೇ ಹೊರತು ತಮ್ಮ ಸಂದೇಹಗಳನ್ನು ವ್ಯಕ್ತಪಡಿಸಿ ಸೂಕ್ತ ಉತ್ತರಗಳನ್ನು ಪಡೆಯುವುದಕ್ಕಾಗಲೀ, ಮಂಥನ ನಡೆಸುವುದಕ್ಕಾಗಲೀ ಸಭಾಸದರಿಗೆ ಅವಕಾಶವೇ ಇಲ್ಲವಾಗಿದೆ. ಹೆಸರು ನೋಂದಾಯಿಸಿಕೊಂಡ ಪ್ರತಿನಿಧಿಗಳೂ ಭಾಷಣ ಕೇಳಿ ಎದ್ದು ನಡೆಯಬೇಕು; ಬಾಯ್ತೆರೆಯುವಂತಿಲ್ಲ! ಯಾರಾದರೂ ಬಾಯ್ತೆರೆದರೆ ಅಂಥವರನ್ನು ಅಧಿಕಪ್ರಸಂಗಿಗಳೆಂಬಂತೆ ಕಂಡು ಬಾಯ್ಮುಚ್ಚಿಸಿ ಕುಳ್ಳಿರಿಸಲಾಗುತ್ತದೆ!

ಪರ್ವತೋಪಮ ಕಾರ್ಯಕ್ರಮಗಳ ಒತ್ತಡ ಮತ್ತು ಸಮಯಾಭಾವ ಇವುಗಳೇ ಇದಕ್ಕೆ ಕಾರಣವೆನ್ನುವುದು ಸ್ಪಷ್ಟ. ಆದರೆ, ಶ್ರೋತೃವಿನ ಸಂದೇಹ ಪರಿಹಾರವಾಗದಿದ್ದರೆ ಯಾವ ಗೋಷ್ಠಿಯ ಉದ್ದೇಶವೂ ಈಡೇರಿದಂತಾಗುವುದಿಲ್ಲ. ಅದ್ದರಿಂದ, ಭಾಷಣಕಾರನ ಭಾಷಣದ ನಂತರ ಚರ್ಚೆ ಏರ್ಪಡಬೇಕು ಮತ್ತು ಶ್ರೋತೃಗಳಿಗೆ ಚರ್ಚೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿರಬೇಕು.

ವೇದಿಕೆಯಮೇಲಿನ ವಿದ್ವಾಂಸರೂ ಸಹ, ಆಯಾ ಗೋಷ್ಠಿಯಲ್ಲಿ, ತಂತಮ್ಮ ಪ್ರಬಂಧ ಮಾತ್ರ ತಮಗೆ ಸಂಬಂಧ ಎನ್ನುವಂತಿರುವ ಬದಲು ಗೋಷ್ಠಿಯ ಮುಖ್ಯ ವಿಷಯದ ಬಗ್ಗೆ ಅವರೆಲ್ಲರೂ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕ್ರಮ ಯೋಜಿಸಲ್ಪಡಬೇಕು. ಸಮಯ ಪೋಲಾಗದಂತೆ ಹಾಗೂ ವಿಷಯವು ಹಳಿ ತಪ್ಪದಂತೆ ನೋಡಿಕೊಳ್ಳಲು ತಿಳಿವಳಿಕಸ್ತ ವ್ಯಕ್ತಿಯೋರ್ವನು ನಿಯಂತ್ರಕನ ಕಾರ್ಯ ನಿರ್ವಹಿಸಬೇಕು. ಉಡುಪಿ ಸಮ್ಮೇಳನದ ಗೋಷ್ಠಿಗಳಲ್ಲಿ "ಪ್ರತಿಸ್ಪಂದನ"ದ ವ್ಯವಸ್ಥೆಯಾಗಿತ್ತಾದರೂ ಅದರಲ್ಲಿ ಸಭಾಸದರ ಪಾತ್ರ ಎಂದಿನಂತೆ ಗೌಣವಾಗಿತ್ತು. ಸಭಾಸದರಿಗೆ ಸೂಕ್ತ ಅವಕಾಶವಿರುವಂತೆ ಕಾರ್ಯಕ್ರಮ ರೂಪಿಸಲ್ಪಡಬೇಕು.

ಹ್ಞಾ, ಸಮ್ಮೇಳನದ ಉಪನ್ಯಾಸಗಳಿಗೆ (ಮತ್ತು ಸನ್ಮಾನಕ್ಕೆ) ವಿದ್ವಾಂಸರನ್ನು ಆಯ್ಕೆಮಾಡುವಲ್ಲಿ ಪ್ರಜ್ಞೆ, ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ ಅತ್ಯವಶ್ಯ. ಅವಶ್ಯವಾದಲ್ಲಿ ನಿಷ್ಠುರ ನಿಲುವೂ ತಪ್ಪೇನಲ್ಲ. ಪ್ರತಿ ಸಮ್ಮೇಳನದಲ್ಲೂ ಇವುಗಳ ಕೊರತೆ ನಮ್ಮ ಗಮನಕ್ಕೆ ಬರುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more