ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಾಪ ಸ್ಥಾವರ,ಸಮ್ಮೇಳನ ಜಂಗಮ!

By * ಎಚ್. ಆನಂದರಾಮ ಶಾಸ್ತ್ರೀ
|
Google Oneindia Kannada News

Kannada Sahithya Parishat
ಇಂದಿನಿಂದ ಮೂರು ದಿನಗಳ ಕಾಲ ಗದಗ ನಗರದಲ್ಲಿ "76ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ"ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯ ಅವಕಾಶ ನಾಡೋಜ ಗೀತಾ ನಾಗಭೂಷಣ ಅವರಿಗೆ ಲಭಿಸಿದೆ. ಈ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳು ಹೇಗಿವೆ, ಹೇಗಿರಬೇಕು ಎಂಬುದನ್ನು ಕುರಿತು ಒಂದು ವಿಚಾರಲಹರಿ.

ಚಂದ್ರಶೇಖರ ಪಾಟೀಲರು ("ಚಂಪಾ") ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ದಿನಗಳಲ್ಲಿ ಆ ಸಂಸ್ಥೆಯು "ಕನ್ನಡ ಚಳವಳಿ ಪರಿಷತ್ತು" ಆಗಿ ವಿಜೃಂಭಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ನಾಡುನುಡಿಗಾಗಿ ಇಂದು ಚಳವಳಿಗಳು ಅನಿವಾರ್ಯವಾಗಿರುವುದು ದಿಟವಾದರೂ, "ಕಸಾಪ"ದಂಥ ಸಾಹಿತ್ಯ ಸಂಘಟನೆಯ ಅಧ್ಯಕ್ಷರು ಸಾಹಿತ್ಯಕ್ಕಿಂತ ಚಳವಳಿ, ಹೋರಾಟಗಳಿಗೇ ಹೆಚ್ಚು ಆದ್ಯತೆ ನೀಡುತ್ತಿದ್ದಾರೆಂಬ ಅಭಿಪ್ರಾಯ ಕೆಲ ವಲಯಗಳಲ್ಲಿ ಉಂಟಾಗಿ ಅದರಿಂದಾಗಿ ಪರಿಷತ್ತಿನ ಕರ್ತವ್ಯದ ಬಗ್ಗೆಯೇ ಆ ದಿನಗಳಲ್ಲಿ ಹಲವರಲ್ಲಿ ಗೋಜಲು ಸೃಷ್ಟಿಯಾಗಿತ್ತು.

"ಸಾಹಿತ್ಯ ಪರಿಷತ್ತು ಸಾಹಿತ್ಯದ ಕೆಲಸ ಬಿಟ್ಟು ಬೇರೆಲ್ಲ ಕೆಲಸಗಳನ್ನೂ ಮಾಡುತ್ತಿದೆ" ಎಂಬ ಅಸಮಾಧಾನವೂ ಕೆಲವು ಸಾಹಿತಿಗಳಲ್ಲಿ ಹಾಗೂ ಸಾಹಿತ್ಯಪ್ರೇಮಿಗಳಲ್ಲಿ ಮನೆಮಾಡಿತ್ತು. "ಕಸಾಪ"ದ ಹೆಸರನ್ನು "ಕನ್ನಡ ಸಂಸ್ಕೃತಿ ಪರಿಷತ್ತು" ಎಂದು ಬದಲಾಯಿಸಬೇಕೆಂದು ಎಂ.ಎಂ.ಕಲಬುರ್ಗಿ ಅವರು ಪರಿಷತ್ತಿನದೇ ಸಮಾರಂಭವೊಂದರಲ್ಲಿ ಅರ್ಥಗರ್ಭಿತ ಸಲಹೆ ನೀಡಿದ್ದರು. (ಕೆಲ ಪತ್ರಿಕೆಗಳಲ್ಲಿ ಪ್ರಕಟಗೊಂಡಂತೆ ಅವರು ಇತ್ಯಾತ್ಮಕವಾಗಿ ಆ ರೀತಿ ಸಲಹೆ ಮಾಡಿದ್ದಲ್ಲ. ನೊಂದು ನುಡಿದದ್ದು. ಅಂದು ಅವರೊಡನೆ ವೇದಿಕೆ ಹಂಚಿಕೊಂಡಿದ್ದ ನಾನು ಅವರ ಭಾಷಣವನ್ನು ಸಂಪೂರ್ಣ ಆಲಿಸಿದ್ದೇನೆ.) ಸಾಹಿತ್ಯವಲಯದ ಈ ಅಸಮಾಧಾನವನ್ನು ನಿವಾರಿಸುವ ಕೆಲಸವನ್ನು ಪರಿಷತ್ತು ಇಂದು ಮಾಡಬೇಕಾಗಿದೆ. ಸಾಹಿತ್ಯ ಪರಿಚಾರಿಕೆಯೇ ಸಾಹಿತ್ಯ ಪರಿಷತ್‌ನ ಮುಖ್ಯ ಕೆಲಸವಾಗಬೇಕಾಗಿದೆ.

ಅಪಕಲ್ಪನೆ : "ಕನ್ನಡ ಸಾಹಿತ್ಯ ಪರಿಷತ್ತು" ಎಂದರೆ ಸಾಮಾನ್ಯ ಜನರ ಮನಸ್ಸಿನಲ್ಲಿರುವ ಕಲ್ಪನೆ, "ಅದು ವರ್ಷಕ್ಕೊಂದು ಅದ್ದೂರಿಯ ಸಮ್ಮೇಳನ ಏರ್ಪಡಿಸಲಿಕ್ಕೋಸ್ಕರ ಇರುವ ಸಂಸ್ಥೆ", ಎಂದು! ಈ ಅಪಕಲ್ಪನೆ ದೂರಾಗಬೇಕು. ಅದಕ್ಕಾಗಿ, ಸಾಹಿತ್ಯವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಗಟ್ಟಿ ಯೋಜನೆಗಳು ಪರಿಷತ್ತಿನಿಂದ ರೂಪುಗೊಂಡು ಅನುಷ್ಠಾನಕ್ಕೆ ಬರಬೇಕು. ಉದಾಹರಣೆಗೆ ಹೇಳಬೇಕೆಂದರೆ, ಈ ಹಿಂದಿನ ಅಧ್ಯಕ್ಷ "ಚಂಪಾ" ಅವರು ಬೆಂಗಳೂರಿನ ಕೇಂದ್ರ ಕಚೇರಿ ಆವರಣದಲ್ಲಿ ವಾರದಲ್ಲೊಂದು ದಿನದಂತೆ ನಡೆಸಿದ "ಪುಸ್ತಕ ಸಂತೆ" ಅಂಥದೊಂದು ಉಪಯುಕ್ತ ಯೋಜನೆ.

ಆರಂಭದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿತಾದರೂ ಕ್ರಮೇಣ ಇದು "ನಾಮ್ ಕೇ ವಾಸ್ತೇ" ಕಾರ್ಯಕ್ರಮದ ಅವಸ್ಥೆಗಿಳಿಯಿತು. ಹಾಗಾಗಲು ಕಾರಣ ಜನರಲ್ಲಿ ಪುಸ್ತಕಪ್ರೇಮದ ಕೊರತೆ ಅಲ್ಲ. "ಕನ್ನಡ ಪುಸ್ತಕ ಪ್ರಾಧಿಕಾರ"ದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಈಚೆಗೆ ನಡೆದ ಕನ್ನಡ ಪುಸ್ತಕ ಮೇಳದಲ್ಲಿ ಓದುಗರು ಜಾತ್ರೆಯೋಪಾದಿ ಬಂದು ಮುಗಿಬಿದ್ದು ಕನ್ನಡ ಪುಸ್ತಕಗಳನ್ನು ಖರೀದಿಸಿರುವುದು ಕನ್ನಡಿಗರ ಪ್ರಖರ ಪುಸ್ತಕಪ್ರೇಮಕ್ಕೆ ಸಾಕ್ಷಿ. ಸಾಹಿತ್ಯ ಪರಿಷತ್ತು ತನ್ನ ಆವರಣದಲ್ಲಿ ನಡೆಸುತ್ತಿದ್ದ "ಪುಸ್ತಕ ಸಂತೆ"ಯಲ್ಲಿ ಹೆಚ್ಚು ಶೀರ್ಷಿಕೆಗಳಾಗಲೀ ವಿಷಯ ವೈವಿಧ್ಯವಾಗಲೀ ಇರಲಿಲ್ಲವಾದ್ದರಿಂದ ಅದು ಕ್ರಮೇಣ ಜನಾಕರ್ಷಣೆ ಕಳೆದುಕೊಂಡಿತು. ಉತ್ತಮ ಪುಸ್ತಕಗಳ ಅವಿರತ ಪ್ರಕಟಣೆ ಮತ್ತು ರಾಜ್ಯಾದ್ಯಂತ ಸದಾಕಾಲ ಮಾರಾಟದ ಸೂಕ್ತ ವ್ಯವಸ್ಥೆ ಇವು ಸಾಹಿತ್ಯ ಪರಿಷತ್ತಿನ ಆದ್ಯ ಕರ್ತವ್ಯಗಳು.

"ಪುಸ್ತಕ ಸಂತೆ"ಯಂಥ ಯೋಜನಾಬದ್ಧ ಕಾರ್ಯಕ್ರಮಗಳು ಕೇವಲ ರಾಜಧಾನಿಯಲ್ಲಿ ಮಾತ್ರ ನಡೆದರೆ ಸಾಲದು. ಎಲ್ಲ ಜಿಲ್ಲಾ ಕೇಂದ್ರದಲ್ಲೂ ಮತ್ತು ದೊಡ್ಡ ತಾಲ್ಲೂಕು ಕೇಂದ್ರಗಳಲ್ಲೂ ನಡೆಯಬೇಕು. ಅಲ್ಲಿಯ ಜನರು ಸಾಹಿತ್ಯ ಓದುವುದು ಬೇಡವೆ?

ಕೃತಿ ಪ್ರಕಟಣೆ, ಸಾಹಿತ್ಯಿಕ ಪರೀಕ್ಷೆಗಳು, ಪ್ರಶಸ್ತಿ ಪ್ರದಾನ, ಉಪನ್ಯಾಸ, ವರ್ಷಕ್ಕೊಂದು ಸಮ್ಮೇಳನ ಇವುಗಳ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಪುಸ್ತಕಗಳ ಪರಿಚಯ, ವಾಚನ, ಮಂಥನ, ವಿವಿಧ ಕಮ್ಮಟಗಳು, ಓದುಗರಿಗಾಗಿ ಮತ್ತು ಬರಹಗಾರರಿಗಾಗಿ ಪ್ರತ್ಯೇಕ ಶಿಬಿರಗಳು, ಲೇಖಕ ಮತ್ತು ಓದುಗನ ಮಧ್ಯೆ (ಲೇಖಕನ ಭಾಷಣವನ್ನು ಮೀರಿ) ಸಂಪರ್ಕ ಏರ್ಪಡಿಸುವ ಕಾರ್ಯಕ್ರಮಗಳು, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಕಾರ್ಯಕ್ರಮಗಳು, ಅವರಲ್ಲಿನ ಸುಪ್ತ ಸಾಹಿತ್ಯ ಪ್ರತಿಭೆಯನ್ನು ಪ್ರಕಾಶಗೊಳಿಸುವಂಥ ಯೋಜನೆಗಳು, ಅವರಲ್ಲಿ ಸಾಹಿತ್ಯಾಸಕ್ತಿ ಹುಟ್ಟುವಂತ ಸ್ಪರ್ಧಾದಿ ಕಾರ್ಯಕ್ರಮಗಳು, ಹಳ್ಳಿಗಳೆಡೆಗೆ ಸಾಹಿತ್ಯವನ್ನು ಕೊಂಡೊಯ್ಯುವಂಥ ಯೋಜನೆಗಳು, ಇಂಥ ಅನೇಕ ಕಾರ್ಯಯೋಜನೆಗಳನ್ನೂ ರೂಪಿಸಿ ಅನುಷ್ಠಾನಕ್ಕೆ ತರಬೇಕಾದುದು ಅಪೇಕ್ಷಣೀಯ.

ಇವೂ ಕೂಡ ಪರಿಷತ್ತಿನ ಆದ್ಯ ಕರ್ತವ್ಯಗಳೇ. ಹಲವು ಉತ್ತಮ ಕಾರ್ಯಕ್ರಮಗಳು ಪರಿಷತ್ತಿನ ಕೇಂದ್ರ ಸ್ಥಳಕ್ಕಿಂತ ಕೆಲವು ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಆಶ್ರಯದಲ್ಲೇ ಹೆಚ್ಚು ನಡೆಯುತ್ತಿರುವುದನ್ನು ನಾವು ಗಮನಿಸಬಹುದು. ಈ ದಿಸೆಯಲ್ಲಿ ಕೇಂದ್ರ ಕಚೇರಿಯು ಹೆಚ್ಚು ಚುರುಕಾಗಬೇಕಾಗಿದೆ.

ನಾಡಿನಾದ್ಯಂತ ಪುಸ್ತಕ ಪರಿಚಯದ ಮತ್ತು ವಿತರಣೆಯ (ಮಾರಾಟದ) ಸಮರ್ಪಕ ಸಾಂಸ್ಥಿಕ ಜಾಲವೇ ಇಲ್ಲವಾಗಿರುವಾಗ "ಕಸಾಪ"ವೂ ಒಳಗೊಂಡಂತೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಛತ್ರಿಯಡಿ ಬರುವ ಎಲ್ಲ ಅನುದಾನಿತ ಸಂಸ್ಥೆಗಳೂ ಇಂದು ಅಂಥದೊಂದು ಜಾಲ ರೂಪಿಸುವತ್ತ ಗಮನ ಹರಿಸಬೇಕಾಗಿದೆ.

ಮೇಲೆ ಹೇಳಿದಂಥ ಎಲ್ಲ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರಲ್ಲಿ ಕನ್ನಡ ಸಾಹಿತ್ಯಾಭಿರುಚಿ ಹೆಚ್ಚಿಸುವಂತಾದರೆ ಆ ಕೊಡುಗೆಯು ಯಾವ ಚಳವಳಿಗೂ ಕಡಿಮೆಯಿಲ್ಲದ ಕೊಡುಗೆಯಾಗುತ್ತದೆ.

ಈ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಸಾಕಷ್ಟು ಧನಸಹಾಯ ಹಾಗೂ ಸಿಬ್ಬಂದಿ ವ್ಯವಸ್ಥೆ ಬೇಕಾಗುತ್ತದೆ. ಇದರ ಪೂರೈಕೆಯ ಹೊಣೆ ಸರ್ಕಾರದ್ದು.. ದುರಂತವೆಂದರೆ, ನಮ್ಮ ಇದುವರೆಗಿನ ಯಾವ ಸರ್ಕಾರಕ್ಕೂ, ಸಾಹಿತ್ಯ ಪ್ರಸಾರವೂ ಒಂದು ಪ್ರಮುಖ ಸಾಮಾಜಿಕ ವಿಷಯವೆಂದು ಅನ್ನಿಸಿಯೇ ಇಲ್ಲ! ಸಮ್ಮೇಳನಕ್ಕೆ ಒಂದೆರಡು ಕೋಟಿ ಕೊಟ್ಟು ಕೈತೊಳೆದುಕೊಳ್ಳುವ ಸರ್ಕಾರಕ್ಕೆ ಪರಿಷತ್ತಿನ ವರ್ಷಪೂರ್ತಿಯ ಚಟುವಟಿಕೆಗಳ ಬಗ್ಗೆ ಯಾವುದೇ ಕಾಳಜಿ ಇಲ್ಲವಾಗಿದೆ. ಇಂಥ ಸರ್ಕಾರಗಳನ್ನು ನಂಬಿ ಕೂರುವುದಕ್ಕಿಂತ ಪರಿಷತ್ತು ಸಂಪೂರ್ಣ ಸ್ವಾವಲಂಬಿಯಾಗಿ ಮುನ್ನಡೆಯುವ ಯೋಚನೆ ಮಾಡುವುದೊಳ್ಳಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X