ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಪ್ರೇಮಿಗಳ ಸ್ವಾಗತಕ್ಕೆ ಸಜ್ಜಾದ ಮಹಾದ್ವಾರ

By Mahesh
|
Google Oneindia Kannada News

Gadag artisitic welcome archs
76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲೆ ಮತ್ತು ಸಾಹಿತ್ಯ ಸಮ್ಮಿಲನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗ್ರಾಮೀಣ ಬದುಕಿನ ಸೊಗಡನ್ನು ಹಾಗೂ ಸ್ಥಳೀಯ ಜನಪದ ಕಲೆಯನ್ನು ಬಿಂಬಿಸುವ ವೇದಿಕೆಯಾಗಲಿದೆ. ಸಮ್ಮೇಳನಕ್ಕೆ ಸ್ವಾಗತ ಕೋರುವ ದ್ವಾರದಲ್ಲಿ ಈ ಬಾರಿ ಸಾಹಿತಿ ಮತ್ತು ಸಂಗೀತಗಾರರ ಭಾವಚಿತ್ರಗಳು ರಾರಾಜಿಸುತ್ತಿವೆ.

ಸಮ್ಮೇಳನದ ಮುಖ್ಯ ಸಭಾಂಗಣ, ಊರಿನ ಪ್ರಮುಖ ರಸ್ತೆಗಳು ಇತೆರೆಡೆಗಳಲ್ಲಿ ನಾಡಿನ ಧೀಮಂತ ಕಲಾವಿದರ ಭಾವಚಿತ್ರವುಳ್ಳ ದ್ವಾರ, ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸಮ್ಮೇಳನದ ಪ್ರಧಾನ ವೇದಿಕೆ ಸೇರಿದಂತೆ ಇತರೆ ವೇದಿಕೆ ನಿರ್ಮಿಸುವ ಜವಾಬ್ದಾರಿಯನ್ನು ಗದಗಿನ ಕಲೆಗಾರರೇ ವಹಿಸಿಕೊಂಡಿರುವುದು ಮತ್ತೊಂದು ವಿಶೇಷ. ಇದಕ್ಕಾಗಿ ವಿಜಯ ಕಲಾಮಂದಿರ ಹಾಗೂ ಜೈನ ಕಲಾ ಶಾಲೆಯ 30 ಯುವಕರು ವೇದಿಕೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಇಂದು ಸಂಜೆ ವೇಳೆಗೆ ಸಂಪೂರ್ಣವಾಗಿ ಕಲೆ ಕುಸುರಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಗದಗ ಜಿಲ್ಲಾಧಿಕಾರಿ ಎನ್ ವಿ ಪ್ರಸಾದ್ ತಿಳಿಸಿದರು.

ಪ್ರಮುಖ ದ್ವಾರಗಳು: ನಾಡಿನ ಹೆಸರಾಂತ ಸಾಹಿತಿಗಳಾದ ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಜಿ.ಪಿ. ರಾಜರತ್ನಂ. ದ.ರಾ.ಬೇಂದ್ರೆ, ಹುಯಿಲಗೋಳ ನಾರಾಯಣರಾವ್, ಆಲೂರು ವೆಂಕಟರಾಯರು, ಚನ್ನವೀರ ಕಣವಿ, ತೋಂಟದ ಸಿದ್ದಲಿಂಗ ಸ್ವಾಮೀಜಿಗಳ ಭಾವಚಿತ್ರಗಳು ಸಾಹಿತ್ಯ ಪ್ರೇಮಿಗಳನ್ನು ಸ್ವಾಗತಿಸಲು ಕಾದಿವೆ. ಜತೆಗೆ ಸಂಗೀತ ಕ್ಷೇತ್ರದ ದಿಗ್ಗಜರುಗಳಾದ ಡಾ. ಗಂಗೂಬಾಯಿ ಹಾನಗಲ್, ಪಂಡಿತ್ ಭೀಮಸೇನ್ ಜೋಶಿ, ಪಂಡಿತ್ ಪಂಚಾಕ್ಷರಿ ಗವಾಯಿ, ಪಂಡಿತ್ ಪುಟ್ಟರಾಜ ಗವಾಯಿ ಮೊದಲಾದವರಭಾವಚಿತ್ರಗಳು ದ್ವಾರಗಳ ಮೆರಗನ್ನು ಇನ್ನಷ್ಟು ಹೆಚ್ಚಿಸಿವೆ.

ವೇದಿಕೆ: ಸಮ್ಮೇಳನದ ಕೇಂದ್ರ ಬಿಂದುವಾಗಿರುವ ಪ್ರಧಾನ ವೇದಿಕೆಗೆ ದಾನ ಚಿಂತಾಮಣಿ ಅತ್ತಿಮಬ್ಬೆ ಹೆಸರಿಡಲಾಗಿದ್ದು, ಇದು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದೆ. 100 ಅಡಿ ಉದ್ದ ಹಾಗೂ 60 ಅಡಿ ಅಗಲದಲ್ಲಿ ಈ ಪ್ರಧಾನ ವೇದಿಕೆ ನಿರ್ಮಿಸಲಾಗುತ್ತಿದೆ. ವೇದಿಕೆಯ ಮುಂಭಾಗದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ದ್ವಾರ ಮಾತ್ರವಲ್ಲದೆ ಪ್ರಧಾನ ವೇದಿಕೆಯೂ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ವಾಸ್ತುಶಿಲ್ಪ, ಸಂಗೀತ ಪರಂಪರೆಯನ್ನು ಬಿಂಬಿಸುವಲ್ಲಿ ಹಿಂದೆ ಬಿದ್ದಿಲ್ಲ. ಇದಕ್ಕಾಗಿ ಆಧುನಿಕ ಯುಗದ ಹೈಟೆಕ್ ತಂತ್ರಜ್ಞಾನವನ್ನು ಬಳಸಿರುವುದು ಈ ಬಾರಿಯ ವಿಶೇಷ. ಪ್ರಧಾನ ವೇದಿಕೆಗೆ ಸಮಾನಾಂತರವಾದ ಮಹಾ ಮಂಟಪಕ್ಕೆ ಕುಮಾರವ್ಯಾಸ ವೇದಿಕೆ ಎಂದು ಹೆಸರಿಡಲಾಗಿದೆ.

ಇದೇ ರೀತಿ ಮಹಾದ್ವಾರಗಳಿಗೆ ದುರ್ಗಸಿಂಹ, ನಾಗವರ್ಮ, ನಯಸೇನ, ಚಾಮರಸ, ಅಜಗಣ್ಣ,ಮುಕ್ತಾಯಕ್ಕ, ಹುಯಿಲಗೋಳ ನಾರಾಯಣರಾವ್, ಅಂದಾನಪ್ಪ ದೊಡ್ಡಮೇಟಿ, ಆಲೂರು ವೆಂಕಟರಾವ್. ಎಚ್.ಎನ್. ಹೂಗಾರ, ರಂ.ಶ್ರೀ.ಮುಗಳಿ, ಪಂ.ಪಂಚಾಕ್ಷರಿ ಗವಾಯಿ, ಮೇವುಂಡಿ ಮಲ್ಲಾರಿ ಎಂದು ಹೆಸರಿಡಲು ನಿರ್ಧರಿಸಲಾಗಿದ್ದು, ಈ ಮಹಾದ್ವಾರ ನಿರ್ಮಾಣ ಅಂತಿಮ ಹಂತದಲ್ಲಿದೆ.

ಶಿಲ್ಪಕಲೆಯ ಪ್ರತಿಬಿಂಬ:ವೇದಿಕೆ, ದ್ವಾರಬಾಗಿಲು, ಗೋಡೆ ಸಂಪೂರ್ಣವಾಗಿ ಬಟ್ಟೆ ಯಿಂದ ನಿರ್ಮಿಸಲಾಗುತ್ತಿದ್ದು, ಇವುಗಳ ಮೇಲೆ ಬಣ್ಣದ ಲೇಪನ ಮಾಡಿ ಅದಕ್ಕೆ ಉಬ್ಬು (ಎಂಬೋಸಿಂಗ್)ಕಲೆ ಮೂಲಕ ಜೀವ ತುಂಬುವ ಕೆಲಸ ಸಾಗಿದೆ. ಬಟ್ಟೆಯಿಂದಲೇ ನಿರ್ಮಿಸಲಾಗುತ್ತಿರುವ ಸುತ್ತ ಗೋಡೆಗಳ ಮೇಲೆ ನಾಡಿನ ಹಾಗೂ ಜಿಲ್ಲೆಯ ಪ್ರಮುಖ ಶಿಲ್ಪಕಲೆ ಅನಾವರಣಗೊಳ್ಳಲಿವೆ. ಇಲ್ಲಿನ ವೀರನಾರಾಯಣ, ತ್ರಿಕೂಟೇಶ್ವರ, ಸೋಮನಾಥ ದೇವಾಲಯ, ಲಕ್ಕುಂಡಿಯ ದೇವಾಲಯಗಳು, ಸೂರ್ಯ ದೇವಾಲಯ, ಬ್ರಹ್ಮ ಜಿನಾಲಯ, ಸೋಮೇಶ್ವರ ದೇವಾಲಯ ಸೇರಿದಂತೆ ಇನ್ನಿತರ ಪ್ರಮುಖ ವಾಸ್ತು ಶಿಲ್ಪಕಲೆಗಳ ಚಿತ್ರಗಳನ್ನು ಇದರ ಮೇಲೆ ಕಾಣಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X