ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಲ್ಲೂರು ಪ್ರಸಾದರ ಹತ್ತು ಬೇಡಿಕೆಗಳು

By Staff
|
Google Oneindia Kannada News

Dr. Nalluru Prasads welcome speach-Chitradurga
75ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಚಿತ್ರದುರ್ಗ 2009 ಫೆಬ್ರವರಿ 4,5,6 ಮತ್ತು 7 ಡಾ. ನಲ್ಲೂರು ಪ್ರಸಾದ್. ಆರ್.ಕೆ.ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಅವರಪ್ರಾಸ್ತಾವಿಕ ನುಡಿ.

ಚಿತ್ರದುರ್ಗ, ಫೆ. 4 (ತರಾಸು ವೇದಿಕೆ) : ಕಳೆದ ಹತ್ತಾರು ವರ್ಷಗಳಲ್ಲಿ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಏನೆಲ್ಲ ವಿಚಾರಗಳು ಮಂಡಿತವಾಗಿವೆಯೆನ್ನುವುದನ್ನು ಗಮನಿಸಿ ಆದಷ್ಟೂ ಇಂದಿನ ಬದುಕಿಗೆ ಪ್ರಸ್ತುತವೆನಿಸುವ ಸಂಗತಿಗಳನ್ನು ಬಿಂಬಿಸುವ ಪ್ರಯತ್ನವನ್ನು ಈ ಸಮ್ಮೇಳನದಲ್ಲಿ ಮಾಡಲಾಗಿದೆ. ಅಧ್ಯಕ್ಷತೆ, ಆಶಯಭಾಷಣ, ಪ್ರಬಂಧ ಮಂಡನೆಗೆ ಆಯಾ ಕ್ಷೇತ್ರಗಳಲ್ಲಿ ತಜ್ಞರೆನಿಸಿದವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಬಂಧಗಳಲ್ಲಿ ಕೇವಲ ಸಮಸ್ಯೆಗಳನ್ನಷ್ಟೇ ವೈಭವೀಕರಿಸದೆ ಅವುಗಳಿಗೆ ಪರಿಹಾರ ಸೂಚಿಸುವತ್ತಲೂ ಗಮನ ಕೊಡುವಂತೆ ತಿಳಿಸಲಾಗಿದೆ.

ಭಯೋತ್ಪಾದನೆ, ಕೋಮುವಾದ, ಆರ್ಥಿಕ ಬಿಕ್ಕಟ್ಟುಗಳು, ಸಾಮ್ರಾಜ್ಯಶಾಹಿ ವಿದ್ಯಮಾನಗಳು ಕರ್ನಾಟಕದ ಮತ್ತು ಭಾರತದ ಸಮಸ್ಯೆಗಳಷ್ಟೇ ಆಗಿರದೆ ಜಾಗತಿಕ ಸ್ವರೂಪ ಪಡೆದುಕೊಂಡಿರುವ ಸಮಸ್ಯೆಗಳಾಗಿದ್ದು ಅವುಗಳನ್ನು ವಿಸ್ತೃತ ಭಿತ್ತಿಯಲ್ಲಿ ಚರ್ಚಿಸಲಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವೇನೋ ಘೋಷಿತವಾಯಿತು. ಆದರೆ ಮುಂದಿನ ಹೆಜ್ಜೆಗಳೇನು? ನಿರಂತರ ಕಾಡುತ್ತಿರುವ ಗಡಿ ಸಮಸ್ಯೆಗೆ ಪರಿಹಾರವೇನು? ಉಲ್ಬಣಿಸುತ್ತಿರುವ ಪ್ರಾಂತೀಯ ಬಿಕ್ಕಟ್ಟುಗಳ ಶಮನವೆಂತು? ಎನ್ನುವುದನ್ನು ನಾಡು ನುಡಿ ಗೋಷ್ಠಿಯಲ್ಲಿ ಚಿಂತನೆಗೊಳಪಡಿಸಲಾಗಿದೆ.

ರೈತರ ಸರಣಿ ಆತ್ಮಹತ್ಯೆಗಳು ನಮ್ಮನ್ನು ಬೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಬದುಕಿನಲ್ಲಿ ನೆಮ್ಮದಿ ನೆಲಸುವಂತೆ ಮಾಡಲು ಸಹಾಯಕವಾಗುವ ಆಲೋಚನೆಗಳನ್ನು ಕೃಷಿ-ಬದುಕು'ವಿನಲ್ಲಿ ವ್ಯಕ್ತಪಡಿಸಲಾಗಿದೆ. ಬಹು ಸಂಸ್ಕೃತಿಗಳು ನಮ್ಮ ಬದುಕನ್ನು ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪತ್ರಿಕೆಗಳ, ಸಣ್ಣಪತ್ರಿಕೆಗಳ, ಕಿರುತೆರೆ, ಚಲನಚಿತ್ರಗಳ ಪರಿಣಾಮ ಹಾಗೂ ಹೊಣೆಗಾರಿಕೆಯನ್ನು ಕುರಿತ ಗಂಭೀರ ಚಿಂತನೆಯೂ ನಡೆದಿದೆ. ಜನಪದ ಜೀವನ, ಮಹಿಳಾಚಿಂತನೆ, ಕವಿಗೋಷ್ಠಿಗಳೊಂದಿಗೆ ಸಮ್ಮೇಳನ ನಡೆಯುತ್ತಿರುವ ಚಿತ್ರದುರ್ಗ ಜಿಲ್ಲೆಯನ್ನು ಕುರಿತೇ ಒಂದು ವಿಶೇಷ ಗೋಷ್ಠಿ ಏರ್ಪಾಡಾಗಿದೆ. ಜಿಲ್ಲೆಯ ಅಭಿವೃದ್ಧಿ ಯೋಜನೆಗಳು, ಗುಡಿಕೈಗಾರಿಕೆಗಳು, ಪ್ರವಾಸೋದ್ಯಮಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಿ ಅವುಗಳಿಗೆ ಪರಿಹಾರೋಪಾಯವನ್ನು ಸೂಚಿಸಲಾಗಿದೆ.

ನಮ್ಮ ಕನ್ನಡ ಸರ್ಕಾರ ಮತ್ತು ನಮ್ಮ ಕನ್ನಡ ಮುಖ್ಯಮಂತ್ರಿಗಳು ಎಂದು ಪ್ರೀತಿಯಿಂದ ಧ್ವನಿಯೆತ್ತರಿಸಿ ಹೇಳುತ್ತಲೇ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಸಹಾಯ ಸಹಕಾರಗಳನ್ನು ತುಂಬುಮನದಿಂದ ಹಾಗೂ ಉದಾರವಾಗಿ ಮಾಡಬೇಕೆಂದು ವಿನಂತಿಸುತ್ತ ಹತ್ತು ಬೇಡಿಕೆಗಳನ್ನು ಅವರೆದುರಿಗೆ ಇಡುತ್ತಿದ್ದೇನೆ.

1. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಜೀವವಾಹಿನಿಗಳಾಗಿರುವ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು ಸಮರ್ಥವಾಗಿ ಕೆಲಸ ಮಾಡುವಂತೆ ಆರ್ಥಿಕ ಚೈತನ್ಯ ತುಂಬಲು ಅಗತ್ಯವಿರುವ ಅನುದಾನ ನೀಡುವುದು.
2. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕನ್ನಡ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳಲು ಯೋಜನೇತರ ವೆಚ್ಚವಾಗಿ ವಾರ್ಷಿಕ ಒಂದು ಕೋಟಿ ರೂ.ಗಳ ಹಣದ ನೆರವು ಒದಗಿಸುವುದು.
3. ಹೊಸದಾಗಿ ನೌಕರರನ್ನು ನೇಮಕ ಮಾಡಿಕೊಳ್ಳಲು ಮತ್ತು ಹಾಲಿ ಇರುವ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಪರಿಷತ್ತನ್ನು ವೃಂದ ಮತ್ತು ನೇಮಕಾತಿ(ಸಿ ಅಂಡ್ ಆರ್) ನಿಯಮದ ವ್ಯಾಪ್ತಿಗೊಳಪಡಿಸುವುದು.
4. ತಾಲ್ಲೂಕು ಮತ್ತು ಜಿಲ್ಲಾ ಘಟಕಗಳಿಗೆ ನಿವೇಶನ ಒದಗಿಸುವುದು.
5. ನಗರ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತುಗಳ ಭವಿಷ್ಯದ ಬೆಳವಣಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡು ನಿವೇಶನ ನೀಡುವುದು.
6. ಕನ್ನಡ ಶಾಸ್ತ್ರೀಯ ಭಾಷೆಯ ಮಾನ್ಯತೆ ಪಡೆದುಕೊಂಡಿರುವ ಸಂದರ್ಭದಲ್ಲಿ ಮುಂದೆ ನಡೆಸಬೇಕಾಗಿರುವ ಚಟುವಟಿಕೆಗಳ ಮೊದಲ ಹೆಜ್ಜೆಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂಶೋಧನಾ ಕೇಂದ್ರ' ತೆರೆಯಲು ಅನುಮತಿ ನೀಡುವುದು ಮತ್ತು ಅಲ್ಲಿನ ಕೆಲಸಗಳಿಗೆ ಅಗತ್ಯವಾದ ಧನಸಹಾಯ ನೀಡುವುದು.
7. ಕನ್ನಡ ನಿಘಂಟು ಯೋಜನೆಗೆ ಮರುಚಾಲನೆ ನೀಡಿ, ಅದು ನಿರಂತರವಾಗಿ ನಡೆದುಕೊಂಡು ಹೋಗುವಂತೆ ಶಾಶ್ವತ ಅನುದಾನ ಒದಗಿಸುವುದು.
8. ಹೊಸ ಪುಸ್ತಕಗಳ ಪ್ರಕಟಣೆಯ ಯೋಜನೆಗೆ ನೆರವು ನೀಡುವುದು.
9. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ನಡೆಸಲು ಉದ್ದೇಶಿಸಲಾಗಿರುವ ನಾಲ್ಕು ಸಾಹಿತ್ಯ ಸಮಾವೇಶಗಳಿಗೆ ತಲಾ ಒಂದಕ್ಕೆ 10 ಲಕ್ಷ ರೂ.ನಂತೆ ಒಟ್ಟು 40 ಲಕ್ಷ ರೂ.ಗಳ ಅನುದಾನ ಒದಗಿಸುವುದು.
10. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾಲಕಾಲಕ್ಕೆ ಆಗಬೇಕಾದ ಕನ್ನಡದ ಕೆಲಸ ಚುರುಕಾಗಿ ಸಾಗಲು ಅವಶ್ಯವಾದ ಸಕಲ ಸೌಲಭ್ಯಗಳೂ ಇರುವಂಥ ಕನ್ನಡಸೌಧ' ನಿರ್ಮಾಣಕ್ಕೆ ಸಹಾಯಧನ ಮತ್ತು ಎಲ್ಲಾ ಬಗೆಯ ನೆರವು ಒದಗಿಸುವುದು.

ಈ ಸಮ್ಮೇಳನದ ಸಿದ್ಧತೆಯ ಅವಧಿ ಅತ್ಯಂತ ಕಡಿಮೆಯದ್ದಾಗಿದ್ದರೂ ಚಿತ್ರದುರ್ಗದ ಜನತೆ ತಮ್ಮ ನಾಡು-ನುಡಿ ಪ್ರೀತಿಯನ್ನು ಅಭೂತಪೂರ್ವವೆನಿಸುವಂತೆ ತೋರಿದ್ದಾರೆ. ತನುಮನಧನಗಳನ್ನು ಸ್ವಯಂ ಪ್ರೀತಿಯಿಂದ ಸಮರ್ಪಿಸಿ ಏನೂ ಕೊರತೆಗಳುಳಿಯದಂತೆ ದುಡಿದಿದ್ದಾರೆ. ಈ ಸಮ್ಮೇಳನದ ಯಶಸ್ಸಿನ ನಿಜವಾದ ರೂವಾರಿಗಳು ಅವರೇ ಆಗಿದ್ದಾರೆಂದು ನಾನು ಹೆಮ್ಮೆಯಿಂದ ಸ್ಮರಿಸಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ.

ಕನ್ನಡದ ಹಿರಿಯ ವಿದ್ವಾಂಸರೂ ಸಾಹಿತಿಗಳೂ ಆದ ನಾಡೋಜ ಎಲ್. ಬಸವರಾಜು ಅವರು ಅಧ್ಯಕ್ಷರಾಗಿರುವ ಈ ಸಾಹಿತ್ಯ ಸಮ್ಮೇಳನ ನಿರೀಕ್ಷಿತ ಯಶಸ್ಸಿನತ್ತ ಹೆಜ್ಜೆಯಿರಿಸಿದೆ. ಸಡಗರ ಸಂಭ್ರಮಗಳಿಂದ ಇಲ್ಲಿ ನೆರೆದಿರುವ ಸಹೃದಯ ಕನ್ನಡಾಭಿಮಾನಿಗಳಿಗೆಲ್ಲ ಹೃತ್ಪೂರ್ವಕವಾದ ವಂದನೆಗಳನ್ನು ಸಲ್ಲಿಸಿ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.

ಸಿರಿಗನ್ನಡವು ಗೆಲ್ಲಲಿ
ಸಿರಿಗನ್ನಡವು ಬಾಳಲಿ
ಸಿರಿಗನ್ನಡವು ಆಳಲಿ

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಾಠ
ಚಿತ್ರದುರ್ಗದ ದಿಗ್ಗಜರ ನಾಮ ಸ್ಮರಣೆ
ದುರ್ಗದ ಚಿತ್ರಗಳನ್ನು ಕಣ್ತುಂಬಿಕೊಳ್ಳಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X