ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಥಳ ಪುರಾಣ: ಗಂಗೆ ಕಥೆ ಹೇಳುವ ಗಂಗಾ ಸಾಗರ

By ರಾಘವೇಂದ್ರ ಅಡಿಗ
|
Google Oneindia Kannada News

ಭಾರತೀಯರಿಗೆ ಪವಿತ್ರ ದೈವ ಸಮಾನವಾದ ನದಿ ಗಂಗಾ. 'ಗಂಗಾ ಮಾತೆ’ ಎನ್ನುವುದಾಗಿ ಕರೆಯಿಸಿಕೊಳ್ಳುವ ಈ ನದಿ ಉತ್ತರದ ಕಾಶ್ಮೀರದಿಂದ ದಕ್ಷಿಣದ ತುದಿಯ ಕನ್ಯಾಕುಮಾರಿಯವ್ರೆಗಿನ ಸರ್ವ ಹಿಂದೂ ಧರ್ಮೀಯರಿಗೂ ಪೂಜನೀಯವಾದುದು. ಇಂತಹಾ ನದಿಯು ಉತ್ತರಕಾಶಿಯ ಸಮೀಪದ ಗಂಗೋತ್ರಿಯಲ್ಲಿ ಹುಟ್ಟಿ ನೂರಾರು ಮೈಲು ಹರಿದು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ದಕ್ಷಿಣದಲ್ಲಿ ಸುಮಾರು 100 ಕಿಲೋಮೀಟರ್ ಅಂತರದಲ್ಲಿರುವ ಗಂಗಾಸಾಗರವೆನ್ನುವಲ್ಲಿ ಸಮುದ್ರವನ್ನು ಸೇರುತ್ತದೆ.

ಗಂಗೆಯು ಸಮುದ್ರ ಸಂಗಮವಾಗುವ ಈ ಗಂಗಾ ಸಾಗರ ಕ್ಷೇತ್ರಕ್ಕೆ ಸಹ ಗಂಗೆಯ ಜನ್ಮಸ್ಥಳ ಗಂಗೋತ್ರಿಯಷ್ಟೆ ಪಾವಿತ್ರ್ಯತೆ ಇದೆ. ಹಿಂದೂ ಪುರಾಣಗಳಲ್ಲಿ ಗಂಗಾ ಸಾಗರದ ಮಹಿಮೆಯನ್ನು ನಾನಾ ವಿಧಗಳಲ್ಲಿ ಕೊಂಡಾಡಲಾಗಿದೆ. ಅಯೋಧ್ಯಾಪುರವನ್ನಾಳುತ್ತಲಿದ್ದ ಸಗರ ಚಕ್ರವರ್ತಿಗೆ ಕೇಶಿನಿ ಮತ್ತು ಸುಮತಿಯರೆನ್ನುವ ಇಬ್ಬರು ಮಡದಿಯರಿದ್ದರು. ಒಮ್ಮೆ ಔರವ ಮಹರ್ಷಿಗಳು ಸಗರನ ಆಸ್ಥಾನಕ್ಕೆ ಭೇಟಿಯಿತ್ತ ಸಮಯದಲ್ಲಿ ಅಲ್ಲಿನ ಅತಿಥಿ ಸತ್ಕಾರಕ್ಕೆ ಮೆಚ್ಚಿ ಸಗರನ ರಾಣಿಯರೀರ್ವರಿಗೆ ಎರಡು ವರಗಳನ್ನು ಅನುಗ್ರಹಿಸಿದರು.

ಅದರಂತೆ ಬಹಳ ಗುಣಶಾಲಿ, ಬಲಶಾಲಿಯೂ ಆದ ಓರ್ವ ಪುತ್ರ ಸಂತಾನ, ಆತನು ಮುಂದೆ ಸಗರನ ಸಾಮ್ರಾಜ್ಯಕ್ಕೆ ಚಕ್ರವರ್ತಿಯಾಗುವ ಎಲ್ಲಾ ಗುಣಲಕ್ಷಣಾವನ್ನು ಹೊಂದಿರುತ್ತಾನೆ. ಇನ್ನೊಂದು ವರದಂತೆ ಹದಿನಾರು ಸಾವಿರ ಪುತ್ರರು. ಈ ಎರಡು ವರಗಳಲ್ಲಿ ಯಾವ ರಾಣಿಗೆ ಯಾವ ವರವು ಬೇಕಿದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಿರೆನ್ನಲು ಹಿರಿಯ ರಾಣಿಯಾದ ಕೇಶಿನಿದೇವಿಯು ತಾನು ಮೊದಲನೆಯ ವರವನ್ನು ಆಯ್ಕೆ ಮಾಡಿಕೊಳ್ಲುತ್ತಾಳೆ.

ಎರಡನೆ ರಾಣಿಯಾದ ಸುಮತಿದೇವಿಯು ತಾನು ಹದಿನಾರು ಸಾವಿರ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಹೀಗೆ ಕಾಲವು ಸರಿದಂತೆ ಸುಮತಿಯಲ್ಲಿ ಜನಿಸಿದ ಆ ಹದಿನಾರು ಸಾವಿರ ಮಕ್ಕಳು ತಾವು ಸಗರನ ಉತ್ತಮ ಶಾಂತಿಯುತ ಆಡಳಿತಕ್ಕೆ ಭಂಗ ತರುವ ಕಾರ್ಯದಲ್ಲಿ ನಿರತರಾಗುತ್ತಾರೆ. ಅವರ ಉಪಟಳಗಳಿಂದ ಇಂದ್ರಾದಿ ದೇವತೆಗಳಿಂದ ಹಿಡಿದು ಭೂಲೋಕ ವಾಸಿಗಳಾದ ಸಾಮಾನ್ಯ ಜನರೂ ತಾವು ಸುಖದಿಂದ ಬದುಕು ನಡೆಸುವುದು ಕಷ್ಟವೆನ್ನಿಸುತ್ತದೆ.

Sthala purana Ganga Sagara, Sagar Island

ಆಗ ದೇವೇಂದ್ರನು “ಈ ಸಮಸ್ಯೆಯಿಂದ ತಾವು ಪಾರಾಗುವುದು ಹೇಗೆ?” ಎನ್ನುವುದಾಗಿ ಮಹಾ ತಪಸ್ವಿಗಳಾದ ಕಪಿಲ ಮಹರ್ಷಿಗಳ ಬಳಿಯಲ್ಲಿ ಸಲಹೆ ಕೇಳುತ್ತಾನೆ. ಆಗ ಕಪಿಲ ಮುನಿಗಳು ಇದಕ್ಕೊಂದು ಉಪಾಯವನ್ನು ಹೂಡಿ ಅದರಂತೆ ತಾವು ಸಗರ ಚಕ್ರವರ್ತಿಯನ್ನು ಭೇಟಿ ಮಾಡಿ “ಹೇ ರಾಜನ್ ನಿನ್ನ ರಾಜ್ಯವು ಇಂದು ಉತ್ತಮ ಆಡಳಿತದಿಂದ ಮೂಲೋಕಗಳಲ್ಲಿಯೂ ಹೆಸರು ಗಳಿಸಿದೆ. ಇಂತಹಾಸಾಮ್ರಾಜ್ಯದ ಕೀರ್ತಿ ಇನ್ನಷ್ಟು ಎತ್ತರಕ್ಕೇರಬೇಕೆಂದರೆ ನೀನೊಂದು ಅಶ್ವಮೇಧ ಯಾಗವನ್ನು ಮಾಡಬೇಕು” ಎನ್ನುವ ಸಲಹೆಯನ್ನು ನೀಡಿದರು.

ಮಹರ್ಷಿಗಳ ಸಲಹೆಯನ್ನು ಶಿರಸಾ ಪಾಲಿಸುವುದಾಗಿ ತಿಳಿಸಿದ ಸಗರ ಚಕ್ರವರ್ತಿಯು ಅದರಂತೆ ಅಶ್ವಮೇಧ ಯಾಗಕ್ಕಾಗಿ ಸಕಲ ಸಿದ್ದತೆಯಲ್ಲಿ ತೊಡಗಿದನು. ಒಳ್ಳೆಯ ದಷ್ಟ ಪುಷ್ಟವಾದ ಕುದುರೆಯೊಂದನ್ನು ಯಾಗಕ್ಕಾಗಿ ಆರಿಸಿಕೊಂಡು ತನ್ನ ಹದಿನಾರು ಸಾವಿರ ಮಕ್ಕಳಿಗೆ ಅದರ ರಕ್ಶಣೆಯ ಭಾರವನ್ನು ವಹಿಸಿಕೊಟ್ಟನು. ಅದರಂತೆ ಆ ಹದಿನಾರು ಸಾವಿರ ಜನರ ರಕ್ಷಣೆಯಲ್ಲಿ ಕುದುರೆಯು ನಾನಾ ದೇಶಗಳನ್ನು ಹಾದು ಹೋಯಿತು. ಸಗರ ಚಕ್ರವರ್ತಿಯ ಮೇಲಿನ ಗೌರವ ಹಾಗೂ ಭಯದ ಕಾರಣಾದಿಂದ ಯಾವುದೇ ದೇಶದ ರಾಜರೂ ಈ ಯಜ್ಞದ ಕುದುರೆಯನ್ನು ಕಟ್ಟಿ ಹಾಕುವ ದಾರ್ಷ್ಟ್ಯವನ್ನು ತೋರಲಿಲ್ಲ.

ಹೀಗಿರಲು ಅದೊಂದು ದಿನ ದೇವೇಂದ್ರನು ತಾನು ಆ ಯಜ್ಞಾಶ್ವವನ್ನು ತನ್ನ ಕುಟಿಲತನದಿಂದ ಅಪಹರಿಸಿ ಕಪಿಲ ಮುನಿಗಳ ಆಶ್ರಮದ ಆವರಣಾದಲ್ಲಿ ಕಟ್ಟಿ ಹಾಕಿದನು. ಕಪಿಲ ಮುನಿಗಳು ತಾವು ಧ್ಯಾನದಲ್ಲಿ ತಲ್ಲೀನರಾಗಿದ್ದ ಸಂದರ್ಭದಲ್ಲಿ ಸಗರನ ಆ ಹದಿನಾರು ಸಾವಿರ ಪುತ್ರರು ತಮ್ಮ ನಡುವಿದ್ದ ಯಜ್ಞಾಶ್ವಕ್ಕಾಗಿ ಹುಡುಕುತ್ತಾ ಆ ಆಶ್ರಮದ ಬಳಿ ಸಾರಲು ಆಶ್ರಮದ ಆವರಣಾದಲ್ಲಿ ಬಂಧಿಯಾಗಿರುವ ಯಜ್ಞ ಹಯವು ಅವರಿಗೆ ಗೋಚರವಾಯಿತು.

Sthala purana Ganga Sagara, Sagar Island

ಇದರಿಂದಾಗಿ ಸಹಜವಾಗಿ ಕೆರಳಿ ಕೆಂಡದಂತಾದ ಆ ಸಗರ ಕುಮಾರರು “ಎಲಾ ಈ ಮುನಿಗದೆಷ್ಟು ಧೈರ್ಯ? ಯಾವ ವೀರ ಕ್ಷತ್ರಿಯ ರಾಜ, ಮಹಾರಾಜರೂ ತಮ್ಮ ಯಜ್ಞಾಶ್ವವನ್ನು ಕಟ್ಟಿ ಹಾಕಲು ಹಿಂಜರಿದಿದ್ದ ಸಮಯದಲ್ಲಿ ಈ ಸಾಮಾನ್ಯ ಸಾಧುವೋರ್ವನು ಈ ಕುದುರೆಯನ್ನು ಕಟ್ಟಿ ಹಾಕಿರುವನಲ್ಲ?” ಎಂದುಕೊಳ್ಳುತ್ತಲೇ ಕ್ರೋಧತುಂದಿಲರಾಗಿ ಆಶ್ರಮವನ್ನು ಪ್ರವೇಶಿಸಿ ಧ್ಯಾನದಲ್ಲಿದ್ದ ಮುನಿಗಳ ಬಳಿ ಸಾರಿ ನಾನಾ ವಿಧದಲ್ಲಿ ಹಿಂಸಿಸಲು ಆರಂಭಿಸಿದರು.

ಈ ಕೃತ್ಯದಿಂದ ಧ್ಯಾನ ಭಂಗವಾಗಿ ಎಚ್ಚರಗೊಂಡ ಕಪಿಲ ಮಹರ್ಷಿಗಳು ತಾವು ಕಡುಕೋಪಗೊಂಡು ತಮ್ಮ ಕಣ್ಣುಗಳನ್ನು ತೆರೆದಾಗ ಅವರ ಆ ನೇತ್ರಗಳಿಂದ ಬಂದ ಶಾಖ ಪೂರಿತ ಪ್ರಭೆಗೆ ಸಗರ ಚಕ್ರವರ್ತಿಯ ಪುತ್ರರಾದ ಆ ಹದಿನಾರು ಸಾವಿರ ಮಂದಿಯೂ ಸುಟ್ಟು ಭಸ್ಮವಾಗಿ ಹೋದರು. ಈ ಸುದ್ದಿಯನ್ನು ತಿಳಿದ ಸಗರ ಚಕ್ರವರ್ತಿಯು ತಾನು ಕುಪಿತಗೊಂಡು ತಕ್ಷಣವೇ ಕಪಿಲರ ಆಶ್ರಮದತ್ತ ಧಾವಿಸಿ ಬಂದು ಅವರಲ್ಲಿ ಆದ ತಪ್ಪಿಗಾಗಿ ಕ್ಷಮೆ ಯಾಚಿಸಲು ಮಹರ್ಷಿಗಳು “ತನ್ನಿಂದಾದ ಕೃತ್ಯಕ್ಕಾಗಿ ನಾನು ಸಹ ಪರಿತಪಿಸುತ್ತೇನೆ.

ಆದರೆ ನಿನ್ನ ಪುತ್ರರನ್ನು ಪುನಃ ಮೊದಲಿನಂತೆ ಮಾಡಲು ಸಾಧ್ಯವಿಲ್ಲ. ಬದಲಾಗಿ ನಿಮ್ಮ ವಂಶದಲ್ಲಿ ಮುಂದೆ ಭಗೀರತನೆನ್ನುವವನು ಹುಟ್ಟಲಿದ್ದು ಅವನಿಂದ ದೇವಲೋಕದಲ್ಲಿನ ಗಂಗೆಯು ಭೂಲೋಕಕ್ಕೆ ಬರುವವಳಿದ್ದಾಳೆ ಅವಳ ಆಗಮನ ಮತ್ತು ಅವಳ ಸ್ಪರ್ಷ ಮಾತ್ರದಿಂದ ನಿನ್ನ ಈ ಹದಿನಾರು ಸಾವಿರ ಪುತ್ರರಿಗೆ ಶಾಶ್ವತ ಮೋಕ್ಷವು ಪ್ರಾಪ್ತಿಸುತ್ತದೆ” ಎಂದು ನುಡಿದರು.

ಅದರಂತೆ ಹಲವು ನೂರು ವರುಷಗಳ ತರುವಾಯ ಸಗರನ ವಂಶದಲ್ಲಿ ಜನ್ಮಿಸಿದ ಭಗೀರತ ಮಹಾರಾಜನು ತಾನು ವಿಷ್ಣು ಮತ್ತು ಪರಮೇಶ್ವರರನ್ನು ಕುರಿತು ಗಾಢವಾದ ತಪಸ್ಸನ್ನಾಚರಿಸಿ ಅವರಿಂದ ದೇವಲೋಕದಲ್ಲಿದ್ದ ಗಂಗೆಯನ್ನು ಭೂಲೋಕಕ್ಕೆ ತಂದು ತನ್ನ ಪೂರ್ವಜರು ಶಾಶ್ವತ ಮೋಕ್ಷವನ್ನು ಹೊಂದುವಂತೆ ಮಾಡಿದನು. ಅಂದು ಕಪಿಲರ ಆಶ್ರಮವಿದ್ದ ಸ್ಥಳವೇ ಇಂದಿನ ಗಂಗಾ ಸಾಗರವೆನ್ನುವುದಾಗಿ ತಿಳಿಯಲಾಗಿದೆ. ಮತ್ತು ಗಂಗಾ ನದಿಯು ತಾನು ಸಮುದ್ರದೊಂದಿಗೆ ಸಂಗಮಿಸುವ ಈ ಸ್ಥಳವು ಹಿಂದೂಗಳ ಪಾಲಿನ ಪವಿತ್ರ ಕ್ಷೇತ್ರವೆನಿಸಿದೆ. ಇಲ್ಲಿ ನಡೆಯುವ ಮಹಾ ಕುಂಭಮೇಳದ ಸಂದರ್ಭ ಸೇರಿದಂತೆ ಅನೇಕ ಪುಣ್ಯ ದಿನಗಳಲ್ಲಿ ಲಕ್ಷ ಸಂಖ್ಯೆಯ ಭಕ್ತಾದಿಗಳು ನೆರೆದು ಈ ಪಾವನ ಸಂಗಮ ತೀರ್ಥದಲ್ಲಿ ಮಿಂದು ಧನ್ಯತಾ ಭಾವ ತಾಳುತ್ತಾರೆ.

English summary
Sthala purana Ganga Sagara, Sagar Island, lies on the continental shelf of Bay of Bengal. The river Ganges was released from Lord Shiva's hair to meet the needs of the country according to Hindu mythology. How the Ganges related to King Sagara here is the story narrated by Raghavendra Adiga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X