ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂದಿ ಬೆಟ್ಟದ ಮಂಜು, ಸೊಗಸು ಕಾಣುವ ರೋಮಾಂಚಕ ಅನುಭವ

ನಂದಿ ಬೆಟ್ಟದಲ್ಲಿ ಚಳಿ ಸೊಗಸು, ಮಂಜು ಮತ್ತಷ್ಟು ಸೊಗಸು, ಅಲ್ಲಿನ ದೇಗುಲ ಬಹಳ ಚಂದ...ಹೀಗೆ ಹೇಳುತ್ತಾ ಹೋದರೆ ನಂದಿ ಬೆಟ್ಟವೇ ಸೌಂದರ್ಯದ ಖನಿ. ತೋಟಗಾರಿಕೆ ಇಲಾಖೆಯಲ್ಲಿ ಮುಂಚಿತವಾಗಿಯೇ ನಂದಿ ಬೆಟ್ಟದ ಮೇಲಿನ ರೂಮ್ ಬುಕ್ ಮಾಡಿ ಉಳಿದುಕೊಳ್ಳಬಹುದು

By ಡಿ.ಜಿ.ಮಲ್ಲಿಕಾರ್ಜುನ
|
Google Oneindia Kannada News

ಮೋಡವೇ ಹೊದ್ದಂತೆ, ಬೀಸುವ ಗಾಳಿಗೆ ಮೋಡದೊಳಗೆ ಹೊಕ್ಕಂತೆ ಭಾಸವಾಗುತ್ತಾ, ಸುತ್ತಲೂ ಆವರಿಸಿರುವ ಮೋಡದಿಂದ ಜಿನುಗುವ ಹನಿನೀರಿಗೆ ಮೈಯೊಡ್ಡುವ ಸುಖಕ್ಕಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿರುವ ನಂದಿಬೆಟ್ಟಕ್ಕೆ ಪ್ರವಾಸಿಗರು ಎಲ್ಲ ಕಾಲಗಳಲ್ಲೂ ಭೇಟಿ ನೀಡುತ್ತಾರೆ. ನಂದಿಬೆಟ್ಟ ಕೇವಲ ಮೋಜಿನ ತಾಣವಲ್ಲ, ಅಲ್ಲಿ ಕೌತುಕದ ಲೋಕವೂ ಒಂದಿದೆ. ಚಳಿಗಾಲದಲ್ಲಿ ಮುಂಜಾನೆ ಮಂಜು ಮತ್ತು ಚಳಿಯ ನಡುವೆ ಓಡಾಡುವುದೇ ಒಂದು ಸೊಗಸು.

ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಬೆಂಗಳೂರಿನಲ್ಲಿ ಸಾರ್ಕ್ ಶೃಂಗ ಸಭೆ ನಡೆದಿತ್ತು. ಆಗ ಸಾರ್ಕ್ ರಾಷ್ಟ್ರಗಳ ಪ್ರಮುಖರೆಲ್ಲರೂ ನಂದಿಬೆಟ್ಟಕ್ಕೆ ಬಂದು, ಇಲ್ಲಿನ ಆಹ್ಲಾದಕರ ವಾತಾವರಣಕ್ಕೆ ಮನಸೋತಿದ್ದರು. ಆಗ ರಾಜೀವ್ ಗಾಂಧಿ ಜಿಪ್ಸಿಯನ್ನು ತಾನೇ ಡ್ರೈವ್ ಮಾಡುತ್ತಾ, ಬೆಟ್ಟದ ಹೇರ್ ಪಿನ್ ಕರ್ವ್ ಗಳಲ್ಲಿ ವಾಹನ ನಡೆಸುವ ಮಜಾ ಅನುಭವಿಸಿದ್ದರು.[ನಂದಿಗಿರಿಧಾಮ ಇನ್ನು ಪ್ಲಾಸ್ಟಿಕ್ ಮುಕ್ತ, ಪರಿಸರ ಸ್ನೇಹಿ ವಾಹನ ಸಂಚಾರ]

Nandi Hills

ಬಹಳ ಹಿಂದೆ ಎಲಿಜಬೆತ್ ರಾಣಿ ತನ್ನ ಪತಿಯೊಂದಿಗೆ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದರು. ನಂದಿಬೆಟ್ಟದ ಬುಡದಲ್ಲಿರುವ ಮುದ್ದೇನಹಳ್ಳಿಯವರಾದ ಸರ್.ಎಂ.ವಿಶ್ವೇಶ್ವರಯ್ಯನವರು ನಡೆದೇ ಬೆಟ್ಟಕ್ಕೆ ಹೋಗುತ್ತಿದ್ದರಂತೆ. ಮಹಾತ್ಮ ಗಾಂಧಿ ಎರಡು ಬಾರಿ ಇಲ್ಲಿ ತಂಗಿದ್ದರು. ತಮ್ಮ ಆರೋಗ್ಯ ಸುಧಾರಣೆಗಾಗಿ ಎರಡು ತಿಂಗಳ ಕಾಲ ಇಲ್ಲಿದ್ದರು.

ಇನ್ನು ನೆಹರು, ವಿಜಯಲಕ್ಷ್ಮಿಪಂಡಿತ್, ಇಂದಿರಾಗಾಂಧಿ, ರಾಧಾಕೃಷ್ಣನ್, ವಲ್ಲಭ ಬಾಯಿ ಪಟೇಲ್, ಸರ್ ಸಿ.ವಿ.ರಾಮನ್, ರಾಜಗೋಪಾಲಾಚಾರಿ.... ಹೆಸರಿಸುತ್ತಾ ಹೋದರೆ ಗಣ್ಯರ ಪಟ್ಟಿ ನಂದಿಬೆಟ್ಟದೆತ್ತರಕ್ಕೆ (4851 ಅಡಿ) ಬೆಳೆಯತೊಡಗುತ್ತದೆ.

ಬೆಂಗಳೂರಿಗೆ ನಲವತ್ತೈದು ಕಿ.ಮೀ

ಬೆಂಗಳೂರಿಗೆ ನಲವತ್ತೈದು ಕಿ.ಮೀ

ನಂದಿಬೆಟ್ಟವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದೆ. ಚಿಕ್ಕಬಳ್ಳಾಪುರ ಪಟ್ಟಣದಿಂದ 10 ಕಿ.ಮೀ ದೂರದಲ್ಲಿ ಹಾಗೂ ಬೆಂಗಳೂರು ನಗರದಿಂದ ಸುಮಾರು 45 ಕಿ.ಮೀ ದೂರದಲ್ಲಿದೆ. ಹೊಸದಾಗಿ ನಿರ್ಮಾಣಗೊಂಡ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ. ಜೊತೆಗೆ, ನಂದಿಬೆಟ್ಟವು ದೇವನಹಳ್ಳಿ ನಗರದ ಹತ್ತಿರದ ರಾಷ್ಟ್ರೀಯ ಹೆದ್ದಾರಿ (ಎನ್ ಎಚ್-7)ಯಿಂದ 20 ಕಿ.ಮೀ ದೂರದಲ್ಲಿದೆ. ಈ ಬೆಟ್ಟವು ಪಾಲರ್ ಮತ್ತು ಅರ್ಕಾವತಿ ನದಿಗಳ ಉಗಮ ಸ್ಥಾನವಾಗಿದೆ.

ಒಂದು ಸಾವಿರ ವರ್ಷದ ಹಳೇ ದೇಗುಲ

ಒಂದು ಸಾವಿರ ವರ್ಷದ ಹಳೇ ದೇಗುಲ

ಒಂದು ಸಾವಿರ ವರ್ಷಗಳ ಹಿಂದಿನ ನಂದಿ ದೇವಾಲಯ ಬೆಟ್ಟದ ಮೇಲೆ ಇರುವುದರಿಂದ ನಂದಿ ಬೆಟ್ಟ ಎಂಬ ಹೆಸರು ಬಂದಿದೆ. ಪುರಾತನ ಕಾಲದ ಶಿವ ಮತ್ತು ಪಾರ್ವತಿಯರ ದೇವಾಲಯ ಈ ಬೆಟ್ಟವನ್ನು ಮತ್ತಷ್ಟು ಸುಂದರಗೊಳಿಸಿದೆ. ಯೋಗ ನಂದೀಶ್ವರನೆಂಬ ತಪಸ್ವಿಯು ತಪಸ್ಸು ಮಾಡಿದ ನಂತರ ಬೆಟ್ಟಕ್ಕೆ ಈ ಹೆಸರು ಬಂತೆಂದು ಇನ್ನೊಂದು ಕಥೆ ಹೇಳುತ್ತದೆ.

 ಮಲಗಿರುವ ವೃಷಭ

ಮಲಗಿರುವ ವೃಷಭ

ಆಡಳಿತಗಾರನಾಗಿದ್ದ ಟಿಪ್ಪು ಸುಲ್ತಾನನು ಕೋಟೆ ಕಟ್ಟಿರುವುದರಿಂದ, ನಂದಿಯು ನಂದಿದುರ್ಗ(ಕೋಟೆ) ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು. ಈ ಬೆಟ್ಟವು ನಿದ್ರಿಸುತ್ತಿರುವ ವೃಷಭ (ನಂದಿ) ದಂತೆ ಕಾಣುವುದರಿಂದ ಬಹುಶಃ ಈ ಬೆಟ್ಟಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿರಬಹುದು.

 ಶಂಕರ್ ನಾಗ್ ಕನಸು

ಶಂಕರ್ ನಾಗ್ ಕನಸು

ನಂದಿಬೆಟ್ಟ ಸೇರಿದಂತೆ ಇಲ್ಲಿ ಪಂಚಗಿರಿಗಳು ಇವೆ. ಅವು ನಂದಿಗಿರಿ. ಸ್ಕಂದಗಿರಿ, ಬ್ರಹ್ಮಗಿರಿ, ಚೆನ್ನಗಿರಿ ಮತ್ತು ದಿವ್ಯಗಿರಿ. ಶಂಕರ್ ನಾಗ್ ಮಾಲ್ಗುಡಿ ಡೇಸ್ ಗಾಗಿ ನಂದಿಬೆಟ್ಟದಲ್ಲಿ ಷೂಟಿಂಗ್ ಮಾಡಿದ್ದರು. ಆಗ ಬೆಟ್ಟದಿಂದ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಿದರೆ ಹೇಗೆ? ಎಂದು ಕನಸು ಕಂಡಿದ್ದರು.

ಬ್ರಿಟಿಷರ ಬಂಗಲೆಗಳು

ಬ್ರಿಟಿಷರ ಬಂಗಲೆಗಳು

ಟಿಪ್ಪುಸುಲ್ತಾನ್ ಇಲ್ಲಿ ಬೇಸಿಗೆ ಅರಮನೆ ಕಟ್ಟಿಕೊಂಡಿದ್ದ ಹಾಗೂ ದುರ್ಗಮವಾದ ಕೋಟೆ ಕಟ್ಟಿದ್ದ. ಅವನ ನಂತರ ಬಂದ ಬ್ರಿಟಿಷ್ ಅಧಿಕಾರಿಗಳು ಇಲ್ಲಿ ವಾಸಕ್ಕಾಗಿ ಬಂಗಲೆಗಳನ್ನು ನಿರ್ಮಿಸಿಕೊಂಡಿದ್ದರು. ಅವನ್ನೇ ಈಗ ವಸತಿಗೃಹಗಳನ್ನಾಗಿ ಮಾರ್ಪಡಿಸಿದ್ದಾರೆ. ನೆಹರು ಭವನದ ಮುಂಚಿನ ಹೆಸರು ಕಬ್ಬನ್ ಹೌಸ್. 1834ರಲ್ಲಿ ಮೈಸೂರು ರಾಜ್ಯದ ಕಮಿಷನರ್ ಆದ ಮಾರ್ಕ್ ಕಬ್ಬನ್ 27 ವರ್ಷಗಳ ಕಾಲ ಒಂದೇ ಒಂದು ದಿನ ರಜೆ ತೆಗೆದುಕೊಳ್ಳದೆ ಉತ್ತಮ ಆಡಳಿತ ನೀಡಿದ. ಈ ಮಾರ್ಕ್ ಕಬ್ಬನ್ ನ ವೈಶಿಷ್ಟ್ಯವೇನೆಂದರೆ, ಈತ ಆಡಳಿತವೆಲ್ಲವೂ ಕನ್ನಡದಲ್ಲಿಯೇ ನಡೆಯುವಂತೆ ಮಾಡಿದ. ಕಂದಾಯ, ಅರಣ್ಯ, ಕೃಷಿ, ಹಣಕಾಸು, ಲೋಕೋಪಯೋಗಿ, ಶಿಕ್ಷಣ ಮೊದಲಾದ ಆಗಿನ ಕಾಲದ ಹದಿನೆಂಟು ಕಚೇರಿಗಳ (ಅಠಾರ ಕಚೇರಿ) ಸ್ಥಾಪನೆಗಳೂ ಆತನೇ ಮಾಡಿದ್ದು.

ಸರಕಾರಿ ಸಾಲ ತೀರಿತು

ಸರಕಾರಿ ಸಾಲ ತೀರಿತು

ಕಬ್ಬನ್ ನ ಆಡಳಿತ ಕಾಲದಲ್ಲಿ ಮೈಸೂರು ರಾಜ್ಯದ ಹಣಕಾಸಿನ ಸ್ಥಿತಿ ಸುಧಾರಿಸಿ, ಅದು ತನ್ನೆಲ್ಲ ಸರಕಾರಿ ಸಾಲಗಳನ್ನು ತೀರಿಸಿತು. ಮೈಸೂರಿನ ಆಡಳಿತದ ಮೇಲೆ, ಜನಜೀವನದ ಮೇಲೆ ಮಾರ್ಕ್ ಕಬ್ಬನ್ ನಂತೆ ತಮ್ಮ ಮಾರ್ಕ್ ಬೀಳಿಸಿ, ಅಂದರೆ ಗುರುತು ಮೂಡಿಸಿ ಹೋದವರು ಹೆಚ್ಚು ಜನರಿಲ್ಲ.

ಕಬ್ಬನ್ ಪಾರ್ಕ್ ನಿರ್ಮಾಣ

ಕಬ್ಬನ್ ಪಾರ್ಕ್ ನಿರ್ಮಾಣ

ಬೆಂಗಳೂರಿನ ಕಬ್ಬನ್ ಪಾರ್ಕ್ ಅವನ ನೆನಪಿಗೋಸ್ಕರವೇ ನಿರ್ಮಾಣವಾಗಿದೆ. ಅಲ್ಲಿ ಅವನ ಅಶ್ವಾರೋಹಿ ಪ್ರತಿಮೆ ಕೂಡ ಇದೆ. ಬೇಸಿಗೆಯಲ್ಲಿ ವಾಸಿಸುವುದಕ್ಕಾಗಿ ಆತ ನಂದಿಬೆಟ್ಟದಲ್ಲಿ 1848ರಲ್ಲಿ ಕಟ್ಟಿದ್ದ ಕಬ್ಬನ್ ಹೌಸ್ ಅನ್ನು ಹೆಸರು ಬದಲಿಸಿ ನೆಹರು ಭವನ ಎಂದು ಮಾಡಿದೆ.

 ಯೋಗನಂದೀಶ್ವರ ದೇವಸ್ಥಾನ

ಯೋಗನಂದೀಶ್ವರ ದೇವಸ್ಥಾನ

ದ್ರಾವಿಡ ಶೈಲಿಯಲ್ಲಿ ನಿರ್ಮಿಸಿರುವ ಈ ದೇವಾಲಯದಲ್ಲಿ ಶಿವನು ಯೋಗ ದೀಕ್ಷೆಯಲ್ಲಿರುವುದರಿಂದ ಉತ್ಸವಗಳು ನಡೆಯುವುದಿಲ್ಲ. ಗರ್ಭಗುಡಿ, ಸುಕನಾಸಿ, ನವರಂಗ ಮತ್ತು ಕಲ್ಯಾಣಮಂಟಪಗಳನ್ನು ಒಳಗೊಂಡ ಈ ದೇವಾಲಯ ಬಹಳ ಸುಂದರವಾಗಿದೆ. ಸುಕನಾಸಿಯ ಬಾಗಿಲುವಾಡದ ಹಿತ್ತಾಳೆಯ ಚೌಕಟ್ಟಿನಲ್ಲಿ ಅನೇಕ ಚಿತ್ರಗಳನ್ನು ಕೆತ್ತಲಾಗಿದೆ. ದ್ವಾರದ ಎರಡು ಪಕ್ಕಗಳಲ್ಲೂ ಸುಮಾರು ಐದು ಅಡಿ ಎತ್ತರದ ಲೋಹದ ದ್ವಾರಪಾಲಕ ವಿಗ್ರಹಗಳಿವೆ. ಇವು ಕೃಷ್ಣದೇವರಾಯನ ಕಾಣಿಕೆ.

ಮನೋಹರ ದೃಶ್ಯ

ಮನೋಹರ ದೃಶ್ಯ

ಗಾಂಧಿನಿಲಯ ಬಳಿ ನಿಂತರೆ ಬೆಟ್ಟದ ಮೇಲಿಂದ ಮನೋಹರ ದೃಶ್ಯಗಳನ್ನು ಕಾಣಬಹುದು. ಕೆರೆಗಳ ಹೊಳೆಯುವ ನೀರು, ಬೈತೆಲೆ ಗೆರೆಯಂತಿರುವ ರಸ್ತೆ, ಪುಟ್ಟದಾಗಿ ಕಾಣುವ ಮನೆಗಳು, ತೋಟಗಳು, ಬೆಟ್ಟ ಗುಡ್ಡಗಳನ್ನೆಲ್ಲಾ ಕಣ್ಣಿಗೆ ತುಂಬಿಸಿಕೊಳ್ಳಹುದು.

ಗಾಂಧಿ ನಿಲಯ

ಗಾಂಧಿ ನಿಲಯ

ಕ್ಯಾಪ್ಟನ್ ಕನ್ನಿಂಗ್ ಹ್ಯಾಂ ಕಟ್ಟಿಸಿದ್ದ ಬಂಗಲೆ ಓಕ್ ಲ್ಯಾಂಡ್ಸ್' ಅನ್ನು ಹೆಸರು ಬದಲಿಸಿ ಸರ್ಕಾರ, 1936ರಲ್ಲಿ ಮಹಾತ್ಮ ಗಾಂಧಿಯವರು ಕೆಲ ವಾರಗಳ ಕಾಲ ವಿಶ್ರಾಂತಿ ಪಡೆದುದರ ಸವಿನೆನಪಿಗಾಗಿ ಗಾಂಧಿ ನಿಲಯ' ಎಂದು ಮರುನಾಮಕರಣ ಮಾಡಿದ್ದಾರೆ.

ಪಕ್ಷಿ ವೀಕ್ಷಕರಿಗೆ ಸೂಕ್ತ ತಾಣ

ಪಕ್ಷಿ ವೀಕ್ಷಕರಿಗೆ ಸೂಕ್ತ ತಾಣ

ಇಲ್ಲಿಯೇ ನೆಲೆಸಿರುವ, ವಲಸೆ ರೂಪದಲ್ಲಿ ಆಗಮಿಸುವ ಹಲವಾರು ಪ್ರಭೇದದ ಹಕ್ಕಿಗಳನ್ನು ವೀಕ್ಷಿಸಲು ಮತ್ತು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪಕ್ಷಿ ವೀಕ್ಷಕರಿಗೂ ನಂದಿಬೆಟ್ಟವು ಸೂಕ್ತ ತಾಣವಾಗಿದೆ. ತೋಟಗಾರಿಕಾ ಇಲಾಖೆಯಿಂದ ಉದ್ಯಾನವನದ ನಿರ್ಮಾಣ ಹಾಗೂ ಹಳೆಯ ಗಿಡ, ಮರ, ವೃಕ್ಷಗಳ ಸಂರಕ್ಷಣೆಯಿಂದಾಗಿ ಇಲ್ಲಿ ವಿವಿಧ ಹಕ್ಕಿ, ಚಿಟ್ಟೆಗಳು ಹಾಗೂ ವೈವಿಧ್ಯಮಯ ಸಸ್ಯ ಪ್ರಬೇಧಗಳನ್ನು ಕಾಣಬಹುದಾಗಿದೆ. ಹಲವಾರು ಬಣ್ಣಗಳ ಹೂಗಳಿದ್ದು, ಮಕರಂದ ಹೀರುವ ದುಂಬಿಗಳು, ಚಿಟ್ಟೆಗಳು ಮತ್ತು ಚಿಕ್ಕ ಗಾತ್ರದ ಹಕ್ಕಿಗಳು ಕಣ್ಣಿಗೆ ಬೀಳುತ್ತವೆ.

English summary
Nandi hills a beautiful place to visit. A one day trip from Bangalore. DG Mallikarjun- A traveler, photographer writes about Nandi hills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X