ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳಿ ಕಣಿವೆ ರಹಸ್ಯ:ಸಂಶೋಧಕರೊಮ್ಮೆ ಇತ್ತ ಬನ್ನಿ

By * ಸತೀಶ್ ಭಟ್, ಮಾಗೋಡು, ಯಲ್ಲಾಪುರ
|
Google Oneindia Kannada News

Kaali River Mystery, Uttara Kannada
ಏನಿಲ್ಲ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ?!ಜಲಪಾತಗಳ ಜಿಲ್ಲೆಯೆಂಬ ಬಿರುದು.ನೋಡುವ ಕಣ್ಗಳ ಬಣ್ಣವೇ ಹಸಿರೇನೋ ಎಂಬ ಭ್ರಮೆ ಮೂಡಿಸುವಷ್ಟು ಹಸಿರು. ಹೆಜ್ಜೆಗೊಂದರಂತೆ ಜಲಪಾತ. ದೇವಾಲಯಗಳ ಸಾಲು. ಇತಿಹಾಸ ಸಾರುವ ಸ್ಮಾರಕಗಳು.

ಕುತೂಹಲ ಕೆರಳಿಸುವ ಸ್ಥಳಗಳು, ಗಂಡೆದೆಗೆ ಸವಾಲೆಸೆಯುವ, ಚಾರಣಿಗರಲ್ಲಿ ಬೆವರಿಳಿಸುವ ಕಣಿವೆ, ಕಂದರಗಳು....ಎಣಿಸುತ್ತ ಹೋದರೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹೊಸದನ್ನು ಅರಸುತ್ತ,ಇಂಥಹ ಸ್ಥಳಗಳ ಬಗ್ಗೆ ಮಾಹಿತಿ ಕಲೆಹಾಕುತ್ತ ಹೋದರೆ ಹೊಸದೊಂದು ವಿಶ್ವವೇ ತೆರೆದುಕೊಳ್ಳುತ್ತದೆ.ಹಾಗಿದ್ದರೂ ಕೆಲವೊಂದು ಸ್ಥಳಗಳ ಬಗೆಗಿನ ಮಾಹಿತಿಗಳು ಮತ್ತಷ್ಟು ನಿಗೂಢವಾಗುತ್ತಲೇ ಸಾಗುತ್ತವೆ.

ಇಂಥವುಗಳಲ್ಲಿ ಕುತೂಹಲ ಮೂಡಿಸುತ್ತಿರುವದು ಯಲ್ಲಾಪುರ ತಾಲೂಕಿನ ಲಾಲಗುಳಿ ಗ್ರಾಮ.ಯಲ್ಲಾಪುರ ತಾಲೂಕಾ ಕೇಂದ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿ ಕಾಳಿ ನದಿಯ ಮಗ್ಗುಲಲ್ಲಿರುವ ಲಾಲಗುಳಿ ಸಂಪೂರ್ಣ ಸ್ವಾವಲಂಬೀ ಗ್ರಾಮ. ಈ ಹಿಂದೆ ಸಾವಯವ ಗ್ರಾಮವೆಂದು ರಾಜ್ಯಮಟ್ಟದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಲಾಭ-ಲೆಕ್ಕಾಚಾರಗಳ ವಿಷಯಕ್ಕೆ ಬಂದರೆ ಈ ಊರು ಅತ್ಯಂತ ಶ್ರೀಮಂತ! ಸಾಗುವಾನಿ ಮರಗಳೇ ಅಧಿಕ.ಅಂತೆಯೇ, ಇತಿಹಾಸವನ್ನೇ ಆಧಾರವಾಗಿಟ್ಟುಕೊಂಡರೂ ಶ್ರೀಮಂತವೇ. ಕಪ್ಪು ನೀರಿನ ಕಾಳಿ ನದಿಯ ತಡದ ಲಾಲಗುಳಿಯ ಬೆಟ್ಟವನ್ನು ಇಳಿದಿಳಿದು ಕಾಳಿಯ ಮಡಿಲು ಸೇರುವಷ್ಟರಲ್ಲಿ ಪ್ರಾಚೀನ ಭಾರತವೇ ತೆರೆದುಕೊಳ್ಳುತ್ತದೆ.

ಹನುಮನ ಕೋಟೆ : ಲಾಲಗುಳಿಯಿಂದ ಕಾಳಿ ನದಿಯನ್ನು ತಲುಪುವ ಮಾರ್ಗದಲ್ಲಿ ಮೊದಲು ಎದುರಾಗುವದು ಹನುಮನ ಕೋಟೆ. ಸಾಗುತ್ತ ಹೋದಂತೆ ಪ್ರಶ್ನೆ ಉದ್ಭವಿಸುತ್ತ ಹೋಗುತ್ತದೆ.ಹಿರಿಯರು ಹೇಳುವಂತೆ, ಇಂಥಹ ಏಕಶಿಲೆಯ(ಮೂರ್ತಿ ಹಾಗೂ ಪ್ರಭಾವಳಿಯನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ.) ಮೂರ್ತಿ ಇಡೀ ರಾಜ್ಯದಲ್ಲಿಯೇ ಇಲ್ಲ. ಸುತ್ತಲೂ ಕೋಟೆಯ ಅವಶೇಷಗಳೆಂಬಂತೆ ಬೃಹದಾಕಾರದ ಚಪ್ಪಡಿ ಕಲ್ಲುಗಳಿಂದ ನಿರ್ಮಿಸಿದ ಅರ್ಧ ಧರೆ ಸೇರಿದ ಗೋಡೆಗಳು. ಈ ಹನುಮ ಅತ್ಯಂತ ಶಕ್ತಿಶಾಲಿ. ಪ್ರತೀ ಶನಿವಾರ ಗ್ರಾಮಸ್ಥರೇ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಈ ಕಾರಣದಿಂದಲೇ ಲಾಲಗುಳಿ ಇಷ್ಟರ ಮಟ್ಟಿಗಾದರೂ ಉಳಿದಿದೆ. ಪೂಜೆ ತಪ್ಪಿದಲ್ಲಿ ಅನಾಹುತ ತಪ್ಪಿದ್ದಲ್ಲ.

ಬಂದೀ ಖಾನೆ ಕೊಂಡಿ: ಹಾಗೆಯೇ ಮುಂದೆ ಸಾಗಿ ತಪ್ಪಲನ್ನು ಇಳಿಯುತ್ತ ಹೋದರೆ ಎದುರಾಗುವದು ಕಾಳಿ ನದಿ. ಹತ್ತು-ಹಲವು ಅಚ್ಚರಿಗಳನ್ನು ಒಡಲಲ್ಲಿ ತುಂಬಿಕೊಂಡು ಹರಿಯುವ ಕಾಳಿಯ ಮಡಿಲು ಮುದ ನೀಡುತ್ತದೆ.ಕಣ್ಣು ಹಾಯಿಸಿದಷ್ಟೂ ದೂರ ಹಸಿರು. ಅಲ್ಲಿಲ್ಲಿ ಕಪ್ಪು ಚುಕ್ಕೆಯಂತೆ ಗೋಚರವಾಗುವ ಜೇನುಗಳ ಸಂಸಾರ. ಕಂಡು-ಕೇಳರಿಯದ ಜಾತಿಯ ಸಸ್ಯ ಸಂಕುಲ...ಅಬ್ಬಬ್ಬಾ...ಕಾಳಿಯ ನಿರಂತರ ಹರಿಯುವಿಕೆಯಿಂದ ಉಂಟಾದ ಬೃಹದಾಕಾರದ ಗುಂಡಿಯೊಂದಿದೆ. ಇದೇ ಬಂದೀ ಖಾನೆ ಕೊಂಡಿ. ಈ ಸ್ಥಳದ ಇತಿಹಾಸ ಕೇಳ ಹೊರಟರೆ ಮೈ ಜುಮ್ಮೆನ್ನುತ್ತದೆ.

ಕೊಂಡಿಯ ಇಕ್ಕೆಲಗಳಲ್ಲಿ ಎತ್ತರದ ಗುಡ್ಡ.45 ಡಿಗ್ರಿ ಇಳಿಜಾರು. ಹಿಂದೆ, ಅಪರಾಧಿಗಳಿಗೆ ಮರಣ ಶಿಕ್ಷೆ ನೀಡಲು ಇಲ್ಲಿಗೆ ಕರೆತರಲಾಗುತ್ತಿತ್ತು. ಗುಡ್ಡದ ಮೇಲೆ ನಿಲ್ಲಿಸಿ ಕಣ್ಣಿಗೆ ಪಟ್ಟಿ ಕಟ್ಟಿ ಕೆಳಕ್ಕೆ ನೂಕಲಾಗುತ್ತಿತ್ತಂತೆ. ಕೆಳಜಾರಿ ಬಂದ ಅಪರಾಧಿ ಗುಂಡಿ ಸೇರಿ ಮುಳುಗಿ ಸಾಯಬೇಕು. ಹಾಗೆಯೂ ಬದುಕುಳಿದರೆ, ಗುಂಡಿಯಲ್ಲಿರುವ ಮೊಸಳೆಗಳ ಉದರ ಸೇರಬೇಕು! ಸ್ಥಳಿಯರು ಹೇಳುವಂತೆ ಈಗಲೂ ಈ ಸ್ಥಳದಲ್ಲಿ ಮೊಸಳೆಗಳ ಸಂಸಾರವಿದೆ.

ಇಂಥಹ ವಿಧಾನಗಳನ್ನು ಅನುಸರಿಸುತ್ತಿದ್ದ ಬಗ್ಗೆ ಕಥೆಗಳಿವೆಯೇ ಹೊರತು ಆಧಾರವಿಲ್ಲ.ಯಾವ ರಾಜ, ಸಾಮಂತರ ಆಳ್ವಿಕೆಯಿತ್ತು ಎಂಬುದಕ್ಕೆ ಮಾಹಿತಿಗಳು ಲಭ್ಯವಿಲ್ಲ. ಆದರೆ, ಈ ಸ್ಥಳಕ್ಕೊಮ್ಮೆ ಭೇಟಿ ನೀಡಿದರೆ,ನೈಜತೆ ದಟ್ಟವಾಗುತ್ತದೆ.ಸಂಶೋಧನಾಸಕ್ತರು, ಇತಿಹಾಸ ತಜ್ಞರು ಈ ಸ್ಥಳಕ್ಕೆ ಭೇಟಿ ನೀಡಿ ಇತಿಹಾಸವನ್ನು ಸಂಶೋಧಿಸಿ, ಕಳೆದು ಹೋದ ಇತಿಹಾಸದ ಕೊಂಡಿಯನ್ನು ಮತ್ತೆ ಜೋಡಿಸಬೇಕಿದೆ.

English summary
Uttara Kannada District has plenty of historic and natural beauty spots, one such is Lalguli village. Lalguli has very old Hanuman temple Kali river valley and a fort which worth a research. Archeology and Survey of India Departments should visit this place
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X