ಲಂಡನ್, ಜೂನ್ 25: ಐಸಿಸಿ ಮಹಿಳಾ ವಿಶ್ವಕಪ್ 2017ರ ಮೊದಲ ದಿನದಂದೇ ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಮಿಥಾಲಿ ಅವರು ಅರ್ಧಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
ಮಿಥಾಲಿ ಅವರು 84 ಎಸೆತಗಳಲ್ಲಿ 71ರನ್ ಗಳಿಸುವ ಮೂಲಕ ಸತತ 7 ಅರ್ಧಶತಕ ಬಾರಿಸಿದ ದಾಖಲೆ ಬರೆದರು. ಸತತ ಆರು ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದ ಲಿಂಡ್ಸೆ ರೀಲರ್, ಶೆವರ್ಲೆ ಎಡ್ವರ್ಡ್ ಹಾಗೂ ಎಲ್ಲಿಸಿ ಪೆರಿ ಅವರನ್ನು ಮಿಥಾಲಿ ಹಿಂದಿಕ್ಕಿದ್ದಾರೆ.
ಮಿಥಾಲಿ ಅವರ ಅರ್ಧಶತಕದ ನೆರವಿನಿಂದ ಭಾರತ 50 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 281ರನ್ ಗಳಿಸಿತು. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಣ್ಣ ಹಾಗೂ ಪೂನಮ್ ರಾವತ್ ಅವರು ಮೊದಲ ವಿಕೆಟ್ ಗೆ 144ರನ್ ಜೊತೆಯಾಟ ಸಾಧಿಸಿದರು.