ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಐಸಿಸಿ ಹೊಸ ನಿಯಮ ಜಾರಿಗೆ ತಂದಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬ್ಯಾಟ್ಸ್ಮನ್ಗಳು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದು ಮಹಿಳಾ ಕ್ರಿಕೆಟ್ಗೂ ಇದು ಅನ್ವಯವಾಗಲಿದೆ.ಈ ಹೊಸ ನಿಯಮವನ್ನು ಜನವರಿ 1ರಂದೇ ಐಸಿಸಿಯ ವಸ್ತ್ರಸಂಹಿತೆ ನಿಬಂಧನೆಯಲ್ಲಿ ಅಳವಡಿಸಲಾಗಿದ್ದು, ಫೆಬ್ರವರಿ 1ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅಧಿಕೃತವಾಗಿ ಜಾರಿಗೆ ಬರಲಿದೆ. ಇದರನ್ವಯ ಬ್ಯಾಟಿಂಗ್ ಮಾಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿರಲಿದೆ. ಅಲ್ಲದೆ ಈ ಹೆಲ್ಮೆಟ್ ಹೊಸ ಬ್ರಿಟಿಷ್ ಸ್ಟ್ಯಾಂಡರ್ಡ್ ನಿಬಂಧನೆಗಳಿಗೆ ಒಳಪಟ್ಟಿರುವುದು ಕೂಡ ಕಡ್ಡಾಯವಾಗಿದೆ.ಎಲ್ಲ ಬ್ಯಾಟ್ಸ್ಮನ್ಗಳು ಹೆಲ್ಮೆಟ್ ಧರಿಸುವ ಮೂಲಕ ಸುರಕ್ಷಿತವಾಗಿರ ಬೇಕೆಂಬುದು ಈ ನಿಯಮ ಜಾರಿಗೆ ಕಾರಣ ಎಂದು ಐಸಿಸಿ ಜನರಲ್ ಮ್ಯಾನೇಜರ್ (ಕ್ರಿಕೆಟ್) ಜೆಫ್ ಅಲ್ಲರ್ಡೈಸ್ ತಿಳಿಸಿದ್ದಾರೆ. ಕಳೆದ ವರ್ಷ ಜೂನ್ನಲ್ಲಿ ಐಸಿಸಿ ಕ್ರಿಕೆಟ್ ಸಮಿತಿ ಹೆಲ್ಮೆಟ್ ಕಡ್ಡಾಯಗೊಳಿಸುವ ಬಗ್ಗೆ ಶಿಫಾರಸು ಸಲ್ಲಿಸಿತ್ತು.ನಿಯಮ ಪಾಲಿಸದಿದ್ದರೆ ನಿಷೇಧ: ಹೆಲ್ಮೆಟ್ ಕಡ್ಡಾಯ ನಿಯಮವನ್ನು ಬ್ಯಾಟ್ಸ್ಮನ್ ಪಾಲಿಸದಿದ್ದರೆ ಶಿಕ್ಷೆಯನ್ನೂ ವಿಧಿಸಲಾಗುವುದು. ಫೆ. 1ರ ನಂತರ ಬ್ಯಾಟ್ಸ್ ಮನ್ ಮೊದಲ 2 ಪಂದ್ಯಗಳ ವೇಳೆ ಈ ನಿಯಮ ಪಾಲಿಸದೇ ಇದ್ದಾಗ ಎಚ್ಚರಿಕೆ ನೀಡಲಾಗುವುದು. ನಂತರ 3ನೇ ಬಾರಿ ಈ ನಿಯಮ ಉಲ್ಲಂಘಿಸಿದಾಗ 1 ಪಂದ್ಯ ನಿಷೇಧ ಶಿಕ್ಷೆ ವಿಧಿಸಲಾಗುವುದು ಎಂದು ಐಸಿಸಿ ತಿಳಿಸಿದೆ. 2014ರ ನವೆಂಬರ್ನಲ್ಲಿ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ ಫಿಲ್ ಹ್ಯೂಸ್ ಬೌನ್ಸರ್ನಲ್ಲಿ ಚೆಂಡೇಟು ತಿಂದು ಮೃತಪಟ್ಟ ಬಳಿಕ ಕ್ರಿಕೆಟ್ನಲ್ಲಿ ಸುರಕ್ಷತೆಯ ಕಾಳಜಿ ಹೆಚ್ಚಾಗಿರುವುದು ಗಮನಾರ್ಹ.