ಲಂಡನ್, ಜುಲೈ 12: ಬದ್ಧ ವೈರಿಗಳನ್ನು ನೆಲಕ್ಕೆ ಕೆಡವಿ ಕುಣಿದು ಕುಪ್ಪಳಿಸುತ್ತಿರುವ ಕುಕ್ ಪಡೆಯ ಸಂಭ್ರಮೋತ್ಸವಕ್ಕೆ ತಡೆ ಇಲ್ಲದ್ದಂತಾಗಿದೆ. ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಆಷ್ಯಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 169ರನ್
ಗಳಿಂದ ಮಣಿಸಿ ಇಂಗ್ಲೆಂಡ್ ಬೀಗುತ್ತಿದೆ.
ಸೋಫಿಯಾ ಗಾರ್ಡನ್ ನಲ್ಲಿ ಪಂದ್ಯದ ನಾಲ್ಕನೇ ದಿನಕ್ಕೆ ಆಸೀಸ್ ವೀರರು ಮಂಡಿಯೂರಿದ್ದಾರೆ. 412ರನ್ ಗಳ ಬೃಹತ್ ಮೊತ್ತ ಬೆನ್ನು ಹತ್ತಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಗಳು 71 ಓವರ್ ಗಳಲ್ಲಿ 242 ಸ್ಕೋರಿಗೆ ಆಲೌಟ್ ಆಗಿದ್ದಾರೆ. ಚಹಾ ಕುಡಿದು ಬಂದ ಒಂದು ಗಂಟೆ ಅವಧಿಯಲ್ಲೇ ಪೆವಿಲಿಯನ್ ಸೇರಿದ್ದಾರೆ.
ಈ ಬಾರಿ ಸರಣಿ ಗೆಲ್ಲುವ ಫೇವರೀಟ್ ಎನಿಸಿಕೊಂಡಿದ್ದ ಆಸ್ಟ್ರೇಲಿಯಾಕ್ಕೆ ತೀವ್ರ ಮುಖಭಂಗವಾಗಿದೆ. ವಿಶ್ವಕಪ್ ವಿಜೇತ ತಂಡ ಆಸ್ಟ್ರೇಲಿಯಾ ಇಂಥ ಹೀನಾಯ ಸೋಲು ಕಂಡಿರುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮೋಯಿನ್ ಅಲಿ 59ರನ್ನಿತ್ತು 3 ವಿಕೆಟ್ ಕಿತ್ತಿದ್ದಲ್ಲದೆ 77 ರನ್ ಕೂಡಾ ಸ್ಕೋರ್ ಮಾಡಿ ಆಸೀಸ್ ಗೆ ನಡುಕ ಹುಟ್ಟಿಸಿದ್ದಾರೆ. ಜೋ ರೂಟ್ 134ರನ್ ಹಾಗೂ 60ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆಸೀಸ್ ಪರ ಬೌಲರ್ ಗಳು ಮಿಂಚಿದರೂ ಸ್ಟಾರ್ಕ್( ಪಂದ್ಯದಲ್ಲಿ 7 ವಿಕೆಟ್) ಬಿಟ್ಟರೆ ಉಳಿದವರು ಹೆಚ್ಚಿನ ಗಮನ ಸೆಳೆಯಲಿಲ್ಲ. ನಂ.1 ಬ್ಯಾಟಿಂಗ್ ಪಡೆ ಏನೂ ಕಿಸಿಯಲಾಗಲಿಲ್ಲ. ಮುಂದಿನ ಟೆಸ್ಟ್ ಪಂದ್ಯ ಗುರುವಾರ ಲಾರ್ಡ್ಸ್ ನಲ್ಲಿ ನಡೆಯಲಿದೆ.