ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕ ಸೇವೆ ಹಿಂದಿಯಲ್ಲೇ ಏಕೆ? ಕನ್ನಡದಲ್ಲೇ ಇರ್ಲಿ

By ರವಿ ಸಾವ್ಕರ್
|
Google Oneindia Kannada News

Center government Language Policy is not acceptable
ಜನರಿಗೆ ಸಿಗುವ ನಾಗರೀಕ ಸೇವೆ ಹಾಗೂ ಗ್ರಾಹಕ ಸೇವೆಗಳು ಜನರ ಭಾಷೆಯಲ್ಲಿದ್ದರೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎನ್ನುವುದು ಜಗತ್ತು ಕಂಡುಕೊಂಡಿರುವ ಸತ್ಯ. ಇದಕ್ಕೆ ಹಿಡಿದ ಕೈಗನ್ನಡಿ ಎಂಬಂತೆ ಹಲವಾರು ದೇಶಗಳು ಸೇರಿ ಕಟ್ಟಲಾಗಿರುವ ಯುನೆಸ್ಕೊ ಸಂಸ್ಥೆಯು ಬಾರ್ಸಿಲೋನದಲ್ಲಿ ಭಾಷಾ ಹಕ್ಕುಗಳ ಬಗ್ಗೆ ಘೋಷಣೆಯನ್ನು ಹೊರಡಿಸಿತು.

ಆ ಘೋಷಣೆಯಲ್ಲಿ ಜನರಿಗೆ ತಮ್ಮ ನೆಲದ ನುಡಿಯಲ್ಲಿ ಎಲ್ಲಾ ಗ್ರಾಹಕ ಸೇವೆಗಳನ್ನು ಪಡೆದುಕೊಳ್ಳುವ ಹಕ್ಕು ಇರುತ್ತದೆ ಎನ್ನುವ ಅಂಶ ಸಹ ಸೇರಿಸಲಾಗಿದೆ. ಆದರೆ ದುರಂತವೆಂದರೆ ಪ್ರತಿಯೊಬ್ಬ ಭಾರತೀಯನನ್ನು ಪ್ರತಿನಿಧಿಸುವ ಕೇಂದ್ರ ಸರ್ಕಾರ ತನ್ನ ಭಾಷಾನೀತಿಯಲ್ಲಿ ಹಿಂದಿ ಹಾಗೂ ಇಂಗ್ಲೀಷ್ ಮಾತ್ರವನ್ನು ಆಡಳಿತ ಭಾಷೆ ಎಂದು ಘೋಷಿಸಿದೆ. ಇದರ ಅರ್ಥ ಇವೆರಡು ನುಡಿಯನ್ನು ಬಿಟ್ಟು ಮಿಕ್ಕೆಲ್ಲಾ ನುಡಿಗಳು ಭಾರತದಲ್ಲಿ ಆಡಳಿತ ಭಾಷೆ ಅಲ್ಲ ಎಂದಾಯಿತು. ಅಲ್ಲದೇ ಸಂವಿಧಾನದಲ್ಲಿ ಒತ್ತಾಯ, ಆಮಿಷ ಹಾಗೂ ವಿಶ್ವಾಸ ಗಳಿಸುವ ಮೂಲಕ ಹಿಂದಿಯನ್ನು ದೇಶದೆಲ್ಲೆಡೆ ಹರಡಬೇಕು ಎಂಬ ಆಶಯ ವ್ಯಕ್ತಪಡಿಸಲಾಗಿದೆ.

ಈ ಕಾರಣದಿಂದ ಹಿಂದಿಯ ಬಳಕೆ ಆಡಳಿತಕ್ಕೆ ಮಾತ್ರ ಸೀಮಿತಗೊಳಿಸದೆ ಹಲವಾರು ಗ್ರಾಹಕ ಸೇವೆಗಳಲ್ಲೂ ಹಾಗೂ ಸರ್ಕಾರೀ ಸೇವೆಗಳಲ್ಲೂ ಕಡ್ಡಾಯ ಮಾಡಲಾಗಿದೆ. ಆದರೆ ಹಿಂದಿಯನ್ನು ಹರಡುವ ಹಾಗೂ ಹಿಂದಿಯೇತರರ ಮೇಲೆ ಹಿಂದಿಯನ್ನು ಹೇರುವ ಹುನ್ನಾರದಲ್ಲಿ ಹಿಂದಿಯೇತರ ನುಡಿಗಳ ಹಾಗೂ ಹಿಂದಿಯೇತರ ಜನರ ಕಡೆಗಣನೆ ಹೇಗೆಲ್ಲಾ ಆಗುತ್ತಿದೆ ಎಂದು ನೋಡೋಣ.

ಬ್ಯಾಂಕಿಂಗ್ ಸೇವೆ : ಒಂದು ನಾಡಿನ ಏಳಿಗೆಗೆ ಬ್ಯಾಂಕಿಂಗ್ ಸೇವೆಗಳು ಅತಿ ಮುಖ್ಯವಾದುದು. ಹಣಕಾಸಿನ ಒಳಗೊಳ್ಳುವಿಕೆ (Financial Inclusion) ಆಗದೆಯೇ ದೇಶದ ಪ್ರಗತಿ ಅಸಾಧ್ಯ ಎಂಬುದನ್ನು ಮನಗಂಡು ಅರ್ ಬಿಐ(Reserve Bank of India) ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಆದರೆ ಕರ್ನಾಟಕದಲ್ಲಿ ಬ್ಯಾಂಕಿಂಗ್ ಸೇವೆಗಳು ಜನರ ಭಾಷೆಯಲ್ಲಿ ಸಿಗುತ್ತಿದೆಯೇ ಎಂದು ನೋಡಿದರೆ ಅಚ್ಚರಿ ಉಂಟಾಗುತ್ತದೆ. ಚಲನ್‍ಗಳಾಗಲಿ, ಖಾತೆ ತೆಗೆಯುವ ಅರ್ಜಿಯಾಗಲಿ, ಸಾಲ ಪಡೆಯುವ ಅರ್ಜಿಯಾಗಲಿ ಹಲವಾರು ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಇರದೆ ಕೇವಲ ಹಿಂದಿ/ಇಂಗ್ಲೀಷ್‍ನಲ್ಲಿ ಮಾಹಿತಿ ಹೊಂದಿರುತ್ತವೆ. ['ಒತ್ತಡ ಹೇರಿದರೆ ಹಿಂದಿ ಭಾಷೆ ಕಲಿಯಲಾರೆ']

ರಾಜ್ಯದ ಮಧ್ಯ ಭಾಗಗಳಲ್ಲಿರುವ ಕಡೂರಿನಂತಹ ಊರುಗಳಲ್ಲಿ ಕನ್ನಡವೇ ಬಾರದ ಸಿಬ್ಬಂದಿಗಳ ವರ್ಗಾವಣೆ ಆಗುತ್ತದೆ. ಕನ್ನಡ ಮಾತ್ರ ಬಲ್ಲ ಅಲ್ಲಿಯ ಜನರು ಹೇಗೆ ತಾನೆ ಇವರೊಡನೆ ವ್ಯವಹರಿಸುತ್ತಾರೆ? ಈ ರೀತಿಯ ವ್ಯವಸ್ಥೆ ಕಲ್ಪಿಸಿದರೆ ತಾವು ಕಷ್ಟ ಪಟ್ಟು ದುಡಿದ ಹಣವನ್ನು ಬ್ಯಾಂಕುಗಳಲ್ಲಿ ಇಡಬಹುದು ಎಂದು ಜನರಿಗೆ ನಂಬಿಕೆ ಹೇಗೆ ತಾನೆ ಬಂದೀತು? ಜನರ ಭಾಷೆಯನ್ನು ದೂರ ಇಟ್ಟರೆ ಹಣಕಾಸು ಒಳಗೊಳ್ಳುವಿಕೆ ಹೇಗೆ ತಾನೇ ಸಾಧಿಸಲಾದೀತು?

ಸಿಐಎಸ್ಎಫ್ : ಇನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗೆ ಹೋಗುವಾಗ ಜನರನ್ನು ತಪಾಸಣೆ ಮಾಡುವ ಸಿಐಎಸ್ಎಫ್(Central Industrial Security Force)ನ ಸಿಬ್ಬಂದಿಗಳಿಗೆ ಕನ್ನಡ ಬರುವುದೇ ಇಲ್ಲ. ಕನ್ನಡದಲ್ಲಿ ಮಾತನಾಡಿಸಿದರೆ ಹಿಂದಿಯಲ್ಲಿ ಮಾತನಾಡಿ ಎಂದು ತಿಳಿಸುತ್ತಾರೆ. ಕೈಯಲ್ಲಿ ಬಂದೂಕು ಹಿಡಿದವರು ಈ ರೀತಿ ಹೇಳಿದಾಗ ಕನ್ನಡ ಮಾತ್ರ ತಿಳಿದಿರುವ ಒಬ್ಬ ಕನ್ನಡಿಗನಿಗೆ ಸ್ವಾಭಾವಿಕವಾಗಿಯೇ ಭಯ ಹುಟ್ಟುತ್ತದೆ.

ಬೇರೆ ರಾಜ್ಯಗಳಲ್ಲಿ ಅಥವಾ ದೇಶಗಳಲ್ಲಿ ನೆಲೆಸಿರುವವರು ತಮ್ಮ ತಂದೆ ತಾಯಂದಿರನ್ನು ವಿಮಾನಗಳ ಮೂಲಕ ತಮ್ಮಲ್ಲಿಗೆ ಕರೆಯಿಸಿಕೊಳ್ಳುವಾಗ,ವಿಮಾನ ನಿಲ್ದಾಣಗಳಲ್ಲಿ ಈ ರೀತಿಯ ವಾತಾವರಣವಿದ್ದರೆ ವಯಸ್ಸಾದ ತಂದೆ ತಾಯಂದರಿಗೆ ಗಾಬರಿ ಆಗದೆ ಇರುತ್ತದೆಯೆ? ಇದು ಇಷ್ಟಕ್ಕೇ ಮುಗಿಯದೆ
ವಿಮಾನಗಳಲ್ಲಿ ನೀಡಲಾಗುವ ಸುರಕ್ಷತಾ ಘೋಷಣೆಗಳೂ, ಸುರಕ್ಷತಾ ಮಾಹಿತಿಗಳೂ ಹಿಂದಿ ಇಂಗ್ಲೀಷ್‍ನಲ್ಲಿ ಇರುತ್ತವೆ.

ಸುರಕ್ಷತಾ ಘೋಷಣೆ : ಬೆಂಗಳೂರಿನಿಂದ ಹೊರಡುವ ಅಥವಾ ಬೆಂಗಳೂರಿಗೆ ಬರುವ ವಿಮಾನಗಳಲ್ಲಿ ಕನ್ನಡದಲ್ಲೂ ಸುರಕ್ಷತಾ ಘೋಷಣೆಗಳನ್ನು ನೀಡಬೇಕಾದುದು ಸ್ವಾಭಾವಿಕ.

ಈ ರೀತಿ ಕನ್ನಡವನ್ನು ಕಡೆಗಣಿಸಿ ಹಿಂದಿ ಇಂಗ್ಲೀಷ್‍ಗಳಲ್ಲಿ ಸುರಕ್ಷತೆಗೆ ಸಂಬಂಧಪಟ್ಟಂತಹ ಮಾಹಿತಿಗಳನ್ನು ಕೊಡಲಾಗುತ್ತಿರುವುದಕ್ಕೆ ಉದಾಹರಣೆ ನೋಡಲು ಬಹಳ ದೂರ ಹೋಗಬೇಕಾಗಿಲ್ಲ. ನಮ್ಮ ಮನೆ ಅಡುಗೆ ಮನೆಯಲ್ಲಿ ಬಳಸಲಾಗುತ್ತಿರುವ ಸಿಲಿಂಡರುಗಳನ್ನು ಒಮ್ಮೆ ನೋಡಿದರೆ ಸಾಕು. ಅದರ
ಮೇಲೆ ಅಚ್ಚು ಹಾಕಿರುವ ಮಾಹಿತಿಯೆಲ್ಲವೂ ಹಿಂದಿ ಇಂಗ್ಲೀಷ್‍ನಲ್ಲಿ ಮಾತ್ರ ಕೊಡಲಾಗುತ್ತಿದೆ.

ಇನ್ನು ದಿನನಿತ್ಯ ಸಾವಿರಾರು ಜನರು ಓಡಾಡಲು ಬಳಸುವ "ನಮ್ಮ ಮೆಟ್ರೊ" ನಲ್ಲಿ ಜನರ ಸುರಕ್ಷತೆಗಾಗಿ ಇರುವ ಸೆಕ್ಯೂರಿಟಿ ಗಾರ್ಡ್‍ಗಳಿಗೆ ಹೆಚ್ಚಾಗಿ ಕನ್ನಡವೇ ಬರುವುದಿಲ್ಲ. ಅವರಿಗೆ ಕೇವಲ ಹಿಂದಿ ಮಾತ್ರ ಬರುತ್ತದೆ. ಜನರಿಗೆ ಏನಾದರೂ ತೊಂದರೆ ಆದಾಗ ಅವರನ್ನು ರಕ್ಷಿಸಲು ಎಂದೇ ನೇಮಕವಾಗಿರುವ ಇವರಿಗೆ ಜನರ ಭಾಷೆಯೇ ಬಾರದೆ ಇದ್ದಾಗ ಇವರು ಜನರ ರಕ್ಷಣೆ ಹೇಗೆ ತಾನೆ ಮಾಡಿಯಾರು? ಈ ಬಗ್ಗೆ ಸಾಕಷ್ಟು ದೂರುಗಳು ಬರೆಯಲಾಗಿದೆಯಾದರೂ,

ಇದುವರೆಗೂ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ, ಕರ್ನಾಟಕ ಸರ್ಕಾರ ಹಣ ಹೂಡಿಯೂ ಇಂತಹ ಸ್ಥಿತಿ ಇದೆ. ಇನ್ನು ಅಪಾರ್ಟ್ಮೆಂಟ್ ಗಳಲ್ಲಿ, ಮಾಲ್ ಗಳಲ್ಲಿ, ಐಟಿ ಪಾರ್ಕ್ ಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಹಿಂದಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳನ್ನು ಹಿಂದಿಯಲ್ಲಿ
ಮಾತನಾಡಿಸಿಯೇ ಒಳಗೆ ಹೋಗಬೇಕು.[ಅಪಾರ್ಟ್‌ಮೆಂಟಲ್ಲಿ ಕನ್ನಡೇತರರಿಗೆ ಕನ್ನಡ ಕಲಿಕೆ]

ಇನ್ನು ಭಾರತೀಯ ರೈಲ್ವೇಯಲ್ಲಿ ಸಹ ಇದೇ ಸ್ಥಿತಿ. ಬೆಂಗಳೂರಿನಿಂದ ಮೈಸೂರಿಗೆ ಹೋಗುವಾಗ ನಮಗೆ ನೀಡಲಾಗುವ ಟಿಕೇಟುಗಳು ಕೇವಲ ಹಿಂದಿ ಇಂಗ್ಲೀಷ್‍ನಲ್ಲಿ ಮಾಹಿತಿ ಹೊಂದಿರುತ್ತದೆ. ಬೆಂಗಳೂರಿನಿಂದ ಹೈದರಾಬಾದಿಗೆ ಹೋಗುವ ರೈಲುಗಳ ನಾಮ ಫಲಕಗಳು ಕನ್ನಡದಲ್ಲಿ ಇರುವುದಿಲ್ಲ.

ಕಾಯ್ದಿರಿಸಿದ ಟಿಕೇಟುಗಳ ಪಟ್ಟಿ ಕೇವಲ ಹಿಂದಿ ಮತ್ತು ಇಂಗ್ಲೀಷ್‍ನಲ್ಲಿ ಇರುತ್ತವೆ. ಕೆಲವೊಮ್ಮೆ ಕರ್ನಾಟಕದಲ್ಲಿ ಓಡಾಡುವ ರೈಲುಗಳಲ್ಲಿ ಕೆಲಸ ಮಾಡುವ ಟಿಕೇಟು ಕಲೆಕ್ಟರ್‍ಗೆ ಹಿಂದಿ ಮಾತ್ರ ಬರುತ್ತದೆ. ಕನ್ನಡ ಮಾತ್ರ ಗೊತ್ತಿರುವ ಪ್ರಯಾಣಿಕರ ಪಾಡು ಏನಾಗಬೇಕು?

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇನ್ನೂ ನೂರಾರು ಸಮಸ್ಯೆಗಳು ನಮಗೆ ಕಾಣಸಿಗುತ್ತವೆ. ಪ್ರತ್ಯೇಕವಾಗಿ ನೋಡಿದರೆ ಈ ಸಮಸ್ಯೆಗೆ ಕಾರಣ ಆಯಾ ಸಂಸ್ಥೆಗಳು ಎಂದನ್ನಿಸಿದರೂ ಆಳವಾಗಿ ಇದನ್ನೆಲ್ಲಾ ನೋಡಿದರೆ ಈ ಸಮಸ್ಯೆಗಳಿಗೆಲ್ಲಾ ಮೂಲ ಭಾರತದ ಭಾಷಾ ನೀತಿಯೇ ಎಂಬುದು ಕಾಣುತ್ತದೆ. ಎಲ್ಲಾ ಸೇವೆಗಳನ್ನು ಇಂಗ್ಲೀಷ್‍ನಲ್ಲಿ ಕೊಡಬೇಕು, ಇಂಗ್ಲೀಷ್ ಗೊತ್ತಿಲ್ಲದವರಿಗೆ ಹಿಂದಿಯಲ್ಲಿ ಕೊಟ್ಟರೆ ಸಾಕು ಎನ್ನುವ ಧೋರಣೆ ಎದ್ದು ಕಾಣಿಸುತ್ತದೆ.

ವ್ಯವಸ್ಥೆ ಬದಲಾಗಬೇಕಾಗಿದೆ : ಹಿಂದಿ ಭಾಷೆಯನ್ನು, ಹಿಂದಿ ಭಾಷಿಕರನ್ನು ಮೇಲ್ದರ್ಜೆಯಲ್ಲಿ ಕೂರಿಸಿ ಕನ್ನಡವೂ ಸೇರಿದಂತೆ ಹಿಂದಿಯೇತರ ನುಡಿಗಳನ್ನು ಕಡೆಗಣಿಸುತ್ತಿರುವ ವ್ಯವಸ್ಥೆ ಬದಲಾಗಬೇಕಾಗಿದೆ. ನಾಗರೀಕ ಸೇವೆಗಳು, ಗ್ರಾಹಕ ಸೇವೆಗಳು ಸರಿಯಾಗಿ ಜನರಿಗೆ ಮುಟ್ಟದೇ ಹೋದರೂ ಪರವಾಗಿಲ್ಲ, ಹಿಂದಿಯನ್ನು ಜನರ

ಮೇಲೆ ಹೇರಬೇಕು ಎನ್ನುವಂತಹ ನೀತಿಗಳು ಬದಲಾಗಬೇಕು. ಕರ್ನಾಟಕದಲ್ಲಿ ಎಲ್ಲಾ ನಾಗರೀಕ ಹಾಗೂ ಗ್ರಾಹಕ ಸೇವೆಗಳು ಕನ್ನಡದಲ್ಲಿ ಸಿಗುವಂತಾಗಬೇಕು.ಕನ್ನಡ ಬಾರದವರಿಗೆ ಇಂಗ್ಲೀಷ್‍ನಲ್ಲಿ ಸೇವೆಗಳು ಇದ್ದೇ ಇದೆ.

ಹಿಂದಿ ಭಾಷಿಕರು ಕರ್ನಾಟಕಕ್ಕೆ ಬಂದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ಬಹಳ ಜನರಿಗೆ ಬರುತ್ತದೆ. ಅದಕ್ಕೆ ಉತ್ತರ ಇಷ್ಟೇ. ಒಬ್ಬ ಕನ್ನಡಿಗನು ಉತ್ತರ ಪ್ರದೇಶಕ್ಕೆ ಹೋದರೆ ಅಲ್ಲಿಯವರ ಭಾಷೆಯನ್ನು ಕಲಿಯುತ್ತಾನೆ. ಹಾಗೆಯೆ ಹಿಂದಿಯವರೂ ಸಹ ಇಲ್ಲಿ ಬಂದಾಗ ಕನ್ನಡ ಕಲಿತು ಇಲ್ಲಿಯ ಮುಖ್ಯವಾಹಿನಿಯೊಂದಿಗೆ ಬೆರೆಯಬೇಕು. ಹಿಂದಿ ಭಾಷಿಕರಿಗೆ ಒಂದು ನ್ಯಾಯ, ಮಿಕ್ಕವರಿಗೆ ಇನ್ನೊಂದು ನ್ಯಾಯ ಅನ್ನುವ ಧೋರಣೆ ಸಲ್ಲದು.

ಇನ್ನಾದರೂ ಜನರು, ಸಂಘ ಸಂಸ್ಥೆಗಳು, ರಾಜಕಾರಣಿಗಳು ಎಲ್ಲಾ ಭಾಷೆಗಳಿಗೆ ಸಮಾನ ಸ್ಥಾನ ಸಿಗುವಂತೆ ಮಾಡಿ, ಜನರಿಗೆ ತಮ್ಮ ಭಾಷೆಯಲ್ಲೇ ನಾಗರೀಕ ಹಾಗೂ ಸರ್ಕಾರೀ ಸೇವೆಗಳು ಸಿಗುವಂತೆ ಮಾಡುವತ್ತ ಯೋಚಿಸಬೇಕು.

English summary
The union government language policy is not acceptable as it states and uses only Hindi and English for Official and communication purpose. In Karnataka consumers need transaction in local language Kannada rather than in Hindi writed Ravi Savkar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X