ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ 2ನೇ ಮರುಭೂಮಿಯಾಗಲಿರುವ ಕರ್ನಾಟಕ!

By * ಧನಂಜಯ ಜೀವಾಳ ಬಿ.ಕೆ. ಪರಿಸರ ಕಾರ್ಯಕರ್ತ, ಮೂಡಿಗೆರೆ
|
Google Oneindia Kannada News

Karnataka forest
ಅರಣ್ಯವನ್ನು ಏಟಿಎಮ್ ಎಂದು ಭಾವಿಸಿ ದಿನನಿತ್ಯ ನಿರಂತರವಾಗಿ ಗೊತ್ತುಗುರಿಯಿಲ್ಲದೇ ದೌರ್ಜನ್ಯಕ್ಕೆ ಗುರಿಪಡಿಸಲಾಗುತ್ತಿದೆ. ಶೇಕಡಾ 33ರಷ್ಟು ಇರಬೇಕಾದ ಕಡೆ ಕೇವಲ ಶೇಕಡಾ 18 ನ್ನು ಮಾತ್ರ ಅದೂ ಸರ್ಕಾರೀ ದಾಖಲೆಗಳಲ್ಲಿ ಇರುವ ರಾಜ್ಯದ ಅರಣ್ಯ ಪ್ರದೇಶ ಇಡೀ ವಿಶ್ವದ ಆಸ್ತಿ.

ಅನಗತ್ಯ ರಸ್ತೆಗಳು, ವಿವೇಚನಾರಹಿತ ಜಲವಿದ್ಯುತ್ ಯೋಜನೆಗಳು, ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಖಾಸಗಿಯವರ ಬಂಡವಾಳ ಹೂಡಿಕೆಗಳ ಮೂಲಕ ಸಮಸ್ತ ಜೀವಸಂಕುಲದ ಆಸ್ತಿಯನ್ನು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಬಳಸುತ್ತಿರುವುದು ಅಕ್ಷಮ್ಯ.

ರಸ್ತೆ, ಜಲವಿದ್ಯುತ್, ಗಣಿಗಾರಿಕೆ, ತೈಲಸಾಗಣೆ, ಕೃಷಿಗಾಗಿ ಭೂಮಿ ಒತ್ತುವರಿ ಮುಂತಾದುವು ಸರ್ಕಾರೀ ಯೋಜನೆಗಳ ಹೆಸರಿನಲ್ಲಿ ಪರಿಸರದ ಮೇಲೆನಡೆಯುತ್ತಿರುವ ಅಮಾನುಷ ಅತ್ಯಾಚಾರ. ಅದರ ಪರವಾಗಿ ಮಾತನಾಡುವವರು ಆಧುನಿಕ ದುಶ್ಯಾಸನರೇ ಸರಿ.

ಹತ್ತಾರು ನದಿಗಳಿಗೆ ಉಗಮ ಸ್ಥಾನವಾದ ಪಶ್ಚಿಮಘಟ್ಟಗಳು ಪ್ರಪಂಚದ ಜೀವವೈವಿಧ್ಯದ ಹಾಟ್‌ಸ್ಪಾಟ್ ಆಗಿದೆ. ಇಲ್ಲಿರುವ ಇರುವೆ, ಗೆದ್ದಲು, ಹುಲ್ಲು, ಪೊಟರೆಯೊಳಗಿನ ಹಕ್ಕಿ, ಧರೆಗುರುಳಿದ ಮರ, ಕಲ್ಲು ಇವೆಲ್ಲವಕ್ಕೂ ಅವುಗಳದೇ ಆದ ಜೈವಿಕ ಮಹತ್ವ ಇದೆ. ನಮ್ಮ ಯಾವುದೇ ರೀತಿಯ ಮದ್ಯ ಪ್ರವೇಶವು ದೊಡ್ಡ ಜೈವಿಕ ದುರಂತಕ್ಕೆ ಕಾರಣವಾಗುತ್ತದೆ.

ಅಭಿವೃದ್ಧಿಯೆಂದರೆ ಏನು? :ಕಾಡಿನೊಳಗೆ ರಸ್ತೆ ಮಾಡಿಸಿ ಗುತ್ತಿಗೆದಾರರಿಗೆ ಕೆಲಸ ಒದಗಿಸುವುದಾ?, ಪರ್ವತದ ಒಡಲು ಬಗೆದು ಖನಿಜ ಹೊರತೆಗೆಯುವುದಾ?, ಜೀವನದಿಗಳನ್ನು ಅಡ್ಡಗಟ್ಟಿ, ತಿರುವಿ ಕಾಡು ಮುಳುಗಿಸಿ ಖಾಸಗಿಯವರಿಗೆ ಬಂಡವಾಳ ಹೂಡಲು ಅನುಕೂಲ ಮಾಡಿಕೊಡುವುದಾ?, ಕಾಡಿನಂಚಿನಲ್ಲಿರುವ ಒತ್ತುವರಿ ಕೃಷಿಭೂಮಿಗೆ ವಾಣಿಜ್ಯ ಬೆಲೆ ದೊರಕಿಸಿಕೊಡುವುದಾ? ಎಲ್ಲಿ ಪುಕ್ಕಟೆ ಸಂಪನ್ಮೂಲ ಹಾಗೂ ಹಣ ಓಡಾಡುತ್ತದೆಯೋ ಅಲ್ಲೆಲ್ಲ ಪ್ರಕೃತಿಯ ಮೇಲೆ ದಾಳಿ ಅವ್ಯಾಹತವಾಗಿ ನಡೆಯುತ್ತದೆ.

ಜೈವಿಕ ಪರಿಸರವನ್ನು ಕಾಪಾಡುವುದಕ್ಕೇ ಯುನೆಸ್ಕೋ ಸ್ಥಳೀಯ ಸರ್ಕಾರಗಳಿಗೆ ಸಹಕಾರ ನೀಡುತ್ತಿರುವುದು ಒಂದು ರಚನಾತ್ಮಕ ಬೆಳವಣಿಗೆ. ಗಿರಿಜನರು, ವಿದ್ಯುತ್ ಸಮಸ್ಯೆ, ವನ್ಯಜೀವಿ ರಕ್ಷಣೆ, ಮುಂತಾದುವುಗಳಿಗೆ ಪ್ರಾಯೋಗಿಕ ಪರಿಹಾರವನ್ನು ಕಂಡುಕೊಳ್ಳಲಾರದ ಸರ್ಕಾರ ತನ್ನ ಭಂಡತನವನ್ನು ಮರೆಮಾಚಲು ಯುನೆಸ್ಕೋ ಜತೆ ಗುದ್ದಾಡಿದೆವೆಂಬ ಹಮ್ಮಿಗೆ ಬಿದ್ದು ವರ್ತಿಸುತ್ತಿರುವುದು ತಪ್ಪು. ಇದರಿಂದ ಯುನೆಸ್ಕೋ ಕಳೆದುಕೊಳ್ಳುವುದು ಏನೂ ಇಲ್ಲ, ನಷ್ಟವಾಗುವುದು ನಮ್ಮೆಲ್ಲರಿಗೆ ಮತ್ತು ನಮ್ಮನಿಮ್ಮೆಲ್ಲರನ್ನೂ ಕಾಪಾಡುತ್ತಿರುವ ಜೈವಿಕ ವ್ಯವಸ್ಥೆಗೆ.

ಹಂಪಿ ಸ್ಥಿತಿ ಏನಾಗಿದೆ?: ಹಂಪಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಾಗದೇ ಇರುವುದು ಸರ್ಕಾರದ ಅಸಮರ್ಥತೆಯ ನಿದರ್ಶನ. ಅಭಿವೃದ್ಧಿಯೆಂದರೆ ಕಾಂಕ್ರೀಟ್ ಕಟ್ಟಡ, ಟಾರು ರಸ್ತೆ, ವ್ಯಾಪಾರೀ ಮಳಿಗೆಗಳನ್ನು ನಿರ್ಮಿಸಲು ತಮ್ಮ ರಾಜಕೀಯ ಕಾರ್ಯಕರ್ತರಿಗೆ ಅನುವು ಮಾಡಿಕೊಡುವುದು ಎಂದುಕೊಂಡಿರುವುದು ನಮ್ಮ ತಿಳುವಳಿಕೆಗಿರುವ ಮಿತಿ.

ಬಂಜರು ಪ್ರದೇಶದಲ್ಲಿ ನೀಲಗಿರಿ, ಅಕೇಶಿಯಾ, ಸಾಗುವಾನಿ ಗಿಡಗಳನ್ನು ನೆಡುವದರಿಂದಲೇ ಅರಣ್ಯ ಸೃಷ್ಟಿಮಾಡಿದೆವೆಂದು ಬೀಗುವ ಅಧಿಕಾರಿಗಳು ಸ್ವಲ್ಪ ಪರಿಸರ ಅದ್ಯಯನ ಮಾಡುವುದು ಒಳ್ಳೆಯದು. ಕಲ್ಲು ಕೀಳುವುದು, ಮರ ಉರುಳಿಸುವುದು, ಕಾಡು ಮಳುಗಿಸುವುದು, ಪ್ರವಾಸಿಗರಿಂದ ದುಡ್ಡು ಪೀಕುವುದು, ರೈಲು ಹಳಿ ಹಾಕುವುದು, ಪೈಪ್‌ಲೈನ್ ಅಳವಡಿಸುವುದು, ವಿದ್ಯುತ್ ಸಾಗಣೆಗೆ ಲೈನ್ ಎಳೆಯುವುದು ಮಾತ್ರ ಅಭಿವೃದ್ಧಿಯಲ್ಲವೆಂದು ಅರಿಯುವುದು ಅಗತ್ಯವಾಗಿದೆ.

ಬಂಡವಾಳಶಾಹಿಗಳು ಹಾಗೂ ಗುತ್ತಿಗೆದಾರರೇ ಈ ಸರ್ಕಾರವನ್ನು ನಡೆಸುತಿದ್ದಾರೋ ಎಂಬ ಅನುಮಾನ ಉಂಟಾಗುತ್ತಿದೆ. ಜನಸೇವೆ ಮಾಡಲು ಆಯ್ಕೆಯಾದವರು ಜನರ ಮೇಲೇ ಸವಾರಿ ಮಾಡುವುದು ಸರಿಯಲ್ಲ. ಮರದ ಮೇಲಿರುವ ಆರ್ಕಿಡ್‌ಗಳು, ತೊಗಟೆಯಡಿ ವಾಸಿಸುವ ಹುಳುಹುಪ್ಪಟೆಗಳು, ಕಪ್ಪೆಗಳು, ಪೊಟರೆಯ ಪಕ್ಷಿಗಳು, ನೆಲದಲ್ಲಿನ ಅಣಬೆಗಳು, ಮರಗಳು ಬೇರಿಳಿಸಿ ಬಾಷ್ಪೀಕರಿಸುವ ನೀರು, ನೆಲದಡಿಯ ಸೂಕ್ಷ್ಮ ಜೀವಿಗಳು, ಕಲ್ಲಿನಡಿಯ ನೀರಿನ ಸಂಗ್ರಹ, ದೊಣೆಗಳೊಳಗಿನ ಸರೀಸೃಪಗಳು ಇವುಗಳನ್ನು ಗಮನಿಸಲಿ. ಇವೆಲ್ಲವೂ ಸೇರಿಯೇ ಅರಣ್ಯವಾಗುತ್ತದೆ.

ಪಶ್ಚಿಮಘಟ್ಟವನ್ನು ವಿಶ್ವಪರಂಪರೆಯ ಪಟ್ಟಿಗೆ ಯಾಕೆ ಸೇರಿಸಬೇಕೆಂದು ಕೇಳಿದರೆ ಕನಿಷ್ಟ ನೂರು ಕಾರಣ ನೀಡಬಹುದಾದರೆ, ಯಾಕೆ ಸೇರಿಸಬಾರದೆಂಬುದಕ್ಕೆ ಮೂರು ವಿತಂಡವಾದಗಳು ಸಿಗಬಹುದು. ಜೈವಿಕ ಪರಿಸರ, ಪರಿಸರ ವಿಜ್ಞಾನ, ಮಾಲಿನ್ಯ ನಿಯಂತ್ರಣ, ಅರಣ್ಯ ಸಂರಕ್ಷಣೆ ಮುಂತಾದುವುಗಳ ಬಗ್ಗೆ ತಳಮಟ್ಟದ ಚರ್ಚೆಯಾಗಬೇಕು. ಇಂದಿನ ಲಾಭಕ್ಕಾಗಿ ಮಿಲಿಯಾಂತರ ವರ್ಷಗಳ ಈ ಭೂಮಿಯನ್ನು ಬಲಿಕೊಡುವುದು ಬೇಡ. ಯುನೆಸ್ಕೋ ಪರಂಪರಾ ತಾಣಗಳ ನಿರ್ವಹಣೆಯ ಕುರಿತಾದ ನೀತಿನಿಯಮಾವಳಿಗಳನ್ನೇ ಪೂರ್ಣವಾಗಿ ಅಧ್ಯಯನ ಮಾಡದೇ ಸಾರಾಸಗಟಾಗಿ "ಜುಟ್ಟು" ಹೇಳಿಕೆಯನ್ನು ನೀಡಿರುವುದು ಎಷ್ಟರಮಟ್ಟಿಗೆ ಸರಿ?

ವೈಜ್ಞಾನಿಕ ಅನ್ವೇಷಣೆಗಳ ಅಳವಡಿಕೆ, ಐಷಾರಾಮಿ ಜೀವನ ಶೈಲಿಗಳ ಅನುಕರಣೆ, ವಿದೇಶೀ ಜೀವನ ಶೈಲಿಗಳತ್ತ ನೋಡುವ, ದನ ಸಾಕುವುದು ಹೇಗೆಂದು ತಿಳಿಯಲು ವಿದೇಶೀ ಪ್ರವಾಸ ಹೋಗುವ ಮಂತ್ರಿ ಮಹೋದಯರಿಗೆ, ಶೌಚಗೃಹಗಳ ನಿರ್ಮಾಣ ತಂತ್ರಜ್ಞಾನ ತಿಳಿಯಲು ವಿದೇಶಕ್ಕೆ ಅದ್ಯಯನ ತಂಡವನ್ನು ಕಳಿಸುವ ಸರ್ಕಾರಕ್ಕೆ, ಕೆರೆ ಹೂಳೆತ್ತುವ ನೆಪದಲ್ಲಿ, ರಸ್ತೆ ನಿರ್ಮಾಣದ ಕಾರಣಕ್ಕೆ, ಚೆರಂಡಿ ನಿರ್ಮಾಣದ ನೆಪದಲ್ಲಿ ದುಡ್ಡುಹೊಡೆಯಲು ವಿಶ್ವಬ್ಯಾಂಕ್ ನೆರವಿಗೆ ಕೈಒಡ್ಡುವ ನಮಗೆ, ನಮ್ಮ ಕಾಡನ್ನು ರಕ್ಷಣೆ ಮಾಡಲು ವಿಶ್ವಸಂಸ್ಥೆಯ ನೆರವಿನ ಅಗತ್ಯವಿಲ್ಲ ಎನ್ನುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ.

ಸ್ಥಳೀಯರಿಗೆ ಇಲ್ಲಸಲ್ಲದ ಸುಳ್ಳು ಹೇಳಿ, ಆಮಿಷ ಒಡ್ಡಿ ಹಾದಿತಪ್ಪಿಸುವುದನ್ನು ಬಿಟ್ಟು ಪಶ್ಚಿಮ ಘಟ್ಟವನ್ನು ಕಾಪಾಡುವತ್ತ ಗಮನ ಹರಿಸುವುದು ಮತ್ತು ಜವಾಬ್ದಾರಿಯುತ ಹಾಗೂ ತಿಳುವಳಿಕೆಯುಳ್ಳ ನಾಗರೀಕರನ್ನು ಒಳಗೊಂಡ ಜೈವಿಕ ಪರಿಸರ ರಕ್ಷಣಾ ತಂಡಗಳನ್ನು ತಾಲ್ಲೂಕುವಾರು ರಚಿಸುವುದು ಇಂದಿನ ಅಗತ್ಯವಾಗಿದೆ ಅರಣ್ಯವಾಸಿಗಳನ್ನು ಯಾವುದಾದರೂ ನೆಪದಲ್ಲಿ ಒಕ್ಕಲೆಬ್ಬಿಸಿ ಉದ್ದಿಮೆಗಳಿಗೆ ಕಾರ್ಮಿಕರನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಬಂಡವಾಳಶಾಹಿಗಳೊಂದಿಗೆ ಕೈಜೋಡಿಸುತ್ತಿರುವ ಆಡಳಿತ ವ್ಯವಸ್ಥೆ ತಮ್ಮ ಅಧಿಕಾರದ ಅವದಿಯಲ್ಲಿ ಇಡೀ ಕಾಡನ್ನೇ ಹರಾಜು ಹಾಕಲು ಹೊರಟಿರುವುದು ವಿಪರ್ಯಾಸ. ಸ್ಥಳೀಯ ಅಮಾಯಕ ಜನರಿಗೆ ಪರಿಹಾರ ಹಣದ ಆಮಿಷ ಒಡ್ಡಿ ಅವರನ್ನು ಹಾದಿ ತಪ್ಪಿಸಲು ಸರ್ಕಾರದ ಬಳಿ ಸಾಕಷ್ಟು ದಾರಿಗಳಿವೆ.

ಕೂಲಿಗಳಾದ ಅನ್ನದಾತರು: ಕೃಷಿ ಮಾಡುವುದು ನಷ್ಟದ ಬಾಬತ್ತೆಂದು ರೈತರಿಗೆ ಅನ್ನಿಸುವಂತೆ ಪರಿಸ್ಥಿತಿ ಸೃಷ್ಟಿಮಾಡಿ, ಪರಿಹಾರ ರೂಪದ ಹಣದಲ್ಲಾದರೂ ಜೀವನ ಮಾಡುವ ಎಂದು ನಗರಕ್ಕೆ ವಲಸೆ ಹೋಗುವಂತೆ ಮಾಡುವುದು, ನಗರದಲ್ಲಿ ಇರುವ ಅಧಿಕಾರಸ್ತರ ಉದ್ದಿಮೆಗಳಿಗೆ ಕೂಲಿ-ಕಾರ್ಮಿಕರನ್ನು ಪೂರೈಕೆ ಮಾಡುವುದು ಇದರ ಪರೋಕ್ಷ ಹುನ್ನಾರ. ಇಲ್ಲಿ ರೈತರು ಮೂರುಕಾಸಿಗೆ ಮಾರಿದ ಭೂಮಿಯನ್ನು ತಾವೇ ಖರೀದಿಸಿ, ರೈತರನ್ನೇ ಕೂಲಿಗಿಟ್ಟುಕೊಳ್ಳುವ ವ್ಯವಸ್ಥಿತ ಲೂಟಿಯ ಭಾಗವೇ ಈ ಎಲ್ಲಾ ವಿದ್ಯಮಾನಗಳು.

ಹೊಟ್ಟೆಗೆ ಅನ್ನ ತಿನ್ನಿ ಎಂದು ಹೇಳುವುದಕ್ಕೂ ಕೈ ಜೋಡಿಸಿ ಬೇಡಬೇಕಾಗಿರುವುದು ಪರಿಸ್ಥಿತಿಯ ವ್ಯಂಗ್ಯ. ಮಲೆಕುಡಿಯರು, ಸಿದ್ಧಿಯರನ್ನು ಮುಖ್ಯವಾಹಿನಿಗೆ ತರುತ್ತೇವೆಂದು ಬಂಬಡಾ ಬಾರಿಸುತ್ತಿರುವುದರ ಹಿಂದೆ ಇರುವ ಉದ್ದೇಶ ಎಂಥವರಿಗೂ ಅರ್ಥವಾಗುವಂಥದ್ದೇ. ಕಾಡುಜನರಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚುಮಾಡುತ್ತಿದ್ದೇವೆ ಎಂದು ಜಾಗಟೆ ಹೊಡೆಯುತ್ತಿರುವವರು ಈ ಎಲ್ಲಾ ಕಾರ್ಯಗಳನ್ನು ಅರಣ್ಯ ಲೂಟಿ ಹೊಡೆಯಲು ಮೂಲಸೌಕರ್ಯವಾಗಿ ಹೊಂದಿಸಿಕೊಳ್ಳುತ್ತಿದ್ದಾರೆ ಅಷ್ಟೇ. ಇಲ್ಲಿನ ಕಾಮಗಾರಿಗಳ ಗುತ್ತಿಗೆಯ ಫಲಾನುಭವಿಗಳು ಆಯಾ ಪಕ್ಷದ ಕಾರ್ಯಕರ್ತರುಗಳು.

ನಮಗೆ ಪ್ರವಾಸೋದ್ಯಮದ ಹೆಸರಿನಲ್ಲಿ ಹರಿದು ಬರುವ ಹಣ ಬೇಡ. ಹಣದಿಂದ ನಮಗೆ ಆಮ್ಲಜನಕ, ಶುಭ್ರ ನೀರು, ಆರೋಗ್ಯಕರ ವಾತಾವರಣ ಸಿಗುವುದಿಲ್ಲ. ನಮಗೆ ನಮ್ಮ ಅರಣ್ಯ ಉಳಿಯಬೇಕು, ಹೆಚ್ಚು ವಿಸ್ತಾರವಾಗಿ ಬೆಳೆಯಬೇಕು ಮತ್ತು ನೈಸರ್ಗಿಕವಾಗಿರಬೇಕು. ಅರಣ್ಯದೊಳಗೆ ಬದುಕುತ್ತಿರುವವರು ಈ ಮೂರನ್ನು ಗಮನದಲ್ಲಿಟ್ಟುಕೊಂಡು ಪ್ರಕೃತಿಯೊಡನೆ ಹೊಂದಿಕೊಂಡು ಜೀವಿಸಬೇಕು.

2005ರಲ್ಲಿ ಕರ್ನಾಟಕ ಸರ್ಕಾರವೇ ಯುನೆಸ್ಕೋ ಮಾನ್ಯತೆ ಕೋರಿ ಮನವಿ ಸಲ್ಲಿಸಿದ್ದರೆ ಇಂದಿನ ಸರ್ಕಾರ ಸಿಕ್ಕಿರುವ ಮಾನ್ಯತೆಯನ್ನು ತಿರಸ್ಕರಿಸಿ ಭಾರೀ ಪ್ರಮಾದವನ್ನೇ ಮಾಡುತ್ತಿದೆ. ಪರಂಪರಾ ತಾಣವಾಗಿ ಗುರುತಿಸಿರುವ ಹತ್ತು ಸ್ಥಳಗಳಲ್ಲಿ 5 ತಾಣಗಳು ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಧಾಮಗಳಾಗಿದ್ದು, ಇನ್ನು 5 ತಾಣಗಳು ರಕ್ಷಿತಾರಣ್ಯಗಳೇ ಆಗಿವೆ. ಸರ್ಕಾರ ಈ ವರೆಗೆ ಮಾಡಿರುವ ಸಂರಕ್ಷಣಾ ಕೆಲಸಗಳನ್ನು ಮಾನ್ಯಮಾಡುವುದಷ್ಟೇ ಯುನೆಸ್ಕೋದ ಉದ್ದೇಶವಾಗಿದೆ. ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿರುವ ವಾಹನವನ್ನು ತಳ್ಳಲು ನಮ್ಮ ಜೊತೆ ದಾರಿಹೋಕರ‍್ಯಾರೋ ಕೈಜೋಡಿಸಿದಂತೆ ಅಷ್ಟೇ. ಅದಕ್ಕೆ ಯಾಕೆ ಈ ಅವಾಂತರ ಸೃಷ್ಟಿಯಾಗಿದೆಯೋ ಆಶ್ಚರ್ಯವಾಗುತ್ತದೆ.

ವನಮಹೋತ್ಸವದಂದು ಒಂದು ಗಿಡವನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಂಡು, ಪೇಪರಿನಲ್ಲಿ ಹಾಕಿಸಿಕೊಳ್ಳುವುದೇ ಪರಿಸರ ರಕ್ಷಣೆ ಎಂದುಕೊಂಡಿರುವುದು ಹಾಸ್ಯಾಸ್ಪದ. ಯಾರೋ ಕೆಲವು ಬುದ್ಧಿಗೇಡಿಗಳ ತಪ್ಪು ನಿರ್ದಾರದಿಂದ ಕರ್ನಾಟಕದ ಜನತೆ ಮೂರ್ಖರೆಂಬ ಹಣೆಪಟ್ಟಿ ಧರಿಸುವ ಕಾಲ ಬಂದಿದೆ. ಜೀವಮಂಡಲದ ಮೇಲೆ ದಬ್ಬಾಳಿಕೆ ನಡೆಸದಂತೆ ಬದುಕುವುದರಲ್ಲಿ ನಾಡಿನ ಘನತೆ-ಗೌರವ ಇದೆ.

English summary
Karnataka Government has taken illogical decision not to include Karnataka Forests and other ecological hubs in Western Ghats to Unesco Heritage Site tag list. Karnataka forests will become India's second desert in future says Environmentalist Dhananjaya K Jeevala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X