ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿ ಆಧಾರಿತ ಜನಗಣತಿ: ಬಂಟರು ಏನ್ನಂತಾರೆ?

By * ಪಿ.ಎಸ್. ಶೆಟ್ಟಿ, ಮಂಗಳೂರು
|
Google Oneindia Kannada News

Bunt Wedding Rituals
ಈಗ ನಡೆಯುತ್ತಿರುವ ಜಾತಿ ಆಧಾರಿತ ಜನಗಣತಿ ಸರಿಯೋ ತಪ್ಪೊ ಎಂಬ ವಿಷಯದ ಬಗ್ಗೆ ಜನರಲ್ಲಿ ತೀವ್ರ ವಾದ-ವಿವಾದ ನಡೆದಿದೆ. ಹಿಂದುಳಿದ ವರ್ಗದ ಹೆಚ್ಚಿನವರೆಲ್ಲಾ ಜಾತಿ ಆಧಾರಿತ ಜನಗಣತಿ ಬೇಕು ಎಂದರೆ, ಮುಂದುವರಿದ ಜನಾಂಗಗಳವರು ಜಾತಿ ಆಧಾರಿತ ಜನಗಣತಿ ಬೇಡ ಎಂದು ವಾದಿಸುತ್ತಿದ್ದಾರೆ.

ಏನೇ ಆಗಲಿ ಜಾತಿ-ಆಧಾರಿತ ಜನಗಣತಿಗೆ ಹೆಚ್ಚಿನ ಬೆಂಬಲ ಇರುವಂತೆ ಕಾಣುತ್ತಿದೆ. ಈ ಸಂದಿಗ್ಧ ವಿಷಯದ ಬಗ್ಗೆ ಇತರ ಜನಾಂಗದ ಮುಖಂಡರು ತಮ್ಮ - ತಮ್ಮ ಅಭಿಪ್ರಾಯಗಳನ್ನು ಈಗಾಗಲೇ ಮಂಡಿಸಿದ್ದರೂ ಬಂಟರ ಜನಾಂಗದ ಅಭಿಪ್ರಾಯಗಳೇನು ಎಂಬುದು ಸಮುದಾಯದ ವೇದಿಕೆಯಲ್ಲೆಲ್ಲೂ ಚರ್ಚೆಗೆ ಬಂದಿಲ್ಲ.

ಈಗ ಸರಿಯಾದ ಸಮಯ ಪರ-ವಿರೋಧ ವಿಷಯಗಳನ್ನು ಆಳವಾಗಿ ಚರ್ಚೆಗೆ ಒಳಪಡಿಸಲು. ಬಂಟರ ಜನಾಂಗದ ಸರಿಯಾದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳು ಈ ಜಾತಿಯಾಧಾರಿತ ಜನಗಣತಿಯಲ್ಲಿ ಬೆಳಕಿಗೆ ಬರಬಹುದು.

ಮೇಲಾಗಿ ಕ್ಷೀಣಿಸುತ್ತಿರುವ ಬಂಟ ಜನಾಂಗದ ಜನಸಂಖ್ಯೆ, ಶೇ.28ಗೂ ಮಿಕ್ಕಿ ಇದ್ದ ಬಂಟರ ಜನಸಂಖ್ಯೆ ಇಂದು ಶೇ.18ಗೆ ಇಳಿಯಲು ಕಾರಣಗಳೇನು ಎಂದು ಈಗಿನ ಸೆನ್ಸಸ್‌ನಲ್ಲಿ ಗೊತ್ತಾಗಬಹುದು. ತುಳುನಾಡಿನಲ್ಲಿ ಬಂಟರ ಜನಸಂಖ್ಯೆ ಇಳಿಕೆಗೆ ಮೇಲ್ನೋಟಕ್ಕೆ ಕಾಣುವ ಕಾರಣಗಳು. 1)ವಲಸೆ, 2) ಕುಟುಂಬ ನಿಯೋಜನೆ , 3) ಅಂತರ್‌ಜಾತಿ ವಿವಾಹ.

ವಲಸೆ : ಮೊದಲನೇ ವಿಶ್ವಮಹಾಯುದ್ಧದ ಸಮಯದಲ್ಲಿ ಅಂದರೆ 1911ರ ನಂತರತುಳುವರ ವರಸೆ ಮುಂಬಯಿಯತ್ತ ಶುರುವಾಯಿತು. 1950ರಿಂದ 1975 ರ ಮಧ್ಯೆ ಈ ಮುಂಬೈ ವಲಸೆ ಗರಿಷ್ಟ ಮಟ್ಟಕ್ಕೆ ತಲುಪಿ, ನಂತರ ಇಳಿಮುಖವಾಗಿ, ಕೊಲ್ಲಿ ರಾಷ್ಟ್ರಗಳ ಕಡೆ ಹಾಗೂ ಕರ್ನಾಟಕದ ಒಳನಾಡು ಮತ್ತು ಬೆಂಗಳೂರು ಕಡೆ ವಲಸೆ ಹೆಚ್ಚಿತು.

1990 ನಂತರ ಅಮೆರಿಕಾ, ಆಸ್ಟ್ರೇಲಿಯಾ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಕಡೆಗೂ ವಲಸೆ ಶುರುವಾಯಿತು. ಇದರಿಂದಾಗಿ ತುಳುನಾಡಿನಲ್ಲಿ ಬಂಟರ ಜನಸಂಖ್ಯೆ ಕಡಿಮೆಯಾಗಿ ಗುತ್ತಿನ ಮನೆಗಳು ಭಣಗುಟ್ಟಿದವು. ಗದ್ದೆಗಳು ಬೀಳುಬಿದ್ದವು, ಕೆರೆ-ಕಟ್ಟೆಗಳು ಒಣಗಿದವು.

1975 ರ ನಂತರದ ಬಂಟರ ಹೊರವಲಸೆಗೆ ಇನ್ನೊಂದು ಮುಖ್ಯ ಕಾರಣ ಬಂಟರ ಜಾತಿಯ ನೆಲೆಯನ್ನೆ ಅಲ್ಲಾಡಿಸಿದ ಭೂಮಸೂದೆ. ಭೂಮಸೂದೆಯಿಂದಾಗಿ ತುಳುನಾಡಿನಲ್ಲಿ ನೆಲ ಕಚ್ಚಿದ ಬಂಟರ ಸಮಾಜ ಫೀನಿಕ್ಸ್‌ನಂತೆ ಮೇಲೆದ್ದಿದ್ದು ಮಾತ್ರ ಹೊರನಾಡಿನಲ್ಲಿ.

ಕುಟುಂಬ ಯೋಜನೆ :
1960ರ ನಂತರ ಬಂಟರ ಹೆಣ್ಣುಗಳಲ್ಲೂ ವಿದ್ಯಾರ್ಜನೆ ತೀವ್ರ ಹೆಚ್ಚಾಗಿ, ಬಂಟ ಹೆಣ್ಣುಗಳೂ ನೌಕರಿ-ಸ್ವ ಉದ್ಯೋಗಕ್ಕೆ ಮಹತ್ವ ಕೊಟ್ಟಿದ್ದರಿಂದ ತಮ್ಮ ಕುಟುಂಬವನ್ನು ಒಂದು ಅಥವಾ ಎರಡು ಮಕ್ಕಳಿಗೆ ಸೀಮಿತಗೊಳಿಸಿದರು.

ಹಲವು ಕಾರಣಗಳಿಂದ ಉದ್ಯೋಗದಲ್ಲಿರುವ ಹೆಣ್ಮಕ್ಕಳ ಮದುವೆಯೂ ತಡವಾಗಿ ಆಗುತ್ತಿತ್ತು. ಈ ಕಾರಣಗಳಿಂದಾಗಿ ಬಂಟರ ಜನಸಂಖ್ಯೆಯಲ್ಲಿ ಸ್ತಂಬನವುಂಟಾಯಿತು.

ಅಂತರ್ಜಾತಿ ವಿವಾಹ : 1980ಕ್ಕೆ ಮೊದಲು ಬಂಟರ ಹೆಣ್ಣುಗಳಲ್ಲಿ ಅಂತರ್ ಜಾತಿ ವಿವಾಹ ಅಪರೂಪವಾಗಿತ್ತು. ಎಲ್ಲೊ ಒಂದೆರಡು ಅಂತರ್ಜಾತಿ ವಿವಾಹವಾಗುತ್ತಿದ್ದವು. ಅದಕ್ಕೆ ಹೆತ್ತವರ ವಿರೋಧವೂ ಇದ್ದಿತು. ಈಗ ತಂದೆ - ತಾಯಿಗಳೇ ಎದುರು ನಿಂತು ಅಂತರ್ಜಾತಿ ವಿವಾಹಕ್ಕೆ ಧಾರೆಯೆರೆದು ಕೂಡುತ್ತಿದ್ದಾರೆ.

ಇನ್ನೊಂದು ಐದು ವರ್ಷಗಳಲ್ಲಿ ಇನ್ನೂ ಆಸೆಬುರುಕ ಹಿರಿಯರ ಮುಷ್ಟಿಯಲ್ಲಿರುವ 'ಬದಿಪ್ರಿಯ' ಬಂಟ ಹುಡುಗನಿಗೆ ಸ್ವಜಾತಿ ಹೆಣ್ಣು ಸಿಗುವುದೇ ದುಸ್ತರವಾಗಬಹುದು. ಇಂತಹದ್ದೇ ಸ್ಥಿತಿ ತುಳುನಾಡಿನ ಇನ್ನೂ ಕೆಲವು ಜಾತಿಗಳಲ್ಲಿ ಇದೆ. ಹಾಗಾಗಿ ಜಾತಿ ಆಧಾರಿತ ಜನಗಣತಿಯು ಇಂತಹಾ ಎಲ್ಲಾ ಜಾತಿಯೊಳಗಣ ವೈರುಧ್ಯಮಯ ಸ್ಥಿತಿ-ಗತಿಗಳಿಗೆ ಕನ್ನಡಿ ಹಿಡಿಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X