ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನದ ನೋಂದಣಿಗೆ ಕ್ಷಣಗಣನೆ ಆರಂಭ

By Shami
|
Google Oneindia Kannada News

ಹೊಸ ವರ್ಷದ ಪ್ರಾರಂಭದಲ್ಲಿ ವಿಶ್ವ ಕನ್ನಡಿಗರನ್ನು ಪುಳಕಗೊಳಿಸುವ ವಾರ್ತೆ ಬಂದಿದೆ. ಅದೇನೆಂದರೆ, ಅಮೆರಿಕ ಕನ್ನಡ ಕೂಟಗಳ ಆಗರ 'ಅಕ್ಕ' ಇನ್ನೊಂದು ವಿಶ್ವ ಕನ್ನಡ ಸಮ್ಮೇಳನಕ್ಕೆ ಮುಹೂರ್ತ ನಿಗದಿಪಡಿಸಿದೆ. ಇದುವರೆವಿಗೂ ಅಮೆರಿಕಾದ ವಿವಿಧ ದಿಕ್ಕುಗಳಲ್ಲಿ ಏಳು ಬಾರಿ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಿ ಮನೆಮಾತಾಗಿರುವ ಅಕ್ಕ, ಇದೀಗ ತನ್ನ 8ನೇ ಸಮ್ಮೇಳನವನ್ನು ಪ್ರಥಮ ಬಾರಿಗೆ ಅಮೆರಿಕಾದ ಪಶ್ಚಿಮ ಕರಾವಳಿಯಲ್ಲಿ ನಡೆಸಲು ನಿಶ್ಚಯಿಸಿದೆ.

ಅಮೆರಿಕಾದ ಕನ್ನಡ ಕಾಲೋನಿಗಳಲ್ಲಿ ಕಲೆ, ಸಂಸ್ಕೃತಿ ಹಾಗೂ ಪ್ರತಿಭಾ ಸಂಪತ್ತಿಗೆ ಹೆಸರುವಾಸಿಯಾದ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟ (ಕೆ.ಕೆ.ಎನ್.ಸಿ)ದ ಆಶ್ರಯದಲ್ಲಿ ಮೂರು ದಿನಗಳ ಕನ್ನಡ ಸಮ್ಮೇಳನ ಜರಗುತ್ತದೆ. ಸ್ಥಳ: ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯ. ಸಮಯ: 2014ರ ಲೇಬರ್ ಡೇ ವೀಕ್ ಎಂಡ್, ಆಗಸ್ಟ್ 29 ರಿಂದ 31. ಮಹತ್ವಾಕಾಂಕ್ಷೆಯ ಈ ಸಮ್ಮೇಳನದ ಸಂಚಾಲಕರಾಗಿ ಸುರೇಶ್ ಬಾಬು, ಸಹಸಂಚಾಲಕರಾಗಿ ರಘುನಂದನ ಹಾಲೂರು ಹಾಗೂ ರವಿಶಂಕರ್ ಬೈರಪ್ಪಗೌಡ ಅವರುಗಳು ನಿಯೋಜಿತರಾಗಿದ್ದಾರೆ.

Suresh Babu

ಸಿಲಿಕಾನ್ ಕಣಿವೆಯ ಕನ್ನಡಿಗರೆಲ್ಲರೂ 'ಬನ್ನಿರೈ' ಎಂದು ಸಮೂಹ ಗೀತೆ ಹಾಡುತ್ತಾ ಈ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಿಕೊಡುತ್ತಾರೆಂಬ ಅದಮ್ಯ ವಿಶ್ವಾಸವನ್ನು ಹೊಂದಿದ್ದಾರೆ 'ಅಕ್ಕ" ಟ್ರಸ್ಟ್ ಛೇರ್ಮನ್ ಅಮರನಾಥ್ ಗೌಡ ಹಾಗೂ ಅಕ್ಕ ಅಧ್ಯಕ್ಷ ಹಳೇಕೋಟೆ ವಿಶ್ವಾಮಿತ್ರ. ಬೇ ಏರಿಯಾ ಕನ್ನಡಿಗರ ಸಮ್ಮೇಳನ ಸಂಭ್ರಮವನ್ನು ಮುದ್ದಾಂ ಕಂಡು ಅವರಿಬ್ಬರೂ ಉಲ್ಲಸಿತರಾಗಿದ್ದಾರೆ.
Halekote Vishwamitra and Amarnath Gowda

ಸ್ಯಾನ್ ಹೋಸೆ ನಗರದ ಪ್ರತಿಷ್ಠಿತ ಮೆಕೆನ್ರಿ ಸಭಾಂಗಣದಲ್ಲಿ ನಡೆಯಲಿರುವ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ನೋಂದಣಿ ಪ್ರಕ್ರಿಯೆಯನ್ನು (Registrations) ಆರಂಭಿಸಲು ಸ್ಯಾನ್-ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ಕನ್ನಡಿಗರು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಸಂಕ್ರಾಂತಿಯ ಶುಭದಿನ, ಮಂಗಳವಾರ ಜನವರಿ 14 ನೋಂದಣಿ ಆರಂಭವಾಗುತ್ತದೆ.

ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶವೇ ಒಂದು ಪ್ರಮುಖ ಆಕರ್ಷಣೆಯಾಗಿದ್ದು, ಪ್ರಪಂಚದಾದ್ಯಂತ ಇರುವ ಕನ್ನಡ ಪ್ರೇಮಿಗಳನ್ನು ಈ ಸಮ್ಮೇಳನಕ್ಕೆ ಸೆಳೆಯುವಲ್ಲಿ ಯಾವುದೇ ಸಂದೇಹವಿಲ್ಲ. ಕರ್ನಾಟಕದ ಹೊರಗಿರುವ ಅತಿ ದೊಡ್ಡ ಕನ್ನಡ ಕೂಟಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆ.ಕೆ.ಎನ್.ಸಿ ಈ ಸಮ್ಮೇಳನದಲ್ಲಿ ಉತ್ಕೃಷ್ಟ ಮನರಂಜನಾ ಕಾರ್ಯಕ್ರಮಗಳು, ಸುಗ್ರಾಸ ಭೋಜನ ಹಾಗೂ ಸ್ನೇಹಪರ ಆತಿಥ್ಯವನ್ನು ನೀಡಲು ಸ್ವಯಂಸೇವಕರ ದೊಡ್ಡ ಸೇನೆಯನ್ನೇ ಕಟ್ಟಿದೆ.

ಸಂಚಾಲಕ ಸುರೇಶ್ ಬಾಬು ಹೇಳುವಂತೆ, "ಸಮ್ಮೇಳನಕ್ಕೆ ನೋಂದಾಯಿಸಿಕೊಳ್ಳಲು ಬಯಸುವ ಕನ್ನಡಿಗರೆಲ್ಲರಿಗೂ ನಮ್ಮ ಸಮಿತಿಯು ಅತ್ಯಂತ ಆಕರ್ಷಕ ಪ್ಯಾಕೇಜ್ ಗಳನ್ನು ತಯಾರಿಸುವಲ್ಲಿ ಬಹಳ ಮುತುವರ್ಜಿ ವಹಿಸಿ ಕೆಲಸ ಮಾಡಿ, ವಿಶೇಷ ಪಾರಿವಾರಿಕ ಹಾಗೂ ವೈಯಕ್ತಿಕ ದರಗಳನ್ನು ನಿಗದಿಪಡಿಸಿದ್ದಾರೆ. ಇವು ಅಮೇರಿಕದಲ್ಲಿರುವ ಹಾಗೂ ಹೊರನಾಡಿನ ಕನ್ನಡಿಗರೆಲ್ಲರನ್ನೂ ಆಕರ್ಷಿಸುವುದು ಖಂಡಿತ. ಅದರಲ್ಲೂ ನಮ್ಮ 'ಆರಂಭಿಕ ವಿಶೇಷ ದರ'ಗಳಂತೂ ಸಮ್ಮೇಳನ ಹಾಗೂ ವಸತಿ ಇವೆರಡರ ನೋಂದಣಿಗೂ ಬಹಳ ಆಕರ್ಷಕವಾಗಿವೆ.

ಇವುಗಳ ಜೊತೆಗೆ, ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಇಚ್ಛಿಸುವವರಿಗೋಸ್ಕರ ನಾವು ಹಲವಾರು ಅನುಕೂಲಕರ 'ಟ್ರಾವೆಲ್ ಪ್ಯಾಕೇಜ್'ಗಳನ್ನೂ ಸಹ ತಯಾರಿಸಿದ್ದೇವೆ. ಇದೇ ಮೊದಲ ಬಾರಿಗೆ ನಮ್ಮ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ ನಡೆಯುತ್ತಿರುವ ಈ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಮರೆಯಲಾಗದ ಮಧುರ ಅನುಭವವಾಗಿ ಕಟ್ಟಿಕೊಡಲು ಉತ್ಸುಕರಾಗಿದ್ದೇವೆ ಎಂದು ಸುರೇಶ್ ಬಾಬು ಹೇಳಿದರು.

8ನೇ ಅಕ್ಕ ಸಮ್ಮೇಳನದ ಆತಿಥ್ಯ ವಹಿಸಿರುವ ಸ್ಯಾನ್ ಫ್ಸಾನ್ಸಿಸ್ಕೋ ಕುರಿತ ವಿಡಿಯೋ ಝಲಕ್ ನೋಡಿ.


"ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದೊಂದಿಗೆ ಸಹವರ್ತಿಗಳಾಗಿ ಕೆಲಸ ಮಾಡಲು ನಾವು ಅತ್ಯಂತ ಉತ್ಸುಕರಾಗಿದ್ದೇವೆ. 8ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಒಂದು ಅವಿಸ್ಮರಣೀಯ ಅನುಭವವನ್ನಾಗಿ ಮಾಡಲು ಹಾಗೂ ಅದನ್ನು ಯಶಸ್ವಿಗೊಳಿಸಲು ಕೆಕೆಎನ್ಸಿ ಸಮಿತಿಗಿರುವ ಉತ್ಸಾಹವನ್ನು ಕಂಡು ನಾವು ಹರ್ಷಿತರಾಗಿದ್ದೇವೆ ಎಂದು ಅಕ್ಕ ಅಧ್ಯಕ್ಷ ಹಳೇಕೋಟೆ ವಿಶ್ವಾಮಿತ್ರ ಒನ್ ಇಂಡಿಯ ಕನ್ನಡ ಜಾಲತಾಣಕ್ಕೆ ಶುಕ್ರವಾರ ತಿಳಿಸಿದರು.

ಪ್ರಪಂಚದ ಹಾಗೂ ಅಮೆರಿಕದ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರನ್ನೂ ಸಮ್ಮೇಳನಕ್ಕೆ ಹೃದಯಪೂರ್ವಕವಾಗಿ ಆಹ್ವಾನಿಸುತ್ತೇವೆ. ಕ್ಯಾಲಿಫೋರ್ನಿಯ ಬಹಳ ದುಬಾರಿ ಊರಾಗಿದ್ದರೂ ಸಹ, ಸಮ್ಮೇಳನದ ನೋಂದಣಿ ಶುಲ್ಕ ಹಾಗೂ ತಂಗಲು ಉತ್ಕೃಷ್ಟ ಹೋಟೆಲ್‌ಗಳ ದರಗಳನ್ನು ಸಾಕಷ್ಟು ಕೈಗೆಟಕುವ ಬೆಲೆಗಳಲ್ಲಿ ನಿಗದಿ ಪಡಿಸುವಲ್ಲಿ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟ ಯಶಸ್ವಿಯಾಗಿರುವುದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ" ಎಂದು ವಿಶ್ವಾಮಿತ್ರ ಹೇಳಿದರು.

ಎಲ್ಲರೂ ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಈ ಅಮೋಘ ಸಮ್ಮೇಳನದ ನೋಂದಣಿ ಪ್ರಕ್ರಿಯೆಯು ಸಂಕ್ರಾಂತಿಯ ಶುಭದಿನ ಜನವರಿ 14, 2014ರಂದು ಪ್ರಾರಂಭಗೊಳ್ಳಲಿದೆ. ನೋಂದಣಿಸುವ ಮೊಟ್ಟಮೊದಲ ಕನ್ನಡಾಭಿಮಾನಿಗಳಲ್ಲೊಬ್ಬರಾಗಲು ಹಾಗೂ ಈ ಅಪೂರ್ವ ಸಮ್ಮೇಳನದ ಬಗ್ಗೆ ವಿವರವಾದ ಮಾಹಿತಿ ಪಡೆಯಲು ಸಂದರ್ಶಿಸಿ.

English summary
Count down begins for online registration for 8th AKKA world Kannada Convention - San Fransisco bay area [@8thAKKAWKC]. Registration windows will go LIVE on 14th Jan 2014. Earlier, AKKA (Association of Kannada Kootas of North America) has conducted convention in 7 cities - Huston, Detroit, Orlando (Florida), Baltimore, Chicago, New Jersey and Atlanta. Be an early bird, register now, bag attractive offers!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X