ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಜನೇಯ ಕನ್ನಡಿಗ ಹಾಗೂ ಮೊಟ್ಟಮೊದಲ ಎನ್ನಾರೈ

By ಎಸ್.ಕೆ. ಶಾಮಸುಂದರ, ಸ್ಯಾನ್ ಹೋಸೆಯಿಂದ
|
Google Oneindia Kannada News

ಸ್ಯಾನ್ ಹೋಸೆ, ಆ. 30 : ಉತ್ತರ ಕ್ಯಾಲಿಫೋರ್ನಿಯಾದ ಸುಸಜ್ಜಿತ, ವಿಶಾಲ, ಪ್ರತಿಷ್ಠಿತ ಮೆಕೆನ್ರಿ ಕನ್ ವೆನಷನ್ ಸೆಂಟರ್ ಅನ್ನು ಈ ಬಾರಿಯ ಅಕ್ಕ ಕನ್ನಡ ಸಮ್ಮೇಳನಕ್ಕೆ ಒಂದು ವರ್ಷ ಮುಂಚೇನೇ ಬುಕ್ ಮಾಡಿದ್ದು ಒಳ್ಳೆದಾಯ್ತು. ಆತಿಥೇಯ ಕೆಕೆಎನ್ಸಿ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಮತ್ತು ಅಕ್ಕ ಆಡಳಿತ ಮಂಡಳಿಗೆ ಒಂದು ಥ್ಯಾಂಕ್ಸ್.

ಸಭಾಂಗಣಗಳು ಒಂದು ದಿಕ್ಕು, ಪ್ರತಿನಿಧಿಗಳು ಉಳಿದುಕೊಳ್ಳುವ ಹೋಟೆಲ್‌ಗಳು ಇನ್ನೊಂದು ದಿಕ್ಕು, ಭೋಜನಶಾಲೆ ಮತ್ತೊಂದು ದಿಕ್ಕು ಅನ್ನುವಂಥ ಪರಿಸ್ಥಿತಿ ಇಲ್ಲಿಲ್ಲ. ಹಿಲ್ಟನ್, ಮ್ಯಾರಿಯಟ್, ಹಯಾತ್, ಫ್ರೆಮಾಂಟ್ ಹೋಟೆಲ್‌ಗಳು ಸಭಾಂಗಣಕ್ಕೆ ಹೊಂದಿಕೊಂಡೇ ಇವೆ. ಹಾಗಾಗಿ, ವೃಥಾ ನಡೆದಾಟ, ಓಡಾಟ ಅಲೆದಾಟ ತಪ್ಪಿದೆ. ಅಂದಹಾಗೆ, ಈ ಸುದ್ದಿ ಬರೆಯುವ ಹೊತ್ತಿಗೆ ಪುನೀತ್ ರಾಜ್‌ಕುಮಾರ್ ಶನಿವಾರ ಮಧ್ಯಾಹ್ನ ಬಂದು ಫ್ರೆಮಾಂಟ್ ಹೋಟೆಲ್‌ನಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ.

ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ ಕಾರ್ಯಕ್ರಮ ರದ್ದಾಗಿದೆ. 10 ಮಂದಿ ಕಲಾವಿದರ ತಂಡದೊಂದಿಗೆ ಇಲ್ಲಿಗೆ ಬರುವುದಾಗಿ ಮಾತು ಕೊಟ್ಟಿದ್ದರು. ಆದರೆ, ನಿಜಕ್ಕೂ ಕೊಟ್ಟದ್ದು ಕೈ. ಅದೂ ಕೊನೆ ಕ್ಷಣದಲ್ಲಿ ಎಂದು ಅಕ್ಕ ಆಡಳಿತ ಮಂಡಳಿಯ ಹಿರಿಯ ಪದಾಧಿಕಾರಿಯೊಬ್ಬರು ಬೇಸರದಿಂದ ಹೇಳಿದರು. ಏನೇ ಆಗ್ಲಿ, ಭಾನುವಾರ ಸಂಜೆಯ ಪ್ರೈಟೈಂನಲ್ಲಿ ಪುನೀತ್ ರಾಜ್‌ಕುಮಾರ್ ಎರಡು ಹಾಡುಗಳನ್ನು ಹಾಡುತ್ತಾರೆ, ಡ್ಯಾನ್ಸ್ ಮಾಡಿದರೂ ಮಾಡಬಹುದು ಎಂದು ಸಂಚಾಲಕರಲ್ಲೊಬ್ಬರಾದ ರಘು ಹಾಲೂರ್ ನಮ್ಮ ಬಾತ್ಮೀದಾರರಿಗೆ ತಿಳಿಸಿದರು. [ಕಡಲಾಚೆ ಲೇಖಕರಿಗೆ ಎಸ್ಎಲ್ ಭೈರಪ್ಪ ಕಿವಿಮಾತು]

ಶನಿವಾರದ ಕಾರ್ಯಕಲಾಪಗಳು ಬೆಳಗ್ಗೆ 8 ಗಂಟೆಗೆ ಸಾಂಸ್ಕೃತಿಕ ಮೆರವಣಿಗೆಯಿಂದ ಆರಂಭವಾಯ್ತು. ತುಂಬಾ ಕಲರ್ ಫುಲ್ ಆಗಿತ್ತು. ಸಾಂಪ್ರದಾಯಿಕ ವೇಷಭೂಷಣ ಧರಿಸಿದ ಕನ್ನಡಿಗ-ಕನ್ನಡತಿಯರು ಕರ್ನಾಟಕದ ಚರಿತ್ರೆ, ಪರಂಪರೆ, ವಿವಿಧ ಕಲಾಪ್ರಕಾರಗಳಿಗೆ ಪ್ರತಿಬಿಂಬವಾದರು. ಎರಡು ಕಿ.ಮೀ. ಉದ್ದದ ಮೆರವಣಿಗೆಯಲ್ಲಿ ಅಮೆರಿಕಾದ 23 ಕನ್ನಡ ಕೂಟಗಳು ಭಾಗವಹಿಸಿದ್ದವು. ನಮ್ಮೂರಿಂದಲೇ ಅಂದ್ರೆ ಲಾಸ್ ಏಂಜಲೀಸ್ ನಿಂದಲೇ 250 ಜನ ಬಂದಿದ್ದಾರೆ ಎಂದು ಅರ್ ವೈನ್ ನಲ್ಲಿ ಹತ್ತು ವರ್ಷಗಳಿಂದ ಕನ್ನಡ ಕಲಿ ತರಗತಿಗಳನ್ನು ನಡೆಸುತ್ತಿರುವ ವಿಶ್ವನಾಥ್ ದೀಕ್ಷಿತ್ ಹೇಳಿದರು.

ಬೆಳಗ್ಗೆ 10 ಗಂಟೆಗೆ ಸಮ್ಮೇಳನದ ಉದ್ಘಾಟನೆಯನ್ನು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ನೆರವೇರಿಸಿದರು. ಉದ್ಘಾಟನೆ ನಂತರ ಸ್ವಾಮಿಗಳು ಒಂದು ದೃಷ್ಟಾಂತ ಹೇಳಿದ್ರು. ಕನ್ನಡಿಗನಾದ ಆಂಜನೇಯ ಹುಟ್ಟಿದ್ದು ಹಂಪಿಯಲ್ಲಿ, ಆಡುತ್ತಾ ಬೆಳೆದದ್ದು ಗೋಕರ್ಣದಲ್ಲಿ. ಆನಂತರ ಲಂಕೆಗೆ ಹಾರಿ ಸೀತೆಯನ್ನು ಬಿಡಿಸಿಕೊಂಡು ಬಂದನು. ಆದ್ದರಿಂದಾಗಿ ಆಂಜನೇಯ ಅಥವಾ ಹನುಮಂತ ಪ್ರಪ್ರಥಮ NRI ಅಂದರೆ, ಪ್ರಥಮ ಅನಿವಾಸಿಕನ್ನಡಿಗ ಎಂದು.

ಅಮೆರಿಕಾದ ಪಾಲಕರು ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡವನ್ನು ಕಡ್ಡಾಯವಾಗಿ ಮಾತನಾಡತಕ್ಕದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚದಂತೆ ಎಚ್ಚರ ವಹಿಸಬೇಕು. ಈ ಶಾಲಾ ಮಕ್ಕಳಿಗೆ NRI ಗಳು ಪ್ರೋತ್ಸಾಹ ನೀಡಬೇಕೆಂದು ಶ್ರೀಗಳು ಬಯಸಿದರು.

ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಅಕ್ಕ ಬಳಗದ ಅಮರ್ ನಾಥ್ ಗೌಡ, ಡಾ. ಹಳೇಕೋಟೆ ವಿಶ್ವಾಮಿತ್ರ, ಮತ್ತು ಸಂಚಾಲಕರಾದ ಸುರೇಶ್ ಬಾಬು, ರವಿಶಂಕರ್ ಮತ್ತು ರಘು ಹಾಲೂರು ಹಾಗೂ ಇನ್ನಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

AKKAWKC

ಮಲ್ಲಿಗೆ, ಸಂಪಿಗೆ, ಪಾರಿಜಾತ, ಚಂಪಕ, ಕಣಿಗಲೆ, ಸೇವಂತಿಗೆ, ಸ್ಫಟಿಕ, ಮಂದಾರ, ಸೂರ್ಯಕಾಂತಿ... ಹೀಗೆ ಒಂದೊಂದು ಸಭಾಂಗಣಕ್ಕೆ ಒಂದೊಂದು ಹೆಸರು. ಎಲ್ಲಾ ಕಡೆ ದಿನವಿಡೀ ಏನಾದರೊಂದು ಕಾರ್ಯಕ್ರಮ. ನಾಟಕ, ನೃತ್ಯ, ಸ್ಪರ್ಧೆ, ಯಕ್ಷಗಾನ, ಹಳೇ ವಿದ್ಯಾರ್ಥಿ ಮಿಲನ, ಯೋಗ ಹೀಗೆ ಕಾರ್ಯಕ್ರಮಗಳ ಸರಮಾಲೆ.

ಕಣಗಲೆಯಲ್ಲಿ ಬನ್ನಂಜೆ ಗೋವಿಂದಾಚಾರ್ಯರಿಂದ ಮಹಾಭಾರತ ಕುರಿತು ಉಪನ್ಯಾಸ, ಪಾರಿಜಾತದಲ್ಲಿ ತತ್ವಶಾಸ್ತ್ರದ ಪ್ರೊಫೆಸರ್ ಹಾಗೂ ಸಾಹಿತಿ ಎಸ್.ಎಲ್ ಭೈರಪ್ಪನವರಿಂದ ನಾನೇಕೆ ಕಾದಂಬರಿಕಾರನಾದೆ ಮತ್ತು ನೀವೇಕೆ ನನ್ನನ್ನು ಓದುತ್ತೀರಿ (ಆವರಣ) ಕುರಿತು ಮಾತು, ಮಂಥನ, ಪ್ರಶ್ನೋತ್ತರ.

ಅಲಮೇಲು ಅಯ್ಯಂಗಾರ್ ತಂಡದಿಂದ 7 ಗಂಟೆಗೆ ಗೋಕುಲ ನಿರ್ಗಮನ ನಾಟಕ, ರಾತ್ರಿ 9 ಗಂಟೆಗೆ ಮಲ್ಲಿಗೆಯಲ್ಲಿ ಶಶಾಂಕ್ ಸುಬ್ರಮಣ್ಯಂ ಮತ್ತು ಪ್ರವೀಣ್ ಡಿ ರಾವ್ ಅವರ ಚಕ್ರಫೋನಿಕ್ಸ್ ತಂಡದಿಂದ ಫ್ಯೂಷನ್ ಮ್ಯೂಸಿಕ್. ಹೇಳ್ತಾಹೋದ್ರೆ ಅಯ್ಯೋ ಅಪ್ಪಾ ಶಿವನೇ ತಂದೇ..ಬೇಕಾದಷ್ಟಿದೆ.

ಬ್ರೇಕಿಂಗ್ ನ್ಯೂಸ್ : ಭಾನುವಾರದ ಲಂಚ್ ಮತ್ತು ಡಿನ್ನರ್ ಗೆ ಚಿರೋಟಿ ಹಾಗೂ ಕಾಯಿ ಹೋಳಿಗೆಯನ್ನು ಕರ್ನಾಟಕದಿಂದ ಔಟ್ ಸೋರ್ಸ್ ಮಾಡಲಾಗಿತ್ತು. ಭಕ್ಷ್ಯಗಳು ಅಮೆರಿಕಾಗೇ ಬಂದವೇನೋ ನಿಜ ಆದ್ರೆ ಕಸ್ಟ್ಂ ಕಷ್ಟಂ ಅಧಿಕಾರಿಗಳು ಬಿಡ್ತಾರೋ ಇಲ್ಲವೋ ಎಂಬ ಆತಂಕ ಇತ್ತು. ಅದೀಗ ನಿವಾರಣೆ ಆಯ್ತು. ಸಿಹಿತಿಂಡಿಯನ್ನು ಎತ್ತಾಕೊಂಡು ಬರಲು ಕೆಕೆಎನ್ಸಿಯ ವಾನರ ಸೇನೆ ಫ್ರೀವೇನಲ್ಲಿ ಓಡಿಹೋಯಿತು.

English summary
Hanumantha, the monkey god is a Kannadiga and First NRI says Udupi Puttige Mutt Seer Sri Sugunendra Teertha. He was speaking after opening 8th AKKA world Kannada convention in San Jose, North America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X