ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಕಾನ್ ಕಣಿವೆಯಲ್ಲಿ ಚೊಚ್ಚಲ ಅಕ್ಕ ಸಮ್ಮೇಳನಕ್ಕೆ ನಾಂದಿ

By ಅಕ್ಕ ವಿಕಸ 2014 ಪ್ರಚಾರ ಸಮಿತಿ
|
Google Oneindia Kannada News

ಅಮೆರಿಕದಲ್ಲಿ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ತೇರನ್ನು ಎಳೆಯುವ ಕನ್ನಡಿಗರ ಜಾತ್ರೆ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನ ಮುಂದಿನ ವರ್ಷ 2014ರ ಲೇಬರ್ ಡೇ ವಾರಾಂತ್ಯದಲ್ಲಿ ಆಗಸ್ಟ್ 29, 30, 31ರಂದು ನಡೆಯಲಿದೆ. ಅಮೆರಿಕದಲ್ಲಿನ ಅತ್ಯಂತ ಸಕ್ರಿಯ ಮತ್ತು ಅತಿ ಹೆಚ್ಚು ಸದಸ್ಯರನ್ನೊಳಗೊಂಡ ಕನ್ನಡ ಕೂಟ, ಉತ್ತರ ಕ್ಯಾಲಿಫೋರ್ನಿಯಾ '8ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ' ನಡೆಸುವ ಜವಾಬ್ದಾರಿಯನ್ನು ತನ್ನ ಹೆಗಲಿಗೇರಿಸಿಕೊಂಡಿದೆ.

ಹಲವಾರು ವರ್ಷಗಳಿಂದ ಈ ಅವಕಾಶವನ್ನು ಎದುರು ನೋಡುತ್ತಿದ್ದ ಬೇ ಏರಿಯಾ ಕನ್ನಡ ಸಮುದಾಯವು ಕಳೆದ ಭಾನುವಾರ ಅಕ್ಕ ಸಂಸ್ಥೆಯ ಪದಾಧಿಕಾರಗಳ ಸಮಕ್ಷಮದಲ್ಲಿ ಈ ಅಭೂತಪೂರ್ವ ಪ್ರಯಾಣದ ಮೊದಲ ಹೆಜ್ಜೆಯನ್ನು ಅನೇಕ ಸುಂದರ ಕನಸುಗಳೊಂದಿಗೆ, ಅಪರಿಮಿತ ಉತ್ಸಾಹದೊಂದಿಗೆ, ಅಷ್ಟೇ ಅಲ್ಲದೆ ಭರ್ಜರಿ ಸಂಭ್ರಮದೊಂದಿಗೆ ಇಟ್ಟಿತು.

ಹುಮ್ಮಸ್ಸಿನ ದಾಪುಗಾಲಾಗಿ ಮೂಡಿಬಂದ ಈ ಮೊದಲ ಹೆಜ್ಜೆಯೇ ಇಷ್ಟರ ಮಟ್ಟಿಗೆ ಮೆರುಗನ್ನು ತರುತ್ತದೆ ಎಂದು ಬಹಳಷ್ಟು ಜನರು ನಿರೀಕ್ಷಿಸಿರಲಿಲ್ಲ. ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸಿಲಿಕಾನ್ ಕಣಿವೆಯಲ್ಲಿ ಅಣಿಗೊಳಿಸುವ ಚರ್ಚೆಗೆ ಆಮಂತ್ರಣವೊಂದು ಇಮೇಲ್ ಮೂಲಕ ಕೆಲವು ದಿನಗಳ ಹಿಂದೆ ಬಂದಿತ್ತು. ಏನಿರಬಹುದೆಂದು ಶೂನ್ಯ ನಿರೀಕ್ಷೆಯನ್ನಿಟ್ಟುಕೊಂಡು ನಿಶ್ಚಿತ ಸ್ಥಳಕ್ಕೆ ಹೋದ ನನಗೆ ಅಲ್ಲಿ ಅಚ್ಚರಿಗಳ ಮೇಲೆ ಅಚ್ಚರಿ ಕಾದಿತ್ತು.

8th World Kannada Conference : KKNC and AKKA sign MoU

"ದೋಸ ಮತ್ತು ಬಿರಿಯಾನಿ" ಸಭಾಂಗಣಕ್ಕೆ ಮೆರುಗು ಬಂದಿತ್ತು. ಹಲವಾರು ಕನ್ನಡ ಪ್ರೇಮಿಗಳು ಸ್ವಪ್ರೇರಿತರಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ನೋಡು-ನೋಡುತ್ತಿದ್ದಂತೆಯೇ ಶಿವಕುಮಾರ್ "ತಮಟೆ" ಬಡಿಯುತ್ತ ಸಭೆಯ ಮುಖ್ಯ ಅತಿಥಿಗಳನ್ನು ಸಭಾಂಗಣದೆಡೆ ಕರೆತಂದರೆ, ಸಂಧ್ಯಾ ಗಾಯತ್ರಿ ಮತ್ತು ತಂಡ ಮುಖ್ಯದ್ವಾರದ ಇಕ್ಕೆಲಗಳಲ್ಲಿ ನಿಂತು ಅಕ್ಕ ಕಾರ್ಯನಿರ್ವಾಹಕ ಸಮಿತಿಗೆ ಸ್ವಾಗತ ಕೋರಿದರು. ನವ ಪ್ರತಿಭೆ ಲಕ್ಷ್ಮಿ ರಾವ್ ಪ್ರಾರ್ಥನೆಯೊಂದಿಗೆ ಆವಾಹಿಸಿದರು. ಕನ್ನಡ ಕೂಟದ ಪೂರ್ವಾಧ್ಯಕ್ಷ ರಘು ಹಾಲೂರು ಮೈಕ್ ಮುಂದೆ ಬಂದು ಹೀಗೆ ಹೇಳತೊಡಗಿದರು -

"ನಮ್ಮ ಒಲುಮೆಯ ತಾಯೆ,
ಮಮತೆ ತುಂಬಿದ ಹೂವೆ,
ಕನ್ನಡತಿ, ನಮ್ಮೊಡತಿ - ಹರಸು ಬಾ
ಮಡಿಲ ಮಕ್ಕಳನು ಎದೆತುಂಬಿ!

ಮಾತೃವಾತ್ಸಲ್ಯದ ನಿನ್ನ ನುಡಿ ಸವಿಜೇನು,
ಆವ ಜನುಮದ ಪುಣ್ಯವೋ
ಕನ್ನಡಿಗನಾಗಿ ಜನಿಸಿದೆನು ನಾನು!
ಧನ್ಯವೀ ಜನುಮ, ಧನ್ಯವೀ ಜನುಮ
ತಾಯೆ ಮತ್ತೆ ಮತ್ತೆ ಜನಿಸುವೆನು
ನಿನ್ನ ಪ್ರೀತಿಯ ಒಡಲಿನಲಿ!

ತಾಯೆ ನಾ ಬೇಡುವೆನು
ನೂರು ಜನ್ಮವ ನೀಡು ಕನ್ನಡದ ಮಣ್ಣಿನಲಿ
ಎನಿತು ಜನ್ಮವೆತ್ತಿದರೇನು?

ತಾಯ ಋಣ ತೀರದು, ತಾಯ ಋಣ ತೀರದು, ತಾಯ ಋಣ ತೀರದು!

8th World Kannada Conference : KKNC and AKKA sign MoU

"ಕೊನೆಯ ಸಾಲು ಇನ್ನು ಮುಗುದಿರಲಿಲ್ಲ. ಅದಾಗಲೇ ಸಭಾಂಗಣದಲ್ಲಿ ಕಿವಿಗಡಚಿಕ್ಕುವ ಕರತಾಡನ. ಅದೇನೋ ಮಿಂಚಿನ ಸಂಚಾರ. ಕನ್ನಡ ಪ್ರೇಮದ ಬಗೆಗಿನ ವಿಶಿಷ್ಟ ಅನುಭವ. ರಘು ತಮ್ಮ ಸ್ವಾಗತ ಭಾಷಣವನ್ನು ಮುಂದುವರೆಸುತ್ತಿದ್ದರೆ ಇತ್ತ ನನ್ನ ಮನಸ್ಸಿನಲ್ಲಿ ಇದು ಕೇವಲ ಒಂದು ಚರ್ಚೆಯಲ್ಲ, ಇದೊಂದು ಸರಳ-ಸುಂದರ-ನಿಶ್ಚಲ ಕಾರ್ಯಕ್ರಮದ ಮುನ್ನುಡಿ ಎಂದು ಖಾತ್ರಿಯಾಯಿತು. ಮಾತು ಮುಂದುವರಿಸುತ್ತಾ ರಘುರವರು ಈ ಕಾರ್ಯಕ್ರಮದ ಉದ್ದೇಶ ಮತ್ತು ಗುರಿಗಳನ್ನು ಚಿಕ್ಕದಾಗಿ, ಚೊಕ್ಕವಾಗಿ ತಿಳಿಸಿ "ಅಕ್ಕ (ಅಮೆರಿಕಾ ಕನ್ನಡ ಕೂಟಗಳ ಆಗರ) ನಮ್ಮ ಮನೆಬಾಗಿಲಿಗೆ ಬಂದು ನಿಂತಿದೆ. ಇದಕ್ಕೆ ಸಂಚಾಲಕರಾಗಿ ಅಸಾಧಾರಣ ನಾಯಕತ್ವ ಗುಣಗೊಳುಳ್ಳ ಸುರೇಶ್ ಬಾಬುರವರನ್ನು ಆರಿಸಿದ್ದೇವೆ" ಎಂದು ಹೇಳಿ ಸುರೇಶ್ ರವರನ್ನು ವೇದಿಕೆಗೆ ಸ್ವಾಗತಿಸಿದರು. ಹಾಗೇ ಈ ಸಮಾರಂಭಕ್ಕೆಂದೇ ಆಗಮಿಸಿದ್ದ ಅಕ್ಕ ಕೇಂದ್ರ ಕಾರ್ಯಸಮಿತಿಯ ಅಧ್ಯಕ್ಷ ಡಾ. ವಿಶ್ವಾಮಿತ್ರ ಹಳೆಕೋಟೆಯವರನ್ನು ಕೂಡ ವೇದಿಕೆಗೆ ಸ್ವಾಗತಿಸಿದರು. ತದನಂತರ ಸಂಧ್ಯಾ ಗಾಯತ್ರಿ ಮತ್ತು ತಂಡದವರು ಕೆಲವು ಹಾಡುಗಳನ್ನು ಹಾಡಿ ರಂಜಿಸಿದರು.

"ಹೊಸ ಬೆಳಕು" ಚಿತ್ರದ
ತೆರೆದಿದೆ ಮನೆ, ಓ ಬಾ ಅತಿಥಿ!
ಹೊಸ ಬೆಳಕಿನ ಹೊಸ ಗಾಳಿಯ
ಹೊಸ ಬಾಳನು ತಾ ಅತಿಥಿ!

ಹಾಡಂತೂ ಒಂದೆಡೆ ಮಧುರ ಗಾನದ ಅಮೃತದ ಸಿಂಚನವನ್ನು ಹರಿಸಿದರೆ ಮತ್ತೊಂದೆಡೆ ಸಿಲಿಕಾನ್ ಕಣಿವೆಯ ಕನ್ನಡ ಪ್ರೇಮಿಗಳು ಅಕ್ಕ ಸಮಿತಿಯ ಹೊಸ ನಾಯಕತ್ವಕ್ಕೆ "ಹೊಸ ಬೆಳಕನ್ನು-ಬಾಳನ್ನು ತಾ ಅತಿಥಿ" ಎಂದು ಹೇಳುವಂತಿತ್ತು. ಈ ಸಮಾರಂಭದ ಜೊತೆಗೆ ಈ ಹಾಡಿನ ಸಾಮ್ಯತೆಯನ್ನು ವಿವರಿಸುತ್ತ ರಘುರವರು ಅಕ್ಕ-2014ಕ್ಕೆ ಬರುವ ಪ್ರತಿಯೊಬ್ಬರಿಗೂ ಅತ್ಯುತ್ತಮ ಆತಿಥ್ಯ ನೀಡುವಲ್ಲಿ ಸಕಲ ಸ್ಥಳೀಯ ಕನ್ನಡಿಗರ ಸಹಕಾರ ಕೋರಿದರು. ಒಟ್ಟಿನಲ್ಲಿ ಈ ಕಾರ್ಯಕ್ರಮದ ಸಡಗರ-ಸಂಭ್ರಮಕ್ಕೆ ಕನ್ನಡಿ ಹಿಡಿದಂತಿತ್ತು. ವಿದ್ಯಾಲತ ಜೀರಗೆಯವರ ಶಿಷ್ಯ ವೃಂದ ಭರತನಾಟ್ಯದಿಂದ ನೆರೆದಿದ್ದವರನ್ನು ಮಂತ್ರ-ಮುಗ್ಧರನ್ನಾಗಿಸಿತ್ತು.

8th World Kannada Conference : KKNC and AKKA sign MoU

ಸಂಚಾಲಕರಾಗಿ ಆಯ್ಕೆಯಾದ ಸುರೇಶ್ ಬಾಬು ತಮ್ಮ ಭಾಷಣದಲ್ಲಿ ಮೊದಲನೆಯದಾಗಿ ಸಹ-ಸಂಚಾಲಕರಾದ ರಘು ಹಾಲೂರು ಮತ್ತು ರವಿಶಂಕರ್ ಭೈರಪ್ಪಗೌಡರನ್ನು ಸ್ವಾಗತಿಸಿದರು. ತಮ್ಮ ಕನ್ನಡ ಚಳವಳಿಯ ದಿನಗಳನ್ನು ನೆನೆದರು. "ಅಕ್ಕ" ಸಮ್ಮೇಳನವನ್ನು ಸಿಲಿಕಾನ್ ಕಣಿವೆಗೆ ಕರೆತರಲು ಹಿಂದೆ ಮಾಡಿದ್ದ ಹಲವು ವ್ಯರ್ಥ ಪ್ರಯತ್ನಗಳ ಬಗ್ಗೆ ನೋಟ ಬೀರಿದರು. 2014ರ ಅಕ್ಕ ಸಮ್ಮೇಳನ ಕೊನೆಗೂ ಇಲ್ಲಿಗೆ ಬರುತ್ತಿರುವುದರ ಹಿಂದೆ ಒಂದು ಭಗೀರಥ ಪ್ರಯತ್ನವೇ ಇದೆ ಎಂದು ವಿವರಿಸಿದರು. ಅಕ್ಕ ಕೇಂದ್ರ ಸಮಿತಿ ನಮ್ಮ ಮೇಲಿಟ್ಟಿರುವ ನಿರೀಕ್ಷೆಗಳನ್ನು ಭಾರವೆಂದು ಪರಿಗಣಿಸದೆ ಮಹತ್ತರ ಜವಾಬ್ದಾರಿಯೆಂದೂ ಕನ್ನಡ ಸೇವೆಯೆಂದೂ ಮನಗೊಳ್ಳಬೇಕು ಎಂದು ಕರೆ ಕೊಟ್ಟರು.

ಅಕ್ಕ ಕೇಂದ್ರ ಕಾರ್ಯಸಮಿತಿಯ ಅಧ್ಯಕ್ಷ ಡಾ. ವಿಶ್ವಾಮಿತ್ರ ಹಳೆಕೋಟೆಯವರು ಹಿಂದಿನ ದಿನ ನಡೆದ ಯಶಸ್ವಿ "ಜಯ ಜಯ ವಿಜಯೀ ರಘುರಾಮ" ಕಾರ್ಯಕ್ರಮವನ್ನು ಪ್ರಸ್ತಾಪಿಸುತ್ತಾ ಇಲ್ಲಿರುವ ಪ್ರತಿಭೆ-ಕೌಶಲದ ಬಗ್ಗೆ ಕೇಳಿದ್ದೆ ಅದನ್ನು ನೋಡುವ ಸೌಭಾಗ್ಯ ಕೂಡ ಸಿಕ್ಕಿದ್ದು ಸಂತೋಷ ಮತ್ತು ಹೆಮ್ಮೆಯ ವಿಚಾರ ಎಂದರು. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಬಗ್ಗೆ ಗುಣಗಾನ ಮಾಡಿದರು. ಹಿಂದೆ ನಡೆದಿದ್ದ ಏಳು ಅಕ್ಕ ಮಹಾಸಮ್ಮೇಳನದ ಅನುಭವದ ಬಗ್ಗೆ ಮಾತನಾಡಿದರು. "ತಮಟೆ"ಯಾ ಘೋಷನಾದದೊಡನೆ ಈರ್ವರು ಒಡಂಬಡಿಕೆ ಸಹಿ ಹಾಕಿದರು. ತಮಟೆಯ ಘೋಷನಾದದ ರಭಸ ಎಷ್ಟಿತ್ತೆಂದರೆ ಪಾಂಚಜನ್ಯದ ಶಂಖನಾದವೊಂದು ಬಾಕಿ ಇತ್ತಷ್ಟೆ ಎನಿಸಿತು.

ಅಕ್ಕ ನಾಯಕರಿಗೆ ಪ್ರಶ್ನೆಗಳನ್ನು ಕೇಳಬಹುದು ಎಂದಾಗ ರವಿ ಕೃಷ್ಣಪ್ಪ, ಮಧು ಕೃಷ್ಣಮೂರ್ತಿ, ಶೇಷಪ್ರಸಾದ್ ಚಿಕ್ಕತ್ತೂರು ಮತ್ತು ಅಂಜನ್ ಶ್ರೀನಿವಾಸ್ ಕೆಲವು ಗಮನ ಸೆಳೆಯುವ ಪ್ರಶ್ನೆಗಳನ್ನು ಕೆಳಿದರು. ನಾಯಕ ಸುರೇಶ್ ಬಾಬುರವರಿಂದ ಅಷ್ಟೇ ಸ್ವಾರಸ್ಯಕಾರಿ ಉತ್ತರವನ್ನೂ ಪಡೆದರು. ಆದ್ಯಂತವಾಗಿ ಇಡೀ ಕಾರ್ಯಕ್ರಮ ಸಿಲಿಕಾನ್ ಕಣಿವೆಯಲ್ಲಿ ಚೊಚ್ಚಲವಾಗಿ ನಡೆಯುತ್ತಿರುವ ಅಕ್ಕ ಸಮ್ಮೇಳನಕ್ಕೆ ನಾಂದಿ ಎಂಬಂತಿತ್ತು. ಕನ್ನಡ ತಾಯಿಯ ಸೇವೆಗೆ ಕರೆಕೊಟ್ಟಿತ್ತು. ನೆರೆದಿದ್ದವರ ಮನದಾಳದಲ್ಲಿ ಕನ್ನಡದ ಕಿಚ್ಚು ಹಚ್ಚಿತ್ತೆಂದರೆ ಅತಿಶಯೋಕ್ತಿ ಅನಿಸದು. ಕಾರ್ಯಕ್ರಮದ ಅಂತ್ಯದಲ್ಲಿ ಸವಿಯೂಟ ಸವಿದು ಮನೆಗೆ ಹೊರಡಲಣಿಯಾದ ನನ್ನಲ್ಲಿ ಒಂದು ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದುದರ ಬಗ್ಗೆ ತೃಪ್ತ-ಸುಪ್ತ ಭಾವ ಮನೆ ಮಾಡಿತ್ತು. ಮುಂದಿನ ವರುಷದ ಅಕ್ಕ ಸಮ್ಮೇಳನಕ್ಕೆ ತಯಾರಿ, ಕ್ಷಣಗಣನೆ ಒಂದು ಅನನ್ಯ ರೀತಿಯಲ್ಲಿ ಶುರುವಾಗಿತ್ತು. (ಚಿತ್ರಗಳು : ಯೋಗಿ ಸುಬ್ಬಯ್ಯ)

English summary
Kannada Koota Northern Califoania (KKNC) and AKKA sign MoU to conduct 8th AKKA World Kannada Conference jointly in Bay Area from August 29 to 31, 2014. KKNC, one of the oldest Kannada associations in America is upbeat about the mega Kannada event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X