ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಎನ್ ಸೀತಾರಾಮ್ ಜೊತೆ ಮುಕ್ತಮುಕ್ತ ಸಂವಾದ

By ವರದಿ: ಶ್ರೀವತ್ಸ ಜೋಶಿ, ಕ್ಯಾಂಪ್: ಅಟ್ಲಾಂಟ
|
Google Oneindia Kannada News

"ರಂಗ ಪ್ರಪಂಚ" ಕಾರ್ಯಕ್ರಮದ ಉತ್ತರಾರ್ಧದಲ್ಲಿ ಟಿ.ಎನ್.ಸೀತಾರಾಮ್ ಅವರೊಡನೆ ಸಂವಾದವೂ ಇತ್ತು. ಅವರ 'ಮುಕ್ತ...' ಸರಣಿಯ ಧಾರಾವಾಹಿಗಳನ್ನು ಅಮೆರಿಕನ್ನಡಿಗರಲ್ಲೂ ಅನೇಕರು ವೀಕ್ಷಿಸುವುದರಿಂದ ಭಾರತದಲ್ಲಿ ನಡೆಯುವ ಸಂವಾದಗಳಂತೆಯೇ ಟಿ.ಎನ್.ಸೀತಾರಾಮ್ ಅವರಿಗೆ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆ. ಜೀವನದ ಸಂಕಟ ಸನ್ನಿವೇಶಗಳನ್ನೇ ಏಕೆ ತೋರಿಸುತ್ತೀರಿ, ಬಾಳಿನಲ್ಲಿ ಬೆಳಕೇ ಇಲ್ಲವೇನೋ ಎಂಬ ನಿರಾಶೆಯನ್ನೇಕೆ ಮೂಡಿಸುತ್ತೀರಿ?'ಎಂಬ ಧಾಟಿಯ ಪ್ರಶ್ನೆಗಳೇ ಹೆಚ್ಚು. ನಾನು ಕಥೆ ಹೇಳುವ ಶೈಲಿಯೇ ಅದು, ಎಲ್ಲವೂ ಸುಂದರವಾಗಿರುವುವನ್ನು ತೋರಿಸುವವರು ಬೇಕಷ್ಟಿದ್ದಾರೆ, ಜೀವನದ ಸಂಘರ್ಷಗಳನ್ನು ತೋರಿಸುವುದು ನನ್ನ ವೈಶಿಷ್ಟ್ಯ ಎಂದು ಸೀತಾರಾಮ್ ನಿಲುವು.

ಭಾನುವಾರ ಸಂಜೆ 'ಮಾಧ್ಯಮ ಮಂಥನ' ಎಂಬೊಂದು ಗೋಷ್ಠಿಯೂ ಇತ್ತು. ಸಮ್ಮೇಳನದ ವಿಶೇಷ ಅತಿಥಿಯಾಗಿ ಬಂದಿರುವ ಪ್ರಜಾವಾಣಿಯ ಹಿರಿಯ ಸಂಪಾದಕ ಪದ್ಮರಾಜ ದಂಡಾವತಿ ಅವರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮ. ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರೆದ ಅನುಭವವಿರುವ ಡುಂಡಿರಾಜ್ ಅವರನ್ನೂ ಗೋಷ್ಠಿಯಲ್ಲಿ ಸೇರಿಸಲಾಗಿತ್ತು. ಭಾಗವಹಿಸಿದ್ದವರ ಸಂಖ್ಯೆ ಹೆಚ್ಚಿಲ್ಲದಿದ್ದರೂ ಆಸಕ್ತ ಪ್ರೇಕ್ಷಕರು ಒಳ್ಳೊಳ್ಳೆಯ ಪ್ರಶ್ನೆಗಳನ್ನು ಕೇಳುವುದರ ಮೂಲಕ ಗೋಷ್ಠಿ ಯಶಸ್ವಿಯಾಯಿತು. "ಈಗಿನ ಮಾಧ್ಯಮಗಳು ಜನಪರವಾಗಿವೆಯೇ ಅಥವಾ ಜನಹಿತವನ್ನು ನಿರ್ಲಕ್ಷಿಸುತ್ತಿವೆಯೇ?" ಎನ್ನುವ ಪ್ರಶ್ನೆಗೆ ಪದ್ಮರಾಜ ದಂಡಾವತಿಯವರು "ಮಾಧ್ಯಮಗಳು ಎಂದಿಗೂ ಜನವಿರೋಧಿಯಾಗಿರುವುದಿಲ್ಲ, ಜನರ ಧ್ವನಿಯಾಗಿಯೇ ಇರುತ್ತವೆ" ಎಂಬ ಉತ್ತರ ನೀಡಿದರೂ ಪ್ರೇಕ್ಷಕರು ಅದನ್ನು ಹಾಗೆಯೇ ಸ್ವೀಕರಿಸಲಿಕ್ಕೆ ಸಿದ್ಧರಿರಲಿಲ್ಲ. ಜನವಿರೋಧಿಯಾಗಿಲ್ಲ ಎಂದಮಾತ್ರಕ್ಕೇ ಜನಪರವಾಗಿವೆ ಎಂದು ಅರ್ಥಮಾಡಿಕೊಳ್ಳುವಂತಿಲ್ಲ ಎಂದು ಪ್ರೇಕ್ಷಕರ ಅಭಿಮತ. ಚಂದ್ರಶೇಖರ ಕಂಬಾರ, ಟಿ.ಎನ್.ಸೀತಾರಾಮ್ ಸಹ ಪ್ರೇಕ್ಷಕರಾಗಿ ಭಾಗವಹಿಸಿದ್ದ ಗೋಷ್ಠಿಯ ಒಂದುಗಂಟೆ ಸಮಯ ಅರ್ಥಪೂರ್ಣವೆನಿಸಿತು.

ಕಾವ್ಯಬಾಗಿನ : ಈ ಸಲದ ಅಕ್ಕ ಸಮ್ಮೇಳನದಲ್ಲಿ ಪ್ರಸ್ತುತಗೊಂಡ ಒಂದು ಹೊಸ ಪ್ರಯೋಗ. ಶ್ರೀನಿವಾಸ ಕಪ್ಪಣ್ಣ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಮತ್ತೊಂದು ಸುಂದರ ಕಾರ್ಯಕ್ರಮ. ಕನ್ನಡದ ಪ್ರಖ್ಯಾತ ಕವಿಗಳ ರಚನೆಗಳು, ಜನಪದ ಗೀತೆಗಳು ಮತ್ತೊಂದು ರಂಗಗೀತೆ- ಹೀಗೆ ಆರು ವಿವಿಧ ಹಾಡುಗಳಿಗೆ ಬೆಂಗಳೂರಿನಲ್ಲಿ ಖ್ಯಾತ ಕೊರಿಯೋಗ್ರಫರ್ ಮಾಯಾ ರಾವ್ ಅವರಿಂದ ನೃತ್ಯ ಸಂಯೋಜಿಸಿ, ಅದರ ವಿಡಿಯೋಗಳನ್ನು ಅಮೆರಿಕದ ಆರು ಬೇರೆಬೇರೆ ಸಂಸ್ಥಾನಗಳ ಕನ್ನಡಕೂಟಗಳಿಗೆ ಕಳಿಸಿ ಅಮೆರಿಕನ್ನಡಿಗರಿಂದ ನೃತ್ಯ ಮಾಡಿಸಿದ ವಿನೂತನ ಕಾರ್ಯಕ್ರಮ. ಭಾನುವಾರ ರಾತ್ರಿ ಪ್ರೈಮ್‌ಟೈಮ್ ಮನರಂಜನೆಯಲ್ಲಿ ಅದು ಚೆನ್ನಾಗಿ ಮೂಡಿಬಂತು.

ಭಾನುವಾರ ಪ್ರೈಮ್‌ಟೈಮ್ ಮನರಂಜನೆಯಲ್ಲಿ ಕೆಲವೊಂದು ಐಟಮ್‌ಗಳು ತೀರಾ ಉದ್ದವಾಗಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವಂತಾಯ್ತು. ಅಟ್ಲಾಂಟದ ಸ್ಥಳೀಯ ಕನ್ನಡಿಗರು ಏರ್ಪಡಿಸಿದ್ದ 'ಶೃಂಗಾರ ಫ್ಯಾಶನ್ ಶೋ'ಅಂತೊಂದು ಕಾರ್ಯಕ್ರಮದಲ್ಲಿ ಫೂಟ್ ಟ್ಯಾಪಿಂಗ್ ಸಂಗೀತಕ್ಕೆ ಥಳಕು ಬಳುಕಿನ ರೂಪದರ್ಶಿಗಳ ವೈಯಾರದ ನಡಿಗೆ, ಅದೇನೋ ಚೆನ್ನಾಗಿಯೇ ಇತ್ತು, ಆದರೆ ಕನ್ನಡದಲ್ಲೊಮ್ಮೆ, ಇಂಗ್ಲಿಷ್‌ನಲ್ಲೊಮ್ಮೆ ಎರಡೆರಡು ಬಾರಿ ನಿರೂಪಣೆ, ಫ್ಯಾಷನ್ ಶೋದಲ್ಲಿ ಭಾಗವಹಿಸಿದವರಿಗಿಂತಲೂ ಆ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಸಮಿತಿಯ ಸದಸ್ಯರ ಪರಿಚಯ ವಿವರಗಳನ್ನೇ ನಿರೂಪಕರು ಪ್ಯಾರಗ್ರಾಫ್‌ಗಟ್ಟಲೆ ಎರಡು ಭಾಷೆಗಳಲ್ಲಿ ಎರಡೆರಡು ಸಲ ಓದತೊಡಗಿದಾಗ "ಸಾಕಪ್ಪಾ ಸಾಕು, ಮುಂದಿನ ಕಾರ್ಯಕ್ರಮ ಶುರು ಮಾಡಿ' ಎಂದು ಸಭೆಯಿಂದ ಒಕ್ಕೊರಲ ದನಿ. ಕೊನೆಗೂ ಅದನ್ನು ಮೊಟಕುಗೊಳಿಸಿ ಮುಂದಿನ ಕಾರ್ಯಕ್ರಮ ಆರಂಭವಾಯಿತು.

English summary
7th AKKA World Kannada Conference, Atlanta, USA. Highlights of day 3 by Srivathsa Joshi. Day 3 witnessed hoards of activities including interaction with TN Seetharam and Padmaraj Dandavati, singing by Kikkeri Krishnamurthy, AKKA Idol. At the end Dr. Ramaswamy, the person behind sammelana, was a satisfied person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X