ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈರಪ್ಪನವರೊಂದಿಗೆ ಒಂದೂವರೆ ತಾಸು

By Staff
|
Google Oneindia Kannada News
Dr. S.L.Bhairappa takes Americans around literary worldವಿಶ್ವಕನ್ನಡ ಸಮ್ಮೇಳನದ ಸಾಹಿತ್ಯಿಕ ಕಾರ್ಯಕ್ರಮಕ್ಕೆ ಕಳೆಬಂದದ್ದು ಬೈರಪ್ಪನವರ ಜತೆ ಒಂದೂವರೆ ತಾಸು ಸಂವಾದದ ನಂತರ.. ಕನ್ನಡದ ಮಧ್ಯಮವರ್ಗದ ಓದುಗವೃಂದವನ್ನು ಬೆಳೆಸಿರುವುದರಲ್ಲಿ ಬೈರಪ್ಪನವರ ಕಾಣಿಕೆಯನ್ನು ಅಲ್ಲಗೆಳೆಯುವಂತಿಲ್ಲ. ಯಾವ ಚಳುವಳಿಗೂ ಗಂಟುಬೀಳದೇ, ಯಾವ ವಿಮರ್ಶಕರನ್ನೂ ಮೆಚ್ಚಿಸಬೇಕೆಂದಾಗಲೀ ಬೈರಪ್ಪನವರು ಕಾದಂಬರಿ ಬರೆಯಲಿಲ್ಲ. ಅವರ ಪ್ರಕಾರ ಅವರ ಸಾಹಿತ್ಯದ ಕೃಷಿ- ಸತ್ಯದ ಅನೇಷಣೆ. ‘ಧರ್ಮಶ್ರೀ’ ಯಿಂದ ‘ಮಂದ್ರ’ದವರೆಗೆ ಸುಮಾರು ನಲವತ್ತು ವರ್ಷಗಳ ಕಾಲ ಸತತವಾಗಿ ಕಾದಂಬರಿ ಬರೆದಿರುವುದು ಬೈರಪ್ಪನವರ ಪ್ರಚಂಡ ಕಥನಶಕ್ತಿಗೆ ಉದಾಹರಣೆ.
ಬಾಲ್ಟಿಮೋರ್ನ ವಿಶ್ವಕನ್ನಡಸಮ್ಮೇಳನದಲ್ಲಿ ಬೈರಪ್ಪನವರ ಜತೆ ನಡೆದ ಸಂವಾದದ ತುಣುಕುಗಳು, ನಿಮಗಾಗಿ, ಅವರದೇ ಮಾತಿನಲ್ಲಿ.
  • ‘ಸಾಕ್ಷಿ’ ನಾನು ಬರೆದಿರುವ ಒಂದು ಅತಿ ಶಕ್ತಿಶಾಲಿ ಕಾದಂಬರಿ. ಇಲ್ಲಿ ನೆಲೆನೆಲೆಗೂ ಸುಳ್ಳು ಕಾಮ, ವಿಜೃಂಭಿಸುತ್ತೆ. ಕೊನೆಗೆ ಮಂಜಯ್ಯ, ಯಮನಿಗೂ ಸುಳ್ಳುಹೇಳುತ್ತಾನೆ. ಸಾಕ್ಷಿಯ ಬಗ್ಗೆ ವ್ಯಾಸರಾಯ ಬಲ್ಲಾಳರು ಒಂದು ವಿಮರ್ಶೆ ಬರೆದಿದ್ದಾರೆ. ಅದನ್ನು ನೀವು ಓದಿ ನೋಡಿ. ಒಬ್ಬ ಕಲಾವಿದನ ಮನಸ್ಸನ್ನು ಅರಿತುಕೊಳ್ಳುವುದಕ್ಕೆ ಇನ್ನೊಬ್ಬ ಕಲಾವಿದನೇ ಬೇಕು ಅನ್ನುವುದಕ್ಕೆ ಬಲ್ಲಾಳರು ಬರೆದಿರುವ ವಿಮರ್ಶೆಯೇ ಸಾಕ್ಷಿ. ಸಾಕ್ಷಿ ಒಂದು ರೀತಿ ಮೆಟ ಫಿಸಿಕಲ್‌ ಕಾದಂಬರಿ. ಪರಮೇಶ್ವರಯ್ಯ ಒಂದು ನಿಜ ಹೇಳಿ, ತನ್ನ ಸಂಸಾರವನ್ನು ಕಾಪಾಡಿಕೊಳ್ಳಬೇಕಿತ್ತಾ ಅನ್ನುವ ಪ್ರಶ್ನೆಗೆ, ಆತ ಒಂದು ನಿಜವಲ್ಲ ಹಲವಾರು ನಿಜಗಳನ್ನು ಹೇಳಬಹುದಾಗಿತ್ತು. ಆದರೆ, ಹೇಳಲಿಲ್ಲ. ಸಮಾಜದ ನೀತಿ ಸುಳ್ಳಿನ ಮೇಲೆ ನಿಂತಿದೆಯೋ ಸತ್ಯದ ಮೇಲೆ ನಿಂತಿದೆಯೋ ಅನ್ನುವುದು ಬಹಳ ಕ್ಲಿಷ್ಟಕರವಾದ ಪ್ರಶ್ನೆ. ಸುಳ್ಳನ್ನು ವಿಜೃಂಭಿಸೋದಕ್ಕಾಗಲೀ, ಸತ್ಯವನ್ನು ಅಂಡರ್‌ಮೈನ್‌ ಮಾಡೋಕ್ಕಾಗಲೀ ಬರೆದಿಲ್ಲ. ನಾನು ಮಂಜಯ್ಯನಂತಹ ಪಾತ್ರಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ.
  • ‘ಮಂದ್ರ’ ಬರೆಯೋದಕ್ಕೆ ನನಗೆ ಎರಡು ಪ್ರೇರಣೆ ಇತ್ತು. ಒಂದು - ಮಂದ್ರದ ಮೊದಲ ಪುಟದಲ್ಲೇ ಇದೆ ನೋಡಿ
  • ಕಲೆ ನಮಗೆ ಸ್ವರ್ಗವನ್ನೇ ತೋರಿಸುತ್ತದೆ ಆದರೆ ಕಲೆಗಾರನ ಬಾಳು ನೋಡಿದರೆ ಹಾಗಲ್ಲ. ನೀವು ರವಿಶಂಕರರ ಆತ್ಮಚರಿತ್ರೆಯನ್ನು ಓದಿ.
  • ನಾನು ಸಂಗೀತವನ್ನೂ ಬಲ್ಲೆ. ಸಂಗೀತಗಾರರನ್ನೂ ಬಲ್ಲೆ. ಬರೀ ಸಂಗೀತವನ್ನು ಹಿಡಕೊಂಡು ಕಥೆ ಬರೆಯೋಕ್ಕಾಗೊಲ್ಲ. ಆದ್ದರಿಂದ ರಕ್ತ, ಮಾಂಸ ಇರೋ ಸಂಗೀತಗಾರನ ಬಗ್ಗೆ ಬರೆದರೆ ಚೆನ್ನಾಗಿರುತ್ತೆ ಅನ್ನಿಸಿತು.
  • ಎರಡನೆಯದು, ನೀತಿ ಅನ್ನೋದು ಜೀವನದ ಹಲವು ಮೌಲ್ಯಗಳಲ್ಲಿ ಒಂದು. ಸಂಗೀತಗಾರನ ಜೀವನದ ಮೂಲಕ ಈ ಜೀವನದ ಮೌಲ್ಯಗಳನ್ನು ಅಳೆಯುವುದಕ್ಕೆ ಪ್ರಯತ್ನಪಟ್ಟೆ.
  • ಸಂಗೀತದ ಭಾಷೆಯಲ್ಲಿಯೇ ಕಾದಂಬರಿ ಬರೆಯಬೇಕು ಅಂದುಕೊಂಡಿದ್ದರಿಂದ ಮಂದ್ರದ ಭಾಷೆಯೂ ಸಂಗೀತಮಯವೇ ಆಗಿದೆ. ಉದಾಹರಣೆಗೆ ‘ಅವನು ತಡವಾಗಿ ಹೋದ’ ಅನ್ನುವುದರ ಬದಲು ‘ಅವನು ವಿಲಂಬಿತವಾಗಿ ಹೋದ’ ಎಂದು ಬರೆದಿದ್ದೇನೆ. ಈ ನಿರ್ಧಾರ ಪ್ರಜ್ಞಾಪೂರ್ವಕವಾದದ್ದು. ಆದರೆ ‘ಗೃಹಭಂಗ’ ಹಾಗಲ್ಲ. ಅದು ಸ್ವಾಭಾವಿಕವಾಗಿ ಬಂದದ್ದು . ‘ಸಂಗೀತ ಕಲೆಯ ಶುದ್ಧ ಪ್ರಕಾರ’ ಆದರೆ, ‘ಸಾಹಿತ್ಯ ಕಲೆಯ ಸಂಕೀರ್ಣವಾದ ಪ್ರಕಾರ’. ಇವೆರಡರ ಮಿಳಿತ ಒಂದು ಸವಾಲು. ನನಗೆ ಈ ಕಾದಂಬರಿ ಬಹಳ ತೃಪ್ತಿ ಕೊಟ್ಟಿದೆ
  • ‘ದಾಟು’ವಿನ ನಂತರ ನನ್ನ ಕಾದಂಬರಿಗಳು realismಗೆ ತಿರುಗಿದವು ಅನ್ನಿಸುತ್ತೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗ ನನಗೆ ಬಹಳಷ್ಟು ಜನ ಗುರುಗಳು ಆದರ್ಶವಾದಿಗಳು- ರಾಜಗೋಪಾಲಯ್ಯಂಗಾರ್ರು, ಕಾಲೇಜಿನಲ್ಲಿ ಯಮುನಾಚಾರ್ಯರು, ಆನಂದ ಕುಮಾರಸ್ವಾಮಿಯವರನ್ನು ನಾನು ಪೂರ್ತ ಓದಿದ್ದೆ. ಸಾಕ್ರಟೀಸ್‌, ಪ್ಲೇಟೋನ ಓದ್ತಾ ಇದ್ದೆ. ಆಗ ನನ್ನ ತಲೆಯಲ್ಲಿ ಐಡಿಯಾಲಜಿ ಅಂದರೆ, ಆದರ್ಶವಾದ ಕೆಲಸಮಾಡ್ತಾ ಇತ್ತು ಅಂತ ಕಾಣುತ್ತೆ. ಆಗ ಬರೆದದ್ದು ‘ದೂರಸರಿದರು’, ‘ಧರ್ಮಶ್ರೀ’, ಇತ್ಯಾದಿ. ‘ದಾಟು’ ಬರೆದ ಮೇಲೆ ನನ್ನ ಅನುಭವಪ್ರಪಂಚ ಜಾಸ್ತಿಯಾಯಿತು. ಓದು ಜಾಸ್ತಿಯಾಯಿತು, ಪ್ರವಾಸ ಮಾಡಿದೆ. ವಾಸ್ತವ ಏನು ಅಂತ ಅರಿತುಕೊಳ್ತಾ ಇದ್ದೆ ಅನ್ನಿಸುತ್ತೆ. ಆದ್ದರಿಂದ ಅದರಂತೆ ನನ್ನ ಕಾದಂಬರಿಯ ವಸ್ತುಗಳೂ ಬದಲಾಗ್ತಾ ಹೋದವು.
  • ಸಾಹಿತ್ಯದಿಂದ ಸಮಾಜಸುಧಾರಣೆ ಆಗೋದು ಎಲ್ಲಾ ಸುಳ್ಳು. ಸಮಾಜ ಸುಧಾರಣೆ, ಬದಲಾವಣೆ ಇವೆಲ್ಲಾ ಮಾರ್ಕ್ಸಿಸ್ಟ್‌ ಪದಪುಂಜಗಳು. ಇವೆಲ್ಲಾ ಬಹಳ ಅಪಾಯಕಾರಿ ಟರ್ಮಿನಾಲಜಿಗಳು. ನಾನು ಇಂತದ್ದನೆಲ್ಲಾ ಎಂಟರ್ಟೈನ್‌ ಮಾಡೋದೇ ಇಲ್ಲ. ಸಾಹಿತ್ಯ ಒಂದು ನೈತಿಕ ಜಾಗೃತಿಯನ್ನು (moral awareness) ಕೊಡುತ್ತೆ, ಅಥವಾ ನಿಮ್ಮ ನೈತಿಕತೆಗೆ ಒಂದು ಹೊಸಾ dimension ಕೊಡುತ್ತೆ. ಕೊಡಬೇಕು. ಆದರೆ, ಹೊಸಾ ಬೆಳಕನ್ನು ಕೊಡಬೇಕಂತಾನೇ ಬರೆಯಲು ಹೋದರೆ, ಅದು ಕಲೆಯಾಗೊಲ್ಲ. ನನ್ನನ್ನು ನಾನು ಶೋಧಿಸಿಕೊಳ್ಳೋ ಈ ವಿನೀತ ಆವಿಷ್ಕಾರದಲ್ಲಿ ಬೆಳಕು ತನ್ನಂತಾನೇ ಹುಟ್ಟಿದರೆ ಅದರಿಂದ ಸಮಾಜದ ಬದಲಾವಣೆಯಾಗಬೇಕೇ ಹೊರತು ಬದಲಾವಣೆ ಮಾಡ್ತ್ತೀನಿ ಅಂತ ಬರೆಯೋಕೆ ಹೋಗಬಾರದು. ಸಾಹಿತ್ಯದ ಗುರಿ ಸತ್ಯವನ್ನು ಅರಸೋದಾಗ್ಬೇಕು. ಈ ಬಗ್ಗೆ ನಾನು ಮೊದಲೇ ಬಹಳ ಹೇಳಿದೀನಿ.
  • ನಾನು ಲೈಂಗಿಕತೆಯನ್ನು ಬೇಕೆಂದು ನನ್ನ ಕಾದಂಬರಿಗಳಲ್ಲಿ ತುರುಕಿಲ್ಲ. ಅದು ಸಂದರ್ಭೋಚಿತ ಅಷ್ಟೇ.
  • Semitic religionಗಳೆಲ್ಲಾ ಹೇಳೋದು ಒಂದೇ. (ಮುಖ್ಯವಾಗಿ ಇಸ್ಲಾಮ್‌ ಮತ್ತು ಕ್ರೈಸ್ತಧರ್ಮ.)- ನಿಮ್ಮ ಧರ್ಮವನ್ನು ಹರಡು ಅಂತ. ಹೇಗೆ ಪ್ರಚಾರ ಮಾಡ್ತೀರಿ, ಮತಾಂತರ ಮಾಡಿಸ್ತೀರಿ ಅನ್ನೋದು ಮುಖ್ಯ ಅಲ್ಲ. ಅಥವಾ ತಂತ್ರಾನೂ ಮುಖ್ಯ ಅಲ್ಲ. ಈ ತಂತ್ರಗಳಲ್ಲಿ ಹಿಂಸೇನೂ ಒಂದು. ಇವತ್ತು ನೋಡಿ ಆಫ್ರಿಕಾ ಉರೀತಿದೆ. ಇಲ್ಲಿ, ಅಮೆರಕಾದಲ್ಲಿ ಇರೋ ಕರಿಯರಿಗೆ ಬಿಳಿಯರ ಮೇಲೆ ಒಂದು ರೀತಿ ಸಿಟ್ಟಿದೆ, ಅಸಮಾಧಾನದ ಹೊಗೆಯಿದೆ. ಈ ಅಸಮಾಧಾನವನ್ನೇ ನೆಪಮಾಡಿಕೊಂಡು ಕರಿಯರನ್ನು ಇಸ್ಲಾಮಿಗೆ ಮತಾಂತರ ಮಾಡಿಕೊಳ್ಳೋ ಪ್ರಚೋದನೆ ಈಗ ನಡೀತಾ ಇಲ್ಲವೇ? ನಾನು ಕುರಾನ್‌ ಅನ್ನು ಓದಿದ್ದೇನೆ. ಅದರಲ್ಲಿಯೂ ಹಿಂಸೆಯ ಪ್ರತಿಪಾದನೆ ಇದೆ. ಅದರೆ, ವೈದಿಕ ಧರ್ಮಗಳ ಸಾರವನ್ನೆಲ್ಲಾ ಬಸವಣ್ಣ ಹೇಗೆ ಒಂದೇ ವಾಕ್ಯದಲ್ಲಿ ಹೇಳಿದ್ದಾನೆ ನೋಡಿ ‘ದಯೆಯೇ ಧರ್ಮದ ಮೂಲವಯ್ಯ’, ರಾಮ ಲಂಕೆಯನ್ನು ಗೆದ್ದಮೇಲೆ ಅಲ್ಲಿ ತಾನು ರಾಜ್ಯವಾಳಲಿಲ್ಲ. ವಿಭೀಷಣನಿಗೆ ಪಟ್ಟ ಕಟ್ಟಿದ. ಆದರೆ, ಬೇರೆ ಮತಗಳು ಇದನ್ನು ಮಾಡಲಿಲ್ಲ. ಮೊಗಲರು ನಮ್ಮ ದೇಶದ ವಿವಿಧ ಕಡೆ ಆಕ್ರಮಣ ಮಾಡಿದ ಮೇಲೆ ಆಯಾ ಪ್ರದೇಶಗಳನ್ನು ಗೆದ್ದಾಗ ಮೊದಲು ಮಾಡಿದ್ದು, ಅಲ್ಲಿ ಅಧಿಪತ್ಯ ಸಾಧಿಸಿದ್ದು ನಂತರ ಅಲ್ಲಿನ ದೇವಸ್ಥಾನಗಳನ್ನು ಒಡೆದದ್ದು. ಅದು ಅವರ ತಪ್ಪಲ್ಲ. ಅದನ್ನು ಅವರ ಧರ್ಮವೇ ಹೇಳುತ್ತೆ. ಈಗ ಆಫ್ಗಾನಿಸ್ತಾನದಲ್ಲಿತ್ತಲ್ಲ ಬಾಮಿಯನ್‌ ಬುದ್ಧನ ಪ್ರತಿಮೆಯನ್ನು, ಅದನ್ನೇ ತೆಗೆದುಕೊಳ್ಳಿ ಅದನ್ನೂ ತಾಲಿಬಾನ್‌ರವರು ಮುರಿದುಬೀಳಿಸಿದರು. ಅದೂ ಅವರ ತಪ್ಪಲ್ಲ. ವಿಗ್ರಹಾರಧನೆ ತಪ್ಪು, ವಿಗ್ರಹಗಳನ್ನು ಒಡೀಬೇಕು ಅಂತ ಅವರ ಧರ್ಮವೇ ಹೇಳುತ್ತೆ. ನಿಮಗೆ ಎರಡು ರೆಫೆರೆನ್ಸ್‌ ಕೊಡ್ತೀನಿ ಓದಿನೋಡಿ, ಸೀತಾರಾಮ್‌ ಗೋಯಲ್‌ರು ಬರೆದ - Hindu Temples What happened to them? ಅನ್ನೋದು ಮತ್ತೊಂದು Samuel Huntington ಬರೆದಿರುವ Clash of civilizations ಅಂತ. ಇವೆರಡನ್ನೂ ಓದಿ ನೋಡಿ, ನಾನೇನು ಹೇಳ್ತೀನಿ ಅಂತ ಗೊತ್ತಾಗುತ್ತೆ.
  • ಭಯೋತ್ಪಾದನೆ ಮೇಲೆ ಬರೀಬೇಕು ಅಂತ ಬಹಳ ಅನ್ನಿಸುತ್ತೆ. ಆದರೆ, ಬರಿಯೋದಕ್ಕೆ ಇನ್ನೂ ಮನಸ್ಸು ಹದವಾಗಿಲ್ಲ ಮತ್ತು ಕಥೆ, ಪಾತ್ರಗಳ ಹೂರಣ ಇನ್ನೂ ಪಕ್ವವಾಗಿಲ್ಲ. ಇಷ್ಟರಮೇಲೆ, ಹಾಗೆ ಬರೆಯೋದು ಸ್ವಲ್ಪ ಅಪಾಯಕಾರಿ ಅಲ್ಲವೇ
  • ಪರ್ವದ ಬಗ್ಗೆ- ಪರ್ವ ಒಂದು ಚರಿತ್ರೆ. ವ್ಯಾಸಭಾರತ ಒಂದು ಪುರಾಣ . ಪರ್ವ ಬರೆದದ್ದು ಒಂದೇ ಪರಿಜಲ್ಲಿ. ಸ್ವಲ್ಪ ಸಂಕಲನಾ ಕಾರ್ಯ ಆಮೇಲೆ ನಡೆಯಿತು. ನನ್ನ ಪ್ರಕಾರ ಮಹಾಭಾರತದ ಪಾತ್ರಗಳೆಲ್ಲಾ Open endedಪಾತ್ರಗಳು. ಆದರೆ, ರಾಮಾಯಣದ ಪಾತ್ರಗಳು ಒಂದು ರೀತಿ ಪರಿಪೂರ್ಣ. ಮಹಾಭಾರತ ಒಂದು ರೀತಿ ಇತಿಹಾಸ. ಅದರೆ, ರಾಮಾಯಣ ಕಾವ್ಯ. ರಾಮಾಯಣವನ್ನು ಮರುಸೃಷ್ಟಿ ಮಾಡೋದಕ್ಕೆ ಹೋದರೆ, ಇಡೀ ಸಂಸ್ಕೃತಿಯನ್ನು ನಾಶಮಾಡಿದ ಹಾಗುತ್ತೆ.ರಾಮಾಯಣದ ಮರುಸೃಷ್ಟಿಯಿಂದ ಆ ಪಾತ್ರಗಳ ಉದಾತ್ತತೆ ಹೆಚ್ಚುತ್ತದೆ ಅಷ್ಟೆ. ಅಷ್ಟಕ್ಕಿಂತ ಹೆಚ್ಚಿನದನ್ನು ಏನೂ ಸಾಧಿಸೊಲ್ಲ ಅನ್ನಿಸುತ್ತೆ.
  • ನನ್ನ ಕಾದಂಬರಿಗಳಲ್ಲಿ ಹೆಣ್ಣು ತುಂಬಾ ಬಲಶಾಲಿ. ಸತ್ಯಭಾಮ, ಚಂದ್ರಿಕೆ, ಮಧುಮಿತಾ, ಕಾತ್ಯಾಯನಿ ಇತರೆ ನೋಡಿ.
  • ಮಹಮದ್‌ ಬರುವ ಮೊದಲು ಇಸ್ಲಾಮಿನಲ್ಲಿಯೂ ಹಲವು ದೇವತೆಗಳು ಇದ್ದರು ಆದರೆ ಮಹಮದ್‌ ಬಂದಮೇಲೆ, ಮಹಮದ್‌ ಒಬ್ಬನೇ ದೇವನಾದ. ಮುಂಚೆ ಹೆಣ್ಣು ತುಂಬಾ ಸ್ವಾವಲಂಬಿಯಾಗಿಯೇ ಇರುತಿದ್ದಳು ಆರ್ಥಿಕವಾಗಿ ಹೆಣ್ಣು ತುಂಬಾ ಫಂಕ್ಷನಲ್‌ ಆಗಿದ್ದಳು.. ಗಂಡಸು ಬೇಸಾಯಕ್ಕೆ ಹೋದಾಗ, ಹೆಂಗಸು ರೊಟ್ಟಿ ತಟ್ಟಿ ಗಂಡನಿಗೆ ತಗಂಡು ಹೋಗಿ ಕೊಟ್ಟು ಒಂದಿಷ್ಟು ಸೌದೆ ಕಡಕೊಂಡು ಬಂದು ಮನೇನ ನಡೆಸದೇ ಇದ್ದಿದ್ದ್ರೆ ಮನೇ ನಡಿಯೋದಕ್ಕೇ ಸಾಧ್ಯವಾಗ್ತಾ ಇರಲಿಲ್ಲ. ಆಗ ಕನ್ಯಾಶುಲ್ಕ ಕೊಟ್ಟು ಹೆಣ್ಣನ್ನ ಮದುವೆ ಮಾಡ್ಕೊತಾ ಇದ್ದರು.ಗಂಡಸರೆಲ್ಲಾ ಯಾವಾಗ ವ್ಯವಸಾಯ ಬಿಟ್ಟು ಇನ್ನಿತರ ಉದ್ಯೋಗಗಳನ್ನು ಶುರುಮಾಡಿದರೋ ಆಗ ಇದ್ದಕ್ಕಿದ್ದ ಹಾಗೆ ಹೆಂಗಸಿನ ಆರ್ಥಿಕ ಶಕ್ತಿ ಮತ್ತು ಸಂಸಾರದ ಆರ್ಥಿಕ ಉಳಿವಿಗೆ ಅವಳ ಅವಶ್ಯಕತೆ ಕಡಿಮೆಯಾಗಿ ಹೋಯಿತು. ನಂತರ ಅವಳ ಅಸ್ಮಿತೆಗೋಸ್ಕರ ಹೊರಗೆ ದುಡಿದು ಆರ್ಥಿಕ ಸ್ವಾತಂತ್ರ್ಯವನ್ನು ಪಡಕೋಬೇಕಾಗಿ ಬಂತು. ಅದರೆ ಈಗ ಮತ್ತೆ ಫಂಕ್ಷನಲ್‌ ಆಗ್ತಾ ಇದಾರೆ.
  • ಒಂದು ಚಳವಳಿಗೆ ಕಟ್ಟಿಬಿಟ್ಟು ಬರೆಯೋದರಲ್ಲಿ ತುಂಬಾ ಸಮಸ್ಯೆಗಳಿದಾವೆ. ಪ್ರತಿಯೊಂದು ಚಳವಳಿಗೂ ಒಬ್ಬೊಬ್ಬ ನಾಯಕನಿರ್ತಾನೆ. ವಕ್ತಾರನಿರ್ತಾನೆ. ಆ ನಾಯಕ ಆ ಚಳವಳಿ ಅಂದರೆ ಹೀಗಿರಬೇಕು ಅಂತ ಒಂದಿಷ್ಟು ಪ್ರಣಾಳಿಕೆಗಳನ್ನು ಹಾಕಿಟ್ಟ ಹಾಗೆ ಒಂದಿಷ್ಟು ನಿಯಮಗಳನ್ನು ಹಾಕಿಟ್ಟಿರ್ತಾನೆ. ಈ ನಿಯಮಗಳ ಚೌಕಟ್ಟಿನಲ್ಲಿಯೇ ಬರೆಯಬೇಕು ಅಂತಾದರೆ, ಆಗ ಅದು ಕಲೆಯಾಗಿ ಉಳಿಯೊಲ್ಲಾ.
  • ಸ್ವಂತ ಅನುಭವಗಳನ್ನು ಮಾತ್ರ ಬರೆದರೆ ಅದು ಕಲೆಯಾಗೊಲ್ಲ. ಗೃಹಭಂಗದ ನಂಜಮ್ಮನ ಪಾತ್ರ ನಮ್ಮಮ್ಮನನ್ನು ಆಧರಿಸಿದ್ದೋ, ಚನ್ನಿಗರಾಯನ ಪಾತ್ರ ನಮ್ಮಪ್ಪನದೋ ಅನ್ನೋದಕ್ಕಿಂತಾ ಆಯಾ ‘ಅನುಭವ’ಗಳನ್ನು ಆಧರಿಸಿ ಬರೆದ ಕಾದಂಬರಿ ಅಂದರೆ ಸೂಕ್ತ ಅನ್ನಿಸುತ್ತೆ.
  • ಪ್ರವಾಸಮಾಡೋದು ನನಗೆ ಬಹಳ ಪ್ರಿಯವಾದದ್ದು. ಅಮೆರಿಕಾಕ್ಕೆ ಬರ್ತಾ ಇರೋದು ಇದು ಹನ್ನೊಂದನೆಯ ಬಾರಿ. ಅಂಟಾರ್ಕ್‌ಟಿಕಾಕ್ಕೂ ಹೋಗಿ ಬಂದಿದೀನಿ. ಪ್ರವಾಸ ನನಗೆ ಒಂದು ವಿಶಿಷ್ಟವಾದ ಅನುಭವವನ್ನು ಕೊಡುತ್ತೆ. ಒಂದು ಉದಾಹರಣೆ ಕೊಡ್ತೀನಿ- ನಾನೊಮ್ಮೆ ಮಧ್ಯಪ್ರಾಚ್ಯಕ್ಕೆ ಹೋಗಿದ್ದೆ. ಅಲ್ಲಿ ನಾನು ಹೋಗಿದ್ದ ಕಾಲಕ್ಕೆ ಹೆಂಗಸರು ಒಬ್ಬರೇ ಹೊರಗೆಲ್ಲಿಯೂ ಓಡಾಡೋ ಹಾಗಿಲ್ಲ. ನಾನೊಂದು ಮ್ಯೂಸಿಯಮ್ಮಿಗೆ ಹೋಗಿದ್ದೆ. ಅಲ್ಲಿ ಒಂದು ಕೋಣೆಯಲ್ಲಿ ನಾನೇನೋ ನೋಡ್ತಾ ಇರಬೇಕಾದರೆ, ಒಂದು ಹೆಂಗಸು ಆ ಕೋಣೆಯೊಳಗೆ ಬಂದುಬಿಟ್ಟಳು. ನನಗೆ ಗಾಬರಿಯಾಗಿ ಹೋಯಿತು. ಒಂಟಿ ಹೆಂಗಸಿನ ಜತೆ ನಾನು ಒಂದುಕಡೆ ಇರೋದನ್ನು ನೋಡಿದರೆ ಆ ದೇಶದಲ್ಲಿ ಇನ್ನೇನು ಅನಾಹುತವಾಗಿಬಿಡುತ್ತೋ ಅಂತ ಹೆದರಿಕೆಯಾಗಿಬಿಟ್ಟಿತು. ಈ ಒಂಟಿ ಹೆಂಗಸನ್ನು ನೋಡಿದರೆ ಹೆದರೋ ಸ್ಥಿತಿ ಇದೆಯಲ್ಲ ಅದರ ಅನುಭವ ನಿಮಗೆ ಆ ದೇಶಕ್ಕೆ ಹೋಗದೇ ಇದ್ದರೆ ಆಗೋ ಸಾಧ್ಯತೆಯೇ ಇಲ್ಲ. ಬೇಕೆಂದರೆ, ಚಂದ್ರಲೋಕಕ್ಕೂ ಹೋಗಿಬರ್ತೀನಿ. ಆದರೆ, ಅಷ್ಟು ದುಡ್ಡಿಲ್ಲ ಮತ್ತೆ ನಾನು ಮೆಡಿಕಲಿ ಅನ್‌ಫಿಟ್‌.
  • ನೀವು ಜ್ಞಾನಪೀಠಕ್ಕೆ ಯಾಕಷ್ಟು ಪ್ರಾಮುಖ್ಯತೆ ಕೊಡ್ತೀರಿ, ಅಂತ ನನಗೆ ಅರ್ಥಾ ಆಗೊಲ್ಲ.
  • ಬೈರಪ್ಪನವರ ಡ್ರೀಮ್‌ಗರ್ಲ್‌- ದಟ್ಸ್‌ಕನ್ನಡ ಡಾಟ್‌ ಕಾಮ್‌ನ ಶ್ಯಾಮ್‌ ಕೇಳಿದ ಪ್ರಶ್ನೆ ಬೈರಪ್ಪನವರಿಗೂ ಕೊಂಚ ಮುಗುಳ್ನಗೆಯನ್ನೂ ತರಿಸಿತ್ತು. ‘ಬೈರಪ್ಪನವರೇ, ಧರ್ಮಶ್ರೀಯಿಂದ ಇಲ್ಲಿನವರೆಗೆ ನಿಮ್ಮ ಕಾದಂಬರಿಗಳನ್ನು ಓದಿ ಒಂದು ಅದ್ಭುತವಾದ ಥೀಸಿಸ್‌ ಅನ್ನು ಒಂದು ಸುಂದರ ಹೆಣ್ಣು ಬರೆದುಕೊಟ್ಟರೆ, ಆ ಹೆಣ್ಣಿನ ಮೇಲೆ ನಿಮಗೆ ಅನುರಾಗ ಉಂಟಾಗುತ್ತದೆಯೇ? ಇದು ವಾಸ್ತವ ಅಂದುಕೊಳ್ಳಿ ಅಥವಾ ಹೈಪೊಥಿಟಿಕಲ್‌ ಅಂದಿಟ್ಟುಕೊಳ್ಳಿ?’ ಅದಕ್ಕೆ ಬೈರಪ್ಪನವರ ಉತ್ತರ ‘ನನ್ನ ಪ್ರಕಾರ ಹೆಣ್ಣು ಶಕ್ತಿಶಾಲಿಯಾಗಿರಬೇಕು, ಆರ್ಥಿಕವಾಗಿಯೂ ಸ್ವಾವಲಂಬಿಯಾಗಿರಬೆಕು, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕೊಡುವಂತವಳಾಗಿರಬೇಕು.’ -‘ಅಂತಾ ಹೆಣ್ಣನ್ನು ನೋಡಿದ್ದೀರಾ?’ ಅಂದದ್ದಕ್ಕೆ ಉತ್ತರ -‘ಕಂಡಿದ್ದೀನಿ’.
ನುಡಿ ಹಬ್ಬದ ಚಿತ್ರಪಟಗಳು :
ಕೂತಲ್ಲಿಯೇ ಸಮ್ಮೇಳನ ಕಾಣಿರಿ!
ಸಡಗರ ಮತ್ತು ಸಂಭ್ರಮ-3ನೇ ದಿನ
ಮೆರವಣಿಗೆಯ ನೋಟ - 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ

ಪೂರ್ವ ಸಿದ್ಧತೆ Be a patronate! Use .in e-mail Post Your Views

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X