ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಕಥೆ : ಪತ್ರಕರ್ತೆ ಸೀತಾಲಕ್ಷ್ಮಿ ಮೇಲೆ ಹಲ್ಲೆ!

By ಪಿ.ಎಸ್.ರಂಗನಾಥ, ಮಸ್ಕತ್
|
Google Oneindia Kannada News

ಛಟೀರ್ ಅಂತ ಕಪಾಳಕ್ಕೆ ಒಂದು ಹೊಡೆತ ಬಿತ್ತು, ಇನ್ನು ಒಂದು ಏಟು ಹಾಕೋದಿಕ್ಕೆ ಕೈ ಎತ್ತಿದ್ದೆ ತಡ ಸುತ್ತಮುತ್ತ ಇದ್ದವರೆಲ್ಲ ಆ ಮನುಷ್ಯನನ್ನು ತಡೆದರು. ಕೆಲವರು ಕೋಪದಿಂದ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದರು. ಅವರಲ್ಲೊಬ್ಬರು ಈ ಪ್ರಕರಣವನ್ನು ಕ್ಯಾಮೆರಾದಿಂದ ವಿಡಿಯೋ ಶೂಟ್ ಮಾಡಿದರು.

ಮತ್ತೆ ಯಾರೋ ಬಂದು "ಹೊಡೆಯೋದನ್ನ ಸಾಕು ಮಾಡ್ರಿ, ನಿಲ್ಲಿಸ್ರಿ. ಹಲೋ ಸಾಕು ಬಿಡಿ, ರೀ ಯಾರಾದ್ರು ಪೊಲೀಸರಿಗೆ ಫೋನ್ ಮಾಡಿ. ಹಲೋ ಸೆಕ್ಯೂರಿಟಿ ಅವರನ್ನು ಪೊಲೀಸರು ಬರುವ ತನಕ ರೂಮಲ್ಲಿ ಕೂಡಿ ಹಾಕಿ. ಸೀತಾಲಕ್ಷ್ಮಿ Are you alright?, ಅಳಬೇಡಿ. ಸಮಾಧಾನ ಮಾಡ್ಕೊಳ್ಳಿ. ಏನಾಯ್ತು, ಏನ್ ಗಲಾಟೆ, ಏನ್ ನಡೀತು?. ಅಳಬೇಡಿ ಪ್ಲೀಸ್. ನೀರು ತಗೊಳ್ಳಿ. ಹೇಳಿ ಏನ್ ನಡೀತು ಅಂತ. ಹಲೋ ಕ್ಯಾಮೆರಾಮನ್ ಬನ್ನಿ ಇವರು ಹೇಳೋದನ್ನ ರೆಕಾರ್ಡ್ ಮಾಡಿ."

ಸೀತಾರವರು ಅಳುತ್ತ, "ರವಿ ಸರ್ ಅವರು ಯಾರೋ ಪ್ರಕಾಶ್ ಅಂತೆ. ಪ್ರಧಾನ ಸಂಪಾದಕರನ್ನು ನೋಡ್ಬೇಕು ಅಂತ ಕೇಳಿದ್ರಂತೆ. ಅವರಿಲ್ಲ ಅಂದಿದ್ದಕ್ಕೆ ನನ್ನತ್ರ ಮಾತಾಡ್ಬೇಕು ಅಂತ ಹೇಳಿದ್ರಂತೆ."

"ಓಹೋ ಹಾಗಾ, ಅವರು ನಿಮಗೆ ಗೊತ್ತ?"

"ಇಲ್ಲ ಸರ್, ಒಳಗೆ ಬಂದು ನಿಮ್ಮ ಟಿವಿಯಲ್ಲಿ ಕಾರ್ಯಕ್ರಮಗಳು ಸರಿಯಾಗಿ ಬರ್ತಿಲ್ಲ, ಅದು ಸರಿಯಿಲ್ಲ, ಇದು ಸರಿಯಿಲ್ಲ, ಆ ಕಾರ್ಯಕ್ರಮ ಹಾಗೆ ಬರಬೇಕಾಗಿತ್ತು, ಹೀಗೆ ಬರಬೇಕಾಗಿತ್ತು. ನಿಮಗೆ ಸಾಮಾಜಿಕ ಕಾಳಜಿಯಿಲ್ಲ. ಅದು ಇದು ಅಂತ ಬಡ ಬಡಾಯಿಸುತ್ತ, ಕೋಪ ಮಾಡ್ಕೊಂಡು ನನ್ನ ಕಪಾಳಕ್ಕೆ ಹೊಡೆದರು".

Attack on TV journalist : A Kannada short story

"ಸರಿ, ಸಮಧಾನ ಮಾಡ್ಕೊಳ್ಳಿ. ನಮ್ಮ ಈಗಿನ ಜನಕ್ಕೆ ತಾಳ್ಮೆ ಅನ್ನೋದೇ ಮರೆತು ಹೋಗುಬಿಟ್ಟಿದೆ. ಹೇಗೆ ನಡೆದುಕೊಳ್ಳಬೇಕು ಹೇಗೆ ಮಾತಾಡಬೇಕು ಅಂತ ಮರೆತು ಹೋಗಿಬಿಟ್ಟಿದೆ. ಹೋಗ್ಲಿಬಿಡಿ. ಪೊಲೀಸರು ಬರ್ತಾರೆ ವಿಚಾರಿಸ್ಕೊತ್ತಾರೆ. ಯಾರ್ರಿ ಅಲ್ಲಿ, ಇಮ್ಮಿಡಿಯೇಟ್ ಆಗಿ ಒಂದು ಪೇನೆಲ್ ಡಿಸ್ಕಶನ್ ಅರೇಂಜ್ ಮಾಡಿ. ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಮೇಲೆ ದೌರ್ಜನ್ಯ ಅಂತ ಬ್ರೇಕಿಂಗ್ ನ್ಯೂಸ್ ಅನೌನ್ಸ್ ಮಾಡಿ. ಸಿಸಿಟಿವಿ ಫೂಟೇಜ್ ಎಡಿಟ್ ಮಾಡಿ ಹಾಕಿ. ಜತೆಗೆ ಬೇರೆ ಚಾನೆಲ್ ಗಳಿಗೆ ಇನ್ ಫಾರ್ಮ್ ಮಾಡಿ".

ಸ್ವಲ್ಪ ಹೊತ್ತಿನ ನಂತರ ಪೊಲೀಸರು ಬಂದು, ಒದೆ ಕೊಟ್ಟ ಪ್ರಕಾಶ್ ರವರನ್ನು ವಿಚಾರಣೆಗೆ ಅಂತ ಠಾಣೆಗೆ ಕರೆದು ಕೊಂಡು ಹೋದರು. ಸೀತಾಲಕ್ಷ್ಮಿ ಸಹ ಸ್ಟೇಶನ್ ಗೆ ಕಂಪ್ಲೇಂಟ್ ಕೊಡಲು ಹೋದರು. ವಿಚಾರಣೆಯ ಸಮಯದಲ್ಲಿ ತನ್ನೆಲ್ಲ ವಿವರವನ್ನು ಕೊಟ್ಟ ಪ್ರಕಾಶ್. ಆದರೆ ಯಾಕೆ ಹೊಡೆದಿದ್ದು ಅಂತ ಮಾತ್ರ ಹೇಳಲಿಲ್ಲ. ಹೊಡೆದಿದ್ದು ನಿಜ ಆದರೆ ಯಾಕೆ ಅಂತ ಹೇಳಲ್ಲ ಅಂತ ಹಠ ಹಿಡಿದ.

ಪ್ರಕರಣದ ವಿಷಯ ಗೊತ್ತಾದ ನಂತರ ಮನೆಯವರು ಲಾಯರ್ ಜತೆಯಲ್ಲಿ ಬಂದರು. ಆದರೆ, ಅಂದು ಭಾನುವಾರ ಆಗಿದ್ದರಿಂದ ಜಾಮೀನಿಗೆ ಪ್ರಯತ್ನಿಸಿ ಫಲವಿಲ್ಲ ಎಂದು ತಿಳಿಸಿ, ಪ್ರಕರಣ ಸಣ್ಣದಾದ್ದರಿಂದ ರಾಜಿ ಮಾಡಿಸಲು ಪ್ರಯತ್ನಿಸಿದರು. ಆದರೆ ಪ್ರಕಾಶ್ ಒಪ್ಪಲಿಲ್ಲ, ಇಂದು ಲಾಕಪ್ ನಲ್ಲಿ ಬೇಕಾದರೆ ಇರ್ತಿನಿ, ನಾಳೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಜಾಮಿನು ತಗೊಂಡ್ರೆ ಆಯಿತು ಅಂತ ಹೇಳಿದರು. ಹೆಂಡತಿ ಮತ್ತು ಮಗನಿಗೆ ಕಿವಿಯಲ್ಲಿ ಅದೇನೋ ಹೇಳಿದರು.

ಠಾಣೆಯ ಇನ್ಸ್ ಪೆಕ್ಟರ್ ಗೆ ಪ್ರಕರಣ ಅಂದುಕೊಂಡಷ್ಟು ಸರಳವಾಗಿಲ್ಲ ಅಂತ ಮನವರಿಕೆಯಾಯಿತು. ತಕ್ಷಣ ಮೇಲಧಿಕಾರಿಗೆ ಕರೆ ಮಾಡಿ "ಮಾದ್ಯಮದ ಸಿಬ್ಬಂದಿ ಮೇಲೆ ಹಲ್ಲೆ" ಪ್ರಕರಣ ಕುರಿತು ವಿಷಯ ತಿಳಿಸಿದರು. ಪ್ರಕಾಶ್ ರ ಪೂರ್ವಾಪರ ವಿಚಾರಿಸಲು, ಕೆಲ ಸಿಬ್ಬಂದಿಗಳನ್ನು ಕೆಲಸ ಮಾಡುವ ಕಛೇರಿಗೆ ಹಾಗೂ ಸ್ನೇಹಿತರ ಮನೆಗಳಿಗೆ ಕಳುಹಿಸಿದರು.

ಘಟನೆಗೆ ಕಾರಣ ತಿಳಿಯಲು ಟಿವಿಯ ಪ್ರಧಾನ ಸಂಪಾದಕರು, ಸಹ ಸಂಪಾದಕರು, ನಿರ್ವಹಣ ಅಧಿಕಾರಿ ಮತ್ತಿತರು ಇನ್ಸ್ ಪೆಕ್ಟರ್ ನನ್ನು ಕಾಣಲು ಬಂದರು. ಅಷ್ಟರಲ್ಲೆ, ಪೊಲೀಸ್ ಸಿಬ್ಬಂದಿ ಸ್ವಲ್ಪ ಮಾಹಿತಿ ಕಲೆ ಹಾಕಿದ್ದರು. ಪ್ರಕಾಶ್ ಒಬ್ಬ ಮಧ್ಯಮ ವರ್ಗದ ಮನುಷ್ಯ, ಖಾಸಗಿ ಕಂಪನಿಯಲ್ಲಿ ಕೆಲಸ, ಚಿಕ್ಕ ಸಂಸಾರ, ಸ್ನೇಹಿತರು ಮತ್ತು ಕಛೇರಿಯಲ್ಲಿ ಒಳ್ಳೆಯ ಹೆಸರಿದೆ. ಹಾಗೂ ಪೊಲೀಸ್ ರೆಕಾರ್ಡ್ ನಲ್ಲಿ ಯಾವುದೇ ರೀತಿಯ ದಾಖಲೆಗಳು ಇಲ್ಲ. ಇದೇ ವಿಷಯವನ್ನು ಬಂದ ಮಾಧ್ಯಮದವರಿಗೆ ಇನ್ಸ್ ಪೆಕ್ಟರ್ ತಿಳಿಸಿದರು.

ಮತ್ತೆ ಪ್ರಕಾಶ್ ನ ವಿಚಾರಣೆಗೆ ಪೊಲೀಸರು ಮುಂದಾದರು, ಕೇಳಿದ ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುತಿದ್ದ ಪ್ರಕಾಶ್, ಪ್ರಕರಣದ ಕುರಿತು ಮಾತ್ರ ಏನನ್ನು ಹೇಳಲಿಲ್ಲ. ನ್ಯಾಯಾಲಯದಲ್ಲಿ ಹೇಳ್ತೀನಿ ಅಂತ ಸುಮ್ಮನಾಗುತಿದ್ದ.

ಎಲ್ಲ ಟಿವಿ ನ್ಯೂಸ್ ಗಳಲ್ಲಿ ಇದೇ ವಿಷಯ ಪ್ರಸಾರ ಹಾಗೂ ಚರ್ಚೆ ನಡೀತಾ ಇತ್ತು. ಒಂದೇ ದಿನದಲ್ಲಿ ಪ್ರಕಾಶ್ ತನ್ನ ಈ ಪ್ರಕರಣದಿಂದ ಕುಖ್ಯಾತನಾಗಿದ್ದ. ಮಾಧ್ಯಮಗಳು ಒಂದಲ್ಲ ಒಂದು ತಪ್ಪನ್ನು ಕಂಡುಹಿಡಿಯಲು ಅವನ ಪೂರ್ವಾಪರ ವಿಚಾರಿಸಲು ಹಿಂದೆ ಬೀಳಲಿಲ್ಲ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಪ್ರಕಾಶನ ಸುದ್ದಿ ಟಿವಿಯಲ್ಲಿ ಪ್ರಸಾರವಾಗುತಿತ್ತು. ಬೇರೆಲ್ಲ ಸುದ್ದಿ ಅಂದು ಟಿವಿ ಪರದೆಯಿಂದ ಮರೆಯಾಗಿತ್ತು.

ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಮಂತ್ರಿ ಮಹೋದಯರು ಯಾರೇ ಪ್ರಭಾವಿಯಾಗಿದ್ದರು ಎಲ್ಲರಿಗೂ ಖಡಕ್ ಆಗಿ ಪ್ರಶ್ನೆ ಕೇಳುತಿದ್ದ ಸೀತಾಲಕ್ಷ್ಮಿಯ ಮೇಲೆ ಹಲ್ಲೆ ಎಂದು ಟಿವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಯಾವಾಗ ಶುರುವಾಯಿತೊ, ಜನ ಮಾನಸದಲ್ಲಿ ಒಂಥರ ಕುತೂಹಲ ಸೀತಮ್ಮನಿಗೆ ಹೊಡೆದಿದ್ದು ಯಾರು ಅಂತ?

***
ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲು ಪ್ರಕಾಶ್ ಸಿದ್ದವಾಗಲು ತಿಳಿಸಿದರು. ಹರಿದು ಹೋಗಿದ್ದ ಬಟ್ಟೆ ಬದಲಾಯಿಸಲು ಬಟ್ಟೆ ಕೊಟ್ಟರು ಆದರೆ ಅದನ್ನು ನಿರಾಕರಿಸಿದ ಪ್ರಕಾಶ್ ನಾನು ಹೇಗಿದ್ದೇನೊ ಹಾಗೆಯೆ ಬರುತ್ತೇನೆ. ದಯವಿಟ್ಟು ಒತ್ತಾಯ ಮಾಡಬೇಡಿ ಅಂತ ವಿನಂತಿ ಮಾಡಿದ. ಪೊಲೀಸ್ ಇನ್ಸ್ ಪೆಕ್ಟರ್ ಯಾವುದಕ್ಕೂ ಇರಲಿ ಎಂಬಂತೆ ಒಂದು ಪತ್ರಕ್ಕೆ ಸಹಿಯನ್ನು ಮಾಡಿಸಿಕೊಂಡರು ಅದರಲ್ಲಿ ವಿಚಾರಣೆಯ ನೆಪದಲ್ಲಿ ಪೊಲೀಸರು ಯಾವುದೇ ಹಲ್ಲೆ ನಡೆಸಿಲ್ಲ ಅಂತ ಬರೆದಿದ್ದರು. ಕೋರಿಕೆಯ ಮೇರೆಗೆ ಪೊಲೀಸರು ಹಾಗೆಯೆ ನ್ಯಾಯಾಧೀಶರ ಬಳಿಗೆ ಕೊಂಡೊಯ್ದರು.

ರಕ್ತ ಸಿಕ್ತ ಬಟ್ಟೆ, ಮುಖದ ಮೇಲೆ ಗಾಯ, ಹರಿದು ಹೋಗಿದ್ದ ಅಂಗಿ, ಪ್ರಕಾಶನ ಸ್ಥಿತಿಯನ್ನು ನೋಡಿದ ನ್ಯಾಯಾಧೀಶರು ಪೊಲೀಸರ ಕಡೆಗೆ ಪ್ರಶ್ನಾರ್ಥಕ ರೀತಿಯಲ್ಲಿ ನೋಡಿದರು. ಅದಕ್ಕೆ ಪೊಲೀಸರು ನಿನ್ನೆ ನಡೆದ ಘಟನೆಯ ವಿವರ ನೀಡಿದರು. ಜತೆಗೆ ಪ್ರಕಾಶ ಸಹಿ ಮಾಡಿದ ಪತ್ರವನ್ನು ಸಹ ತೋರಿಸಿದರು. ಘಟನೆಯ ವಿವರವನ್ನು ಅರ್ಥೈಸಿಕೊಂಡ ನ್ಯಾಯದೀಶರು ವಿಚಾರಣೆಗೆ ಅನುಮತಿ ನೀಡಿದರು.

ಪಬ್ಲಿಕ್ ಪ್ರಾಸಿಕ್ಯೂಟರ್ ಘಟನೆಯ ವಿವರ ನೀಡಿದರು, ಸೀತಾಲಕ್ಷ್ಮಿ ತನ್ನ ಕಪಾಳಕ್ಕೆ ಹೊಡೆದಿದ್ದನ್ನು ಹೇಳಿದಳು. ಪ್ರಕರಣಕ್ಕೆ ಸಾಕ್ಷಿಯಾಗಿದ್ದ ಕೆಲ ಮಾಧ್ಯಮ ಸಿಬ್ಬಂದಿಗಳು ತಮ್ಮ ಮುಂದೆ ಹೊಡೆದಿದ್ದು ನಿಜ ಅದನ್ನು ನಾವು ನೋಡಿದ್ದೇವೆ ಹಾಗು ಮತ್ತೆ ಹೊಡೆಯುವುದನ್ನು ಸಹ ತಡೆದಿದ್ದೇವೆ ಎಂದು ಹೇಳಿದರು.

ನಂತರ ನ್ಯಾಯಾದೀಶರು, ಯಾಕಪ್ಪಾ ಹೊಡೆದಿದ್ದು, ಏನು ಸಮಸ್ಯೆ? ಎಂದು ಕೇಳಿದರು.

ಕೆಲ ಕ್ಷಣದ ನಂತರ ಪ್ರಕಾಶ್ "ಸ್ವಾಮಿ, ಇತ್ತೀಚಿನ ದಿನಗಳಲ್ಲಿ ಟಿವಿಗಳು ಅದರಲ್ಲೂ ಸುದ್ದಿ ವಾಹಿನಿಗಳು ಟಿಆರ್‌ಪಿಗೋಸ್ಕರ ತಮಗೆ ಬೇಕಾದದ್ದನ್ನು ಜನರ ಮೇಲೆ ಹೇರಿಕೆ ಮಾಡುವ ಪ್ರವೃತ್ತಿ ಜಾಸ್ತಿಯಾಗ್ತಾಯಿದೆ. ಜನರಿಗೆ ಏನು ಬೇಕು, ಸಮಾಜ ಸುಧಾರಣೆಗೆ ಏನು ಬೇಕು ಅಂತ ಗಮನ ಹರಿಸದೆ, ಒಂದು ಸುದ್ದಿಯನ್ನು ಎರಡು ಮೂರು ದಿನ ಸತತವಾಗಿ ಪ್ರಸಾರ ಮಾಡ್ತಾಯಿರ್ತಾರೆ. ಜತೆಗೆ ಪೇನಲ್ ಡಿಸ್ಕಶನ್, ಘಟನಾ ಸ್ಥಳದಿಂದ ನೇರ ಪ್ರಸಾರ, ರಿಪೋರ್ಟರ್ ನಿಂದ ನೇರ ವರದಿ, ಅದೂ ಇದೂ ಅಂತ ಸುದ್ದಿಯನ್ನು ವಾಕರಿಕೆ ಬರಿಸುವ ಮಟ್ಟಿಗೆ ಪ್ರಸಾರ ಮಾಡ್ತಾರಲ್ಲ ಇವರು, ಅದನ್ನು ಪ್ರಶ್ನಿಸಲು ಇವರ ಕಛೇರಿಗೆ ಹೋಗಿದ್ದೆ, ಅಲ್ಲಿ ಬೇರೆ ಯಾರೂ ಸೀನಿಯರ್ಸ್ ಇರಲಿಲ್ಲ. ಇದರ ಬಗ್ಗೆ ಇವರಲ್ಲಿ ವಿಚಾರಿಸಿದ್ದಕ್ಕೆ ನಿಮಗೆ ಟಿವಿ ನೋಡಿ ಅಂತ ಹೇಳ್ದೋರು ಯಾರು, ಇಷ್ಟ ಇದ್ದರೆ ನೋಡಿ ಇಲ್ಲದೆ ಇದ್ರೆ ಟಿವಿ ಆಫ್ ಮಾಡಿಕೊಂಡು ಮಲಕ್ಕೊಳ್ಳಿ ಅಂತ ಉದ್ದಟತನದ ಉತ್ತರ ಕೊಡ್ತಾರಲ್ಲ ಸ್ವಾಮಿ ಇವರು. ಪ್ರಸಾರದ ಸಂದರ್ಭದಲ್ಲಿ ಪ್ರಿಯ ವೀಕ್ಷಕರೆ, ಆತ್ಮೀಯ ವೀಕ್ಷಕರೆ ಈ ಕಾರ್ಯಕ್ರಮವನ್ನು ಆ ಕಾರ್ಯಕ್ರಮವನ್ನ ತಪ್ಪದೆ ನೋಡಿ ಅಂತ ಹೇಳ್ತಾರೆ. ವಿಚಾರಿಸೋದಿಕ್ಕೆ ಬಂದಾಗ ಇಂಥ ಉದ್ದಟತನದ ಉತ್ತರ ಕೊಡ್ತಾರೆ. ಇದು ಸರೀನಾ ಮಹಾ ಸ್ವಾಮಿ?

ಇವರ ವರ್ತನೆಗಳು ಇತ್ತೀಚಿಗೆ ಅತಿಯಾಗಿ ಬಿಟ್ಟಿವೆ. ನೀವೆ ಗಮನಿಸಿದ ಹಾಗೆ ವೀರೇಂದ್ರ ಅನ್ನುವ ಅಧಿಕಾರಿ ಯುವತಿಯ ಫೋಟೋ ತೆಗೆದ ಪ್ರಕರಣ. ನಟಿ ವಿದ್ಯಾ ಮತ್ತು ಸಚಿವರ ಪುತ್ರರ ಕುರಿತಾದ ಪ್ರೇಮ ಪ್ರಕರಣ, ಸ್ವಾಮಿ ಅಮಿತಾನಂದ ಕುರಿತ ಸೆಕ್ಸ್ ಪುರಾಣ, ಸೀತಾಪುರ ಮಠದ ಗುರುಗಳ ಕುರಿತು ಅತ್ಯಾಚಾರ ಆರೋಪ, ಕೆಲ ವರ್ಷಗಳ ಹಿಂದೆ ನಡೆದ ನಟ ಅಭಿ ಹೆಂಡತಿ ಮೇಲೆ ಹಲ್ಲೆ ಪ್ರಕರಣ, ನಟ ರವೀಂದ್ರರವರು ಆಸ್ಪತ್ರೆ ದಾಖಲಾಗಿದ್ದು, ಅದ್ಯಾವಳೋ ಮೀನಾಕ್ಷಿ ಅನ್ನೋ ನಟಿಯ ಸೆಕ್ಸ್ ಬ್ಲಾಕ್ ಮೇಲ್, ಮಾಜಿ ಸಚಿವ ಪ್ರೇಮದಾಸ್ ರ ಪ್ರೇಮ ಪ್ರಕರಣ, ಕೆಲ ವರ್ಷಗಳ ಹಿಂದೆ ಶಾಸಕರೊಬ್ಬರ ಪತ್ನಿ ಕಾಣೆಯಾಗಿದ್ದರು. ಇವರ ಅತಿರೇಕದ ವರ್ತನೆಯಿಂದ ಆಯಮ್ಮ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬಂತು.

ಇನ್ನು ಸೆಕ್ಸ್ ಕುರಿತಾದ ಹಸಿ ಬಿಸಿ ದೃಶ್ಯಗಳ ಸತತ ಪ್ರಸಾರ ಅದು ಅಮಿತಾನಂದ ಸ್ವಾಮಿಯವರೆದೆ ಇರಬಹುದು, ಕಾಮಿ ಜ್ಯೋತಿಷಿದೆ ಆಗಲಿ, ವಿಧಾನಸಭೆಯಲ್ಲಿ ಶಾಸಕರು ನೋಡಿದ ದೃಶ್ಯಗಳ ಸತತ ಮರುಪ್ರಸಾರ. ಇದೆಲ್ಲ ಸರಿ, ಯಾವುದೋ ಒಂದು ಉದ್ದೇಶಕ್ಕಾಗಿ ಯಾರೋ ಪ್ರಖ್ಯಾತ ಲೇಖಕರೊಬ್ಬರು ಏನೋ ಒಂದು ಹೇಳಿಕೆ ಕೊಟ್ಟು ಬಿಡ್ತಾರೆ, ಅದು ಧರ್ಮಕ್ಕೆ ಸಂಬಂಧಿಸಿದ್ದೊ ಅಥವ ಬೇರೆ ಇನ್ಯಾವುದೋ, ಇಂತಹ ವಿವಾದ ವಿಷಯಗಳನ್ನ ಅಲ್ಲಿಗೆ ಬಿಟ್ಟು ಬಿಟ್ರೆ ಸಮಸ್ಯೆಗಳು ಉದ್ಭವ ವಾಗಲ್ಲ. ಆದರೆ ಇವರು ಅದನ್ನ ಮರುಪ್ರಸಾರ ಮಾಡಿ ಮಾಡಿ ದೊಡ್ಡ ಮಟ್ಟಿನ ವಿವಾದ ಎಬ್ಬಿಸೋಕೆ ಪ್ರಯತ್ನಿಸ್ತಾರೆ ನೋಡಿ. ಬೇರೆ ವಿಷಯ ಸಿಗುವತನಕ ಆ ವಿವಾದ ತಣ್ಣಗಾಗೋದಿಕ್ಕೆ ಬಿಡೋದಿಲ್ಲ.

ಸಚಿವ ರವಿಕುಮಾರ್ ಅವರ ನಿವಾಸಕ್ಕೆ ಸ್ಟ್ರಿಂಗ್ ಆಪರೇಷನ್‌ಗೆ ಹೋಗಿದ್ದ ಇವರಿಗೆ ಅವರ ಬೆಂಬಲಿಗರು ಹಲ್ಲೆ ಮಾಡಿದರು ಅಂತ ಒಂದೆರಡು ದಿನ ಟಿವಿಯಲ್ಲಿ ಇದೇ ರೋಧನೆ, ಜತೆಗೆ ನಾಡಿನಾದ್ಯಂತ ಇವರ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ಜರುಗುವುದಕ್ಕೆ ಸಹ ಕಾರಣ ವಾದರು. ಮಾಜಿ ಸಚಿವ ಉಮೇಶ್ ಕುಮಾರ್ ಹೀಗೆ ಚಾನೆಲ್ ಒಂದರಲ್ಲಿ ಮಾತುಕತೆಗೆ ಬಂದಾಗ, ವಾಗ್ವಾದ ನಡೆಯಿತು. ಆದರೆ ಇವರು ಮಾಜಿ ಸಚಿವ ಹಾಗೂ ಬೆಂಬಲಿಗರಿಂದ ಟಿವಿ ಕಛೇರಿ ಮೇಲೆ ದಾಳಿ ಅಂತ ಸತತ ಪ್ರಸಾರ ಮಾಡಿದ್ರು. ಇದೆಲ್ಲ ಒಂದು ಕಡೆ ಆದರೆ, ಮನೆ ಮಂದಿಯೆಲ್ಲ ಕುಳಿತುಕೊಂಡು ನೋಡುವ ಹೊತ್ತಿನಲ್ಲಿ, ಹೊಟ್ಟೆಪಾಡಿಗೋಸ್ಕರ ನೀಲಿ ಚಿತ್ರಗಳಲ್ಲಿ ನಟಿಸಿದ್ದ ನಟಿಯ ಕುರಿತು ಇಲ್ಲವೆ ಅರೆ ಬೆತ್ತಲೆ ಮೈಯಲ್ಲಿ ಕಾಣಿಸಿಕೊಳ್ಳುವ ನಟಿಯರ ಕುರಿತು 30 ನಿಮಿಷ ಕಾರ್ಯಕ್ರಮ ನಮಗೆ ಬೇಕಾ? ನಿಜ ಹೇಳಿ ಸ್ವಾಮಿ, ಇಂತಹ ಸುದ್ದಿಗಳಿಂದ ನಮ್ಮ ನಾಗರಿಕ ಸಮಾಜಕ್ಕೆ ಏನು ಸಂದೇಶ ಸಿಗುತ್ತೆ?

ಇದೆಲ್ಲ ಯಾರ ಲಾಭಕ್ಕಾಗಿ ಸಾರ್? ಹೀಗೆ ಯಾವುದೇ ಸುದ್ದಿ ಇರಬಹುದು ಘಂಟೆಗಟ್ಟಲೆ ದಿನಗಟ್ಟಲೆ ಸುದ್ದಿ ಪ್ರಸಾರ ಹಾಗೂ ಅದರ ಬಗ್ಗೆ ಚರ್ಚೆ, ಯಾವಾಗ ಟಿವಿ ಆನ್ ಮಾಡಿದರೂ ಒಂದಲ್ಲ ಒಂದು ಸುದ್ದಿಯ ಜಗ್ಗಾಟ. ಮಾಧ್ಯಮದವರು ನಿಶ್ಪಕ್ಷಪಾತಿಯಾಗಿ ವರದಿಗಳನ್ನು ಪ್ರಕಟಿಸಬೇಕು ಅಂತ ಬಹಳ ಜನ ಬಯಸುತ್ತಾರೆ, ಅದರೆ ಕೆಲವು ಪೂರ್ವಾಗ್ರಹ ಪೀಡಿತ ಸುದ್ದಿ ಸಂಪಾದಕರು, ತಮ್ಮ ಸೈದ್ದಾಂತಿಕ ವಿರೋಧಿಗಳನ್ನು ಹಣಿಯಲು, ಅದಕ್ಕೆ ಅಂತ ಕಾರ್ಯಕ್ರಮ ನಿರೂಪಿಸುತ್ತಾರೆ. ಸುದ್ದಿಗಳು ಸಹ ಹಾಗೆ ಬರುತ್ತವೆ. ಆ ಕಾರ್ಯಕ್ರಮವನ್ನು 5 ನಿಮಿ-10 ನಿಮಿಷ ನೋಡಿದರೆ ಸಾಕು, ಕಾರ್ಯಕ್ರಮ ಯಾವ ಪಕ್ಷದ ಪರ ಮತ್ತು ವಿರೋಧ ಎಂದು. ಇನ್ನು ಕೆಲ ಪತ್ರಕರ್ತರು, ಸಂಪಾದಕರು ಮತ್ತಿತರ ಮಾಧ್ಯಮದ ಮಂದಿ ಯಾವ ಸಿದ್ದಾಂತದವರು ಅನ್ನೋದನ್ನು ಗುರುತಿಸಲು ಸಾಮಾಜಿಕ ತಾಣಗಳಲ್ಲಿ ಇವರು ಬರೆದು ಹಾಕುವ ಪೋಸ್ಟ್ ಗಳು ಸಾಕ್ಷಿ.

ಕೆಲವರು ಹೇಳೋದನ್ನ ಕೇಳಿದ್ದೀನಿ, ಸರ್ಕಾರ ಬಿಳಿಸೋದಿಕ್ಕೆ ಅಥವಾ ಮಂತ್ರಿ ಸ್ಥಾನ ಕಳೆಯೋದಿಕ್ಕೆ ಅಥವ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿಸೋಕೆ ಡೀಲ್ ಬೇರೆ ನಡೆಯುತ್ತಂತೆ. ದೃಶ್ಯ ಮಾಧ್ಯಮ ಜನರನ್ನು ಬಹು ಬೇಗ ತಲುಪುತ್ತೆ ಅದನ್ನು ಗಮನದಲ್ಲಿಟ್ಟುಕೊಂಡು ಇವರು ವ್ಯಾಪಾರ ಮಾಡ್ತಾಯಿದ್ದಾರೆ. ರಾಜಕಾರಣಿಗಳ ಪಕ್ಷಾಂತರ ಬಗ್ಗೆ ಮಾತನಾಡುವ ಇವರು, ಮಾಧ್ಯಮದಲ್ಲಿ ಇಂದು ಬಹುತೇಕ ಜನರು ಹೆಚ್ಚಿನ ಸಂಬಳಕ್ಕಾಗಿ ಒಂದು ಚಾನೆಲ್ ನಿಂದ ಇನ್ನೊಂದು ಚಾನೆಲ್ ಗೆ ಹೋಗ್ತಾರೆ. ರಾಜಕಾರಣಿಗಳಾದರು ಸಿದ್ಧಾಂತ, ಅದು ಇದು ಅಂತ ಏನೇನೊ ಕಾರಣ ಹೇಳಿ ಅಧಿಕಾರಕ್ಕಾಗಿ ಪಕ್ಷಾಂತರ ಮಾಡ್ತಾರೆ, ಆದರೆ ನಮ್ಮ ಮಾಧ್ಯಮದ ಜನ ಕನಿಷ್ಟ ಪಕ್ಷ ಚಾನೆಲ್ ಬದಲಾಯಿಸಲು ಕಾರಣವನ್ನಾದರು ಕೊಡ್ತಾರಾ? ಇದ್ಯಾವ ಸೀಮೆ ನೈತಿಕತೆ ಸಾರ್?

ನಾವು ಕೆಲಸದಿಂದ ರಾತ್ರಿ ಮನೆಗೆ ಬರ್ತಿವಿ, ಒಂದರ್ಧ ಘಂಟೆ ಪ್ರೈಮ್ ಟೈಮ್ ನಲ್ಲಿ ಎಲ್ಲ ಸುದ್ದಿ ನೋಡೋಣ ಅಂದ್ರೆ ಇವರಿಗೆ ಟಿಆರ್ಪಿ ಬೇಕಾಗಿರೋ ಸುದ್ದಿ ಹಾಕಿ ಪ್ರಸಾರ ಮಾಡ್ತಿರ್ತಾರೆ. ಬೇರೆ ಭಾಷೆ ಚಿತ್ರಗಳ ಕುರಿತು ಇಲ್ಲವೇ ಆ ಚಿತ್ರ ನಟರ ಕುರಿತು ಸುದ್ದಿ ಪ್ರಸಾರ ಇವರಿಗೆಲ್ಲ ಅನೇಕ ಬಾರಿ ಪತ್ರ ಬರೆದಿದ್ದು, ಇಮೇಲ್ ಮಾಡಿದ್ದು ಹಾಗು ಕರೆ ಮಾಡಿ ತಿಳಿಸಿದ್ದು ಆಯಿತು. ವೀಕ್ಷಕರ ನಾಡಿ ಮಿಡಿತ ಕಂಡು ಹಿಡಿಯುವ ಪ್ರಯತ್ನ ಎಂದೂ ಮಾಡಿಲ್ಲ. ಹಾಡಿದ್ದೆ ಹಾಡು ಕಿಸುಬಾಯಿದಾಸ ಅಂದಂಗೆ ಆ ಚಾಳಿಯನ್ನು ಇವರು ಬಿಟ್ಟಿಲ್ಲ. ಒಬ್ಬ ವೀಕ್ಷಕನಾಗಿ, ನಾನೊಬ್ಬ ಸುದ್ದಿಪ್ರಿಯನಾಗಿ ನನಗೆ ಬೇಕಾಗಿದ್ದನ್ನು ಟಿವಿ ಮಾದ್ಯಮಗಳಿಂದ ನಾನು ಹೇಗೆ ಪಡೆಯಬೇಕು. ನನಗೆ ಉತ್ತರ ಸಿಗ್ತಾಯಿಲ್ಲ, ನನಗೆ ಸಲಹೆ ನೀಡಿ ಮಹಾ ಸ್ವಾಮಿಗಳೆ.

ನಗರದಲ್ಲಿ ಮಳೆ ಬರುತ್ತೆ, ಮಳೆ ಬಂದಾಗ ಒಂದಲ್ಲ ಒಂದು ಅನಾಹುತ ಸಂಭವಿಸುತ್ತೆ ಅದು ಸಹಜ. ಒಂದು ವೇಳೆ ಅಕಸ್ಮಾತ್ ಅನಾಹುತವೇನಾದರು ನಡೆದರೆ, ನಗರದಲ್ಲಿ ಈ ಮೋರಿ ಮುಚ್ಚಿಲ್ಲ, ಆ ಮೋರಿ ಮುಚ್ಚಿಲ್ಲ, ಕಾಲುವೆಯಲ್ಲಿ ಕಸ ಇದೆ, ಆದ್ದರಿಂದ ನೀರು ರಸ್ತೆಗೆ ನುಗ್ಗಿ ಬರುತ್ತೆ, ಹೂಳು ತೆಗೆಯುವ ಕೆಲಸ ಮಾಡಿಲ್ಲ, ನಗರ ಪಾಲಿಕೆ ಸಿಬ್ಬಂದಿ ನಿದ್ದೆಯಿಂದ ಎದ್ದಿಲ್ಲ, ನಗರ ಪಾಲಿಕೆ ಕಣ್ಣು ಮುಚ್ಚಿ ಕುಳಿತಿದೆ, ಸರ್ಕಾರ ಶಾಶ್ವತ ಪರಿಹಾರ ಯೋಜನೆ ನಿರೂಪಿಸಿಲ್ಲ ಅದು ಇದು ಅಂತ ಪ್ರಸಾರ ಮಾಡ್ತಾರೆ. ಅಲ್ಲ ಮಹಾಸ್ವಾಮಿ, ನಿಜವಾಗ್ಲು ನಿದ್ದೆಯಿಂದ ಎದ್ದಿರೋದು ಇವರು ಸ್ವಾಮಿ. ಬೋರ್ ವೆಲ್ ನಲ್ಲಿ ಮಕ್ಕಳು ಬಾವಿಗೆ ಬಿದ್ದಾಗ ಮಾತ್ರ ಇವರ ಗಮನ ಉಳಿದ ಕಡೆ ಮುಚ್ಚದೆ ಇರುವ ಬಾವಿಗಳ ಕಡೆ ಗಮನ ಹರಿಯುತ್ತೆ. ಯಾಕೆ ಮಿಕ್ಕೆಲ್ಲ ದಿನ ಇಂತಹ ಸಂಗತಿಗಳು ಇವರ ಕಣ್ಣಿಗೆ ಕಾಣೋದಿಲ್ಲ?

ಏನೇ ಸಂಭವಿಸಿದರೂ ಮೊದಲು ದೂರುವುದು ಸ್ಥಳೀಯ ಆಡಳಿತವನ್ನು ಹಾಗೂ ಸರ್ಕಾರವನ್ನು, ನಮ್ಮ ನಾಗರೀಕರ ಹಾಗೂ ಟಿವಿ ಮಾಧ್ಯಮದವರ ಮೇಲೆ ಯಾಕೆ ಯಾವ ಜವಾಬ್ದಾರಿನೂ ಇಲ್ಲವೆ? ಉದಾಹರಣೆಗೆ, ನಾವು ಸರಿಯಾಗಿ ಸಂಚಾರ ನಿಯಮವನ್ನು ಹಾಗೂ ಶಿಸ್ತನ್ನು ಸರಿಯಾಗಿ ಪಾಲಿಸುತಿದ್ದೇವೆಯೆ? ನಮಗೆ ಎಷ್ಟರ ಮಟ್ಟಿಗೆ ರಸ್ತೆ ಸುರಕ್ಷಿತ ನಿಯಮಗಳ ಅರಿವಿದೆ? ಸಿಗ್ನಲ್ ಗಳನ್ನು ಜಂಪ್ ಮಾಡ್ತೀವಿ, ಒನ್ ವೇ ರಸ್ತೆಯಲ್ಲಿ ಎದುರು ಬದಿಯಿಂದ ವಾಹನಗಳು ಬರುತ್ತವೆ, ಹಾರನ್ ಅನ್ನು ಅನವಶ್ಯಕವಾಗಿ ಅಗತ್ಯಕ್ಕಿಂತ ಉಪಯೋಗಿಸುತ್ತೇವೆ. ರಸ್ತೆ, ಬಸ್ಸು, ರೈಲು, ಆಸ್ಪತ್ರೆ, ರೈಲು ಮತ್ತು ಬಸ್ ನಿಲ್ದಾಣಗಳು ಇನ್ನು ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ನಾವು ಎಷ್ಟೆಲ್ಲ ಗಲೀಜು ಮಾಡ್ತೀವಿ, ನಮ್ಮ ನಾಗರಿಕರ ಜವಬ್ದಾರಿ ಕುರಿತು ಈ ಮಾಧ್ಯಮದವರು ಯಾಕೆ ಅರಿವು ಮೂಡಿಸುತಿಲ್ಲ?

ದಿನನಿತ್ಯ ಎಷ್ಟೊಂದು ಕೊಲೆ, ಸುಲಿಗೆ, ದರೋಡೆ ನಡೆಯುತ್ತೆ, ಅತ್ಯಂತ ಪ್ರಭಾವಿ ಈ ಸುದ್ದಿ ಮಾಧ್ಯಮದಿಂದ ಅದನ್ನು ತಡೆಗಟ್ಟುವುದರ ಬಗ್ಗೆ ಅರಿವು ನೀಡುವುದರ ಬದಲು, ಅದರ ಕುರಿತು ರೋಚಕ ರಂಜನೀಯ ವರದಿ ಪ್ರಸಾರ ಮಾಡ್ತಾರೆ.

ರಾಜ್ಯದಲ್ಲಿ ನೂರಾರು ತಾಲೂಕುಗಳಿವೆ, ಸಾವಿರಾರು ಹಳ್ಳಿಗಳಿವೆ, ಕೋಟ್ಯಾಂತರ ಜನರಿದ್ದಾರೆ, ಹಾಗೆಯೆ ಹಲವಾರು ಸಮಸ್ಯೆಗಳು ಇವೆ, ಒಂದಲ್ಲ ಒಂದು ಸಮಸ್ಯೆಗೆ ಪರಿಹಾರವಿದ್ದೇ ಇರುತ್ತೆ. ಅದರ ಕುರಿತು ಅರ್ಥಗರ್ಭಿತ ಕಾರ್ಯಕ್ರಮ ಮಾಡಿದರೆ ಸರ್ಕಾರ ಹಾಗೂ ಸಮಾಜ ಸ್ಪಂದಿಸುತ್ತೆ. ಅದು ಬಿಟ್ಟು ಅನವಶ್ಯಕ ಸುದ್ದಿಗಳನ್ನು ಪ್ರಸಾರ ಮಾಡಿದರೆ ನಾಗರಿಕ ಸಮಾಜ ಹೇಗೆ ಬದಲಾಗುತ್ತೆ? ಸುದ್ದಿಯನ್ನು ವರದಿ ಮಾಡಿ ಅಂದರೆ, ವಿಶ್ಲೇಷಣೆ ಮಾಡ್ತಾರೆ. ಮಾಡ್ಲಿ ಅದಕ್ಕೆ ಅಭ್ಯಂತರ ಇಲ್ಲ. ಇವರೇ ವಿಚಾರಣೆ ಮಾಡ್ತಾರೆ, ಪೇನಲ್ ಡಿಸ್ಕಶನ್ ಮಾಡ್ತಾರೆ, ಕೊನೆಗೆ ಇವರೇ ಜಡ್ಜ್ ಮೆಂಟ್ ಕೊಟ್ಟು ಬಿಡ್ತಾರೆ. ಒಂದು ಚಾನೆಲ್ ನಲ್ಲಿ ಒಬ್ಬರ ಪರ ಸುದ್ದಿ ಬಿತ್ತರ ವಾಗುತ್ತೆ, ಇನ್ನೊಂದು ಚಾನೆಲ್ ನಲ್ಲಿ ಅವರ ವಿರುದ್ದ ವರದಿ ಪ್ರಸಾರ ವಾಗುತ್ತೆ. ಈ ಮಧ್ಯೆ ಆ ವ್ಯಕ್ತಿಯ ಮಾನ ಹರಾಜಾಕಿರ್ತಾರೆ. ವಿಷಯ ಹೀಗಿರುವಾಗ, ಪೊಲೀಸ್ ಕೋರ್ಟ್ ಯಾಕ್ ಬೇಕು?

"I object, your honour"; ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಮಧ್ಯೆ ಪ್ರವೇಶಿಸಿದರು. "ಈ ವ್ಯಕ್ತಿ ತಾನು ಮಾಡಿದ ತಪ್ಪುನ್ನು ಮುಚ್ಚಿ ಹಾಕಲು, ಬೇರೆ ವಿಷಯಗಳನ್ನು ಇಲ್ಲಿ ತರುತಿದ್ದಾರೆ" ಎಂದರು.

ಅದಕ್ಕೆ ಪ್ರಕಾಶ್ "ಸ್ವಾಮಿ ಪ್ರಕರಣದ ಕುರಿತು ಹೇಳ್ಬೇಕೆಂದರೆ, ನಾನು ಹೊಡೆದಿಲ್ಲ ಅಂತ ಹೇಳ್ತಿಲ್ಲ. ಹೌದು ಆ ಹೆಣ್ಣುಮಗಳ ಕಪಾಳಕ್ಕೆ ನಾನು ಬಾರಿಸಿದ್ದೀನಿ. ಅದು ತಪ್ಪು, ಆದರೆ ಅದು ಅವಳ ಉದ್ದಟತನದ ಉತ್ತರಕ್ಕೆ ಮಾತ್ರ. ಅದರ ಬಗ್ಗೆ ನನಗೆ ವಿಷಾದವಿದೆ. ಅದಕ್ಕೆ ಏನು ಬೇಕಾದರು ಶಿಕ್ಷೆ ಕೊಡಿ. ನಾನು ಅನುಭವಿಸಲು ಸಿದ್ದ. ಆದರೆ ನಾನು ಹೊಡೆದಿದ್ದು ಒಂದೇ ಏಟು, ಆದರೆ ಅವರು ನನಗೆ ಅಲ್ಲಿನವರು ಹೊಡೆದಿದ್ದು ಬರೋಬ್ಬರಿ 50 ರಿಂದ 60 ಏಟುಗಳು, ಅದಕ್ಕೆ ಅಲ್ಲಿದ್ದ ಸಿಸಿಟಿವಿನೇ ಸಾಕ್ಷಿ."

ನ್ಯಾಯಾಧೀಶರು "ಏನಮ್ಮ, ಸೀತಾಲಕ್ಷ್ಮಿ ಏನ್ ಹೇಳ್ತೀರ ಇದಕ್ಕೆ? ಅವರನ್ನು ನೋಡಿ ಬಟ್ಟೆ ಹರಿದು ಹೋಗಿದೆ, ಮೈಮೇಲೆ ಗಾಯಗಳಾಗಿವೆ, ರಕ್ತ ಹರಿದು ಹೆಪ್ಪುಗಟ್ಟಿದೆ, ವೈದ್ಯಕೀಯ ತಪಾಸಣೆ ಮಾಡಿದರೆ ಇನ್ನು ಏನೇನಾಗಿದೆ ಅಂತ ಗೊತ್ತಾಗುತ್ತೆ..."

ಆಗ ಪ್ರಕಾಶ್, "ಮಹಾಸ್ವಾಮಿ, ನನ್ನ ಪ್ರಕರಣದ ಕುರಿತು ಒಂದು ದಿನ ಸಂಪೂರ್ಣವಾಗಿ ಕಾರ್ಯಕ್ರಮ ಬಿತ್ತರಿಸಿದ್ದಾರೆ. ಅದರಲ್ಲಿ ಬಹುತೇಕ ನನ್ನನ್ನು ದುಷ್ಟ, ದುರುಳ ಅನ್ನುವಂತೆ ಬಿಂಬಿಸಿ ಪ್ರಸಾರ ಮಾಡಿದ್ದಾರೆ. ಅದಕ್ಕೆ ಸಬೂತಾಗಿ ನನ್ನ ಹೆಂಡತಿ ಕೈಯಲ್ಲಿ ಹಲವಾರು ಸಿಡಿಗಳಿವೆ. ಈಗ ಇದಕ್ಕೆ ಪ್ರತಿಯಾಗಿ ನಾನು ಮಾನನಷ್ಟ ಮೊಕದ್ದಮ್ಮೆಯನ್ನು ಹೂಡಬೇಕು ಅಂತಿದೀನಿ ಮಹಾಸ್ವಾಮಿಗಳೆ, ತಾವು ಅಪ್ಪಣೆಯನ್ನು ಕೊಟ್ಟರೆ......"

"ರೀ, ಇನ್ಸ್ ಪೆಕ್ಟರ್, ಇವರದೊಂದು ಕಂಪ್ಲೇಂಟ್ ಲಾಡ್ಜ್ ಮಾಡ್ಕೊಳ್ಳಿ ಜತೆಗೆ ಟಿವಿ ಚಾನೆಲ್ ನಿಂದ ಸಿಸಿಟಿವಿ ಫೂಟೇಜ್ ಗಳನ್ನು, ನಿನ್ನೆ ಯಿಂದ ಇವತ್ತಿನವರೆಗೆ ನಡೆದ ಎಲ್ಲ ಕಾರ್ಯಕ್ರಮಗಳ ಟೇಪ್ ಗಳನ್ನು ತಗೊಂಡು ಬನ್ನಿ, ನೋಡಮ್ಮ, ನೀವು ಟಿವಿಯವರು ಬದಲಾಗದಿದ್ದರೆ, ಇವತ್ತು ಒಬ್ಬರು ಬಂದಿದ್ದಾರೆ, ನಾಳೆ ನೂರು ಜನ, ನಾಡಿದ್ದು ಸಾವಿರ ಜನ ಬರ್ತಾರೆ. ಬದಲಾವಣೆ ಬೇಕು ಅದರ ಬಗ್ಗೆ ಗಮನ ಕೊಡಿ, ಏನ್ರಿ ಪ್ರಾಸಿಕ್ಯೂಟರ್ ಬೇರೆ ಏನಾದರು ಹೇಳ ಬೇಕಾ"?

"Excuse me your honour"; ಎಂದು ಪಬ್ಲಿಕ್ ಪ್ರಾಸಿಕ್ಯೂಟರ್, "ಈ ಪ್ರಕರಣ ದ ಕುರಿತು ಇನ್ನು ವಿಚಾರಣೆಯ ಅಗತ್ಯವಿದೆ, ದಯವಿಟ್ಟು ಕಾಲಾವಾಕಾಶ ಕೊಡಿ" ಎಂದು ಕೇಳಿದರು. ನ್ಯಾಯಾದೀಶರು ಪ್ರಕಾಶ್ ಗೆ ಶರತ್ತು ಬದ್ದ ಜಾಮೀನು ನೀಡಿ, ವಿಚಾರಣೆಯನ್ನು ಮುಂದೂಡಿದರು.

***
ಕೆಲದಿನಗಳ ನಂತರ ಲಾಯರ್ ಕಡೆಯಿಂದ ಪ್ರಕಾಶ್ ಗೆ ಫೋನ್ ಕರೆ ಬಂತು "ಟಿವಿಯವರು ರಾಜಿಗೆ ಕರೆದಿದ್ದಾರೆ ಬನ್ನಿ" ಎಂದು. ಅದಕ್ಕೆ ಪ್ರಕಾಶ್ "ಯುದ್ಧ ಈಗ ತಾನೆ ಶುರುವಾಗಿದೆ, ಈಗಲೆ ಶಸ್ತ್ರತ್ಯಾಗ ಯಾಕೆ? ಈ ಕಾರ್ಯಕ್ರಮ ನಡೀಲಿ, ಅದರ ನಂತರ ಮಾತುಕತೆ ಏನಿದ್ದರು" ಎಂದು ಹೇಳಿ ಫೋನ್ ಡಿಸ್ ಕನೆಕ್ಟ್ ಮಾಡಿದರು.

English summary
Attack on TV journalist : A Kannada short story by P.S. Ranganath, Muscat. The story revolves around an incident in a tv channel, when a viewer attacks the journalist for her arrogant behavior. The viewer narrates in the court why he slapped the journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X