ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಕೊಯಿಲು

By Staff
|
Google Oneindia Kannada News


ಇನ್ನೇನು ಒಂದು ತಿಂಗಳಲ್ಲಿ ಪಯಣ ಹೊರಡಬೇಕಲ್ಲ ಎಂದು ನಿಟ್ಟುಸಿರು ಬಿಟ್ಟೆ.“ನಲವತ್ತಾರು ವರ್ಷಗಳಿಂದ ಬಾಳ್ವೆ ನಡೆಸಿದ ಮನೆಯನ್ನು ತೊರೆಯುವ ನರಕ ಯಾರಿಗೂ ಕೊಡಬೇಡಪ್ಪ, ಈ ಕಷ್ಟ ನನಗೇ ಮುಗಿಯಲಿ." ಎಂದೆ. ಮುಂದೆ ಬೆಂಗಳೂರಿಗೆ ಹೊರಡುವ ತಯಾರಿ ಬಗ್ಗೆ ಯೋಚಿಸಲಾರಂಭಿಸಿದೆ. ಅದೇ ಯೋಚನೆಯಲ್ಲಿ ಊಟ ಒಳಗೆ ಹೋಗಲಿಲ್ಲ, ತಿಂದ ಶಾಸ್ತ್ರ ಮುಗಿಸಿ ಎದ್ದೆ. ಮನೆಗೆಲಸ ಮುಗಿಸಿ ಮಲಗಿಕೊಂಡೆ, ಮಧ್ಯ ರಾತ್ರಿಯವರೆಗೆ ನಿದ್ರೆ ಬರಲಿಲ್ಲ.

  • ಶಾಂತಲಾ ಭಂಡಿ, ಉತ್ತರ ಕ್ಯಾಲಿಫೋರ್ನಿಯಾ

'ಜರಜರ"ನೆ ಮಳೆ ಹೊಯ್ಯುತ್ತಿತ್ತು. ಕಾದ ಮನೆ ಮಾಡಿನ ಹಂಚುಗಳೆಲ್ಲಾ ತಿಂಗಳಿಂದ ಹಿಡಿದ ಮಳೆಗೆ ತಂಪಾಗಿದ್ದವು. ಸೂರಂಚಿನ ಹನಿಗಳು ಬೀಳುವುದರತ್ತಲೇ ಕಣ್ಣುಗಳು ನೆಟ್ಟಿದ್ದರೂ ಮನಸ್ಸು ಮಾತ್ರ ಏನನ್ನೋ ಯೋಚಿಸುತ್ತಿತ್ತು. ಮಳೆಗಾಲ ಶುರುವಾಗಿಯಾಯ್ತು. ತೋಟದ ಕಥೆ ಎಂತದೋ ಏನೋ? ಆ ಬದಿ ಕಾಲು ಹಾಕದೆ ತಿಂಗಳೇ ಹಿಡಿದಿತ್ತೇನೋ! ಯೋಚಿಸುತ್ತಲೇ ಇದ್ದೆ. ಏನು ಮಾಡಲೂ ತೋಚುತ್ತಿಲ್ಲ. ಈ ಆಳುಕಾಳುಗಳು ಸಿಗುವುದೇ ಕಷ್ಟ! ಸಿಕ್ಕರೆ ಇಬ್ಬರನ್ನು ಹಿಡಿದು ತೋಟದ ಕಳೆಗೆ ಕಳುಹಿಸಬೇಕು ಎಂದುಕೊಳ್ಳುತ್ತಿದ್ದಂತೆಯೇ ಮನೆಯ ಸರಗೋಲನ್ನು ಯಾರೋ ಸರಿಸಿದಂತೆ ಸದ್ದಾಗಿತ್ತು. ಕೊನೆಗೌಡ ಬಾಳನ ಸವಾರಿ ನಮ್ಮನೆಯ ಅಂಗಳಕ್ಕೆ ನುಗ್ಗಿತ್ತು. ಏನೊಂದೂ ಹುನ್ನಾರವಿಟ್ಟುಕೊಳ್ಳದೆಯೇ ಅವನಿತ್ತ ಕಾಲು ಹಾಕುವುದೇ ಇಲ್ಲ ಎಂದೇನಿಲ್ಲ, “ಹಿಂಗೇ ನಿಮ್ಮನ್ನೇ ಕಾಣೂಕ್ ಬಂದೆ" ಎನ್ನುತ್ತಲೂ ಬರುತ್ತಿರುತ್ತಾನೆ ಮನುಷ್ಯ.

ಬಾಳನನ್ನು ಕಂಡದ್ದು ಹೊನ್ನು ಕಂಡಷ್ಟು ಸಂತಸಪಟ್ಟೆ. “ಏನಾ ಬಾಳಾ? ನಮ್ಮನೆ ದಾರಿ ನಿಂಗ್ ಹ್ಯಾಂಗೆ ನೆನ್ಪಾಯ್ತಾ ಮಾರಾಯಾ? ಇಲ್ಲೊಬ್ರು ಬಡಿ ಅಮ್ಮ ಇದ್ರು ಹೇಳಿ ಮಾತಾಡ್ಸಕ್ಕೆ ನೀ ಆದ್ರೂ ಬರ್ತಾ ಇರ್ತ್ಯಲ, ಅದೇ ಖುಷಿ ಮಾರಾಯಾ, ದುಡ್ಡು ಕೊಡ್ತೆ ಹೇಳ್ರೂ ಆಳ್ಮಕ್ಳು ಬ್ರಾಹ್ಮಣ್ರ ಕೇರಿಗೆ ಈ ಮಳೆಗಾಲ ದಿವ್ಸ್ದಲ್ಲಿ ಬರೂದು ಕಷ್ಟ, ಎಲ್ಲ ಗದ್ದೆ ಗೇಣಿ ಗೇಯ್ಲಿಕ್ಕೆ ಹೋಗ್ತ್ರಲ, ಈ ಆಷಾಡದ್ ಮಳೆ ಶುರುವಾದ್ಕುಳೆಯಾ " ಎಂದೆ.

“ ಹೌದ್ರ ಅಮಾ, ಪುರುಸೊತ್ತೊಂದು ಇರೂಕಾಯ್ತಲ ಅದ್ಕೆ, ಇಲ್ಲೆ ಅಂದ್ರೆ ಬರೂಕಾಗ ಅಂದೇನಲ್ರ " ಎನ್ನುತ್ತ ಹೇಡಿಗೆಯ ತುದಿಯಲ್ಲಿನ ಸೂರಂಚು ಚಿಮುಕಿಸಿದ ಮಳೆಯ ಹನಿಗಳ ಒರೆಸಿ ಅಲ್ಲೆ ಕೂತ. ಆಳುಗಳ ಕಂಬಳಿ ಕೊಪ್ಪೆ, ಹಾಳೆ ಟೊಪ್ಪಿಗಳಿಗೇ ಸೀಮಿತವಾಗಿದ್ದ ಹೊರಮಾಡಿನ ಗೂಟಕ್ಕೆ ನೇತು ಬಿದ್ದ ಬಾಳನ ಕಂಬಳಿಕೊಪ್ಪೆಯ ನೀರು ಕೆಳಗಿದ್ದ ಒಣ ಹಾಳೆಯ ಮೇಲೆ 'ಟಪ್" 'ಟಪ್" 'ಟಪ್" ಎಂದು ಪುಟಿಯುತ್ತಿತ್ತು.

“ಬಾಳ, ಇಚ್ಚಿಗಾದ್ರೂ ಕೂತ್ಗ ಬಾ, ಆ ಕೊಟ್ಗೆ ಮೆಟ್ಲ ಮೇಲೆ ಸೂರಂಚಿನ ನೀರು ಮೈಮೇಲೆ ಬೀಳೂ ಹಂಗೆ ಅದೆ, ಮಳೆಗೆ ನೆನೀದ ಮೈ ಅಮ್ಮನ ಮನೆ ಸೂರಂಚಿನ ನೀರಿಗೆ ತಾಗೆ ನೆಂದು ಹೋದಾತು. " ಎಂದೆ.

“ಹೂಂ" ಎನ್ನುತ್ತ ಆಚೆ ಸರಿದ ಬಾಳ ಸುಮ್ಮನೆ ಕೂರಲಾರದೇ ಪಣತದ ಮನೆಯ ಬಾಗಿಲ ಮುಂದಿನ ಒಣ ತೆಂಗಿನಗರಿಗಳಿಗೆ ಕೈ ಹಾಕಿ ಸವರತೊಡಗಿದ. “ಸುಮ್ನೆ ಬಂದಂವ ಮಾತಾಡ್ಕ್ಯಂಡು ಹೋಗ್ಲಿಕ್ಕಾಗುದಿಲ್ಲೆನ ನಿಂಗೆ? ಅಮ್ಮನ ಮನೆಲ್ಲೊಂದು ನೀರು ಕುಡುದ್ರೂ ತೀರ್‍ಸೇ ಹೋಗೂದು ರೂಢಿ ಮಾಡ್ಕಂಡಿದೀಯಲ್ಲ ಮಾರಾಯಾ, ಇರು, ಬಿಸಿ ಬಿಸಿ ಚಾನಾದ್ರೂ ಮಾಡ್ಕ್ಯ ಬತ್ತೆ." ಎನುತ್ತ ಒಳ ಹೊರಟೆ.

“ಬ್ಯಾಡ್ರ ಅಮಾ" ಎಂಬ ಬಾಳನ ಮಾತು ಕೇಳಿಸದಷ್ಟು ಚಿಕ್ಕದಾದ ಧ್ವನಿಯಲ್ಲಿದ್ದರೂ ಕೇಳಿಸಿತ್ತು. ಸುಮ್ಮನೆ ಹೋಗಿ ಚಹ ಮಾಡುತ್ತಲ್ಲಿದ್ದೆ.

30ವರ್ಷಗಳ ಹಿಂದಿನ ದಿನಗಳು ನೆನಪಾದವು. ಇದೀಗ 5 ನಿಮಿಷಗಳಿಗೆ ಸಿದ್ಧವಾಗುವ ಈ ಚಹ ಮಾಡಲು ಪಡುತ್ತಿದ್ದ ಹೆಣಗಾಟಗಳು! ಬೆಳಗಿನಿಂದ ಕೂಡಿಟ್ಟ, ಮನೆಯವರಿಗೆಲ್ಲಾ ಚಹ ಮಾಡಿ ಸೋಸಿದ ಆ ಚರಟಕ್ಕೆ ಒಂದಿಷ್ಟು ಬೆಲ್ಲ, ಸಾಕಷ್ಟು ನೀರು ಹಾಕಿ, ಹಸಿಕಟ್ಟಿಗೆ, ಹೊಗೆ ಬೆಂಕಿಯ ಮುಂದೆ ಕೂತು, ಕಣ್ಣು, ಮೂಗು, ಬಾಯಿ ಒರೆಸಿಕೊಂಡು, ಚಹ ಸೋಸಿ, ಅದಕ್ಕೆರಡು ಹನಿ ಹಾಲು ಬೆರೆಸಿದಂತೆ ಮಾಡಿ ಆಳುಗಳ ಮುಂದೆ ತಂದಿಟ್ಟರೆ ಆಯ್ತು. ಅದೆಲ್ಲಾ ಈಗ ಆ ಯಜ್ನ ಮಾಡಿದಷ್ಟೋ ಹೊರೆಯಿಲ್ಲ. ಮನೆಮನೆಗಳಿಗೆ ಗೋಬರ್ ಗ್ಯಾಸ್ ಬಂದಿದ್ದಾಗಿದೆ. ಲೈಟರ್ 'ಟಕ್" ಎಂದರೆ ಝಗಝಗಿಸುವ ಬೆಂಕಿ, ಪಾತ್ರೆಯಳತೆಯಷ್ಟೆ ಉರಿ ಮಾಡಿಕೊಳ್ಳುವ ವ್ಯವಸ್ಥೆಯೂ ಇರುವಾಗ ಚಹ ಮಾಡುವುದಕ್ಕೇನೂ ಕಷ್ಟವಿಲ್ಲ. ಈ ಚಹಕ್ಕೆ ಹೊಸದಾದ ಚಹಸೊಪ್ಪು, ಸಕ್ಕರೆ, ಸಾಕಷ್ಟೇ ಹಾಲು ಹಾಕಿ ಕೊಟ್ಟರೆ ಬಾಳ ಅಲ್ಲ, ಬಾಳನಪ್ಪ ಬಂದರೂ 'ಬೇಡ" ಎನ್ನಲಾರ. ಬಾಳನಿಗೂ ಚಹ ಬೇಡವೆನ್ನಲು ಮನಸ್ಸಿಲ್ಲವಾದರೂ, 'ಬೇಕು" ಎನ್ನಲಾರ ಸಂಕೋಚ ಬಿಟ್ಟು. “ಈ ಬಾಳ ಯಾವಾಗ್ಲೂ ಹಂಗೆಯಾ" ಎಂದುಕೊಂಡು ಚಹ ತಂದಿಟ್ಟೆ ಅವನ ಮುಂದೆ.

ಚಹ ಮಾಡುವಾಗ ನನ್ನ ಮನಸ್ಸು ಸುಮಾರು ಹಿಂದೆ ಸರಿದು ಹೋಗಿದ್ದಂತೆ, ಬಾಳನೂ ಚಹ ಹೀರುತ್ತ ಹಿಂದೆ ಹೋಗಿದ್ದ. “ಅಮ್ಮಾ, ಭಟ್ರು ಇರೂತನ್ಕ ಮನೆ 'ಚಕ್" 'ಚಕ್" ಅಂತಿತ್ತು, ನಮ್ನೂ ಏನು ಬರೇ ಕೈ ಮಾಡ್ಲಿಲ್ಲ ಭಟ್ರು, ಅವ್ರ ಋಣ ಈ ಜನ್ಮನಾಗೆ ತೀರ್ಸುಕಾಗುದಿಲ್ಲ, ಅಷ್ಟ್ ಅದೆ, ಮನೆ ಹಿಂದಿನ್ ಗ್ವಾಡೆ, ಜೋರ್ ಇಂತದೇ ಮಳೆಗಾಲ್ನಲ್ ಅಲ್ರಾ ಮುರ್ಕ ಬಿದ್ದಿದ್ದು? ಭಟ್ರ ದುಡ್ಡು ಕೊಡ್ದೇ ಹೋಯಿರೆ ಗ್ವಾಡೆ ಎಬ್ಸೂದ್ ಕನಸೇ ಅಯಿತ್ತು. ಅದೇ ವರ್ಸನೇ ಹೆಂಡ್ರೂ ಖಾಯ್ಲಿ ಬಂದ್ ಸತ್ತಿದ್ದು! ಆ ಡಾಕ್ಟೀರಿಗ್ ಕೊಟ್ಟಿದ್ದೇನ್ ಕಮ್ಮೀರಾ? ಎಲ್ಲ ಭಟ್ರೆ ಕೊಟ್ಟಿದ್ದು. ನಾ ತೀರ್ಸುಕ್ ಹೋದ್ರೆ ಈ ಜನ್ಮನಾಗೆ ಮುಗೂದಲ್ಲ, ಅ..ಷ್ಟ್ ಅದೆ." ಎಂದ.

" ಅಯ್ಯ ಹೌದನಾ? ಇದೊಂದು ನಂಗ್ ಗೊತ್ತಿಲ್ಲ ನೋಡು! ಆ ಕೈ ಮಾಡಿದ್ ಕೆಲ್ಸ ಈ ಕೈಗ್ ಗೊತ್ತಾಗ್ಬಾರ್ದು, ಹಂಗ್ ಇದ್ರು ಭಟ್ರು,ಅನ್ನೂ ವಿಷ್ಯ ಅವ್ರು ಇವ್ರ ಬಾಯಲ್ಲಿ ಕೇಳಿ ಈಗ ಗೊತ್ತಾಗ್ತ ಅದೆ ನೋಡು, ಆ ನಮ್ನಿ ಯಾರಿಗೂ ಇರ್ಲಿಕಾಗುದಿಲ್ಲ ಬಿಡಾ." ಉದ್ದನೆಯ ಶ್ವಾಸ ಬಂದಂತಾಗಿ ನಿಲ್ಲಿಸಿ, ಮತ್ತೆ ಮುಂದುವರೆಸಿದೆ.

“ಅದೆಲ್ಲಾ ಈಗ ಕಥೆ ಆತು, ಮೆಲಕ್ಕೆ ಹೋದವ್ರ ನೆನೆಸ್ಗಂಡು ನಾವು ಅಳ್ತಾ ಕುತ್ಗಂಡ್ರೆ ಆಗ್ತದ್ಯನ ಸಂಸಾರ? ಎಷ್ಟ್ ದಿವ್ಸನ ಅಷ್ಟೂ ದಿವ್ಸ ಇರುದು ಹಿಂಗೇಯಾ, ಆದ್ರೂ ಬಾಳ, ದುಃಖ ಅಂದ್ರೆ.... ನೀವು ಆಳ್ಮಕ್ಳು ನೆನಸ್ಗಂಡ್ ಹಂಗೆ ನಮ್ ಮಕ್ಳು ನೆನೆಸ್ಗಳುದಿಲ್ಲಲ ಭಟ್ರನ್ನ, ಅದೇ ಚಿಂತೆ ನಂಗೆ ಯಾವಾಗ್ಲೂವ, ನನ್ ಕಥೆ ನೋಡು, ಇಬ್ರು ಮಕ್ಳಿದ್ರೂ ಹೈರಾಣದಂಥ ಮನೆಲ್ಲಿ ಗೂಬೆ ಅಂಥ ಜೀವ್ನ ನಂದು, ಹೋಗ್ಲಿ ಬಿಡು, ನಾವ್ ನಾವು ಪಡ್ಕ ಬಂದಿದ್ದಷ್ಟೆ ನಾವು ಉಣ್ಲಿಕ್ಕಾಗದು, ಅಲ್ವೆನ? " ಎಂದೆ.

ಅವನು ಇನ್ನೇನು ಹೇಳಲಿಕ್ಕಾದೀತು? “ಹೂಂ, ಅಷ್ಟೇರಾ ಅಮಾ." ಎನ್ನುತ್ತಾ ಚಹ ಕುಡಿದ ಲೋಟ ತೊಳೆದು, ಬೊರಲಿಟ್ಟು, ಮತ್ತೆ ಬಂದು ಕುಳಿತ.
“ಅಂದ್ ಹಂಗೆ ಬಾಳ, ನಿನ್ಮಗ್ಳು ಹೊನ್ನಿ ಹೆಂಗಿದಾಳ ಈಗಾ? ಸುಮಾರಾಗಿ ಆರಾಮಾಯ್ತನ ಈಗ?" ಎನ್ನುವಾಗ ಯೋಚನೆ ಮಾನಸಿಕಳಾಗಿ ಅಸ್ವಸ್ಥಳಾದ ಬಾಳನ ಹಿರಿಮಗಳು ಹೊನ್ನಿಯ ಕಡೆ ತಿರುಗಿತು.

“ಅ.....ಡ್ಡಿಲ್ರ ಅಮ, ಆದ್ರೂ ಅಮಾಶೆ ಬಂತು ಅಂದ್ರೆ ಆ ಮಗೀನ ಹಿಡ್ಕಳೂಕೆ ಮೂರಾಳ್ ಬೇಕು, 'ಬಟ್ಟೆ ಬರೆ" ಇಲ್ದೆನಾರೂ ರಸ್ತೆ ಬದೀಗಿಳಿತ್ಲರಾ ಅಮಾ. ನಾ ಇದ್ರೆ ಹೆಂಗೂ ಸಂಬಾಳಸ್ತೆ. ನಮ್ಮನೆ ಗಂಡುಮಕ್ಳಿಗೆಂಥ ಅರ್ಥ ಆಗೂದು ಅದೆಲ್ಲಾ? ನಾ ಇಲ್ಲೆ ಅಂದ್ರೆ ಸಾಕು, ಹಿಡ್ಕಂಡು ಬಡಿತ್ರು ತಂಗಿನ, ಹೆಂಡ್ರ ಮಾತು ಕಟ್ಗಂಡಿ. ನಾ ಇರೂತನ್ಕಾ ಆ ಮಗೀಗು ಒಂದ್ ಬಾಳು, ಮ್ಯಾಲನಂವ ಹ್ಯಾಂಗ್ ಕಾಣಸ್ತ್ನ ಹಂಗೆ ಹೋಗೂದು." ಎಂದ.

“ಎಂಥ ಹಳ್ಳಿ ಔಷಿಧಿ ಮಾಡ್ಸಿದ್ರಂತಲಾ, ಹುಷಾರಾಗ್ಲಿಲ್ಲನಾ?" ಎಂದೆ ಕನಿಕರದಿಂದ.

“ಮೂಡ್ಲಿಗಿ ಔಷಿಧಿ ಚೊಲೋದು ಅಂದ್ರು ನರಸ್ಬಟ್ರು, ಅಲ್ಲೊಬ್ರು ಹೆಗ್ಡೇರ್ ಮನೆ ಮುದಿಯಮ್ಮ ಎಂತದೋ ಸಪ್ಪು ಅರ್ದಿ ಕೊಡ್ತ್ರು. ಮೂರ್ಸಲ ತಕಬಾ ಹುಡ್ಗೀನಾ ಅಂದೀರು, ಎರ್ಡ್ಸಲ ಆ ಮಕ ಮಾಡಿ ಹುಡ್ಗಿ ಕರ್ಕ ಹೋಗೂ ಹೊತ್ಗೆ ಆಯ್ತು, ಮೂರ್ನೆ ಸಲ ಕರ್ಕ ಹೋಗೂಕಾಗ್ಲಿಲ್ಲ. ಆ........ತುದೀಗ್, ಆ... ಹುಡ್ಗಿ ಎಳ್ಕಂಡಿ, ಮೂರಾಳಾರು ಬೆಕು. ನಮ್ ಹುಡ್ಗೂರು ಬರುಕೆ ಮಕ ಹೊಳ್ಳುಸ್ತ್ರು, ಎಂತ ಮಾಡೂಕಾಯ್ತದ್ರ ಅಮಾ? ಮಾಚನ್ನ, ಕಾಳನ್ನ ಹಿಡ್ದು ಎರ್ಡ್ಸಲ ತಕ ಹೋಗಿ ಮದ್ದು ಮಾಡಸ್ಕ ಬಂದಾತು, ಮೂರ್ನೇ ಸತಿ ಹೋಗೂಕಾಗ್ಲಿಲ್ಲ ನೋಡಿ." ಎಂದ ಬಾಳ.

“ಥೋ ಮಾರಾಯಾ, ಅದೆಲ್ಲ ಹಂಗೆಲ್ಲ ಅರ್ಧಕ್ಕೆ ಬಿಡ್ಬಾರ್ದಾ, ಮತ್ತೆ ರೋಗ ಗುಬ್ಬಳ್ಸ್ಗ್ಯಂಡು ಬಂದು ಜೋರಾದ್ರೆ ಎಂಥ ಮಾಡ್ತ್ಯ ಮಾರಾಯಾ?" ಎಂದೆ.

“ಹುಟ್ಟುಸ್ದಂವ ಹುಲ್ಲು ಮೇಯ್ಸೂದಿಲ್ರಾ ಅಮಾ? ನಾ ಇರೂವರ್ಗೆ ಆತು, ಮುಂದ್ ಹೆಂಗ ಕಾಂಬ," ಎಂದವನೇ ಮತ್ತೆ ಮುಂದೆವರೆಸಿದ ಬಾಳ , ನಗುತ್ತಾ ಅಪಹಾಸ್ಯವೆಂಬಂತೆ “ಕಾಂಬೂಕೆ ನಾ ಇದ್ರಾತಾ? ಇರವ್ರು ನೋಡ್ತ್ರು ಚಂದನ." ಎಂದ.

ಒಂದೇಸಲಕ್ಕೆ ನನ್ನ ಜವಾಬ್ಧಾರಿ ತಲೆಗೆ ಬಂದು ಆ ವಿಷಯ ಮುರಿಯುತ್ತಾ ಬಾಳನಿಗೆಂದೆ “ಬಾಳ, ನಮ್ಮನೆ ತ್ವಾಟುಕ್ಕೆ ಮದ್ದು ಹೊಡೀಬೇಕಿತ್ತಲಾ, ಯಾವಾಗ್ ಬತ್ತೆ?" ಎಂದೆ.

“ಅಮಾ, ನೀವೂ........ ಒಂದ್ಕೆಲ್ಸ ಮಾಡಿ, ತುತ್ತ ಸುಣ್ಣ ಎಲ್ಲಾ ರೆಡಿ ಮಾಡ್ಕಂಡಿ ಬಾಳಂಗೆ ಹೇಳಿ ಕಳ್ಸಿದ್ರಾತು, ನಾ ಬಂದು ನಿಮ್ ತ್ವಾಟ ಹೊಕ್ತೆ. ನಂಗೆ ಬಿಡಿ ಆ ಜಬಾದಾರಿ." ಎಂದ ಬಾಳ.

“ಅಯ್ಯೋ ಬಾಳಾ, ನೀ ಎಂಥ ಅಂದ್ಕಂಡಿದ್ದೆ ಅಮ್ಮನ್ನ? ತುತ್ತಾ.. ಸುಣ್ಣಾ.. ಎಂತ ಬೇಕ ಎಲ್ಲಾ ತರ್ಸಿ ರೆಡಿ ಮಾಡೇ ಇಟ್ಟಿದ್ದೆ. ನೀ ಬಂದು ಹೇಳಿದ್ಕುಳೆ ಪ್ಯಾಟಿಂದ ತುತ್ತ ತರವ್ರು ಯಾರು ಸಿಕ್ತ್ರು ನಂಗೆ? ಅದ್ಕೇ ಎಲ್ಲಾ ಮದ್ಲೆ ಮನಿಗ್ ಬಂದು ಕುಂತದೆ. ಇನ್ನು ತ್ವಾಟ ಕಾಣೂದೊಂದ್ ಬಾಕಿ. ಕೊಳೆಪಂಪೊಂದು ನರಸ್ ಭಟ್ರ ಮನೆಲ್ಲಿ ಅದೆ, ತುತ್ತ ಹದ್ಮಾಡ ಮರಿಗೆ ದೇವಸ್ಥಾನದ ಹೊರಗೆ ಅದೆ, ದೇವಸ್ಥಾನಕ್ಕೆ ಬಣ್ಣ ಹೊಡಿಲಿಕ್ ತಗಂಡ್ ಹೋದವ್ರು ತಂದ್ ಕೊಡ್ಲಿಲ್ಲ ನೋಡು. ಹೂಂ.... ನಮ್ಮನೆ ಕಥೆ ಎಂಥಾ ಕೇಳ್ತೆ? ಬ್ಯಾಸ್ಗೆಲ್ಲಿ ಹುಲ್ಲ್ ಸವರ್ಲಿಕ್ಕೆ ಹೇಳಿ ಐದು ಕುಡ್ಗೋಲು ಕೊಟ್ರೆ....ಮೂರು ಮನೆ ಕಾಣ್ತು. ಅದ್ರಲ್ಲಿ ಒಂದುಕ್ಕೆ ಹಿಡ್ಕೆನೇ ಮುರಕಂಡು ತಂದಿಟ್ರು. ಚಾ...ಲಿ ಸುಲಿಯಕ್ಕೆ ಹೇಳಿ ಹೋದ್ ಮೆಟ್ಗತ್ತ್ಯಲ್ಲಿ ಅರ್ಧಕಾಲ್ವೆಶಿ ಕಾವು ಮುರಕಂಡು ಬಿದ್ದದೆ, ಮೂರು *ಮೆಟ್ಗತ್ತಿ ಲೆಕ್ಕಕ್ಕೇ ಶಿಗ್ಲಿಲ್ಲ. ಇವ್ರನ್ನ್ ಕೆಳಿರೆ ಅವ್ರು ತಗಂಡ್ರು ಹೆಳ್ತಾರೆ, ಅವ್ರನ್ನ್ ಕೇಳಿರೆ ಇವ್ರು ತಗಂಡ್ರು ಹೇಳ್ತಾರೆ, ಹಿಂಗೆಯಾ ಬುಡದಿಂದನೂ ನಮ್ಮನೆ ವಸ್ತು ಎಲ್ಲ. ಭಟ್ರು ಇರಕರಿಂದನೂ ಹಂಗೇಯಾ, ಅರ್ಧ ದಾನಕ್ಕೆ ಹೋಯ್ತು, ಇನ್ನರ್ಧ ಕಳುವಿಗೆ ಹೋಯ್ತು. ಆದ್ರೂ ದೇವ್ರು ನಮ್ಗೇನೂ ಕಡ್ಮೆ ಮಾಡ್ಲಿಲ್ಲ ಹೇಳೀಟ್ಗ. ಹ್ನಾ..... ಸುಮ್ನೆ ಹೇಳದಲ್ಲ ಮತ್ತೆ, ಕೊಟ್ಟಿದ್ದು ತನಗಂತೆ, ಬಚ್ಚಿಟ್ಟಿದ್ದು ಪರರಿಗಂತೆ ಹೇಳಿ." ಒಂದೇ ಉಸಿರಿಗೆ ಸಣ್ಣದಾಗಿ ರೋಷವನ್ನೆಲ್ಲ ಕಕ್ಕಿದ್ದೆ ಬಾಳನ ಮುಂದೆ.

ಬಾಳನಿಗೂ ನನ್ನ ಸುಖದುಃಖ ಕೇಳಿ ತಲೆ ಆಡಿಸುವ ಅಭ್ಯಾಸ. ಆದರೆ ಇನ್ನೊಂದು ಅವನ ಗಟ್ಟಿ ಗುಣವೆಂದರೆ ಒಬ್ಬರಾಡಿದ್ದನ್ನು ಇನ್ನೊಬ್ಬರ ಮುಂದೆ ಉಸುರುವ ನರಿಬುದ್ಧಿಯಿಲ್ಲ ಬಾಳನಿಗೆ. ಅದಕ್ಕಾಗಿಯೇ ನಾನೂ ನನ್ನ ಗೋಳನ್ನೆಲ್ಲ ಅವನ ಮುಂದೆ ಇತ್ತು ಮನಸ್ಸನ್ನು ತೇಲಿಸಿಕೊಳ್ಳುವುದು.

“ಅಮಾ, ಮನೇವರಿಗ್ ದಾರಿ ಖರ್ಚಿಗೆ.... ಎಂತಾರೂ ಕೊಡ್ರ..." ಎಂದ. 'ಎಂತಾರೂ... ದಾರಿ ಖರ್ಚು" ಎಂದರೆ ಮತ್ತೇನಿಲ್ಲ. ಎರಡು ವೀಳ್ಯದೆಲೆ, ಎರಡು ಗೋಟಡಿಕೆ, ಅರ್ಧ ಎಸಳು ತಂಬಾಕು, ಬಾಳೆ ತುದಿಯ ಉಪ್ಪಿನಷ್ಟು ಸುಣ್ಣ. ಇವೇ ಬಾಳನ ದಾರಿ ಖರ್ಚುಗಳು. ಬಾಳ ನನ್ನಲ್ಲಿ ನಿರ್ಭಿಡೆಯಿಂದ ಕೇಳುವುದೆಂದರೆ ಈ ದಾರಿ ಖರ್ಚನ್ನು ಮಾತ್ರ. ಕವಳದ ಮರಿಗೆಯಿಂದ ಎರಡು ನಾಗಬಳ್ಳಿ ವೀಳ್ಯದೆಲೆ, *ಮಾಳಿಗೆಯ ಮೂಲೆಯ ತೂಗಾಡುವ ಕೈಚೀಲದೊಳಗಿನ ಒಂದೆಸಳು ತಂಬಾಕು, *ಮೆತ್ತಿಯ ಮೇಲಿನ ತಗಡಿನ ಡಬ್ಬಿಯೊಳಗಿಂದ ನಾಲ್ಕಾರು ಒಣಗಿದ ಕೊಳೆಯಡಿಕೆ, ಎರಡು ಗೋಟಡಿಕೆ, ಒಂದು ಹುಂಡು ಸುಣ್ಣ ಎಲೆಗೆ ಒರೆಸಿ ತರುವಷ್ಟರಲ್ಲಿ ಬಾಳ ಕಂಬಳಿಕೊಪ್ಪೆ ಸೂಡಿ, ಮೆಟ್ಟಿಲಿಳಿದು ಮನೆಯಂಗಳದಲ್ಲಿ ಕಾಯುತ್ತಿದ್ದ.

“ಹೇಡ್ಗೆ ಮೆಲೆ ಇಟ್ಟೆ ನೋಡು ಕವಳನ, ತಗಂಡ್ ಹೋಗು ಬಾಳ, ನಾ ಅಂಗ್ಳಕ್ಕಿಳಿದ್ರೆ ನನ್ ಕಾಲೂ *ಅರ್ಲು ರಾಡಿ ಆಗ್ತದೆ" ಎಂದೆ ಹೊರಡಲನುವಾಗಿದ್ದ ಬಾಳನಿಗೆ.

ಎತ್ತಿಕೊಂಡು ಹೊರಟ ಬಾಳ “ನಾಳೆ ಮದ್ದು ಹೊಡ್ಯೂಕ್ ಬರ್ಲ್ರಾ ಅಮಾ?" ಎಂದ. “ನಾಳೆ ಬ್ಯಾಡ, ನಾಳೆ *ಅಮಾಸೆ. ಅಮಾಸೆ ದಿವ್ಸ ಮದ್ದು ಹೊಡೆಯದ್ ಬ್ಯಾಡ, ಮಳೆ ಹೊಳವಿದ್ರೆ ಗುರುವಾರ ಬಾ" ಎಂದೆ. ತಲೆಯಾಡಿಸುತ್ತಾ ಹೊರಟ.

“ಇನ್ನು ಕಾಲು ತೊಳ್ಕಂಡು, ಮೂರ್ತಮುಂಡಿಗೆ, *ಪ್ರಧಾನಬಾಗ್ಲು, *ಕೊಟ್ಗಿಗೆಲ್ಲ ದೀಪ ಹಚ್ಚಿರೆ ಸರಿಯಾಗ್ತು." ಎಂದುಕೊಳ್ಳುತ್ತ ಮನೆಯೊಳಕ್ಕೆ ಬಂದೆ. ಅಡುಗೆ ಮನೆ ದೀಪದ ಸ್ವಿಚ್ ಅದುಮಿದೆ. ಅದು ಹೊತ್ತಿಕೊಳ್ಳಲಿಲ್ಲ. ಟ್ಯೂಬ್ಲೈಟ್ ಅದು. ವೊಲ್ಟೇಜ್ ಕಡಿಮೆ ಇದ್ದರೆ ಅದಕ್ಕಾಗದು. ವಿಧಿಯಿಲ್ಲದೆ, ಇನ್ನೊಂದು ಸ್ವಿಚ್ ಅದುಮಿದೆ, ನೂರು ಕ್ಯಾಂಡಲ್ ಬಲ್ಬ್ ಅದು, ಝಗ್ಗನೆ ಹೊತ್ತಿಕೊಂಡಿತು.

ಅಲ್ಲೇ ಅಡುಗೆ ಮನೆಯ ನೆಲಕ್ಕೆ ಕುಳಿತೆ. ಮಕ್ಕಳ ನೆನಪಾಯಿತು. 'ಬೆಳಿಗ್ಗೆಯಿಂದ ಸಂಜೆ ಐದು ಆರು ಗಂಟೆಯವರೆಗೂ ಹೇಗೋ ಸಮಯ ಹೋಗುತ್ತದೆ. ಮುಸ್ಸಂಜೆಯಿಂದ ಮರುದಿನದ ಬೆಳಗಿನವರೆಗಿನ ಸಮಯ ಕಳೆಯುವುದೇ ಕಷ್ಟವಲ್ಲ!" ಎಂದುಕೊಂಡೇ ಮೇಲಕ್ಕೆ ನೋಡಿದ್ದೇ ಹಿರಿಸೊಸೆ ನಯನಳ ನೆನಪಾಯಿತು.
“ಅತ್ತೆ, ಕಿಚನ್ನಲ್ಲಿ ಇಷ್ಟು ಚಿಕ್ಕ ಲೈಟ್ ಇಟ್ಟಿದ್ದೀರಲ್ಲ, ಹೇಗೆ ಅಡುಗೆ ಎಲ್ಲಾ ಮಾಡ್ಕೋತೀರಾ ನೀವು? ಒಗ್ಗರಣೆ ಸೀದಿದ್ದೂ ಕಾಣ್ಸಲ್ಲ, ನಂಗಂತೂ ಆಗಲ್ಲಪ್ಪ." ಪಟ್ಟಣದಲ್ಲೇ ಹುಟ್ಟಿ ಬೆಳೆದಿದ್ದ ಹಿರಿಸೊಸೆ, ಗಂಡ ಶಿವಾನಂದನಿಗೆ ಟ್ಯೂಬ್ ತರಿಸಿ ಹಾಕಿಸಲು ಹೇಳಿದ್ದಳು.

ಶಿವಾನಂದನೂ ಹೇಳಿದ್ದ, “ಹೌದೇ ಆಯೀ, ರಾತ್ರಿಯಪ್ಪಾಗೆಲ್ಲಾ ನಿಂಗೂ ಕಾಣ್ತಿಲ್ಲೆ, ಒಬ್ನೇ ಇರ್ತ್ಯಲೇ, ಟ್ಯೂಬ್ಲೈಟ್ ಇದ್ರೆ *ಅಡ್ಗೆ ಮಾಡಲೂ ಸಸಾರಾಗ್ತು, ಹಾಲು ಗೀಲು ಕಾಯ್ಸಕ್ಕರೆ, ಕುಕ್ಕರ್ ಒಲೆಮೇಲೆ ಇಟ್ಟಾಗೆಲ್ಲಾ ಎಂತಾರೂ 'ಪುಸ್ತಕ ಗಿಸ್ತಕ" ಓದಲೂ ಅನುಕೂಲ್ವೇ ಆಗ್ತು ನೋಡು, ಯಂಗೆ ಹೊಳದ್ದಿಲ್ಲೆ, ಯನ್ನ್ ಹೆಂಡ್ತಿಗ್ ಗೊತ್ತಾದಷ್ಟೂ ಯಂಗೆ ತೆಳಿತಿಲ್ಲೆ. ಎಷ್ಟ್ ಚೊಲೋ ಸೊಸೇನೇ.... ನಿಂಗೆ!" ಎಂದು ತಾನೇ ಆರಿಸಿಕೊಂಡಿದ್ದ ಹೆಂಡತಿಯನ್ನು ಪರಿಹಾಸ್ಯ ಮಾಡುತ್ತ ಹಳೆಯ ಅಡುಗೆ ಮನೆಗೆ ಹೊಸ ಬೆಳಕೊಂದನ್ನು ಕಾಣಿಸಿ ಹೋಗಿದ್ದ. ಅದೇನೋ ಅನುಕೂಲವೇ ಆಗಿತ್ತು. ಆದರದು ಹೊತ್ತಿಕೊಳ್ಳಬೇಕಲ್ಲಾ!

'ಯೋಚನೆ ಹರಿಬಿಟ್ಟರೆ ಅದು ತಾನಾಗಿಯೇ ಹರಿಯುತ್ತದೆಯೆ? ಮನೆಗೆಲಸ ಸಾಗಬೇಕಲ್ಲ!" ಎಂದುಕೊಳ್ಳುತ್ತ ಎದ್ದೆ. ಕಾಲು ತೊಳೆದು ಎಲ್ಲ ಕಡೆ ದೀಪ ಅಂಟಿಸಿ, “ದೀಪ ಮೂಲೇ ಸ್ಥಿತೋ ಬ್ರಹ್ಮ, ದೀಪ ಮಧ್ಯೇ ಜನಾರ್ಧನಃ" ಎಂದು ಶ್ಲೋಕವನ್ನು ಪಠಿಸುತ್ತಾ *ಜಗುಲಿಗೆ ಬರುವಷ್ಟರಲ್ಲಿ ಏನೋ 'ಛಕ್ಕನೇ" ಹೊಳೆಯಿತು. 'ಅಯ್ಯೋ ರಾಮಾ, ಯನ್ನ್ ಮರ್ವಿಗಿಷ್ಟು!" ಎಂದುಕೊಂಡೆ. ಕಿರಿಮಗ ಶುಭಾನಂದನ ಕಾಗದ ಮಧ್ಯಾಹ್ನವೇ ಬಂದಿದ್ದು ಈಗ ನೆನಪಾಗಿತ್ತು. ಪೊಸ್ಟ್ ಮ್ಯಾನ್ ರಾಮಣ್ಣ ಕಾಗದ ಕೊಟ್ಟಾಗ ಒಲೆ ಮೇಲೆ ಹುಳಿ ಇಟ್ಟಿದ್ದು ನೆನಪಾಗಿ ಕಾಗದವನ್ನು ಓದದೆಯೇ ಅಲ್ಲೇ ಗಡಿಯಾರದ ಕಪಾಟಿಗೆ ಹಾಕಿ ಒಳ ನಡೆದಿದ್ದೆ. ಪತ್ರ ಓದುತ್ತಾ ಅಲ್ಲೇ ಜಗುಲಿಯ ಆರಾಮಖುರ್ಚಿಯಲ್ಲೊರಗಿದೆ. ಪತ್ರ ಓದಿ ಬದಿಗಿಟ್ಟೆ. ಅದರ ಒಕ್ಕಣೆಯಿಷ್ಟೆ ಇತ್ತು.

ಪ್ರೀತಿಯ ಆಯಿಗೆ,

ಶುಭಾನಂದನ ನಮಸ್ಕಾರಗಳು. ಇಲ್ಲಿ ಯಂಗ ಆರಾಮಿದ್ಯ. ಮಾನವ್ 'ಸ್ಕೂಲಿಗೆ" ಹೋಗ್ತ. ಈ ವರ್ಷ ಜೂನ್ ತಿಂಗಳಿಂದ ದೀಪ್ತಿನೂ ಸ್ಕೂಲಿಗೆ ಹಾಕವ್ವು. ದೀಪ್ತಿಗೂ ಈಗ ಎರಡು ವರ್ಷ ಮೂರು ತಿಂಗಳಾತು. ಇನ್ನು ಸ್ಕೂಲಿಗೆ ಕಳ್ಸಲ್ಲೆ 'ಸ್ಟಾರ್ಟ್" ಮಾಡಿರೆ ಸರಿಹೋಗ್ತು.

ಸುಮಿಗೆ ಒಳ್ಳೆ 'ಕಂಪೆನಿ"ಯಲ್ಲಿ ಮತ್ತೆ ಕೆಲ್ಸ ಸಿಕ್ಕಿದ್ದು. ಒಂದು 'ಪ್ರಾಬ್ಲಮ್" ಅಂದ್ರೆ ದೀಪ್ತಿ ಸ್ಕೂಲ್ನಿಂದ ಮನೆಗೆ ಬಂದ್ಮೇಲೆ ಯಾರೂ ಇರ್ತ್ವಿಲ್ಲೆ. ದೀಪ್ತಿ ಯಾವಾಗ್ಲೂ ನಿನ್ನೆ ನೆನ್ಪು ಮಡ್ಕ್ಯತ್ತು. ಅಜ್ಜಿ ಅಜ್ಜಿ ಹೆಳಿ ನಿನ್ ಬಗ್ಗೆನೇ ಮಾತಾಡ್ತು. ನೀನು ಊರ್ಬಿಟ್ಟು ಇಲ್ಲೇ ನಂಗ್ಳ್ ಜೊತೆ ಬಂದು ಇದ್ಬಿಡು. ಇನ್ನೆಷ್ಟು ದಿವ್ಸ ಒಬ್ಳೇ ಊರಲ್ಲಿ, ಆ ಹಳ್ಳಿಯಲ್ಲಿ ಹೋರಾಟ ನಡಸ್ತೆ? ನೀ ನಂಗ್ಳ ಜೊತೆಲ್ಲಿದ್ರೆ ನಂಗಕ್ಕೂ ಸಮಾಧಾನ, ನಂಗ್ಳ ಮಕ್ಳೂ ಸಹ ನಿನ್ನೊಟ್ಟಿಗೆ ಬೆಳಿತ.
ಮನೆನ ಯಾವ್ದಾದ್ರೂ ಶಾಲೆ ಮಾಸ್ತರಿಗೋ, ಯಾರಿಗಾದ್ರು ಬಾಡಿಗೆಗೆ ಬರುವವರಿದ್ರೆ ಕೊಡು. ಇಲ್ಲೆ ಅಂದ್ರೆ ಹಂಗೇ ಇರ್ಲಿ.

ಜಮೀನೆಲ್ಲ ಯಾರಿಗಾದ್ರೂ ಗೇಣಿಗೆ ಕೊಟ್ರಾತು. ಮತ್ತೆಲ್ಲಾ ಆರಾಂ. ನಂಗ ಎಲ್ಲಾ ನಿನ್ನ್ ಬರವಿನ ಹಾದಿ ಕಾಯ್ತಾ ಇದ್ಯ.

ಇಂತಿ ಮಗ
-ಶುಭಾನಂದ.

ಇದೆಲ್ಲಾ ಸರಿ, ಸುಮಿಯೂ ಹಳ್ಳಿಯವಳೇ ಆದರೂ 'ಬಿಇ ಕಂಪ್ಯೂಟರ್ ಸೈನ್ಸ್" ಓದಿದ್ದಾಳೆ. ಎಷ್ಟು ದಿನ ಮಕ್ಕಳು-ಮರಿ ಎಂದು ಮನೆಯಲ್ಲೇ ಕುಳಿತಾಳು. ಅವಳು ಕೆಲಸಕ್ಕೆ ಹೋಗುವ ವಿಚಾರ, ನಾನು ಅವರೊಟ್ಟಿಗೆ ಬೆಂಗಳೂರಿನಲ್ಲಿ ವಾಸಿಸುವ ವಿಚಾರವೆಲ್ಲ ಕಳೆದ ಬೇಸಿಗೆಯ ರಜೆಯಲ್ಲಿ ಶುಭಾನಂದ ಊರಿಗೆ ಬಂದಾಗಲೇ ಚರ್ಚಿಸಿ ನಾನೂ ಬೆಂಗಳೂರಿಗೇ ಹೋಗಿ ಇಳಿದುಕೊಳ್ಳುವುದೆಂದು ತೀರ್ಮಾನಿಸಿದ್ದಾಗಿತ್ತು. ಇನ್ನು ಜಮೀನಿಗೆ ಯಾರಾದರೂ ಗೇಣಿ ತೆಗೆದುಕೊಳ್ಳುತ್ತಾರೆ. ಮನೆಯನ್ನು ಕೂಡ ಹೊಸದಾಗಿ ವರ್ಗವಾಗಿ ಬಂದ ಸೋಮಪ್ಪ ಮಾಸ್ತರಿಗೆ ಬಾಡಿಗೆಗೆ ಕೊಡುವುದಾಗಿ ತೀರ್ಮಾನಿಸಿಯಾಗಿತ್ತು. ಇದೆಲ್ಲ ಮಕ್ಕಳು ಹೇಳಿದಷ್ಟು ಸುಲಭದ್ದಾಗಿರಲಿಲ್ಲವಾದರೂ ಅನಿವಾರ್ಯವಾಗಿತ್ತು.

ಇಲ್ಲಿನ ಈ ಹಸಿರು, ಕೆಸರು, ಹಸಿಮಣ್ಣು, ಮಿಂದು ಹಸಿರಾದಂತ ಮರಗಳು ಬೆಂಗಳೂರಿನಂಥಹ ಒಣಹವೆಯಲ್ಲಿ, ಗಿಜಿ ಗಿಜಿ ಗೊಂದಲದಲ್ಲಿ ಸಿಗಲಿಕ್ಕಿಲ್ಲ. ಯೋಚಿಸಿದಷ್ಟೂ ನಿತ್ರಾಣಳಾದಂತೆ ಕಂಡಿತು. ಆದರೂ ಮೊಮ್ಮಕ್ಕಳೊಡನೆ ಕಾಲಹರಣವಾದೀತಲ್ಲ ಅಂದುಕೊಂಡೆ. ಮೊಮ್ಮಕ್ಕಳ ನೆನಪಾದಂತೆ ಶಿವಾನಂದನ ನೆನಪಾಯಿತು. ಹಿರಿಮಗನಿಗೆ ಮದುವೆಯಾಗಿ ಹತ್ತು ವರ್ಷಗಳೇ ಸಂದಿದ್ದರೂ ಮಕ್ಕಳಿಲ್ಲ, ಇದಕ್ಕಿಂತ ಬೇರೆ ಚಿಂತೆ ಬೇಕೆ ನನಗೆ? 'ಮಕ್ಕಳಿದ್ರೂ ಎಂಥ ಪ್ರಯೋಜ್ನ? ಕಳೆದ ಹತ್ತುಹದಿನೈದು ವರ್ಷದಿಂದ ಗೂಬೆ ಜೀವ್ನ ಯಂದಲ್ದ?" ಎಂದು ನನಗೆ ನಾನೇ ಸಮಾಧಾನ ಮಡಿಕೊಂಡರೂ ಈಗ ತಮಗೆ ಅವಶ್ಯವಿರುವ ಹೊತ್ತಿಗೆ ಈ ಮಕ್ಕಳಿಗೆ ನಾನು ಮತ್ತೆ ಬೇಕಾದೆ ಎಂದು ಅನಿಸದೇ ಇರಲಿಲ್ಲ.

ಇನ್ನೇನು ಒಂದು ತಿಂಗಳಲ್ಲಿ ಪಯಣ ಹೊರಡಬೇಕಲ್ಲ ಎಂದು ನಿಟ್ಟುಸಿರು ಬಿಟ್ಟೆ.“ನಲವತ್ತಾರು ವರ್ಷಗಳಿಂದ ಬಾಳ್ವೆ ನಡೆಸಿದ ಮನೆಯನ್ನು ತೊರೆಯುವ ನರಕ ಯಾರಿಗೂ ಕೊಡಬೇಡಪ್ಪ, ಈ ಕಷ್ಟ ನನಗೇ ಮುಗಿಯಲಿ." ಎಂದೆ. ಮುಂದೆ ಬೆಂಗಳೂರಿಗೆ ಹೊರಡುವ ತಯಾರಿ ಬಗ್ಗೆ ಯೋಚಿಸಲಾರಂಭಿಸಿದೆ. ಅದೇ ಯೋಚನೆಯಲ್ಲಿ ಊಟ ಒಳಗೆ ಹೋಗಲಿಲ್ಲ, ತಿಂದ ಶಾಸ್ತ್ರ ಮುಗಿಸಿ ಎದ್ದೆ. ಮನೆಗೆಲಸ ಮುಗಿಸಿ ಮಲಗಿಕೊಂಡೆ, ಮಧ್ಯ ರಾತ್ರಿಯವರೆಗೆ ನಿದ್ರೆ ಬರಲಿಲ್ಲ.

ಹೀಗೆ ಎರಡು ಮೂರು ದಿನಗಳು ಯಾಂತ್ರಿಕವೆಂಬಂತೆ ಕಳೆದವು. ಗುರುವಾರ ಬೆಳಿಗ್ಗೆ ಅಡಿಕೆ ಮರ ಹತ್ತಿದ ಬಾಳ ಶನಿವಾರ ಸಂಜೆ ಇಳಿದಿದ್ದೂ ಆಯ್ತು. ಅಂದು ಸಂಜೆ “ಅಮ ಒಂದ್ ಹುಂಡು ಎಣ್ಣೆ ಕೊಡ್ರ" ಎನ್ನುತ್ತ ತೋಟದ ಮರದಿಂದಿಳಿದವ ಮನೆಗೆ ಬಂದ. “ಒಂದು ಹುಂಡು ಎಣ್ಣೆ ತಗಂಡು ಎಂತಾ ಮಾಡ್ತೆ? ತಗ ಇದಿಷ್ಟ, ನೀ ಬರೂ ಹೊತ್ತಾಯ್ತು ಹೇಳೇ ಎರೆಸಿಟ್ಟಿದ್ದೆ." ಎಂದು ಕಾಲುಶೇರೆಣ್ಣೆ ಅವನ ಮುಂದಿಟ್ಟೆ. “ಎರಡ್ ದಿನಕ್ಕೆ ಮುಗೀತದೆ ಮಾಡ್ಕಂಡೆ, ನೋಡ್ರೆ ನೀ ಮೂರಾಳ್ ಲೆಕ್ಕ ಮಾಡ್ದೆ, ನೀನೂ ಎಲ್ಲರಂಗೆ ಸುರು ಮಾಡಿದ್ಯ ಹೆಂಗೆ?" ಎಂದೆ ಬಾಯಿ ತಪ್ಪಿ.

“ಇಲ್ರ ಅಮ್ಮಾ, ಆಗಿದ್ದು ಎರಡಾಳು ಕೆಲ್ಸನೇ..ಯ, ಮೂರು ದಿನ ಹಿಡೀತು. ಎರಡಾಳು ಲೆಕ್ಕ ಮಾಡ್ರ ಅಮ, ಮೊದ್ಲನಂಗೆ ಬಾಳಂಗೆ 'ಪಟ ಪಟ" ಮರ ಹತ್ತೂಕ್ ಆಗುದಿಲ್ರ" ಎಂದದ್ದೆ ನನಗೆ ಈಗ ಬಾಳನ ವಯಸ್ಸನ್ನು ಲೆಕ್ಕ ಹಾಕುವ ಸರದಿ ಬಂದಿತ್ತು.
“ಎಷ್ಟಾಯ್ತಾ ಬಾಳಾ ನಿಂಗೆ ವರ್ಷ?" ಎಂದೆ.

“ಆಯ್ತ್ರಾ..... ಒಂದ್ ನಲವತ್ತೈದ್... ಐವತ್ತು." ಎಂದ. ಅವನ ಲೆಕ್ಕವೇ ಐವತ್ತರಷ್ಟಿರುವಾಗ ಬಾಳನಿಗೆ ಅರವತ್ತರ ಮೇಲೆಯೇ ವರ್ಷ ಆಗಿರಬೇಕೆಂದುಕೊಂಡೆ. ಚಹ ಕುಡಿದ ಬಾಳ ಲೋಟ ತೊಳೆದು ಬೋರಲು ಹಾಕಿ, “ಬರ್ತ್ನಂಡ್ರ ಅಮಾ, ಎಂತಕ್ಕೋ ಮೈ ಕೈ ನೋವು, ಹೋಗಿ ಸ್ನಾನ ಮಾಡ್ತೆ." ಎನ್ನುತ್ತಾ ತಲೆ ಸವರಿಕೊಂಡು ಹೊರಟ ಬಾಳನನ್ನೇ ದಿಟ್ಟಿಸಿದೆ. ಬಾಳನ ತಲೆ ನೋಡಿ ತೊಳೆದು ಎಣ್ಣೆ ಸವರಿ ಅಟ್ಟಕ್ಕಿಟ್ಟ ತೊಡದೇವಿನ ಗಡಿಗೆಯ ನೆನಪಾಯಿತು.

“ಹೌದಲ್ಲ, ಈ ವರ್ಷ ಆಲೇಮನೆ ವಕ್ಲಲ್ಲಿ ಕಬ್ಬಿನಹಾಲು ಸಿಕ್ರೂ, *ತೊಡದೇವು ಮಾಡಲಿಲ್ಲವಲ್ಲ!" ಎಂದು ಯೋಚಿಸುತ್ತಲೆ, “ತಿನ್ನುವವರಿಲ್ಲವೇ! ಮಾಡಿಟ್ಟರೇನು ಪ್ರಯೋಜನ?" ಎಂದು ಸಮಾಧಾನವಾದೆ.

ರಾತ್ರಿ ಊಟ ಮುಗಿಸಿ ಮಲಗಿದ್ದೇ ನೆನಪು, ನಿದ್ರೆ ಬಂದಿದ್ದು ಗೊತ್ತಾಗಲಿಲ್ಲ. ಮೂರು ದಿನಗಳಿಂದ ತೋಟದ ಕೆಲಸಕ್ಕೆ ಬಂದ ನಾಲ್ಕು ಆಳುಮಕ್ಕಳಿಗೆ ಊಟ, ತಿಂಡಿ ಎಂದು ನನಗೂ ನಾಲ್ಕಾಳು ಕೆಲಸವೇ ಆಗಿತ್ತು.

ಹೀಗೇ ನಾಲ್ಕಾರು ದಿನ ಕಳೆದು ಹೋಗಿ, ಒಂದು ಬೆಳಗು ಹರಿಯುತ್ತಿರುವಂತೆಯೇ ಮನೆಯ ಹಿತ್ತಲಿನ ಬಾಗಿಲನ್ನು ಯಾರೋ ತಟ್ಟಿದಂತಾಗಿ ಹೋಗಿ ತೆರೆದದ್ದೇ ತಡ, ಹೊನ್ನಿ ಒಳನುಗ್ಗಿ ನನ್ನನ್ನು ಗಟ್ಟಿಯಾಗಿ ತಬ್ಬಿ “ಅಮಾ... ನನ್ನ್ ಸಾಯಿಸ್ತ್ರು, ಉಳಿಸ್ರ ಅಮಾ..." ಚೀರುತ್ತಿದ್ದಾಳೆ. “ಏನಾಯ್ತು?" ಎಂದೆ ಗಾಬರಿಯಿಂದ. “ನನ್ನ ಅವ್ರೆಲ್ಲಾ ಹೊಡಿತ್ರು ಅಮ...ನನ್ನ್ ಉಳಿಸ್ರಾ...." ಎಂದು ಅರಚುತ್ತಿದ್ದಾಳೆ. ಹಿಂದೆಯೆ ಬಂದ ಅವಳಿಬ್ಬರು ಅಣ್ಣಂದಿರನ್ನು ಕಂಡ ಹೊನ್ನಿ ಅಡುಗೆ ಮನೆಗೇ ನುಗ್ಗಿದ್ದಳು.

“ಏ ಹೊನ್ನೀ.....ನೀ ಹಿಂಗೆ ನಮ್ಮನೆ ಒಳಗೆಲ್ಲಾ ಬರಬಾರ್ದು. ನೀ ಅಡಿಗೆ ಗೂಡಿಗೆಲ್ಲ ಬಂದಿದ್ದೆಲ್ಲಾ ಕಂಡ್ರೇ.... ಅಚ್ಚೆಮನೆ ಜಲಜಮ್ಮ ನಮ್ಮಿಬ್ರುನ್ನೂ ಊರಿಂದ ಹೊರಗೇ ಹಾಕುಸ್ತ್ರು. ನಮ್ಮನೆ ಮಾಡಿಂದ ಮೆಟ್ಲವರಿಗೂ ಗ್ವಾಮಾಯಾ ಹಾಕಿ ಸಾರ್ಸಿ ತೊಳುಸ್ತ್ರು." ಎಂದೆ.

“ನಾ ಅವ್ರ ಕೂಡೆ ಹೋಗೂದಿಲ್ರ ಮನಿಗೆ, ಮನಿಯೊಳ್ಗೆ ಕಟ್ ಹಾಕ್ತ್ರು, ದನ ಬಡ್ದಂಗೆ ಬಡಿತ್ರು, ನಿಮ್ಮನೆಲ್ಲೇ ಇರ್ತೆ, ನಿಮ್ಮನೆ ಗ್ವಾಮಿಯಾ ಹಾಕಿ ನಾನೇ ತೊಳಿತೆ, ಜಲಜಮ್ಮಂಗೂ ನಾ ಹೇಳ್ತೆ. ನನ್ನುಳ್ಸ್ರ ಅಮಾ...." ಬಂದು ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದು ನನ್ನ ಹಿಂದೆ ನಿಂತಿದ್ದಳು.

ಹಾಗೂ ಹೀಗೂ ಸಂಬಾಳಿಸಿ ಹಿತ್ತಲ ಬಾಗಿಲಿಗೆ ತಂದದ್ದೇ ಅವಳ ಅಣ್ಣಂದಿರು, 'ಏನು,ಎತ್ತ?" ಎಂದು ವಿಚಾರಿಸಲೂ ಕೊಡದೇ “ನಿಮ್ಗೆ ಗೊತ್ತಿಲ್ರ ಅಮಾ...ಇವ್ಳ ಹಾರಾಟ *'ಜಿನ ಜಿನಾ.." ಜ್ಯಾಸ್ತಿ ಬಿಟ್ರೆ ಕಮ್ಮಿ ಇಲ್ಲ." ಎನ್ನುತ್ತಾ ಅವಳನ್ನು ಎಳೆದುಕೊಂಡೇ ಹೋದರು.

'ಬೆಳ್ಳಂ ಬೆಳಿಗ್ಗೆ" ನಡೆದ ಈ ಹಗರಣದ ಗುಂಗಿನಲ್ಲೇ ಹೊತ್ತು ಮುಳುಗಿತ್ತು. ಸಂಜೆ ಕಳೆಯುವಾಗ ಮಾಚ ಬಂದಿದ್ದವನು ಹೇಳಿದ್ದ. “ನಿನ್ನೆ ಬಾಳಾ ದೊಡ್ಡ ಹೆಗ್ಡ್ರಮನೆ ತ್ವಾಟದ್ ಮರದಿಂದ ಬಿದ್ದೂ... ರಾಶೀ ಹೊಡ್ತ್ವೇ ಬಿದ್ದಂಗದೆ, ಇನ್ನು ಬಾಳಾ ಏಳೂದ್ ಕಷ್ಟ್ವೇಯಾ." ಎಂದಿದ್ದ.

“ಅಯ್ಯೋ ಬಾಳಾ.....ನಿಂಗೂ ಇಂಥಾ ಹೊತ್ ಬಂತೇನಾ? ಒಳ್ಳೆಯವ್ರಿಗೆ ಕಾಲಿಲ್ಲ." ಎಂದುಕೊಂಡೆ. ಇದ್ದಕ್ಕಿದ್ದಂತೆ ಯೋಚನೆ ಹತ್ತಿತು. “ಅದಕ್ಕೇನೆ ಹೊನ್ನಿ ಇವತ್ತು ನಮ್ಮನೆಯ ಬಾಗಿಲ ತಟ್ಟಿದ್ದು! ಮೊದಲೇ ಬಾಳನ ಗಂಡುಮಕ್ಕಳಿಗೆ ಬುದ್ದ್ಹಿಸರಿಯಿರದ ತಂಗಿಯ ಹೊರೆ ಬೇಕಾಗಿಯೇ ಇಲ್ಲ! ಇನ್ನು ಆ ಹೊನ್ನಿಗೆ ಸುಖವಿಲ್ಲ. ದೇವರು ಇಂಥವರನ್ನೆಲ್ಲ ಯಾಕಾದರೂ ಸೃಷ್ಟಿಸುತ್ತಾನೋ?" ಎಂದು ಹಳಹಳಿದುಕೊಂಡೆ. ಹೊನ್ನಿ ಬೆಳಿಗ್ಗೆ ಮಾಡಿದ ರಂಪಕ್ಕೆ ಬಲವಾದ ಕಾರಣ ಇದ್ದಿರದೇ ಇರಲಾರದು ಎಂದುಕೊಂಡೆ.

ಮನಸ್ಸೆಲ್ಲಾ ಗೊಂದಲವಾದಂತಾಗಿ, ಹಿತ್ತಲಿನ ಗಿಡಗಳನ್ನಾದರೂ ನೋಡುತ್ತಾ ಇದನ್ನೆಲ್ಲಾ ಮರೆಯೋಣ ಎಂದುಕೊಳ್ಳುತ್ತಾ ಆ ಕಡೆ ನಡೆದೆ.
ಮನೆಯ ಹಿಂದಿನ ಇಪ್ಪತ್ತೈದೂ ತೆಂಗಿನಗಿಡ ಹಾಕುವಾಗ ಪಟ್ಟ ಕಷ್ಟವೆಲ್ಲಾ ನೆನಪಿಗೆ ಬಂತು. ಗಿಡ ಹಾಕಿದ ವರ್ಷವೇ ಬೇಸಿಗೆಯಲ್ಲಿ ತೀರ ಬಿಸಿಲಿನಿಂದಾಗಿ ಮನೆ ಬಾವಿಯ ನೀರು ಸಾಲದೇ ಕೆರೆಯಿಂದ ನಾನು ಮತ್ತು ಇವರು ನೀರು ಹೊತ್ತಿದ್ದು, ಗಿಡ ಹಾಕುವಾಗ ಆಳುಗಳ ಜೊತೆ ಇವರೂ ಗುಣಿ ತೆಗೆದದ್ದು ಎಲ್ಲ ನೆನಪಾಗಿ ಕಣ್ಣಲ್ಲಿ ಸಣ್ಣಗೆ ನೀರು ಒಸರಿಕೊಂಡಿತು .

ಮುಂಬರುವ ಚೈತ್ರಕ್ಕೆ ಈ ಗಿಡಗಳಿಗೆ ಇಪ್ಪತ್ತು ವರ್ಷ ತುಂಬಿ ಇಪ್ಪತ್ತೊಂದು ಮೆಟ್ಟುತ್ತದೆ! 'ಅದೆಷ್ಟು ಬೇಗನೆ ದಿನ ಕಳೆದು ಹೋಗುತ್ತದ" ಅಂದುಕೊಳ್ಳುತ್ತಿರುವಂತೆಯೇ ನಾ ಹಸ್ತವೂರಿಕೊಂಡಿದ್ದ ತೆಂಗಿನ ಮರದಲ್ಲೇನೋ ಕೈಗೆ ತಗುಲಿದಂತಾಗಿ ಅಲ್ಲಿ ನೋಡಿದಾಗ ಕಂಡಿದ್ದು ಕಳೆದ ದೀಪಾವಳಿಯಲ್ಲಿ ಮರಕ್ಕೆ ಬಳಿದ ಜೇಡಿ ಕೆಮ್ಮಣ್ಣಿನ ಚಿತ್ತಾರ.' ಮುಂಬರುವ ವರ್ಷ ನಿಂಗೆ ಜೇಡಿ ಬಳಯವ್ವು ಯಾರೂ ಇಲ್ಲೆ, ಆಯಿ ಬೆಂಗ್ಳೂರಿಗೆ ಹೊಂಟಿದ್ದು, ತೆಳತ್ತಾ" ಎಂದೆ. ಎಷ್ಟೋ ವರ್ಷದಿಂದ ಹಿತ್ತಲಿನ ಗಿಡಗಳು, ಕೊಟ್ಟಿಗೆಯ ದನಗಳೇ ಈ ಆಯಿಗೆ ಮಕ್ಕಳಾಗಿದ್ದವು.

ಹಾಗೆಯೇ ದನಕ್ಕೆ ಹುಲ್ಲು ಹಾಕಲು ಕೊಟ್ಟಿಗೆಯತ್ತ ಹೆಜ್ಜೆ ಹಾಕಿದೆ. ನನ್ನ ಬರುವು ಗಿರಿಜೆಆಕಳಿಗೆ ದೂರದಿಂದಲೇ ಗೊತ್ತಾಗಿಬಿಡುತ್ತದೆ. "ಅಂಬಾ" ಎಂದು ಕರೆಯತೊಡಗಿತ್ತು. " ಬಂದಿ ತಡಿಯೇ...." ಎನ್ನುತ್ತಾ ಒಳ ಹೋಗಿ, ಹುಲ್ಲು ಹಾಕಿ, ಕೋಡಿನ ಮಧ್ಯೆ, ಬಾಲ ಎಲ್ಲವನ್ನೂ ಸವರಿ, ಅವಳೊಡನೆ ಸ್ವಲ್ಪ ಹೊತ್ತು ಮಾತನಾಡುತ್ತಾ ನಿಂತೆ, ಅವಳೂ ಸಹ ಅರ್ಥವಾದವಳಂತೆ ಮೆಲುಕು ಹಾಕುತ್ತಾ ನಿಂತಿದ್ದಳು. ಹಾಕಿದ ಹುಲ್ಲನ್ನು ಮುಟ್ಟಿರಲಿಲ್ಲ. 'ಇವಳಿಗೂ ತಿಳಿಯಿತೋ ಹೇಗೆ ನಾನು ಊರು ಬಿಡುವ ವಿಷಯ" ಎನಿಸುತ್ತಲೇ ಮನಸ್ಸೆಲ್ಲಾ ಮತ್ತಷ್ಟು ಭಾರವಾಯಿತು. "ಗಿರಿಜೆ ನಮ್ಮನೆಯಲ್ಲೆ ಹುಟ್ಟಿದ್ ತಳಿ, ಇದನ್ ಮಾತ್ರ ಮಾರಲ್ಲಾಗ ನೋಡು" ಇವರು ತೀರಿಕೊಳ್ಳುವುದಕ್ಕೆ ಎರಡು ತಿಂಗಳಿರುವಾಗ ಆಡಿದ ಮಾತಾಗಿತ್ತು ಇದು. ಗಿರಿಜೆಯ ಕರುವನ್ನು ಮುದ್ದಿಸುವಾಗ ಕಣ್ಣೀರು ಕರುವಿನ ಮುಖ್ಹವನ್ನೆಲ್ಲಾ ತೊಳೆದಿತ್ತು.ಯಾರ ಯಾರ ಋಣ ಎಲ್ಲೆಲ್ಲಿ ಇರುತ್ತದೋ? ಮತ್ತೆ ಮತ್ತೆ ಯೋಚಿಸಿ ಪ್ರಯೋಜನವಿಲ್ಲೆಂದುಕೊಂಡು ಮನೆಗೆ ಬಂದೆ.

ಹೀಗೆಯೇ ನಾಲ್ಕಾರು ದಿನ ಕಳೆದು ಒಂದು ಸಂಜೆ ಮಾಚ ಬಂದ, ಕಂಬಳಿಯಿಲ್ಲ ಏನಿಲ್ಲ! ನೆನೆದುಕೊಂಡೇ ಬಂದು ಹೇಡಿಗೆಯ ತುದಿಯಲ್ಲಿ ಕುಂತಿದ್ದ. ಒಂದು ಸ್ವಲ್ಪ ಹೊತ್ತಿನವರೆಗೂ ಸುಮ್ಮನೆ ಇದ್ದ. ನಾನೇ ಮೌನ ಮುರಿದು ಕೇಳಿದೆ “ ಯಾಕೋ ಮಾಚ ಮಾತೇ ಇಲ್ಲ" ಎಂದೆ. “ಎಂತ ಮಾತಾಡೂದ್ರ ಅಮ್ಮ, ನಿಮ್ಗೆ ಗೊತ್ತಾಗಿಲ್ಯ ಕಥೆ! ಬಾಳನ್ನ್ ಮನೆದು?" ಎಂದ. “ನಂಗ್ ಗೊತ್ತಾಗ್ಲಿಲ್ಲಲಾ, ನಾ ಎಲ್ಲೋಗ್ತೆ ಮನೆ ಬಿಟ್ಟು? ಮೂರು ದಿನದಿಂದ ನಮ್ಮನಿಗೂ ಯಾರೂ ಬರ್ಲಿಲ್ಲ" ಎಂದೆ.

“ನಾಕ್ ಜಿನದಿಂದ ಹೊನ್ನಿ ಕಾಣ್ಲಿಲ್ಲ ಅಂದ್ರು, ಆ ಹುಚ್ಚು ಮುಂಡೆದು ಇನ್ನೆಲ್ಹೋಗ್ತದೆ.....? ಊರ್ಮೆಲೆ ಹೋದ್ರೆ ಕಂಡ ಮಂದಿ ತಂದ್ ಬಿಡ್ತ್ರು ಹೇಳಿ ಸುಮ್ಕಾದ್ರೂ...... ಎಲ್ರುವಾ. ಇವತ್ತು ಹಟ್ಟಿಸಪ್ಪಿಗೆ ಹೇಳಿ ಹರಿಬ್ಯಾಣಕ್ಕೋದವ್ರು ಯಾರೋ ಬಂದು ಹೇಳ್ರು, ಬ್ಯಾಣದಲ್ಲಿರೂ... ಆಲದ ಮರದ ದೇವ್ರದ್ದು ದೋ...ಡ್ಡ್ಬಾವಿ ಇಲ್ಲ್ರ? ಅದ್ರಲ್ಲಿ ಹೆಣ ಅದೆ ಹೇಳಿ, ನೋಡೂಕೆ ಹೇಳಿ ಹೋದ್ರೆ ಅದು ನಮ್ ಬಾಳನ ಮಗ್ಳು ಹೊನ್ನಿದೆಯಾ! ಹೆಣ ಅಂದ್ರೆ ನೀರು ಕುಡ್ದು ಜಾತ್ರೆ ಪುಗ್ಗಿ ಉಬ್ಬ್ದಂಗೆ ಉಬ್ಬೋಗದೆ. ಬ್ಯಾಣದ ಬಾವಿ ಹತ್ರ ಜನ...., ಪೋಲೀಷ್ರು ಎಲ್ಲಾರೂ ಬಂದಾಗದೆ. ಇನ್ನೆಂತಾ ಆಗ್ತದ್ಯ ಎಂತ ಕತೆನ? " ಎಂದವನೇ “ನಿಮ್ಗೊಂದು ಹೇಳ್ ಹೋಗುವಾ ಹೆಳ್ ಬಂದನ್ರಾ, ನಾ ಹೋಗ್ತೆ, ಬಾಳನ್ ಮನೆ ಕೂಡೆ ಯಾರಿಲ್ರಾ, ಬಾಳನ್ ತಾವ್ ಇರ್ತೆ." ಹೊರಟೇ ಬಿಟ್ಟ.

ಮಾಚ ಹೊರಟ ಮೇಲೆ ಮನೆಯಲ್ಲಿ ಕುಳಿತುಕೊಳ್ಳಲೂ ಆಗದು, ನಿಲ್ಲಲೂ ಆಗದು, ಹೊನ್ನಿಯದೇ ಯೋಚನೆ!

ಹೊನ್ನಿ ಮನೆಗೆ ಬಂದು ರಂಪ ಮಾಡಿದ್ದು ನೆನಪಾಗುತ್ತಲೇ ಇತ್ತು. “ಅಮ್ಮಾ..... ನನ್ನುಳಿಸ್ರಾ" ಎಂದು ಯಾಚಿಸಿದ್ದು, ಕೈ ಹಿಡಿದೆಳೆದಿದ್ದು ಎಲ್ಲ ಇಷ್ಟು ಬೇಗ ಬರಿಯ ನೆನಪಾಯ್ತಲ್ಲ! ಎಂದು ಎನೋ ಸಂಕಟವಾಯಿತು.

ಅವಳ ಬಗ್ಗೆ ಯೋಚಿಸುತ್ತ ಕುಳಿತರೆ ನನ್ನ ಬೆಂಗಳೂರಿನ ಪಯಣದ ಕೆಲಸ ಸಾಗಬೇಕಲ್ಲ! ಕುಳಿತು ಮಗನಿಗೆ ಕಾಗದ ಬರೆದೆ. ಮರುದಿನ ಬಂದ ಪೋಸ್ಟ್ ಮ್ಯಾನ್ ರಾಮಣ್ಣನಿಗೆ ಆ ಕಾಗದವನ್ನು ಪೋಸ್ಟ್ ಮಾಡಲು ಕೊಟ್ಟ ಮೇಲೆ ಏನೋ ಮನಸ್ಸಿನಲ್ಲೆಲ್ಲ ಸಂದಿಗ್ಧ.

ಕಾಗದದ ಸಾರಂಶವಿಷ್ಟೆ, ನಾನು ಬೆಂಗಳೂರಿಗೆ ಹೋಗಿ ಅಲ್ಲಿ ಮಕ್ಕಳೊಂದಿಗೆ ನೆಲೆಯಾಗುವ ಕಾರ್ಯಕ್ರಮವನ್ನು ಮುರಿದಾಗಿತ್ತು.

ಜಗುಲಿಗೆ ಬಂದು ಆರಾಮ ಖುರ್ಚಿಯಲ್ಲಿ ಕುಳಿತು ಕಿಟಕಿಯಿಂದ ಸೂರಂಚಿನ ನೀರು ಹನಿಯಾಗುವದನ್ನೇ ನೋಡುತ್ತಲಿದ್ದೆ. 'ನಾನು ಮಕ್ಕಳಿರುವಲ್ಲಿ ಹೋಗಿಲ್ಲವಾದರೂ ನನ್ನ ಮಕ್ಕಳ್ಯಾರೂ ನಾನಿಲ್ಲದೆ ಹೋದರೆ ಅನಾಥರಾಗಲಾರರು, ಹೆಂಡಿರು ಮಕ್ಕಳೊಡನೆ ಆರಾಮವಾಗಿಯೇ ಇದ್ದಾರೆ. ನನ್ನ ಮಕ್ಕಳನ್ನು "ಡಾಕ್ಟರು', "ಎಂಜಿನಿಯರು' ಮಾಡಿದ ಈ ಮನೆ, ಈ ತೋಟ, ಗದ್ದೆ, ಈ ಮನೆಮುಂದಿನ ಅಂಗಳಗಳು ನಾನಿಲ್ಲದೆ ಖಂಡಿತ ಅನಾಥವಾಗುತ್ತಿದ್ದವು. ನನ್ನ ಈಗಿನ ಸಂಕಲ್ಪ ಸರಿಯಾದದ್ದೆ. ತಪ್ಪೇನಿಲ್ಲ." ಎಂದು ನನಗೆ ನಾನೇ ಸಮಾಧಾನವಿತ್ತುಕೊಂಡೆ.

“ಇನ್ನು ನಾನೋ, ಒಬ್ಬಳೇ ಇಷ್ಟು ವರ್ಷ ಇದ್ದುದಾಯ್ತು, ಇನ್ನೇನು ಮಹಾ 5ರಿಂದ 10ವರ್ಷ! ಇರುವವರೆಗೆ ಈ ಮಣ್ಣಿಗೊಂದಿಷ್ಟು ನೀರು ನನ್ನಿಂದ, ಈ ಮಣ್ಣಿಂದ ನನಗಿಷ್ಟು ಆಸರೆ!?."

ಹೊನ್ನಿಯ ವಿಚಾರ ತಲೆ ಕೊರೆಯುತ್ತಲೇ ಇತ್ತು. 'ಅವಳಿಗೆ ನಾನವತ್ತು ರಕ್ಷಣೆ ನೀಡಿದ್ದರೆ ಅವಳು ಬದುಕುಳಿಯುತ್ತಿದ್ದಳೋ ಏನೊ! ಅವಳು ಬದುಕಿಯಾದರೂ ಎಷ್ಟು ಸುಖ ಪಡಬಹುದಿತ್ತು! ಬಾಳ ಬಿದ್ದದ್ದೇ ಅವಳೂ ಮಣ್ಣು ಸೇರಿದಳು !" ಎಂದೆಲ್ಲ ಏನೇನೊ ಹಳಹಳಿಸುತ್ತಿದ್ದೆ.

ಒಂದಿಷ್ಟು ಪ್ರಶ್ನೆ ಮನವನ್ನೆಲ್ಲ ಆವರಿಸಿತ್ತು. “ಬುದ್ಧಿ ಸರಿಯಿರದ ಹೊನ್ನಿ ಬಾವಿ ಸೇರುವ ತನಕ ಯೋಚಿಸಿದಳೆ? ಅಥವಾ.... ಯಾರಾದರೂ..... ಅವಳನ್ನೂ...?"

“ಮುಂದಿನ ಕೊನೆ ಕೊಯ್ಲಿಗೆ ಮರ ಹತ್ತುವವರು ಯಾರು? ಕೊನೆ ಮನೆ ಕಾಣದು ಹೆಂಗೆ? ಬಾಳ ಇನ್ನು ಈ ಜನ್ಮದಲ್ಲಿ ಮರ ಹತ್ತುವದೂ ಸರಿಯೆ! ಹೂಂ" ಎಂದು ನಿಟ್ಟುಸಿರಿಟ್ಟು ಒಳನಡೆದು ರೇಡಿಯೋ ಸ್ವಿಚ್ ಅದುಮಿದರೆ ಹಾಡೊಂದು ಕೇಳುತ್ತಲಿತ್ತು.... "ಯಾರಿಗೆ ಯಾರುಂಟು.... ಎರವಿನ ಸಂಸಾರ......."

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X