ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿಕೃಷ್ಣಾರೆಡ್ಡಿಯರ 'ಎದೆಯ ಕೂಗು ಮೀರಿ'ದ ಮಾತುಗಳು..

By Staff
|
Google Oneindia Kannada News

Ravi Krishna Reddy
ಕತೆ-ಕಾದಂಬರಿಯನ್ನು ಬರೆಯುವ ಲೇಖಕ ಎಲ್ಲಾ ಬಗೆಯ ಪ್ರಶಂಸೆ-ಟೀಕೆಗೆ ಸಿದ್ದವಾಗಿಯೆ ಬರೆಯಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಟೀಕೆ, ವಿಮರ್ಶೆ, ಅಭಿಪ್ರಾಯಗಳಿಗೆ ಮೂಲ ಲೇಖಕರಾದ ಅಸಿತ ಪ್ರಭುಶಂಕರ್‌ರವರಿಂದಲೂ ಮತ್ತು ಅನುವಾದಕನಾದ ನನ್ನಿಂದಲೂ ಸ್ವಾಗತವಿದೆ.

ಪ್ರಿಯ ಓದುಗರೆ,

ಸರಿಯಾಗಿ ವರ್ಷದ ಹಿಂದೆ ಆರಂಭವಾದ 'ಎದೆಯ ಕೂಗು ಮೀರಿ..." ಕಾದಂಬರಿಯ ಕೊನೆಯ ಕಂತು ಕಳೆದ ಸೋಮವಾರ ಪ್ರಕಟವಾಗಿದೆ. ಈ ಒಂದು ವರ್ಷದಲ್ಲಿ ಅನೇಕ ಓದುಗರು ಕಾದಂಬರಿ ಬಗ್ಗೆ ಹಲವಾರು ರೀತಿಯ ಪತ್ರಗಳನ್ನು ಬರೆದು ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಪ್ರಕಟವಾಗಬೇಕಾದ ಕಂತು ಅಂದು ಪ್ರಕಟವಾಗದೆ ಹೋದರೆ ಯಾಕೆ ಇನ್ನೂ ಪ್ರಕಟವಾಗಿಲ್ಲ ಎನ್ನುವ ಪತ್ರಗಳಿಂದ ಹಿಡಿದು, ಅನುವಾದ ಶೈಲಿ ಮತ್ತು ಕಥಾ ಹಂದರವನ್ನು ಟೀಕಿಸಿ ಕೆಲವು, ಮೆಚ್ಚಿಕೊಂಡು ಹಲವು, ಸ್ವಲ್ಪ ಅಸಭ್ಯವಾಗಿ, ಅಶ್ಲೀಲವಾಗಿ ವೈಯಕ್ತಿಕ ಟೀಕೆ ಮಾಡಿದಂತಹ ಪತ್ರಗಳನ್ನೂ ಕೆಲವು ಓದುಗರು ಕಳಿಸಿದ್ದಾರೆ. ಧನ್ಯವಾದ.

ಯಾವುದೊ ಒಬ್ಬ ವ್ಯಕ್ತಿಯ ವೈಯಕ್ತಿಕ ಸಮಸ್ಯೆಯನ್ನು ತ್ಯಾಗ, ಪಾತಿವ್ರತ್ಯ, ಪ್ರೇಮ, ಸಹನಶೀಲತೆ, ಪರಂಪರೆ, ಸಂಸ್ಕೃತಿಯ ಹೆಸರಿನಲ್ಲಿ ವೈಭವೀಕರಿಸಿ, ಕಲ್ಪನಾಶಕ್ತಿಯಿರುವ ಯಾರು ಬೇಕಾದರೂ ದಿನಕ್ಕೊಂದು ಕತೆ, ವಾರಕ್ಕೊಂದು ಕಾದಂಬರಿ ಬರೆಯಬಹುದು; ಬರೆದಿದ್ದಾರೆ; ಬರೆಯುತ್ತಿದ್ದಾರೆ. ಅವುಗಳಲ್ಲಿ ಬಹುಪಾಲು ಸಮಯ ಕಳೆಯಲು ಓದಲು ಲಾಯಕ್ಕಾದ ಕೃತಿಗಳಾಗುತ್ತವೆಯೆ ಹೊರತು ಅವಕ್ಕೆ ಸಾರ್ವಕಾಲೀನ ಸಮಾನತೆಯ ತತ್ವಗಳಾಗಲಿ, ಸಂದೇಶಗಳಾಗಲಿ, ಸತ್ಯವಾಗಲಿ ಇರುವುದಿಲ್ಲ. ಓದಿದ ಬಳಿಕ ಹಿತಾನುಭವವಾಗಬಹುದು. ಆದರೆ ಯಾರನ್ನೂ ಅದು ಕಾಡದೆ ಹೋಗಬಹುದು; ಇಲ್ಲವೆ ತಮ್ಮ ಅಥವ ಬೇರೆಯವರ ಕೆಟ್ಟ ನಡವಳಿಕೆಯನ್ನು ತಿದ್ದುವ, ಅಥವ ತಮಗೆ ಬೇಕಾದವರ ಒಳ್ಳೆಯ ನಡವಳಿಕೆಯನ್ನು ಗಮನಿಸುವ, ಪ್ರಶಂಸಿಸುವ ಯಾವುದೆ ಒಳನೋಟ ತೋರಿಸದೆ ಹೋಗಬಹುದು. ಅಂತಹವನ್ನು ಓದಿದ ಮೇಲೆ ಯಾರೂ ಅದರ ಬಗ್ಗೆ ಚರ್ಚಿಸುವುದಿಲ್ಲ; ಟೀಕೆ ಮಾಡುವುದಾಗಲಿ ಮೆಚ್ಚಿಕೊಂಡು ಲೇಖಕರಿಗೆ ಪತ್ರ ಬರೆಯುವುದಾಗಲಿ ಅಪರೂಪವೆ.

ಯಾವುದೊ ಒಂದನ್ನು ಸಾಮಾಜಿಕ ಸಮಸ್ಯೆ ಎಂದ ಮಾತ್ರಕ್ಕೆ ಅದು ಎಲ್ಲರ ಮನೆಯ ಸಮಸ್ಯೆಯೇನೂ ಅಲ್ಲ. ಆದರೆ ಅದಕ್ಕೊಂದು ಪ್ಯಾಟರ್ನ್‌ ಇರುತ್ತದೆ. ಅದನ್ನು ಗುರುತಿಸುವುದು ಸುಲಭವಾದ್ದರಿಂದ ಅದನ್ನು ತಡೆಗಟ್ಟಲು ಸಮಾಜದ ಸಹಾಯ, ಸರ್ಕಾರದ ಕಾನೂನುಗಳ ಅವಶ್ಯಕತೆಯಿರುತ್ತದೆ. ಎಲ್ಲಕ್ಕಿಂತ ಮೊದಲು ಆ ಸಮಸ್ಯೆಯನ್ನು ಗಂಭೀರವಾಗಿ, ಹಿಂಜರಿಯದೆ ಮಾತನಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು 'ಎದೆಯ ಕೂಗು ಮೀರಿ..."ಯನ್ನು ಗಮನಿಸಬೇಕಾಗುತ್ತದೆ. ಹಾಗೂ ಇಂತಹ ಒಂದು ಸಾಮಾಜಿಕ ಸಮಸ್ಯೆಯ ಹಿನ್ನೆಲೆ ಇಟ್ಟುಕೊಂಡು ಕತೆ-ಕಾದಂಬರಿಯನ್ನು ಬರೆಯುವ ಲೇಖಕ ಎಲ್ಲಾ ಬಗೆಯ ಪ್ರಶಂಸೆ-ಟೀಕೆಗೆ ಸಿದ್ದವಾಗಿಯೆ ಬರೆಯಬೇಕಾಗುತ್ತದೆ.

ಈ ಸಮಯದಲ್ಲಿ ನಿಮ್ಮ ಎಲ್ಲಾ ಟೀಕೆ, ವಿಮರ್ಶೆ, ಅಭಿಪ್ರಾಯಗಳಿಗೆ ಮೂಲ ಲೇಖಕರಾದ ಅಸಿತ ಪ್ರಭುಶಂಕರ್‌ರವರಿಂದಲೂ ಮತ್ತು ಅನುವಾದಕನಾದ ನನ್ನಿಂದಲೂ ಸ್ವಾಗತವಿದೆ. ದಯವಿಟ್ಟು ಬರೆಯಿರಿ. ತಮ್ಮಲ್ಲಿ ನನ್ನ ಒಂದೇ ಒಂದು ಮನವಿ ಏನೆಂದರೆ ಅನಾಮಿಕರಾಗಿ ಬರೆಯಬೇಡಿ; ಅಶ್ಲೀಲವಾದ ವೈಯಕ್ತಿಕ ಟೀಕೆ ಬೇಡ ಎಂದಷ್ಟೆ. ಎಂತಹುದ್ದನ್ನೆ ಆಗಲಿ ಸಭ್ಯವಾಗಿಯೆ ಕಠಿಣವಾಗಿ ಟೀಕಿಸಬಹುದು. ಅಸಭ್ಯವಾಗಿ ಟೀಕಿಸುವವರು ಹಾಗೆ ಮಾಡಲಾಗದೆ ಮೈ ಪರಚಿಕೊಳ್ಳುವವರು ಮಾತ್ರವಾಗಿರುತ್ತಾರೆ.

ಇಲ್ಲಿಯ ತನಕ ಪತ್ರ ಬರೆದವರಿಗೂ, ಮುಂದೆ ಬರೆಯುವವರಿಗೂ, ಓದುಗರಿಗೂ, ಇಂತಹ ವಿಭಿನ್ನ ಕಾದಂಬರಿಯನ್ನು ಚಾಚೂ ತಪ್ಪದೆ ಪ್ರಕಟಿಸಿದ ದಟ್ಸ್‌ಕನ್ನಡ ಅಂತರ್‌ಜಾಲ ತಾಣಕ್ಕೂ ನನ್ನ ಪ್ರೀತಿಪೂರ್ವಕ ಧನ್ಯವಾದ.

- ರವಿ ಕೃಷ್ಣಾರೆಡ್ಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X