ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಚನಾಂಜಲಿಯಲ್ಲಿ ವೈಜಯಂತಿ ಕಾಶಿ ನೃತ್ಯಾಭಿನಯ

By ವೆಂಕಟ್, ಸಿಂಗಪುರ
|
Google Oneindia Kannada News

ಕನ್ನಡ ಸಂಘ (ಸಿಂಗಪುರ), ವುಡ್‌ಲ್ಯಾಂಡ್ಸ್ ಸಮುದಾಯ ಸಂಸ್ಥೆಯೊಡಗೂಡಿ ಜುಲೈ 26, 2014ರಂದು ಆಚರಿಸಿದ 'ವಚನಾಂಜಲಿ' ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದೆ, ಅಭಿನೇತ್ರಿ, ಕಲಾ ನಿರ್ದೇಶಕಿ ವೈಜಯಂತಿ ಕಾಶಿ ಅವರು ಅದ್ಭುತ ನೃತ್ಯಾಭಿನಯದ ಮೂಲಕ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಅವರ ವಚನಗಳ ಜ್ಞಾನಮೃತವನ್ನು ಸಿಂಗನ್ನಡಿಗರಿಗೆ ಉಣಬಡಿಸಿದರು.

ಕೂಚಿಪುಡಿ ನೃತ್ಯ ಪ್ರಕಾರದ ಕ್ರಿಯಾಶೀಲ, ಚೈತನ್ಯಯುತ ಶಕ್ತಿ ಎನಿಸಿರುವ ಶ್ರೀಮತಿ ಕಾಶಿ ಅವರು ಈ ಕ್ಷೇತ್ರದಲ್ಲಿ ಸಂಶೋಧನೆ, ಪ್ರಯೋಗಗಳನ್ನು ಮಾಡಿದ್ದಲ್ಲದೇ, ಪ್ರದರ್ಶನ ಮತ್ತು ಶಿಬಿರಗಳಿಂದ ಪ್ರಪಂಚದೆಲ್ಲೆಡೆ ಕಲಾಸಕ್ತರಿಗೆ ಸ್ಪೂರ್ತಿ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಮೂರು ದಶಕಗಳಿಂದ ಕೂಚಿಪುಡಿ ಪ್ರಕಾರವನ್ನು ಸಂರಕ್ಷಿಸಿ, ಬೆಳೆಸುವಲ್ಲಿ ಮಹತ್ತರ ಪಾತ್ರ ನಿಭಾಯಿಸುತ್ತಿದ್ದಾರೆ. ಇವರು ರೂಪಿಸಿದ 'ನೃತ್ಯಜಾತ್ರೆ'- ಭಾರತದ ಏಕೈಕ ನೃತ್ಯಮೇಳ, ಕಲಾಕ್ಷೇತ್ರದಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಲ್ಲದೆ ಇವರಲ್ಲಿರುವ ಕಲೆಯ ಬಗೆಗಿನ ಅಭಿಮಾನ ಮತ್ತು ಕಾಳಜಿಗೆ ಹಿಡಿದ ಕನ್ನಡಿ ಆಗಿದೆ. ಇವರು ಬೆಂಗಳೂರಿನಲ್ಲಿ ಸ್ಥಾಪಿಸಿ ನಿರ್ವಹಿಸುತ್ತಿರುವ 'ಶಾಂಭವಿ ಸ್ಕೂಲ್ ಆಫ್ ಡಾನ್ಸ್' ಹಾಗೂ 'ಶಾಂಭವಿ ಡಾನ್ಸ್ ಥಿಯೇಟರ್' ಸಂಸ್ಥೆಗಳು ಅದ್ವಿತೀಯ ಗುರುಕುಲವಾಗಿದ್ದು ಅನೇಕ ವಿದೇಶಿ ಹಾಗೂ ಸ್ಥಳೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ.

Vaijayanti Kashi dance : Vachananjali 2014 Singapore

ಒಳ್ಳೆಯ ವಾಗ್ಮಿ ಕೂಡ ಆಗಿರುವ ವೈಜಯಂತಿ ಕಾಶಿ ಅವರು ತಮ್ಮ ಭಾಷಣದಲ್ಲಿ "ಕಲೆಯ ಸಾಮರ್ಥ್ಯ, ಶಕ್ತಿ ಮತ್ತು ಸೌಂದರ್ಯವು ಮಾನವತೆಯ ವ್ಯಾಪ್ತಿಯನ್ನು ಭೌತಿಕ, ಬೌದ್ದಿಕ ಮತ್ತು ಭಾವನಾತ್ಮಕವಾಗಿ ಒಟ್ಟುಗೂಡಿಸಿ, ವಿಸ್ತರಿಸುವಲ್ಲಿ ಸಹಕರಿಸುತ್ತದೆಂದು" ತಿಳಿಸಿದರು. ವಚನಗಳನ್ನು ನೃತ್ಯರೂಪಕಗಳ ಮೂಲಕ ಪ್ರಸ್ತುತಪಡಿಸುವ ಪ್ರಯೋಗವು ಅತ್ಯಂತ ಪರಿಣಾಮಕಾರಿಯಾಗಿದ್ದನ್ನು ಸ್ಮರಿಸಿ, ತಮ್ಮ ಈ ಸೇವೆಯು ಕೂಡಲಸಂಗಮ ದೇವನಿಗೆ ಅರ್ಪಿತವೆಂದರು. ತಮ್ಮ ಕಾಲಿಗೆ ಪೆಟ್ಟಾಗಿದ್ದರೂ, ಕೊಟ್ಟ ಮಾತಿಗೆ ಬದ್ದವಾಗಿ ತಮ್ಮ ವಿದ್ಯಾರ್ಥಿನಿ ಸಪ್ನಾ ಡೆನ್ನಿಸ್ ಅವರೊಡಗೂಡಿ ಸಿಂಗಪುರಕ್ಕೆ ಬಂದು ಯಶಸ್ವಿಯಾಗಿ ಕಾರ್ಯಕ್ರಮವನ್ನು ನೀಡಿದ್ದು ಶ್ಲಾಘನೀಯ.

'ವಚನ ಸಂಗೀತೋತ್ಸವ'ಕ್ಕೆ ಸ್ವಾಗತ ಕೋರಿದ ಕನ್ನಡ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ಅವರು ತಮ್ಮ ಭಾಷಣದಲ್ಲಿ ಸಂಘದ ವಿವಿಧ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿ, ಸಂಘವು ವಚನಾಂಜಲಿಯ ಮುಖಾಂತರ ಕನ್ನಡ ಸಾಹಿತ್ಯ ಲೋಕದ ಅಪ್ರತಿಮ ಕೊಡುಗೆಯಾದ ವಚನಸಾಹಿತ್ಯವನ್ನು ಹರಡುವಲ್ಲಿ ಕೈಗೊಂಡಿರುವ ಪ್ರಯತ್ನವನ್ನು ಮನಗಾಣಿಸಿದರು. ನಂತರ ವೈಜಯಂತಿ ಕಾಶಿ, ಭಾಗ್ಯಮೂರ್ತಿ, ವಿಶಾಲಾಕ್ಷಿ ವೈದ್ಯ, ಕವಿತಾ ರಾಘವೇಂದ್ರ ಹಾಗೂ ಪ್ರಭುದೇವ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಚನಗಳ ಸಮೂಹ ಗಾಯನ : ಸಿಂಗನ್ನಡಿಗ ವಿದುಷಿ ಡಾ. ಭಾಗ್ಯಮೂರ್ತಿಯವರ ಮುಂದಾಳತ್ವದಲ್ಲಿ ನಡೆದ ಸಮೂಹ ಗಾಯನ ಕಾರ್ಯಕ್ರಮದಲ್ಲಿ "ಮಾಡಿದೆನೆಂಬುದು ಮನದಲಿ ಹೊಳೆದರೆ, ಹಾಡಿದೊಡೆ ಎನ್ನೊಡೆಯನ ಹಾಡುವೆ, ಕದಳಿ ಎಂಬುದು ತನು, ಬೆಟ್ಟದ ಮೇಲೊಂದು ಮನೆಯ ಮಾಡಿ, ಅಪರಿಮಿತ, ಏನು ಮಾಡಲಯ್ಯಾ..." ಇತ್ಯಾದಿ ಹಲವು ವಚನಗಳು ಸಭಾಂಗಣವನ್ನು ಮಂತ್ರಮುಗ್ಧಗೊಳಿಸಿದವು. ಪಕ್ಕವಾದ್ಯದಲ್ಲಿ ವಿದ್ವಾನ್ ಶಿವರಾಮ ಕೃಷ್ಣನ್ (ಪಿಟೀಲು), ವಿದ್ವಾನ್ ಗಜನ್ (ಮೃದಂಗ), ವಿದ್ವಾನ್ ರಾಘವೇಂದ್ರ (ಕೊಳಲು) ಹಾಗೂ ಪ್ರಮುಖ ಗಾಯಕರಾದ ಶುಭಾ ರಘು, ಶೃತಿ ಆನಂದ್, ಪ್ರತಿಮಾ ಬೆಳ್ಳಾವೆ ಮತ್ತಿತರರು ಸಮೂಹ ಗಾಯನದ ಮುಂಚೂಣಿಯಲ್ಲಿದ್ದರು.

ನಂತರ "ಚಿಲಿಮಿಲಿ ಎಂದೋಡುವ ಗಿಳಿಗಳಿರಾ" ಎನ್ನುವ ವಚನಕ್ಕೆ ಸುಷ್ಮಿತಾ ಧ್ರುವ ಅವರ ನೃತ್ಯ ಸಂಯೋಜನೆಯಲ್ಲಿ ಮಕ್ಕಳಾದ ಹಿತ ಸಚಿನ್ ಕುಮಾರ್, ಅನಘ ವೇದನಾರಯಣ, ಮೃದುಲಾ ಧೃವ, ಮೇಘನಾ ನಿಯೋಗಿ, ಅನುಷ್ಕ ಕಿಗ್ಗ, ತನ್ವಿ ಕಿಗ್ಗ ಹಾಗೂ ಶೇಪಾಲಿ ಜಗದೀಶ್ ನರ್ತಿಸಿದರು. ವುಡ್‌ಲ್ಯಾಂಡ್ಸ್ ಸಮುದಾಯ ಭವನದ IAEC ಛೇರ್‌ಮನ್ ಅಜೇಯನ್, ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ವೈದ್ಯ, ಭಾಗ್ಯಮೂರ್ತಿ ಅವರ ಸಮ್ಮುಖದಲ್ಲಿ ವೈಜಯಂತಿ ಕಾಶಿ ಹಾಗೂ ಸಪ್ನ ಅವರಿಗೆ ಶಾಲು ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಂಘದ ವತಿಯಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿದ ರಶ್ಮಿ ಉದಯಕುಮಾರ್, ಕಿಶೋರ್ ಹಾಗೂ ಉಮೇಶ ಮೂರ್ತಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಎಲ್ಲರೂ ಶ್ಲಾಘಿಸಿದರು. ಕಿಶೋರ್ ಅವರು ತಮ್ಮ ವಂದನಾರ್ಪಣೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಸ್ವಯಂ ಸೇವಕರಿಗೆ ಧನ್ಯವಾದ ಅರ್ಪಿಸಿದರು.

ವಚನ ಪಠಣ ಸ್ಪರ್ಧೆಗಳು : 'ವಚನಾಂಜಲಿ' ಪ್ರಯುಕ್ತ ಹಮ್ಮಿಕೊಂಡಿದ್ದ 'ವಚನ ಪಠಣ' ಸ್ಪರ್ಧೆಗಳಲ್ಲಿ ಅನೇಕ ಮಕ್ಕಳು ಬಹಳ ಉತ್ಸುಕತೆಯಿಂದ ಭಾಗವಹಿಸಿದ್ದರು. ಮಕ್ಕಳಿಗೆ ಅವರ ತಂದೆ-ತಾಯಿಯರ ಮುಖಾಂತರ ವಚನಗಳ ಮಹತ್ವ ಮತ್ತು ಅರ್ಥವನ್ನು ಸಾರುವುದು ಈ ಸ್ಪರ್ಧೆಗಳ ಸದುದ್ದೇಶವಾಗಿತ್ತು. ಎರಡು ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಗಳಲ್ಲಿ ಮಕ್ಕಳ ಹಾವ-ಭಾವ, ಉಚ್ಚಾರಣೆ ಹಾಗೂ ಸುಲಲಿತವಾದ ಪಠಣಗಳನ್ನು ಮಾನದಂಡವಾಗಿಟ್ಟುಕೊಂಡು ತೀರ್ಪುಗಾರರಾದ ಉಮಾ ಭೂಪ್ಲಾಪುರ್, ಕವಿತಾ ಬಾದಾಮಿ ಹಾಗೂ ಶಂಕರ್ ಮರೋಳ್ ಅವರು ವಿಜೇತರನ್ನು ಆಯ್ಕೆಮಾಡಿದ್ದರು. 5-8 ವರ್ಷದ ಮಕ್ಕಳ ವಿಭಾಗದಲ್ಲಿ ಹಿತೈಷಿ ಬಿ.ಎಸ್. (ಪ್ರಥಮ), ಚಾರ್ವಿ (ದ್ವಿತೀಯ), ಆವನಿ ಹಳ್ಳಿಕೇರಿ (ತೃತೀಯ), ಮಾನ್ಯ ಗದ್ದೆಮನೆ ಮತ್ತು ಸ್ವರ ಬಾವಿ (ಸಮಾಧಾನಕರ) ಹಾಗೂ 9-14 ವರ್ಷದ ಮಕ್ಕಳ ವಿಭಾಗದಲ್ಲಿ ನಿಶಾಂತ್ ಹೆಗಡೆ (ಪ್ರಥಮ), ಅದಿತಿ ರಾಮದಾಸ್ (ದ್ವಿತೀಯ), ವೇದಾ ಭಟ್ ಮತ್ತು ಖುಷಿ ಉದಯ್‌ಕುಮಾರ್ (ತೃತೀಯ) ಬಹುಮಾನವನ್ನು ಪಡೆದರು.

ಅಕ್ಕಿಕಾಳು ವೆಂಕಟೇಶ್ ಅವರಿಂದ ಮೈಕ್ರೋ ಆರ್ಟ್ ಶಿಬಿರ : ವಚನ ಪಠಣಗಳ ನಂತರ ನಡೆದ ಮೈಕ್ರೊ ಆರ್ಟ್ ಶಿಬಿರದಲ್ಲಿ ವಿಶ್ವದಾಖಲೆ ವಿಖ್ಯಾತ ಕನ್ನಡಿಗರಾದ ಅಕ್ಕಿಕಾಳು ವೆಂಕಟೇಶ್ ಅವರು ಮಕ್ಕಳಿಗೆ ಅಕ್ಕಿಕಾಳುಗಳ ಮೇಲೆ ಬರೆಯುವ ಕಲೆಯನ್ನು ವಿವರಿಸಿದರು. ಸರಳ ಸ್ವಭಾವದ ವೆಂಕಟೇಶ್ ಅವರು ಸಂಘದ ಕರೆಯನ್ನು ಸ್ವೀಕರಿಸಿ, ಇಲ್ಲಿನ ಕನ್ನಡಿಗರೊಂದಿಗೆ ಬೆರೆತು, ತಮ್ಮ ಸೂಕ್ಷ್ಮಕಲೆಯ ಶಿಬಿರವನ್ನು ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ಅವರು ಈ ಕಲೆಯನ್ನು ವಿಶ್ವದಾದ್ಯಂತ ಹರಡಿ ಬೆಳೆಸಲೆಂದು ಕನ್ನಡ ಸಂಘ (ಸಿಂಗಪುರ) ಹಾರೈಸುತ್ತದೆ.

English summary
Bharatanatyam dancer and actress Vaijayanti Kashi performed with her desciple at Vachananjali 2014 in Singapore organized by Kannada Sangha Singapore. Akkikalu Venkatesh too conducted workshop for the children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X