ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಾವೇರಿ’ಯಲ್ಲಿ ಅಲೆ‌ಅಲೆಯಾಗಿ ಬಂದ ಕನ್ನಡ ಶಾಯಿರಿ

By ಶ್ರೀವತ್ಸ ಜೋಶಿ
|
Google Oneindia Kannada News

ವಾಷಿಂಗ್ಟನ್ ಡಿಸಿ : ಇಲ್ಲಿನ 'ಕಾವೇರಿ' ಕನ್ನಡ ಸಂಘದ ಯುಗಾದಿ ಸಾಂಸ್ಕೃತಿಕ ಕಾರ್ಯಕ್ರಮವು ಶನಿವಾರ ಏಪ್ರಿಲ್ 19ರಂದು ವರ್ಜೀನಿಯಾದ ಲಾಂಗ್ಲೆ ಹೈಸ್ಕೂಲ್ ಸಭಾಂಗಣದಲ್ಲಿ ಹಬ್ಬದ ಸಡಗರ ಸಂಭ್ರಮಗಳೊಂದಿಗೆ ನಡೆಯಿತು.

ಸ್ಥಳೀಯ ಪ್ರತಿಭೆಗಳಿಂದ ಹಾಡುಹಸೆ ನೃತ್ಯ ಮುಂತಾದ ರಂಗುರಂಗಿನ ಕಾರ್ಯಕ್ರಮಗಳ ಜೊತೆಗೆ ಅಂದಿನ ಪ್ರಧಾನ ಅಕರ್ಷಣೆ, ಕರ್ನಾಟಕದಿಂದ ಭೇಟಿಯಿತ್ತ ಕಲಾವಿದ ಅಸಾದುಲ್ಲಾ ಬೇಗ್ ಅವರಿಂದ ಕನ್ನಡ ಶಾಯಿರಿ. ಹಾಸ್ಯಕ್ಕೆ ಹಾಸ್ಯವನ್ನೂ, ಚಿಂತನೆಗೆ ಚಿಂತನೆಯನ್ನೂ, ಸಾಹಿತ್ಯಕ್ಕೆ ಸಾಹಿತ್ಯಸಿರಿಯನ್ನೂ ಹದವಾಗಿ ಚಿಮುಕಿಸಿ ಶ್ರೋತೃಗಳನ್ನು ರಂಜಿಸುವ ಕಲೆ ಅಸಾದುಲ್ಲಾ ಅವರದು.

ನಿರೀಕ್ಷೆಯಂತೆಯೇ ಅವರ ಶಾಯಿರಿ ಕಾರ್ಯಕ್ರಮ ಕಳೆಗಟ್ಟಿತು. 'ಅಕ್ಕ' ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಅಮೆರಿಕದ ಕೆಲವು ನಗರಗಳಲ್ಲಿ ಕನ್ನಡ ಶಾಯಿರಿ ಕಾರ್ಯಕ್ರಮ ನಡೆಸಿಕೊಟ್ಟ ಅಸಾದುಲ್ಲಾರಿಂದ ಅಮೆರಿಕದಲ್ಲಿ ಮೊದಲ ಪ್ರದರ್ಶನ ನಡೆದದ್ದೇ ರಾಜಧಾನಿಯಲ್ಲಿ ಕಾವೇರಿ ಸಂಘದ ವೇದಿಕೆಯಲ್ಲಿ.

Ugadi celebrated by Kaveri Kannada Sangha

ಕಾವೇರಿ ಕನ್ನಡಿಗರಲ್ಲಿ ಹೊಸಹೊಸ ಪ್ರತಿಭೆಗಳು ಚಿಗುರುತ್ತಲೇ ಇರುತ್ತವೆ. ಈಬಾರಿ ಯುಗಾದಿ ಸಂಭ್ರಮದಲ್ಲಿ ಎಂಟು ಬೇರೆಬೇರೆ ನೃತ್ಯಶೈಲಿಗಳಲ್ಲಿ ಎಂಟು ಬೇರೆಬೇರೆ ತಂಡಗಳು ಕನ್ನಡ ಗೀತೆಗಳನ್ನು ನೃತ್ಯರೂಪದಲ್ಲಿ ಪ್ರಸ್ತುತಪಡಿಸಿದ್ದು ಒಂದು ಹೊಸ ಪ್ರಯೋಗವಾಗಿತ್ತು. ಕಾಯಕ್ರಮದ ಕೊನೆಯಲ್ಲಿ, ಇತ್ತೀಚೆಗೆ ನಿಧನರಾದ ಕಾವೇರಿ ಹಿರೀಕ ದಿ.ಕೆ.ಜಿ.ವಿ.ಕೃಷ್ಣ ಅವರ ಸ್ಮರಣಾರ್ಥ ಮೂಡಿಬಂದ ಗೀತನಮನ ಕಾರ್ಯಕ್ರಮವೂ ಅರ್ಥಪೂರ್ಣವಾಗಿ ನಡೆದು ಅಗಲಿದ ಚೇತನಕ್ಕೆ ಶ್ರದ್ಧಾಂಜಲಿ ಅರ್ಪಣೆಯಾಯಿತು.

ಮೇರಿಲ್ಯಾಂಡ್ ಸಂಸ್ಥಾನದ ಸಹಾಯಕ ಕಾರ್ಯದರ್ಶಿ ಡಾ.ರಾಜನ್ ನಟರಾಜನ್ ಅವರು ಅವತ್ತಿನ ಸಾಂಸ್ಕೃತಿಕ ಸಂಜೆಯ ವಿಶೇಷ ಅತಿಥಿಯಾಗಿ ಆಗಮಿಸಿ ಕನ್ನಡಿಗರೊಂದಿಗೆ ಕೊಂಚಹೊತ್ತು ಕಳೆದು ಇಲ್ಲಿನ ಸಮುದಾಯ ಚಟುವಟಿಕೆಗಳ ಬಗ್ಗೆ ಶುಭಾಶಂಸನೆ ಮಾಡಿದರು. ವುಡ್‌‌ಲ್ಯಾಂಡ್ಸ್ ಹೊಟೆಲ್‌ನಿಂದ ಸರಬರಾಜುಗೊಂಡ 'ಕನ್ನಡ ಅಡುಗೆ'ಯ ಊಟ, ಹಲಸಿನ ಹಣ್ಣಿನ ಪಾಯಸದೊಂದಿಗೆ ಹಬ್ಬದ ಘಮಲನ್ನು ಹೆಚ್ಚಿಸಿತು.

ಕಾವೇರಿ ಸಂಘದ ಪ್ರಸಕ್ತ ಸಾಲಿನ ಅಧ್ಯಕ್ಷ ಗಿರೀಶ್ ವಾಸುದೇವ ಮತ್ತು ಅವರ ಉತ್ಸಾಹಿ ತಂಡವು ವರ್ಷದುದ್ದಕ್ಕೂ ಇದೇರೀತಿ ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬರೀ ವೇದಿಕೆಯಲ್ಲಿ ಹಾಡುಹಸೆ ನೃತ್ಯನಾಟಕ ಮಾತ್ರವಲ್ಲದೇ ಸಮಾಜಮುಖಿ ಚಟುವಟಿಕೆಗಳೊಂದಿಷ್ಟನ್ನೂ ಯೋಜಿಸಿಕೊಂಡಿದೆ. ಕಾವೇರಿ ಕನ್ನಡಿಗರ ಎರಡನೇ ತಲೆಮಾರಿನ ಯುವಪೀಳಿಗೆಯಿಂದ ಯುವಶಕ್ತಿ ಹೆಸರಿನಲ್ಲಿ ಕೆಲಸಗಳನ್ನು ಹಮ್ಮಿಕೊಳ್ಳಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವಾಗಿನ ಖರ್ಚುವೆಚ್ಚಗಳನ್ನು ಸಮದೂಗಿಸಲು ಸೀರೆಯಂಗಡಿ, ಆಭರಣದಂಗಡಿ, ರಿಯಲ್‌ಎಸ್ಟೇಟ್ ಏಜೆಂಟ್‌ಗಳ ವಾಣಿಜ್ಯಮಳಿಗೆಗಳಿಗೂ ಅವಕಾಶ ಕೊಡಲಾಗುತ್ತದೆ. ಮೊನ್ನೆ ಯುಗಾದಿ ಕಾರ್ಯಕ್ರಮದಲ್ಲಿ ಸಭಾಂಗಣದ ಹೊರಗಿದ್ದ ಸೀರೆ ಮಳಿಗೆಗಳ ಮುಂದೆ ಕನ್ನಡತಿಯರು ಸುತ್ತುವರಿದು ತಮ್ಮಿಷ್ಟದ ಸೀರೆ ಖರೀದಿ ಮಾಡುತ್ತಿದ್ದ ದೃಶ್ಯ ಗಮನಾರ್ಹವಾಗಿತ್ತು.

ಕಾವೇರಿ ಸಂಘದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾಗಿ ಕಾವೇರಿಯ ಉತ್ಸಾಹಿ ಕಾರ್ಯಕರ್ತ, ಗಾಯಕ ರಾಮರಾವ್ ಅವರು ಇದೇ ಸಂದರ್ಭದಲ್ಲಿ ಒಂದು ವರ್ಷದ ಅವಧಿಗೆ ಆಯ್ಕೆಯಾದರು.

ಅಮೆರಿಕದ ರಾಜಧಾನಿಯಲ್ಲಿ ಕನ್ನಡ, ಕನ್ನಡಿಗ, ಮತ್ತು ಕರ್ನಾಟಕದ ವಾತಾವರಣ ಕಲ್ಪಿಸುವಲ್ಲಿ ಕಳೆದ ನಲ್ವತ್ತೈದು ವರ್ಷಗಳಿಂದ ನಿರತವಾದ 'ಕಾವೇರಿ' ಸಂಘ ಅಮೆರಿಕದಲ್ಲಿ ಅಂದಿಗೂ ಇಂದಿಗೂ ಲವಲವಿಕೆ ಉತ್ಸಾಹ ಕಾಪಾಡಿಕೊಂಡು ಬಂದ ಕೆಲವೇ ಕನ್ನಡಸಂಘಗಳ ಪೈಕಿ ಒಂದು. ಗಿರೀಶ್ ವಾಸುದೇವರಂಥ ಉತ್ಸಾಹಿ ತರುಣರು ವರ್ಷವರ್ಷವೂ ಅದರ ಸಾರಥ್ಯ ವಹಿಸಲು ಮುಂದೆಬರುವುದು ಒಂದು ಸಂತಸದ ಸಂಗತಿ.

English summary
Hindu new year Ugadi was celebrated by Kaveri Kannada Sangha, Verginia, USA on 19th April. Shayiri by Asadullah Baig from Karnataka was the highlight of the program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X