ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಚ್ಚಿ ಬೀಳಿಸಿದ ಸಿಡ್ನಿ ಕೆಫೆ ಆಕ್ರಮಣ: ಕನ್ನಡಿಗರ ಅನುಭವ ಕಥನ

By ಸಿಡ್ನಿ ಶ್ರೀನಿವಾಸ್
|
Google Oneindia Kannada News

ಭಯೋತ್ಪಾದನೆ ಭೀತಿ ಹೆಚ್ಚಾಗಿ ಇರದ ಆಸ್ಟ್ರೇಲಿಯಾವನ್ನು ಸಿಡ್ನಿ ಕೆಫೆ ಉಗ್ರನ ದಾಳಿ ಪ್ರಕರಣ ಅಲುಗಾಡಿಸಿದೆ. ಇಷ್ಟೆಲ್ಲಾ ಮಾಡಿದ ಆ ದುರಾತ್ಮ ಗಳಿಸಿದ್ದಾದರೂ ಏನು? ತಾನು ಸತ್ತ, ಸರಿ. ಆದರೆ ಮಿಕ್ಕವರಿಗೆ ಈ ಹಿಂಸೆ ಕೊಟಿದ್ದು ಏತಕ್ಕೆ? ಎಂಬ ಪ್ರಶ್ನೆಗಳೊಂದಿಗೆ ಈ ದುರಂತದಲ್ಲಿ ಸಾವನ್ನಪ್ಪಿದ ಆಸ್ಟ್ರೇಲಿಯಾ ಇಬ್ಬರು ನಾಗರಿಕರನ್ನು ಸ್ಮರಿಸುತ್ತಾ ಸಿಡ್ನಿ ನಿವಾಸಿ ಕನ್ನಡಿಗ ಶ್ರೀನಿವಾಸ್ ಇಲ್ಲಿ ಸ್ವಾನುಭವವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ-ಒನ್ ಇಂಡಿಯಾ ಕನ್ನಡ

ಟೆರರಿಸಂ ಭಯೋತ್ಪಾದನೆ ಇವೆಲ್ಲಾ ಅಮೆರಿಕಾ, ಇಂಗ್ಲೆಂಡುಗಳಿಗೆ ಮೀಸಲು. ಇವೆಲ್ಲಾ ನಮಗೆ ದೂರ ಎಂದು ಆಸ್ಟ್ರೇಲಿಯಾದಲ್ಲಿ ಬೆಚ್ಚಗೆ ಕುಳಿತಿದ್ದ ನಮಗೆ ಶಾಕ್ ಹೊಡೆದದ್ದು ನೆನ್ನೆ, ಡಿಸೆಂಬರ್ 15ರಂದು. ಬೆಳಿಗ್ಗೆ ಹನ್ನೊಂದು ಗಂಟೆ. ಸಿಡ್ನಿಯ ನಮ್ಮ ಮನೆಯಲ್ಲಿ ಐಸಾಕ್ ನ್ಯೂಟನ್ ಬಗ್ಗೆ ಬರೆಯುತ್ತಾ ಕುಳಿತಿದ್ದೆ. ಫೋನ್‌ ಕರೆ. ನನ್ನ ಮಡದಿ ಉಷಾಳಿಂದ.

ಮಾರ್ಟಿನ್ ಪ್ಲೇಸ್ ನಲ್ಲಿ ಟೆರರಿಸಂ ಆಗಿದೆಯಂತೆ. ಆಫೀಸಿನಲ್ಲಿ ಜನ ಹೇಳ್ತಾ ಇದಾರೆ. ಗೌತಮ್ ಗೆ ಫೋನ್ ಮಾಡಿದ್ದೆ, ತಗೋತಾ ಇಲ್ಲ. ಏನ್ಮಾಡ್ಬೇಕೋ ನೋಡಿ.

ನನಗೆ ಹೆದರಿಕೆ ಆಯಿತು. ಮಾರ್ಟಿನ್ ಪ್ಲೇಸ್ ‌ಸಿಡ್ನಿಯ ಮುಖ್ಯ ವಾಣಿಜ್ಯ ಕೇಂದ್ರ. ಅಲ್ಲಿ ಇರುವ ಮೆಕ್ವಾರಿ ಬ್ಯಾಂಕಿನಲ್ಲಿ ನಮ್ಮ ಮಗ ಗೌತಮ್ ಓರ್ವ ಅಧಿಕಾರಿ. ಇದೀಗ ಹತ್ತು ವರ್ಷಗಳು ಲಂಡನ್, ನ್ಯೂಯಾರ್ಕುಗಳಲ್ಲಿದ್ದು ಇಲ್ಲಿಗೆ ಬಂದಿದ್ದಾನೆ. ಕೂಡಲೆ ಟೀವಿ ಹಾಕಿದೆ. ಚಾನೆಲ್ಲುಗಳಲ್ಲಿ ಆಗಲೇ ಸುದ್ದಿ ಬಿತ್ತರವಾಗುತ್ತಿದೆ.

ಎಲ್ಲೆಲ್ಲೂ ಮಾರ್ಟಿನ್ ಪ್ಲೇಸೇ: ಸಕಲ ಟೀವಿ ಕೇಂದ್ರಗಳೂ ಅಲ್ಲಿ ಕ್ಯಾಮೆರಾಗಳನ್ನು ನೆಟ್ಟು ಬಿತ್ತರಿಸುತ್ತಿವೆ. ಆಗ ತಿಳಿದು ಬಂದ ವಿಚಾರ- ಬೆಳಿಗ್ಗೆ 9.45ಕ್ಕೆ ಇಲ್ಲಿಯ ಪ್ರಖ್ಯಾತ ಲಿಂಡ್ಟ್ ಕೆಫೆ (Lindt Cafe) ಯನ್ನು ಓರ್ವ ವ್ಯಕ್ತಿ, ಒಂದು ಸ್ಪೋರ್ಟ್ಸ್ ಬ್ಯಾಗನ್ನು ಹಿಡಿದು ಪ್ರವೇಶಿಸಿ ಮುಂದಿನ ಬಾಗಿಲನ್ನು ಹಾಕಿ ಒಳಗಿನಿಂದ ಚಿಲಕ ಹಾಕಿಕೊಂಡ. ಇದನ್ನು ಪೋಲೀಸರ ಗಮನಕ್ಕೆ ತಂದದ್ದು ಕೆಫೆಯ ಕೆಲಸಗಾರ್ತಿಯೊಬ್ಬಳು. [ಸಿಡ್ನಿ ಕೆಫೆ ದಾಳಿ ಟೋರಿ ಜಾನ್ಸನ್ ಸಾಹಸ ಸ್ಮರಣೀಯ]

ತಡವಾಗಿ ಬಂದ ಇವಳು ಒಳಪ್ರವೇಶ ಬಯಸಿದಳು. ಸಾಧ್ಯವಾಗಲಿಲ್ಲ. ಕೆಲವೇ ನಿಮಿಷಗಳಲ್ಲಿ ಪೋಲೀಸು, ಅಗ್ನಿಶಾಮಕದಳ, ಆಂಬುಲೆನ್ಸ್ ಬಂದು ನೆರೆದರು. ಸುತ್ತ ಮುತ್ತಲಿನ ರಸ್ತೆಗಳನ್ನು ಮುಚ್ಚಿ ವಾಹನಗಳ ದಿಕ್ಕನ್ನು ಬದಲಿಸಲಾಯಿತು. ಮತ್ತವುದೋ ಕಾರಣಕ್ಕೆ ಹತ್ತಿರದ ಅಪೇರಾ ಹೌಸನ್ನು ಮುಚ್ಚಲಾಯಿತು. ಸಿಡ್ನಿಯ ಹಾರ್ಬರ್ ಬ್ರಿಡ್ಜಿನ ಮೇಲೆ ವಾಹನಗಳು ಮತ್ತು ಟ್ರೈನುಗಳನ್ನು ನಿಲ್ಲಿಸಿದರು.

Sydney Siege

ನೋಡುತ್ತಾ ನನಗೆ ದಿಗಿಲಾಯಿತು. ಮಗನಿಗೆ ಮೊಬೈಲ್ ಮಾಡಿದೆ. ಬಂದದ್ದು ರಿಕಾರ್ಡೆಡ್ ಮೆಸೇಜ್. ಆಗ ಟೀವಿಯಲ್ಲಿ ಹೇಳುತ್ತಿದ್ದರು- ಈ ಪ್ರದೇಶದಲ್ಲಿ ಮೊಬೈಲುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಚೇತರಿಕೆ ತಂದ ಫೋನ್ ಕರೆ : ಆದರೆ, ಕೆಲವೇ ನಿಮಿಷಗಳಲ್ಲಿ ಮಗ ಫೋನ್ ಮಾಡಿದ-ನಾವು ಸುರಕ್ಷಿತವಾಗಿದ್ದೇವೆ. ಆಗುವುದನ್ನೆಲ್ಲಾ ನೋಡುತ್ತಾ ಇದ್ದೇವೆ. ನಮ್ಮ ಆಫೀಸಿನ ಎದುರೇ ಆ ಕೆಫೆ ಇದೆ. ರಸ್ತೆ ದಾಟಿದರೆ ಅದೇ ಕೆಫೆ. ಈಗ ಅದರ ಕಿಟಕಿಯಲ್ಲಿ ಐ ಎಸ್ ಭಾವುಟವನ್ನು ಹಾರಿಸುತ್ತಿದ್ದಾರೆ. ನಾವು ಕಿಟಕಿಯ ಹತ್ತಿರ ಬರುವಂತಿಲ್ಲ, ಎಚ್ಚರಿಕೆ ನೀಡುತ್ತಾ ಇದ್ದಾರೆ. ಕೆಳಗಿನ ಫ್ಲೋರಿನ ಜನರನ್ನೆಲ್ಲಾ ಮನೆಗೆ ಕಳಿಸಿದ್ದಾರೆ. ಸ್ವಲ್ಪಚೇತರಿಸಿಕೊಂಡೆ. ಹನ್ನೊಂದೂವರೆಯ ಹೊತ್ತಿಗೆ ಕೆಫೆಯ ಸುತ್ತಮುತ್ತಲಿನ ಆಫೀಸುಗಳನ್ನೆಲ್ಲಾ ಮುಚ್ಚಿದರು. [ಇನ್ಫೋಸಿಸ್ ಟೆಕ್ಕಿ ಕುಟುಂಬ ಫುಲ್ ಖುಷ್]

ಯಾರಿಗೂ ಗೊತ್ತಿಲ್ಲ. ಕೆಫೆಯ ಒಳಗೆಎಷ್ಟು ಮಂದಿ ಇದ್ದಾರೆ? ಅವರನ್ನು ಹಿಡಿದುಕೂಡಿಸಿರುವವರು ಎಷ್ಟು ಮಂದಿ? ಏಕೆ ಹಿಡಿದುಕೂರಿಸಿದ್ದಾರೆ? ಇದು ಟೆರರಿಸ್ಟರ ಕೃತ್ಯವೇ?

ಟೀವಿ ಕ್ಯಾಮೆರಾಗಳು ಫೋಕಸ್ ಮಾಡಿ ತೋರಿಸುತ್ತಿವೆ. ಕಿಟಕಿಯ ಅತ್ತ ಒಬ್ಬರು ಅಥವಾ ಇಬ್ಬರು ಬಂದು ನಿಲ್ಲುತ್ತಿದ್ದಾರೆ. ಬಂದ ಕೆಲವರು ಒಂದು ಕಪ್ಪು ಭಾವುಟವನ್ನು ಹಿಡಿಯುತ್ತಿದ್ದಾರೆ. ಸಿರಿಯಾದಯಾವುದೋಒಂದು ಪಕ್ಷದ ಭಾವುಟ ಅದು.

ಮತ್ತೆ ಫೋನ್ ನನಗೆ, ನಮ್ಮ ಮಗನಿಂದ-ಆಫೀಸಿನಿಂದ ಹೊರಟಿದ್ದೇನೆ. ಟ್ರೈನ್ ಸೆಂಟ್ರಲ್‌ ದಾಟಿದೆ. ಸ್ಟ್ರಾತ್ ಫೀಲ್ಡಿಗೆ ಬನ್ನಿ.ಗೆದ್ದೆವು ಎಂದುಕೊಂಡು ಕಾರ್‌ ತೆಗೆದುಕೊಂಡು ಮನೆಯ ಹತ್ತಿರದ ಸ್ಟ್ರಾತ್ ಫೀಲ್ಡ್ ಸ್ಟೇಷನ್ನಿಗೆ ಹೊರಟೆ. ಮಗನನ್ನು ಮನೆಗೆ ಕರೆತಂದದ್ದಾಯಿತು. ಅವನಿಗೆ ಟ್ರೈನ್ ಮತ್ತು ಬಸ್ ಓಡಾಡುತ್ತಿವೆಯೋ ಇಲ್ಲವೋ ಸಂಶಯ. ಹಾಗೆಂದು ಹದಿನೈದು ಕಿಲೋಮೀಟರ್‌ ದೂರವನ್ನು ನಡೆಯಲು ತನ್ನ ಸೂಟು ಬೂಟುಗಳನ್ನು ಆಫೀಸಿನಲ್ಲಿಯೇ ಬಿಟ್ಟು ಬಂದಿದ್ದ.

Sydney Siege mourning

ನಾನು ಮತ್ತು ಅವನು ಟೀವಿಯ ಮುಂದೆಯೇಕುಳಿತೆವು. ಒಂದೆರಡು ಗಂಟೆಗಳ ಕಾಲವಲ್ಲ. ಎಂಟು ಗಂಟೆಗಳ ಕಾಲ. ಪರಿಸ್ಥಿತಿಯಲ್ಲಿ ಏನೂ ಬದಲಾವಣೆ ಇಲ್ಲ. ಪೋಲೀಸರು ಒಳಗಿರುವ ಭಯೋತ್ಪಾದಕರೊಡನೆ ಮಾತನಾಡುತ್ತಿದ್ದಾರೆ ಎಂದಷ್ಟೇ ವರ್ತಮಾನ.

ಸಾಮಾನ್ಯವಾಗಿ ಜನರಿಂದ ತುಂಬಿಹೋಗುವ (ಅದೂ ಕ್ರಿಸ್ ಮಸ್ ಸಮಯದಲ್ಲಿ), ಸದಾ ವಾಹನಗಳಿಂದ ತುಂಬಿಹೋಗುವ ಪ್ರದೇಶ ನಿರ್ಜನವಾಯಿತು, ಪೋಲೀಸ್ ವಿನಹ. ದೇಶದ ಪ್ರಧಾನಿ, ನ್ಯೂಸೌತ್ ವೇಲ್ಸಿನ ಪ್ರೀಮಿಯರ್, ಪೋಲೀಸ್‌ಕಮಿಷನರ್‌ ದೇಶವನ್ನು ಉದ್ದೇಶಿಸಿ ಮಾತನಾಡುತ್ತಲೇ ಇದ್ದರು. [ಸಿಡ್ನಿಗೆ ಲಗ್ಗೆ ಇಟ್ಟಿದ್ದ ಒಬ್ಬ ಉಗ್ರ ಪೊಲೀಸರ ಗುಂಡಿಗೆ ಬಲಿ]

ಅದಷ್ಟೂ ಸಾವುನೋವುಗಳು ಉಂಟಾಗದಂತೆ ನೋಡಿಕೊಳ್ಳುವುದು ಅವಶ್ಯಕವೆಂದು ಎಲ್ಲರೂ ಅಭಿಪ್ರಾಯ ಪಟ್ಟರು. ದೇಶ ವಿದೇಶಗಳಲ್ಲಿಯೂ ವಾರ್ತೆ ಬಿತ್ತರಗೊಂಡಿತು.

ನಂಬದಂಥ ಘಟನೆ ಜರುಗಿತು: ಸಂಜೆಯ ಹೊತ್ತಿಗೆ ನಾವು ನಂಬಲಾಗಲಿಲ್ಲ. ಕೆಫೆಯಿಂದ ಮೂವರು ಗಂಡಸರು ತಪ್ಪಿಸಿಕೊಂಡು ಹೊರಬಂದರು. ಇವರು ತಾವಾಗಿಯೇ ಬಂದರೋ ಅಥವಾ ಅವರನ್ನು ಹೊರಗಟ್ಟಲಾಯಿತೋ ಇನ್ನೂ ತಿಳಿದಿಲ್ಲ. ಇದಾದ ಒಂದು ಗಂಟೆಯ ನಂತರ ಇಬ್ಬರು ಹೆಂಗಸರು ಹೀಗೆಯೇ ಓಡಿಬಂದರು. ಪೋಲೀಸರು ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ಮಧ್ಯೆ ಏನೇನೋ ಗುಸು ಗುಸು. ಒಳಗೆ ಇವರನ್ನು ಹಿಡಿದಿಟ್ಟಿರುವುದು ಒಬ್ಬನೇ ಒಬ್ಬ. ಏನಿಲ್ಲವೆಂದರೂ ಐವತ್ತು ಜನ ಒಳಗಿರಬಹುದು. ಅವನ ಬೇಡಿಕೆಗಳು
1. ಐ ಎಸ್ ಭಾವುಟ ಹಾರಿಸಿದರೆ ಒಬ್ಬರನ್ನು ಬಿಡುತ್ತೇನೆ,
2. ಪ್ರಧಾನಿ ಟೋನಿ ಅಬಟ್ ನನ್ನೊಡನೆ ಮಾತನಾಡಿದರೆ ಇಬ್ಬರನ್ನು ಬಿಡುತ್ತೇನೆ, ಇತ್ಯಾದಿ.

Tori Johnson

ಅದರೆ, ಇವು ಗುಸು ಗುಸು ಅಲ್ಲ ನಿಜ ಎನ್ನುವುದು ಎರಡನೆಯ ದಿನವಾದ ಇಂದು ತಿಳಿದು ಬಂತು. ಭಯೋತ್ಪಾದಕ ಓರ್ವ ಹೆಂಗಸನ್ನು ಕ್ಯಾಮೆರಾ ಮುಂದೆ ನಿಲ್ಲಿಸಿ, ಆಕೆ ತನ್ನ ಪರ ಹೇಳಿಕೆಯನ್ನು ನೀಡುವಂತೆ ಮಾಡಿ ಅದನ್ನು ಯೂಟ್ಯೂಬಿನಲ್ಲಿ ಪ್ರದರ್ಶಿಸಿದ ಎನ್ನಲಾಗಿದೆ. ನಮಗೆ ಇದರ ಅರಿವು ಇರಲಿಲ್ಲ. ಇಂದು ಬೆಳಿಗ್ಗೆ ಅದನ್ನು ಟೀವಿಯಲ್ಲಿ ತೋರಿಸಲಾಯಿತು.

ರಾತ್ರಿ ಮಲಗಿದಾಗ ಮುಂದೆ ಏನಾಗುವುದೋ ಎಂಬ ಹೆದರಿಕೆ. ಇಂದು (ಡಿಸೆಂಬರ್ 16) ಬೆಳಿಗ್ಗೆ ಎದ್ದಾಗ ಕಾದಿತ್ತು ವಾರ್ತೆ. ಸಿಡ್ನಿಯ ಕೆಫೆ ಆಕ್ರಮಣ ಅಂತ್ಯವಾಗಿದೆ. ಮೂವರ ಮರಣ.

ಗಾಬರಿಯಿಂದ ಟೀವಿ ನೋಡಿದಾಗ ತಿಳಿದ ಅಂಶ ಇದು. 'ಅಲ್ಲಿದ್ದ ಭಯೋತ್ಪಾದಕ ಒಬ್ಬನೇ. ಅವನು ಇಲ್ಲಿಯ ಪೋಲೀಸರಿಗೆ ಚಿರಪರಿಚಿತ. ಐವತ್ತು ವರ್ಷದ ಈತ ಇರಾನಿನಿಂದ ಬಂದು ಇಲ್ಲಿ ಆಶ್ರಯ ಪಡೆದವನು. ತಾನೊಬ್ಬ ಧರ್ಮಗುರು ಎಂದುಕೊಂಡು ತಿರುಗಾಡುತ್ತಿದ್ದ.

ಹಲವಾರು ಕೇಸುಗಳಲ್ಲಿ ಸಿಕ್ಕಿಹಾಕಿಕೊಂಡು ಈಗ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ. ಹೋದ ವರ್ಷ ತಾನೇ ತನ್ನ ಹೆಂಡತಿಯನ್ನು ಕೊಂದ ಆಪಾದನೆಗೆ ಗುರಿಯಾಗಿದ್ದ. ನಾಮಧೇಯ- ಮಾನ್‌ ಹರೊನ್ ಮೊನಿಸ್. [ಟ್ವೀಟ್ ಬೆದರಿಕೆಗೆ ಹೆದರಬೇಡಿ, ಗಾಳಿಸುದ್ದಿ ನಂಬಬೇಡಿ: ರೆಡ್ಡಿ]

ಕೆಫೆಯಲ್ಲಿ ನಡೆದದ್ದೇನು ಎಂಬುದು ಇನ್ನೂ ಖಚಿತವಾಗಿತಿಳಿದಿಲ್ಲ. ಒಂದು ವರದಿಯ ಪ್ರಕಾರ ಇಂದು ಬೆಳಿಗಿನ ಜಾವ 2 ಗಂಟೆಗೆ ಕೆಫೆಯ ಮ್ಯಾನೇಜರ್‌ ಟೋರಿಜಾನ್ ಸನ್ ಮಾನ್‌ ಅವನಿಂದ ಅವನು ಹಿಡಿದಿದ್ದ ಬಂಧೂಕನ್ನು ಕಿತ್ತುಕೊಳ್ಳಹೋದರು. ಅದರಲ್ಲಿ ಗುಂಡು ಇದ್ದ ಕಾರಣ ಸ್ಫೋಟ ಉಂಟಾಯಿತು.

ಇದನ್ನುಕೇಳಿದ ಪೋಲೀಸರು, ಇನ್ನು ಕಾಯುವುದು ಸಾಧ್ಯವಿಲ್ಲವೆಂದು, ಒಮ್ಮೆಗೇ ಬಾಗಿಲನ್ನುತಳ್ಳಿ ದಾಳಿ ನಡೆಸಿದರು. 50 ಸೆಕೆಂಡುಗಳಷ್ಟೇ ತೆಗೆದುಕೊಂಡ ಸಮಯ. ಮಾನ್ ಸತ್ತು ಬಿದ್ದ. ಇದ್ದವರೆಲ್ಲಾ ಹೊರಗೆ ಬಂದರು.

Katrina Dawson and Tori Johnson

ಆದರೆ ಮ್ಯಾನೇಜರ್‌ ಟೋರಿ ಜಾನ್ ಸನ್‌ ಅಲ್ಲಿಯೇ ಅಸು ನೀಗಿದರೆ, 38 ವರ್ಷದ ಮಹಿಳೆ ಕ್ಯಾಟ್ರಿನಾ ಡಾಸನ್‌ ನಂತರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 6 ಮಂದಿಗೆ ಗಾಯಗಳಾಗಿವೆ.

ಎಲ್ಲಾ ಆಫೀಸುಗಳೂ ಮತ್ತೆ ತೆರೆದಿವೆ. ಇಂದೆಲ್ಲಾ ಅಶ್ರುತರ್ಪಣಕ್ಕೆ ವಿನಿಯೋಗವಾಗಿದೆ.ಗವರ್ನರ್, ಪ್ರಧಾನಿ ಮತ್ತಿತರು ಕೆಫೆಯ ಮುಂದೆ ಪುಷ್ಪಗುಚ್ಚವನ್ನುಇರಿಸಿದರೆ, ನೂರಾರು ಮಂದಿ ಕ್ಯೂ ನಿಂತು ತಮ್ಮಕಂಬನಿ ಸುರಿಸಿದ್ದಾರೆ, ಬಿಕ್ಕಿ ಬಿಕ್ಕಿಅತ್ತವರು ಅನೇಕ ಮಂದಿ.

ಆಸ್ಟ್ರೇಲಿಯಾದ ಜನರಿಗೆ ಇಂದು ಒಂದು ಬಗೆಯ ರೋಷ: 38 ವರ್ಷದ ಕ್ಯಾಟ್ರಿನಾ ಓರ್ವ ಖ್ಯಾತ ಬ್ಯಾರಿಸ್ಟರ್. ಕೆಫೆಯ ಮೇಲೆಯೇ ಅವರ ಆಫೀಸು. ಕಾಫಿ ಸೇವನೆಗೆಂದು ಕೆಳಗಿಳಿದು ಬಂದವರು ಹದಿನೇಳು ಗಂಟೆಗಳ ಬಂಧನದಲ್ಲಿದ್ದರು. ಇದ್ದ ಹದಿನೇಳುಜನಕ್ಕೆ ಬಿಡುಗಡೆ ದೊರೆಕಿದಾಗ ಈಕೆ ಹೃದಯಾಘಾತದಿಂದ ನಿಧನರಾದರು. ಹತ್ತು ವರ್ಷದಾಟದ ಮೂರು ಮಕ್ಕಳ ತಾಯಿ! ಇವರದ್ದು ವಕೀಲರ ಕುಟುಂಬ. ಈಕೆ ಶಾಲಾ ಪರೀಕ್ಷೆಯಲ್ಲಿ 100 ಟಿ ಇ ಆರ್ (ಅಂದರೆ ಈ ವರ್ಗಕ್ಕಿಂತ ಉತ್ತಮವಾದವರು ಯಾರೂ ಇಲ್ಲ) ಪಡೆದು ತೇರ್ಗಡೆಯಾದವರು. ಇಂದು ದುರಾತ್ಮನೊಬ್ಬನ ಹಿಡಿತಕ್ಕೆ ಸಿಕ್ಕು ಇಲ್ಲವಾಗಿದ್ದಾರೆ.

ಎಲ್ಲರೂ ಈಗ ಕೇಳುತ್ತಿರುವ ಪ್ರಶ್ನೆ- ಇಂತಹ ದುಚಾರಿತ್ರ್ಯವುಳ್ಳ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಟ್ಟವರು ಯಾರು? ಇವನಲ್ಲದೆ ಇಂತಹ ಎಷ್ಟು ಮಂದಿ ದೇಶದಲ್ಲಿ ತಿರುಗಾಡುತ್ತಿದ್ದಾರೆ? ನಿಜ ಹೇಳಬೇಕಾದರೆ ಇಲ್ಲಿಯ ಕಾನೂನು ವ್ಯವಸ್ಥೆಯೇ ಹಾಗೆ. ಎಂದೋ ಬರೆದ ಕಾನೂನು.

ರೆಪ್ಪೆವರೆಗೆ ರುಜುವಾತಿದ್ದರೂ, ಮತ್ತಾವುದೋ ಆಂಶವನ್ನು ಎತ್ತಿಹಿಡಿದು ತಪ್ಪಿತಸ್ಥರನ್ನು ಬಿಟ್ಟುಬಿಡುವ ನಿಯಮಗಳು. ಹೀಗಾಗಿ ಇಂದು ನಮ್ಮರಾಜಕಾರಣಿಗಳು ಮತ್ತು ನ್ಯಾಯಾಧೀಶರುಗಳು ತಲೆ ತಗ್ಗಿಸಬೇಕಾದ ಸಂದರ್ಭ ಉಂಟಾಗಿದೆ.

ಮತ್ತೊಂದು ನನಗನ್ನಿಸಿದ್ದು-ಇಷ್ಟೆಲ್ಲಾ ಮಾಡಿದ ಆ ದುರಾತ್ಮಗಳಿಸಿದ್ದಾದರೂಏನು? ತಾನು ಸತ್ತ, ಸರಿ. ಆದರೆ ಮಿಕ್ಕವರಿಗೆ ಈ ಹಿಂಸೆಕೊಟಿದ್ದು ಏತಕ್ಕೆ? ನಿಜ ಅವನ ಹೆಸರು ಬರಾಕ್ ಒಬಾಮಾ ವರೆಗೂ ಹೋಯಿತು. ಇದೇಅವನ ಇಂಗಿತವೇ?

English summary
Sydney siege : First person narration by Srinivas Karenahalli, Sydney, Australia. Terrorist held more than 50 people captive inside Lindt Cafe and forced few people to hold ISIS flag. On Tuesday he was shot dead by police.Our hearts go out to all of those caught up in this appalling incident and their loved ones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X