ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತವರ ತೊರೆದು ಬಂದ ವಿರಾಗಿ ಹಕ್ಕಿಗಳ ಕನ್ನಡ ಕಲರವ

By ಲಕ್ಷ್ಮಣ ಕೆಪಿ, ಸಿಂಗಪುರ
|
Google Oneindia Kannada News

ಕನ್ನಡ ಸಂಘ (ಸಿಂಗಪುರ)ವು ಇದೇ ಅಕ್ಟೋಬರ್ ತಿಂಗಳಲ್ಲಿ ಹಮ್ಮಿಕೊಂಡಿರುವ ಕನ್ನಡ ಹಬ್ಬವು ಇಲ್ಲಿಯ ಕನ್ನಡಿಗರ ಮನದಾಳದ ಇಂಗಿತ, ತುಡಿತ ಹಾಗೂ ಕನ್ನಡಮಯ ಎಂಬುವ ಭಾವವನ್ನು ಅನುಭವಿಸುವ, ಆಚರಿಸುವ ಸಡಗರದ ದಿನವೆಂದರೆ ಅತಿಶಯೋಕ್ತಿವೇನಲ್ಲ.

ಕೆವಿ ಸುಬ್ಬಣ್ಣನವರು ತಮ್ಮ "ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು" ಕೃತಿಯ ಆರಂಭದ ಭಾಗದಲ್ಲಿ 'ಕಾವೇರಿಯಿಂದ ಗೋದಾವರಿವರೆಗೆ ಇದ್ದ ಕನ್ನಡ ದೇಶದ ಬಗ್ಗೆ ಹಾಗೂ ಕನ್ನಡವು ಹೇಗೆ ವಿಶ್ವ ಭಾಷೆ ಎನ್ನುವುದರ ಬಗ್ಗೆ ವಿವರಿಸುತ್ತಾರೆ. ಯಾವುದೇ ಭಾಷೆಯ ಮೂಲವು ಎಲ್ಲಿಂದಲೋ ಹೊರಟು ಯಾವುದ್ಯಾವುದೋ ನೆಲದ, ಭಾಷೆಗಳ ಕಿರುತೊರೆಗಳಿಂದ ನುಡಿ, ನಡೆಗಳನ್ನ ಬಳುವಳಿ ಪಡೆಯುತ್ತಾ ಇಂದು ತಾನಿರುವಲ್ಲಿಗೆ ಬಂದು ತಾಕಿರುತ್ತದೆ ಅಥವಾ ಅಂತರಗಾಮಿಯಂತೆ ಹರಿಯುತ್ತಲೇ ಇರುತ್ತದೆ. [ಸಿಂಗಪುರದ 'ಸಿಂಚನ'ದಿಂದ ಕಥೆ ಮತ್ತು ಕವನ ಸ್ಪರ್ಧೆ]

Singara Sammelana in Singapore : Article by KP Lakshman

ಕನ್ನಡ ಭಾಷೆಯ ವಿಷಯದಲ್ಲಿ ಮಾತ್ರ ಯಾಕೆ, ಎಲ್ಲ ಭಾಷೆಗಳ ವಿಷಯದಲ್ಲೂ ಇದು ಸತ್ಯ. ಹೀಗೆ ಎಲ್ಲ ಭಾಷೆಗಳು ತನ್ನ ಅಂತರಂಗದಲ್ಲಿ ವಿಶ್ವವನ್ನು ಒಳಗೊಂಡಿರುತ್ತವೆ ಅನ್ನುತ್ತಾರೆ. ಆದ್ದರಿಂದಲೇ ಕನ್ನಡವು ಜಗತ್ತನ್ನು ತನ್ನೊಳಗೆ ಇರಿಸಿಕೊಂಡಿರುವ ಸಾಂದ್ರವಾದ ಒಂದು ಕಿರುಜಗತ್ತು. ಮಹಾಮರವನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಆಲದ ಬೀಜದ ಹಾಗೆ. ಈ ನೆಲೆಯಲ್ಲಿ ನಾವು ವಿಶ್ವಕನ್ನಡಿಗರು ವಿಶ್ವವನ್ನು ಒಡಲೊಳಗೆ ಇರಿಸಿಕೊಂಡಿರುವ ಕನ್ನಡದ ಕಾಳುಗಳು.

ನಾವು ಸಿಂಗಪುರದಲ್ಲಿ ನಿಂತು ಕನ್ನಡ ಎನ್ನುವ ದೇಶದ ಬಗ್ಗೆ, ಜಗತ್ತಿನ ಬಗ್ಗೆ ಯೋಚಿಸುವುದಾದರೆ, ನಾವು ನಮ್ಮ ಜಗತ್ತನ್ನು, ದೇಶವನ್ನು ಬಿಟ್ಟು ವಲಸೆ ಬಂದಿರುವ ಹಕ್ಕಿಗಳು. ಇಡಿಯ ಜೀವ ಸಂಕುಲಕ್ಕೆ ವಿಯೋಗದ ಯಾತನೆ ಕಾಡುವಷ್ಟು ಮತ್ಯಾವುದು ಕಾಡುವುದಿಲ್ಲವೇನೋ? ಅದಕ್ಕಾಗಿಯೇ ರಾಮಾಯಣ, ಮಹಾಭಾರತ, ಜನದಪದ ಪುರಾಣ ಕಾವ್ಯಗಳಲ್ಲಿ ವಿಯೋಗದ ಕಥನಗಳು, ಅಂದರೆ ತೊರೆದು ಹೋಗುವ ಕಥನಗಳು ಹೇರಳವಾಗಿವೆ. ಅವು ನಮ್ಮನ್ನು ಗಾಢವಾಗಿ ಕಾಡುತ್ತವೆ. ರಾಮ ತೊರೆದು ಹೋದ ದಶರಥ, ಲಕ್ಷ್ಮಣ ತೊರೆದು ಹೋದ ಊರ್ಮಿಳೆ, ದುಷ್ಯಂತ ತೊರೆದ ಶಕುಂತಲೆ, ಕೃಷ್ಣ ತೊರೆದ ಗೋಕುಲ, ಜನಪದ ಕಾವ್ಯದಲ್ಲಿ ತವರನ್ನು ತೊರೆವಾಗ ತಿರುಗಿ ನೋಡುವ ಹೆಣ್ಣು ಮಗಳು ಇವೆಲ್ಲ ವಿಯೋಗದ ಕಥನಗಳೇ. [ಇಪ್ಪತ್ತರ ಹರೆಯದ ಹೊಸ್ತಿಲಲ್ಲಿ ಸಿಂಗಪುರ ಕನ್ನಡ ಸಂಘ]

Singara Sammelana in Singapore : Article by KP Lakshman

ಹೀಗೆ ನಾವುಗಳು ಸಿಂಗಪುರದ ಕನ್ನಡಿಗರು ನೆಲ ಮತ್ತು ಭಾಷೆಯ ತೊರೆದು ಬಂದು ತವರ ತಿರುಗಿ ನೋಡುವ ವಿರಾಗಿ ಹಕ್ಕಿಗಳು. ಇಲ್ಲಿ ನಿಂತು ನಮ್ಮ ಭಾಷೆಯ ಜಗತ್ತನ್ನು ಸೃಷ್ಟಿಸಿಕೊಳ್ಳಲು ತವಕಿಸುತ್ತೇವೆ. ಅಂಥಾದ್ದೊಂದು ಜಗತ್ತಿನ ಭೌತ ಸ್ವರೂಪವೇ "ಸಿಂಗಪುರದ ಕನ್ನಡ ಸಂಘ". ಇಲ್ಲಿನ ಕನ್ನಡಿಗರು ಒಟ್ಟಿಗೆ ಕೂಡಿ ಹಾಡುವ ವಚನವಿರಲಿ, ದಾಸರ ಪದವಿರಲಿ, ಭಾವಗೀತೆ, ಚಿತ್ರಗೀತೆ ಇರಲಿ, ಅದು ನಮ್ಮ ನೆಲವನ್ನು ನಾವು ಇಲ್ಲಿ ನಿಂತು ಭಾವಿಸಿಕೊಂಡು ಸಂಭ್ರಮಿಸುವುದಕ್ಕೆ ಬಾಗಿಲು ತೆರೆದು ಕೊಡುತ್ತದೆ. ನಮ್ಮ ಎದೆಯ ಹಂದರದೊಳಗೊಂದು ಕನ್ನಡ ನೆಲವಿದೆಯಲ್ಲ ಅದನ್ನು ಸದಾ ತಂಪಾಗಿಡುವ ಕಸುವದು. ಇದು ಕೊಂಚ ಭಾವುಕ ಅನ್ನಿಸಬಹುದು. ಆದರೂ ಸತ್ಯ.

ವಿಶ್ವದಾದ್ಯಂತ ಕನ್ನಡಿಗರ ಕುರಿತು ಒಂದು ಮಾತು ಪದೇ ಪದೇ ಕೇಳಿಸುತ್ತದೆ. ಕನ್ನಡಿಗರು ತಮ್ಮದೇ ಗೂಡಿನಲ್ಲಿ ಸದಾ ಬೆಚ್ಚಗಿರಲು ಬಯಸುವವರು ಎಂದು. ಹೌದು ಅದು ನಿಜವಿರಬಹುದು. ಆದರೆ ಕನ್ನಡಿಗರ ಗೂಡು ಎಷ್ಟು ದೊಡ್ಡದಿದೆ ಎಂದರೆ ಯಾರನ್ನೂ ತನ್ನ ಮಡಿಲೊಳಗೆ ಇಟ್ಟುಕೊಳ್ಳುವಷ್ಟು ದೊಡ್ಡದಿದೆ. ಇದು ಅಂಧಾಭಿಮಾನವೇನು ಅಲ್ಲ. ಒಂದು ಭಾಷೆಯ ಅಗಾಧತೆ ಅಷ್ಟೇ. [ಸಿಂಗಪುರದಲ್ಲಿ ಕರ್ನಾಟಕದ ಶಾಸ್ತ್ರೀಯ ಸಂಗೀತ ಶಿಬಿರ]

Singara Sammelana in Singapore : Article by KP Lakshman

ಕಡೆಗೂ ಭಾಷೆ ಎಂದರೆ ಏನು? ಭಾಷೆಯೆಂಬುದು ಎಲ್ಲರನ್ನು ಎಲ್ಲವನ್ನೂ ಅಂದರೆ ಗಿಡ, ಮರ, ಹುಳ, ಹುಪ್ಪಟೆ, ಪ್ರಾಣಿ, ಪಕ್ಷಿ, ಮನುಷ್ಯರನ್ನು ಒಳಗೊಂಡ ಬದುಕು ತಾನೇ? ಅಂತಹ ಬದುಕಿನ ಉನ್ನತಿ ನಮಗೆ ಸ್ಪಷ್ಟವಾಗಿ ಕಾಣಸಿಗುವುದು ನಮ್ಮ ಕಲಾ ಪ್ರಕಾರಗಳಾದ ಸಂಗೀತ, ಕಾವ್ಯ, ಕಥನ, ಕುಣಿತ, ನಾಟಕಗಳಲ್ಲಿ.

ಕನ್ನಡ ನೆಲದ ಬದುಕನ್ನು ಸಿಂಗಪುರದ ನೆಲಕ್ಕೆ ಪರಿಚಯಿಸುವ ಕೆಲಸವನ್ನು ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲಿನ 'ಕನ್ನಡ ಸಂಘ (ಸಿಂಗಪುರ)' ಮಾಡುತ್ತಾ ಬಂದಿದೆ. ಈ ವರ್ಷ ತನ್ನ ಇಪ್ಪತ್ತನೆ ಹುಟ್ಟಿನ ಸಂಭ್ರಮವನ್ನು ದಿನಾಂಕ ಅಕ್ಟೋಬರ್ 29 ಮತ್ತು 30ನೇ ತಾರೀಕು "ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ" ಎಂಬ ಹೆಸರಿನಲ್ಲಿ ನಡೆಸಲು ಸಿದ್ಧತೆ ನಡೆಸಿದೆ. ಈ ಹಬ್ಬವು ಕನ್ನಡ ದೇಶವನ್ನು ಇಲ್ಲಿ ನೆನೆಯುತ್ತಾ ಕನ್ನಡ ಭಾಷೆಯು ಅನ್ನ, ನೀರು ಕೊಡುವ ಭಾಷೆಯಾಗಲಿ ಎಂದು ಇಲ್ಲಿ ನಿಂತು ಪ್ರಾರ್ಥಿಸುವ ಹಬ್ಬವಾಗಲಿದೆ. ಸರ್ವ ಜನಕ್ಕೂ ಇಲ್ಲಿ ಸ್ವಾಗತವಿದೆ. [ಸಡಗರದಿಂದ ಸಿಂಗರಿಸಿ ಸಜ್ಜಾಗುತ್ತಿದೆ ಸಿಂಗಪುರದ 'ಸಿಂಗಾರ']

English summary
Singapore Kannada Sangha is celebrating 20th anniversary on 29th and 30th of October, 2016. KP Lakshman has written a beautiful article how an NRI finds solace by indulging in Kannada activites and finds what he has lost by leaving the motherland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X