ಸಿಂಗಪುರದಲ್ಲಿ ಬೆಳಗಿತು ದೀಪ - ಮೊಳಗಿತು ಕನ್ನಡದ ಕಹಳೆ

ಆಗ್ನೇಯ ಏಷ್ಯಾದ ಸೌಭಾಗ್ಯದ ಕುಂಕುಮ, ಸ್ವಚ್ಛ ನಗರ, ಹಚ್ಚಹಸುರಿನ ನಗರ ಎಂದು ಖ್ಯಾತವಾಗಿರುವ ಉದ್ಯಾನನಗರಿ ಸಿಂಗಪುರದಲ್ಲಿ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ, ಬೆಳಕಿನ ಹಬ್ಬ ನರಕ ಚತುರ್ದಶಿಯ ದಿನದಂದು ಅದ್ದೂರಿ ಚಾಲನೆ ದೊರೆಯಿತು.

Written by: ಸಿಂಗಪುರದಲ್ಲಿ ಒನ್ಇಂಡಿಯಾ ಕನ್ನಡ
Subscribe to Oneindia Kannada

ಸಿಂಗಪುರ, ಅಕ್ಟೋಬರ್ 29 : ಆಗ್ನೇಯ ಏಷ್ಯಾದ ಸೌಭಾಗ್ಯದ ಕುಂಕುಮ, ಸ್ವಚ್ಛ ನಗರ, ಹಚ್ಚಹಸುರಿನ ನಗರ ಎಂದು ಖ್ಯಾತವಾಗಿರುವ ಉದ್ಯಾನನಗರಿ ಸಿಂಗಪುರದಲ್ಲಿ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ, ಬೆಳಕಿನ ಹಬ್ಬ ನರಕ ಚತುರ್ದಶಿಯ ದಿನದಂದು ಅದ್ದೂರಿ ಚಾಲನೆ ದೊರೆಯಿತು.

ಕನ್ನಡ ಸಂಘ ಸಿಂಗಪುರದ 20ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ಈ ಎರಡು ದಿನಗಳ ಕನ್ನಡ ಹಬ್ಬದ ಮಕರಂದ ಸವಿಯಲು ಕನ್ನಡನಾಡಿನಿಂದಷ್ಟೇ ಅಲ್ಲ ವಿಶ್ವದೆಲ್ಲೆಡೆಯಿಂದ ಕನ್ನಡಾಭಿಮಾನಿಗಳು ಜೇನಿನಂತೆ ಮುತ್ತಿದ್ದಾರೆ. ಸಮ್ಮೇಳನದ ಆರಂಭದಲ್ಲೇ ಸಾಹಿತ್ಯದ ಸೊಬಗು ಸೂಸಿ, ತಿಳಿಹಾಸ್ಯದ ಬುಗ್ಗೆ ಚಿಮ್ಮಿ, ಸಂಗೀತದ ಹೊನಲು ಹರಿದು ಕಲಾರಸಿಕರ ಮನತಣಿಸಿತು.

ಕೃಷ್ಣೇಗೌಡರ ಹಾಸ್ಯೋಲ್ಲಾಸ, ಜಾನಪದ ಕಲಾವಿದರ ಹಾಡಿನ ಹೊನಲು, ಸಿಂಗಪುರ ಮಕ್ಕಳ ಆರ್ಕೆಸ್ಟ್ರಾ ಮುಂತಾದ ಕಾರ್ಯಕ್ರಮಗಳು ಸಾಲುಸಾಲಾಗಿ ಸಿಂಗಪುರ ಕನ್ನಡಿಗರನ್ನು ರಂಜಿಸಲಿವೆ.

ಚಿಣ್ಣರಿಂದ ಗಣರಾಯನ ಸ್ಮರಣೆ

ಪ್ರಾರಂಭದಲ್ಲೇ ಸಿಂಗಪುರದ ಖ್ಯಾತ ಸಂಗೀತಗಾರ್ತಿ ಶ್ರೀಮತಿ ಶೃತಿ ಆನಂದ್ ತಂಡದವರಿಂದ ನೇತೃತ್ವದಲ್ಲಿ, ಸಾಂಪ್ರದಾಯಿಕ ಉಡುಗೆ ತೊಟ್ಟ ಇಪ್ಪತ್ತಕ್ಕೂ ಹೆಚ್ಚಿನ ಚಿಣ್ಣರು ಶ್ರೀಗೌರಿಸುತ ಸಿದ್ಧಿವಿನಾಯಕನ ಕುರಿತಾದ ವೃಂದಗಾನವೊಂದನ್ನು ಅತ್ಯಂತ ಮುದ್ದುಮುದ್ದಾಗಿ ಪ್ರಸ್ತುತ ಪಡಿಸಿದರು. ಸಿಂಗಪುರದ ಈ ಪುಟಾಣಿಗಳಲ್ಲಿ ಕನ್ನಡವನ್ನು ಕೇಳುವುದೇ ಒಂದು ಆನಂದ.

ವಿಜಯರಂಗ ಪ್ರಸಾದ್ ಸ್ವಾಗತ ಭಾಷಣ

ಸ್ವಾಗತ ಭಾಷಣ ಮಾಡಿದ ಕನ್ನಡ ಸಂಘ, ಸಿಂಗಪುರದ ಅಧ್ಯಕ್ಷ ಶ್ರೀ ವಿಜಯರಂಗ ಪ್ರಸಾದ್ ರವರು ಸಮಸ್ತ ಕನ್ನಡ ಬಾಂಧವರಿಗೆ ದೀಪಾವಳಿಯ ಹಾಗು ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದರು. ಕನ್ನಡ ಸಂಘದ ಕರೆಗೆ ಓಗೊಟ್ಟು ಬಂದ ಎಲ್ಲಾ ಕಲಾವಿದರಿಗೂ, ಕಾರ್ಯಕ್ರಮಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದಗಳನ್ನು ಸಮರ್ಪಿಸಿ - ಸಮ್ಮೇಳನದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು.

ಸಿಂಗಾರ ಪುರಸ್ಕಾರ

ಶಿಕ್ಷಣ, ಕ್ರೀಡೆ ಹಾಗು ಪಠ್ಯೇತರ ವಿಷಯಗಳಲ್ಲಿ ಮಾಡಿದ ಸಾಧನೆಗಳಿಗಾಗಿ ಸಿಂಗಾರ ಅವಧಾನಿ ಪುರಸ್ಕಾರ, ಆರ್ಯಭಟ ಪುರಸ್ಕಾರಗಳನ್ನು ಕುಮಾರಿ ಅಂಕಿತ ಅಲೆವೂರ್ ಭಟ್, ಚಿ. ಹೇಮಂತ್ ಬೆಂಗಳೂರು ಶ್ರೀನಿವಾಸ್, ಕುಮಾರಿ ವೃಂದಾ ವಸಂತ ಕುಲಕರ್ಣಿ, ಚಿ. ನಿತಿನ್ ವೆಂಕಟರಾಮ್ ಜೋಯಿಸ್, ಚಿ. ಬೆಳ್ಳಕ್ಕಾ ಕೃಷ್ಣಮೂರ್ತಿ ಪ್ರಜ್ವಲ್, ಕುಮಾರಿ ದೀಕ್ಷಾ ಭಟ್, ಚಿ ಲಿಖಿತ್ ರಘುನಾಥ್, ಕುಮಾರಿ ಆದ್ಯ ಆನಂದ್ ಹಾಗು ಕುಮಾರಿ ಮೇಘನಾ ಹೆಬ್ಬಾರ್ ಇವರುಗಳಿಗೆ ನೀಡಲಾಯಿತು.

ಸಿಂಚನ ಸಾಹಿತ್ಯ ಸ್ಪರ್ಧೆ

ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕಾಗಿ ನಡೆಸಿದ ಸಿಂಚನ ಸಾಹಿತ್ಯ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಯಿತು. ಖ್ಯಾತ ಪತ್ರಕರ್ತ ಗಿರೀಶ್ ರಾವ್ ಹತ್ವಾರ್ (ಜೋಗಿ) ಮತ್ತು ಕವಿ ಬಿ.ಆರ್. ಲಕ್ಷಣ್‌ರಾವ್ ರವರು ತೀರ್ಪುಗಾರರಾಗಿದ್ದ ಈ ಸ್ಪರ್ಧೆಗೆ ವಿಶ್ವ ಕನ್ನಡಿಗರಿಂದ ಬಹಳ ಉತ್ತಮ ಪ್ರತಿಕ್ರಿಯೆ ದೊರತಿದೆ.

ಅಂಟು ಜಾಡ್ಯಕ್ಕೆ ಪ್ರಥಮ ಬಹುಮಾನ

ಕಥಾ ವಿಭಾಗದಲ್ಲಿ ಬಾಗಲಕೋಟೆಯ ಹನುಮಂತ ಹಾಲಿಗೇರಿಯವರ 'ಅಂಟು ಜಾಡ್ಯ' ಕತೆಗೆ ಪ್ರಥಮ ಬಹುಮಾನ ದೊರೆತ, ಪ್ರೊ. ಆರ್.ಎಸ್. ನಾಯಕ, ಭಟ್ಕಳ ಇವರ 'ಆತ ಬಂದ' ಕತೆಗೆ ಎರಡನೇ ಬಹುಮಾನ ಸಂದಿದೆ. ಅನಿವಾಸಿ ಕನ್ನಡಿಗರ ವಿಭಾಗದಲ್ಲಿ ಪ್ರಥಮ ಬಹುಮಾನ ಡಾ. ಪ್ರೇಮಲತ ಬಿ. ಯುನೈಟೆಡ್ ಕಿಂಗ್ಡಮ್ ರವರ ರಚನೆ 'ಸ್ವಾತಂತ್ರ್ಯ' ಗಳಿಸಿದರೆ, ಎರಡನೇ ಬಹುಮಾನ ಅಮೆರಿಕಾದ ಜಮುನಾ ರಾಣಿ ಎಚ್.ಎಸ್ ರವರ ಕತೆ 'ಹೊಸ ಕನಸು' ಗೆದ್ದುಕೊಂಡಿದೆ.

ಕವನ ರಚನೆ ಸ್ಪರ್ಧೆ ಫಲಿತಾಂಶ

ಕವನ ವಿಭಾಗದಲ್ಲಿ ಚೈತ್ರಿಕಾ ಶ್ರೀಧರ್ ಹೆಗಡೆ, ಸಿದ್ದಾಪುರರವರ ಕವನ 'ಅವಳ ಬಿಳಿ ನೆರಳು ಮತ್ತು ಅಳಿಸುವ ಚಿತ್ರಗಳು' ಪ್ರಥಮ ಬಹುಮಾನ ಗಳಿಸಿತು. ದ್ವಿತೀಯ ಬಹುಮಾನ ಭಟ್ಕಳದ ಪ್ರೊ. ಆರ್.ಎಸ್. ನಾಯಕರವರ 'ಫಾತಿಮಾನಂದನ' ಪಡೆಯಿತು. ಅನಿವಾಸಿ ಕನ್ನಡಿಗರ ಕವನ ವಿಭಾಗದಲ್ಲಿ 'ಅಂಕೋರ್ ವಾಟ್‌ನ ಸೂರ್ಯೋದಯ' (ಮಹೇಶ್ ಪ್ರೇಮಚಂದ್ರ, ಸಿಂಗಪುರ), 'ಉಸಿರ ಮಾರುವ ಕಿನ್ನರಿ' (ಜಮುನಾ ರಾಣಿ ಎಚ್. ಎಸ್. ಅಮೆರಿಕಾ), 'ಮನಸ್ಸಿನ ಮಾತುಗಳು' (ಲೋಕೇಶ್ವರಿ ಜ. ನಾ, ಸಿಂಗಪುರ) ಕವನಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗು ತೃತೀಯ ಬಹುಮಾನಗಳನ್ನು ಪಡೆದವು,

"ಕನ್ನಡ ಭಾಷೆಯಲ್ಲಿ ಅತಾರ್ಕಿಕತೆ ಇಲ್ಲ"

ಹಾಸ್ಯಲೋಕದ ಪ್ರೊಫೆಸರ್ ಎಂದೇ ಖ್ಯಾತರಾದ ಪ್ರೊ.ಕೃಷ್ಣೇಗೌಡರು ನಗೆಯೊಡನೆ ಭಾಷೆಯ ಪಾಠ ಮಾಡಿ - ಕನ್ನಡವೆಂದರೆ ಬರಿನುಡಿಯಲ್ಲ, ಭಾಷೆಯೆಂಬುದು ಇಡೀ ವ್ಯಕ್ತಿತ್ವ ಎಂದು ಹೇಳಿದರು. ಈಗಿನ ಜನಕ್ಕೆ ಕನ್ನಡದಲ್ಲಿ ಬೈಯ್ಯೋಕ್ಕೂ ಬರೋಲ್ಲ, ಪ್ರೀತಿಯಿಂದ ಮಾತ್ನಾಡೋಕ್ಕೂ ಬರೊಲ್ಲ ಎಂದು ವಿಷಾದಿಸಿದ ಅವರು ನಗೆಯ ಜೊತೆ-ಜೊತೆಗೆ ಕನ್ನಡ ಭಾಷೆಯ ಸವಿ ಸೊಬಗು ಸೊಗಡನ್ನು ಸಭಿಕರಿಗೆಲ್ಲ ಸುಲಲಿತವಾಗಿ ತಿಳಿಸಿಕೊಟ್ಟರು. ಕನ್ನಡವನ್ನು ನುಡಿಯುವ ಮೂಲಕ ಅದರ ಶಕ್ತಿ ಮತ್ತು ಸಿರಿವಂತಿಕೆಯನ್ನು ಅನುಭವಿಸುವಂತೆ, ಉಳಿಸಿ ಬೆಳೆಸುವಂತೆ ಕರೆ ನೀಡಿದ ಪ್ರೊ.ಕೃಷ್ಣೇಗೌಡರು ಎಲ್ಲರಲ್ಲೂ ಹೊಸ ಹುರುಪನ್ನು ತಂದರು. ಅವರ ಹಾಸ್ಯದ ಹೊನಲು ನಾಳೆಯೂ ಮುಂದುವರೆಯಲಿದೆ.

ರೋಮಾಂಚನಗೊಳಿಸಿದ ಜಾನಪದ ಗೀತೆಗಳು

ಕರ್ನಾಟಕದಿಂದ ವಿಶೇಷವಾಗಿ ಬಂದ ಜಾನಪದ ತಂಡ "ಬಂದೇವು ನಾವು ನಿನ್ನಚರಣಕೆ" ಎಂಬ ಗೀಗಿಪದದಿಂದ ಕಾರ್ಯಕ್ರಮ ಆರಂಭಿಸಿತು. ನಂತರ ಶಿಶುನಾಳ ಶರೀಫರ "ನಾವ್ಯಾರಿಗಲ್ಲವರು" ಮತ್ತು ಉತ್ತರ ಕರ್ನಾಟಕದ ಆರಾಧ್ಯದೈವವಾದ ಸವದತ್ತಿ ಎಲ್ಲಮ್ಮ ಕುರಿತಾದ "ಉಧೋ ಉಧೋ ಎಲ್ಲಮ್ಮ ತಾಯೇ" ಎಂಬ ಜಾನಪದ ಗೀತೆಗಳನ್ನು ಹಾಡಿದರು. ಅವರ ಶಕ್ತಿಭರಿತ ನಿರೂಪಣೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಿ ಕುಳಿತಲ್ಲೇ ಕುಣಿಸಿತು ಮತ್ತು ಜಾನಪದ ಗೀತೆಗಳ ಸೊಗಡನ್ನು ಸಿಂಗನ್ನಡಿಗರಿಗೆ ತಲುಪಿಸಲು ಸಮರ್ಥವಾಯಿತು.

English summary
Singara Sammelana gets off to a flying start. Kannada Sangha Singapore is celebrating 20th anniversary at Singapore Polytechnic College.
Please Wait while comments are loading...