ನ್ಯೂಜೆರ್ಸಿಯಲ್ಲಿ ಅಯುತ ಶ್ರೀ ವೇದೋಕ್ತ ಧನ್ವಂತರಿ ಯಾಗ

Written by: ಸರಿತಾ ನವಲಿ, ನ್ಯೂ ಜೆರ್ಸಿ
Subscribe to Oneindia Kannada

ನ್ಯೂ ಜೆರ್ಸಿಯ ಶ್ರೀ ಕೃಷ್ಣವೃಂದಾವನದಲ್ಲಿ ಜೂನ್ 18, 2016ರಂದು ಅಯುತ ಶ್ರೀ ವೇದೋಕ್ತ ಧನ್ವಂತರಿ ಮಹಾಯಾಗವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. 500ಕ್ಕೂ ಹೆಚ್ಚು ಭಕ್ತರು ಶ್ರದ್ಧೆ, ಭಕ್ತಿಗಳಿಂದ ಈ ಧನ್ವಂತರಿ ಮಹಾಯಾಗದಲ್ಲಿ ಪಾಲ್ಗೊಂಡಿದ್ದರು.

ಉಡುಪಿಯ ಶ್ರೀ ಪುತ್ತಿಗೆ ಮಠದ ಶಾಖೆಯಾದ ಶ್ರೀ ಕೃಷ್ಣವೃಂದಾವನ, ಪ್ರತಿ ವರುಷ ಜೂನ್ ತಿಂಗಳಿನಲ್ಲಿ ಮಹಾಯಾಗಗಳನ್ನು ಏರ್ಪಡಿಸಿ, ವೇದಾಧ್ಯಾಯನದಲ್ಲಿ ಪಾರಂಗತರಾದ ಅರ್ಚಕರ ಮಾರ್ಗದರ್ಶನದಲ್ಲಿ ನೂರಾರು ಭಕ್ತರಿಗೆ ಸ್ವತಃ ಪೂಜೆ ಸಲ್ಲಿಸುವ ಅವಕಾಶವನ್ನು ಒದಗಿಸುತ್ತಾ ಬಂದಿದೆ.

ಈ ಧನ್ವಂತರಿ ಮಹಾಯಾಗದಲ್ಲಿ ಪುತ್ತಿಗೆ ಮಠದ ಅಮೆರಿಕಾದಲ್ಲಿನ ವಿವಿಧ ಶಾಖೆಗಳಿಂದ ಆಗಮಿಸಿದ ಹನ್ನೊಂದು ಋತ್ವಿಕರು ಪಾಲ್ಗೊಂಡು ಯಜ್ಞವನ್ನು ಯಶಸ್ವಿಯಾಗಿ ನೆರವೇರಿಸಿದರು. ಅಲ್ಲದೇ, ಈ ಮಹಾಯಾಗವನ್ನು ಆಚರಿಸುವ ಮೊದಲು ಒಂದು ಲಕ್ಷ ಧನ್ವಂತರಿ ಜಪವನ್ನು ಪಠಿಸಿದ್ದರು. [ನ್ಯೂಜೆರ್ಸಿಯಲ್ಲಿ ಮುದನೀಡಿದ ಮಹಾಶಿವರಾತ್ರಿ, ನೃತ್ಯೋತ್ಸವ]

ಮೊದಲಿಗೆ ಅರಣಿ ಮಂಥನ (ಪವಿತ್ರವಾದ ಮರವನ್ನು ಕಡೆದು ಯಾಗಾಗ್ನಿಯನ್ನು ಉತ್ಪತ್ತಿಸುವ ವಿಧಾನ)ಕೈಗೊಂಡು ಪೂಜೆಯನ್ನು ಪ್ರಾರಂಭಿಸಲಾಯಿತು. ದೇವಸ್ಥಾನದ ವಿಶಾಲವಾದ ಹೊರ-ಪ್ರಾಂಗಣದಲ್ಲಿ ಈ ಮಹಾಯಾಗಕ್ಕೆಂದು ಯಜ್ಞಕುಂಡವನ್ನು ನಿರ್ಮಿಸಲಾಗಿತ್ತು. ಸಾಂಪ್ರದಾಯಿಕ ಚಂಡೆ ಮತ್ತು ತಾಳ ವಾದ್ಯಗಳೊಂದಿಗೆ ದೇವತಾ ವಿಗ್ರಹಗಳನ್ನು ಪೂಜಿಸಲಾಯಿತು. [ನ್ಯೂಜೆರ್ಸಿಯಲ್ಲಿ ವಿಜೃಂಭಣೆಯ ಗುರು ರಾಯರ ವರ್ಧಂತಿ]

108 ಧನ್ವಂತರಿ ವಿಗ್ರಹಗಳ ಪ್ರತ್ಯೇಕ ಪೂಜೆ

ಈ ಮಹಾಯಾಗವನ್ನು ಸಾಮೂಹಿಕವಾಗಿ ನೆರವೇರಿಸುವುದರೊಂದಿಗೆ, 108 ಧನ್ವಂತರಿ ವಿಗ್ರಹಗಳನ್ನು ಪ್ರತ್ಯೇಕವಾಗಿ ಪೂಜಿಸಲು ಭಕ್ತರಿಗೆ ವಿತರಿಸಿ, ಪೂಜಾವಿಧಾನವನ್ನು ವಿವರಿಸಲಾಯಿತು.

ಭಟ್ಟರಿಂದ ಧನ್ವಂತರಿ ರೂಪದ ವಿವರಣೆ

ಯಾಗ ಪ್ರಾರಂಭ ಮಾಡುವ ಮೊದಲು ಭಕ್ತರುನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಅರ್ಚಕರಾದ ಶ್ರೀ ಯೋಗೀಂದ್ರ ಭಟ್ ಅವರು, ಚತುರ್ವೇದಗಳಲ್ಲಿ ಉಲ್ಲೇಖಿತವಾಗಿರುವ ಶ್ರೀ ಧನ್ವಂತರಿ ಮಂತ್ರವನ್ನು ಮತ್ತು ತಂತ್ರಸಾರದಲ್ಲಿ ಉಲ್ಲೇಖಿಸಿರುವ ಧನ್ವಂತರಿ ರೂಪವನ್ನು ವಿವರಿಸಿದರು.

ಪಾಯಸದ ಅಯುತ ಅಗ್ನಿಗೆ ಸಮರ್ಪಣೆ

ನಂತರ ಅಗ್ನಿ ಸಂಸ್ಕಾರ ಮಾಡಿ, ಋತ್ವಿಕರೊಂದಿಗೆ ತಂತ್ರಸಾರದಲ್ಲಿ ಉಲ್ಲೇಖಿಸಲ್ಪಟ್ಟ ಶ್ರೀ ವೇದೋಕ್ತ ಧನ್ವಂತರಿ ಮಂತ್ರವನ್ನು ಪಠಿಸುತ್ತಾ ಅಮೃತ ಸಮಿತ್ತು ಮತ್ತು ಪಾಯಸದ ಅಯುತ (ಹತ್ತು ಸಾವಿರ) ಆಹುತಿಗಳನ್ನು ಅಗ್ನಿಗೆ ಅರ್ಪಿಸಿ ಯಾಗವನ್ನು ನೆರವೇರಿಸಿದರು.

ಭಕ್ತಾದಿಗಳಿಂದ ಶ್ಲೋಕ ಪಠನೆ

ಇದೇ ಸಂದರ್ಭದಲ್ಲಿ "ಅಚ್ಯುತಾನಂತ ಗೋವಿಂದ ವಿಷ್ಣೋ ನಾರಾಯಣಾಮೃತ, ರೋಗಾನ್ಮೆ ನಾಶಯಾಶೇಷಾನ್ ಆಶು ಧನ್ವಂತರೇ ಹರೆ|" ಎಂಬ ಶ್ಲೋಕ ಮಂತ್ರವನ್ನು ನೆರೆದ ಭಕ್ತರೆಲ್ಲರೂ ನಿರಂತರ ಜಪಿಸಿದರು. ಭಕ್ತರಿಂದ ಪೂಜೆಗೊಂಡಿದ್ದ ಧನ್ವಂತರಿ ವಿಗ್ರಹಗಳಿಗೆ ಪುನಃ ಪೂಜೆ ಸಲ್ಲಿಸಿ, ತೀರ್ಥ-ಪ್ರಸಾದಗಳೊಂದಿಗೆ ವಿತರಿಸಲಾಯಿತು.

ಡಾ. ಯಜ್ಞಸುಬ್ರಮಣಿಯನ್ ವಚನ

ಮಹಾಯಾಗದಲ್ಲಿ ಪಾಲ್ಗೊಂಡಿದ್ದ, ಅಮೆರಿಕಾದಲ್ಲಿ ಬಹಳಷ್ಟು ಹಿಂದೂ ದೇವಾಲಯಗಳನ್ನು ನಿರ್ಮಿಸಿರುವ ಧರ್ಮಾತ್ಮ ಡಾ. ಯಜ್ಞಸುಬ್ರಮಣಿಯನ್ ಅವರು ಮಾತನಾಡಿ, ನ್ಯೂ ಜೆರ್ಸಿಯ ಶ್ರೀ ಕೃಷ್ಣವೃಂದಾವನ ಅಮೆರಿಕದಲ್ಲಿ ಮೊದಲ ಬಾರಿಗೆ ಸಾಮೂಹಿಕವಾಗಿ ಅಯುತ ಶ್ರೀ ವೇದೋಕ್ತ ಧನ್ವಂತರಿ ಮಹಾಯಾಗವನ್ನು ಕೈಗೊಂಡಿದ್ದು ವಿಶೇಷವಾಗಿದೆಯೆಂದು ತಿಳಿಸಿ ಸಂತೋಷ ವ್ಯಕ್ತಪಡಿಸಿದರು.

ವೈದಿಕ ಆಚರಣೆಗೆ ಶ್ಲಾಘನೆ

ಭಾರತ ದೇಶದಿಂದ ವಲಸೆ ಬಂದು, ಸಾವಿರಾರು ಮೈಲಿ ದೂರದ ಅಮೆರಿಕಾದಲ್ಲಿ ನೆಲೆಸಿಯೂ, ಇಂತಹ ವೈದಿಕ ಆಚರಣೆಗಳಲ್ಲಿ ಭಾಗಿಯಾಗುವ ಭಕ್ತರನ್ನು ಅಭಿನಂದಿಸಿ, ಈ ಅವಕಾಶವನ್ನು ಕಲ್ಪಿಸಿಕೊಟ್ಟ ಶ್ರೀ ಕೃಷ್ಣ ವೃಂದಾವನದ ಪ್ರಯತ್ನವನ್ನು ಶ್ಲಾಘಿಸಿದರು.

ಯೋಗೀಂದ್ರ ಭಟ್ಟರಿಂದ ಬೇಸಿಗೆ ಶಿಬಿರದ ವಿವರ

ಪ್ರಧಾನ ಅರ್ಚಕರಾದ ಯೋಗೀಂದ್ರ ಭಟ್ ಅವರು ಮಾತನಾಡಿ, ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ಉದ್ದೇಶವಿಟ್ಟುಕೊಂಡು ಶ್ರೀ ಕೃಷ್ಣ ವೃಂದಾವನ ನಡೆಸುವ ಬೇಸಿಗೆ ಶಿಬಿರದ ವಿವರಗಳನ್ನು ನೀಡಿ, ಈ ಶಿಬಿರದ ಉಪಯೋಗ ಪಡೆಯಲು ಕರೆ ನೀಡಿದರು.

English summary
Shri Dhanvantari Maha Yaaga held at Sri Krishna Vrundavana Temple (Puttige math) New Jersey, USA. Hundreds of devotees participated in this yaaga. Archak Yogindra Bhat explained the significance of Dhanwantari homa.
Please Wait while comments are loading...