ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗದ ರಂಗೇರಿಸಿದ ಸಂಜನಾ, ರಿನಿಜಾ ರಂಗಪ್ರವೇಶ

By ವೈಶಾಲಿ ಹೆಗಡೆ
|
Google Oneindia Kannada News

ನೃತ್ಯವೆಂದರೆ ಒಂದು ಆತ್ಮಾನುಭಾವದ ಅಭಿವ್ಯಕ್ತಿ. ಆನಂದದ ಪರಾಕಾಷ್ಠೆಯ ಅನುಭೂತಿ. ಇಂಥದೊಂದು ಭಾವಸ್ಪಂದನ ಗುರುವಿನ ಮಾರ್ಗದರ್ಶನದಲ್ಲಿ ಹೊರಹೊಮ್ಮಿದಾಗ ದೊರಕುವ ಫಲಶ್ರುತಿಯಿದೆಯಲ್ಲಾ, ಇದು ನರ್ತನದ ಸಾಧಕರಿಗೂ, ದರ್ಶಕರಿಗೂ ಸಿಗುವ ಅನನ್ಯ ಅನುಭವ. ಇಂಥದ್ದೊಂದು ಅನುಭವವಾದದ್ದು ಬಾಸ್ಟನ್ನಿನ ಕಲಾಪ್ರೇಮಿಗಳಿಗೆ ಕಳೆದ ಸೆಪ್ಟೆಂಬರ್ 12ರ ರಂಗಪ್ರವೇಶ ಸಮಾರಂಭವೊಂದರಲ್ಲಿ.

ಸಂಜನಾ ರಾವ್ ಮತ್ತು ರಿನಿಜಾ ರಾಜ ಒಬ್ಬರೂ ಒಂದೇ ದೇಹ ಒಂದೇ ಆತ್ಮವೆಂಬಂತೆ ನೃತ್ಯದಲ್ಲಿ ಒಂದಾಗಿ ಭಾವದಲ್ಲಿ ಮಿಂದೆದ್ದು ತಾಳತಪ್ಪದ ಹೆಜ್ಜೆಗಳಲ್ಲಿ ಗೆಜ್ಜೆ ಘಳಿರೆನಿಸುತ್ತ, ಒಬ್ಬರ ಬಿಂಬದಂತೆ ಇನ್ನೊಬ್ಬರು ಪ್ರೇಕ್ಷಕರನ್ನೂ ನಾದನೃತ್ಯದ ಲೋಕಕ್ಕೆ ಕೊಂಡೊಯ್ದಿದ್ದರು. ಗುರು ಸಪ್ನಾ ಕೃಷ್ಣನ್ ಇವರಿಬ್ಬರ ಈ ಸಾಧನೆಯ ಸಂಪೂರ್ಣ ಬೆನ್ನೆಲುಬಾಗಿದ್ದರೆನೋ ಎಂಬಂತೆ ಅಂದಿನ ನೃತ್ಯ ಪ್ರದರ್ಶನ ಸಾಕ್ಷಿಯಾಗಿತ್ತು.

ಅಂದಿನ ಸಂಜೆ ಆರಂಭಗೊಂಡಿದ್ದು ಸುದೇವ್ ವಾರಿಯರ್ ಅವರ ಸುಶ್ರಾವ್ಯ ಕಂಠದಲ್ಲಿ ಹೊಮ್ಮಿದ ಊತುಕ್ಕಾಡು ವೆಂಕಟಸುಬ್ಬಯ್ಯರ್ ಅವರ ಆರಭಿಯಲ್ಲಿ ಪ್ರಣವಾಕಾರಂ ಕೃತಿಯಿಂದ. ಗಣೇಶನನ್ನು ರಂಗಸ್ಥಳದ ಮೇಲೆ ನೃತ್ಯಕ್ಕೆ ಆಹ್ವಾನಿಸಿದ ನಂತರ ಸಂಜನಾ, ರಿನಿಜಾ ನೆರೆದ ಸಭಿಕರನ್ನೆಲ್ಲ ಸ್ವಾಗತಿಸಿ ರಂಗಪ್ರವೇಶಕ್ಕೆ ಮೊದಲಿಟ್ಟರು. ನಂತರ ಆರಂಭಗೊಂಡಿದ್ದು ಸರೋಜಾ ನಟರಾಜನ್ ಅವರ ಸಂಯೋಜನೆಯ ಆಧುನಿಕ ಶೈಲಿಯ ಭಾರತನಾಟ್ಯದಲ್ಲಿ ಪ್ರಯೋಗಾತ್ಮಕವೆನ್ನಬಹುದಾದ ಪುಷ್ಪಾಂಜಲಿ. ಅದಕ್ಕೆ ತಕ್ಕುದಾದ ಕಲಾತ್ಮಕ ಶೈಲಿಯ ನೃತ್ಯ ಸಂಯೋಜನೆಯಲ್ಲಿ ಹುಡುಗಿಯರಿಬರೂ ಕೌಶಲ್ಯ ಪ್ರದರ್ಶಿಸಿದರು. ರಂಗಪ್ರವೇಶದ ಸಿದ್ಧಸೂತ್ರಗಳನ್ನು ಮೀರಿ ಅಂದಿನ ಕಾರ್ಯಕ್ರಮ ರಂಗೇರಿದ್ದು ಅಲಾರಿಪುವಿನ ನಂತರ. ರಿನಿಜಾ ಕವುತುವಂ ಪ್ರಸ್ತುತಪಡಿಸಿದರೆ, ಸಂಜನಾ ಕೃತಿಯೊಂದಕ್ಕೆ ಹೆಜ್ಜೆಯಾದಳು. [ಬೆಂಗಳೂರಿನಲ್ಲಿ ಸಿಂಗಪುರದ ಮೇಘ್ನಾಳ ರಂಗ ಪ್ರವೇಶ]

Sanjana Rao, Rinija Raj arangetram in Boston, USA

ಮಧುರೈ ಮುರಳೀಧರನ್ ಅವರ ಉತ್ಕೃಷ್ಟ ಸಂಯೋಜನೆ ಷಣ್ಮುಖ ಕವುತುವಂ ಅನ್ನು ಸಕಲ ಭಾವಗಳ ಮಹಾಪೂರದೊಂದಿಗೆ ರಿನಿಜಾ ನರ್ತಿಸಿದರೆ, ಸಂಜನಾ ಸಾರ್ವಕಾಲಿಕ ಸುಂದರ ಕೃತಿ ಪುರಂದರದಾಸರ ಕೃಷ್ಣನ ಕಾಳಿಂಗ ನರ್ತನವನ್ನು ರಂಗದ ಮೇಲೆ ಪುನಾರಚಿಸಿದಳು.

ನನ್ನ ಮಟ್ಟಿಗೆ ಅಂದಿನ ಕಾರ್ಯಕ್ರಮದ ಮಹೋನ್ನತ ಪ್ರದರ್ಶನ ಮತ್ತು ಪ್ರೇಕ್ಷಕರ ಅದ್ಭುತ ದೃಶ್ಯಾನುಭೂತಿಗೆ ಕಾರಣವಾಗಿದ್ದು ವರ್ಣಂ. ಜಯದೇವ ಕೃತಿಯಾದ ಜಯ ಜಗದೀಶ ಹರೇಯನ್ನು ವರ್ಣಂಗೆ ಅಳವಡಿಸಿ, ಸಾಂಪ್ರದಾಯಿಕ ವರ್ಣಂಗಿಂತ ತೀರ ಭಿನ್ನವಾದ ರಸಪಾಕವನ್ನು ಸಿದ್ದಪಡಿಸಿದ ಗುರು ಸಪ್ನಾ ಮತ್ತು ಅದನ್ನು ಅಷ್ಟೇ ಆಸ್ಥೆಯಿಂದ ಸಭಿಕರಿಗೆಲ್ಲ ಉಣಬಡಿಸಿದ ಯುಗಳರಿಗೆ ಅಭಿನಂದನೆಗಳು.

ದಶಾವತಾರದ ಎಲ್ಲ ಅವತಾರಗಳನ್ನೂ ರಿನಿಜಾ ಮತ್ತು ಸಂಜನಾ ಅವತಾರಿ ಮತ್ತು ಅಸುರರಾಗಿ ಪರ್ಯಾಯವಾಗಿ ಅಭಿನಯಿಸುತ್ತಾ ಕತೆ ಹೇಳುತ್ತಾ ಹೋಗಿದ್ದಷ್ಟೇ ಅಲ್ಲ, ಸೂಕ್ಷ್ಮ ಹೆಣಿಗೆಯ ಹತ್ತು ಬಗೆಯ ಜತಿಗಳನ್ನೂ ಕತೆಯೊಂದಿಗೆ ಹೊಸೆದಿದ್ದರು. ಕಥಾನಕದ ಶೈಲಿ ನಾಟ್ಯ ಮತ್ತು ನೃತ್ಯದ ಹೊಳಹುಗಳನೆಲ್ಲ ಒಳಗೊಂಡು ಜತಿಯಲ್ಲಿ ಘಂಟಿಸುತ್ತ ಅವತಾರದಿಂದ ಅವತಾರಕ್ಕೆ ಸಾಗುತ್ತಿತ್ತು. ಸುಮಾರು ಒಂದು ಗಂಟೆಯ ಕಾಲ ರಂಗದ ಮೇಲೆ ಪ್ರಕಟಗೊಂಡ ದಶಾವತಾರದ ಕೊನೆಯ ಹಂತ ತಲುಪುವಷ್ಟರಲ್ಲಿ ಸಭಿಕರೆಲ್ಲ ಒಂದು ಭಾವಪೂರ್ಣ ಅದ್ಭುತ ಸಂಯೋಜನೆಯ ನರ್ತನಕ್ಕಿರುವ ಅದ್ಭುತ ಶಕ್ತಿಯ ಬಗ್ಗೆ ನಿಜಕ್ಕೂ ಪುಳಕಿತಗೊಂಡಿದ್ದರು. ಸಭೆಯಲ್ಲಿದ್ದ ಆ ನಿಶ್ಶಬ್ದದಲ್ಲಿ ರಂಗದ ಮೇಲಿಂದ ಹೊಮ್ಮುತ್ತಿದ್ದ ಅಲೆಯಲ್ಲಿ ರಮಣಿ ತ್ಯಾಗರಾಜನ್ ರವರ ಕೊಳಲು ಉನ್ಮಾದದ ತರಂಗಗಳನ್ನೆಬ್ಬಿಸುತ್ತ ಸುತ್ತುತ್ತಿತ್ತು. ನರ್ತಕಿಯರಿಬ್ಬರೂ ಕಥಾನಕದ, ನರ್ತನದ ಉನ್ಮತ್ತ ಪರಾಕಾಷ್ಠೆಯನ್ನು ದಶಾವತಾರದಲ್ಲಿ ತಲುಪಿದ್ದರು. ಈ ಪ್ರಸ್ತುತಿಯ ಕೊನೆಯಲ್ಲಿ ಪ್ರೇಕ್ಷಕರೆಲ್ಲರೂ ಮಂತ್ರಮುಗ್ಧರಾದಂತೆ ಎದ್ದುನಿಂತು ಚಪ್ಪಾಳೆಗೈದಿದ್ದರು. [ಮನರಂಜಿಸುವ ನರ್ತನದ ಮನಮೋಹಕ ಚಿತ್ರಗಳು]

Sanjana Rao, Rinija Raj arangetram in Boston, USA

ಇಂಥದ್ದೊಂದು ಕುಶಲ, ಶಕ್ತಿಯುತ, ಅತ್ಯಂತ ಹುರುಪಿನ ನರ್ತನದ ನಂತರವೂ ಇಬ್ಬರೂ ಎರಡು ಏಕವ್ಯಕ್ತಿ ನರ್ತನವನ್ನು ಪ್ರದರ್ಶಿದ್ದಷ್ಟೇ ಅಲ್ಲ, ಅವೂ ಹೆಚ್ಚಿನ ದೈಹಿಕ ತ್ರಾಣವನ್ನು ಬೇಡುವಂಥವು. ಅವರಿಬ್ಬರ ಕಥೆ ಹೇಳುವ ಕಲೆ ದಶಾವತಾರದಲ್ಲಿಯೇ ಪ್ರದರ್ಶಿತಗೊಂಡಿದ್ದರೂ ಮುರಳೀಧರನ್ ರ ಇನ್ನೊಂದು ಕೃತಿ "ಮಹಾಕಾಳಿ" ರಾಗ ಬೌಳಿಯಲ್ಲಿ, ಪೂರ್ವಕಲ್ಯಾಣಿಯಲ್ಲಿದ್ದ ಪದ್ಮ ಚರಣ್ ಅವರ ಸಂಯೋಜನೆ "ಶಿವ ತಾಂಡವ"ದಲ್ಲಿ ಮತ್ತೆ ಅನಾವರಣಗೊಂಡಿತು. ರುಂಡಮಾಲಿನಿಯಾಗಿ ಕೆಂಗಣ್ಣಿನ ಮಹಾಕಾಳಿಯಾಗಿ ರಿನಿಜಾ ಆವರಿಸಿಕೊಂಡರೆ, ಶಿವನ ಶಕ್ತಿಯ, ಉತ್ಸಾಹದ ಹೆಜ್ಜೆಗಳ ಕೈಲಾಸವನ್ನು ಸಂಜನಾ ಇಳಿಸಿದ್ದಳು. ರಂಗದ ತುದಿಯಲ್ಲಿದ್ದ ನಟರಾಜನ ಪ್ರತಿಮೆಗೆ ಬಹುಶ ಜೀವ ಬಂತೇನೋ ಎಂಬಂತಿತ್ತು.

ವಿದ್ಯುತ್ ಸಂಚಾರವಾದಂತಿದ್ದ ರಂಗ ಸ್ವಲ್ಪ ತಿಳಿಗೊಂಡಿದ್ದು ರಿನಿಜಾ ಮುಂದೆ ಅಣ್ಣಮಾಚಾರ್ಯರ ಹನುಮಂತನ ಲೀಲೆಗಳ ವಿನೋದಮಯ ನೃತ್ಯವೊಂದನ್ನು ಪ್ರದರ್ಶಿಸಿದಾಗ. ಆ ಭಾವದ ಮುಂದುವರಿಕೆಯೆಂಬಂತೆ ಸಂಜನಾ, ವೆಂಕಟಸುಬಯ್ಯನವರದೇ ಇನ್ನೊಂದು ಕೃತಿ "ತಾಯೆ ಯಶೋಧಾ" ಮೂಲಕ ಮುದ್ದು ಕೃಷ್ಣನ ಬಾಲಲೀಲೆಗಳಿಗೆ ಜೀವ ತುಂಬಿದಳು. ಅವರಿಬ್ಬರ ಭಕ್ತಿ, ಭಾವಗಳ ಒಂದು ಆಳವಾದ ಅಭಿವ್ಯಕ್ತಿ ಈ ಚಿಕ್ಕ ವಯಸ್ಸಿಗೆ, ಅವರ ವಯಸ್ಸನ್ನೂ ಮೀರಿ ಹೊಮ್ಮಿದ್ದು ವಿಶೇಷ. ಅದು ಗುರು ಸಪ್ನಾ ಕೃಷ್ಣನ್ ಅವರ ಪರಿಶ್ರಮಕ್ಕೆ ಸಲ್ಲಬೇಕಾದ ಗೌರವ.

ಇಷ್ಟಾದರೂ ಹುಡುಗಿಯರಲ್ಲಿ ಸುಸ್ತಿಲ್ಲ, ಅಭಿವ್ಯಕ್ತಿಯಲ್ಲಿ ಕುಂದಿಲ್ಲ. ಸುಲಲಿತವಾಗಿ ಮುರುಗನ ಮೇಲಿನ ಜಾನಪದ ನೃತ್ಯವೊಂದರಲ್ಲಿ ತೇಲಿಹೋದ ಜೋಡಿ ಕಾವಡಿಯ ನೃತ್ಯದಲ್ಲಿ ನವಿಲುಬನವನ್ನು ಹೊತ್ತುತಂದಿದ್ದರು. ಕೆ.ಎಸ್. ಸುಧಾಮನ್ ರವರ ಮೃದಂಗ ಕೂಡ ಇಲ್ಲಿ ಅಪೂರ್ವ ಬೇಗೆಯ ಪೆಟ್ಟು, ಜಾಣ್ಮೆಯೊಂದಿಗೆ ಉತ್ತುಂಗ ತಲುಪಿತ್ತು.

Sanjana Rao, Rinija Raj arangetram in Boston, USA

ಅಂದಿನ ಸಂಜೆ ಸುದೇವ್ ವಾರಿಯರ್ ಅವರೇ ಸ್ವತಃ ಸಂಯೋಜಿಸಿದ ಚಂದ್ರೋದಯ ತಿಲ್ಲಾನದಲ್ಲಿ ಕೊನೆಗೊಳ್ಳುತ್ತಿದಂತೆ, ಸಭಿಕರಲ್ಲಿದ್ದಿದ್ದು ಒಂದೇ ಪ್ರಶ್ನೆ. ಇಷ್ಟೊಂದು ಪ್ರತಿಭೆ, ಸಂಗೀತ, ಕಲೆ, ಭಾವರಾಗ ನರ್ತನದ ಸಂಗಮ ಒಂದೇ ಸೂರಿನಡಿಯಲ್ಲಿ ಒಂದೇ ರಂಗಸ್ಥಳದಲ್ಲಿ ಪ್ರಕಟಗೊಳ್ಳಲು ಸಾಧ್ಯವಾದದ್ದಾರೂ ಹೇಗೆ?

ಈ ಒಂದು ಭಾವೋನ್ಮಾದ ಕೊನೆಗೊಳ್ಳುತ್ತಿದ್ದಂತೆ ಸಹಜವಾಗಿಯೇ ರಿನಿಜಾ ಸಂಜನಾ ಆನಂದಭಾಷ್ಪಗಳೊಂದಿಗೆ ಧನ್ಯವಾದಗಳ ಸುರಿಮಳೆ ಸುರಿಸುತ್ತ ಅಭಿನಂದನೆಗಳ ಹೂಮಾಲೆ ಪೋಣಿಸುತ್ತ ನಿಂತಿದ್ದರು. ಭರತನಾಟ್ಯದಂತಹ ಒಂದು ಕಟ್ಟುನಿಟ್ಟಿನ ಸಂಗೀತದ ಸಾಂಪ್ರದಾಯಿಕ ಶೈಲಿಯಲ್ಲಿ ಪ್ರಯೋಗಾತ್ಮಕ ನರ್ತನಗಳು ಅಷ್ಟೇನೂ ಸಾಮಾನ್ಯವಲ್ಲ. ಅದರಲ್ಲೂ ಹೊಸಬಗೆಯ ಸಂಗೀತ, ನರ್ತನಕ್ಕೆ ಸಾಂಪ್ರದಾಯಿಕ ಚೌಕಟ್ಟನ್ನು ಮೀರದಂತೆ ಅಳವಡಿಸುವುದೂ ಕೂಡ ಒಂದು ಸವಾಲು.

ಆದರೆ ಅಂದಿನ ಸಂಜೆ ಅಲ್ಗೊನ್ಕ್ವಿನ್ ಹೈಸ್ಕೂಲಿನ ಸಭಾಂಗಣದಲ್ಲಿ ಭರತನಾಟ್ಯದ ಹೊಸ ಸಾಧ್ಯತೆಯೊಂದು ಬಹು ಸುಂದರವಾಗಿ ಹೊಸ ಮತ್ತು ವಿಭಿನ್ನ ಸಂಗೀತದ ಅಳವಡಿಕೆಯಿಂದ ರಿಂಗಣಿಸುತ್ತಿತ್ತು. ದೈವೀಕಲೆಯ ಒಂದು ಪುಟ್ಟ ಕಾಣಿಕೆಯೆಂಬಂತೆ ಭಕ್ತಿಭಾವಗಳು ಸಮ್ಮಿಳಿತಗೊಂಡು ಅರ್ಪಿತವಾಗಿದ್ದವು. ಆ ನಾಜೂಕು ಕೈಗಳ ಹುಡುಗಿಯರ ಮೆತ್ತನೆಯ ಪಾದಗಳಲ್ಲಿ ಹೊರಹೊಮ್ಮಿದ ಗಟ್ಟಿ ಹೆಜ್ಜೆಯ ಗೆಜ್ಜೆಯ ಝೇಂಕಾರ, ಅಂದು ಭಾಗವಹಿಸಿದ್ದ ಬಹುತೇಕರ ಮನದಲ್ಲಿ ಮತ್ತೆ ಮತ್ತೆ ಮೂಡುವುದರಲ್ಲಿ ಸಂಶಯವಿಲ್ಲ. ಹುಡುಗಿಯರಿಗೂ, ಅವರ ಕುಟುಂಬದವರಿಗೂ, ಅವರ ಈ ಸಾಧನೆಯ ಹರಿಕಾರಳಾಗಿರುವ ಗುರು ಸಪ್ನಾ ಕೃಷ್ಣನ್ ರಿಗೂ ಹೃತ್ಪೂರ್ವಕ ಅಭಿನಂದನೆಗಳು.

English summary
Sanjana Rao, Rinija Raj bharatanatyam arangetram in Boston, America. A report by Vaishali Hegade. Both the dancers are trained under the tutelage of Guru Sapna Krishnan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X