ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಬಾರಿಗೆ ಅಮೆರಿಕದಲ್ಲಿ ಜಡಭರತರ 'ಸತ್ತವರ ನೆರಳು'

By ಅನಿಲ್ ಭಾರದ್ವಾಜ್., ಫೀನಿಕ್ಸ್, ಯುಎಸ್‌ಎ.
|
Google Oneindia Kannada News

ಭಾರತದ ಆಚೆಗೆ ಮೊದಲ ಬಾರಿಗೆ ಜಡಭರತರ ಸುಪ್ರಸಿದ್ಧ ಸಂಗೀತ ನಾಟಕ "ಸತ್ತವರ ನೆರಳು" ಪ್ರದರ್ಶನಗೊಳ್ಳಲಿದೆ. ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ಅಪ್‌ಲ್ಯಾಂಡಿನ ಗ್ರೂವ್ ಥೇಟರಿನಲ್ಲಿ ಜೂನ್ 10ರಂದು ಸಂಜೆ 5 ಗಂಟೆಗೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಇದಕ್ಕಾಗಿ ಕಳೆದ ಹಲವು ತಿಂಗಳುಗಳಿಂದ ರಂಗಾಭ್ಯಾಸ ನಡೆಯುತ್ತಿದ್ದು ಸ್ಥಳೀಯ ಕನ್ನಡಿಗ ಕಲಾವಿದರೇ ನಾಟಕ ಪ್ರಸ್ತುತಪಡಿಸಲಿದ್ದಾರೆ. ಭಾರತದ ಹೊರಗಿರುವ ಕರ್ನಾಟಕ ಮೂಲದ ಇಂದಿನ ಪೀಳಿಗೆಯವರು ನಾಟಕ ನೋಡಿ, ಅದರ ಅನುಭವವನ್ನು ಸವಿಯಲಿ ಎಂಬುದು ಈ ನಾಟಕ ಏರ್ಪಡಿಸಿರುವ 'ರಂಗಧ್ವನಿ' ತಂಡದ ಹೆಬ್ಬಯಕೆ.[ಮಲೇಷ್ಯಾದಲ್ಲಿಯೂ ಕನ್ನಡಿಗರನ್ನು ರಂಜಿಸಿದ 'ಮುಖ್ಯಮಂತ್ರಿ']

ಕನ್ನಡದ ನಾಟಕವೊಂದು ಜನಪ್ರಿಯವಾಗುವುದಾದರೆ ಅದಕ್ಕೆ ಯಾವೆಲ್ಲ ಆಯಾಮಗಳು ಮುಖ್ಯವಾಗುತ್ತವೆ ಎಂಬುದನ್ನು ಇಲ್ಲಿರುವ ಈಗಿನ ಪೀಳಿಗೆ ಅರಿಯಬೇಕಿದೆ ಎನ್ನುವುದು ನಾಟಕ ತಂಡದ ರೂವಾರಿ ವಲ್ಲೀಶ ಶಾಸ್ತ್ರೀಯವರ ಅನಿಸಿಕೆ. ಸಾಮಾಜಿಕ ನಾಟಕಗಳಿಗೂ ಹಾಗೂ ಸಂಗೀತ ನಾಟಕಗಳಿಗೂ ಇರುವ ವ್ಯತ್ಯಾಸ, ಹಳಬರ ನಾಟಕಗಳಲ್ಲಿನ ತಿರುಳು ಅರಿಯಲು ಸತ್ತವರ ನೆರಳು' ನಾಟಕ ನೋಡಲೇಬೇಕು ಎಂಬುದು ಅವರ ನಂಬಿಕೆ.

Rangadhwani to present Kannada Play Sattavana Neralu in America

ಮೂಲ ನಾಟಕವನ್ನು ಬೆನಕ (ಬೆಂಗಳೂರು ನಗರ ಕಲಾವಿದರು) ತಂಡದ ಬಿ.ವಿ.ಕಾರಂತರು ನಿರ್ದೇಶಿಸಿ, ಅದಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಅದನ್ನು ಹಾಗೇ ಬಳಸಿಕೊಳ್ಳುತ್ತಿದ್ದು ಇಲ್ಲಿ ವಲ್ಲೀಶ ಮರುನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.[ಸರ್ವಕಾಲಕ್ಕೂ ಸಲ್ಲುವ 'ಮುಖ್ಯಮಂತ್ರಿ'ಗೊಂದು ಸಲಾಂ!]

ಜಡಭರತ' ನಾಮಾಂಕಿತ ದಿವಂಗತ ಜಿ.ಬಿ.ಜೋಶಿಯವರು ರಚಿಸಿದ ಸುಪ್ರಸಿದ್ಧ ನಾಟಕಗಳ ಪೈಕಿ "ಸತ್ತವರ ನೆರಳು" ನಾಟಕ ಸಾವಿರಾರು ಯಶಸ್ವಿ ಪ್ರದರ್ಶನ ಕಂಡಿದೆ. ಅವರು ಕಟ್ಟಿ ಬೆಳೆಸಿದ ನಾಟಕ ವೃಂದ, ಮನೋಹರ ಗ್ರಂಥಮಾಲ ಪ್ರಕಾಶನದಿಂದ ಅನೇಕ ಕನ್ನಡದ ಕಲಾವಿದರಿಗೆ ಇಂದು ವಿಶ್ವವ್ಯಾಪಿ ಮಾನ್ಯತೆ ದೊರೆತಿದೆ.

ಮೇರು ನಟ ನಟಿಯರು, ಬರಹಗಾರರು, ಸಂಗೀತಗಾರರು, ನಾಟಕಕಾರರು ಜಡಭರತರ ಪ್ರೋತ್ಸಾಹದಿಂದ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಉತ್ತುಂಗಕ್ಕೇರಿದ್ದಾರೆ. ಅವರ ನಾಟಕಗಳನ್ನು ಮೆಲುಕು ಹಾಕಿ ಆನಂದಿಸುವ ಇನ್ನೂ ಕೆಲವು ಹಿರಿಯ ಜೀವಿಗಳು ನಮ್ಮ ನಡುವಿದ್ದಾರೆ.

ಅಂತಹ ನಾಟಕಗಳು ಮತ್ತೆ ರಂಗದ ಮೇಲೆ ನೋಡಲು ಸಾಧ್ಯವೇ? ಕರ್ನಾಟಕದ ಜನತೆಗೆ ಅದು ಸಾಧ್ಯವಾದರೂ ದೂರದ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಸಾಧ್ಯವೇ? ರಜಾ ನಿಮಿತ್ತ ಅಥವಾ ಮತ್ತಿನ್ಯಾವುದೋ ಮದುವೆ ಸಮಾರಂಭಗಳಿಗಾಗಿ ಭಾರತಕ್ಕೆ ಹೋದಾಗ ಅದೃಷ್ಟಕ್ಕೆ ನಾಟಕ ನಡೆಯುತ್ತಿದ್ದರೆ ಹೋಗಿ ನೋಡಬಹುದು.[ಸಿಂಗನ್ನಡಿಗರೂ ಬಣ್ಣ ಹಚ್ಚುವಂತೆ ಮಾಡಿದ 'ಮುಖ್ಯಮಂತ್ರಿ']

ಆ ಸಮಯಕ್ಕೆ ಸರಿಯಾಗಿ ಇಂತಹ ಮಹಾನ್ ನಾಟಕಕಾರರ ನಾಟಕಗಳು ಪ್ರದರ್ಶನಗೊಳ್ಳಬೇಕಲ್ಲವೇ? ನಾಲ್ಕು ಜನ ಹಿರಿಯರು ಒಂದೆಡೆ ಸೇರಿದಾಗ ಈ ಥರದ ಅತ್ಯದ್ಭುತ ನಾಟಕಗಳನ್ನು ಆ ದಿನಗಳಲ್ಲಿ ನೋಡಿ ಆನಂದಿಸಿದ್ದನ್ನು ಮೆಲುಕು ಹಾಕುತ್ತಿದ್ದರೆ ಅದನ್ನು ಇಂದಿನ ಪೀಳಿಗೆಯವರು ಕೇಳಿಸಿಕೊಂಡು ಅವರ ಕಲ್ಪನೆಯಲ್ಲೇ ಪಾತ್ರಗಳನ್ನು ಸೃಷ್ಟಿ ಮಾಡಿಕೊಂಡು ಆನಂದಿಸಿದರೆ ಸಾಕೇ?

ಹೀಗೆ ತಾವೇ ಪ್ರಶ್ನೆಗಳನ್ನು ಹಾಕಿಕೊಂಡು ಅದಕ್ಕೆ ಉತ್ತರವನ್ನೂ ಹುಡುಕ ಹೊರಟು ಅದರಲ್ಲಿ ಯಶಸ್ಸು ಸಾಧಿಸಿದವರು ಅಮೆರಿಕನ್ನಡಿಗ ವಲ್ಲೀಶ ಶಾಸ್ತ್ರೀ. ಕ್ಯಾಲಿಫೋರ್ನಿಯಾದಲ್ಲಿ 'ರಂಗಧ್ವನಿ' ಎಂಬ ನಾಟಕ ವೃಂದವನ್ನು ಸ್ಥಾಪಿಸಿ ಅಪರೂಪದ ನಾಟಕಗಳನ್ನು ಇಲ್ಲಿಗೆ ತಂದು ಪ್ರದರ್ಶಿಸಿ ಇಲ್ಲಿನ ಕನ್ನಡಿಗರಿಗೂ ನಾಟಕಗಳ ರಸಾನುಭವ ನೀಡುತ್ತಿದ್ದಾರೆ.

70ರ ದಶಕದಲ್ಲಿ ಬೆಂಗಳೂರಿನಲ್ಲಿದ್ದಾಗ ಬೆನಕ ನಾಟಕ ತಂಡದಲ್ಲಿ ಸಕ್ರೀಯರಾಗಿದ್ದ ಅವರನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿಯು ಪ್ರಶಸ್ತಿನ್ನೂ ನೀಡಿ ಗೌರವಿಸಿದೆ. ನೂರಾರು ಪ್ರದರ್ಶನಗಳನ್ನು ಕಂಡು ಕರ್ನಾಟಕದಲ್ಲಿ ಜನಪ್ರಿಯಗೊಂಡಿರುವ ಕನ್ನಡ ನಾಟಕಗಳನ್ನು ಅಮೆರಿಕದಲ್ಲೂ ತಂದು ಪ್ರದರ್ಶಿಸುವುದು ಇವರ ಹವ್ಯಾಸ.[ವಿಡಿಯೋ : ಏಕೆಂದ್ರೆ, ಮಾನವ ಜನ್ಮ ದೇವರು ಕೊಟ್ಟ ವರ!]

ಸತ್ತವರ ನೆರಳು ನಾಟಕದ ತಿರುಳು : "ಸತ್ತವರ ನೆರಳು" ಅಮೆರಿಕದಲ್ಲಿ ನೆಲೆಸಿರುವ ಯುವ ಪೀಳಿಗೆಗೆ ಹೊಸ ಅನುಭವ ನೀಡಲಿರುವ ನಾಟಕ. ಭಾರತದಲ್ಲಿನ ನಾನಾ ಧಾರ್ಮಿಕ ಪದ್ಧತಿಗಳಲ್ಲಿ ಮಠಮಾನ್ಯಗಳ ಪಾತ್ರ ವಿಶೇಷವಾಗಿದೆ. ಅನಾದಿ ಕಾಲದಿಂದಲೂ ಒಂದು ವರ್ಗದ ಜನತೆ ಧಾರ್ಮಿಕ ಕೇಂದ್ರವನ್ನಾಗಿ ಮಠಗಳನ್ನೇ ಆಶ್ರಯಿಸಿದ್ದಾರೆ. ಭಕ್ತಿಯಿಂದ ನಂಬಿಕೆ ಇಟ್ಟು ಮಠವೇ ಸರ್ವಸ್ವ ಎಂದುಕೊಂಡಿದ್ದಾರೆ.

ಅಲ್ಲಿ ಉಂಟಾಗಬಹುದಾದ ನಾನಾ ಚಟುವಟಿಕೆಗಳ ಸುತ್ತ ಈ ನಾಟಕ ಹೆಣೆಯಲಾಗಿದೆ. ಹಿರಿಯ ಮಠಾಧೀಶರ ದೇಹತ್ಯಾಗದ ನಂತರ ಅವರ ಸಮಾಧಿಗೆ ಬೃಂದಾವನ ನಿರ್ಮಿಸಿ ಅದನ್ನು ಪೂಜಿಸುವ ಕೆಲವರು ದೇವರೆಂದು ನಂಬಿದರೆ, ಮತ್ತೆ ಕೆಲವರಿಗೆ ಅದು ಶಾಂತಿ ನೀಡುವ ನೆಮ್ಮದಿಯ ತಾಣ. ಇನ್ನು ಕೆಲವರಿಗೆ ತೀರ್ಥಕ್ಷೇತ್ರವಾದರೆ ಕಪಟಿಗಳಿಗೆ ಮಠ ದುರಾಡಳಿತ ನಡೆಸುವ, ಕುತಂತ್ರದಿಂದ ಅಧಿಕಾರ ಪಡೆಯುವ ಸ್ಥಾನ.

ಹೀಗೆ ತನ್ನ ಸ್ವಾರ್ಥಕ್ಕಾಗಿ ಮಠವನ್ನು ಬಲಿ ಕೊಡಲು ಹೊರಟ ದಿವಾನ್ ಕೃಷ್ಣಾಚಾರ್ಯ ಈ ನಾಟಕದ ಕೇಂದ್ರ ಬಿಂದು. ತನ್ನ ಅಣತಿಯಂತೆ ನಡೆದುಕೊಳ್ಳುವವರನ್ನೇ ಮಠಾಧೀಶರನ್ನಾಗಿ ಮಾಡುವ ಹುನ್ನಾರದಲ್ಲಿ ತೊಡಗುವ ದಿವಾನನ ಸುತ್ತ ಬಂದು ಹೋಗುವ ಇತರೆ ಪಾತ್ರಗಳು ಸಹ ನಾಟಕಕ್ಕೆ ಜೀವ ತುಂಬುತ್ತವೆ. ಒಂದೇ ಬಾರಿಗೆ 10 ಜನ ದಾಸರು ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ಈ ನಾಟಕದ ಮತ್ತೊಂದು ವಿಶೇಷ.

ಇದು ಸಂಗೀತ ನಾಟಕವಾಗಿದ್ದು ಮಾತಿನಷ್ಟೇ ಸಂಗೀತಕ್ಕೂ ಮಾನ್ಯತೆ ನೀಡಲಾಗಿದೆ. ಜೊತೆಗೆ ದಾಸರ ಪದಗಳನ್ನು ಬಳಸಿಕೊಳ್ಳಲಾಗಿದೆ. ಲಾಸ್ ಏಂಜಲಿಸ್ನಲ್ಲಿ ಅಮೆರಿಕನ್ನಡಿಗರ ನಾಡಿ ಮಿಡಿತ ಅರಿತ ನಂತರ ಅಮೆರಿಕದ ಇನ್ನತರೆ ರಾಜ್ಯಗಳಿಗೂ ತೆರಳಿ "ಸತ್ತವರ ನೆರಳು" ನಾಟಕ ಪ್ರದರ್ಶನ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ ರಂಗಧ್ವನಿ ನಾಟಕ ತಂಡದವರು.

ಬನ್ನಿ, ಕ್ಯಾಲಿಫೋರ್ನಿಯಾ ಹಾಗೂ ಸತ್ತಮುತ್ತ ಇರುವ ಕನ್ನಡಿಗರು ಕನ್ನಡ ನಾಟಕವನ್ನು ನೋಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ. ಅಷ್ಟೇ ಅಲ್ಲ ನಿಮ್ಮ ಕನ್ನಡೇತರ ಗೆಳೆಯರನ್ನೂ ಕರೆತನ್ನಿ. ಅವರಿಗೂ ನಮ್ಮ ಕನ್ನಡದ ಮೇರು ಸಂಸ್ಕೃತಿ, ನಾಟಕದ ಪದ್ಧತಿ, ಸಂಗೀತದ ಧಾಟಿಯ ಬಗ್ಗೆ ಪರಿಚಯಿಸಿ.

ಟಿಕೆಟ್ ಗಾಗಿ ಇಲ್ಲಿ ಕ್ಲಿಕ್ಕಿಸಿ

English summary
Rangadhwani drama troupe will be presenting famous Kannada Play Sattavana Neralu by Jadabharata (GB Joshi) in California, America on 10th June, 2017. The play originally directed by B.V. Karanth will be showcased under the guidance of Vallisha Shastri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X