ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಬೆಳಗಿದ ನಾಡೋತ್ಸವ-ದೀಪೋತ್ಸವ

By ವರದಿ - ಕನ್ನಡ ಸಂಘ (ಸಿಂಗಪುರ)
|
Google Oneindia Kannada News

ಕರುನಾಡ ಪ್ರತಿಭಾನ್ವಿತ ಕುಡಿಗಳು ಕಲಾ ನೈಪುಣ್ಯತೆಯಿಂದ ಬಹಳಷ್ಟು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳನ್ನು ಹೊತ್ತು ನಾಡಿನಾದ್ಯಂತ ಹೆಸರುವಾಗಿದ್ದಾರೆ. ದೇಶ ವಿದೇಶಗಳಲ್ಲಿ ತಮ್ಮದೇ ಆದಂತಹ ವಿಶೇಷ ಶೈಲಿಯಲ್ಲಿ 'ಹಚ್ಚೇವು ಕನ್ನಡದ ದೀಪ' ಎಂದು ಸಾರುತ್ತಾ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ. ಸಿಂಗಪುರದಲ್ಲಿಯೂ ಸಹ ಅಂತಹ ಒಂದು ಪ್ರತಿಭೆಗಳ ಸಮ್ಮಿಲನದಿಂದ ಕನ್ನಡ ರಾಜ್ಯೋತ್ಸವವು ಹಾಸ್ಯ, ಗಾಯನಗಳ ಸಂಭ್ರಮದಲ್ಲಿ ಮೊಳಗಿತು.

ಕನ್ನಡ ಸಂಘ(ಸಿಂಗಪುರ) ಆಯೋಜಿಸಿದ್ದ 'ನಾಡೋತ್ಸವ-ದೀಪೋತ್ಸವ' ಕಾರ್ಯಕ್ರಮವು ನವೆಂಬರ್ 1ರಂದು ವೈವಿಧ್ಯಮಯವಾಗಿ ಹಾಸ್ಯ, ಹಳೆಯ ಚಲನಚಿತ್ರ ಹಾಗೂ ಭಾವಗೀತೆಗಳ ಸಂಗಮದಲ್ಲಿ ಭಾವಪೂರ್ಣವಾಗಿ ಆಚರಿಸಲಾಯಿತು.

ಖ್ಯಾತ ವಾಗ್ಮಿ, ಹಾಸ್ಯ ಬಾಷಣಕಾರ, ನಟ, ನಿರ್ದೇಶಕ, ಸಲಹೆಗಾರ, ತರಬೇತುದಾರ, ಅಣುಕು ಹಾಡುಗಳ ಸರದಾರ ತಮ್ಮ ಅಪಾರ ಜ್ಞಾನಭಂಡಾರದಿಂದ ಮಾತಿನಲ್ಲಿ ಮೋಡಿಮಾಡುವ ವೈ.ವಿ.ಗುಂಡೂರಾವ್ ಅವರು ಕಾರ್ಯಕ್ರಮದ ನಿರೂಪಣೆಯನ್ನು ಸೊಗಸಾಗಿ ಮಾಡುತ್ತಾ 400ಕ್ಕೂ ಹೆಚ್ಚು ಕನ್ನಡಾಭಿಮಾನಿಗಳನ್ನು ಹಾಸ್ಯದಲ್ಲಿ ಮುಳುಗಿಸುವುದರ ಜೊತೆ ಜೊತೆಗೆ ಅರ್ಥಪೂರ್ಣವಾದಂತಹ ಸಂದೇಶಗಳನ್ನು ನೀಡಿ ತತ್ವ, ಸಿದ್ದಾಂತಗಳನ್ನು ಪ್ರಚೋದಿಸುವಂತೆ ಮಾಡಿದ್ದು ವಿಭಿನ್ನವಾಗಿತ್ತು. []ಕನ್ನಡ ರಾಜ್ಯೋತ್ಸವ 2014 ಪ್ರಶಸ್ತಿ ಪಟ್ಟಿ

Nadotsava and Deepotsava in Singapore

ಹಾಸ್ಯದ ಜೊತೆಗೆ ನೆರೆದ ಪ್ರೇಕ್ಷಕರನ್ನು ಪಿ.ಬಿ.ಶ್ರೀನಿವಾಸ್ ಅವರ ಅದ್ಭುತವಾದಂತಹ ಹಾಡುಗಳಿಂದ 30 ವರ್ಷಗಳ ಹಿಂದಿನ ಭಾವಪೂರ್ಣ ಹಾಡುಗಳ ಯುಗಕ್ಕೆ ಕರೆದೊಯ್ದವರು ರಂಗಭೂಮಿ, ಕಿರುತೆರೆ, ಗಾಯನ, ಬರವಣಿಗೆ, ಕಂಠದಾನ ಮುಂತಾದ ಕ್ಷೇತ್ರಗಳಲ್ಲಿ ಪ್ರಸಿದ್ಧರಾದ ಬಹುಮುಖ ಪ್ರತಿಭೆ ಗಾಯಕ ಶ್ರೀನಾಥ್.

ಸ್ಥಳೀಯ ಕಲಾವಿದರು 'ಕಾಯೌ ಶ್ರೀ ಗೌರಿ' (ನಿರ್ವಹಣೆ - ವಿನುತಾ ಭಟ್), 'ಹಚ್ಚೇವು ಕನ್ನಡದ ದೀಪ' (ನಿರ್ವಹಣೆ - ಡಾ.ಭಾಗ್ಯಮೂರ್ತಿ), 'ಸುಮಸುಂದರ ತರುಲತೆಗಳ' (ನಿರ್ವಹಣೆ - ಅಶ್ವಿನಿ ಸತೀಶ್) ಹಾಡುಗಳನ್ನು ಸಮೂಹ ಗಾಯನದಲ್ಲಿ ಹಾಗೂ ಗಾಯಕ ಶ್ರೀನಾಥ್ ಅವರ ಜೊತೆ ಸೇರಿ 'ತಂನಂ ತಂನಂ' (ರಮ್ಯಾ ಎಸ್.ವೈ), 'ಈ ಸಂಭಾಷಣೆ...' (ಅಶ್ವಿನಿ ಸತೀಶ್) ಹಾಗೂ 'ನೀ ಬಂದು ನಿಂತಾಗ' (ವಿನುತಾ ಭಟ್) ಯುಗಳ ಗೀತೆಗಳೊಂದಿಗೆ ಪ್ರೇಕ್ಷಕರ ಮನಸೂರೆಗೊಂಡರು.

ಹಾಸ್ಯ, ಚಿತ್ರಗೀತೆಗಳ ನಂತರ ಕಾರ್ಯಕ್ರಮದ ವೈವಿಧ್ಯತೆಯನ್ನು ಹೆಚ್ಚಿಸಲು ಉತ್ತರಾರ್ಧಕ್ಕೆ ಸುಗಮಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತಿಯನ್ನುಗಳಿಸಿದ ತ್ರಿಶಕ್ತಿಗಳಾದ 'ಸಿಂಗಾರ ಕಲಾರತ್ನ' ರತ್ನಮಾಲ ಪ್ರಕಾಶ್, 2014ರ ಸಾಲಿನ ರಾಜ್ಯಪ್ರಶಸ್ತಿ ವಿಜೇತೆ ಇಂದು ವಿಶ್ವನಾಥ್ ಹಾಗೂ ಡಾ.ರೋಹಿಣಿ ಮೋಹನ್ ಅವರ ಸುಂದರವಾದಂತಹ ನಿರೂಪಣೆಯಲ್ಲಿ ನಿರಂತರ ಭಾವಗೀತೆಗಳ ಸುಧೆಯನ್ನು ಹರಿಸಿ ಇಡೀ ಸಭಾಂಗಣವನ್ನು ಕನ್ನಡಮಯಗೊಳಿಸಿದರು. 'ಬಾರಿಸು ಕನ್ನಡ ಡಿಂಡಿಮವ' ಗೀತೆಯೊಂದಿಗೆ ಆರಂಭ ಮಾಡಿ, 'ಅತ್ತಿತ್ತ ನೋಡದಿರು", 'ದೀಪವೂ ನಿನ್ನದೇ' ಮುಂತಾದ ಬಹುತೇಕ ಕನ್ನಡದ ಪ್ರಸಿದ್ಧ ಕವಿಗಳ ರಚನೆಗಳ ಜೊತೆಗೆ 18 ನಿಮಿಷ ಸತತವಾಗಿ ವಿವಿಧ ಮಧುರ ಭಾವಗೀತೆ ತುಣುಕುಗಳ ಸಮ್ಮಿಲನವನ್ನು ಪ್ರಸ್ತುತ ಪಡಿಸಿದ್ದು ವಿಶೇಷವಾಗಿತ್ತು.

ಇಂದು ವಿಶ್ವನಾಥ್ ಅವರಿಗೆ ಸನ್ಮಾನ : 2014ರ ಸಾಲಿನ ರಾಜ್ಯಪ್ರಶಸ್ತಿಯ ಪಟ್ಟಿ ಬಿಡುಗಡೆಯಾಗಿದ್ದು ತಿಳಿದೂ ಕೂಡ ತಮ್ಮ ಶ್ರದ್ದೆ ಹಾಗೂ ತತ್ವಕ್ಕೆ ಬದ್ಧರಾಗಿ ಸಿಂಗಪುರಕ್ಕೆ ಕಾರ್ಯಕ್ರಮ ನೀಡಲು ಬಂದಂತಹ ಇಂದು ವಿಶ್ವನಾಥ್ ಅವರಿಗೆ ಕನ್ನಡ ಸಂಘ (ಸಿಂಗಪುರ)ವು ನವೆಂಬರ್ 1ರಂದೇ ಸನ್ಮಾನ ಮಾಡಿ ಗೌರವಿಸಿದ್ದು ಸಿಂಗಪುರ ಕನ್ನಡಾಭಿಮಾನಿಗಳಿಗೆ ಸಂತಸ ಹಾಗೂ ಸಾರ್ಥಕದ ಕ್ಷಣವಾಗಿತ್ತು. ಸನ್ಮಾನ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ ಇಂದು ವಿಶ್ವನಾಥ್ ಅವರು ಸಿಂಗಪುರದಲ್ಲಿ ಈ ಮನ್ನಣೆ ಸಿಗುತ್ತಿರುವುದು ನನ್ನ ಭಾಗ್ಯವೆಂದು ಎಂದು ಹೇಳಿದಾಗ ಪ್ರೇಕ್ಷಕರ ಪ್ರಶಂಸೆ ಮುಗಿಲು ಮುಟ್ಟಿತ್ತು.

ಸಿಂಗಾರ ಪುರಸ್ಕಾರ -2014 : ಸಂಘದ ವತಿಯಿಂದ ಪ್ರತಿ ವರ್ಷ ರಾಜ್ಯೋತ್ಸವ ಸಂದರ್ಭದಲ್ಲಿ ಸ್ಥಳೀಯ ಸಂಘದ ಸದಸ್ಯರ ಸಾಧನೆಗಳನ್ನು ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ. ಈ ವರ್ಷ ಅಶ್ವಿನಿ ವೆಂಕಟೇಶ್ (ಶೈಕ್ಷಣಿಕ), ಅನನ್ಯ ಬಾಳೆಹಿತ್ಲು (ಶೈಕ್ಷಣಿಕ), ರಘುನಾಥ್ ಪ್ರದೀಪ್(ಶೈಕ್ಷಣಿಕ), ಅಭಿರಾಮ ಹಾರಿಮನೆ(ಶೈಕ್ಷಣಿಕ), ಮೇಘ್ನಾ ಹೆಬ್ಬಾರ್ (ಕಲೆ) ಹಾಗೂ ವಿಕ್ರಮ್ ವೈದ್ಯ (ಕ್ರೀಡೆ) ವಿಭಾಗಗಳಲ್ಲಿನ ಅವರ ಸಾಧನೆಗಳನ್ನು ಗುರುತಿಸಿ 2014ರ ಸಿಂಗಾರ ಪುರಸ್ಕಾರವನ್ನು ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ಹಾಗೂ ರತ್ನಮಾಲ ಪ್ರಕಾಶ್ ಅವರ ಸಮ್ಮುಖದಲ್ಲಿ ವಿಜೇತರಿಗೆ ನೀಡಿ ಗೌರವಿಸಲಾಯಿತು.

ಸಿಂಗಾರ ಆಜೀವ ಸಾಧನಾ ಪುರಸ್ಕಾರ -2014 : ಸಿಂಗನ್ನಡಿಗರ ಉನ್ನತವಾದಂತಹ ಪ್ರತಿಭೆ, ಯಶಸ್ಸು, ಕಾರ್ಯಕ್ಷೇತ್ರದಲ್ಲಿನ ಸಾಧನೆ ಹಾಗೂ ಸಮಾಜಸೇವೆಯನ್ನು ಗುರುತಿಸಿ ನೀಡಿ ಗೌರವಿಸುವಂತಹ ಪುರಸ್ಕಾರ 'ಸಿಂಗಾರ ಆಜೀವ ಸಾಧನಾ ಪುರಸ್ಕಾರ'. ಈ ವರ್ಷ ಕನ್ನಡ ಸಂಘದ ಈ ಅತ್ಯುನ್ನತ ಪುರಸ್ಕಾರವನ್ನು ಎಸ್.ಕೆ.ಗುರುಪ್ರಕಾಶ್ ಅವರಿಗೆ ಅವರ ಕಾರ್ಯಕ್ಷೇತ್ರದಲ್ಲಿನ ಸಾಧನೆ, ಯಶಸ್ಸು ಹಾಗೂ ಕನ್ನಡ ಸಂಘದ ಏಳಿಗೆಯಲ್ಲಿನ ಸಕ್ರಿಯ ಪಾತ್ರವನ್ನು ಪರಿಗಣಿಸಿ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ಹಾಗೂ ಹಿರಿಯ ಸದಸ್ಯರಾದ ವೆಂಕಟೇಶ್ ಬೈರಪ್ಪ ಅವರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.

ಆಹ್ವಾನಿತ ಎಲ್ಲಾ ಕಲಾವಿದರು ಹಾಗೂ ನೆರೆದ ಸಭಿಕರಿಂದ ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ' ಹಾಡುವುದರಿಂದ ಕಾರ್ಯಕ್ರಮ ಮಂಗಳವಾಗಿ ಮುಕ್ತಾಯಕಂಡಿತು.

English summary
Singapore Kannada Sangha celebrated Kannada Rajyotsava and Deepavali on November 1 by felicitating Rajyotsava award winner Indu Vishwanath. Standup comedian Y.V. Gundurao, Singer Rathnamala Prakash were part of this celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X